ಜೆಡಿಎಸ್ನ ಶತ್ರು ಬಿಜೆಪಿಯೋ ಅಥವಾ ಕಾಂಗ್ರೆಸ್ಸೋ?
ಒಂದೊಮ್ಮೆ ಜನತಾ ದಳವನ್ನು ಕಾಂಗ್ರೆಸ್ಗೆ ಏಕೈಕ ಪರ್ಯಾಯವೆಂಬಂತೆ ನೋಡಲಾಗುತ್ತಿತ್ತು. ಅದಾಗ್ಯೂ ಇವೆರಡೂ ಪಕ್ಷಗಳ ನಡುವೆ ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಲಿಲ್ಲವಾದರೂ, ಜೆಡಿಎಸ್ ಕಾಂಗ್ರೆಸ್ಗೆ ಪ್ರತಿ ಚುನಾವಣೆಗಳಲ್ಲಿ ಪ್ರಬಲ ಸ್ಪರ್ಧೆಯನ್ನಂತೂ ಒಡ್ಡುತ್ತಿತ್ತು. ಜೆಡಿಎಸ್ನ ಹಿರಿಯ ತಲೆ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಷ್ಟೇ ಅಲ್ಲದೆ, ದೇಶದ ಪ್ರಧಾನಿಯೂ ಆದರು. ಆ ಸಮಯದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮೆಲ್ಲಗೆ ಆದರೆ ದೃಢವಾಗಿ ತನ್ನ ಬೇರುಗಳನ್ನು ಬಿಡತೊಡಗಿತ್ತು. ಇದು ಗೌಡರಿಗೂ ಗೊತ್ತಿತ್ತು. ಬಿಜೆಪಿಯನ್ನು ಅವರು ಬಲವಾಗಿ ವಿರೋಧಿಸುತ್ತಿದ್ದರು ಮತ್ತದನ್ನು ಸಾಧ್ಯವಾದಷ್ಟು ದೂರವೇ ಇಟ್ಟಿದ್ದರು. 2004ರಲ್ಲಿ ಗೊಂದಲಗೊಂಡ ಮತದಾರರು ಅತಂತ್ರ ವಿಧಾನಸಭೆಗೆ ಕಾರಣವಾದರು. ಬಿಜೆಪಿಗೆ ಹೆಚ್ಚು ಮತಗಳು ದೊರೆತವಾದರೂ ಸರ್ಕಾರ ರಚಿಸುವುದಕ್ಕೆ ಸಾಕಾಗುವಷ್ಟಲ್ಲ. ಆಗ ಅಖಾಡಕ್ಕೆ ಧುಮುಕಿದ ದೇವೇಗೌಡರು ಶತ್ರು ಪಕ್ಷ ಬಿಜೆಪಿಯನ್ನು ದೂರವಿಡಲು ಎದುರಾಳಿ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿ ಸಮ್ಮಿಶ್ರ ಸರ್ಕಾರ ರಚಿಸಲು ಮುಂದಾದರು. ಗೌಡರು ಕಿಂಗ್ ಮೇಕರ್ ಆಗಿ ಬದಲಾದರು. ಜೆಡಿಎಸ್ನ ಆರ್ಶಿರ್ವಾದವಿಲ್ಲದೆ ಭವಿಷ್ಯದಲ್ಲಿ ಯಾವೊಂದು ಪಕ್ಷಕ್ಕೂ ಸರ್ಕಾರ ರಚಿಸುವುದಕ್ಕೆ ಸಾಧ್ಯವಿಲ್ಲ ಎಂಬಂಥ ಭಾವನೆ ಎಲ್ಲರಲ್ಲಿ ಮೂಡಿತ್ತು. ಕಾಂಗ್ರೆಸ್ಗೆ ಜೆಡಿಎಸ್ನೊಂದಿಗೆ ಕೈಜೋಡಿಸದೆ ಬೇರೆ ಯಾವ ಆಯ್ಕೆಯೂ ಇರಲಿಲ್ಲ. ಆಗ ಮುಖ್ಯಮಂತ್ರಿಯಾದದ್ದು ಧರಮ್ಸಿಂಗ್.
ಗೌಡರು ತಮ್ಮ ಮಗ ಕುಮಾರಸ್ವಾಮಿಯವರನ್ನು ರಾಜ್ಯಘಟಕದ ಅಧ್ಯಕ್ಷರನ್ನಾಗಿ ಮಾಡಿದ ಮೇಲೆ ಚಿತ್ರಣ ಬದಲಾಯಿತು. ತಂದೆಗಿಂತಲೂ ಮಗನ ರಾಜಕೀಯ ವೈಖರಿ ಭಿನ್ನವಾಗಿತ್ತು. ಬಿಜೆಪಿಯನ್ನು ಪ್ರಬಲ ವೈರಿಯೆಂದು ಭಾವಿಸಿದ ತಂದೆ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿದರೆ, ರಾಷ್ಟ್ರಮಟ್ಟದಲ್ಲಲ್ಲದಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ಸೇ ತಮ್ಮ ಪಕ್ಷದ ನಂಬರ್1 ವೈರಿ ಎಂದರು ಕುಮಾರಸ್ವಾಮಿ. ಹಾಗೆ ನೋಡಿದರೆ ದೇವೇಗೌಡರು ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಾಗ 'ಸಿಎಂ ಸ್ಥಾನವೇನಿದ್ದರೂ ಜೆಡಿಎಸ್ಗೆ ಸಿಗಬೇಕು' ಎಂದಿದ್ದರು ಕುಮಾರಸ್ವಾಮಿ. ಅವರ ವಾದ ಸರಳವಾಗಿತ್ತು: ಕಾಂಗ್ರೆಸ್ ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ. ಹಾಗಾಗೆ ಜೆಡಿಎಸ್ಗೆ ಅಧಿಕಾರ ಸಿಗಬೇಕು ಮತ್ತು ಕಾಂಗ್ರೆಸ್ ಅಧಿಕಾರ ಹಂಚಿಕೆಯಲ್ಲಿ ತೃಪ್ತಿಪಟ್ಟುಕೊಳ್ಳಬೇಕು.
ಆದರೆ ದೇವೇಗೌಡರು ತಮ್ಮ ಮಗನ ಮಾತಿಗೆ ಒಪ್ಪಲಿಲ್ಲ. ಏಕೆಂದರೆ ಧರಮ್ಸಿಂಗ್ ತಮ್ಮ ವ್ಯಕ್ತಿ, ಅವರು ಸಿಎಂ ಆದರೆ ತಮ್ಮ ಮಾತನ್ನು ಕೇಳುತ್ತಾರೆ ಎನ್ನುವುದು ಅವರಿಗೆ ಗೊತ್ತಿತ್ತು. ಅವರಂದುಕೊಂಡಂತೆಯೇ ಆಯಿತು. ಧರಮ್ಸಿಂಗ್ ದೇವೇಗೌಡರಿಗೆ ನಿಷ್ಠೆಯಿಂದ ನಡೆದುಕೊಂಡರು. ಇಲ್ಲದಿದ್ದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುತ್ತಿದ್ದರು.
ಆದರೆ ಕುಮಾರಸ್ವಾಮಿಯವರಿಗೆ ಇದನ್ನೆಲ್ಲ ಅರಗಿಸಿಕೊಳ್ಳಲು ಆಗಲಿಲ್ಲ. 20 ತಿಂಗಳನ್ನು ಅವರು ಕಾರ್ಯತಂತ್ರಗಳನ್ನು ರಚಿಸುವುದರಲ್ಲೇ ಕಳೆದರು. ಒಂದು ಸರಿಯಾದ ದಿನದಂದು ಕಾಂಗ್ರೆಸ್ಗೆ ಕೈ ಕೊಟ್ಟ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಒಂದಾದರು. ಕೇಸರಿ ಪಕ್ಷದೊಂದಿಗೆ ಮೈತ್ರಿಮಾಡಿಕೊಂಡ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು 'ಯಾವ ಪಕ್ಷ ಕೋಮುವಾದಿ ಅಲ್ಲ ಹೇಳಿ?' ಎಂದು ಕೇಳಿದ್ದರು. ದೇವೇಗೌಡರಿಗೆ ಆಘಾತವಾಗಿತ್ತು. ಕಾಂಗ್ರೆಸ್ನೊಂದಿಗೆ ತಾವು ಮಾಡಿಕೊಂಡ ಮೈತ್ರಿ ಕುಸಿದುಬಿತ್ತು ಎಂಬುದಕ್ಕಲ್ಲ, ಬದಲಾಗಿ ಜೀವಮಾನವಿಡೀ ತಾವು ದ್ವೇಷಿಸುತ್ತಾ ಬಂದ ಬಿಜೆಪಿಯೊಂದಿಗೆ ತಮ್ಮ ಮಗ ಒಂದಾದನಲ್ಲ ಎನ್ನುವುದಕ್ಕೆ. ಆದರೆ ಕುಮಾರಸ್ವಾಮಿ ಬೆಜಿಪಿಯೊಂದಿಗೆ 20:20 ಸರ್ಕಾರ ರಚಿಸಿದ ತಕ್ಷಣ ದೇವೇಗೌಡ ಯು- ಟರ್ನ್ ಹೊಡೆದು ತಮ್ಮ ಮಗನ ಪ್ರದರ್ಶನವನ್ನು ಹೊಗಳತೊಡಗಿದರು. ಆದರೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ಸಮಯ ಬಂದಾಗ ತಮ್ಮ ಮಗನನ್ನು ಒತ್ತಾಯಿಸಿ, ಬಿಜೆಪಿಯೊಂದಿಗಿನ ಮೈತ್ರಿ ಸರ್ಕಾರ ಕೊನೆಯಾಗುವಂತೆ ಮಾಡಿದರು.
ಈ ನಿರ್ಧಾರ ಬಹಳ ದುಬಾರಿಯಾಗಿ ಪರಿಣಮಿಸಿತು. ಈ ವಿಶ್ವಾಸದ್ರೋಹದಿಂದಾಗಿ ಅನುಕಂಪದ ಅಲೆ ಬಿಜೆಪಿಯತ್ತ ಹರಿದುಬಂದಿತು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆ ಪಕ್ಷ ಅಧಿಕಾರಕ್ಕೆ ಬಂದಿತು. ಕಾಂಗ್ರೆಸ್ಗೆ ಪರ್ಯಾಯವಾಗಿದ್ದ ಜೆಡಿಎಸ್ ತನ್ನ ಹೆಸರು ಕೆಡಿಸಿಕೊಂಡಿತು. ಆದರೆ ಅಧಿಕಾರಕ್ಕೆ ಬಂದ ಬಿಜೆಪಿ ಒಳಜಗಳ, ಸ್ವಜನಪಕ್ಷಪಾತ, ಭ್ರಷ್ಟಾಚಾರದಿಂದಾಗಿ ಗಬ್ಬೆದ್ದುಹೋಯಿತು. ಇದೆಲ್ಲದರಿಂದಾಗಿ ದೊಡ್ಡ ಹೊಡೆತ ಬಿದ್ದಿದ್ದು ಆಡಳಿತಕ್ಕೆ. ಈ ವರ್ಷದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಬದಿಸರಿಸಿದರು, ರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದ್ದರೂ ಕೂಡ ರಾಜ್ಯ ಕಾಂಗ್ರೆಸ್ಗೆ ಬಹುಮತ ಕೊಟ್ಟರು. ಮತ್ತೊಮ್ಮೆ ಕಿಂಗ್ಮೇಕರ್ ಆಗುತ್ತೇನೆ ಎಂದು ಬೀಗುತ್ತಿದ್ದ ಜೆಡಿಎಸ್ಗೆ ಆಘಾತವಾಯಿತು.
ಲೋಕಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ಜೆಡಿಎಸ್ ಮತ್ತೆ ಸುದ್ದಿಯಲ್ಲಿದೆ. ಮತ್ತೆ ಸಕ್ರಿಯರಾಗಿರುವ ಕುಮಾರಸ್ವಾಮಿ 2006ರಲ್ಲಿಯಂತೆಯೇ ಮತ್ತೊಮ್ಮೆ ವರ್ತಿಸತೊಡಗಿದ್ದಾರೆ. ತಮ್ಮ ಮುಖ್ಯ ಉದ್ದೇಶ ಕಾಂಗ್ರೆಸ್ ಅನ್ನು ಸೋಲಿಸುವುದು, ಇದಕ್ಕಾಗಿ ಬಿಜೆಪಿಯೊಂದಿಗೆ ಬಾಹ್ಯ ಅಥವಾ ಆಂತರಿಕ ಒಪ್ಪಂದ ಮಾಡಿಕೊಳ್ಳುವುದಕ್ಕೂ (ತಮ್ಮ ತಂದೆಯ ಇಚ್ಛೆಗೆ ವಿರುದ್ಧವಾಗಿ) ತಾವು ಸಿದ್ಧ ಎಂದು ಹೇಳಿದ್ದಾರೆ. ಕಾಂಗ್ರೆಸ್ನ ಕೈ ಮೇಲಾಯಿತೆಂದರೆ ತಮ್ಮ ಪಕ್ಷದ ಕಥೆ ಮುಗಿಯಿತು ಎಂದು ಕುಮಾರಸ್ವಾಮಿ ಭಾವಿಸುತ್ತಾರೆ. 2006ರಿಂದ ಜೆಡಿಎಸ್ ಅನ್ನು ಕೊನೆಗಾಣಿಸುವುದನ್ನೇ ಕಾಂಗ್ರೆಸ್ ತನ್ನ ಏಕೈಕ ಗುರಿಯಾಗಿಸಿಕೊಂಡಿದೆ, ಆದರೆ ಹಾಗಾಗಲು ನಾನು ಬಿಡೆನು ಎಂದೂ ಹೇಳುತ್ತಿದ್ದಾರೆ. ಎಲ್ಲದಕ್ಕಿಂತಲೂ ಹೆಚ್ಚಾಗಿ, ಒಂದೊಮ್ಮೆ ಜೆಡಿಎಸ್ನ ಸಹೋದ್ಯೋಗಿ ಮತ್ತು ಈಗ ವಿರೋಧಿಯಾಗಿರುವ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿರುವುದರಿಂದ, ಜೆಡಿಎಸ್ಗೆ ಅಪಾಯ ಎದುರಾಗಿದೆ. ದೇವೇಗೌಡರ ಗೊಣಗಾಟಗಳೇನಿದ್ದರೂ ಕುಮಾರಸ್ವಾಮಿ ಅದಾಗಲೇ 21 ಆಗಸ್ಟ್ರಂದು ನಡೆಯಲಿರುವ ಬೆಂಗಳೂರು ಗ್ರಾಮಾಂತರದ ಎರಡು ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಜೆಡಿಎಸ್ ಪ್ರಬಲವಾಗಿರುವ ಈ ಎರಡೂ ಕ್ಷೇತ್ರಗಳಿಂದ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಹಿಂಪಡೆದಿದೆ. ಇದರ ಹಿಂದೆ, ಕಾಂಗ್ರೆಸ್ ವಿರೋಧಿ ಮತಗಳು ಹಂಚಿಹೋಗಬಾರದು ಎನ್ನುವ ಎಚ್ಚರಿಕೆ ಇದೆ. ಕಾಂಗ್ರೆಸ್ಸನ್ನು ಸೋಲಿಸಿ ಮುಂಬರಲಿರುವ ಲೋಕಸಭಾ ಚುನಾವಣೆಗಳಿಗೆ ಪ್ರಬಲವಾಗಿ ತಯಾರಾಗಲು ಇದರಿಂದ ಜೆಡಿಎಸ್ಗೆ ಅನುಕೂಲವಾಗಲಿದೆ.
ಕುಮಾರಸ್ವಾಮಿ ಬಹಳ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದ್ದಾರೆ. 2006ರಲ್ಲಿ ಅವರೆಬ್ಬಿಸಿದ ಬಿರುಗಾಳಿಯಿಂದ ಹೇಗೆ ಎಲ್ಲರೂ ಚಕಿತರಾಗಿದ್ದರೋ ನೆನಪಿಸಿಕೊಳ್ಳಿ. ಆಗಿನಂತೆಯೇ ಈಗಲೂ ಕೂಡ ತಮ್ಮ ತಂದೆ ಎಲ್ಲದಕ್ಕೂ ಅಸ್ತು ಎನ್ನುತ್ತಾರೆ ಎನ್ನುವ ನಂಬಿಕೆ ಅವರಿಗಿದೆ. ನಿಜಕ್ಕೂ ಜೆಡಿಎಸ್ಗೆ ಇದು ಪರೀಕ್ಷಾ ಸಮಯ. ಅದೀಗ ಗೊಂದಲದ ಚಕ್ರದೊಳಗೆ ಸಿಲುಕಿದೆ. ಅದರ ನಂಬರ್ 1 ಶತ್ರು ಯಾರು? ಬಿಜೆಪಿ ಎನ್ನುವುದು ತಂದೆಯ ವಾದವಾದರೆ, ಇಲ್ಲ ಕಾಂಗ್ರೆಸ್ ನಮ್ಮ ಶತ್ರು ಎನ್ನುತ್ತಾರೆ ಕುಮಾರಸ್ವಾಮಿ.
ಕೊನೆಯ ಗುಟುಕು: ಮಾನವೀಯತೆಯ ವಿಷಯದಲ್ಲಿ ನಿಮಗೆ ಅತ್ಯಂತ ಅಚ್ಚರಿ ಹುಟ್ಟಿಸುವ ಸಂಗತಿ ಯಾವುದು ಎಂದು ದಲೈಲಾಮಾರನ್ನು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ: 'ಮನುಷ್ಯ! ಏಕೆಂದರೆ ಹಣ ಗಳಿಸುವುದಕ್ಕಾಗಿ ಆತ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾನೆ. ನಂತರ ಕೆಟ್ಟ ಆರೋಗ್ಯವನ್ನು ಸರಿಪಡಿಸಿಕೊಳ್ಳಲು ಹಣ ಖರ್ಚು ಮಾಡುತ್ತಾನೆ. ಭವಿಷ್ಯದ ಬಗ್ಗೆ ಆತನಿಗೆ ಎಷ್ಟು ಚಿಂತೆಯಿರುತ್ತದೆಂದರೆ ವರ್ತಮಾನವನ್ನು ಆತ ಎಂದಿಗೂ ಅನುಭವಿಸುವುದಿಲ್ಲ. ಆತ ಭವಿಷ್ಯದಲ್ಲೂ ಬದುಕುವುದಿಲ್ಲ, ವರ್ತಮಾನದಲ್ಲೂ ಬದುಕುವುದಿಲ್ಲ. ತಾನು ಸಾಯುವುದೇ ಇಲ್ಲ ಎನ್ನುವಂತೆ ಆತ ಬದುಕುತ್ತಾನೆ. ನಂತರ ನಿಜವಾಗಿಯೂ ಬದುಕಲಾರದೆ ಸತ್ತು ಹೋಗುತ್ತಾನೆ.
- ಎಚ್.ಎಸ್. ಬಲರಾಮ್
hsbalram@gmail.com
(ಈ ಲೇಖನದ ಇಂಗ್ಲಿಷ್ ಅವತರಣಿಕೆ www.namma-bengaluru.org ಹಾಗೂ www.suvarnanews.tv/features ನಲ್ಲಿ ಕನ್ನಡ ಅಂಕಣ ಲಭ್ಯ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

