ಛತ್ರಿಯ ಕೆಳಗೆ ಒಬ್ಬನೇ ಹೊರಟಿದ್ದರ ಹಿಂದೊಂದು ಗುಟ್ಟಿತ್ತು!

ಥೇಟ್ ಅಪ್ಸರೆಯಂತಿದ್ದ ನಿವೇದಿತಾ ಎಂಬ ಹುಡುಗಿ, ಮಂಡ್ಯದ ಹುಡುಗ...
Updated on: 

ಥೇಟ್ ಅಪ್ಸರೆಯಂತಿದ್ದ ನಿವೇದಿತಾ ಎಂಬ ಹುಡುಗಿ, ಮಂಡ್ಯದ ಹುಡುಗ ಚಂದ್ರೇಗೌಡನಿಗೆ ಮರುಳಾಗುತ್ತಾಳೆಂದು ಉಳಿದವರಿರಲಿ, ಸ್ವತಃ ಚಂದ್ರೇಗೌಡನೂ ಭಾವಿಸಿರಲಿಲ್ಲ. ಅವಳು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ಗೆ ಸೇರಿದಾಗ, ಈತ ಅದೇ ವಿಭಾಗದಲ್ಲಿ 2ನೇ ವರ್ಷದಲ್ಲಿದ್ದ. ರ್ಯಾಂಕ್ ಸ್ಟೂಡೆಂಟ್ ಎನ್ನಿಸಿಕೊಂಡಿದ್ದ ಚಂದ್ರೇಗೌಡ, ಹೆಚ್ಚಿನ ಸಮಯವನ್ನು ಲೈಬ್ರರಿಯಲ್ಲಿಯೇ ಕಳೆಯುತ್ತಿದ್ದ.  
ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆಯೇ ಚೆಂದದ ಹುಡುಗಿಯರು ಯಾವ ಸೆಕ್ಷನ್‌ನಲ್ಲಿ ಇದ್ದಾರೆ ಎಂದು ಕುತೂಹಲದಿಂದ ಗಮನಿಸುವುದು ಎಲ್ಲ ಹುಡುಗರ ಅಭ್ಯಾಸ ತಾನೆ? ಮಂಡ್ಯದ ಕಾಲೇಜಿನ ಹುಡುಗರೂ ಅದಕ್ಕೆ ಹೊರತಾಗಿರಲಿಲ್ಲ. ಕಾಲೇಜು ಶುರುವಾಗಿ 15 ದಿನ ಕಳೆಯುವುದರೊಳಗೆ ಹುಡುಗರ ಗುಂಪಿನಿಂದ 'ನಿವೇದಿತಾ, ನಿವೇದಿತಾ' ಎಂಬ ಪಿಸು ಮಾತು ಕೇಳಿ ಬರತೊಡಗಿತ್ತು. ಆಕೆ ಉತ್ತರಪ್ರದೇಶದವಳಂತೆ. ಡೊನೇಷನ್ ಕೊಟ್ಟು ಸೀಟ್ ತಗೊಂಡಿದಾಳಂತೆ. ಲೇಡೀಸ್ ಹಾಸ್ಟೆಲ್‌ನಲ್ಲಿ ಉಳ್ಕೊಂಡಿದ್ದಾಳಂತೆ. ತುಂಬಾ ಸ್ಟ್ರಿಕ್ಟ್ ಅಂತೆ. ಯಾರ ಜೊತೆಗೂ ಹೆಚ್ಚು ಮಾತಾಡಲ್ವಂತೆ ಎಂಬ ಸುದ್ದಿಗಳನ್ನು ಕುತೂಹಲಿಗಳು ಸಂಗ್ರಹಿಸಿ, ಕ್ಯಾಂಪಸ್‌ನಲ್ಲಿ ಟಾಂಟಾಂ ಮಾಡಿ ಬಿಟ್ಟಿದ್ದರು. ತಿಂಗಳು ಕಳೆಯುವುದರೊಳಗೆ, ನಿವೇದಿತಾ ಸುರಸುಂದರಿಯೇ ವಿನಃ ಓದಿನಲ್ಲಿ ಅಷ್ಟೇನೂ ಚುರುಕಿಲ್ಲವಂತೆ ಎಂಬ ಮತ್ತೊಂದು ಸುದ್ದಿಯೂ ಕ್ಯಾಂಪಸ್‌ನಲ್ಲಿ ಹರಿದಾಡಿತು.
ಹೀಗಿರುವಾಗಲೇ ಅದೊಂದು ಸಂಜೆ ಯಾರೂ ನಿರೀಕ್ಷಿಸದಿದ್ದ ಘಟನೆ ನಡೆದುಹೋಯಿತು. ಕಾಲೇಜಿನ ಲೈಬ್ರರಿಯಲ್ಲಿ ಪುಸ್ತಕಗಳ ಮಧ್ಯೆ ಕಳೆದುಹೋಗಿದ್ದ ಚಂದ್ರೇಗೌಡನ ಬಳಿಗೆ ಬಂದ ನಿವೇದಿತಾ, ಪರಿಚಯ ಹೇಳಿಕೊಂಡಳು. ಪಾಠ ಸರಿಯಾಗಿ ಅರ್ಥ ಆಗ್ತಿಲ್ಲ. ತುಂಬಾ ಕಷ್ಟ ಅನ್ನಿಸ್ತಿದೆ. ನಿಮ್ದು ಹಳೆಯ ನೋಟ್ಸ್ ಇದ್ರೆ ದಯವಿಟ್ಟು ಕೊಡಿ. ಹೆಲ್ಪ್ ಮಿ ಪ್ಲೀಸ್‌' ಎಂದಳು.
ಚೆಲುವೆಯೊಬ್ಬಳ ಕಣ್ಣಲ್ಲಿ 'ಹೀರೋ' ಆಗುವುದಕ್ಕಿಂತ ಮಹತ್ವದ ಸಂಗತಿ ಹುಡುಗರ ಪಾಲಿಗೆ ಇಲ್ಲವಲ್ಲ; ಈ ಉಮೇದಿನಲ್ಲಿಯೇ ಚಂದ್ರೇಗೌಡ ಓಡಾಡಿದ. ನಾಲ್ಕೇ ದಿನದಲ್ಲಿ ಎಲ್ಲ ವಿಷಯಗಳ ನೋಟ್ಸ್ ಸಂಗ್ರಹಿಸಿಕೊಂಡು ನಿವೇದಿತಾಳ ಮುಂದೆ ನಿಂತ. ಮುಂದೆ ನಡೆದದ್ದೆಲ್ಲಾ ಒಂದರ್ಥದಲ್ಲಿ ಸಿನಿಮೀಯವೇ. ಅವತ್ತಿನವರೆಗೂ ಯಾವ ಹುಡುಗರೊಂದಿಗೂ ಹೆಚ್ಚಾಗಿ ಬೆರೆಯದಿದ್ದ ನಿವೇದಿತಾ, ಈ  ಚಂದ್ರೇಗೌಡನನ್ನು ವಿಪರೀತ ಹಚ್ಚಿಕೊಂಡಳು. ಲೈಬ್ರರಿಯಲ್ಲಿ ಅವನೆದುರು ಕೂತು ಓದಿಕೊಳ್ಳುತ್ತಿದ್ದಳು. ಮಧ್ಯಾಹ್ನ ಮತ್ತು ಸಂಜೆ ಅವರಿಬ್ಬರೂ ಒಂದೇ ಛತ್ರಿಯ ಕೆಳಗೆ ನಡೆದು ಹೋಗುವುದನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಅಸೂಯೆಯಿಂದ ನೋಡಿದರು. ನಿವೇದಿತಾಳ ಸಹವಾಸದಿಂದ ಚಂದ್ರೇಗೌಡನ ಹೆಸರು 'ಚಂದರ್‌' ಎಂದು ಬದಲಾಯಿತು. ಅವರಿಬ್ಬರೂ ಒಟ್ಟಿಗೇ ವಾಕ್ ಹೋದರು. ಥೇಟರಿಗೆ ಹೋದರು. ಪಿಕ್‌ನಿಕ್‌ಗೆ ಹೋಗಿ ಬಂದರು. ಜುರ್ರೋ ಎಂದು ಮಳೆ ಸುರಿಯುತ್ತಿದ್ದರೆ, ಅದಕ್ಕೆ ಕೇರ್ ಮಾಡದೆ ಒಂದೇ ಛತ್ರಿಯ ಕೆಳಗೆ ನಡೆದು ಹೋಗುವುದನ್ನೂ ಅಭ್ಯಾಸ ಮಾಡಿಕೊಂಡರು. ಪರಿಣಾಮ, ಈ ಜೋಡಿಗೆ ಟೂ ಲವರ್ಸ್ ಎಂದೂ, ಟ್ರೂ ಲವರ್ಸ್ ಎಂದೂ ಹೆಸರು ಅಂಟಿಕೊಂಡಿತು.
ಚಂದ್ರೇಗೌಡನಿಗೆ ಇದ್ದ ಶೋಕಿಯೆಂದರೆ ಸಿಗರೇಟು. ಸಹವಾಸ ದೋಷದಿಂದ ಪಿಯುಸಿಯಲ್ಲಿಯೇ ಈ ಚಟ ಅಂಟಿಕೊಂಡಿತ್ತು. ಒಂದೊಂದು ಸಂದರ್ಭದಲ್ಲಿ,  ದಿನಕ್ಕೆ 20 ಸಿಗರೇಟು ಸೇದುತ್ತಿದ್ದ. ನಿವೇದಿತಾಳ ಪರಿಚಯವಾದ ಮೇಲೆ ಗೌಡನಿಗೆ ಹಿಂದಿಯೂ ಅರ್ಥವಾಗುತ್ತಾ ಹೋಯಿತು. ಹಾಸ್ಟೆಲಿನಲ್ಲಿ ಎದುರಾದ ಗೆಳೆಯರಿಗೆ -ಆಪ್ ಕೈಸೆ ಹೋ? ಕೈಸೆ ಹೋ ಅಪ್? ಆಪ್‌ನೆ ಖಾನಾ ಕಯಾ? ಆಪ್‌ನೆ ಕಾಫಿ ಪಿಯಾ? ಎಂದೆಲ್ಲಾ ಕೇಳಿ ತಬ್ಬಿಬ್ಬು ಮಾಡುತ್ತಿದ್ದ. ಆ ಹುಡುಗರು ಸಿಡಿಮಿಡಿಯಿಂದ 'ಆ ಹುಡುಗಿ ಹತ್ರ ಹಿಂದಿ ಕಲಿತ್ಕೊಂಡು ನಮ್ಮ ಮುಂದೆ ಸ್ಕೋಪ್ ತಗೊಳ್ಳೋಕೆ ನೋಡ್ತಿದ್ದಾನೆ' ಎನ್ನುತ್ತಿದ್ದರು. ಮತ್ತೆ ಕೆಲವರು- 'ಈ ಬಡ್ಡಿಹೈದ ಅದ್ಹೆಂಗೆ ಅವಳನ್ನು ಬುಟ್ಟಿಗೆ ಹಾಕ್ಕೊಂಡ?' ಎಂದು ಪ್ರಶ್ನೆ ಕೇಳಿ ಉತ್ತರ ಗೊತ್ತಾಗದೆ ಸುಮ್ಮನಾಗುತ್ತಿದ್ದರು.
ಓಡುವ ಕಾಲಕ್ಕೆ ಯಾವ ತಡೆ? ಅದು ಕೃಷ್ಣ ಚಕ್ರದ ಥರಾ ಗಿರಗಿರನೆ ತಿರುಗಿತು. ಚಂದ್ರೇಗೌಡನ ಸಹವಾಸದಲ್ಲಿ ನಿವೇದಿತಾ, ಫಸ್ಟ್ ಕ್ಲಾಸ್ ವಿದ್ಯಾರ್ಥಿನಿಯಾಗಿ ಬದಲಾದಳು. ದಿನಗಳು ಕಳೆದಂತೆಲ್ಲಾ ಅವರ ಮಧ್ಯೆ ಸಲುಗೆ ಹೆಚ್ಚಿತು. 'ಐ ಲವ್ ಯೂ' ಎಂಬ ಮಾತು ಇಬ್ಬರ ಕಡೆಯಿಂದಲೂ ಕೇಳಿ ಬಂತು. ತನ್ನನ್ನು ಬುದ್ಧಿವಂತೆಯನ್ನಾಗಿ ಮಾಡಲು ಚಂದ್ರೇಗೌಡ ತೆಗೆದುಕೊಂಡ ಹಲವು 'ರಿಸ್ಕ್‌'ಗಳನ್ನು ನಿವೇದಿತಾ ಪ್ರತ್ಯಕ್ಷ ಕಂಡಿದ್ದಳು. ಪರಸ್ಪರರನ್ನು ತಿರಸ್ಕರಿಸಲು ಅವರಿಗೆ ಕಾರಣಗಳೇ ಇರಲಿಲ್ಲ. ಚಂದ್ರೇಗೌಡನ ವಿಷಯದಲ್ಲಿ ನಿವೇದಿತಾಗಿದ್ದ ತಕರಾರೆಂದರೆ ಅವನ ಸಿಗರೇಟಿನ ಚಟ. ಈ ವಿಷಯವಾಗಿ ಅವರ ಮಧ್ಯೆ ಜಗಳವಾಗುತ್ತಿತ್ತು. ಆಗೆಲ್ಲಾ ಈ ಹುಡುಗಿ, ಮುಲಾಜಿಲ್ಲದೆ ಚಂದ್ರೇಗೌಡನ ತಲೆಯ ಮೇಲೆ ಮೊಟಕುತ್ತಿದ್ದಳು. ಅವನು ನಸುನಗುತ್ತಾ, ಈಗ ಮೊದಲಿನ ಥರಾ ಅಲ್ಲ. ತುಂಬಾ ಕಡಿಮೆ ಸೇದ್ತಾ ಇದೀನಿ ಎಂದು ಸಮಜಾಯಿಷಿ ಕೊಡುತ್ತಿದ್ದ. ಮುಂದಿನ ತಿಂಗಳಿಂದ ಬಿಟ್ಟುಬಿಡ್ತೀನಿ ಎಂದು ಪ್ರಾಮಿಸ್ ಮಾಡುತ್ತಿದ್ದ. ಇಲ್ಲವಾದರೆ ಈ ಹುಡುಗಿ ಕಾಣಿಸುವ ಮೊದಲೇ ಸಿಗರೇಟ್ ಸೇದಿ, ಹಿಂದೆಯೇ ಮಿಂಟ್ ಚಾಕೋಲೇಟ್ ತಿಂದು ಅವಳ ಬೈಗುಳದಿಂದ ಪಾರಾಗುತ್ತಿದ್ದ.
ಈ ನಡುವೆಯೇ ಚಂದ್ರೇಗೌಡನ ಡಿಗ್ರಿ ಮುಗಿಯಿತು. ಆತ ಎಂ.ಟೆಕ್‌ಗೆ ಸೇರಿಕೊಂಡ. ಅದೂ ಒಂದು ವರ್ಷ ಕಳೆಯುತ್ತಿದ್ದಂತೆಯೇ ನಿವೇದಿತಾಳ ಡಿಗ್ರಿ ಮುಗಿಯಿತು. 'ನಾನೀಗ ಊರಿಗೆ ಹೋಗ್ತೀನಿ. ನಿಮ್ಮ ಮನೇಲಿ ಬೇಗ ಮದುವೆಯ ಬಗ್ಗೆ ಮಾತಾಡಿ. ನಮ್ಮ ಮನೇಲಿ ನಾನಿನ್ನೂ ವಿಷಯ ಹೇಳಿಲ್ಲ. ಅವರು ಏನಾದ್ರೂ ಅವಸರದ ನಿರ್ಧಾರಕ್ಕೆ ಬಂದು ಬಿಟ್ರೆ ಕಷ್ಟ' ಎಂದಳು ನಿವೇದಿತಾ. ಅಂಥದೇನೂ ಆಗೋದಿಲ್ಲ. ಮನೇಲಿ ಎಲ್ಲರನ್ನೂ ಒಪ್ಪಿಸಿ, ನಿಂಗೆ ಫೋನ್ ಮಾಡ್ತೇನೆ. ಪ್ರತಿ ವಾರ ತಪ್ಪದೇ ಪತ್ರ ಬರೀತೀನಿ ಎಂದು ಅವಳನ್ನು ರೈಲು ಹತ್ತಿಸಿದ್ದ.
ಆದರೆ, ಮಗನ ಪ್ರೇಮ ಪ್ರಕರಣ ತಿಳಿದು ಚಂದ್ರೇಗೌಡನ ತಂದೆ ಕಿಡಿಕಿಡಿಯಾದರು. 'ಎಂಥಾ ಕೆಲ್ಸ ಮಾಡಿದ್ಯೋ, ಹೋಗಿ ಹೋಗಿ ಅವಳ್ಯಾರೋ ಡೆಲ್ಲಿ ಹುಡುಗೀನ ಮದುವೆ ಆಗ್ತೀನಿ ಅಂತೀಯಲ್ಲ; ನಿಂಗೆ ಬುದ್ಧಿ ನೆಟ್ಟಗಿದ್ಯಾ? ಯಾಕೆ, ನಿಂಗೆ ಲವ್ ಮಾಡೋಕೆ ನಮ್ಮ ಒಕ್ಕಲಿಗರ ಹುಡುಗೀರು ಕಾಣಿಸ್ಲಿಲ್ವೆ? ಈ ಮದುವೆಗೆ ನಾನಂತೂ ಒಪ್ಪೋದಿಲ್ಲ' ಅಂದು ಬಿಟ್ಟರು. ಈ ಮಾತು ಕೇಳಿ ಚಂದ್ರೇಗೌಡನೂ ಸಿಟ್ಟಿಗೆದ್ದು -'ನಾನು ಅವಳನ್ನು ಮದುವೆಯಾಗೋದೆ ಸೈ. ನೀವು ಒಪ್ಪದಿದ್ರೂ ಪರವಾಗಿಲ್ಲ' ಅಂದು ಬಿಟ್ಟ. ಇಂಥ ಮಾತುಗಳನ್ನು ನಿರೀಕ್ಷಿಸಿರದಿದ್ದ ಆ ಪೋಷಕರು ಕಂಗಾಲಾದರು. ಬೆಂಗಳೂರಿನಲ್ಲಿರುವ ಮಗಳು, ಅಳಿಯನನ್ನು ಕರೆತಂದು ಅವರಿಂದಲೇ ಮಗನಿಗೆ ಬುದ್ಧಿ ಹೇಳಿಸಲು ನಿರ್ಧರಿಸಿದರು. ಮರುದಿನವೇ ಹೆಂಡತಿಯೊಂದಿಗೆ ಬೆಂಗಳೂರು ಬಸ್ ಹತ್ತಿದರು. ಎರಡು ದಿನಗಳ ನಂತರ ದಾರುಣ ವಾರ್ತೆಯೊಂದು ಚಂದ್ರೇಗೌಡನನ್ನು ತಲುಪಿತು. ಅವನ ಅಕ್ಕ-ಭಾವ, ತಂದೆ-ತಾಯಿ ಪ್ರಯಾಣಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿತ್ತು. ನಾಲ್ವರೂ ಸ್ಥಳದಲ್ಲಿಯೇ ಸತ್ತು ಹೋಗಿದ್ದರು.
ಢಢಢ
ಈ ಘಟನೆ ನಡೆದು ಮೂರು ವರ್ಷ ಕಳೆದುಹೋದವು. ಎಲ್ಲ ಅನಾಹುತಕ್ಕೂ ಪರೋಕ್ಷವಾಗಿ ನಾನೇ ಕಾರಣವಾದೆ ಎಂಬ ಸಂಕಟದಲ್ಲಿ ಚಂದ್ರೇಗೌಡ ಹಣ್ಣಾಗಿ ಹೋದ. ಸಂಕಟ ಮರೆಯುವ ಉದ್ದೇಶದಿಂದ ಸಿಗರೇಟು ಸುಡುವುದನ್ನು ಮತ್ತಷ್ಟು ಜಾಸ್ತಿ ಮಾಡಿದ. ಗುಂಡು ಹಾಕುವುದನ್ನೂ ಅಭ್ಯಾಸ ಮಾಡಿಕೊಂಡ. ನಿವೇದಿತಾಳಿಗೆ ಫೋನ್ ಮಾಡುವುದಿರಲಿ, ಪತ್ರವನ್ನೂ ಬರೆಯಲಿಲ್ಲ. ಅವಳು ಫೋನ್ ಮಾಡಿದಳು. ಇವನು ಮಾತಾಡಲಿಲ್ಲ. ಆಕೆ ಪತ್ರ ಬರೆದಳು. ಇವನು ಉತ್ತರಿಸಲಿಲ್ಲ. ಒಂದು ಬಾರಿ, ಯಾವುದೇ ಮುನ್ಸೂಚನೆ ಕೊಡದೆ ಉತ್ತರ ಪ್ರದೇಶದಿಂದ ಮಂಡ್ಯಕ್ಕೆ ಬಂದೇಬಿಟ್ಟಳು. ಈತ ಅವಳ ಕೈಗೆ ಸಿಗಲಿಲ್ಲ. ನಡೆದಿರುವುದನ್ನೆಲ್ಲ ಅವರಿವರಿಂದ ಕೇಳಿ ತಿಳಿದ ನಿವೇದಿತಾ, ಏನು ಹೇಳಲಿಕ್ಕೂ ತೋಚದೆ ಊರಿಗೆ ವಾಪಸಾದಳು. ಒಂದು ತಿಂಗಳ ನಂತರ-'ಕಡೆಯ ಬಾರಿಗೆ ಅಂದುಕೊಂಡರೂ ಸರಿ, ನಿನ್ನನ್ನು ಒಮ್ಮೆ ಭೇಟಿಯಾಗಲೇಬೇಕು. ಇಂಥ ದಿನವೇ ಬರುತ್ತಿದ್ದೇನೆ. ರೈಲು ನಿಲ್ದಾಣದಲ್ಲಿ ಕಾಯುತ್ತಿರು' ಎಂದು ಪತ್ರ ಬರೆದಿದ್ದಳು.
ಅವಳು ಮಂಡ್ಯಕ್ಕೆ ಬಂದಾಗ ಸಂಜೆಯಾಗಿತ್ತು. ಮಳೆ ಜುರ್ರೋ ಎಂದು ಸುರಿಯುತ್ತಿತ್ತು. ರೈಲು ಇಳಿದಾಕ್ಷಣ ಆಕೆ ಛತ್ರಿ ಬಿಡಿಸಿದಳು. ಅದೇ ವೇಳೆಗೆ ಭರ್ರನೆ ಬೀಸಿದ ಗಾಳಿಯ ರಭಸಕ್ಕೆ ಅದರ ಎರಡು ಕಡ್ಡಿಗಳು ಫಟ್ ಎಂದು ಮುರಿದು ಹೋದವು. ನಿಲ್ದಾಣದ ಉದ್ದಕ್ಕೂ ಕಣ್ಣು ಹಾಯಿಸಿದಳು. ಅವನು ಕಾಣಿಸಲಿಲ್ಲ. ಮಾಡುವುದೇನು? ಮುರಿದ ಛತ್ರಿ ಹಿಡಿದುಕೊಂಡು ಒಂದು ಮೂಲೆಯಲ್ಲಿ ಗಡಗಡ ನಡುಗುತ್ತಾ ನಿಂತಳು. ಹೀಗೇ ಒಂದು ಗಂಟೆ ಕಳೆದ ಮೇಲೆ ಚಂದ್ರೇಗೌಡ ಬಂದ. ಅವಳನ್ನು ದೂರದಿಂದಲೇ ಗಮನಿಸಿದ. ಆಕೆ ತುಂಬಾ ಇಳಿದು ಹೋಗಿದ್ದಾಳೆ ಅನ್ನಿಸಿತು. ಸುಮ್ಮನೆ ನಡೆದು ಹೋಗಿ ಅವಳೆದೆರು ನಿಂತ. ಇವನನ್ನು ನೋಡುತ್ತಿದ್ದಂತೆಯೇ ಆಕೆ ಬಾಚಿ ತಬ್ಬಿಕೊಂಡಳು. ಒಂದೇ ಸಮನೆ ಕಣ್ಣೀರು ಸುರಿಸಿದಳು. ಚಂದ್ರೇಗೌಡ ಅವಳನ್ನು ಸಮಾಧಾನಿಸಲಿಲ್ಲ. ಬದಲಿಗೆ-'ಎಲ್ರೂ ನೋಡ್ತಾ ಇದಾರೆ. ಹೀಗೆಲ್ಲ ತಬ್ಕೋಬೇಡ' ಅಂದು ಬಿಟ್ಟ. ಅವನ ಧ್ವನಿಯಲ್ಲಿ ಆದೇಶವಿತ್ತು.
ಅವನು ಮನೆಗೆ ಕರೆದೊಯ್ಯುತ್ತಾನೆ ಅಂದುಕೊಂಡಳು. ಆತ ಎತ್ತಲೋ ನೋಡುತ್ತ- ಲಾಡ್ಜ್‌ನಲ್ಲಿ ನಿನಗೆ ರೂಂ ಬುಕ್ ಮಾಡಿದೀನಿ ಅಂದ. ರೈಲು ನಿಲ್ದಾಣದಿಂದ ಅಲ್ಲಿಗೆ ಎರಡು ಕಿಲೋಮೀಟರ್ ದೂರ. ಅಲ್ಲಿಯವರೆಗೂ ಅವನೊಂದಿಗೆ ಜೊತೆಜೊತೆಯಾಗಿ ನಡೆಯಬಹುದಲ್ಲ ಎಂಬ ಖುಷಿ ಅವಳದ್ದಾಗಿತ್ತು. ಮೊದಲು ಅವನೇ ಛತ್ರಿ ಬಿಡಿಸಿದ. ಇವಳು ಸಡಗರದಿಂದ ನಡೆದು ಹೋದಳು. ಆತ ತಕ್ಷಣವೇ ಬೇರೆ ಬೇರೆ ಹೋಗೋಣ ಪ್ಲೀಸ್. ನಿನ್ನ ಛತ್ರಿ ಓಪನ್ ಮಾಡು ಅಂದು ಬಿಟ್ಟ. ಅವನ ಮಾತುಗಳು ಒರಟಾಗಿದ್ದವು. ಮುಖವೂ ಹಾಗೆಯೇ ಇದೆಯಾ ಎಂದು ನೋಡಲು ಪ್ರಯತ್ನಿಸಿದಳು. ಆತ ಇವಳತ್ತ ತಿರುಗಲೇ ಇಲ್ಲ.
ಹಾದಿಯುದ್ದಕ್ಕೂ ಮಳೆಯೊಂದಿಗೆ ನಿವೇದಿತಾಳ ಕಂಬನಿಯೂ ಸುರಿಯುತ್ತಲೇ ಇತ್ತು. ಆಕೆ ಧೈರ್ಯ ಹೇಳಿದಳು. ಸಾಂತ್ವನದ ಮಾತಾಡಿದಳು. ಭವಿಷ್ಯದ ಬಗ್ಗೆ ಯೋಚಿಸಿ ಎಂದಳು. ಬೇಗ ಮದುವೆಯಾಗೋಣ ಅನ್ನುವಾಗಲೇ, ಛಕ್ಕನೆ ಅವಳ ಕೈ ಹಿಡಿದು ಚಂದ್ರೇಗೌಡ ಹೇಳಿದ: 'ಮದುವೆಯ ಮಾತಾಡಬೇಡ. ಈವರೆಗೂ ನಡೆದಿರುವ ಅನಾಹುತದಿಂದ ಕುಸಿದುಹೋಗಿದೀನಿ. ಸದ್ಯಕ್ಕೆ ನನ್ನನ್ನು ಒಂಟಿಯಾಗಿ ಬಿಟ್ಟುಬಿಡು. ಹಳೆಯದೆಲ್ಲಾ ಕನಸು ಅಂದ್ಕೊ. ವಿವರಿಸಿ ಹೇಳಲು ಬೇರೇನೂ ಉಳಿದಿಲ್ಲ. ನಾಳೆ ಸಂಜೆ ಮತ್ತೆ ಬಂದು ಟ್ರೈನ್ ಹತ್ತಿಸ್ತೇನೆ. ಹೋಗಿ ಬಾ. ನಿನಗೆ ಒಳ್ಳೆಯದಾಗಲಿ. ನನ್ನನ್ನು ಕ್ಷಮಿಸಿ ಬಿಡು, ಮರೆತು ಬಿಡು...'
 ಮರುದಿನ, ಮನಸ್ಸಿಲ್ಲದಿದ್ದರೂ ಹೊರಟು ನಿಂತಳು ನಿವೇದಿತಾ. ಆಗಲೂ ಮಳೆ ಬಂತು. ಅವಳಿಗೆ ತಾಕದಂತೆ ಆಟೋದಲ್ಲಿ ಕೂತ. ತುಂಬ ದೂರದಿಂದಲೇ ಕೈ ಬೀಸಿದ. ರೈಲ್ ಎಂಜಿನ್ನಿನ ಸದ್ದಿನ ಮಧ್ಯೆ ನಿವೇದಿತಾ 'ಹೋ' ಎಂದು ಚೀರಿದ್ದು ಅವನಿಗೆ ಕೇಳಿಸಲಿಲ್ಲ... 'ಚಂದ್ರೇಗೌಡ್ರೆ, ದಿನಕ್ಕೆ 60 ಸಿಗರೇಟು ಅಂತೀರ. ಮಿತಿ ಮೀರಿ ಕುಡೀತಿದ್ದೆ ಅಂತಲೂ ಹೇಳ್ತೀರ. ಅದನ್ನೆಲ್ಲ ನಮ್ಮ ದೇಹ ತಡ್ಕೋಬೇಕಲ್ವ? ಈಗ ಬಂದಿರೋ ರಿಸಲ್ಟ್ ಪ್ರಕಾರ ಲಿವರ್ ಸಂಪೂರ್ಣವಾಗಿ ಹಾಳಾಗಿದೆ. ರಕ್ತ ಕಣಗಳ ಸಂಖ್ಯೆ ಕಡಿಮೆಯಾಗಿದೆ. ಕ್ಯಾನ್ಸರ್ ಇರಬಹುದಾ ಎಂಬುದು ಚಿಕ್ಕ ಅನುಮಾನ. ಮತ್ತಷ್ಟು ಚೆಕಪ್ ಮಾಡೋಣ. ನಾಡಿದ್ದು ಬನ್ನಿ' ಎಂದರು ಡಾಕ್ಟರ್. ಚಂದ್ರೇಗೌಡನಿಗೆ ಯಾಕೋ ಈ ಮಾತುಗಳು ಪಥ್ಯವಾಗಲಿಲ್ಲ. ಆತ ವೈದ್ಯರನ್ನೇ ಬದಲಿಸಿದ. ನೋವು ನಿವಾರಕ ಔಷಧಗಳಿಂದಲೇ ಎಲ್ಲವೂ ವಾಸಿಯಾಗುತ್ತೆ ಎಂದು ಭಾವಿಸಿದ. ಈ ಡಾಕ್ಟರ್‌ಗಳ ಸಹವಾಸವೇ ಇಷ್ಟು, ಚಿಕ್ಕ ಪುಟ್ಟದ್ದಕ್ಕೆಲ್ಲ ಸುಮ್ನೆ ಹೆದರಿಸ್ತಾರೆ ಎಂದು ತನಗೆ ತಾನೇ ಹೇಳಿಕೊಂಡ. ಖುಷಿಗೊಮ್ಮೆ, ಸಂಕಟಕ್ಕೆ ಮತ್ತೊಮ್ಮೆ ಗುಂಡು ಹಾಕುತ್ತಾ ಮೈಮರೆತ.
ಹೀಗೆಯೇ ಹತ್ತು ತಿಂಗಳು ಕಳೆದವು. ಅದೊಂದು ದಿನ ಊಟಕ್ಕೆಂದು ಹೋಟೆಲಿಗೆ ಹೋಗಿದ್ದ ಚಂದ್ರೇಗೌಡ, ಅಲ್ಲಿಯೇ ತಲೆ ತಿರುಗಿ, ಎಚ್ಚರ ತಪ್ಪಿ ಬಿದ್ದು ಬಿಟ್ಟ. ಅವನನ್ನು ಐದಾರು ಬಾರಿ ಪರೀಕ್ಷಿಸಿದ ವೈದ್ಯರು ತಗ್ಗಿದ ಧ್ವನಿಯಲ್ಲಿ ಹೇಳಿದರು: ಕ್ಯಾನ್ಸರ್ ಆಗಲೇ ಎರಡನೇ ಸ್ಟೇಜ್‌ನಲ್ಲಿದೆ. ಟ್ರೀಟ್‌ಮೆಂಟ್ ಖಂಡಿತ ಇದೆ. ಆದ್ರೆ ತುಂಬಾ ಶಿಸ್ತಾಗಿ ಬದುಕಬೇಕು. ಸ್ವಲ್ಪ ಹೆಚ್ಚು ಕಮ್ಮಿ ಆದ್ರೂ ಜೀವಕ್ಕೆ ಅಪಾಯ...' ಚಂದ್ರೇಗೌಡ ಇಂಥ ಎಚ್ಚರಿಕೆಯ ಮಾತುಗಳನ್ನು ಕೇಳಿಸಿಕೊಂಡ 20 ದಿನಗಳ ನಂತರವೇ, ದಿಲ್ಲಿಯಿಂದ ನಿವೇದಿತಾ ಓಡಿ ಬಂದದ್ದು... ತನ್ನ ಅನಾರೋಗ್ಯದ ಕುರಿತು ಸಣ್ಣದೊಂದು ಸುಳಿವನ್ನೂ ಕೊಡದೆ ಚಂದ್ರೇಗೌಡ ಅವಳನ್ನು ವಾಪಸ್ ಕಳಿಸಿದ್ದು...
ನಿಜ ಹೇಳಬೇಕೆಂದರೆ, ನಿವೇದಿತಾ ಬಂದಿದ್ದ ದಿನ ಚಂದ್ರೇಗೌಡನೂ ಬಿಕ್ಕಳಿಸುತ್ತಿದ್ದ. ತನ್ನ ಸಂಕಟ ಅವಳಿಗೆ ಕಾಣಿಸದಿರಲಿ ಎಂಬ ಕಾರಣಕ್ಕೆ ಛತ್ರಿಯ ಕೆಳಗೆ ಒಬ್ಬನೇ ಇದ್ದ. ವಾಪಸ್ ಹೋಗಲು ಅವಳು ರೈಲು ಹತ್ತಿದಾಗ ಈತನಿಗೆ ಚೀರಿ ಅಳುವಷ್ಟು ಸಂಕಟವಾಯಿತು. ಅಂಥದೊಂದು ಸಂಕಟದ ಚಿತ್ರ ಅವಳ ಕಣ್ಣಲ್ಲಿ ಉಳಿಯದಿರಲಿ ಎಂಬ ಕಾರಣಕ್ಕೆ ದೂರದಿಂದಲೇ ಆಕೆಗೆ ಕೈ ಬೀಸಿದ್ದ!
----
ಈ ಕಥೆ ನಡೆದು 10 ವರ್ಷ ಕಳೆದಿದೆ. ಚಂದ್ರೇಗೌಡರು ಬಿಟ್ಟು ಹೋಗಿರುವ ಡೈರಿಯಲ್ಲಿರುವ ಈ ಸಾಲುಗಳನ್ನು ಓದುತ್ತಿದ್ದಂತೆ ಮೈಮನವೆಲ್ಲಾ ನಡುಗುತ್ತಿದೆ; ಖುಷಿಯಿಂದ, ಸಂಕಟದಿಂದ. ಹೇಳಲು ಮರೆತಿದ್ದೆ: ನನ್ನ ಹೆಸರು ನಿವೇದಿತಾ...

-ಎ.ಆರ್. ಮಣಿಕಾಂತ್
armanikanth@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com