ಅಂಕಣಗಳು

ದಂಧೆಗೆಂದೇ ಗೊಂದಲ ಹುಟ್ಟಿಸುತ್ತಿದ್ದಾರೆಯೇ?

Published On :

ಪ್ರತಿ ತಿಂಗಳೂ ವಾರ್ಷಿಕ ಆದಾಯ ಏನೋ ಬದಲಾಗುತ್ತದೆ ನಿಜ. ಪ್ರತಿ ವರ್ಷ ಜಾತಿ ಸಹ ಬದಲಾಗುತ್ತದೆಯೇ?  ಈ ಪ್ರಶ್ನೆ ನಿಮಗೆ ಆಶ್ಚರ್ಯವಾಗಿರಬೇಕು ಅಲ್ಲವೇ? ಆದರೆ, ಬಹುಶಃ ಮೈಸೂರು ವಿಶ್ವವಿದ್ಯಾಲಯಕ್ಕೆ ಜಾತಿ ಸಹ ಬದಲಾಗಬಹುದೆನೋ ಅನ್ನಿಸುತ್ತಿದೆ ಇತ್ತೀಚೆಗೆ ವಿವಿ ಹೊರಡಿಸಿರುವ ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆ ಅರ್ಹತಾ ನಿಬಂಧನೆಗಳು ಓದಿದ ಮೇಲೆ. ಕೆ-ಸೆಟ್ ಪರೀಕ್ಷೆಗೆ ಮೀಸಲಾತಿ ಪಡೆಯಲು ಜಾತಿ ಪ್ರಮಾಣ ಪತ್ರ ಸಲ್ಲಿಸುವುದು ಸರಿಯಾದ ಕ್ರಮವೇ ಹೌದು. ಆದರೆ, ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ ಆರು ತಿಂಗಳು ಅವಧಿಯಲ್ಲಿ ಜಾತಿ ಪ್ರಮಾಣ ಪತ್ರ ಇರಬೇಕು.  ಜಾತಿ ಪ್ರಮಾಣ ಪತ್ರಗಳಲ್ಲಿ ಯಾವುದೇ ಅನರ್ಹತೆಗಳು ಕಂಡು ಬಂದರೆ, ಅಂತಹ ಅರ್ಜಿಗಳನ್ನು ಕೆ-ಸೆಟ್ ಕೇಂದ್ರವು ಯಾವುದೇ ಹಂತದಲ್ಲಾದರೂ ತಿರಸ್ಕರಿಸಲಾಗುವುದು ಎಂಬುವುದು ಎಷ್ಟು ಸರಿ...?
ವಿಶ್ವವಿದ್ಯಾಲಯಗಳ ಅನುದಾನ ಬಿಡುಗಡೆ ಮಾಡುವ ಯುಜಿಸಿ ನಡೆಸುತ್ತಿರುವ ನೆಟ್ ಪರೀಕ್ಷೆಗಳಿಗೆ ಈ ರೀತಿಯ ಯಾವುದೇ ಮಾನದಂಡ ಇಲ್ಲ. ನೀವು ಮೀಸಲಾತಿ ಪಡೆಯುವುದಾದರೇ ನಿಮ್ಮ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿ ಎಂದು ತಿಳಿಸಲಾಗಿದೆಯೆ ಹೊರತು. ಇಷ್ಟೇ ಕಾಲಾವಕಾಶವಿರಬೇಕು ಎಂಬುವುದು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಇಂದು ಜಾತಿ ಪ್ರಮಾಣ ಪತ್ರದ ಕಾಲಾವಧಿಯನ್ನೇ ಒಂದು ವರ್ಷದಿಂದ ಐದು ವರ್ಷ ವಿಸ್ತರಿಸಲು ಸರ್ಕಾರ ಚಿಂತಿಸುತ್ತಿದೆ. ಅಂತಹ ಸಂದರ್ಭದಲ್ಲಿ ಆರು ತಿಂಗಳ ಅವಧಿಯಲ್ಲಿರಬೇಕು ಎಂದಾದರೇ, ಪರೀಕ್ಷೆಗಾಗಿಯೇ ಜಾತಿ ಪ್ರಮಾಣ ಪತ್ರವನ್ನು ಹೊಸದಾಗಿ ಮಾಡಿಸಿಕೊಳ್ಳಬೇಕೆ? ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಳ್ಳುವುದು ಎಷ್ಟು ಕಷ್ಟ ಇದೆ ಎಂಬುವುದು ಕೇವಲ ತೆಗೆದುಕೊಂಡವನಿಗೆ ಮಾತ್ರವೇ ಗೊತ್ತು.
ಅಂದು ಸರ್ಕಾರ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ ವಿತರಿಸುತ್ತಿತ್ತು. ಅಲ್ಲದೆ, ಸಕಾಲ ಜಾರಿಗೆ ತಂದು ನಿಗದಿತ ಅವಧಿಯಲ್ಲಿ ಜಾತಿ ಪತ್ರ ನೀಡಬೇಕು ಎಂದು ತಿಳಿಸಿತ್ತು. ನೆಮ್ಮದಿ ಕೇಂದ್ರದ ಮುಂದಿರುವ ಸಾಲಿನಲ್ಲಿ ನಿಂತು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಕೊನೆ ಕ್ಷಣದಲ್ಲಿ 'ಸರ್ವರ್ ಡೌನ್‌' ನಾಳೆ ಬನ್ನಿ ಅಂತಾರೆ.  ಅಲ್ಲಿ ಸರ್ವರ್ ಡೌನ್ ಆಗಿದೆಯೋ ಅಥವಾ ಇಲ್ಲವೋ ಸಾಲಿನಲ್ಲಿ ನಿಂತವನಿಗೆ ತಿಳಿಯುವುದಿಲ್ಲ. ಇದರ ಹಿಂದಿನ ವಿಚಾರ ಏನು ಅಂದರೆ, ಅಭ್ಯರ್ಥಿ ಮಧ್ಯವರ್ತಿಯಿಂದ ಜಾತಿ ಪ್ರಮಾಣ ಪತ್ರ ಮಾಡಿಸಿಕೊಳ್ಳಲಿ ಎಂಬುವುದಾಗಿರುತ್ತದೆ. ಮಧ್ಯವರ್ತಿಗಳಿಗೂ ಇದೀಗ ಹೆಚ್ಚಿನ ಬೇಡಿಕೆ ಏಕೆಂದರೆ, ಎಂದು ನಮ್ಮ ಸರ್ಕಾರ ಆರ್‌ಟಿಇ ಸೀಟು ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯ ಮಾಡಿತೋ ಅಂದಿನಿಂದಲೂ ಹೆಚ್ಚಿನ ಹಣ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ನೆಮ್ಮದಿ ಕೇಂದ್ರದಲ್ಲಿ ಸಲ್ಲಿಸಿದರೆ ಕೇವಲ 15 ಮಾತ್ರ, ಮಧ್ಯವರ್ತಿಗೆ ನೀಡಿದಲ್ಲಿ ಮೊದಲು ನೀಡಬೇಕಾಗಿದ್ದ ಹಣ 250-350, ಇಂದು 600-700ಕ್ಕೆ ಏರಿಕೆ ಅಗಿದೆ. ಇಷ್ಟೆಲ್ಲಾ ಗುದ್ದಾಡಿ ಪ್ರಮಾಣ ಪತ್ರ ತರಬೇಕಾಗುತ್ತದೆ. ಜಾತಿ ಎಂದಿಗೂ ಬದಲಾಗದಿರುವುದರಿಂದ ಇದಕ್ಕೆ ಹಳೆಯ ಪ್ರಮಾಣ ಪತ್ರವನ್ನೇ ಕೆ-ಸೆಟ್ ಪಡೆದುಕೊಳ್ಳಬಹುದು ಅಲ್ವಾ?
ಇದು ಜಾತಿ ವಿಷಯವಾದರೆ ಇನ್ನು ಒಬ್ಬ ಸಾಮಾನ್ಯ ವರ್ಗದ ವಿದ್ಯಾರ್ಥಿಗೆ ಪರೀಕ್ಷೆ ನಡೆಸಲು 1000 ಪಡೆದುಕೊಳ್ಳುತ್ತಿರುವುದು ಮತ್ತೊಂದು ವಿಷಯವಾಗಿದೆ. ಯುಜಿಸಿ ನಡೆಸುವ ನೆಟ್ ಪರೀಕ್ಷೆಗಳಿಗೆ ಸಾಮಾನ್ಯ ವರ್ಗಕ್ಕೆ 450, ಹಿಂದುಳಿದ ವರ್ಗಕ್ಕೆ 225, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ 110 ನಿಗದಿ ಪಡಿಸಿದೆ. ಆದರೆ, ಕೆ-ಸೆಟ್‌ನಲ್ಲಿ ಸಾಮಾನ್ಯ ವರ್ಗಕ್ಕೆ 1000, ಹಿಂದುಳಿದ ವರ್ಗಕ್ಕೆ 800, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ 500 ನಿಗದಿ ಪಡಿಸಿದೆ.
ನಿಮಗೆ ಗೊತ್ತೆ? ರಾಜ್ಯ ಸರ್ಕಾರವೇ ನಡೆಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಪ್ರವೇಶ ಶುಲ್ಕ 1645 ಪರೀಕ್ಷಾ ಶುಲ್ಕಕ್ಕಿಂತ 645 ಮಾತ್ರವೇ ಹೆಚ್ಚಿದೆ. ಉದಾರಣೆಗೆ ನೆಟ್ ಮತ್ತು ಕೆ-ಸೆಟ್ ಎರಡಕ್ಕೂ ತುಲನೆ ಮಾಡಿ ನೋಡುವುದಾರೆ, ಯುಜಿಸಿ ಭಾರತದಲ್ಲಿ 94 ವಿಷಯಗಳಿಗೆ 79 ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಸುತ್ತದೆ. ಕೆ-ಸೆಟ್ 32 ವಿಷಯಗಳಲ್ಲಿ 11 ಪರೀಕ್ಷಾ ಕೇಂದ್ರಗಳಲ್ಲಿ ನಡೆಸುತ್ತದೆ.  ಹೀಗಿರುವಾಗ ಕಡಿಮೆ ಪರೀಕ್ಷಾ ಕೇಂದ್ರದಲ್ಲಿ ನಡೆಸುವವರಿಗೆ ಹೆಚ್ಚಿನ ಪ್ರವೇಶ ಶುಲ್ಕ ಏಕೆ ಬೇಕು?

- ದೇವರಾಜ್ ಎಲ್.
djtrupti@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.