ಆನೆಗಳ ಕಿವಿಯಲ್ಲಿ ಅಂಥೋನಿ ಪಿಸುಮಾತು!

ಆತ ನಿಧನನಾದ ಸುದ್ದಿ ಆನೆಗಳಿಗೆ ಹೇಗೆ ಗೊತ್ತಾಯಿತೋ ಏನೋ? ...
Updated on: 

ಆತ ನಿಧನನಾದ ಸುದ್ದಿ ಆನೆಗಳಿಗೆ ಹೇಗೆ ಗೊತ್ತಾಯಿತೋ ಏನೋ? ಸುಮಾರು ಹದಿನೇಳು-ಇಪ್ಪತ್ತು ಆನೆಗಳಿದ್ದ ಗುಂಪು ಅಂಥೋನಿಯ ಮನೆಯ ಸನಿಹಕ್ಕೆ ಧಾವಿಸಿದವು. ಆ ಮೂಕ ಪ್ರಾಣಿಗಳಿಗೆ ಅಂಥೋನಿ ನಿಧನ ಸುದ್ದಿ ಹೇಗೆ ಗೊತ್ತಾಯಿತು ?

ಲಾರೆನ್ಸ್ ಅಂಥೋನಿ!
ಈತನ ಹೆಸರನ್ನು ನೀವು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಈತ ಮೂಲತಃ ಅಂತಾರಾಷ್ಟ್ರೀಯ ಖ್ಯಾತಿಯ ಪರಿಸರವಾದಿ, ಪ್ರಾಣಿಸಂರಕ್ಷಕ, ಗಜ ಪರಿಣಿತ ಹಾಗೂ ಲೇಖಕ. ಈತನಿಗೂ, ಆನೆಗಳಿಗೂ ಅದೆಂಥ ಸಂಬಂಧವೋ, ಯಾವ ಜನ್ಮದ ಸಂಬಂಧವೋ ಗೊತ್ತಿಲ್ಲ. ಅಂಥೋನಿ ಹೇಳಿದಂತೆ ಅವು ಕೇಳುತ್ತವೆ. ಆನೆಗಳ ಮೈ ಸವರಿದರೆ ಸಾಕು, ಅವನಿಗೆ ಶರಣಾಗಿ ಬಿಡುತ್ತವೆ. ಅರಣ್ಯದಲ್ಲಿರುವ ಆನೆಗಳನ್ನು ಸಹ ಕ್ಷಣಾರ್ಧದಲ್ಲಿ ಪಳಗಿಸುವ ಹಿಕಮತ್ತು ಅಂಥೋನಿಗೆ ಕರಗತ. ಆನೆಗಳು ಮೈಲು ದೂರದಲ್ಲಿರಲಿ, ಮೂಗಾಳಿಯಿಂದಲೇ ತಟ್ಟನೆ ಅವುಗಳ ಇರುವಿಕೆ ಬಗ್ಗೆ ಪತ್ತೆ ಹಚ್ಚಬಲ್ಲ ಚಾಣಾಕ್ಷ. ಈತನ ಕಕ್ಷೆಯೊಳಗೆ ಬಂದರೆ, ಯಾವ ಆನೆಯೂ ಬಾಲ ಬಿಚ್ಚಲಿಕ್ಕಿಲ್ಲ. ಈತನಿಗೆ Elephant Whisperer ಅಂತಾನೂ ಕರೆಯುತ್ತಾರೆ.
ನಾನು ಲಾರೆನ್ಸ್ ಅಂಥೋನಿ ಬಗ್ಗೆ ಬರೆಯಲು ಕಾರಣ ಆತ ಬರೆದ Elephant Whispere ಪುಸ್ತಕವನ್ನು ಇತ್ತೀಚೆಗೆ ಓದಿದ್ದು. ಆಫ್ರಿಕಾದ ಆನೆಗಳ ಜತೆಗಿನ ತನ್ನ ಸಂಬಂಧವನ್ನು ಅಂಥೋನಿ ಅತ್ಯಂತ ಸುಂದರ ಹಾಗೂ ರೋಚಕವಾಗಿ ಬಣ್ಣಿಸಿದ್ದಾನೆ. 'ಈ ಜಗತ್ತಿನಲ್ಲಿ ನಾನು ಮನುಷ್ಯರಿಲ್ಲದಿದ್ದರೆ ಬದುಕಬಲ್ಲೆ. ಮನುಷ್ಯರಿಲ್ಲದ ಜಗತ್ತು ಹೆಚ್ಚು ಸುರಕ್ಷಿತ ಕೂಡ.
ಆದರೆ ಆನೆಗಳಿಲ್ಲದ ನನ್ನ ಬದುಕನ್ನು ಊಹಿಸಿಕೊಳ್ಳಲೂ ಸಹ ಆಗುವುದಿಲ್ಲ. ಒಂದು ವೇಳೆ ಆನೆಗಳೇ ಇಲ್ಲದಿದ್ದರೆ, ನನ್ನ ಪಾಡು ಹೇಗಿರುತ್ತಿತ್ತು ಎಂದು ನಾನು ಕಲ್ಪಿಸಿಕೊಂಡಾಗ ಪ್ರತಿಸಲ ನಾನು ಈಗಿನಂತೆ ಒಬ್ಬ ಮನುಷ್ಯನಾಗಿ ಇರುತ್ತಿರಲಿಲ್ಲ ಎಂಬುದಂತೂ ಖಚಿತವಾಗಿದೆ.' ಅಂತಾನೆ ಅಂಥೋನಿ.
ಈ ಕೃತಿಯಲ್ಲಿ ಒಂದೆಡೆ ಅಂಥೋನಿ ಹೇಳುವುದನ್ನು ಕೇಳಿದರೆ ಅಚ್ಚರಿಯಾಗುತ್ತದೆ- 'ಆನೆಗಳ ಬಗ್ಗೆ ಬಹುತೇಕ ಜನರಿಗೆ ಭಯ ಯಾಕಂದರೆ ಅವುಗಳ ಗಾತ್ರ. ಮನುಷ್ಯನಿಗಿಂತ ಮೂವತ್ತುಪಟ್ಟು ದೊಡ್ಡದಾದ ಆನೆ ತನ್ನ ಬೃಹತ್ ಗಾತ್ರದಿಂದ ವಿಚಿತ್ರ ಭೀತಿಯನ್ನು ಹುಟ್ಟಿಸುತ್ತದೆ. ಆದರೆ ಅದರ ಮಿದುಳು ಮನುಷ್ಯನಷ್ಟೇ ದೊಡ್ಡದು ಅಥವಾ ಚಿಕ್ಕದು. ಮನಸ್ಸು ಮಾತ್ರ ಮೃದು. ಅವು ಹುಚ್ಚಾಪಟ್ಟೆ ವರ್ತಿಸುವುದು ವಿರಳ. ಒಮ್ಮೆ ಮನಸ್ಸನ್ನು ಕೊಟ್ಟರೆ, ಇಡೀ ದೇಹವೇ ಶರಣಾಗಿ ಬರುತ್ತದೆ.'
ಅಂಥೋನಿ ದಕ್ಷಿಣ ಆಫ್ರಿಕಾದ ಝಲುಲ್ಯಾಂಡ್ ಪ್ರದೇಶದಲ್ಲಿ ಆನೆಗಳಿಗಾಗಿಯೇ ಒಂದು ಅಪೂರ್ವ ವನ್ಯಧಾಮವನ್ನು ನಿರ್ಮಿಸಿದ್ದಾನೆ. ಇದೊಂದು ರೀತಿಯ ಆನೆಗಳ ಪುನರ್‌ವಸತಿ ಕೇಂದ್ರ. ಕಾಯಿಲೆಬಿದ್ದ ಆನೆಗಳನ್ನು ಅಲ್ಲಿಗೆ ತಂದು ಅಂಥೋನಿ ಶುಶ್ರೂಷೆ ಮಾಡುತ್ತಾನೆ. ತಾನೇ ಅವುಗಳ ಆರೈಕೆ ಮಾಡುತ್ತಾನೆ. ಆಹಾರ ತಿನ್ನಿಸುತ್ತಾನೆ. ಆತನ ಪಾಲಿಗೆ ಎಲ್ಲ ಆನೆಗಳೂ ಪುಟ್ಟ ಮಗುವೇ!
ಲಾರೆನ್ಸ್ ಅಂಥೋನಿಯ Elephant Whispere ಪುಸ್ತಕ ಓದಿದ ಬಳಿಕ ಮನುಷ್ಯ-ಪ್ರಾಣಿಗಳ ಸಂಬಂಧದ ಹೊಸಲೋಕವೇ ತೆರೆದುಕೊಂಡ ಅನುಭವವಾಯಿತು.
ಅಂಥೋನಿಯ ಬಗ್ಗೆ ಕುತೂಹಲ ಹಾಗೂ ಜಿಜ್ಞಾಸೆ ಮೂಡಿದ್ದು ಇವ್ಯಾವವೂ ಅಲ್ಲ. ಹಿಂದಿನ ವರ್ಷ ಮಾರ್ಚ್ 2ರಂದು ತನ್ನ ಅರವತ್ತೊಂದನೆ ವಯಸ್ಸಿನಲ್ಲಿ ಅಂಥೋನಿ ನಿಧನನಾದ.
ಆತ ನಿಧನನಾದ ಸುದ್ದಿ ಆನೆಗಳಿಗೆ ಹೇಗೆ ಗೊತ್ತಾಯಿತೋ ಏನೋ? ಸುಮಾರು ಹದಿನೇಳು-ಇಪ್ಪತ್ತು ಆನೆಗಳಿದ್ದ ಗುಂಪು ಅಂಥೋನಿಯ ಮನೆಯ ಸನಿಹಕ್ಕೆ ಧಾವಿಸಿದವು. ಈ ಆನೆಗಳನ್ನು ಆತ ಸಾವಿನ ದವಡೆಯಿಂದ ರಕ್ಷಿಸಿ ತನ್ನ ಪುನರ್ ವಸತಿ ಕೇಂದ್ರದಲ್ಲಿ ಇಟ್ಟುಕೊಂಡಿದ್ದ. ಅವು ಸಂಪೂರ್ಣ ವಾಸಿಯಾದ ಬಳಿಕ ಪಕ್ಕದ ಕಾಡಿಗೆ ಬಿಟ್ಟಿದ್ದ. ಆ ಮೂಕ ಪ್ರಾಣಿಗಳಿಗೆ ಅಂಥೋನಿ ನಿಧನ ಸುದ್ದಿ ಹೇಗೆ ಗೊತ್ತಾಯಿತು ಎಂಬುದು ರಹಸ್ಯ. ಪಾರ್ಥೀವ ಶರೀರವಿಟ್ಟ ಅಂಗಳದ ಸನಿಹದಲ್ಲಿ ಸುತ್ತಾಡಿ ಆ ಆನೆಗಳು ಕಣ್ಣೀರಿಟ್ಟು ಹೋದವು. ಅಲ್ಲಿ ಸೇರಿದ್ದ ಜನ ನಿಬ್ಬೆರಗಾಗಿ ನೋಡುತ್ತಿದ್ದರು.
ಒಬ್ಬ ವ್ಯಕ್ತಿ ಆ ಪ್ರಾಣಿಗಳ ಜೀವನದ ಮೇಲೆ ಅದೆಂಥ ಪ್ರಭಾವ, ಪರಿಣಾಮ ಬೀರಿರಬಹುದು?
ಸೋಜಿಗ!
ಡೆವಿಡ್ ಓಗಿಲ್ವಿ
ಜಾಹೀರಾತು ರಂಗದಲ್ಲಿ ಕೆಲಸ ಮಾಡುವವರು ಹಾಗೂ ಇದರಲ್ಲಿ ಆಸಕ್ತಿಯಿರುವವರು ಡೆವಿಡ್ ಓಗಿಲ್ವಿ ಹೆಸರನ್ನು ಕೇಳಿಯೇ ಕೇಳಿರುತ್ತಾರೆ. ಒಂದು ರೀತಿಯಲ್ಲಿ ಆತ ಎಲ್ಲರಿಗೂ ಗುರು ಸಮಾನ. ಇಡೀ ಕ್ಷೇತ್ರವೇ ಒಬ್ಬನನ್ನು ಸಂಪೂರ್ಣವಾಗಿ ಸ್ವೀಕರಿಸುವುದು ಅಪರೂಪ. ಇದು ಒಬ್ಬ ವ್ಯಕ್ತಿಗೆ ಸಿಗಬಹುದಾದ ಅತಿದೊಡ್ಡ ಗೌರವ. ಆತನಿಲ್ಲದ ಜಾಹೀರಾತು ರಂಗವನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ.
ಡೆವಿಡ್ ಓಗಿಲ್ವಿ ಹಲವು ಅತ್ಯುತ್ತಮ ಜಾಹೀರಾತು ಕಾಪಿಗಳನ್ನು ಬರೆದಿದ್ದಾನೆ. ಆ ಪೈಕಿ ಇಂದಿಗೂ ಜನಪ್ರಿಯವಾಗಿರುವುದು ರೋಲ್ಸ್ ರಾಯ್ಸ್ ಕಾರಿಗೆ ಬರೆದ ಜಾಹೀರಾತು-"ಆಡಿ 60 miles an hour the loudest noise in this new Rolls-Royce comes from the electric clock."ರೋಲ್ಸ್ ರಾಯ್ಸ್ ಕಾರಿನಲ್ಲಿ ಕುಳಿತು ಪಯಣಿಸುವಾಗ ಒಳಗೆ ಸದ್ದೇ ಆಗುವುದಿಲ್ಲ ಎಂಬುದನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ಹೇಳಲು ಸಾಧ್ಯವೇ ಇಲ್ಲವೇನೋ?
ಒಂಟೆ ಮರಿ ಕೇಳಿದ ಪ್ರಶ್ನೆ
ತಾಯಿ ಒಂಟೆಯ ಬಳಿ ಬಂದ ಮರಿ ಕೇಳಿತು: 'ಅಮ್ಮ, ಅಮ್ಮ, ನನ್ನಲ್ಲಿ ಕೆಲವು ಪ್ರಶ್ನೆಗಳಿವೆ-ನಿನ್ನಲ್ಲಿ ಅದನ್ನೆಲ್ಲ ಹೇಳ್ಕೊಬಹುದಾ?'
ಬಹುಶಃ ಮಗುವಿಗೆ ಏನೋ ಸಮಸ್ಯೆ ಎದುರಾಗಿರಬಹುದು ಎಂದು ಭಾವಿಸಿದ ಆ ತಾಯಿ ಒಂಟೆ- ಓಹೋ ಅದಕ್ಕೇನಂತೆ, ಯಾವ ವಿಷಯ ಆಗಿದ್ರೂ ಪರವಾಗಿಲ್ಲ, ಸಂಕೋಚ ಇಲ್ದೆ ಹೇಳಿಕೋ ಕಂದಾ ಎಂದಿತು.
'ಅಮ್ಮಾ ಎಲ್ಲ ಒಂಟೆಗಳಿಗೂ ಬೆನ್ನಿನ ಮೇಲೆ ಡುಬ್ಬ ಇದೆಯಲ್ಲ ಯಾಕೆ?' ಇದು ಒಂಟೆ ಮರಿಯ ಮೊದಲ ಪ್ರಶ್ನೆ. ಡುಬ್ಬ ಯಾಕಿದೆ ಅಂದೆ ಅಲ್ವಾ? ನಾವು ವಾಸ ಮಾಡುವುದು ಮರುಭೂಮಿಯಲ್ಲಿ. ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ವಿಪರೀತ ಎಂಬಷ್ಟಿರುತ್ತದೆ. ಮರುಭೂಮಿಯಲ್ಲಿ ನಾವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನಡೆದು ಹೋಗಲೇಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ನೀರಿನ ಸಮಸ್ಯೆ ಎದುರಾದಾಗ ಪ್ರಾಣಕ್ಕೆ ಸಂಚಕಾರ ಬರುವ ಸಾಧ್ಯತೆಯುಂಟು. ಅದರಿಂದ ಪಾರಾಗಲೆಂದು ದೇವರು ನಮಗೆ ಡುಬ್ಬವನ್ನು ಕರುಣಿಸಿದ್ದಾನೆ. ನಾವು ಡುಬ್ಬದಲ್ಲಿ ನೀರು ತುಂಬಿಸಿಕೊಂಡರೆ ನಾಲ್ಕು ದಿನಗಳ ಕಾಲ ದಾರಿಯುದ್ದಕ್ಕೂ ಒಂದು ಹನಿ ನೀರು ಸಿಗದಿದ್ದರೂ ಯಾವುದೇ ತೊಂದರೆಯಿಲ್ಲದೆ ಬದುಕಬಹುದು... ಎಂದಿತು ತಾಯಿ ಒಂಟೆ.
ಅಮ್ಮ ಅಮ್ಮ, ನಮಗೆ ತುಂಬಾ ಉದ್ದದ ಕಾಲುಗಳಿವೆ. ಜೊತೆಗೆ, ಪಾದ ಕೂಡ ಉಳಿದ ಪ್ರಾಣಿಗಳಂತೆ ಚಪ್ಪಟವಾಗಿರದೆ ದುಂಡಗಿನ ಆಕಾರದಲ್ಲಿದೆಯಲ್ಲ ಏಕೆ?' ಎಂದು ಎರಡನೇ ಪ್ರಶ್ನೆ ಹಾಕಿತು ಮರಿ ಒಂಟೆ.
ನಿನಗೆ ಗೊತ್ತಿದೆಯಲ್ಲ ಕಂದಾ, ಇದು ಮರುಭೂಮಿ. ಬಿಸಿಲಿಗೆ, ಮರಳು ವಿಪರೀತ ಕಾಯ್ದಿರುತ್ತದೆ. ಇಂಥ ಸಂದರ್ಭದಲ್ಲಿ ಕಾಲು ಉದ್ದವಿಲ್ಲದಿದ್ದರೆ ಮರಳಲ್ಲಿ ಕುಸಿದಂತಾಗಿ ಹೇಹದ ಹೆಚ್ಚು ಭಾಗ ಸುಟ್ಟು ಹೋಗಬಹುದು. ಹಾಗೇನೂ ಆಗದಿರಲಿ ಎಂಬ ಉದ್ದೇಶದಿಂದ ದೇವರು ನೀಡಿರುವ ಇನ್ನೊಂದು ಕಾಣಿಕೆ ಉದ್ದದ ಕಾಲುಗಳು ಎಂದಿತು ತಾಯಿ ಒಂಟೆ.
ಉತ್ತರ ಹೇಳಿದ್ದಕ್ಕೆ ಥ್ಯಾಂಕ್ಸ್ ಅಮ್ಮಾ. ನನ್ನಲ್ಲಿ ಮತ್ತೂ ಒಂದು ಪ್ರಶ್ನೆಯಿದೆ. ನಮ್ಮ ಕಣ್ಣಿನ ರೆಪ್ಪೆಗಳು ವಿಪರೀತ ಎಂಬಷ್ಟು ಉದ್ದಕ್ಕಿವೆಯಲ್ಲ ಯಾಕೆ? ಈ ಉದ್ದುದ್ದದ ರೆಪ್ಪೆಗಳಿಂದ ಎಷ್ಟೋ ಬಾರಿ ನನಗೆ ಎದುರಿನ ದಾರಿಯೇ ಕಾಣುವುದಿಲ್ಲ ಅಮ್ಮಾ ಎಂದಿತು ಮರಿ ಒಂಟೆ.
'ಕಂದಾ, ನಿನಗೆ ಚೆನ್ನಾಗಿ ನೆನಪಿರಲಿ. ಕಣ್ಣು ತುಂಬಾ ಸೂಕ್ಷ್ಮವಾದ ಅಂಗ. ಅದರೊಳಕ್ಕೆ 'ಕಸ'ದ ರೂಪದಲ್ಲಿ ಏನಾದರೂ ಸೇರಿಕೊಂಡರೆ ಕಣ್ಣಿಗೆ ತೊಂದರೆಯಾಗುತ್ತೆ. ಈ ಮರುಭೂಮಿಯಲ್ಲಿ ಆಗಿಂದ್ದಾಗ್ಗೆ ಸುಂಟರಗಾಳಿ ಏಳುತ್ತಿರುತ್ತೆ. ಬಿರುಗಾಳಿಗೆ ಹಾರಿ ಬರುವ ಮರಳು ನಮ್ಮ ಕಣ್ಣಿಗೆ ಹಾನಿ ಮಾಡದಂತೆ ರಕ್ಷಿಸಬೇಕೆಂಬ ಸದಾಶಯದಿಂದಲೇ ಆ ದಯಾಮಯ ಭಗವಂತ ನಮಗೆ ಉದ್ದುದ್ದದ ರೆಪ್ಪೆಗಳನ್ನು ದಯಪಾಲಿಸಿದ್ದಾನೆ ಎಂದು ಸುದೀರ್ಘವಾಗಿಯೇ ವಿವರಣೆ ನೀಡಿತು ತಾಯಿ ಒಂಟೆ.
ಅಮ್ಮನ ಮಾತುಗಳನ್ನು ತನ್ಮಯತೆಯಿಂದ ಕೇಳಿಸಿಕೊಂಡ ಮರಿ ಒಂಟೆ ನಂತರ ಅಸಹನೆಯ ಧ್ವನಿಯಲ್ಲಿ ಹೀಗೆಂದಿತು: ದೇವರು ನಮಗೆ ಬೆನ್ನಿನ ಮೇಲೆ ಡುಬ್ಬವನ್ನು, ಉದ್ದುದ್ದ ಕಾಲುಗಳನ್ನು, ಕಣ್ಣಿನ ಸುತ್ತ ಭಾರಿ ಉದ್ದದ್ದ ರೆಪ್ಪೆಗಳನ್ನು ದಯಪಾಲಿಸಿರುವುದು ಮರುಭೂಮಿಯ ಪ್ರತಿಕೂಲ ವಾತಾವರಣದಿಂದ ರಕ್ಷಣೆ ಸಿಗಲಿ ಅಂತ. ಆದರೆ ಅಮ್ಮಾ, ಈ ವಿಶೇಷ ಸೌಲಭ್ಯಗಳನ್ನು ಹೊಂದಿರುವ ನಾವು ದರಿದ್ರ ಪ್ರಾಣಿ ಸಂಗ್ರಹಾಲಯದಲ್ಲಿ ಇದ್ದುಕೊಂಡು ಮಾಡುವುದಾದ್ರೂ ಏನು?
ಬಿಯರ್ ಮತ್ತು ಮೇಕ್‌ಅಪ್
ಗಂಡ-ಹೆಂಡತಿ ಖರ್ಚು ಕಡಿಮೆ ಮಾಡುವ ಬಗ್ಗೆ ಚರ್ಚೆ ಮಾಡುತ್ತಿದ್ದರು.
ಹೆಂಡತಿ- ನೀನು ಬಿಯರ್ ಕುಡಿಯೋದು ಬಿಟ್ಟುಬಿಡು.
ಗಂಡ- ನೀನೇಕೆ ನಿನ್ನ ಮೇಕ್‌ಅಪ್ ಶೋಕಿ ಬಿಡಬಾರದು?
ಹೆಂಡತಿ- ನಾನು ನಿನಗೆ ಚೆಂದ ಕಾಣೋದು ಬೇಡ್ವಾ?
ಗಂಡ- ಅದ್ಕೆ ಅಲ್ವಾ ನಾನು ಬಿಯರ್ ಕುಡಿಯೋದು?


- ವಿಶ್ವೇಶ್ವರ ಭಟ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com