ನಿತ್ರಾಣಗೊಂಡಿರುವ ಭಾರತದ ಕೃಷಿಗೆ ಶಕ್ತಿ ಬೇಕಾಗಿದೆ!

Updated on: 

ಹಿಂದಿನ ಲೇಖನದಲ್ಲಿ ದ್ವಿತೀಯಕ ಕೃಷಿಯ ಬಗ್ಗೆ ತಿಳಿಸಿದ್ದೆನಷ್ಟೆ. ಈ ಬಾರಿ ಆ ಕೃಷಿ ಚಟುವಟಿಕೆಯಿಂದ ಯಾವ ರೀತಿಯಲ್ಲಿ ಕೃಷಿಗೆ ಸಂಬಂಧಪಟ್ಟ ವ್ಯಾಪಾರ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂಬುದರ ಬಗ್ಗೆ ನೋಡೋಣ.
Cargil, Archer Danieles and Midlands, Craft Foods, Perdue Farms, Tysons ಮತ್ತು Chickens ನಂತಹ ಇನ್ನು ಎಷ್ಟೋ ಕಂಪನಿಗಳು ಬಿಲಿಯನ್ ಡಾಲರ್‌ಗಳಷ್ಟು ದ್ವಿತೀಯಕ ಕೃಷಿಯ ವ್ಯವಹಾರ ಮತ್ತು ವ್ಯಾಪಾರ ನಡೆಸುತ್ತಾ ಬಹುರಾಷ್ಟ್ರೀಯ ಕಂಪನಿಗಳಾಗಿ ಬೆಳೆದು ನಿಂತಿವೆ. ಭಾರತದಂತೆಯೇ ಹಲವು ದೇಶಗಳ ಆರ್ಥಿಕ ಅವಲಂಬನೆ ಸುಮಾರು ಎಪ್ಪತ್ತು ಪ್ರತಿಶತದಷ್ಟು ಕೃಷಿಯ ಮೇಲೆ ನಿಂತಿದೆ. ಆದರೆ ಮೇಲೆ ಹೇಳಿದ ಲಾಭದಾಯಕ ಉದ್ಯಮಗಳನ್ನು ಅವು ಕಂಡೇ ಇಲ್ಲ. ಹಾಗಂತ, ಸಣ್ಣ ಹಿಡುವಳಿದಾರರ ಕೃಷಿಯಿಂದ ದ್ವಿತೀಯಕ ಕೃಷಿ ಉದ್ಯಮಗಳನ್ನು ಹುಟ್ಟು ಹಾಕುವುದಕ್ಕಾಗುವುದಿಲ್ಲ ಎಂಬ ವಾದವನ್ನಂತೂ ಒಪ್ಪಲಿಕ್ಕಾಗುವುದಿಲ್ಲ.
    ದ್ವಿತೀಯಕ ಕೃಷಿಯ ಚಟುವಟಿಕೆ ಬಹಳ ಜಟಿಲವಾದ ವಿಷಯ. ಇವುಗಳನ್ನು ಅಳವಡಿಸಿಕೊಳ್ಳಬೇಕಾದರೆ ಸಾಕಷ್ಟು ಪರಿಣತರ ಶ್ರಮ ಬೇಕಾಗುತ್ತದೆ. ಸಾಮಾನ್ಯವಾಗಿ ಈ ತರಹದ ಪರಿಣತರನ್ನು ಕೃಷಿ ವಿವಿಗಳಲ್ಲಿ ಮತ್ತು ಬಿಸಿನೆಸ್ ಸ್ಕೂಲುಗಳಲ್ಲಿ ಕಾಣಬಹುದು. ಆದರೆ, ಭಾರತದ ಕೃಷಿ ವಿವಿಗಳಿಗೂ ಮತ್ತು ಬಿಸಿನೆಸ್ ಸ್ಕೂಲುಗಳಿಗೂ ಸಾಮಾನ್ಯವಾಗಿ ಯಾವ ಸಂಬಂಧವೂ ಕಂಡು ಬರುವುದಿಲ್ಲ. ಆದರೆ ಅದೇ ಅಮೆರಿಕದ ಕೃಷಿ ವಿವಿಗಳಲ್ಲಿ College of Business Management ಗಳು ಸರ್ವೇ ಸಾಮಾನ್ಯವಾಗಿ ಕಾಣಸಿಗುತ್ತವೆ. ಅಷ್ಟೇ ಅಲ್ಲದೆ, ಮೂಲಭೂತ ವಿಜ್ಞಾನ ವಿಷಯಗಳೂ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳಿಕೊಳ್ಳುವಂತಹ ವಿಭಾಗಗಳಾಗಿರುತ್ತವೆ. ಆದರೆ ಭಾರತದಲ್ಲಿ ಇರುವ ಕೃಷಿ ವಿವಿಗಳನ್ನು ಅರವತ್ತರ ದಶಕದಲ್ಲಿ ಅಮೆರಿಕದ ಲ್ಯಾಂಡ್-ಗ್ರಾಂಟ್ಸ್ ವಿವಿ ಸಹಯೋಗದಲ್ಲಿ ಆರಂಭಿಸಿದರೂ, ಸಂಪೂರ್ಣವಾಗಿ ಅಮೆರಿಕದ ಕೃಷಿ ವಿವಿಗಳಂತೆ ಅವುಗಳ ಸ್ಥಾಪನೆಯಾಗಿಲ್ಲ. ಈ ಅರಬರೆ ಅಳವಡಿಕೆಯಿಂದಾಗಿಯೇ ಇಂದಿಗೂ ಸಹ ಈ ಕೃಷಿ ವಿವಿಗಳಿಗೆ ಕೃಷಿಕರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ವಿಪರ್ಯಾಸವೆಂದರೆ ಇವು ದೃಷ್ಟಿ ವೈಶಾಲ್ಯತೆಯಿಲ್ಲದೆ, ಬಹು ಸಾಧಾರಣ ಪ್ರಯತ್ನದಿಂದ ಪದವೀಧರರನ್ನು ಸೃಷ್ಟಿ ಮಾಡುತ್ತಿವೆ. ಹೀಗಾಗಿ, ಭಾರತದ ಕೃಷಿ ವಿವಿಗಳಿಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವುದಕ್ಕೆ ಸಾಧ್ಯವೇ ಆಗುತ್ತಿಲ್ಲ. ಪ್ರಸ್ತುತ ಕಾಲದಲ್ಲಿ ದ್ವಿತೀಯಕ ಕೃಷಿ ಉದ್ಯಮಗಳನ್ನು ಸೃಷ್ಟಿಸಬೇಕಾದರೆ, ಸಮಗ್ರವಾಗಿ ತರಬೇತಿ ಹೊಂದಿದ ಪದವೀಧರರನ್ನು ತಯಾರಿಸಬೇಕಾಗುತ್ತದೆ. ಹೀಗಾಗಿ, ಭಾರತದ ಕೃಷಿ ವಿವಿಗಳು ಎಚ್ಚೆತ್ತುಕೊಂಡು ಆಧುನಿಕ ಪ್ರಪಂಚಕ್ಕೆ ಅಗತ್ಯವಾಗುವ ಪದವೀಧರರನ್ನು ತಯಾರಿಸುವ ಕೈಂಕರ್ಯಕ್ಕೆ ತೊಡಗಿಸಿಕೊಳ್ಳಬೇಕು. "ಸಂಶೋಧನೆಯೇ ಉದ್ಯಮ" ಎಂದು ಎಲ್ಲಿಯತನಕ ದೇಶದ ಕೃಷಿ ವಿವಿಗಳು ಪರಿಗಣಿಸುವುದಿಲ್ಲವೋ, ಅಲ್ಲಿಯ ತನಕ ಭಾರತದ ಅತ್ಯಂತ ನಿತ್ರಾಣಗೊಂಡಿರುವ ಕೃಷಿ ಕ್ಷೇತ್ರ ಉದ್ಧಾರವಾಗುವುದಕ್ಕೆ ಸಾಧ್ಯವೇ ಇಲ್ಲ. Generational Transformation ಗಳು ತ್ವರಿತ ಗತಿಯಲ್ಲಿ ಸಾಗಬೇಕು.
ಸದ್ಯಕ್ಕೆ ಭಾರತದ ರೈತರು ತಾವು ಬೆಳೆಯುತ್ತಿರುವ ಭತ್ತ, ಗೋಧಿ, ಕಬ್ಬು, ಸೆಣಬು, ಆಲೂಗೆಡ್ಡೆಯಂತಹ ಬೆಳೆಗಳನ್ನು ಯಾವ ರೀತಿ ಮೌಲ್ಯವರ್ಧಿತವಾಗಿ ಬೆಳೆಯಬೇಕೆಂಬುದನ್ನು ಕೈಗಾರಿಕೋದ್ಯಮಿಗಳಿಂದ ಅರಿತುಕೊಳ್ಳಬೇಕು. ಅಂದರೆ, ಬರೀ ಆಹಾರ ಬೆಳೆಯಾಗಿ ಬೆಳೆಯುವುದಲ್ಲದೆ, ಇನ್ನಿತರ ರೀತಿಯಲ್ಲಿ ಬೆಳೆಗಳ ಉಪಯೋಗವನ್ನು ಸೃಷ್ಟಿಸಬೇಕು. ಮೊದಲನೆಯದಾಗಿ ಆಹಾರ ಬೆಳೆಗಳ ಉತ್ಪನ್ನ ದರವನ್ನು ವೃದ್ಧಿಸಬೇಕು. ಹಾಗಾದರೆ, ಉತ್ತಮ ಆಧುನಿಕ ತಂತ್ರಜ್ಞಾನದಿಂದ ಆವಿಷ್ಕರಿಸಿದ ಬೀಜಗಳ ಬೇಡಿಕೆ ಹೆಚ್ಚುತ್ತದೆ.
ಇನ್ನು ಪ್ರಪಂಚದಲ್ಲಿ ಸುಮಾರು ಎಪ್ಪತ್ತು ಬಿಲಿಯನ್ ಡಾಲರ್‌ನಷ್ಟು  ಮಾರುಕಟ್ಟೆ ಹೊಂದಿರುವ ಔಷಧ ಬೆಳೆಗಳಲ್ಲಿ ಭಾರತದ ಪಾಲು ಹೇಳಿಕೊಳ್ಳುವಷ್ಟೇನೂ ಇಲ್ಲ. ಆದರೆ, ಇತ್ತೀಚೆಗೆ ಯಾವುದೇ ವಿವಿಗಳಲ್ಲಿ ಇಣುಕಿ ನೋಡಿದರೆ 'ಮೆಡಿಸನಲ್ ಪ್ಲಾಂಟ್ಸ್‌' ಬಗ್ಗೆ ಸಂಶೋಧನೆ ನಡೆದಿರುವುದನ್ನು ನೋಡುತ್ತೇವೆ. ಆದರೆ, ಇಷ್ಟೆಲ್ಲಾ ಸಂಶೋಧನೆ ನಡೆದರೂ ಭಾರತದಲ್ಲಿ ಔಷಧೀಯ ಸಸ್ಯಗಳ ಬಗೆಗಿನ ಜ್ಞಾನ ವೃದ್ಧಿಯಾಗಿರುವುದು ಕಂಡು ಬರುವುದಿಲ್ಲ ಮತ್ತು ಇನ್ನು ಉದ್ಯಮಗಳನ್ನು ಸ್ಥಾಪಿಸುವ ಗೋಜಿಗೆ ಯಾರೂ ಹಣ ಹೂಡುತ್ತಿಲ್ಲ. ಯಾವ ಪುರುಷಾರ್ಥಕ್ಕಾಗಿ ಈ ರೀತಿಯ ಕೆಲಸಕ್ಕೆ ಬಾರದ ಸಂಶೋಧನೆ ಮಾಡುತ್ತಾರೋ ತಿಳಿಯದು?! ಈ ವಿವಿಗಳ ಒಂದೇ, ಒಂದು ಸಾಧನೆಯೆಂದರೆ ಅಲ್ಲಿ ದಂಡಿಯಾಗಿ ಪಿಹೆಚ್‌ಡಿಗಳು ತಯಾರಾಗುತ್ತಿರುವುದು.
ಆರ್ಥಿಕ ಅಭಿವೃದ್ಧಿಯಾಗುತ್ತಿದ್ದಂತೆ ಜನರ ಆಹಾರ ಬೇಡಿಕೆಗಳೂ ವೈವಿಧ್ಯವಾಗುತ್ತಾ ಹೋಗುತ್ತವೆ. ಹಾಗಾಗಿ ಆಹಾರ ಪದಾರ್ಥಗಳಲ್ಲಿ Value-addition ಬಹು ಮುಖ್ಯವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದೇಶದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬೇಕಾದರೆ, ಅವುಗಳ ಗುಣಮಟ್ಟವೂ ಅಂತಾರಾಷ್ಟ್ರೀಯ ಮಟ್ಟದ್ದಾಗಿರಬೇಕಾಗುತ್ತದೆ. ಅಂದರೆ ಭಾರತದ ಕೃಷಿಕರಿಗೆ ಕ್ವಾಲಿಟಿ ಮೇನೇಜ್‌ಮೆಂಟ್‌ನ ಬಗ್ಗೆ ತರಬೇತಿ ಅವಶ್ಯಕವಾಗುತ್ತದೆ ಹಾಗೂ ದ್ವಿತೀಯಕ ಕೃಷಿ ಚಟುವಟಿಕೆಗಳಿಂದ ಉದ್ಭವಿಸುವ ಉದ್ಯಮಗಳೂ ಸಹ ಕ್ವಾಲಿಟಿ ಕಂಟ್ರೋಲ್‌ಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ದ್ವಿತೀಯಕ ಕೃಷಿ ಭಾರತದಲ್ಲಿ ಬೆಳೆಯದೇ ಇರುವುದಕ್ಕೆ ಮುಖ್ಯ ಕಾರಣವೆಂದರೆ, ಮೂಲಭೂತವಾಗಿ ಅವಶ್ಯಕವಿರುವ ವ್ಯವಸ್ಥೆಗಳೇ ಇಲ್ಲದಿರುವುದು. ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬರೀ ಭಾಷಣ ಕುಟ್ಟುವುದನ್ನು ಬಿಟ್ಟು ಬೇರೇನೂ ಮಾಡಿಯೇ ಇಲ್ಲ. ಅದರಲ್ಲೂ ಕರ್ನಾಟಕದಲ್ಲಿ ಈ ಕುರಿತು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಗಿಮಿಕ್ ಮಾಡಿದ್ದಷ್ಟೇ ಆಯಿತೇ ಹೊರತು, ಬೇರೆ ಏನನ್ನೂ ಸಾಧಿಸಲಾಗಲಿಲ್ಲ. ಹೀಗಾದರೆ ರೈತರ ಬವಣೆ ನೀಗುವುದೆಂತು? ಸರ್ಕಾರಗಳು ಮಾಡಬೇಕಾದ ಮುಖ್ಯ ಕೆಲಸವೆಂದರೆ, ಖಾಸಗಿ ಸಂಸ್ಥೆಗಳು ಮತ್ತು ಖಾಸಗಿ ಬಂಡವಾಳಗಾರರು ಕೃಷಿಯಲ್ಲಿ ಹಣ ಹೂಡುವಂತಹ ನೀತಿ ನಿಯಮಗಳನ್ನು ರೂಪಿಸುವುದು. ಭಾರತದಲ್ಲಿ ಸದ್ಯಕ್ಕಿರುವ ದ್ವಿತೀಯಕ ಕೃಷಿ ಚಟುವಟಿಕೆಗಳ ಮೌಲ್ಯ ಎರಡು ಬಿಲಿಯನ್ ಡಾಲರ್‌ಗಳಷ್ಟೂ ಸಹ ಇಲ್ಲ. ಆದರೆ ದ್ವಿತೀಯಕ ಕೃಷಿ ಬೆಳೆಯುವುದಕ್ಕೆ ಬೇಕಾದಷ್ಟು ಸದಾವಕಾಶಗಳಿವೆ. ಬರೀ ಆಹಾರ ಬೆಳೆಗಳನ್ನೇ ಬೆಳೆಯದೆ, ವೈವಿಧ್ಯಮಯ ಬೆಳೆಗಳನ್ನೂ ಸಹ ಬೆಳೆಯುವಂತಾಗಬೇಕು. ಮತ್ತೊಂದು ಬಹು ಮುಖ್ಯವಾಗಿ ನಡೆಯಬೇಕಾದ ಕೆಲಸವೆಂದರೆ ಸಮುದ್ರದಿಂದ ಸಿಗುವ ಸಂಪನ್ಮೂಲಗಳಿಂದ ಕೈಗಾರಿಕೋದ್ಯಮವನ್ನು ಉದ್ಧರಿಸುವುದು. ಬ್ರೆಡ್ಡು ಮತ್ತು ಬೇಕರಿ ಉದ್ಯಮ, ಅಡುಗೆ ಎಣ್ಣೆ ಮತ್ತು ಸಂಬಂಧಿತ ಪದಾರ್ಥಗಳ ಉದ್ಯಮ, ಒಣಹಣ್ಣು ಮತ್ತು ಕರಟ-ಕಾಯಿಗಳ ಉದ್ಯಮ, ನಿರ್ಜಲೀಕರಿಸಿದ ಹಣ್ಣುಗಳು ಮತ್ತು ತರಕಾರಿ ಉದ್ಯಮ, ಹಾಲು ಮತ್ತು ಹೈನುಗಾರಿಕೆ ಅವಲಂಬಿತ ಉದ್ಯಮಗಳು, ಪರಿಷ್ಕರಿಸಿದ ಆಹಾರ ಮತ್ತು ತಿಂಡಿ ತಿನಿಸುಗಳ ಉದ್ಯಮ, ಸಾಂಬಾರ ಪದಾರ್ಥಗಳ ಉದ್ಯಮ, ಮಾಂಸ ಮತ್ತು ಕೋಳಿ ಮಾಂಸಗಳ ಉದ್ಯಮ, ಹೈನುಗಾರಿಕೆಗೆ ಬೇಕಾದ ಆಹಾರಗಳ ಉದ್ಯಮ, ಸಮುದ್ರ ಸಂಪನ್ಮೂಲ ಅವಲಂಬಿತ ಉದ್ಯಮಗಳು, ಸಾರಾಯಿ ಮತ್ತು ಭಟ್ಟಿ ದ್ರವಗಳ ಉದ್ಯಮ, ಹೂ ಕೈಗಾರಿಕೋದ್ಯಮ, ಸಾಕು ಪ್ರಾಣಿಗಳಿಗೆ ಬೇಕಾಗುವ ಪದಾರ್ಥಗಳನ್ನು ತಯಾರಿಸುವ ಉದ್ಯಮ ಮತ್ತು ಬೇರೆ ಬೇರೆ ಕೈಗಾರಿಕೋದ್ಯಮಗಳಿಗೆ ಬೇಕಾಗುವ ಪದಾರ್ಥಗಳ ಉದ್ಯಮಗಳನ್ನು ತಳ ಮಟ್ಟದಿಂದ ಸಮೃದ್ಧಿ ಪಡಿಸಿ, ಖಚಿತವಾಗಿ ಉದ್ಭವವಾಗುವ ಆದಾಯವನ್ನು ರೈತಾಪಿ ಜನಗಳಿಗೆ ತಲುಪಿಸಿದ್ದೇ ಆದಲ್ಲಿ, ನಿಜವಾಗಿಯೂ ಬಡರೈತರ ಬದುಕನ್ನು ಹಸನಾಗಿಸಬಹುದು. ಇವೆಲ್ಲಕ್ಕೂ ಮುಖ್ಯವಾಗಿ ಬೇಕಾಗಿರುವುದು ದೂರದೃಷ್ಟಿ ಇರುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು. ಮೇ ತಿಂಗಳು ಆದ ಮೇಲಾದರೂ, ಆ ತರಹದ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಲಭಿಸುವುದೇ ಎಂದು ಕಾದು ನೋಡಬೇಕಾಗಿದೆ.

- ಪ್ರೊ. ಶಾಂತು ಶಾಂತಾರಾಮ್,
ಐಯೊವಾ ರಾಜ್ಯ ಕೃಷಿ ವಿ.ವಿ.
shanthus@iastate.edu

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com