-ನಶಾ ಫ್ಲಾಪ್ ಆಗಿರೋದ್ ನೋಡಿ, ಮುಂದೆ ಪೂನಂ ಪಾಂಡೆಯ ಯಾವುದಾದರೂ ಸಿನಿಮಾ ಗೆದ್ದರೆ ನಾನು ಶರ್ಟ್ ಬಿಚ್ತೀನಿ ಅಂತ ಸೌರವ್ ಗಂಗೂಲಿ ಹೇಳಿದಾರಂತೆ?
ಅಯ್ಯೋ ಥೂ ಹೋಗಿಪ್ಪಾ.. ನಂಗ್ ನಾಚಿಕೆ ಆಗುತ್ತೆ..
-ರೀ ಸುಮ್ನೆ ಇರ್ರೀ, ನಿಮ್ಗೆ ನಾಚಿಕೆ ಆಗುತ್ತೆ ಅಂತ ಯಾರಾದ್ರೂ ಕೇಳಿಸ್ಕೊಂಡ್‌ಬಿಟ್ರೆ, ಟಿವಿ ಚಾನೆಲ್‌ಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗ್‌ಬಿಡುತ್ತೆ. ಅದ್ಸರಿ ನೀವ್ ಮಾತ್ರ ಆಗಾಗ ಬಟ್ಟೆ ಬಿಚ್ತೀನಿ ಅಂತ ಹೇಳಿ ಬ್ರೇಕಿಂಗ್ ನ್ಯೂಸ್ ಮಾಡ್ತೀರಾ, ಅಂದ್ರೆ ನಿಮ್ ಸಿನಿಮಾ ಮಾತ್ರ ರೆಕಾರ್ಡ್ ಬ್ರೇಕಿಂಗ್ ನ್ಯೂಸ್ ಮಾಡ್‌ಲಿಲ್ವಲ್ಲಾ, ಯಾಕೆ?
ಸಿಕ್ಕಾ'ಬಟ್ಟೆ' ಹಿಟ್ ಆಗುತ್ತೆ ಅಂದ್ಕೊಂಡಿದ್ದೆ. ಏನ್ ಮಾಡೋದು, ಯೂ ಟ್ಯೂಬ್ನಲ್ಲಿರೋ ನನ್ನ ಹಳೆಯ ಟ್ರೈಲರ್‌ಗಳಿಗೂ, ನಶಾ ಸಿನಿಮಾದಲ್ಲಿ ನನ್ ಕಾಸ್ಟ್ಯೂಮ್ ಡಿಸೈನ್ ಮಾಡಿದ ಟೈಲರ್‌ಗೂ ಮ್ಯಾಚ್ ಆಗ್‌ಲಿಲ್ಲ ಅನ್ಸುತ್ತೆ.
-ಅದ್ಸರಿ, ಆದ್ರೆ, ನೀವು ಯಾವಾಗ್ಲೂ ಸೋಷಿಯಲ್ ನೆಟ್‌ವರ್ಕ್‌ಗಳಲ್ಲೇ ಇರ್ತೀರಲ್ಲ, ಯಾಕೆ?
ನಾನು ಓದಿದ್ದು ಆರ್ಟ್ಸ್. ಹಂಗಾಗಿ ಸೋಶಿಯಲ್ ಅಂದ್ರೆ ತುಂಬಾ ಇಷ್ಟ. ಐ ಆ್ಯಮ್ ವೆರಿ ಸೋಶಿಯಲ್ ಯೂ ನೋ.
-ಆಯ್ತು ಬಿಡಿ. ಈ, ಕಡಿಮೆ ಬಟ್ಟೆ ಹಾಕ್ಕೊಳ್ಳೊದ್ರಿಂದ ನಿಮಗೆ ಇಲ್ಲಿಯವರೆಗೆ ಏನಾದ್ರೂ ಲಾಭ ಆಗಿದೆಯಾ?
ಇಲ್ಲಿವರೆಗೂ ಆಗಿಲ್ಲದಿದ್ರೂ ನಾಳೆ ಆಗುತ್ತೆ. ಮದುವೆ ಆದ್ಮೇಲೆ, ನಾನು ಡ್ರೆಸ್ ಮಾಡ್ಕೊಳ್ಳೋಕೆ ಜಾಸ್ತಿ ಟೈಮ್ ತಗೋತೀನಿ ಅಂತ ನನ್ನ ಗಂಡ ಕಂಪ್ಲೇಂಟ್ ಮಾಡಲ್ಲ, ನನ್ ಥರಾ ಡ್ರೆಸ್ ಮಾಡ್ಕೊಳ್ಳೋಕೆ ಎಷ್ಟೊತ್ ಬೇಕು ಅಲ್ವಾ?
-ನಿಜ, ನಿಜ. ಹೋಗ್ಲಿ, ಸದ್ಯಕ್ಕೆ ನಶಾ ಅಂತೂ ಫ್ಲಾಪ್ ಆಯ್ತು, ಮುಂದೆ ಏನ್ ಮಾಡ್‌ಬೇಕು ಅಂತಿದೀರಿ?
ಕನ್ನಡದಲ್ಲಿ 'ಸಿಲ್ಕ್' ಅನ್ನೋ ಫಿಲ್ಮ್ ಬಂದಿದೆಯಂತೆ. ಅದರ ಸೆಕೆಂಡ್ ಪಾರ್ಟ್‌ನಲ್ಲಿ ಆ್ಯಕ್ಟ್ ಮಾಡೋಕೆ ನಂಗೆ ಆಫರ್ ಬಂದಿದೆ. ಹೆಸರು 'ಪೂನಂ ಸಿಲ್ಕ್ಸ್.'
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಹಸ್ತ ಭವಿಷ್ಯ ಹೇಳುವ ಕಲೆ ಹಲವರಿಗೆ ಗೊತ್ತು. ಆದರೆ, ಕೈ ಬೆರಳುಗಳನ್ನು ನೋಡಿ ಅದನ್ನು ವಿಶ್ಲೇಷಣೆ ಮಾಡುವುದು ಎಲ್ಲರಿಗೂ ಗೊತ್ತಿರೋ ವಿಷಯ ಅಲ್ಲ. ಹಲವು ಕ್ರಿಮಿನಲ್ ಕೇಸುಗಳನ್ನು ಬಗೆಹರಿಸುವಲ್ಲಿ ಈ ಫಿಂಗರ್ ಪ್ರಿಂಟ್ಸ್‌ನ ಪಾತ್ರ ದೊಡ್ಡದು. ಆದರೆ ಪರಿಣಿತರು ಈ ಬೆರಳಿನ ಮೇಲಿನ ಬರಹವನ್ನು ಹೇಗೆ ವಿಶ್ಲೇಷಿಸುತ್ತಾರೆ ಎಂಬ ಬಗ್ಗೆ ಕುತೂಹಲ ಇದ್ದರೆ ಅದರ ಬಗೆಗಿನ ಕೊಂಚ ಮಾಹಿತಿ ಈಗ ನಿಮ್ಮ ಬೆರಳಿನ ತುದಿಯಲ್ಲೇ ಇದೆ.
-bit.ly/13vcOkZ n bit.ly/13Dfrxt n bit.ly/1cykiqz n bit.ly/1807ohJ n bit.ly/17qi07c
ಹರಿ-ಕಥೆ
ಹೊಸದಾಗಿ ಸಚಿವನಾಗಿದ್ದ ಖೇಮುಗೆ ಸಾರ್ವಜನಿಕ ಸಮಾವೇಶಗಳಲ್ಲಿ ಜನರನ್ನು ಇಂಪ್ರೆಸ್ ಮಾಡಲು ಹೇಗೆ ಮಾತನಾಡಬೇಕು ಎಂಬುದರ ಬಗ್ಗೆ ಅಷ್ಟಾಗಿ ನಾಲೆಡ್ಜ್ ಇರಲಿಲ್ಲ. ಹೀಗೇ,ಖೇಮು ಹೋಗಿದ್ದ ಯಾವುದೋ ಒಂದು ಸಮಾರಂಭದಲ್ಲಿ ಸಿನಿಮಾ ನಟನೊಬ್ಬ ಭಾಗವಹಿಸಿದ್ದ. ಅಂದು ವೇದಿಕೆಯ ಮೇಲೆ ಆತ ತನ್ನ ಭಾಷಣ ಶುರುಮಾಡುತ್ತ ಹೇಳಿದ 'ಜೀವನದಲ್ಲಿ ನಾನು ಕಂಡಿರುವ ಯಶಸ್ಸಿಗೆ ಒಂದು ಕಾರಣ ಇದೆ. ಅದೇನೆಂದರೆ, ನಾನು, ನನ್ನ ಜೀವನದ ಅತಿ ಅಮೂಲ್ಯವಾದ ಸಮಯವನ್ನು, ಒಂದು ಹೆಣ್ಣಿನ ತೋಳಿನಲ್ಲಿ ಕಳೆದಿದ್ದೇನೆ, ಆದರೆ ಆಕೆ ನನ್ನ ಹೆಂಡತಿ ಅಲ್ಲ'. ನೆರೆದಿದ್ದ ಇಡೀ ಜನಸ್ತೋಮ ಒಂದು ಕ್ಷಣ ಸ್ತಬ್ಧವಾಯ್ತು. ಜನ ಆತನ ಬಗ್ಗೆ ಅಸಹ್ಯದಿಂದ ಮುಖ ತಿರುಗಿಸಿಕೊಳ್ಳಲಾರಂಭಿಸಿದರು. ಆತ ಮುಂದುವರಿಸಿದ 'ಆಕೆ ನನ್ನ ತಾಯಿ'. ಮರುಕ್ಷಣವೇ ಜನರಿಂದ ಚಪ್ಪಾಳೆಯ ಸುರಿಮಳೆ. ಎಲ್ಲರೂ ಅವನ ಮಾತಿನ ಮೋಡಿಗೆ ಮರುಳಾದರು. ಇದನ್ನೆಲ್ಲಾ ನೋಡಿದ ಖೇಮು, ನಾನೂ ಇದೇ ತಂತ್ರ ಉಪಯೋಗಿಸಬೇಕು ಎಂದುಕೊಂಡ. ಮುಂದಿನ ವಾರ ಇನ್ನೊಂದು ಊರಿನಲ್ಲಿ ಸಮಾವೇಶ ಏರ್ಪಾಡಾಗಿತ್ತು. ವೇದಿಕೆ ಏರಿದ ಸಚಿವ ಖೇಮು ಭಾಷಣ ಆರಂಭಿಸಿದ 'ಜೀವನದಲ್ಲಿ ನಾನು ಕಂಡಿರುವ ಯಶಸ್ಸಿಗೆ ಒಂದು ಕಾರಣ ಇದೆ. ಅದೇನೆಂದರೆ, ನಾನು, ನನ್ನ ಜೀವನದ ಅತಿ ಅಮೂಲ್ಯವಾದ ಸಮಯವನ್ನು, ಒಂದು ಹೆಣ್ಣಿನ ತೋಳಿನಲ್ಲಿ ಕಳೆದಿದ್ದೇನೆ, ಆದರೆ ಆಕೆ ನನ್ನ ಹೆಂಡತಿ ಅಲ್ಲ'. ನೆರೆದಿದ್ದ ಇಡೀ ಜನಸ್ತೋಮ ಒಂದು ಕ್ಷಣ ಸ್ತಬ್ಧವಾಯ್ತು. ಜನ ಆತನ ಬಗ್ಗೆ ಅಸಹ್ಯದಿಂದ ಮುಖ ತಿರುಗಿಸಿಕೊಳ್ಳಲಾರಂಭಿಸಿದರು. ಖೇಮು ಮುಂದುವರಿಸಲು ಹೊರಟ. ಆದರೆ, ಮುಂದಕ್ಕೆ ಆ ಸಿನಿಮಾ ನಟ ಏನು ಹೇಳಿದ್ದ ಎಂಬುದು ನೆನಪಾಗದೆ ಖೇಮು ಮೈಕ್ ಮುಂದೆ ಗೊಣಗಿದ, 'ಛೇ, ಎಷ್ಟ್ ಟ್ರೈ ಮಾಡಿದ್ರೂ ಆಕೆ ಯಾರು ಅಂತ ನೆನಪೇ ಆಗ್ತಿಲ್ಲ'.
ಸ್ಯಾಂಡಲ್‌ವುಡ್
ಅಪ್ಪಿ ತಪ್ಪಿ ಒಂದು ಸಿನಿಮಾ ಗೆದ್ದರೆ ಅದರ ಹಿಂದೆಯೇ ಗುತ್ತಿಗೆ ಆಧಾರದ ಮೇಲೆ ನಾಲ್ಕೈದು ಚಿತ್ರಗಳನ್ನು ಒಪ್ಪಿಕೊಂಡು, ನಂತರ ಕುತ್ತಿಗೆಯ ಆಧಾರದ ಮೇಲೆ ತಲೆಯೇ ನಿಲ್ಲದಂತೆ ಹಾಡುವ ಹಲವು ನಾಯಕರ ಚಿತ್ರಗಳ ನಡುವೆ, ಈ ವಾರ ಮೂರು ಸ್ಟಾರ್‌ಲೆಸ್ ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ, ಸಿಲ್ಕ್ ಮತ್ತು ಆಶೀರ್ವಾದ ಎಂಬ ಚಿತ್ರಗಳಿಗೆ 'ದೇವರ'ಆಶೀರ್ವಾದವಂತೂ ಇದೆ. ಏಕೆಂದರೆ ಎರಡೂ ದೇವರ ಚಿತ್ರಗಳೇ. ಗಾಂಧಿನಗರದ ಫೇಮಸ್ ಚಿತ್ರಮಂದಿರದ ಲೆಕ್ಕದಲ್ಲಿ ಇವನ್ನು 'ಸ್ಟೇಟ್ಸ್' ಲೆವೆಲ್ ಚಿತ್ರಗಳು ಎನ್ನಬಹುದು. ಆದರೆ,ಕೇಸ್ ನಂಬರ್ 18/9 ಚಿತ್ರದ ಬಗ್ಗೆ ಒಳ್ಳೆಯ ಮಾತುಗಳೇ ಕೇಳಿಬರುತ್ತಿವೆ. ಚಿತ್ರದ ನಾಯಕ ನಿರಂಜನ್ ದೊಡ್ಡ ಸ್ಟಾರ್ ಅಲ್ಲ, ಆದರೆ, ಮುಂದೆ ಸ್ಟಾರ್ ಆಗುವ ಲಕ್ಷಣಗಳನ್ನಲ್ಲದಿದ್ದರೂ ಒಬ್ಬ ನಟನಾಗುವ ಎಲ್ಲ ಲಕ್ಷಣ ತೋರಿಸಿದ್ದಾರೆ. ಆದರೆ ಕಲೆಕ್ಷನ್ ಕೇಸ್‌ನಲ್ಲಿ ಸಿಲ್ಕ್ ಕೊಂಚ ಮುಂದಿದೆ. ವೀಣಾ ಮಲ್ಲಿಕ್‌ಳ ದೇಹಸಿರಿಗೆ ಜೋತುಬಿದ್ದ ಪ್ರೇಕ್ಷಕರು ಮೊದಲ ದಿನ ಸಿಲ್ಕ್‌ಗೆ ಮುಗಿಬಿದ್ದಿದ್ದಾರೆ. ಆದರೆ ಈಗಾಗಲೇ ಸದಭಿರುಚಿಯ ಚಿತ್ರಗಳು ಕನ್ನಡದಲ್ಲಿ ಓಡಲ್ಲ ಎಂಬ ಅಪವಾದಗಳು ಬೇಕಾದಷ್ಟಿವೆ. ಈ ಬಾರಿಯೂ ಸಿಲ್ಕ್ ಹಾವಳಿಯಲ್ಲಿ ಕೇಸ್ ಡಿಸ್‌ಮಿಸ್ ಆಗದಿದ್ದರೆ ಅದು ಕನ್ನಡ ಚಿತ್ರರಂಗಕ್ಕೆ ಒಳ್ಳೆಯದು. ಹಾಗಾಗಿ, ನಿಜವಾದ ಪ್ರೇಕ್ಷಕರ ಆಶೀರ್ವಾದಕೇಸ್ ನಂಬರ್‌ನಂಥ ಚಿತ್ರಕ್ಕೆ ಸಿಕ್ಕರೆ ಅದು ಒಳ್ಳೆಯ ಬೆಳವಣಿಗೆ.
ಡಬ್ಕುಡಬಲ್ ತುದಾಂಡಲ್...
-ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ವಿಧಾನಗಳು
ಚೆನ್ನೈ ಸೂಪರ್ ಕಿಂಗ್ಸ್ ಟೀಮ್ ನಂದೇ - ಚಂದ್ರಶೇಖರ ಕಂಬಾರ (ಸಿಎಸ್‌ಕೆ )
ಓಂ ಸಿನಿಮಾದ ನಿರ್ದೇಶಕ ನಾನೇ - ಓಂಪ್ರಕಾಶ್
-ಡೌಟುಗಳು
ದೇವರನ್ನ ನಂಬದವರನ್ನ ನಾಸ್ತಿಕ ಅಂತಾರೆ. ಆದರೆ ಮನುಷ್ಯರನ್ನು ನಂಬದವರನ್ನು ಏನೆನ್ನಬೇಕು?
ಒಬ್ಬ ಮನುಷ್ಯ ನಿದ್ದೆಯಲ್ಲೇ ಸತ್ತುಹೋದ್ರೆ ಅದು ಅವನಿಗೆ, ಬೆಳಿಗ್ಗೆವರೆಗೂ ಗೊತ್ತಾಗಲ್ವಾ?
-ಸಿಕ್ಕಾಪಟ್ಟೆ ಟೈಮ್‌ಸೆನ್ಸ್ ಇರೋ ನಾಯಿ
ವಾಚ್‌ಡಾಗ್
-ಹಳೆಯ ಟೂತ್‌ಬ್ರಷ್ ಅನ್ನು ಕಿಟಕಿ, ಉಗುರು, ಕ್ಲೀನ್ ಮಾಡಲು, ಹೇರ್ ಡೈ ಮಾಡಲು ಬಳಸಿದರೆ ಅದು
ಬ್ರಷ್‌ಟಾಚಾರ
-ಆನ್‌ಲೈನ್ ಶಾಪಿಂಗ್ ವಿಚಿತ್ರ ಕಣ್ರೀ
ಸಿಗರೇಟ್ 'ಲೈಟರ್'ಗೋಸ್ಕರ ಸರ್ಚ್ ಮಾಡಿದ್ರೆ 178 'ಮ್ಯಾಚಸ್' ಅಂತ ಬರುತ್ತೆ
-ಹೆಂಗಸರು ಶಾಪಿಂಗ್ ಮಾಡುವಾಗ ಮತ್ತು ಗಂಡಸರು ಟಿವಿ ನೋಡುವಾಗ, ಏನಿದೆ ಎಂಬುದರ ಬದಲು, ಬೇರೆ ಏನೇನಿದೆ ಅಂತನೇ ನೋಡ್ತಿರ್ತಾರಂತೆ.
ಹುಡುಗ: ನಮ್ಮಪ್ಪ ನಂಗೆ ಇಷ್ಟೊಂದ್ ಆಸ್ತಿ ಬಿಟ್ಟೋಗ್ಲಿಲ್ಲ ಅಂದ್ರೆ ನನ್ನ ನೀನು ಪ್ರೀತಿಸ್ತಿದ್ಯಾ?
ಹುಡುಗಿ: ನನ್ ಬಗ್ಗೆ ಹಾಗೆಲ್ಲಾ ಅಂದ್ಕೊಬೇಡ ಪ್ಲೀಸ್. ಆಸ್ತಿನಾ ಯಾರ್ ಬಿಟ್ಟೋದ್ರು ಅನ್ನೋದು ನಂಗೆ ಮುಖ್ಯ ಅಲ್ಲ.
-ಹರಿ
harikannadaprabha@gmail.com