ಅಂಕಣಗಳು

ಭಾರವಾಗುವ ಹೂವಿನ ಹಾರ!

Published On :

ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡರೊಬ್ಬರಿದ್ದಾರೆ. ಅವರಿಂದ ಹಾರ ಹಾಕಿಸಿಕೊಳ್ಳಲು ಪಕ್ಷದ ನಾಯಕರು ಹೆದರುತ್ತಾರೆ. ಏಕೆಂದರೆ ಆ ಹಾರ ಹಾಕಿದ ವ್ಯಕ್ತಿ ಹೇಳಿದ ಕೆಲಸ ಮಾಡಿಕೊಡದಿದ್ದಲ್ಲಿ ಅದು ಅಷ್ಟೊಂದು ಭಾರ ಎನಿಸಿಬಿಡುತ್ತದೆ. ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಚಿವರೊಬ್ಬರು ಬಂದರು. ಈ ಮುಖಂಡರು ಅವರಿಗೆ ಹಾರ ಹಾಕಿ ತಮ್ಮ ಪರಿಚಯ ಹೇಳಿಕೊಂಡರು. ಇಂಥ ಕೆಲಸ ಮಾಡಿಕೊಡುವಂತೆ ಕೋರಿದರು. ಸ್ವಲ್ಪ ಕಾನೂನು ಪ್ರಕಾರ ನಡೆಯುವ ಸಚಿವರು ಎನಿಸಿಕೊಂಡಿದ್ದ ಅವರು, ಇಲ್ಲಪ್ಪ, ಈ ಕೆಲಸ ಆಗದು ಎಂದು ಕೈಚೆಲ್ಲುತ್ತಿದ್ದಂತೆ ಈ ಮುಖಂಡ ಮಾಡಿದ್ದೇನು ಗೊತ್ತೆ. ಸಾರ್, ನನ್ನ ಕೆಲಸ ಮಾಡಿಕೊಡಲು ಆಗುವುದಿಲ್ಲ ಎನ್ನುವುದಾದರೆ ನಾನು ಹಾಕಿದ ಹಾರ ವಾಪಸ್ ಕೊಡಿ ಎಂದು ದುಂಬಾಲು ಬಿದ್ದ. ಇದೊಳ್ಳೆ ಪಜೀತಿ ಆಯ್ತಲ್ಲ ಎಂದುಕೊಂಡ ಆ ಸಚಿವರು ತಮ್ಮ ಆಪ್ತ ಸಹಾಯಕನಿಗೆ ಹಾರ ವಾಪಸ್ ಕೊಡಲು ಹೇಳಿದರು. ಆ ಸಚಿವರು ಅದೇ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದರಿಂದ ಹತ್ತಾರು ಮಂದಿ ಹಾರ ಹಾಕಿದ್ದರು. ಹೀಗಾಗಿ ಆತ ಹಾಕಿದ್ದ ಹಾರ ಯಾವುದೆಂದು ಗೊತ್ತಾಗಲಿಲ್ಲ. ಆಪ್ತ ಸಹಾಯಕ ಯಾವುದೋ ಹಾರ ತಂದು ಆ ಮುಖಂಡನ ಕೈಗಿಟ್ಟ. ಆ ಮುಖಂಡ ಸ್ವೀಕರಿಸಲಿಲ್ಲ. ಬದಲಿಗೆ ನಾನು ಹಾಕಿದ್ದು ಈ ಹಾರ ಅಲ್ಲ ಎಂದು ನಿರಾಕರಿಸಿದ. ನಂತರ ಆತ ಸಮಾಧಾನವಾಗಬಹುದೇನೋ ಎಂದು ಗುಲಾಬಿ, ನಂತರ ಶ್ರೀಗಂಧದ ಹಾರ ತಂದು ಕೊಡಲಾಯಿತು. ನಾನು ಹಾಕಿದ್ದು ಮಲ್ಲಿಗೆ ಹೂವಿನ ಹಾರ. ಅದೇ ಹಾರ ಬೇಕು ಎಂದು ಪಟ್ಟು ಹಿಡಿದ. ಅಂತಿಮವಾಗಿ ಹೂಮಾಲೆಗಳ ರಾಶಿಯಲ್ಲಿ ಹುಡುಕಿ ಮಲ್ಲಿಗೆ ಹಾರವನ್ನು ತೆಗೆದು ಆತನ ಕೈಗಿತ್ತು ಅಲ್ಲಿಂದ ಸಾಗಹಾಕಲಾಯಿತು. ಹೀಗಾಗಿ ಈತನ ಬಳಿ ಹಾರ ಹಾಕಿಸಿಕೊಳ್ಳುವ ಮುನ್ನ ಮುಖಂಡರು ಇದನ್ನು ನೆನಪಿಸಿಕೊಳ್ಳುತ್ತಾರೆ. ಇಲ್ಲವೇ ಅವರಿಗೆ ಪರಿಚಯವಿರುವ ಕಾರ್ಯಕರ್ತರೇ ನೆನಪಿಸುತ್ತಾರೆ. ಸಂಸದರೊಬ್ಬರಂತೂ ಈ ಮುಖಂಡನನ್ನು ಕಂಡಕೂಡಲೇ ಈತ ಹಾಕಿದ ಹಾರ ಹುಷಾರಾಗಿ ಎತ್ತಿಡಪ್ಪ. ಕೆಲ್ಸ ಮಾಡಲ್ಲ ಅಂದ್ರೆ ವಾಪಸ್ ಕೇಳ್ತಾನೆ ಅಂತಾ ಜೋಕ್ ಮಾಡುತ್ತಾರೆ!

ಮೈಸೂರಿನಲ್ಲೊಬ್ಬ ಕದಿಯುವ ಕಾರ್ಯಕರ್ತ!
ಮೈಸೂರಿನಲ್ಲಿ ಕಳೆದ ವಾರ ಸರಗಳ್ಳನೊಬ್ಬ ಸಿಕ್ಕಿಬಿದ್ದ. ಈತ ರಾಜಕೀಯ ಪಕ್ಷವೊಂದರ ಯುವ ಘಟಕದ ಪದಾಧಿಕಾರಿ. ರಾಜ್ಯಮಟ್ಟದ ನಾಯಕರು ಬಂದಾಗ ನಗರದಲ್ಲಿ ಯಾವುದೇ ಉತ್ಸವ, ಸಭೆ, ಸಮಾರಂಭಗಳು ಆದಾಗ ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹೀರಾತು ಹಾಕಿಸುತ್ತಿದ್ದ. ಆತ ಸರ ಎಗರಿಸುವಾಗ ಮಾಲು ಸಮೇತ ಸಿಕ್ಕಿಬಿದ್ದು ಮಾವನ ಮನೆ ಸೇರುತ್ತಿದ್ದಂತೆಯೇ ಮೊದಲು ಈತ ಪಕ್ಷದ ಕಾರ್ಯಕರ್ತ, ಎಸ್.. ಎಸ್.. ಎನ್ನುತ್ತಿದ್ದ ಮುಖಂಡರು ಈಗ ಈತ ನಮ್ಮ ಪಕ್ಷದ ಕಾರ್ಯಕರ್ತನಲ್ಲ ಎಂದು ನೋ.. ನೋ.. ಎನ್ನುತ್ತಿದ್ದಾರೆ.

ಪತ್ರಕರ್ತರನ್ನು ಸಭೆಯಿಂದ ಹೊರ ಹಾಕಿದ ಹುಕ್ಕೇರಿ!
ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಇತ್ತೀಚೆಗೆ ಬೆಳಗಾವಿಯಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿತ್ತು. ಜಿಲ್ಲಾಧ್ಯಕ್ಷರ ಆಹ್ವಾನದಂತೆ ಪತ್ರಕರ್ತರು ವರದಿಗಾಗಿ ತೆರಳಿದ್ದರು. ಆರಂಭದಲ್ಲೇ ತಡೆದ ಸಚಿವ ಪ್ರಕಾಶ ಹುಕ್ಕೇರಿ ಮೀಸೆ ಮೇಲೆ ಕೈಯಾಡಿಸುತ್ತ, ತೋಳು ಮೇಲೇರಿಸಿ ಪತ್ರಕರ್ತರನ್ನು ಹೊರ ದಬ್ಬಲು ಶುರು ಮಾಡಿದರು. ಪತ್ರಕರ್ತರು ಎಷ್ಟೇ ವಿನಂತಿಸಿಕೊಂಡರೂ ಹುಕ್ಕೇರಿ ಅವರು ಮಾತ್ರ ತಣ್ಣಗಾಗಲಿಲ್ಲ. ಸಭೆ ಎಲ್ಲ ಮುಗಿಸಿಕೊಂಡು ಬಂದ ಹುಕ್ಕೇರಿ ಅವರು ನಗುನಗುತ್ತಾ 'ಏನ್ರಿ ಅಣ್ಣರ ಸಭೆಯಲ್ಲಿ ಚರ್ಚೆ ನಡೆದ ವಿಷಯ ಕುರಿತು ಸ್ಟೇಟ್ ಮೆಂಟ್ ತಗೊಳ್ಳುದಲ್ಲನ' ಎಂದರು. ಇದರಿಂದ ಕೆರಳಿದ ಪತ್ರಕರ್ತರು 'ನಿಮ್ಮ ಸ್ಟೇಟ್‌ಮೆಂಟೂ ಬೇಡ, ಏನೂ ಬೇಡ ಹೋಗ್ರಿ' ಎಂದು ದೂರ ಸರಿದರು. ಅಷ್ಟರಲ್ಲೇ ಹೊರಗೆ ಬಂದ ಕಾಂಗ್ರೆಸ್ ವೀಕ್ಷಕ ಎಚ್.ಎಂ.ರೇವಣ್ಣ, ಪ್ರಕಾಶ ಹುಕ್ಕೇರಿ ವರ್ತನೆ ಬಗ್ಗೆ ಕ್ಷಮೆ ಕೇಳಿ ವಿಷಯ ದೊಡ್ಡದ ಮಾಡಬ್ಯಾಡ್ರಿ ಎಂದು ಕೈ ಮುಗಿದರು. ಪತ್ರಕರ್ತರಲ್ಲೊಬ್ಬರು ಕಾಂಗ್ರೆಸ್‌ನದು ಯಾವಾಗಲೂ ಬೀದಿ ಜಗಳ. ಈಗ್ಯಾಕ ಗರ್ಭಗುಡಿ ಸಂಸ್ಕೃತಿ ಬೆಳೆಸಿಕೊಳ್ಳುತ್ತೀರಿ ಎಂದು ಮೆಲ್ಲಗೆ ನುಡಿದಾಗ, ಇನ್ನೊಬ್ಬ ಪತ್ರಕರ್ತ,  ಅಯ್ಯೋ ಬಿಜೆಪಿ ಜಗಳ ಬೀದಿ ಪಾಲಾದ ಮೇಲೆ ತಮಗ ಪ್ರತಿಸ್ಪರ್ಧಿ ಬಂದರು ಅಂತಾ ಈಗ ಇವರು ಗರ್ಭಗುಡಿ ಸಂಸ್ಕೃತಿ ಬೆಳೆಸಿಕೊಳ್ಳುತ್ತಿದ್ದಾರೆ ಎಂದಾಗ ರೇವಣ್ಣ ಸೇರಿದಂತೆ ಎಲ್ಲರೂ ಗೊಳ್ಳನೆ ನಕ್ಕರು!

ಪಾಟೀಲದ್ವಯರ ಕಾಟಕ್ಕೆ ಎದ್ದು ಹೋದ ಸಿಎಂ!

ಒಡಲು ತುಂಬಿಕೊಂಡಿರುವ ಆಲಮಟ್ಟಿ ಅಣೆಕಟ್ಟೆಗೆ ಬಾಗಿನ ಅರ್ಪಿಸಿದ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಐಟಿ ಬಿಟಿ ಸಚಿವ ಎಸ್.ಆರ್.ಪಾಟೀಲ, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರನ್ನು ಅಕ್ಕಪಕ್ಕ ಕೂಡಿಸಿಕೊಂಡು ತಮ್ಮ ಸರ್ಕಾರದ ನಿಲುವು, ಸ್ಪಂದನೆ, ಬಜೆಟ್‌ನಲ್ಲಿ ತಾವು ನೀಡಿದ ಮೊತ್ತ, ಕೃಷ್ಣೆಯ ಬಗೆಗಿನ ಕಳಕಳಿ ವಿವರಿಸುತ್ತಿದ್ದರು. ಆದರೆ, ಮಧ್ಯೆ ಎದುರಾಗುತ್ತಿದ್ದ ಪತ್ರಕರ್ತರ ಪ್ರಶ್ನೆಗೆ ಇನ್ನೇನು ಸಿಎಂ ಉತ್ತರಿಸಬೇಕು ಎನ್ನುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಎಂ.ಬಿ. ಪಾಟೀಲ ವಿವರಣೆಗೆ ಶುರುವಿಟ್ಟುಕೊಳ್ಳುತ್ತಿದ್ದರು. ಮತ್ತೆ ಪ್ರಶ್ನೆ ಎದುರಾದಾಗ ಎಸ್.ಆರ್. ಪಾಟೀಲ ಬಾಯಿ ಹಾಕಿ ಪ್ರಾಯಶಃ ಅದೇನಪಾ ಅಂದ್ರೆ ಎಂದು ರಾಗ ಎಳೆಯುತ್ತಿದ್ದರು. ಪ್ರಶ್ನೆ ಮುಗಿಯುವ ಮುನ್ನವೇ ಇವರ ಉತ್ತರ ಶುರುವಾಗುತ್ತಿತ್ತು. ಉತ್ತರಿಸಲು ಸಿದ್ದರಾಮಯ್ಯ ತುಟಿ ಬಿಚ್ಚುತ್ತಿದ್ದಂತೆ ಅವರಿಗೇ ಮಾಹಿತಿ ನೀಡಲು ಕಿವಿ ಕಚ್ಚುತ್ತಿದ್ದರು. ಹತ್ತಾರು ಪ್ರಶ್ನೆಗಳಿಗೆ ಅವರೇ ಉತ್ತರ ನೀಡಿದರು. ಸಿದ್ದರಾಮಯ್ಯ ಮೂಕಪ್ರೇಕ್ಷಕರಾದರು. ಪ್ರಶ್ನೆ ಕೇಳುತ್ತಿದ್ದ ಪತ್ರಕರ್ತರಿಗೆ ತಾವು ಯಾರಿಗೆ ಕೇಳುತ್ತಿದ್ದೇವೆ ಎನ್ನುವ ಗೊಂದಲ ಕಾಡಿದರೆ, ಈ ಪತ್ರಿಕಾಗೋಷ್ಠಿ ನಡೆಸುತ್ತಿರುವುದು ನಾನಾ, ಇವರಾ ಎನ್ನುವ ಗೊಂದಲ ಸಿದ್ದರಾಮಯ್ಯ ಅವರನ್ನೂ ಬಿಡಲಿಲ್ಲ. ಬರೀ ಕಿವಿ ಕಚ್ಚುವುದಲ್ಲ. ಮಧ್ಯದಲ್ಲಿ ಬಾಯಿ ಹಾಕುವುದು, ವಿವರಣೆ ನೀಡುವುದರಲ್ಲಿ ಇಬ್ಬರೂ ಪಾಟೀಲರು ಅಕ್ಷರಶಃ ಪೈಪೋಟಿಗೆ ಇಳಿದಿದ್ದರು. ಇಬ್ಬರ ವಿವರಣೆ ಏಕಕಾಲಕ್ಕೆ ಶುರುವಾಗುತ್ತಿದ್ದರಿಂದ ಯಾರು ಏನು ಮಾತನಾಡುತ್ತಿದ್ದಾರೆ, ಯಾವ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ ಎನ್ನುವುದು ಯಾರಿಗೂ ಅರ್ಥವಾಗಲಿಲ್ಲ. ಪಾಟೀಲದ್ವಯರ ಪಾಂಡಿತ್ಯಕ್ಕೆ ಬೆರಗಾದ ಸಿದ್ದರಾಮಯ್ಯ, ಈಗಾ ತಾಯಿ ಕೃಷ್ಣೆಗೆ ಬಾಗಿನ ಅರ್ಪಿಸಿದ್ದೀನಿ. ಈ ಜಿಲ್ಲೆಯ ಜನತೆಯನ್ನು ಸುಖ, ಶಾಂತಿಯಿಂದ ಇಡುತ್ತಾಳೆ ಎನ್ನುತ್ತ ಅಕ್ಕಪಕ್ಕದಲ್ಲಿದ್ದ ಪಾಟೀಲದ್ವಯರನ್ನು ದುರುಗುಟ್ಟಿ ನೋಡಿ ಎದ್ದು ಹೋದರು!

- ನಂಬಿರಾಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.