Hmm... ಪಾಂಚ್, ಸಿಟಿ ಬಸ್ಸಲ್ಲಿ ಸಿಕ್ಕ 'ರೇಸಿಸ್ಟ್‌'

Updated on: 

- ಅಲ್ರೀ, ಯಜಮಾನ್ರೇ, ನಿಮ್ ಕೈಯಲ್ಲಿರೋ ಬುಕ್ ನೋಡಿ, ಈ ವಯಸ್ಸಲ್ಲಿ ವಿಷ್ಣು ಸಹಸ್ರ ನಾಮ ಓದ್ತಾ ಇದೀರೇನೋ ಅಂದ್ಕೊಂಡ್ರೆ, ಇಲ್ಲಿ, ನಿಮ್ ಕೈಯಲ್ಲಿ ಅಶ್ವಾರೋಹಿಣಿ ಸೈನ್ಯನೇ ಇದೆ?
ಏನ್ ಮಾಡೋದಪ್ಪಾ, ಜೀವನ ಪೂರ್ತಿ ಅದೃಷ್ಟದ ವಿಷಯದಲ್ಲಿ ದೇವರು ಕೈ ಹಿಡೀಲಿಲ್ಲ. ಅದಕ್ಕೆ ಈಗ,
ಬೆಳಗ್ಗೆ ಎದ್ದು, ಕುದುರೆ ಮುಖ ನೋಡಿದ್ರಾದ್ರೂ, ನಸೀಬು ಕುದುರುತ್ತಾ ನೋಡೋಣ ಅಂತ.

- ನಿಮ್ದು. ಆದ್ರೆ, ಒಂದ್ ಮಾತು ನೆನಪಿರ್ಲಿ, ನಾಯಿ ಬಾಲ ಅಷ್ಟೇ ಅಲ್ಲ, ಕುದುರೆ ಬಾಲನೂ ಡೊಂಕೇ. ಅದ್ಸರಿ, ರೇಸ್‌ನಲ್ಲಿ ಇದೇ ಕುದುರೆ ಗೆಲ್ಲುತ್ತೆ ಅಂತ ಹೆಂಗೆ ಡಿಸೈಡ್ ಮಾಡ್ತೀರಿ?
ಅದು ತುಂಬಾ ಸಿಂಪಲ್, ಗೆದ್ದೆತ್ತಿನ ಬಾಲ ಹಿಡಿಯೋದು ಅಷ್ಟೇ. ಗೆದ್ರೆ, ಆನೆ ನಡೆದಿದ್ದೇ ಹಾದಿ, ಸೋತ್ರೆ, ಕತ್ತೆ ಬಾಲ, ಕುದುರೆ ಜುಟ್ಟು.

- ಓಹೋ, ಕಂಪ್ಲೀಟ್ ಪ್ರಾಣಿಪ್ರಿಯರು ನೀವು. ಆದ್ರೂ, ಎಷ್ಟ್ ಸಲ ಸೋತ್ರೂ ಮತ್ತೆ ಮತ್ತೆ ಕುದುರೆ ಹಿಂದೆ ಹೋಗ್ತಾನೇ ಇರ್ತೀರಲ್ಲ?
ನೀವು ಹುಡುಗರು ಎಷ್ಟ್ ಸಲ ಹಾಳಾದ್ರೂ ಮತ್ತೆ ಮತ್ತೆ ಹುಡುಗೀರಿಂದೆ ಹೋಗಲ್ವಾ ಇದೂ ಹಂಗೆ.

- ಸರಿ ಬಿಡಿ. ಎವ್ವೆರಿ ಹಾರ್ಸ್ ಹ್ಯಾಸ್ ಇಟ್ಸ್ ಡೇ. ಬಟ್, ಅಕಸ್ಮಾತ್ ನೀವು ಗೆದ್ರೂ, ಈ ವಯಸ್ಸಲ್ಲಿ ದುಡ್ಡು  ತಗೊಂಡು ಏನ್ರೀ ಮಾಡ್ತೀರಾ?
ಬರೀ, ದುಡ್ಡಿಗೋಸ್ಕರ ಅಂತೇನು ಅಲ್ಲ, ನಿಮಗೆ ಕಿವಿಗೆ ಇಯರ್‌ಫೋನ್ ಹಾಕ್ಕೊಂಡ್ ಹಾಡೋ ಕೇಳೋ ಚಟ ಇಲ್ವಾ? ಇದೂ ಹಂಗೆ.

- ಓಹೋ, ನಮಗೇ ಕೌಂಟರ್ರಾ. ಓಕೆ, ನಿಮ್ ಸ್ಟಾಪ್ ಬಂತು, ಅಲ್ಲಿ ನಿಮ್ ಕೌಂಟರ್ ಓಪನ್ ಆಗಿದೆ. ಹೋಗ್‌ಬನ್ನಿ. ಹೋಗೋಕ್ ಮುಂಚೆ ಕೊನೇ ಪ್ರಶ್ನೆ, ನಿಮಗೆ ಬರೀ ಈ ಕುದುರೆ ಹುಚ್ಚಷ್ಟೇ ಇರೋದಾ, ಹಾಡು ಕೇಳೋ, ಸಿನಿಮಾ ನೋಡೋ ಚಟ ಎಲ್ಲ ಇಲ್ವಾ, ಇದ್ರೆ, ನಿಮ್ಮ ಫೇವರೆಟ್ ಹಾಡು, ಸಿನಿಮಾ?
ಅದೂ ಇದೆ ಕಣ್ರೀ. ನನ್ ಫೇವರೆಟ್ ಹಾಡು: ಮೂರು ಕಾಸಿನ ಕುದುರೆ, ಏರಿ ಬಂದ ಓ ಚೆಲುವೆ. ಫೇವರೆಟ್ ಸಿನಿಮಾ: ಬಹದ್ದೂರ್ ಗಂಡು.
(ಕಾಲ್ಪನಿಕ ಸಂದರ್ಶನ)

ಒಮ್ಮೆ ಭೇಟಿ ಕೊಡಿ
ರೇಸ್‌ಕೋರ್ಸ್‌ನಲ್ಲಿ ಕುದುರೆಯ ಬಾಲದ ಹಿಂದೆ ಬೀಳುವುದಕ್ಕಿಂತ ಕಂಪ್ಯೂಟರ್‌ನಲ್ಲಿ ಕುದುರೆ ರೇಸ್ ಗೇಮ್ ಆಡಿ ಕುದುರೆ ವ್ಯಾಮೋಹ ಕಡಿಮೆ ಮಾಡಿಕೊಳ್ಳಬಯಸುವವರಿಗೆ ಇಲ್ಲೊಂದಿಷ್ಟು ಗೇಮ್‌ಗಳಿವೆ. ಕುಡುಕರಿಗೆ ಗೊತ್ತಿಲ್ಲದೆ ಕುಡಿತ ಬಿಡಿಸುವುದು ಹೇಗೆ ಎಂಬಂತೆ, ಇಂಥ ಆನ್‌ಲೈನ್ ಗೇಮ್ ಆಡಿಸಿ ನೋಡಿದ ಮೇಲಾದರೂ ರೇಸ್ ಹುಚ್ಚು ಉರುಳಿ ಹೋಗಬಹುದು. ಒಂದೇ ವ್ಯತ್ಯಾಸ ಅಂದ್ರೆ, ರೇಸ್‌ನಲ್ಲಿ ಬಾಜಿ ಕಟ್ಟೋದಷ್ಟೇ ನಿಮ್ ಕೆಲಸ, ಉಳಿದಂತೆ ನಿಮ್ ಕೈಯಲ್ಲಿ ಏನೂ ಇರಲ್ಲ, ಆದರೆ ಇಲ್ಲಿ, ಎಲ್ಲದರ ಫುಲ್ ಕಂಟ್ರೋಲ್ ನಿಮ್ಮ ಕೈಯಲ್ಲೇ ಇರುತ್ತೆ.
bit.ly/apm38T
bit.ly/vQ7MfJ
bit.ly/17eDXHG
bit.ly/6lTye
bit.ly/G8ten

ಹರಿ-ಕಥೆ
ರೇಸ್‌ಕೋರ್ಸ್‌ನಲ್ಲಿದ್ದ ಒಂದು ಕುದುರೆಗೆ ವಯಸ್ಸಾಯ್ತು ಅಂತ ಅದನ್ನು ಹೊರಗೆ ಹಾಕಿದ್ರು. ಪಾಪ ಅಷ್ಟು ವರ್ಷ ಅಲ್ಲಿ ಕೆಲಸ ಮಾಡಿದ ಕುದುರೆ ಬೇಜಾರು ಮಾಡ್ಕೊಂಡು ಅಲ್ಲಿಂದ ಹೊರಗೆ ಬಂತು. ಅಲ್ಲಿ ಪಕ್ಕದಲ್ಲೇ ಇದ್ದ ಗ್ರೌಂಡ್‌ನಲ್ಲಿ ಒಂದಷ್ಟು ಹುಡುಗರು ಕ್ರಿಕೆಟ್ ಆಡ್ತಿದ್ರು. ಈ ಕುದುರೆ ಕಾಂಪೌಂಡ್ ಹತ್ರ ನಿಂತ್ಕೊಂಡು ಮ್ಯಾಚ್ ನೋಡ್ತಾ ಇತ್ತು. ಬಾಲ್ ಬೌಂಡರಿ ಹತ್ರ ಬಂದಾಗ ಅದರ ಹಿಂದೆ ಓಡಿ ಬಂದ ಕ್ಯಾಪ್ಟನ್‌ನ ಕುದುರೆ ಕೇಳಿತು, 'ನೋಡಿ ನೋಡಿ ಸಾಕಾಯ್ತು, ನನ್ನನ್ನೂ ಆಟಕ್ಕೆ ಸೇರಿಸ್ಕೊಳ್ತೀಯಾ?'. ಕ್ರಿಕೆಟ್ ಟೀಮ್ ಕ್ಯಾಪ್ಟನ್‌ಗೆ,  ಕುದುರೆಗೆ ಕ್ರಿಕೆಟ್ ಆಡೋಕೆ ಬರುತ್ತಾ ಅಂತ ಡೌಟು. ಆದ್ರೂ ಒಂದ್‌ಸಲ ಕುದುರೆ ಮುಖ ನೋಡಿ, 'ಸರಿ ಬಾ' ಅಂದ. ಕುದುರೆ ಅವನಿಂದೆ ಬಾಲ ಅಲ್ಲಾಡಿಸಿಕೊಂಡ್ ಹೋಯ್ತು. ನೆಕ್ಸ್ಟ್ ಮ್ಯಾಚ್‌ನಲ್ಲಿ ಕ್ಯಾಪ್ಟನ್ ಟಾಸ್ ಗೆದ್ದು ಕುದುರೆನಾ ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಕಳಿಸಿದ. ಅದರ ಜೊತೆಗೆ ನಾನ್ ಸ್ಟ್ರೈಕರ್ ಜಾಗದಲ್ಲಿ ಅವನೇ ನಿಂತುಕೊಂಡ. ಮ್ಯಾಚ್ ಶುರುವಾಯ್ತು. ಬೌಲರ್ ಓಡಿ ಬಂದು ಬಾಲ್ ಎಸೆದ, ಕುದುರೆ ಬ್ಯಾಟ್ ತಿರುಗಿಸಿ ಮೊದಲ ಬಾಲಲ್ಲೇ ಸಿಕ್ಸರ್ ಹೊಡೀತು. ಎರಡನೇ ಬಾಲು ಬಂತು. ಅದೂ ಸಿಕ್ಸರ್. ಹೀಗೆ ಮೊದಲ ಓವರ್‌ನ ಆರು ಬಾಲೂ, ಆರು ಸಿಕ್ಸರ್ ಹೊಡೆದಾಗ ಕ್ಯಾಪ್ಟನ್ ಫುಲ್ ಖುಷ್. ಸರಿ ನೆಕ್ಸ್ಟ್ ಓವರ್‌ನಲ್ಲಿ ಕ್ಯಾಪ್ಟನ್ ಬ್ಯಾಟಿಂಗ್. ಫಸ್ಟ್ ಬಾಲ್‌ನಲ್ಲಿ ಅವನು ಸುಮ್ನೆ ಟಚ್ ಮಾಡಿ ಒಂದು ರನ್‌ಗಾಗಿ ಓಡಿದ. ಆದರೆ ಕುದುರೆ ರಿಯಾಕ್ಟ್ ಮಾಡಲಿಲ್ಲ. 'ಓಡು, ಓಡು' ಅಂತ ಕ್ಯಾಪ್ಟನ್ ಕೂಗಿಕೊಳ್ತಾನೇ ಇದ್ರು ಕುದುರೆ ತಲೆಕೆಡಿಸಿಕೊಳ್ಳದೆ ಅಲ್ಲೇ ನಿಂತಿತ್ತು. ಓಡಿ ಬಂದ ಕ್ಯಾಪ್ಟನ್ ರನ್ ಔಟ್ ಆದ. ಅವನಿಗೆ ಸಿಟ್ಟು ನೆತ್ತಿಗೇರಿತ್ತು. ಕುದುರೆ ಬಳಿ ಬಂದು ಬೈದು ಕೇಳಿದ 'ಅಲ್ಲಾ, ಈಸಿ ಸಿಂಗಲ್ ಇತ್ತು ಅಲ್ಲಿ. ಓಡು ಓಡು ಅಂತ ನಾನು ಅಷ್ಟೊಂದ್ ಬಡ್‌ಕೋತಾ ಇದ್ರೂ ಯಾಕೆ  ಓಡ್‌ಲಿಲ್ಲ ನೀನು? ಕಿವಿ ಕೇಳ್ಸಲ್ವಾ ನಿಂಗೆ?'. ಕುದುರೆ ಕೂಲ್ ಆಗಿ ಹೇಳಿತು 'ತಲೆ ಇದ್ಯಾ ನಿಂಗೆ?, ನಂಗೆ ಓಡೋ ಕೆಪ್ಯಾಸಿಟಿ ಇದ್ದಿದ್ರೆ, ನಾನು ರೇಸ್‌ಕೋರ್ಸ್‌ನಲ್ಲೇ ಇರ್ತಿದ್ದೆ, ಇಲ್ ಬಂದು ನಿನ್ ಜೊತೆ
ಡಬ್ಬಾ ಕ್ರಿಕೆಟ್ ಮ್ಯಾಚ್ ಆಡ್ತಿದ್ನಾ?'

ಸ್ಯಾಂಡಲ್‌ವುಡ್
ಮೈಸೂರು ಮಲ್ಲಿಗೆ, ಗಾಲಿ ಇನ್ನಿತರ ಕನ್ನಡದ ಕೆಲವು ಚಿತ್ರಗಳು ಸೂಸುತ್ತಿರುವ ಅಶ್ಲೀಲ ಪರಿಮಳದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಕೇಳಲಿಕ್ಕೆ ಅಸಹ್ಯ ಎನಿಸುವ ಈ 'ಗಾಲಿಸುದ್ದಿ', ಕೇಳಿದವರು ಒಮ್ಮೆ ಹಿಂದಿಯ 'ಗ್ರ್ಯಾಂಡ್ ಮಸ್ತಿ' ಚಿತ್ರದ ಟ್ರೈಲರ್ ನೋಡಿದರೆ ಇನ್ನಷ್ಟು ಹೌಹಾರುವುದು ನಿಜ. ಸದಭಿರುಚಿಗೆ ಗೋಲಿ ಮಾರೋ ಎನ್ನುವ ಈ ಸಿನಿಮಾ ಕೂಡಾ ಮೇಲೆ ಹೇಳಿದ ಕನ್ನಡದ ಯಾವುದೇ ಚಿತ್ರಕ್ಕೂ ಕಡಿಮೆ ಏನಿಲ್ಲ. ಇಲ್ಲಿನ್ನೂ ಪರವಾಗಿಲ್ಲ, ಹೇಳ ಹೆಸರಿಲ್ಲದ ಬಡಪಾಯಿ ನಟ ನಟಿಯರು ಇಂಥ ಚಿತ್ರಗಳಿಂದ ಹೆಸರು  ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅಲ್ಲಿ ದೊಡ್ಡ ಸ್ಟಾರ್‌ಗಳೇ ಬಾಯಿಗೆ ಬಂದಂತೆ ಬಾಯಿ ಬಿಟ್ಟಿದ್ದಾರೆ. ಹಾಗಂತ ಅದು ಇಲ್ಲಿನವರಿಗೆ ಸಮರ್ಥನೆಯಂತೂ ಆಗಲಾರದು ನಿಜ. ಅಲ್ಲದೆ, ಬಾಲಿವುಡ್‌ನಲ್ಲೂ ಇದೇನೂ ಹೊಸದಲ್ಲ. ಇಂಥ ಚಿತ್ರಗಳನ್ನು ಕದ್ದು ನೋಡುವ ಸಂಸ್ಕೃತಿ ಹೋಗಿ, ರಾಜಾರೋಷವಾಗಿ ನೋಡುವಂಥ ಪ್ರೇಕ್ಷಕರು ಸಿಕ್ಕ ಮೇಲೆ, ಅಲ್ಲೂ ಅಡಲ್ಟ್ ಕಾಮಿಡಿ ಚಿತ್ರಗಳು ಆಗಾಗ ಇಣುಕಿ ನೋಡುತ್ತಿವೆ. ದಕ್ಷಿಣ ಭಾರತದ ಟ್ರೆಂಡ್ ಅನ್ನು ಇತ್ತೀಚಿಗೆ ಬಾಲಿವುಡ್ ಚಿತ್ರರಂಗ ಕಾಪಿ ಮಾಡುತ್ತಿದೆ, ಎನ್ನುವುದಕ್ಕೆ ಇದೂ ಕೂಡ ಒಂದು ಉದಾಹರಣೆ ಆಗಬಹುದು. 

ಡಬ್ಕುಡಬಲ್ ತುದಾಂಡಲ್...
ಅಹಂ ಜಾಸ್ತಿ ಆಗಿ ಅವನಿಗೆ 'ಕಣ್ಣೇ ಕಾಣ್ಸಲ್ಲ' ಅಂತಾರಲ್ಲ ಅದರರ್ಥ, ಅವನು 'ಸೀ' ಲೆವೆಲ್‌ಗಿಂತ ಮೇಲಿದಾನೆ ಅಂತಾನಾ? ಅಥವಾ ಕೆಳಗಿದಾನೆ ಅಂತಾನಾ?
- ಜೂನಿಯರ್ ಡುಂಡಿ ಹೇಳಿದ್ದು
ಪ್ರೀತಿ ಪ್ರೇಮದಲ್ಲಿ ಬರಿ ನೋವೇ,
ಸುಖ, ಸಂತೋಷ ಃ್ಟ ಗಿಛಣ
- ನಂಬಲರ್ಹವಲ್ಲದ, ನಂಬಲು ಇಷ್ಟವೂ ಇಲ್ಲದ ಗಾಳಿಸುದ್ದಿ
ವೀಣಾ ಮಲ್ಲಿಕ್, ಪೂನಂ ಪಾಂಡೆ ಇಬ್ಬರೂ 'ಅಕ್ಕ ತಂಗಿ' ಪಾರ್ಟ್ 2 ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತಿದ್ದಾರಂತೆ.
- ರಾತ್ರಿ ಹೊತ್ತು ರೇಸಿಂಗ್ ಮಾಡೋ ಕುದುರೆಯನ್ನು ಏನೆನ್ನಬಹುದು?
ನೈಟ್‌ಮೇರ್
-ಸಾಲಗಾರರಿಂದ ತಪ್ಪಿಸಿಕೊಳ್ಳಲು ಯಾರಿಗೂ ಹೇಳದೆ ಕೇಳದೆ ಅರಬ್ ದೇಶಕ್ಕೆ ಓಡಿ ಹೋದ ಖೇಮು, ನಾನಿಲ್ಲಿದೀನಿ ಅಂತ ಹೆಂಡ್ತೀಗೆ ಫೋನ್ ಮಾಡಿದಾಗ, ಏರ್‌ಟೆಲ್ ಹುಡುಗಿಯ ವಾಯ್ಸ್ ಓವರ್ ಕೇಳಿ, ನಾನಿಲ್ಲಿರೋದು ಇವರಿಗೆಂಗೆ ಗೊತ್ತಾಯ್ತು ಅಂತ ಗಾಬರಿಯಾದ.
ಕಾರಣ, ಹೆಂಡ್ತಿ ಫೋನು ಬ್ಯುಸಿ ಇತ್ತು. ಹಾಗಾಗಿ ವಾಯ್ಸ್ ಓವರ್ ಬಂದಿತ್ತು: 'ಆಪ್ 'ಖತಾರ್‌' ಮೇ ಹೈ'
- 50 ವರ್ಷಗಳ ನಂತರ ಪಾಕಿಸ್ತಾನಿ ಸಿನಿಮಾವೊಂದು ಆಸ್ಕರ್‌ಗೆ ನಾಮಿನೇಟ್ ಆಗಿದೆ: ಸುದ್ದಿ
ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಪ್ರತಿಕ್ರಿಯೆ: ಇಲ್ಲ, ಅದು ಪಾಕಿಸ್ತಾನದ ಸರ್ಕಾರ ಕಳಿಸಿದ ಸಿನಿಮಾ ಅಲ್ಲ,
ತಾಲಿಬಾನ್ ಉಗ್ರರು ಕಳಿಸಿದ ವಿಡಿಯೋ ಟೇಪ್.

- ಹರಿ
harikannadaprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com