ಭಾರತೀಯ ಸೇನೆಗೆ 'ಅತಿರೇಕ'ದ ಹಕ್ಕು ಬೇಡ

Updated on: 

ಅಮೆರಿಕದ ರಾಕ್ ಬ್ಯಾಂಡ್ 'ನಿರ್ವಾಣ' 1993ರಲ್ಲಿ ಆ ಹಾಡನ್ನು ಹಾಡಿದಾಗ, ಅದು ಪಾಪ್ ಸಂಸ್ಕೃತಿಯ ಉದ್ಧಟತನದ ಪರಮಾವಧಿಯೆನಿಸಿತ್ತು. 'ರೇಪ್ ಮಿ, ರೇಪ್ ಮಿ ಅಗೇನ್/ ಹೇಟ್ ಮಿ, ಡೂ ಇಟ್ ಆ್ಯಂಡ್ ಡೂ ಇಟ್ ಅಗೇನ್/ ವೇಸ್ಟ್ ಮಿ, ರೇಪ್ ಮಿ, ಮೈ ಫ್ರೆಂಡ್‌'- ಇದು ಆ ಹಾಡಿನ ಸಾಲುಗಳು. ಈ ಸಾಲುಗಳನ್ನು ಬರೆದ ಕರ್ಟ್ ಕೊಬೈನ್ ಇದನ್ನು ಜೀವನ ಸತ್ಯದ ಹಾಡು ಎಂದು ಬಣ್ಣಿಸಿದ. 'ಮುಂದೆ ಬಾ, ನನ್ನ ಮೇಲೆ ಅತ್ಯಾಚಾರವೆಸಗು, ಥಳಿಸು, ನೀನು ಎಂದೂ ನನ್ನ ಕೊಂದುಹಾಕಲಾರೆ, ನಾನು ಎಲ್ಲವನ್ನೂ ಸಹಿಸಿ ಉಳಿಯಬಲ್ಲೆ' ಎಂಬ ಆಕೆಯ ಮಾತಿನಲ್ಲಿ ಸತ್ಯ ಅಡಗಿದೆ ಎಂದು ಸಮರ್ಥಿಸಿದ.
ಅಮೆರಿಕದ ಪಾಪ್ ಸ್ಟಾರ್‌ಗಳಿಗೋ, ಅದು ಕ್ರಾಂತಿಕಾರಿ ನಡೆಯ ಇನ್ನೊಂದು ಹೆಜ್ಜೆಯೆನಿಸಿರಬಹುದು. 2004ರಲ್ಲಿ ಮಣಿಪುರದ ಕೆಲ ಮಹಿಳೆಯರು ಸೇನಾ ಶಿಬಿರವೊಂದರತ್ತ ಪಾದಯಾತ್ರೆ ನಡೆಸಿ, ತಮ್ಮ ವಸ್ತ್ರವನ್ನು ಕಳಚಿ 'ಭಾರತೀಯ ಸೈನಿಕರೇ, ನಮ್ಮ ಮೇಲೆ ಅತ್ಯಾಚಾರ ನಡೆಸಿ' ಎಂದು ಘೋಷಣೆ ಕೂಗಿದಾಗ, ಅದು ಅವರ ಬದುಕಿನ ಪ್ರಶ್ನೆಯಾಗಿತ್ತು. 'ಸಮವಸ್ತ್ರದ ಪ್ರಾಣಿಗಳು' ತಂಗ್‌ಜಮ್ ಮನೋರಮಾ ಎಂಬ ಸ್ಥಳೀಯ ಮಹಿಳೆಯೊಬ್ಬಳ ಮೇಲೆ ನಡೆಸಿದ ಅತ್ಯಾಚಾರವೇ ಆ ಮಹಿಳೆಯರ ಇಂಥ ವಿಚಿತ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಪ್ರಕ್ಷುಬ್ಧ ಪ್ರದೇಶಗಳಲ್ಲಿ ನಿಯೋಜಿಸಲಾದ ಸೇನೆ ಮತ್ತು ಅರೆಸೇನಾ ಪಡೆಗಳಿಗೆ ಒಂದು ಸದುದ್ದೇಶದಿಂದ ವಿಶೇಷ ಅಧಿಕಾರವನ್ನು ನೀಡಲಾಗಿದೆ. ಭಾರತೀಯ ದಂಡ ಸಂಹಿತೆಯ ನಿಯಮಾವಳಿಗಳಿಂದಾಚೆಗೆ ಕಾರ್ಯಾಚರಿಸುವ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ಆದರೆ, ಕೆಲ ಯೋಧರ ವರ್ತನೆ ಇಂಥ ಸದುದ್ದೇಶವನ್ನು ಮಣ್ಣುಪಾಲು ಮಾಡಿದೆ. ಎಲ್ಲ ಭಾರತೀಯರ ಹೆಮ್ಮೆಗೆ ಪಾತ್ರವಾಗಿರುವ ಭಾರತೀಯ ಸೇನೆ, ತನ್ನದೇ ಆದ ಅತಿರೇಕಗಳಿಂದ ತನಗೇ ಕಳಂಕ ಹಚ್ಚಿಕೊಳ್ಳುತ್ತಿರುವುದು ನಿಜಕ್ಕೂ ಖೇದಕರ ಸಂಗತಿ.
ಸೇನೆಯ ಅತಿರೇಕಕ್ಕೆ ಒಂದು ಉದಾಹರಣೆ ಇರೋಮ್ ಶರ್ಮಿಳಾ ಪ್ರಕರಣ. ಮಣಿಪುರದ ಉಕ್ಕಿನ ಮಹಿಳೆಯೆಂದೇ ಖ್ಯಾತರಾದವರು ಈ ಶರ್ಮಿಳಾ. 2000ದಲ್ಲಿ ಪ್ರತಿಭಟನಾರ್ಥ ನಿರಶನ ಆರಂಭಿಸಿದ ಅವರು, ಈಗಲೂ- ಸತತ 13ನೇ ವರ್ಷದಲ್ಲೂ ಪ್ರತಿಭಟನೆ ಮುಂದುವರಿಸಿದ್ದಾರೆ. ಮೂಗಿನ ನಳಿಕೆಯ ಮೂಲಕ ಆಹಾರ ಸೇವಿಸುವ ಆಕೆಯ ಕರುಣಾಜನಕ ಚಿತ್ರಗಳು ವಿಶ್ವದೆಲ್ಲೆಡೆ ಪ್ರಕಟವಾಗಿವೆ, ಎಲ್ಲರ ಗಮನ ಸೆಳೆದಿವೆ.
ಇರೋಮ್ ಶರ್ಮಿಳಾ ಅವರ ವಿಷಮ ಪರೀಕ್ಷೆ ಆರಂಭವಾಗಿದ್ದು ಮಾಲೋಮ್ ಹತ್ಯಾಕಾಂಡದೊಂದಿಗೆ. ಬಸ್ಸೊಂದಕ್ಕೆ ಕಾಯುತ್ತಿದ್ದ 10 ನಾಗರಿಕರನ್ನು ಅಸ್ಸಾಂ ರೈಫಲ್ಸ್‌ನ ಯೋಧರು ಗುಂಡಿಕ್ಕಿ ಕೊಂದಿದ್ದರು. ಹೀಗೆ ಬಲಿಯಾದವರಲ್ಲಿ 18 ವರ್ಷದ ಬಾಲಕಿಯೊಬ್ಬಳೂ ಸೇರಿದ್ದಳು. ಆಕೆ ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿಗೆ ಭಾಜನಳಾಗಿದ್ದವಳು. 'ಬಂದೂಕುಧಾರಿ ಹೇಡಿ'ಗಳ ಮುಂದೆ ಆಕೆಯ ಧೈರ್ಯ ಪ್ರಯೋಜನಕ್ಕೆ ಬರಲಿಲ್ಲ.
ಈ ಘಟನೆಯಿಂದ ಆಕ್ರೋಶಗೊಂಡ, ಆದರೆ ಅಸಹಾಯಕಳಾಗಿದ್ದ ಶರ್ಮಿಳಾ ತನ್ನಿಂದ ಸಾಧ್ಯವಿದ್ದ ಏಕಮಾತ್ರ ದಾರಿಯನ್ನು ಹಿಡಿದಳು- ಅದು ಆಹಾರವನ್ನು ಸೇವಿಸದೇ ಪ್ರತಿಭಟನೆ. ಆನಂತರ ನಮ್ಮ ಸರ್ಕಾರ ಮಾಡಿದ್ದಾದರೂ ಏನು? ಆಕೆಯ ಪ್ರತಿಭಟನೆಗೆ ಕಾರಣವಾದ ಮೂಲ ಸಮಸ್ಯೆಯನ್ನು ನಿಭಾಯಿಸುವ ಗೋಜಿಗೇ ಹೋಗಲಿಲ್ಲ. ಬದಲಾಗಿ, ಆಕೆ ಸಾವಿಗೀಡಾಗದಂತೆ ಅಗತ್ಯ ಕ್ರಮಗಳನ್ನಷ್ಟೇ ಕೈಗೊಂಡಿತು. ರಾಜಕೀಯ ಪಕ್ಷಗಳು, ಯುವ ಸಂಘಟನೆಗಳು ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳು ಶರ್ಮಿಳಾಗೆ ಬೆಂಬಲ ನೀಡಿದವು. ಪ್ರಶಸ್ತಿಗಳು ಬಂದವು, ಹಾಗೆಯೇ ಆಕೆಯ ಬಗ್ಗೆ ಸಾಕಷ್ಟು ಪುಸ್ತಕಗಳು, ಹಾಡುಗಳು, ನಾಟಕಗಳೂ ಬಂದವು. ಆಕೆಯ ಗೌರವಾರ್ಥ ಪುಣೆ ವಿಶ್ವವಿದ್ಯಾಲಯ ವಿದ್ಯಾರ್ಥಿವೇತನವನ್ನು ಆರಂಭಿಸಿತು. ಪದವಿ ಶಿಕ್ಷಣ ಪಡೆಯಲು 39 ಮಣಿಪುರಿ ಯುವತಿಯರಿಗೆ ನೆರವಾಯಿತು.
ನಮ್ಮ ಪ್ರಜಾಪ್ರಭುತ್ವಕ್ಕೆ ಅಂಟಿದ ಇನ್ನೊಂದು ಕಪ್ಪುಚುಕ್ಕೆಯೆಂದರೆ, ಶರ್ಮಿಳಾ ಮತ್ತು ಆಕೆಯ ಬೆಂಬಲಿಗರ ಅವಿರತ ಪ್ರತಿಭಟನೆ, ಕಾಶ್ಮೀರದಲ್ಲಿನ ನಿರಂತರ ಹತ್ಯೆ- ಸಾರ್ವಜನಿಕರ ಪ್ರತಿಭಟನೆಯ ಹೊರತಾಗಿಯೂ ಸೇನೆಯ ದೌರ್ಜನ್ಯ ತಡೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯ ರಕ್ಷಾಕವಚ ಇಲ್ಲದಿದ್ದರೆ, ಗಡಿ ಪ್ರದೇಶಗಳಲ್ಲಿ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ನಡೆಸುವುದು ಅಸಾಧ್ಯ ಎಂದು ಸೇನೆಯ ಮುಖ್ಯಸ್ಥರು ಆಗಾಗ ಹೇಳುತ್ತಲೇ ಇರುತ್ತಾರೆ. ಅವರ ವಾದವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದಿಟ್ಟುಕೊಳ್ಳೋಣ. ಆಗ ಕಾಯಿದೆಯ ದುರುಪಯೋಗವನ್ನು ಮನ್ನಿಸಬೇಕೇ? ಅಚ್ಚರಿಯ ವಿಚಾರವೆಂದರೆ, ಇಷ್ಟೆಲ್ಲ ವರ್ಷಗಳು ಸರಿದುಹೋದರೂ, ಗಡಿ ಪ್ರದೇಶಗಳಲ್ಲಿ ಸೇನೆಯ ಕಾರ್ಯಾಚರಣೆಯಿಂದ ಯಾವುದೇ ಮಹತ್ವದ ಪರಿಣಾಮ ಕಂಡುಬಂದಿಲ್ಲ!  ಗಡಿಯಲ್ಲಿ ಉಗ್ರಗಾಮಿ ಚಟುವಟಿಕೆಯೂ ಕಡಿಮೆಯಾಗಿಲ್ಲ, ಭಾರತದ ನೆಲೆಯೂ ಗಟ್ಟಿಗೊಂಡಿಲ್ಲ. ವಾಸ್ತವವಾಗಿ, ಸೇನೆಯ ಕಾರ್ಯಾಚರಣೆಯು ಸ್ಥಳೀಯ ಜನರಲ್ಲಿ ಭಾರತದ ವಿರುದ್ಧ ಮತ್ತಷ್ಟು ದ್ವೇಷವನ್ನು ಹುಟ್ಟುಹಾಕಿದೆ. ಭಾರತವನ್ನು ಅವರು ಬೇರೆಯೇ ರಾಷ್ಟ್ರ ಎಂಬಂತೆ ನೋಡುತ್ತಿದ್ದಾರೆ. ಹಾಗಾದರೆ, ಸಶಸ್ತ್ರ ಪಡೆಗಳ ವಿಶೇಷಾಧಿಕಾರದಿಂದ ಆದ ಪ್ರಯೋಜನವಾದರೂ ಏನು?
ಹಾಗಾಗಿಯೇ ಸುಪ್ರೀಂಕೋರ್ಟ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಮಣಿಪುರದಲ್ಲಿ ಆರು ಪ್ರಕರಣಗಳಲ್ಲಿ ಏಳು ಜನರು ನಕಲಿ ಎನ್‌ಕೌಂಟರ್‌ಗೆ ಬಲಿಯಾಗಿರುವುದನ್ನು ತಜ್ಞರ ಸಮಿತಿಯೊಂದು ಕಂಡುಕೊಂಡಿದೆ. ಆ ಸಮಿತಿಯಲ್ಲಿದ್ದವರು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಹಿಂದಿನ ಮುಖ್ಯ ಚುನಾವಣೆ ಆಯುಕ್ತ ಜೆ.ಎಂ. ಲಿಂಗ್ಡೋ ಮತ್ತು ನಿವೃತ್ತ ಡಿಜಿಪಿ ಅಜಯ್‌ಕುಮಾರ್ ಸಿಂಗ್ ಅವರಂಥ ಗೌರವಾನ್ವಿತರು. ಹಾಗಾಗಿ ಸಮಿತಿಯ ವರದಿಗೆ ಹೆಚ್ಚಿನ ಮಹತ್ವ ಬಂದಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದನ್ನು ಒಮ್ಮೆ ನೆನಪಿಸಿಕೊಳ್ಳಿ- 'ನಾವು ಹೇಳಲಾರದಷ್ಟು ವ್ಯಥೆಪಡುತ್ತಿದ್ದೇವೆ. ಇಲ್ಲಿ ವೃಥಾ ಕುಳಿತು, ವಿಚಾರಣೆ ನಡೆಸಿ ಏನು ಪ್ರಯೋಜನ? ಎಲ್ಲವೂ ಅರ್ಥಹೀನವೆನಿಸುತ್ತ್ತಿದೆ... ಎಷ್ಟೊಂದು ಬಾರಿ ನಾವು ಮಾರ್ಗದರ್ಶಿಗಳನ್ನು ಹೊರಡಿಸಿಲ್ಲ? ಇಂಥ ಘಟನೆಗಳು ಭವಿಷ್ಯದಲ್ಲಿ ಎಂದೂ ಮರುಕಳಿಸಬಾರದು...' 'ಕೈಗೊಂಬೆ ಸರ್ಕಾರ' ಮುಂದಡಿ ಇಡದು, ಯಾವ ಕ್ರಮವನ್ನೂ ಕೈಗೊಳ್ಳದು. ಆದರೆ, ಸುಪ್ರೀಂಕೋರ್ಟ್ ಹಾಗೆ ಮಾಡದು ಎಂಬುದೇ ಜನರ ನಿರೀಕ್ಷೆ. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆಯನ್ನು ವಾಪಸ್ ಪಡೆಯುವಂತೆ ಹೆಗ್ಡೆ ಸಮಿತಿ ಶಿಫಾರಸು ಮಾಡಿದೆ. ಅದನ್ನು ಸ್ವಾಗತಿಸಲೇಬೇಕು. ಅದೊಂದು ಉತ್ತಮ ಹೆಜ್ಜೆಯಾಗಬಲ್ಲದು. ಇನ್ನಷ್ಟು ದೌರ್ಜನ್ಯಕ್ಕೆ ಖಂಡಿತ ಅವಕಾಶ ನೀಡಬಾರದು.

-ಟಿ.ಜೆ.ಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com