ಅಂಕಣಗಳು

ದಾವೂದ್‌ನನ್ನು ರಕ್ಷಿಸುತ್ತಿದೆ ಕಾಣದ ಕೈ!

Published On :

ದಾವೂದ್ ಇಬ್ರಾಹಿಂ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಎಂದು ಕೆಲವು ದಿನಗಳ ಹಿಂದೆ ದೆಹಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆದರೆ, ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್(ರಾ) 1994ರಲ್ಲಿ ದಾವೂದ್ ಇಬ್ರಾಹಿಂನ ಪ್ರಾಣಕ್ಕೇ ಕುತ್ತು ತರುವಷ್ಟರ ಮಟ್ಟಿಗೆ ಮಾಡಿದ ಪ್ರಯತ್ನಕ್ಕೆ ಹೋಲಿಸಿದರೆ ದೆಹಲಿ ಪೊಲೀಸರ ಈ ಪ್ರಯತ್ನ ಅಷ್ಟೇನೂ ಮಹತ್ತರವೆನಿಸುವುದಿಲ್ಲ. ದಾವೂದ್‌ನನ್ನು ಮುಗಿಸಿ ಹಾಕುವುದಕ್ಕಾಗಿ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನೂ ರಾ ಕಲೆಹಾಕಲಾಗಿತ್ತು. ಇನ್ನೇನು ಆತನ ಅಂತ್ಯ ಸಮೀಪವಾಯಿತು ಎನ್ನುವಷ್ಟರಲ್ಲೇ ಭಾರತದ ಸರ್ಕಾರ ಈ ಪ್ರಯತ್ನವನ್ನು ನಿಲ್ಲಿಸಲು ಆಜ್ಞೆ ನೀಡಿತು!
ಕರಾಚಿಯ ಸಮುದ್ರ ತೀರಕ್ಕೆ ಸನಿಹದಲ್ಲಿರುವ ಕ್ಲಿಫ್‌ಟನ್ ಏರಿಯಾದ ಐಷಾರಾಮಿ ಬಂಗಲೆಯೊಂದರಲ್ಲಿ ದಾವೂದ್ ಇದ್ದಾನೆ ಎನ್ನುವ ಖಚಿತ ಮಾಹಿತಿ 'ರಾ'ಗೆ ದೊರೆತಿತ್ತು. ಹಾಗಾಗೇ ಮೊದಲ ಹಂತವಾಗಿ ತರಬೇತಿ ಪಡೆದ ಹಂತಕರ ತಂಡವೊಂದನ್ನು ಅಲ್ಲಿಗೆ ಕಳುಹಿಸುವ ಯೋಜನೆ ಸಿದ್ಧವಾಯಿತು. ಈ ನಿಟ್ಟಿನಲ್ಲಿ ನಾಲ್ವರಿಗೆ ಶಸ್ತ್ರಾಸ್ತ್ರಗಳ ಬಳಕೆ, ಕ್ಲಿಫ್‌ಟನ್ ಪ್ರದೇಶದ ಭೂಗೋಳ ಮತ್ತು ಅಲ್ಲಿಂದ ತಪ್ಪಿಸಿಕೊಂಡು ಹೊರಬರುವುದು ಹೇಗೆಂಬ ಬಗ್ಗೆಯೂ ಮುತುವರ್ಜಿಯಿಂದ ತರಬೇತಿ ನೀಡಲಾಯಿತು. 
ಈ ಯೋಜನೆಗೆ ಸರ್ಕಾರದಿಂದ ಪ್ರಾಥಮಿಕ ಒಪ್ಪಿಗೆ ದೊರೆಯುತ್ತಿದ್ದಂತೆ ಆ ನಾಲ್ವರನ್ನು ಕಾಟ್ಮಂಡೂಗೆ ಕರೆದೊಯ್ದು ನಕಲಿ ನೆಪಾಲಿ ಪಾಸ್‌ಪೋರ್ಟ್ ಕೊಟ್ಟು ಅಲ್ಲಿಂದ ಕರಾಚಿಗೆ ಕಳುಹಿಸಲಾಯಿತು. ನಂತರ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆಗಾರರು ಬಳಸುತ್ತಿದ್ದ ಮಾರ್ಗದ ಮೂಲಕ ಕರಾಚಿಯಲ್ಲಿನ ಮನೆಯೊಂದಕ್ಕೆ ಗೌಪ್ಯವಾಗಿ ಕಳುಹಿಸಲಾಯಿತು. ದಾವೂದ್‌ನನ್ನು ಕೊಲ್ಲಲು ಹೋಗಿದ್ದ ಆ ನಾಲ್ವರೂ ಛೋಟಾ ರಾಜನ್ ಗ್ಯಾಂಗ್‌ನ ಕಟ್ಟಾ ಬೆಂಬಲಿಗರಾಗಿದ್ದರು. ದಾವೂದ್‌ನನ್ನು ಕೆಡವಿಹಾಕಲು ಅವರು ತಮ್ಮ ಕೊನೆಯ ಕ್ಷಣದ ಸಿದ್ಧತೆಯನ್ನೂ ಬಹುತೇಕ ಮುಗಿಸಿದ್ದರು. ಆದರೆ ಆ ಕ್ಷಣದಲ್ಲೇ ಪ್ರಧಾನಿ ಪಿ.ವಿ. ನರಸಿಂಹರಾವ್ ನೇತೃತ್ವದ ಸರ್ಕಾರ ಈ ಯೋಜನೆಯನ್ನು ನಿಲ್ಲಿಸುವಂತೆ ಆಜ್ಞೆ ನೀಡಿತು.
"ದಾವೂದ್ ಆ ಮನೆಯಲ್ಲೇ ಇದ್ದಾನೆ ಎನ್ನುವುದು ನಮಗೆ ಖಚಿತವಾಗಿತ್ತು. ಆ ಬಂಗಲೆಯ ಸ್ಪಷ್ಟ ನಕ್ಷೆ, ಅದರಲ್ಲಿನ ನ್ಯೂನ್ಯತೆಗಳೆಲ್ಲ ನಮಗೆ ಗೊತ್ತಿದ್ದವು. ಕೊನೆಯ ಕ್ಷಣದಲ್ಲಿ ಕೇಂದ್ರ ಸರ್ಕಾರ ಈ ಪ್ರಯತ್ನವನ್ನು ನಿಲ್ಲಿಸಲು ಹೇಳಿದಾಕ್ಷಣ ನಮಗೆ ನಿಜಕ್ಕೂ ಆಘಾತವಾಯಿತು. ಈ ಪ್ರಯತ್ನ ವಿಫಲವಾಗುವ ಸಂಭವವೇ ಇರಲಿಲ್ಲ. ನಿಸ್ಸಂಶಯವಾಗಿಯೂ ಅಂದು ದಾವೂದ್ ಯಮಲೋಕ ಸೇರುತ್ತಿದ್ದ. ಕೇಂದ್ರ ಸರ್ಕಾರ ಆ ರೀತಿ ಏಕೆ ಮಾಡಿತು ಎನ್ನುವುದು ಇದುವರೆಗೂ ನಮಗೆ ಅರ್ಥವಾಗಿಲ್ಲ' ಎಂದು ಹೇಳುತ್ತಾರೆ ಗುಪ್ತಚರ ದಳದ ಹಿರಿಯ ಅಧಿಕಾರಿಯೊಬ್ಬರು.
ಈ ನಾಲ್ವರು ಹಂತಕರಲ್ಲೊಬ್ಬ ಜನವರಿ 2003ರಂದು ಶಾರ್ಜಾದಲ್ಲಿ ದಾವೂದ್‌ನ ಆಪ್ತನಾದ ಶರದ್ ಶೆಟ್ಟಿಯನ್ನು ಕೊಲ್ಲಲು ಯಶಸ್ವಿಯಾದ. ಇಷ್ಟೇ ಅಲ್ಲದೆ ದಾವೂದ್ ಪ್ರಯಾಣಿಸುತ್ತಿದ್ದ ವಿಮಾನವನ್ನು ಹೇಗಾದರೂ ಮಾಡಿಮುಂಬೈನಲ್ಲಿ ಇಳಿಸುವ ಯೋಜನೆಯನ್ನೂ 'ರಾ' ರೂಪಿಸಿತ್ತು.
'ರಾ'ದ ಗೂಢಚರರು ದಾವೂದ್‌ನ ಪ್ರತಿಯೊಂದು ಚಲನವಲನಗಳ ಮೇಲೆಯೂ ನಜರು ಇಟ್ಟಿದ್ದರು. ಆತ ಪಾಕಿಸ್ತಾನದ ಐಎಸ್‌ಐನ ಕೆಲವು ಅಧಿಕಾರಿಗಳೊಂದಿಗೆ ಸೇರಿ ಜೆದ್ದಾಹ್ ಮತ್ತು ಸಿಂಗಾಪೂರ್‌ಗೆ ಪ್ರತ್ಯೇಕ ವಿಮಾನವೊಂದರಲ್ಲಿ ಆಗಾಗ ಪ್ರಯಾಣಿಸುತ್ತಿದ್ದ. 'ರಾ'ದ ಅಧಿಕಾರಿಯೊಬ್ಬರು ಈ ಘಟನೆಯನ್ನು ನೆನಪಿಸಿಕೊಳ್ಳುತ್ತಾ, "ದಾವೂದ್‌ನ ವಿಮಾನ ಪಾಕಿಸ್ತಾನದಿಂದ ಟೇಕ್‌ಆಫ್ ಆಗುತ್ತಿದ್ದಂತೆಯೇ ಭಾರತೀಯ ವಾಯು ಸೇನೆಯ ವಿಮಾನಗಳು ಅದನ್ನು ಸುತ್ತುವರಿದು ಬಲವಂತವಾಗಿ ಅದನ್ನು ಮುಂಬೈನಲ್ಲಿ ಲ್ಯಾಂಡ್ ಆಗುವಂತೆ ಮಾಡುವ ಯೋಜನೆಯಿತ್ತು. ಇದು ಮೊದಲನೆಯದ್ದಕ್ಕಿಂತಲೂ ಕಠಿಣವಾಗಿತ್ತು. ಆದರೂ ಈ ಪ್ರಯತ್ನ ಕೈಗೂಡುತ್ತದೆ ಎನ್ನುವ ನಂಬಿಕೆ ನಮಗಿತ್ತು. ಆದರೆ ಮತ್ತೊಮ್ಮೆ ಸರ್ಕಾರ ಕೊನೆಯ ಕ್ಷಣದಲ್ಲಿ ಅಡ್ಡಗಾಲು ಹಾಕಿತು' ಎನ್ನುತ್ತಾರೆ.
ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಕ್ರಿಮಿನಲ್ಲೊಬ್ಬ ಅಲ್ಲಿಂದಲೇ ಭಾರತದಲ್ಲಿ ನಿರ್ಭಯವಾಗಿ ತನ್ನ ಕ್ರಿಮಿನಲ್ ಚಟುವಟಿಕೆಗಳನ್ನು  ನಿರ್ವಹಿಸುತ್ತಿದ್ದಾನೆ. ಇದನ್ನೆಲ್ಲ ನೋಡಿಯೂ ಭಾರತ ಸರ್ಕಾರ ಪುಕ್ಕಲನಂತೆ ಕುಳಿತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಗೊಣಗುತ್ತಿದ್ದಾರೆ ಮುಂಬೈ ಪೊಲೀಸರು. ದಾವೂದ್‌ಗೆ ಸೇರಿದ ಹಲವಾರು ಆಸ್ತಿಗಳು ಮುಂಬೈನಲ್ಲಿವೆ, ಅವನ್ನೆಲ್ಲ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆಯಾದರೂ  ನಮಗೆ ಹಸ್ತಾಂತರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ ಎನ್ನುತ್ತಾರವರು.
ಎರಡು ಬಾರಿ ಮುಂಬೈನಲ್ಲಿನ ದಾವೂದ್‌ನ ಸ್ವತ್ತುಗಳನ್ನು ಹರಾಜು ಹಾಕಲಾಗಿತ್ತು. ಆದರೆ 'ಡಿ' ಗ್ಯಾಂಗ್‌ನ ಬೆದರಿಕೆಯಿಂದಾಗಿ ಹೆಚ್ಚಾಗಿ ಯಾರೂ ಅವುಗಳ ಖರೀದಿಗೆ ಮುಂದಾಗಲಿಲ್ಲ. ಟಾರ್ಡೆಯೋದಲ್ಲಿನ ಒಂದು ಅಂಗಡಿಯನ್ನು ಮಾತ್ರ ಕೆಲವು ವರ್ಷಗಳ ಹಿಂದೆ ದೆಹಲಿ ಮೂಲದ ವಕೀಲರೊಬ್ಬರು ಖರೀದಿಸಿದ್ದಾರಾದರೂ, ದಾವೂದ್‌ನ ತಂಡದಿಂದ ಅವರಿಗೆ ಜೀವಬೆದರಿಕೆ ಇದೆ. ಹಾಗಾಗಿ ಇಲ್ಲಿಯವರೆಗೂ ಅವರು ಆ ಅಂಗಡಿಯ ಬಳಿ ತೆರಳಿಲ್ಲ. ಈ ಬಗ್ಗೆ ಗುಪ್ತಚರದಳದ ಅಧಿಕಾರಿಯೊಬ್ಬರು ಮಾತನಾಡುತ್ತಾ, 'ಸರ್ಕಾರವೇ ಈ ಪರಿ ದಾವೂದ್ ಹೆಸರು ಕೇಳಿ ಹೆದರಿದರೆ, ನಮ್ಮಿಂದಾದರೂ ಏನು ಮಾಡಲಿಕ್ಕಾದೀತು?' ಎಂದು ಪ್ರಶ್ನಿಸುತ್ತಾರೆ.
ಪುಣೆ ಮೂಲದ ಗುಟ್ಕಾ ವ್ಯಾಪಾರಿಯೊಬ್ಬರಿಗೂ ಮತ್ತು ಕರಾಚಿಯಲ್ಲಿ ನೆಲೆಸಿರುವ ದಾವೂದ್ ಮತ್ತು ಆತನ ಸಹೋದರ ಅನೀಸ್‌ನಿಗೂ ನಂಟಿದೆ ಎನ್ನುವುದರ ಬಗ್ಗೆ ಮುಂಬೈ ಪೊಲೀಸರು ಬಹಳಷ್ಟು ಮಾಹಿತಿ ಕಲೆಹಾಕಿದ್ದಾರೆ. ಆದರೂ ಕೂಡ ಮುಂಬೈ ಪೊಲೀಸರಿಗೆ ಈ ಉದ್ಯಮಿಯನ್ನು ಅರೆಸ್ಟ್ ಮಾಡುವುದಕ್ಕೆ ಅನುಮತಿ ಸಿಗುತ್ತಿಲ್ಲ. ಈ ಉದ್ಯಮಿಹೇಗೆ ತನ್ನ ಪಾಸ್‌ಪೋರ್ಟ್‌ನ ಮೇಲೆ ದುಬೈಗೆ ಮತ್ತು ಅಲ್ಲಿಂದ ನಕಲಿ ಪಾಸ್‌ಪೋರ್ಟ್‌ನಲ್ಲಿ ಕರಾಚಿಗೆ ಹೋಗಿ ದಾವೂದ್‌ನೊಂದಿಗಿನ ತನ್ನ ಸಂಬಂಧವನ್ನು ಬಳಸಿಕೊಂಡು ಎದುರಾಳಿ ವ್ಯಾಪಾರಿಗಳನ್ನು ಬೆದರಿಸುತ್ತಾನೆ ಎನ್ನುವುದೂ ಪೊಲೀಸರಿಗೆ ಗೊತ್ತು.
ಈಗಲೂ ಕೂಡ, ದಾವೂದ್‌ನ ಸಂಬಂಧಿಕನೊಬ್ಬ ನಿರ್ಭಯವಾಗಿ ಮುಂಬೈನ ಭೆಂಡಿ ಬಾಜಾರ್‌ನಲ್ಲಿ ಕುಳಿತು ಬಿಲ್ಡರ್‌ಗಳು ಮತ್ತು ಉದ್ಯಮಿಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸುತ್ತಾನೆ. ಪೊಲೀಸರು ಅಸಹಾಯಕರಾಗಿ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಕುಳಿತಿದ್ದಾರೆ.


- ಎಸ್. ಬಾಲಕೃಷ್ಣನ್
ವಿಶ್ಲೇಷಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.