ಅಲ್ಲೀಗ ಸರಿದಾಡುತಿದೆ ಬೆನ್ನಲ್ಲಿ ಭಯದ ಹಾವು!

ಸರಿಯಾಗಿ ಇಪತ್ತು ತಾಸುಗಳಾಗಿತ್ತು, ಹಾಗೆ ಗುಡ್ಡದ ತುದಿ ತಲೆಕಡಿದು...
Updated on: 

ಪ್ರವಾಹೋತ್ತರಕಾಂಡ ಭಾಗ -7

ಸರಿಯಾಗಿ ಇಪತ್ತು ತಾಸುಗಳಾಗಿತ್ತು, ಹಾಗೆ ಗುಡ್ಡದ ತುದಿ ತಲೆಕಡಿದು ಉರುಳಿದಂತೆ ಉರುಳಲು ಆರಂಭಿಸಿ. ಬೃಹತ್ ಬಂಡೆಗಳು ಒಂದಕ್ಕೊಂದು ಖೋ ಕೊಟ್ಟುಕೊಂಡಂತೆ,ಅಟ್ಟಾಡಿಸಿಕೊಂಡು ಬರುತ್ತಿರುವಂತೆ ರಸ್ತೆಗೆ ಉರುಳಿ ಬರುತ್ತಿದ್ದವು. ಹಾಗೆ ಬರುವಾಗ ಒಂದಕ್ಕೊಂದು ಢಿಕ್ಕಿ ಹೊಡೆದುಕೊಳ್ಳುತ್ತಾ ಬೆಂಕಿಯ ಕಿಡಿಗಳನ್ನು ಉಗುಳುತ್ತಿದ್ದವು. ಅವತ್ತು ಜುಲೈ 23. ರಾತ್ರಿಯಿಡೀ ಬಿಟ್ಟೂಬಿಡದಂತೆ ಹಿಮಗಿರಿಯ ಉದ್ದಕ್ಕೂ ಮಳೆ ಸುರಿದಿತ್ತು. ಪರಿಣಾಮ ಬೆಳಗ್ಗಿನ 5-40ರ ಸುಮಾರಿಗೆ ಗುಪ್ತಕಾಶಿಯಿಂದ 2 ಕಿ.ಮೀ. ದೂರದಲ್ಲಿ ರಸ್ತೆಗೆ ಕುಸಿಯಲಾರಂಭಿಸಿದ ಭೂಮಿ, ನಿರಂತರ ಉರುಳುರುಳಿ ಬೀಳುತ್ತಲೇ ಇತ್ತು. ಕೇದಾರದ ತಪ್ಪಲಿನ ಆ ಸ್ಥಳದಿಂದ ಹೊರ ಜಗತ್ತಿಗೆ ಸಂಪರ್ಕಿಸಲು ಇರುವ ಏಕೈಕ ಕಚ್ಚಾ ರಸ್ತೆಯದು. ಅಲ್ಲಿಂದ ಗುಡ್ಡದ ಗುಂಟ ಹೊರಟರೆ ಸರಿಸುಮಾರು 85 ಕಿ.ಮೀ. ಮಯಾಲಿ. ಅವೆರಡೂ ಊರಿನ ನಡುವೆ ದುರಂತದ ದಿನದಿಂದ ಈವರಗೆ ಪ್ರತಿದಿನವೂ ಭೂ ಕುಸಿತ ನಿಲ್ಲದೇ ಮುಂದುವರಿದಿದೆ. ಸೇನಾ ಸಿಬ್ಬಂದಿ, ಬಾರ್ಡರ್ ಫೋರ್ಸ್‌ನ ಮಂದಿ ಇವತ್ತು ಪುನರ್ ನಿರ್ಮಿಸಿದ ರಸ್ತೆ, ತೆರವುಗೊಳಿಸಿದ ಸ್ಥಳ ಮತ್ತೊಂದು ದಿನದ ಮಳೆಗೆ ನಾಮಾವಶೇಷ. ಹೀಗಾಗಿ ಸಂಪರ್ಕವೇ ಇಲ್ಲದ ದ್ವೀಪವಲ್ಲದ ದ್ವೀಪದ ಸ್ಥಿತಿ ಅಲ್ಲಿನವರದ್ದು.
ಬೆಟ್ಟದ ಮೇಲಿನ ಮಳೆಯೆಂದರೆ ಅಲ್ಲಿನ ಜನ ಈಗಲೂ ದುಸ್ವಪ್ನದಂತೆ ಬೆಚ್ಚಿ ಬೀಳುತ್ತಾರೆ. ಎಲ್ಲಿ ನದಿ ಉಕ್ಕುತ್ತದೋ, ಎಲ್ಲಿಗೆ ನೀರು ನುಗ್ಗುತ್ತದೋ, ಯಾವ ಊರು ಕೊಚ್ಚಿ ಹೋಗುತ್ತದೋ, ಎಲ್ಲಿ ಮುಗಿಲು ಹರಿದು ಬೀಳುತ್ತದೋ ಇಂಥವೇ ಆತಂಕ ಕೇದಾರನಾಥದ ಸುತ್ತಲಿನ ಮಂದಿಯಲ್ಲಿ ಹೊಕ್ಕು ಕುಳಿತುಬಿಟ್ಟಿದೆ. ಉತ್ತರಾಖಂಡದ ಬೆಟ್ಟಗಳ ಮೇಲೆ ಪ್ರಕೃತಿಯು ತನ್ನ ಕೋಪವನ್ನು ರಾಚಿದ ನಂತರ ಒಂದೂವರೆ ತಿಂಗಳುಗಳೇ ಕಳೆದಿವೆ. ಆದಾಗ್ಯೂ, ದುರಂತದ ಕಹಿಯನ್ನು ಮರೆಯಲು ಅಲ್ಲಿನ ಜನರಿಂದ ಆಗುತ್ತಿಲ್ಲ. ನದಿಯ ಪಕ್ಕದ ಯಾವೊಂದು ಹಳ್ಳಿಗರೂ ರಾತ್ರಿ ಕಣ್ಣತುಂಬ ನಿದ್ದೆ ಮಾಡುತ್ತಿಲ್ಲ. ನೂರು ಮೀಟರ್‌ನಷ್ಟು ಕಣಿವೆಯನ್ನೇ ಮುಚ್ಚಿ, ಅದನ್ನೂ ಮೀರಿ ಹರಿದ ಪ್ರವಾಹಕ್ಕೆ ಇನ್ನು ಏನೂ ಅಸಾಧ್ಯವಲ್ಲ ಎಂಬುದು ಮನವರಿಕೆಯಾಗಿದೆ. ಗಂಗೆಯನ್ನು ಅವರೆಂದಿಗೂ ಒಂದು ನದಿಯಾಗಿ, ಕೇವಲ ಜಲರಾಶಿಯಾಗಿ ನೋಡಿದವರಲ್ಲ. ಅವರ ಪಾಲಿಗೆ ಇವತ್ತಿಗೂ ಗಂಗೆ ಎನ್ನುವವಳು ಕಣ್ಣೆದುರೇ ಇರುವ ಮಾತೆ. ಆಕೆ ಗಂಗಾಮಾ. ಅಂಥ ಅಮ್ಮನಿಗೆ ಕೋಪ ಬಂದಿದೆ ಎಂದರೆ ಇನ್ನು ಯಾರಿಗೂ ಉಳಿಗಾಲವಿಲ್ಲ ಎಂಬುದೇ ಅಲ್ಲಿನ ನಂಬಿಕೆ. ಅಷ್ಟು ಜನ ಹೋಗಿದ್ದಾರೆ. ಇನ್ನಷ್ಟು ಜನ ಕೊಚ್ಚಿ ಹೋಗುವುದು ಇದ್ದದ್ದೇ. ತಮ್ಮ ಸರದಿ ಯಾವತ್ತಿಗೆ ಬಂದೀತೋ ಎನ್ನುವ ಕ್ಷಣಗಣನೆಯಲ್ಲೇ ಅಲ್ಲಿ ಅವರು ದಿನ ಕಳೆಯುತ್ತಿರುವುದು ಸ್ಪಷ್ಟವಾಗಿತ್ತು. ಒಂದು ಸಣ್ಣ ಮಳೆಗೂ ಬೆದರುತ್ತಾರೆ. ಹಾವಿನಂತೆ ತಿರುಗಿ ತಿರುಗಿ ಸಾಗುವ ಕಣಿವೆಯ ಕಿರಿದಾದ ಹಾದಿಯಲ್ಲಿ ಯಾವ ಹಿಂಜರಿಕೆಯಿಲ್ಲದೇ ವಾಹನಗಳನ್ನು ಓಡಿಸುತ್ತಿದ್ದ ಮಂದಿಗೀಗ ಪುಟ್ಟ ಭೂಕುಸಿತವೂ ಭೂಕಂಪನದ ಮುನ್ಸೂಚನೆಯಂತೆ ತೋರುತ್ತಿದೆ. ನದಿಯಲ್ಲಿ ಎಂದಿಗಿಂತ ತುಸುವೇ ನೀರಿನ ಮಟ್ಟ ಹೆಚ್ಚಾದರೂ ಒಳಗೊಳಗೇ ನಡುಗುತ್ತಾರೆ. ರುದ್ರಪ್ರಯಾಗದಿಂದ ಮುಂದೆ ಕೇದಾರ ಕಣಿವೆಯಲ್ಲಿ 500ಕ್ಕೂ ಹೆಚ್ಚು ಪುಟ್ಟಪುಟ್ಟ ಹಳ್ಳಿಗಳಿವೆ. ಮುಗಿಲೆತ್ತರಕ್ಕೆ ಚಾಚಿನಿಂತಿರುವ ಬೆಟ್ಟಗಳಗುಂಟ ಎತ್ತರೆತ್ತರಕ್ಕೆ ಮನೆಗಳನ್ನು, ಮನೆಯೆದುರು ಹೊಲಗಳನ್ನು ನಿರ್ಮಿಸಿಕೊಂಡಿದ್ದವರು ಅವರು. ಬೆಟ್ಟವನ್ನೇರಿ ಕಣಿವೆಯನ್ನೊಮ್ಮೆ ದಿಟ್ಟಿಸಿದರೆ ಅದೊಂದು ಸುಂದರ ದೃಶ್ಯ ಕಾವ್ಯ. ಪೈಪೋಟಿಗೆ ಬಿದ್ದು ನಿಂತ ಪರ್ವತಗಳ ಸಾಲು. ಅದನ್ನೂ ಮೆಟ್ಟಿನಿಂತ ಅಹಮಿಕೆಯೊಂದಿಗೆ ನೆಟ್ಟಗೆ ನಿಗುರಿ ಬೆಳೆದಿರುವ ಪೈನ್ ಮರಗಳು. ಅವುಗಳ ನಡುವೆ ಅಡಗಿ ಕುಳಿತ ನೂರಾರು ಅತ್ಯಮೂಲ್ಯ ಸಸ್ಯ ಸಂಕುಲ. ಅದರೊಳಗೇ ಜಗತ್ತನ್ನು ಕಂಡುಕೊಂಡಿರುವ ಊಹಿಸಲಾಗದಷ್ಟು ಪ್ರಮಾಣದ ಜೀವವೈವಿಧ್ಯ. ಬೆಟ್ಟಗಳ ನೆತ್ತಿಯನ್ನು ಸೀಳಿ, ಕೆಳಗಿನ ವರೆಗೂ ಬೆಳ್ಳಿಗೆರೆಯನ್ನು ಮೂಡಿಸಿ ಧುಮುಕುವ ನೂರಾರು ಝರಿ, ಜಲಪಾತಗಳು ಅವುಗಳ ನಡುನಡುವೆಯೇ ಸ್ವರ್ಗಕ್ಕೆ ನಿರ್ಮಿಸಿದ ಮೆಟ್ಟಿಲುಗಳಂತೆ ಕಂಗೊಳಿಸುವ ಅತ್ಯಂತ ವೈಜ್ಞಾನಿಕವಾಗಿ ಲ್ಯಾಂಡ್ ಶೇಪಿಂಗ್‌ಗೆ ಒಳಪಡಿಸಿದ ಭತ್ತದ ಹೊಲಗಳು. ಅವುಗಳ ಬದುಗಳಲ್ಲಿ ಬೆಳೆಯ ಕಾವಲಿಗೆ ಉದ್ದಕ್ಕೂ ನಿಂತಂತೆ ಕಾಣುವ ಸೋಯಾಬೀನ್, ಅಲಸಂದೆ, ಜೋಳದ ಗಿಡಗಳು... ಅಂಥ ಹೊಲಗಳ ಸರಣಿಯ ತುದಿಗೆ ತಲೆ ಎತ್ತಿರುವ ಮನೆಗಳು... ಒಟ್ಟಾರೆ ಅದೊಂದು ನೂರಕ್ಕೆ ನೂರು ಭೂನಾಕ!
ಅಂಥ ಸುಂದರ ಕನಸಿನ ತಾಣದಲ್ಲೀಗ ನಿತ್ಯ ನರಕದ ಚಿಂತೆ. ಇಲ್ಲಿನ ಸ್ಥಿತಿಯು ನಿಜವಾಗಿಯೂ 'ದುಃಖ'ವನ್ನೂ ಮೀರಿಸಿ ಭಯಾವೃತವಾಗಿದೆ. ವಿಚಿತ್ರ ಫೋಬಿಯಾ ಅವರನ್ನು ಕಾಡುತ್ತಿದೆ. ನಿವಾಸಿಗಳಂತಲೇ ಅಲ್ಲ, ಅಲ್ಲಿಗೆ ಹೋದ ಪ್ರತಿಯೊಬ್ಬರನ್ನೂ ಇದು ಸಾಂಕ್ರಮಿಕದಂತೆ ಕಾಡುತ್ತಿದೆ. ನದಿಯ ಭೋರ್ಗರೆತ ತುಸು ಹೆಚ್ಚಿದರೂ ಸಾಕು, ಎದೆ ಬಡಿದುಕೊಳ್ಳಲಾರಂಭಿಸುತ್ತದೆ. ಊರಿನ ಒಬ್ಬರಲ್ಲಾ ಒಬ್ಬರು ನದಿಯ ದಂಡೆಗೆ ಹೋಗಿ ಹತ್ತು ನಿಮಿಷ ನಿಂತು ಅದರ ವರ್ತನೆಯಲ್ಲಿ ಏನಾದರೂ ಬದಲಾವಣೆ ಇದೆಯೇ ಎಂದು ಸೂಕ್ಷ್ಮವಾಗಿ ಗಮನಿಸಿಕೊಂಡು ಬರುತ್ತಾರೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಅಗಸ್ತ್ಯಮುನಿ, ತಿಲ್ವಾರ, ಕುಂಡ್, ಸೋನ್ ಪ್ರಯಾಗ, ರಾಮ್‌ಪುರ, ಸೀತಾಪುರ ಮತ್ತಿತರ ಕಡೆ ನಿನ್ನೆ ಇದ್ದ ಹಳ್ಳಿಗಳು ಬೆಳಗಾಗುವುದರೊಳಗೆ 'ಅಲ್ಲಿ ಹೀಗೊಂದು ಹಳ್ಳಿ ಇತ್ತು' ಎಂಬಷ್ಟಕ್ಕೇ ಸೀಮಿತವಾಗಿಬಿಟ್ಟಿವೆ. ಆ ಮಟ್ಟಿಗೆ ಸರ್ವನಾಶ ಕಂಡ ಹಳ್ಳಿಗಳ ಸಂಖ್ಯೆ ಇಪ್ಪತ್ತಕ್ಕೂ ಹೆಚ್ಚು. ಇಂಥ ಹಳ್ಳಿಗಳನ್ನು ಸಂಪರ್ಕಿಸುವ 510ಕ್ಕೂ ಹೆಚ್ಚು ರಸ್ತೆಗಳು ನಾಮಾವಶೇಷಗೊಂಡಿವೆ. 50 ಕಡೆ ಭಾರಿ ಭೂಕುಸಿತಗಳುಂಟಾಗಿವೆ. ಹಳ್ಳಿಗಳಲ್ಲಿನ 13,000ಕ್ಕೂ ಹೆಚ್ಚು ಜನರು ಈಗಲೂ ಕಾಣೆಯಾಗಿದ್ದಾರೆ ಮತ್ತು 2000ದಷ್ಟು ಹಳ್ಳಿಗಳು ಛಿದ್ರವಾಗಿವೆ. ಹೀಗಾಗಿ ಹಳ್ಳಿಗರ ಮುಂದಿರುವ ದೊಡ್ಡ ಸವಾಲುಗಳಲ್ಲಿ ಮೊದಲನೆಯದು ಪುನರ್ವಸತೀಕರಣ ಮತ್ತು ಬದುಕನ್ನು ಮತ್ತೊಮ್ಮೆ ಕಟ್ಟಿಕೊಳ್ಳುವ ಉಪಕ್ರಮ. ಸಂಪೂರ್ಣ ಆಸ್ತಿ, ಮನೆ ಕಳೆದುಕೊಂಡವರು ಅಪಾರ ಸಂಖ್ಯೆಯಲ್ಲಿದ್ದಾರೆ. ಅವರ ನೋವನ್ನು ಇನ್ನಷ್ಟು ಉಲ್ಬಣಿಸುತ್ತಿರುವುದು ಮತ್ತೆ ಮತ್ತೆ ಹದಗೆಡುತ್ತಿರುವ ಹವಾಮಾನ ಪರಿಸ್ಥಿತಿ. ಇದರಿಂದ ನಿತ್ಯ ಸಂಗತಿಯಂತಾಗಿರುವ ಭೂಕುಸಿತಗಳು ಗಾಯದ ಮೇಲೆ ಹುಳಿಹಚ್ಚುತ್ತಿವೆ. ಧೈರ್ಯವೇ ಉಡುಗಿ ಹೋಗಿರುವುದಕ್ಕೆ ಪ್ರಮುಖ ಕಾರಣ ರಸ್ತೆಗಳು ಸಂಪೂರ್ಣ ನಾಶವಾಗಿ ಸಂಪರ್ಕ ಕಡಿದಿರುವುದು ಒಂದೆಡೆಯಾದರೆ ದುರಂತದ ಮರುಕ್ಷಣದಿಂದ ಕಣ್ಮರೆಯಾಗಿರುವ ವಿದ್ಯುತ್ ಪೂರೈಕೆ. ದೂರವಾಣಿಯಂತೂ ದೂರವೇ ಉಳಿದು ಹೋಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳಲು ವರ್ಷಗಳೇ ಹಿಡಿಯುತ್ತವೆ ಎನ್ನುತ್ತಾರೆ ಬದ್ರಿ- ಕೇದಾರ್ ದೇವಾಲಯ ಕಮಿಟಿಯ ಗಣೇಶ್ ಗೋಧಿಯಾಳ.
ಈ ದುರಂತದ ಹೊಡೆತಕ್ಕೆ ಪ್ರಬಲವಾಗಿ ಒಳಗಾದ ಜಿಲ್ಲೆಗಳೆಂದರೆ, ರುದ್ರಪ್ರಯಾಗ್, ಚಮೋಲಿ, ಉತ್ತರಕಾಶಿ, ಪಿಥೊರಾಗಹರ್. ಸುಮಾರು ಸಾವಿರ ಪ್ರಮುಖ ರಸ್ತೆಗಳು, ಈ ಜಿಲ್ಲೆಗಳಲ್ಲಿ ಈಗಲೂ ಮುಚ್ಚಲಾಗಿದೆ. ಮತ್ತು ಈ ರಸ್ತೆಗಳನ್ನು ಯಾವಾಗ ತೆರೆವುಗೊಳಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಗಳಿಗೂ ಗೊತ್ತಿಲ್ಲ. ಹೆಚ್ಚಿನ ಹೋಟೆಲ್ಸ್, ಲಾಡ್ಜ್ ಮತ್ತು ಅಂಗಡಿಗಳೂ ಮುಚ್ಚಲ್ಪಟ್ಟಿವೆ. ಏಕೆಂದರೆ ಅಲ್ಲಿ ಯಾತ್ರಿಗಳೂ ಇಲ್ಲ ಅಥವಾ ಟೂರಿಸ್ಟ್‌ಗಳೂ ಇಲ್ಲ. ಗಂಗೋತ್ರಿಯಲ್ಲಿ ಸಣ್ಣ ಹೋಟೆಲ್ ನಡೆಸುವ ಅಮೋದ್ ಪವಾರ್, ಪ್ರವಾಹ ತನ್ನ ಆದಾಯದ ಮೂಲವನ್ನೇ ದರೋಡೆ ಮಾಡಿದೆ ಎನ್ನುತ್ತಾನೆ. ಇಂಥ ಮಾತು ಎಲ್ಲೆಡೆಯೂ ಸಾಮಾನ್ಯ. ಒಂದೆಡೆ ಮುಂದಿನ ಬದುಕಿಗೇನು ಎಂಬ ಚಿಂತೆಯಲ್ಲಿರುವಾಗಲೇ ಗುಡ್ಡ ಕುಸಿದು, ಮಳೆ ರಾಚಿ ಬದುಕನ್ನು ಇನ್ನಷ್ಟು ರಾಡಿಯೆಬ್ಬಿಸುತ್ತಿದೆ.
ಹೇಳಿದರೆ ಅರ್ಥವಾಗಲು ಸಾಧ್ಯವೇ ಇಲ್ಲ ಅಲ್ಲಿನ ಸ್ಥಿತಿ. ಕೇದಾರದ ಕಣಿವೆಯ ಜನಕ್ಕೆ ಆಗಸವೇ ಸೂರಾಗಿದೆ. ಅನ್ನಕ್ಕಾಗಿ ಬರ ಬಂದಿದೆ. ಮೂಲಾಧಾರವಾದ ಉದ್ಯೋಗ ಕಳೆದುಕೊಂಡಿರುವುದು ಒಂದೆಡೆಯಾದರೆ ಪ್ರವಾಹ ಮರುಕಳಿಸುವ ಭೀತಿ ಇನ್ನೊಂದೆಡೆ ಅವರನ್ನು ಕಿತ್ತು ತಿನ್ನುತ್ತಿದೆ. ಹೀಗಾಗಿ ಜೀವನವೇ ದುರಂತದ ಪಾಲಾಗಿದೆ. ಜನರು ರಸ್ತೆಯಲ್ಲಿ ಹಸಿವಿನಿಂದ ಅಲೆಯುತ್ತಿದ್ದಾರೆ. ಆದರೆ, ಆ ರಸ್ತೆಗಳೇ ಬಿರುಕುಬಿಟ್ಟು ಬಾಯ್ದೆರೆದು ಹಸಿದ ಮಂದಿಯನ್ನು ಕಬಳಿಸಲು ಸಜ್ಜುಗೊಂಡಿವೆ. ಪರಿಹಾರದ ಒಂದು ಕಣವೂ ಇಲ್ಲಿಗೆ ತಲುಪುವುದಿಲ್ಲ. ಕುಡಿಯುವ ನೀರು ಸಹ ಹೆಣಗಳ ಕೊಳೆಯುವಿಕೆಯಿಂದಾಗಿ ಕಲುಷಿತಗೊಂಡಿದೆ ಎನ್ನುತ್ತಾನೆ ಗುಪ್ತಕಾಶಿಯಲ್ಲಿ ಆಲೂ ಟಿಕ್ಕಿ ಗಾಡಿ ನಡೆಸುವ ವಿರೇಂದ್ರ ಸಿಂಗ್. ಈತ ಪ್ರವಾಹದಲ್ಲಿ ಕೊಚ್ಚಿ ಹೋದ ಅಗಸ್ತ್ಯಮುನಿ ಗ್ರಾಮದ ಸ್ಥಳೀಯ ನಿವಾಸಿ. ಈ ಬಿಕ್ಕಟ್ಟಿನಿಂದಾಗಿ ಇಂಧನದ ಸರಬರಾಜಿಗೆ ಪೆಟ್ಟು ಬಿದ್ದಿದೆ. ಪರಿಣಾಮ ಒಂದೂರಿನಿಂದ ಒಂದೂರಿಗೆ ಓಡಾಡುತ್ತಿದ್ದ ಬಾಡಿಗೆ ವಾಹನಗಳೂ ಸ್ಥಗಿತಗೊಂಡಿವೆ. ರಸ್ತೆಯಿಲ್ಲದ್ದು, ವಾಹನಗಳಿಗೆ ಇಂಧನ ಕೊರತೆ ಈ ಎರಡೂ ಕಾರಣಗಳಿಂದ ಹಳ್ಳಿಗಳನ್ನು ತಲುಪಬೇಕಿದ್ದ ಪರಿಹಾರ ಸಾಮಗ್ರಿಗಳು ಮಧ್ಯದಲ್ಲೇ ಉಳಿದು ಹೋಗುತ್ತಿವೆ. ಎಲ್ಲಕ್ಕಿಂತ ಗಮನಾರ್ಹ ಸಂಗತಿ ಎಂದರೆ ಅಧಿಕಾರಿಗಳಿಗಾಗಲಿ, ರಾಜಕೀಯ ನಾಯಕರಿಗಾಗಲಿ ಸದ್ಯದ ರಾಜ್ಯದ ಭೌಗೋಳಿಕ ಸ್ಥಿತಿಯ ಅರಿವಿಲ್ಲದಿರುವುದು. ಅಲ್ಲಿನ ಜನತೆಯ ಅಗತ್ಯಗಳ ಬಗ್ಗೆಯೂ ಅವರಿಗೆ ಮನವರಿಕೆಯಾಗಿಲ್ಲ. ಸಂಪೂರ್ಣ ನಾಶವಾದ ಹಳ್ಳಿಯ ಜನರನ್ನು ಸ್ಥಳಾಂತರಿಸಿದಾಗ, ಅವರಿಗೆ ಭೂಮಿ ಒದಗಿಸಬೇಕಾಗುತ್ತದೆ. ಮೂಲ ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗ ಒದಗಿಸಬೇಕು. ಇದಾವುದನ್ನೂ ಗಮನಿಸಿದೇ ಸರ್ಕಾರ ಪರಿಹಾರ ಪ್ಯಾಕೇಜ್ ಘೋಷಿಸಿ ಸಮಸ್ಯೆಗಳಿಗೆ ಮೌನವಾಗಿದೆ. ಹೇಸಿಗೆ ಸಂಗತಿ ಎಂದರೆ ದುರಂತದಲ್ಲಿ ರಾಜಕೀಯ ಮಾಡುತ್ತಿರುವುದು. ಅಚ್ಚರಿಯಾಗಬಹುದು, ಆದರಿದು ಸತ್ಯ. ರಾಜಕೀಯ ನಾಯಕರು ಕಳಿಸಿದ ನೆರವಿನ ವಸ್ತುಗಳಲ್ಲಿ ಅವರ ಪಾರ್ಟಿಗಳ ಪ್ರಚಾರದ ವಸ್ತುಗಳೂ ಇದ್ದವು!
ಇಂಥ ಎಂಟು ದಿನಗಳ ನರಕ ದರ್ಶನ ಮುಗಿಸಿ, ಪತ್ರಕರ್ತನಾಗಿ ಒಂದು ಯುದ್ಧವನ್ನು ಗೆದ್ದ ಸಂತೃಪ್ತಿಯಿಂದ ಅವತ್ತು ಜುಲೈ 23ರ ರಾತ್ರಿ ಹನ್ನೊಂದಕ್ಕೆ ನಿಶ್ಚಿಂತೆಯ ನಿದ್ದೆಗೆ ಶರಣಾಗಿದ್ದೆ ಗುಪ್ತಕಾಶಿಯ ಖಾಸಗಿ ಲಾಡ್ಜ್ ಒಂದರಲ್ಲಿ. ಬೆಳ್ಳಂಬೆಳಗ್ಗೆ ಎದ್ದು ಹೊರಟುಬಿಡಬೇಕು, ಸಂಜೆಯೊಳಗೆ ಟ್ಯಾಕ್ಸಿ ನಿಲ್ಲಿಸಿದ್ದ ಮಯಾಲಿಯನ್ನು ಸೇರಿಕೊಂಡುಬಿಟ್ಟರೆ ಕತ್ತಲಾಗುವುದರೊಳಗೆ ರುದ್ರ ಪ್ರಯಾಗಕ್ಕೆ ತಲುಪುವುದಂತೂ ಖಚಿತ. ಅಲ್ಲಿ ರಾತ್ರಿ ತಂಗಿದ್ದು, ಇನ್ನೊಂದು ದಿನದಲ್ಲಿ ಹೃಷಿಕೇಶ, ಅಲ್ಲಿಂದ ದಿಲ್ಲಿ ಹಾಗೆಯೇ ಬೆಂಗಳೂರು... ಮನಸ್ಸು ಮನೆ ಕಾಣಲು ಹಾತೊರೆಯುತ್ತಿತ್ತು... ಆದರೆ, ಬೆಳಗಿನ ಅಲ್ಲಿನ ವಾತಾವರಣ ಕಂಡು ಹುಚ್ಚು ಸಾಹಸದ ಉಮೇದು ಇಳಿದು ನೀರಾಗಿ ಬೆವರಿನ ರೂಪದಲ್ಲಿ ಇಳಿಯುತ್ತಿತ್ತು. ಹಾವು ಎಂಬೆರಡಕ್ಷರ ಕೇಳಿದರೇ ನಖಶಿಖಾಂತ ಬೆವರುವ, ವಿಚಿತ್ರವಾದುದೊಂದು ಹೇಸಿಗೆ ಮಿಶ್ರಿತ ಭಯವನ್ನು ಆವಾಹಿಸಿಕೊಳ್ಳುವ ಜಾಯಮಾನದವನಿಗೆ ಮಾರಿಗೊಂದು, ಮೈಲಿಗೆ ಹತ್ತು ಹಾವುಗಳು ಕಾಲ ಕೆಳಗೇ ಸರಿದಾಡುವಂತಾದರೆ ಹೇಗಿದ್ದೀತು? ಅಕ್ಷರಶಃ ಅದೇ ನನ್ನ ಪರಿಸ್ಥಿತಿಯಿತ್ತು ಗುಪ್ತಕಾಶಿಯಿಂದ ಮರಳಿಹೊರಟಾಗ. ದಂಡಿಗೆ ಹೆದರಲಿಲ್ಲ ದಾಳಿಗೆ ಹೆದರಲಿಲ್ಲ... ಅಂತೇನೋ ಗಾದೆ ಮಾತಿದೆಯಲ್ಲಾ ಅದು ಮತ್ತೆ ಮತ್ತೆ ನೆನಪಾಗಿ ನನ್ನ ಬಗ್ಗೆ ನನಗೇ ಮರುಕ ಹುಟ್ಟುತ್ತಿತ್ತು... ಕಳೆದ ಮೂರು ದಿನಗಳಿಗಿಂತ ಭೀಕರವಾಗಿತ್ತು ಮುಂದಿನ ಆ ಒಂದು ದಿನ ಕಳೆದು ಬಂದದ್ದು. ಅ ಒಂದು ದಿನದ್ದೇ ಜೀವಮಾನದಲ್ಲಿ ಮರೆಯಲಾಗದ ಅನುಭವ.

-ರಾಧಾಕೃಷ್ಣ ಎಸ್. ಭಡ್ತಿ

abhyagatha@yahoo.co.in


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com