ಅನುಕೂಲಕ್ಕೊಬ್ಬ ಅಣ್ಣ ಸಿಕ್ಕಿದರೆ ಅಷ್ಟೇ ಸಾಕಂತೆ...

Updated on: 

ರಾಜ್ಯದಲ್ಲಿ ಈಗ ನಡೆಯುತ್ತಿರುವುದು ಎಂಟೇ ತಿಂಗಳ ಅವಧಿ ಇರುವ ಎರಡು ಲೋಕಸಭೆ ಕ್ಷೇತ್ರಗಳ ಉಪಚುನಾವಣೆ ಹಾಗೂ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಪ್ರತಿನಿಧಿಗಳ ಆಯ್ಕೆ.
ಅಗತ್ಯವೇ ಇಲ್ಲದಿದ್ದ ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ ಕೆರಳಿಸಿರುವ ಆಸಕ್ತಿ, ಜಿದ್ದಾಜಿದ್ದಿನ ಜಂಗೀ ಕುಸ್ತಿಗೆ, ಪಕ್ಷಗಳ ಅತಿರಥ ಮಹಾರಥರು ಸಿದ್ಧವಾಗುತ್ತಿರುವ ರೀತಿ- ನೀತಿ ಹಾಗೂ ಅದಕ್ಕೆ ಸಿಗುತ್ತಿರುವ ಪ್ರಚಾರವನ್ನು ಗಮನಿಸಿದರೆ, ಈ ಚುನಾವಣೆಯ ಫಲಿತಾಂಶ ರಾಜ್ಯದ ರಾಜಕೀಯದ ಭವಿಷ್ಯವನ್ನೇ ನಿರ್ಧರಿಸುತ್ತದೆ ಎನ್ನುವ ಭಾವನೆ ಮೂಡಲೂ ಬಹುದು. ವಾಸ್ತವದಲ್ಲಿ ಅಂತಹದ್ದೇನೂ ಆಗುವುದಿಲ್ಲ. ಫಲಿತಾಂಶ ಏನೇ ಆದರೂ ಸಿದ್ದರಾಮಯ್ಯ ಅವರ ಕುರ್ಚಿ ಭದ್ರ. ದೇವೇಗೌಡರ ಪ್ರತಿಷ್ಠೆಯೂ ಕಡಿಮೆಯಾಗಲ್ಲ. ಮಂಡ್ಯ- ಬೆಂಗಳೂರು ಗ್ರಾಮೀಣ ಕ್ಷೇತ್ರಗಳ ಚುನಾವಣೆ ಇನ್ನೊಂದು ವಾರದಅನಂತರ ಬೀಸಿ ಹೋದ ಬಿರುಗಾಳಿಯಂತೆಯೇ ಆಗುತ್ತದೆ.
ಅಲ್ಲಿಯವರೆಗೆ ಪ್ರಚಾರ ಸಮರವಂತೂ ಮುಂದುವರಿಯಲೇಬೇಕಲ್ಲ. ಈಗ ಕಂಡುಬಂದಿರುವಂತೆ ಲೋಕಸಭೆ- ವಿಧಾನ ಪರಿಷತ್ತುಗಳ ಉಪ ಚುನಾವಣೆಯಲ್ಲಿ ಸದ್ಯಕ್ಕೆ ತಾತ್ಕಾಲಿಕವಾಗಿಯಾದರೂ ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಐಕ್ಯರಂಗದ ರಚನೆಯಾದಂತೆಯೇ ಆಗಿದೆ. ಈ ಭಾವನೆ ರಾಜಕೀಯವಾಗಿ ಗಟ್ಟಿಯಾಗಿ ಉಳಿದೀತೆ ಎನ್ನುವ ಪ್ರಶ್ನೆ ಬೇರೆ. ಈಗಂತೂ ಇರುವ ಪರಿಸ್ಥಿತಿ ಅದೇ. ಮಂಡ್ಯ- ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರಗಳಲ್ಲಿ ಹಿಂದೆ ಜಾತ್ಯತೀತ ಜನತಾದಳ ಏಕಾಂಗಿಯಾಗಿ ಗೆದ್ದಿತ್ತು. ಗೆದ್ದ ಅಭ್ಯರ್ಥಿಗಳು ನಾಲ್ಕು ವರ್ಷದ ನಂತರ ವಿಧಾನ ಸಭೆಯ ಸದಸ್ಯರಾಗಿ ಆಯ್ಕೆಯಾಗಿ ಲೋಕಸಭೆ ಸ್ಥಾನಗಳನ್ನು ಖಾಲಿ ಮಾಡಿದಾಗ, ಹಿಂದಿನಂತೆ ಏಕಾಂಗಿಯಾಗಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸ ಪಕ್ಷಕ್ಕೆ ಇದ್ದಂತಿಲ್ಲ. ಅದಕ್ಕೇ, ಮನಸ್ಸಿಲ್ಲದ ಮನಸ್ಸಿನಿಂದ ರಾಜಕೀಯದಲ್ಲಿ, ಅದರಲ್ಲೂ ಚುನಾವಣೆ ರಾಜಕೀಯದಲ್ಲಿ, ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದೆನ್ನುವ ಮಾತಿನ ಮೂಲಕ ಅನುಕೂಲ ಸಿಂಧು, ಅವಕಾಶವಾದವನ್ನು ಎತ್ತಿ ಹಿಡಿಯುವ ಪ್ರಯತ್ನ ನಡೆದಿದೆ. ಅನುಕೂಲಕ್ಕೆ ಸಿಕ್ಕಿದವರೇ ಅಣ್ಣಂದಿರಾಗಿದ್ದಾರೆ. ಪ್ರತ್ಯಕ್ಷವಾಗಿ ಭಾರತೀಯ ಜನತಾ ಪಾರ್ಟಿಯ ಮುಖಂಡರು ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿ, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರ ಪರವಾಗಿ ಪ್ರಚಾರ ಮಾಡುತ್ತಾರೆ. ಮಂಡ್ಯದಲ್ಲೂ ಬಿಜೆಪಿ ನಾಯಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಮುಂದಾಗಬಹುದು. ಆದರೆ ಅಲ್ಲಿ ಅವರ ಶಕ್ತಿ ಶೂನ್ಯ.
ಕರ್ನಾಟಕ ಜನತಾ ಪಾರ್ಟಿಯ ನಾಯಕ, ಯಡಿಯೂರಪ್ಪ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ನಿಲ್ಲುವುದು, ಲೋಕಸಭೆ ಚುನಾವಣೆಯಲ್ಲಿ ಭಾವನಾತ್ಮಕವಾಗಿ ಜೆಡಿಎಸ್ ಜತೆ ನಿಲ್ಲುವುದು ಒಂದು ರೀತಿಯಲ್ಲಿ ವಿಚಿತ್ರವಾದರೂ ಅದು ಸತ್ಯ. ಮತದಾನದ ದಿನದ ಬೆಂಬಲಕ್ಕಾಗಿ ಎಲ್ಲ ಪಕ್ಷಗಳೂ ಅನುಕೂಲಕ್ಕೆ ಆಗುವ ಗೋಚರ, ಅಗೋಚರ ಅಣ್ಣಂದಿರನ್ನು ಹುಡುಕುತ್ತಿರುವುದು ನಿಜಕ್ಕೂ ಒಂದು ವಿಪರ್ಯಾಸವೇ.
ಶಿವಕುಮಾರ- ಕುಮಾರಣ್ಣ:  ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ನಡೆದಿರುವುದು ಡಿ.ಕೆ. ಶಿವಕುಮಾರ್ (ಅವರ ತಮ್ಮ ಡಿ.ಕೆ. ಸುರೇಶ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ) ಹಾಗೂ ದೇವೇಗೌಡ- ಕುಮಾರಸ್ವಾಮಿ ಅವರ ನಡುವಣ ವೈಯಕ್ತಿಕ ಪ್ರತಿಷ್ಠೆಯ ಸಂಘರ್ಷ. ಇಲ್ಲಿ ಕಾಂಗ್ರೆಸ್ ಗೆದ್ದರೆ, ಶಿವಕುಮಾರ್ ಮಂತ್ರಿಯಾಗುವುದು, ಅವರಿಗೆ ಮುಖ್ಯವಾದರೂ ಜನರ ಪಾಲಿಗೇನೂ ಅದು ಮುಖ್ಯವಲ್ಲ. ಶಿವಕುಮಾರ್- ಕುಮಾರಸ್ವಾಮಿ ನಡುವಣ ಜಗಳ ವಿಧಾನ ಮಂಡಲದಲ್ಲೂ ಮುಂದುವರಿಯುತ್ತದೆ. ದೇವೇಗೌಡರಿಗಂತೂ ಈ ಕ್ಷೇತ್ರದಲ್ಲಿ ತಮ್ಮ ವೈಯಕ್ತಿಕ ಪ್ರತಿಷ್ಠೆಯ ರಕ್ಷಣೆಗೆ 83ರ ಇಳಿ ವಯಸ್ಸಿನಲ್ಲೂ ಬೀದಿಗಿಳಿದು ಹೋರಾಡಬೇಕಾದ ಸ್ಥಿತಿ ಇದೆಯಂತೆ. ಅದೇ ರೀತಿಯಾಗಿ ಕಾರಣವೇ ಇಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರೋಧಿಗಳೆಲ್ಲ ಒಂದಾಗಿ, ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ, ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದಲೇ ಕೆಳಗಿಳಿಸುವ ಹುನ್ನಾರ ನಡೆಸಿದ್ದಾರೆನ್ನುವ ಅನುಮಾನ ಪಡುತ್ತಿರುವಂತಿದೆ. ವಾಸ್ತವ ಸ್ಥಿತಿ ಹಾಗಿಲ್ಲ.
ಒಂದು ಉಪ ಚುನಾವಣೆಯಲ್ಲಿ ಸೋತ ಮಾತ್ರಕ್ಕೇ ಯಾರೂ ಈ ದೇಶದಲ್ಲಿ ಮುಖ್ಯಮಂತ್ರಿಯ ಸ್ಥಾನವನ್ನು ಕಳೆದುಕೊಂಡಿಲ್ಲ. ಆದರೂ ಇಂತಹ ಅನುಮಾನದಿಂದಲೇ ಸಿದ್ದರಾಮಯ್ಯ ಅವರು ಪ್ರಚಾರ ಸಮರದಲ್ಲಿ ತಮ್ಮ ರಾಜಕೀಯ ಜೀವನದ ಘನತೆ- ಗಾಂಭೀರ್ಯಕ್ಕೆ ತಕ್ಕದ್ದಲ್ಲದ ಮಾತುಗಳನ್ನು ಬಳಸುತ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಸಿದ್ದರಾಮಯ್ಯ ಅವರನ್ನೇ ತಮ್ಮ ಹರಿತ ಟೀಕೆಗೆ ಗುರಿ ಮಾಡಿದ್ದಲ್ಲಿ ವಿಶೇಷವೇನೂ ಇಲ್ಲ. ಮುಖ್ಯಮಂತ್ರಿಯನ್ನಲ್ಲದೇ ಇನ್ನೇನು ಅಭ್ಯರ್ಥಿಗಳನ್ನು ಟೀಕಿಸಲಿಕ್ಕಾಗುತ್ತೇನು? ಸಿದ್ದರಾಮಯ್ಯ ತಮ್ಮ ಪ್ರಚಾರ ಭಾಷಣಗಳನ್ನು ಅಥವಾ ಪತ್ರಿಕಾ ಗೋಷ್ಠಿಯ ಮಾತುಗಳನ್ನು ಚುನಾವಣೆಗೆ ಸೀಮಿತಗೊಳಿಸಿದ್ದರೆ, ಅವರ ವಿರುದ್ಧದ ಟೀಕೆಗೆ ಬೆಲೆಯೇ ಇರುತ್ತಿರಲಿಲ್ಲ. ಮುಖ್ಯಮಂತ್ರಿಯಾಗಿ ಅವರೂ ತಮ್ಮ ನಾಲಿಗೆಯನ್ನು ಹರಿಯಲು ಬಿಟ್ಟಿದ್ದರಿಂದ ಚುನಾವಣೆ, ಜಗಳದ ಸ್ವರೂಪವನ್ನು ಪಡೆದುಕೊಂಡಿದೆ. ಈಗ ಅದನ್ನು ತಪ್ಪಿಸುವುದು ಸಾಧ್ಯವಿಲ್ಲ. ಆದರೆ ಮಂಡ್ಯದ ಚುನಾವಣೆ ಪ್ರಚಾರ ಸಮರದಲ್ಲಿ ಏನೇನೂ ರಾಜಕೀಯ ವಿಷಯವೇ ಇಲ್ಲ. ಅಲ್ಲಿ ಚಲನಚಿತ್ರ ಕಲಾವಿದೆ ರಮ್ಯಾ ಕಾಂಗ್ರೆಸ್ ಅಭ್ಯರ್ಥಿ. ಮಂಡ್ಯದ ರಾಜಕೀಯ ರಂಗದಲ್ಲಿ, ಕಾಂಗ್ರೆಸ್ಸಿನಲ್ಲೂ ಅತಿರಥ ಮಹಾರಥರಿದ್ದಾರೆ. ಆದರೆ ಅವರು ಪರಸ್ಪರ ಮಾತಾಡುವುದು ಕಡಿಮೆ. ಮಾತಾಡಿದರೆ ಜಗಳವೇ.
ಹೀಗಾಗಿ ಯಾರ ವಿರೋಧವನ್ನೂ ಕಟ್ಟಿಕೊಳ್ಳದ ರಮ್ಯಾ ಕಾಂಗ್ರೆಸ್ ಅಭ್ಯರ್ಥಿಯಾದರು. ಅವರೇನೂ ಕಣ್ಣು ಮುಚ್ಚಿ ರಂಗಕ್ಕೆ ಧುಮುಕಲಿಲ್ಲ. ರಾಜಕೀಯ ರಂಗ ಪ್ರವೇಶದ ಪರಿಣಾಮವನ್ನು ಕುರಿತು ಸಾಕಷ್ಟು ಯೋಚನೆ ಮಾಡಿದ್ದಾರೆ. ಕೆಲವು ವಿಚಾರಗಳಲ್ಲಿ ಕಾಂಗ್ರೆಸ್ನಿಂದ ಆಶ್ವಾಸನೆಯನ್ನೂ ಪಡೆದಿದ್ದಾರೆ. ಅವರ ಆಯ್ಕೆಯನ್ನು ಕಾಂಗ್ರೆಸ್ಸಿನ ಈಗಿನ ಸರ್ವಶಕ್ತ ಉಪಾಧ್ಯಕ್ಷ ರಾಹುಲ ಗಾಂಧಿ ಅವರೂ ಒಪ್ಪಿದ್ದಾರೆಂದು ವರದಿಗಳು ತಿಳಿಸಿವೆ. ಈಗ ಮಂಡ್ಯದಲ್ಲಿ ಕಾಂಗ್ರೆಸ್ ಚುನಾವಣೆ ಯಂತ್ರದ ಚಾಲಕ ಚಿತ್ರನಟ, ಮಂತ್ರಿ ಅಂಬರೀಷ್. ಅವರೂ ರಾಜಕೀಯ ವಿವಾದಗಳಿಂದ ದೂರವೇ. ಆದರೆ ರಮ್ಯಾ ಪ್ರಾಯಶಃ ನಿರೀಕ್ಷಿಸದೇ ಇದ್ದಿದ್ದು, ಅವರ ಜನ್ಮ ಕುರಿತ ವಿಚಾರವನ್ನು ಜೆಡಿಎಸ್ನ ಕೆಲವು ನಾಯಕರು ದೊಡ್ಡ ರೀತಿಯಲ್ಲಿ ಪ್ರಸ್ತಾಪ ಮಾಡುವುದನ್ನು. ರಮ್ಯಾ ಸಾಕು ತಂದೆ, ಈ ಸಂದರ್ಭದಲ್ಲೇ ನಿಧನರಾಗಿದ್ದಾರೆ. ಪ್ರಚಾರ ಸಭೆಗಳಲ್ಲೂ ರಮ್ಯಾ ಕಣ್ಣೀರನ್ನು ಒರೆಸಿಕೊಂಡೇ ಓಡಾಡುವಂತಾಗಿದೆ. ಅವರು ಆ ವಿಚಾರದಲ್ಲಿ ಬಹಿರಂಗವಾಗಿ ಏನನ್ನೂ ಹೇಳದೇ ಹೋದರೂ, ದೇವನೂರು ಮಹಾದೇವ ಅವರಂತಹ ಸಾಮಾಜಿಕ ಮುಂದಾಳುಗಳು ಈಗ ರಮ್ಯಾ ಬೆಂಬಲಕ್ಕೆ ನಿಂತಿರುವುದು ಸಾಮಾನ್ಯವಾದ ವಿಚಾರವಲ್ಲ.
ಮಂಡ್ಯ ಜಿಲ್ಲೆಯ ಗಂಭೀರ, ವಯೋವೃದ್ಧ ನಾಯಕ ಎಸ್.ಎಂ. ಕೃಷ್ಣ ಅವರೂ ಪ್ರಚಾರಕ್ಕೆ ಬರುವುದು ಖಂಡಿತ. ಮುಖ್ಯಮಂತ್ರಿ ಸಹಜವಾಗಿಯೇ ಮಂಡ್ಯದ ಚುನಾವಣೆಗೆ ಹೆಚ್ಚು ಗಮನ ಕೊಟ್ಟಿರುವಂತಿದೆ. ಆದರೆ ಅಲ್ಲಿ ಅವರು ತಮ್ಮ ರಾಜಕೀಯ ಪ್ರತಿಷ್ಠೆಯನ್ನೇ ಪಣವಾಗಿಡುವ ಅಗತ್ಯವೇನೂ ಇಲ್ಲ.
ಕಿಡಿಗೇಡಿತನ: ಸಂಸತ್ತಿನಲ್ಲಿ ರಾಬರ್ಟ್ ವಾಧ್ರಾ ಅವರ ಭೂಮಿ ವ್ಯವಹಾರದ ಪ್ರಸ್ತಾಪದ ಚರ್ಚೆಯ ಕಾಲದಲ್ಲಿ ಬಿಜೆಪಿಯ ಸೋನಿಯಾ ವಿರೋಧಿ ನಿಲವನ್ನು ಮುಲಾಯಂ ಸಿಂಗ್ ಯಾದವ್ ಹಾಗೂ ಮಾಯಾವತೀ ಅವರಿಬ್ಬರೂ ಸೋನಿಯಾ ಗಾಂಧಿ ಅವರ ಬೆಂಬಲಕ್ಕೆ ನಿಂತಿದ್ದರಲ್ಲಿ ಆಶ್ಚರ್ಯವೇನಿದೆ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com