ಅಂಕಣಗಳು

ಮೂರ್ತಿಪೂಜೆ ವಿರೋಧಿಸಲು ಇವರಿಗ್ಯಾವ ಹಕ್ಕಿದೆ?

Published On :

ಹಿಂದೂಗಳ ಪೈಕಿ ಹೆಚ್ಚಿನವರಿಗೆ ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ಇದೆ. ಹಾಗೆಯೇ, ದೇವರ ಅಸ್ತಿತ್ವವನ್ನು ಪ್ರಶ್ನಿಸುವ ನಾಸ್ತಿಕರ ಸಂಖ್ಯೆಯೂ ಕೂಡ ಸಾಕಷ್ಟಿದೆ. ದೇವರು ಸರ್ವಶಕ್ತ. ಅವನು ಸರ್ವಾಂತರ್ಯಾಮಿ. ಆತ ಅದೃಶ್ಯವಾಗಿದ್ದುಕೊಂಡೇ ನಮ್ಮನ್ನು ಸಲಹುತ್ತಾನೆ ಎಂದು ಆಸ್ತಿಕರು ವಾದಿಸುತ್ತಾರೆ. ದೇವರನ್ನು ಮೆಚ್ಚಿಸಬೇಕು, ಅವನ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಪ್ರಾರ್ಥನೆಯ ಮೂಲಕ ಭಗವಂತನನ್ನು ತಲುಪಬಹುದು ಎಂಬುದು ಆಸ್ತಿಕರೆಲ್ಲರ ಸಾಮಾನ್ಯ ನಂಬಿಕೆ. ದೇವರ ಆರಾಧನೆಯ ವಿಷಯವಾಗಿ ಒಂದೊಂದು ಧರ್ಮಕ್ಕೂ ಒಂದೊಂದು ರೀತಿಯ ರೀತಿ ನೀತಿಗಳಿವೆ.
ಜಗತ್ತಿನ ಅತಿ ಪ್ರಾಚೀನ ಧರ್ಮ ಎಂಬ ಹೆಗ್ಗಳಿಕೆ ಹಿಂದೂ ಧರ್ಮಕ್ಕಿದೆ. ಈ ಧರ್ಮದಲ್ಲಿ ಭಗವಂತನನ್ನು ತಲುಪಲು ಹಲವು ದಾರಿಗಳಿವೆ. ಹಿಂದೂಗಳ ನಂಬಿಕೆಯ ಪ್ರಕಾರ, ಪ್ರತಿಯೊಂದು ಜೀವಕ್ಕೂ 'ಆತ್ಮ' ಎಂಬುದು ಇರುತ್ತದೆ. ಕಾಲಾನುಕ್ರಮದಲ್ಲಿ ವ್ಯಕ್ತಿಯೊಬ್ಬ ಮುದುಕನಾಗಿ ಕಡೆಗೊಮ್ಮೆ ಸತ್ತು ಹೋಗುತ್ತಾನಲ್ಲ: ಆಗ ದೇಹ ಅಳಿಯುತ್ತದೆ. ಆತ್ಮ ಉಳಿಯುತ್ತದೆ ಎಂಬುದು ಹಿಂದೂಗಳ ಖಚಿತ ನಂಬಿಕೆ. ವ್ಯಕ್ತಿಯೊಬ್ಬ ನಿಧನ ಹೊಂದಿದಾಗ, ಆತನ ಆತ್ಮ ಬೇರೊಂದು ಜೀವವನ್ನು ಸೇರಿಕೊಳ್ಳುತ್ತದೆ ಎಂಬ ನಂಬಿಕೆಯೂ ಪ್ರಚಲಿತದಲ್ಲಿದೆ. ಧರಿಸುವ ಬಟ್ಟೆಯೊಂದು ಹಳೆಯದಾದಾಗ ನಾವು ಅದನ್ನು ಕಳಚಿ ಮೂಲೆಗೆಸೆದು ಹೊಸ ಬಟ್ಟೆಗೆ ಕೈ ಚಾಚುತ್ತೇವಲ್ಲ; ಅಂಥದೇ ಕೆಲಸವನ್ನು ಆತ್ಮವೂ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆತ್ಮಕ್ಕೆ ಶಾಂತಿ ಸಿಗುವವರೆಗೂ ಅದು ಹೀಗೆಯೇ ಒಂದು ಜೀವದಿಂದ ಮತ್ತೊಂದು ಜೀವಕ್ಕೆ ಜಿಗಿಯುತ್ತಿರುತ್ತದೆಂದೂ, ಶಾಂತಿ ಸಿಕ್ಕಿದ ಮರುಕ್ಷಣವೇ ಅದು ಭಗವಂತನಲ್ಲಿ ಲೀನವಾಗುತ್ತದೆ ಎಂದೂ ಹೇಳುತ್ತಾರೆ.
ಈಗಿನ ವಿಪರ್ಯಾಸವೆಂದರೆ, ನಾಸ್ತಿಕರು ಹಾಗೂ ದೇವರು ಒಬ್ಬನೇ ಎಂದು ವಾದಿಸುವ ಅನ್ಯಧರ್ಮೀಯರು ಒಟ್ಟಾಗಿ ಸೇರಿಕೊಂಡು ಹಿಂದೂಧರ್ಮವನ್ನು ಹಿಗ್ಗಾಮುಗ್ಗಾ ಟೀಕಿಸಲು ಆರಂಭಿಸಿದ್ದಾರೆ. ಲಂಗುಲಗಾಮಿಲ್ಲದ ಅವರ ಟೀಕೆಗೆ ಮುಖ್ಯ ಕಾರಣ, ಉಳಿದ ಧರ್ಮಗಳಲ್ಲಿ ಇರುವಂತೆ ಹಿಂದೂಧರ್ಮದ ಸಂಸ್ಥಾಪಕ ಇಂಥವನೇ ಎಂಬ ಉಲ್ಲೇಖ ಇಲ್ಲದಿರುವುದು. ಎಲ್ಲರಿಗೂ ಗೋತ್ತಿರುವಂತೆ, ಹಿಂದೂ ಧರ್ಮದ ರೀತಿ-ನೀತಿಗಳು, ಪಾಲಿಸಲೇಬೇಕಾದ ನಿಯಮಗಳು, ಸಂದರ್ಭಕ್ಕೆ ಅನುಗುಣವಾಗಿ ಜಾರಿಯಾಗಬೇಕಾದ ಕಟ್ಟುಪಾಡುಗಳು ಇತ್ಯಾದಿ ವಿಷಯವಾಗಿ ಯಾವುದೇ ಲಿಖಿತ ದಾಖಲೆಯ ಬಲ ಹಿಂದೂಧರ್ಮಕ್ಕಿಲ್ಲ. ಜಗತ್ತಿನ ಪ್ರತಿಯೊಬ್ಬ ಮನುಷ್ಯನೂ ತುಂಬ ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲ ರೀತಿ ನೀತಿಗಳು ಹಿಂದೂಧರ್ಮದಲ್ಲಿವೆ. ಅದೇ ಈ ಧರ್ಮದ ಹೆಗ್ಗಳಿಕೆ. ಅದನ್ನು ಗಮನಿಸಿಯೇ ಹಿರಿಯರು-'ಹಿಂದೂಯಿಸಂ ಎಂಬುದು ಧರ್ಮವಲ್ಲ, ಅದೊಂದು ಜೀವನ ವಿಧಾನ' ಎಂದು ಸಂಭ್ರಮದಿಂದ ಉದ್ಗರಿಸಿದ್ದರು. ದೇವರು ಒಬ್ಬನೇ ಎಂದು ವಾದಿಸುವ ಉಳಿದ ಧರ್ಮಗಳಿಗಿಂತ, ಹೆಚ್ಚಿನ ಬದುಕುವ ಸ್ವಾತಂತ್ರ್ಯ ಹಿಂದೂಧರ್ಮದಲ್ಲಿದೆ ಎಂಬುದನ್ನು ಹಿಂದೂಗಳಲ್ಲ; ಅನ್ಯಧರ್ಮೀಯರೇ ಒಪ್ಪಿಕೊಳ್ಳುತ್ತಾರೆ.
ಪ್ರಾರ್ಥನೆಯ ಮೂಲಕ, ಆರಾಧನೆಯ ಮೂಲಕ ದೇವರನ್ನು ತಲುಪಲು, ಆ ಮೂಲಕ 'ಮುಕ್ತಿ ಪಡೆಯಲು' ಸಾಧ್ಯ ಎಂಬುದು ಹಿಂದೂ ಧರ್ಮದ ಸಾರ. ಇಲ್ಲಿ ಆರಾಧನೆ ಎಂದರೆ ಭಗವಂತನಿಗೆ ಶರಣಾಗುವುದು, ತನ್ನ ಮನಸ್ಸಿನ ನಿವೇದನೆಯನ್ನು ದೈವಕ್ಕೆ ಹೇಳಿಕೊಳ್ಳುವುದು. ಎಲ್ಲರೂ ಬಲ್ಲಂತೆ ಹಿಂದೂಧರ್ಮವೆಂಬುದು ನೂರೆಂಟು ಪೌರಾಣಿಕ ಕಥೆ, ಉಪಕಥೆಗಳ ತೊಟ್ಟಿಲು. ಒಂದೊಂದು ಕತೆಯಲ್ಲೂ ಹತ್ತಾರು ದೇವರುಗಳುಂಟು. ಅಷ್ಟಲ್ಲದೆ ಭಾರತದ ಪ್ರತಿ ಹಳ್ಳಿಯಲ್ಲೂ ಈ ನೆಲಕ್ಕೆ ಸಂಬಂಧಿಸಿದ ದೇವತೆಗಳು ಕಾಣಿಸುವುದುಂಟು. ಪರಿಣಾಮ ಏನಾಗಿದೆಯೆಂದರೆ, ಹಿಂದೂ ಧರ್ಮದಲ್ಲಿ ಸಾವಿರಕ್ಕೂ ಹೆಚ್ಚು ದೇವತೆಗಳಿವೆ ಎಂಬ ಸಂಗತಿ ಜಗಜ್ಜಾಹೀರಾಗಿದೆ. ಹಿಂದೂಧರ್ಮವನ್ನು ಟೀಕಿಸುವ ಮಂದಿ ಈ ವಿಷಯವನ್ನೇ ಪಟ್ಟಾಗಿ ಹಿಡಿದುಕೊಂಡು- ದೇವರ ವಿಷಯದಲ್ಲಿ ಇಂಥವನೇ ಶ್ರೇಷ್ಠ. ಇಂಥವನೇ ಸರ್ವಶಕ್ತ ಎಂಬ ಖಚಿತ ನಿಲುವೇ ಹಿಂದೂಗಳಿಗಿಲ್ಲ. ಹಾಗಿರುವಾಗ ಅವರ ಆರಾಧನೆಗೆ ಅರ್ಥವೇನಿದೆ ಎನ್ನುತ್ತಿದ್ದಾರೆ. ಅಂಥವರಿಗೆ, ತಕ್ಷಣವೇ ಹೇಳಬೇಕಾದ ಮಾತಿದು: ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು, ಆರಾಧಿಸುವ ದೇವರುಗಳೆಲ್ಲ ಸರ್ವಶಕ್ತರು ಎಂಬುದೇ ಹಿಂದೂಧರ್ಮದ ಸಾರ, ಸರ್ವಸ್ವ.
ಧರ್ಮ-ಕರ್ಮದ ಆಚರಣೆಯಿಂದ ದೇವರನ್ನು ತಲುಪಲು, ಅಂದರೆ ಮೋಕ್ಷ ಪಡೆಯಲು ಸಾಧ್ಯ ಎಂಬುದು ಹಿರಿಯರು ಹೇಳಿದ ಮಾತು. ಇಲ್ಲಿ ಧರ್ಮ ಎಂದರೆ, ಹಿಂದೂ ಧರ್ಮ ಎಂದು ಅರ್ಥವಲ್ಲ. ಧರ್ಮ ಆಚರಿಸುವುದು ಎಂದರೆ ಸದಾಶಯದ ಚಿಂತನೆಯೊಂದಿಗೆ, ಪರೋಪಕಾರ ಸ್ವಭಾವದೊಂದಿಗೆ ಬದುಕುವುದು ಎಂದು ಅರ್ಥ. ಪರಹಿತವನ್ನು ಬಯಸುತ್ತ, ಅದರಲ್ಲಿಯೇ ಸಾರ್ಥಕತೆ ಕಾಣುವವನಿಗೆ ದೈವದ ಅನುಗ್ರಹ ದೊರೆಯುತ್ತದೆ.  ಆತನಿಗೆ ಖಂಡಿತವಾಗಿಯೂ ಮೋಕ್ಷ ಸಿಗುತ್ತದೆ ಎಂಬುದು ವೇದ, ಪುರಾಣಗಳಲ್ಲೆಲ್ಲ ಕೇಳಿ ಬಂದಿರುವ ಮಾತು.
ಈಗ ಕರ್ಮದ ವಿಚಾರಕ್ಕೆ ಬರೋಣ. ಇಲ್ಲಿ ಕರ್ಮ ಎಂದರೆ ಕೆಲಸ ಎಂದು ಅರ್ಥ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಒಂದೊಂದು ಕೆಲಸ ನಿಗದಿಯಾಗಿರುತ್ತದೆ. ತಮ್ಮ ಪಾಲಿನ ಕೆಲಸವನ್ನು ಪ್ರತಿಯೊಬ್ಬರೂ ಶ್ರದ್ಧೆ, ಭಕ್ತಿ ಮತ್ತು ಪ್ರೀತಿಯಿಂದ ಮಾಡಬೇಕು. ಅಂಥವರಿಗೆ ಮಾಡುವ ಕೆಲಸದಲ್ಲಿ ತಾದ್ಯಾತ್ಮತೆ ಲಭಿಸುತ್ತದೆ ಹಾಗೂ ಭಗವಂತನ ಹಾರೈಕೆಯೂ ಲಭಿಸುತ್ತದೆ ಎಂಬುದೂ ಹಳೆಯ ಕಾಲದ ಮಾತೇ. ಇದಕ್ಕೆ ಉದಾಹರಣೆಯಾಗಿ ಪುರಾಣದ ಕತೆಯೊಂದಿದೆ: ಜಗತ್ತಿನಲ್ಲಿರುವ ಸಮಸ್ತ ವಿಷ್ಣು ಭಕ್ತರ ಪೈಕಿ ನಂಬರ್‌ಒನ್ ವಿಷ್ಣುಭಕ್ತ ಯಾರಿರಬಹುದು ಎಂಬ ಅನುಮಾನ ಅದೊಮ್ಮೆ ನಾರದ ಮಹರ್ಷಿಗಳಿಗೆ ಬಂತು. ದಿನವಿಡೀ ನಾರಾಯಣ ನಾರಾಯಣ ಎಂದು ಹೇಳುವಾತ ತಾನೇ ಆಗಿರುವುದರಿಂದ ನಂಬರ್ ಒನ್ ವಿಷ್ಣುಭಕ್ತನ ಪಟ್ಟ ನನಗೇ ಸಿಗುತ್ತದೆ ಎಂದೂ ನಾರದರ ನಂಬಿಕೆಯಾಗಿತ್ತು. ಈ ಮಾತನ್ನು ಭಗವಂತನಿಂದಲೇ ಹೇಳಿಸಬೇಕು ಎಂದುಕೊಂಡ ಅವರು ಸೀದಾ ವೈಕುಂಠಕ್ಕೆ ಹೋದರು. 'ದೇವಾ, ಈ ಜಗತ್ತಿನಲ್ಲಿರುವವರ ಪೈಕಿ ನಂಬರ್ ಒನ್ ವಿಷ್ಣುಭಕ್ತ ಯಾರು ಎಂದರು. ಭಗವಂತ ಒಮ್ಮೆ ಮುಗುಳ್ನಕ್ಕ. ನಂತರ, ನಾರದರ ನಿರೀಕ್ಷೆಗೆ ವಿರುದ್ಧವಾಗಿ, ಭೂಲೋಕದಲ್ಲಿದ್ದು ಒಬ್ಬ ಸಾಮಾನ್ಯ ರೈತನ ಹೆಸರು ಹೇಳಿಬಿಟ್ಟ. ಆ ರೈತ, ಬೆಳಗ್ಗೆ ತನ್ನ ವ್ಯವಸಾಯದ ಕೆಲಸ ಆರಂಭಿಸುವುದಕ್ಕೂ ಮೊದಲು ಒಂದು ಬಾರಿ ಮಾತ್ರ ಓಂ ನಮೋ ನಾರಾಯಣಾಯ ಎಂದು ಹೇಳುತ್ತಿದ್ದ. ಅಷ್ಟೆ. ಅಂಥವನು, ಇಡೀ ದಿನ, ಇಡೀ ವರ್ಷ ನಾರಾಯಣ ನಾರಾಯಣ ಎನ್ನುವ ತನಗಿಂತ ದೊಡ್ಡ ಭಕ್ತನಾಗಲು ಹೇಗೆ ಸಾಧ್ಯ ಎಂದು ನಾರದರು ವಿಷ್ಣುವನ್ನೇ ಪ್ರಶ್ನಿಸಿದರು. ಆಗ ದೇವರು, ಒಂದು ಬಟ್ಟಲಿನ ತುಂಬಾ ಎಣ್ಣೆ ತುಂಬಿ, ಅದನ್ನು ನಾರದನ ಕೈಗಿಟ್ಟು ಹೇಳಿದ: 'ಈ ಬಟ್ಟಲನ್ನು ಹಿಡಿದುಕೊಂಡು ವೇಗವಾಗಿ ಓಡುತ್ತ ಭೂಮಿಯನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಬಾ. ಒಂದು ಷರತ್ತು ಏನೆಂದರೆ-'ಈ ಬಟ್ಟಲಿನಿಂದ ಎಣ್ಣೆ ಒಂದೇ ಒಂದು ಹನಿ ಕೂಡ ಚೆಲ್ಲಿ ಹೋಗಬಾರದು. ಹಿಂತಿರುಗಿ ಬಂದಾಗ ನಿನ್ನ ಪ್ರಶ್ನೆಗೆ ಉತ್ತರ ಹೇಳ್ತೇನೆ...'
ತಮಗಿದ್ದ ತಪಃಶಕ್ತಿಯನ್ನೆಲ್ಲ ಬಳಸಿಕೊಂಡು ನಾರದರು ತುಂಬ ವೇಗವಾಗಿ ಭೂಮಿಯನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ಆನಂತರ ಹೆಮ್ಮೆಯಿಂದ ವಿಷ್ಣುವಿನ ಮುಂದೆ ನಿಂತರು. ಆಗ ಭಗವಂತ ಮುಗುಳ್ನಕ್ಕು ಕೇಳಿದ: ನಾರದಾ, ನೀನು ಪ್ರದಕ್ಷಿಣೆ ಮಾಡುವ ಸಂದರ್ಭದಲ್ಲಿ ಎಷ್ಟು ಬಾರಿ ನನ್ನ ಸ್ಮರಣೆ ಮಾಡಿದೆ?' ದೇವರ ಮಾತು ಕೇಳುತ್ತಿದ್ದಂತೆಯೇ ನಾರದರಿಗೆ ಶಾಕ್ ಆಯಿತು. ಏಕೆಂದರೆ ಗುರಿ ತಲುಪಬೇಕೆಂಬ ಅವಸರದಲ್ಲಿ ಬಟ್ಟಲಿನಲ್ಲಿದ್ದ ಎಣ್ಣೆಯನ್ನು ಚೆಲ್ಲಬಾರದೆಂಬ ಗಡಿಬಿಡಿಯಲ್ಲಿ ಆತ ದೇವರ ಸ್ಮರಣೆಯನ್ನೇ ಮರೆತುಬಿಟ್ಟಿದ್ದ. ಆಗ ಭಗವಂತ ಹೇಳಿದ: 'ಪ್ರದಕ್ಷಿಣೆಯ ಸಂದರ್ಭದಲ್ಲಿ ನಿನಗೆ ಎದುರಾದವಲ್ಲ, ಅದಕ್ಕಿಂತ ಎರಡು ಪಟ್ಟು ಕಷ್ಟಗಳು ಆ ರೈತನನ್ನು ದಿನವೂ ಕಾಡುತ್ತದೆ. ಹಾಗಿದ್ದರೂ ಆತ ದಿನಕ್ಕೊಮ್ಮೆ ನನ್ನ ಸ್ಮರಣೆ ಮಾಡುತ್ತಾನೆ. ಹಾಗಾಗಿ ಅವನೇ ನಂಬರ್ ಒನ್ ವಿಷ್ಣುಭಕ್ತ.'
ಕರ್ಮ ಸಿದ್ಧಾಂತ ಎಂಬ ಮಾತಿಗೆ ಉದಾಹರಣೆಯಾಗಿ, ನಾವು ಭಕ್ತಿಯಿಂದ ಏನನ್ನು ನೀಡುತ್ತೇವೆಯೋ ಅದೇ ನಮಗೆ ಸಿಗುತ್ತದೆ ಎಂಬ ಮಾತಿಗೆ ರೂಪಕವಾಗಿ ವಿಷ್ಣು-ನಾರದ, ಹಾಗೂ ರೈತನ ಕತೆಯನ್ನು ಹೇಳುವುದುಂಟು. ಹಿಂದೂಧರ್ಮದಲ್ಲಿ ಯಾವ ದೇವರು ಸರ್ವಶಕ್ತ ಎಂಬುದೇ ಖಚಿತವಿಲ್ಲ ಎನ್ನುವವರು ಈ ಕತೆಯ ನೆಪದಲ್ಲೂ ಕೊಂಕು ಮಾತಾಡಲು ನಿಲ್ಲುವುದುಂಟು. ಹಿಂದೂ ಧರ್ಮದಲ್ಲಿ ಮೂರ್ತಿ ಪೂಜೆಯ ಉಲ್ಲೇಖಗಳಿವೆ. ಹಿಂದೂಗಳ ಪಾಲಿಗೆ ಮೂರ್ತಿ ಪೂಜೆಯೆಂಬುದು ಶ್ರದ್ಧಾಭಕ್ತಿಯ ಆಚರಣೆಯೂ ಆಗಿ ಹೋಗಿದೆ. ಈ ಮೂರ್ತಿ ಪೂಜೆಯೇ ತಪ್ಪು ಎಂದು ಮುಸ್ಲಿಮರೂ ಸೇರಿದಂತೆ ಹಲವರು ವಾದಿಸುತ್ತಿದ್ದಾರೆ. ಅಂಥವರಿಗೆ ಮೂರ್ತಿ ಪೂಜೆಯಿಂದ ಏನೆಲ್ಲಾ ಅನುಕೂಲಗಳಿವೆ ಎಂಬುದನ್ನು ಹೀಗೆ ವಿವರಿಸಬಹುದು.
ಮೊದಲಿಗೆ, ಯಾವುದೋ ಒಂದು ವಿಗ್ರಹವನ್ನು ದೇವರು ಎಂದು ಭಾವಿಸುವುದರಿಂದ ಅದರಲ್ಲಿ ಮನಸ್ಸನ್ನು ಕೇಂದ್ರಿಕರಿಸಲು ಸಾಧ್ಯವಾಗುತ್ತದೆ. ಎದುರಿಗಿರುವಾತ ದೇವರು ಎಂಬ ಅಂಶ ಮನಸ್ಸಿಗೆ ಬಂದಾಕ್ಷಣ ಭಕ್ತಿಭಾವ ಇಮ್ಮಡಿಸುತ್ತದೆ. ಹಿರಿಯರ ಆಚರಣೆಗಳನ್ನು ಗಮನಿಸಿ ಕಿರಿಯರೂ ದೇವರ ಕುರಿತು ಪ್ರೀತಿ, ಭಕ್ತಿ ಬೆಳೆಸಿಕೊಳ್ಳುತ್ತಾರೆ. ಆಚರಣೆಗಳನ್ನು ಕಲಿಯುತ್ತಾರೆ. ಈ ಮೂಲಕ ಭಕ್ತಿಭಾವವೆಂಬುದು ಪೀಳಿಗೆಯಿಂದ ಪೀಳಿಗೆಗೆ ದಾಟುತ್ತದೆ.
ಮೂರ್ತಿ ಪೂಜೆಯಿಂದಾಗುವ ಮತ್ತೊಂದು ಮಹೋನ್ನತ ಕೆಲಸವೆಂದರೆ, ಸಂಸ್ಕಾರ ಕಲಿಕೆ. ಉದಾಹರಣೆಗೆ ಗುರು ದೇವೋ ಭವ, ಮಾತೃದೇವೋ ಭವ, ಪಿತೃದೇವೋಭವ, ಅತಿಥಿ ದೇವೋಭವ ಎಂಬ ಮಾತುಗಳನ್ನೇ ಗಮನಿಸಿ. ಜನ್ಮ ನೀಡಿದ ತಂದೆ-ತಾಯಿ, ವಿದ್ಯೆ ಕಲಿಸಿದ ಗುರು ಮಾತ್ರವಲ್ಲ; ಮನೆಗೆ ಅತಿಥಿಯ ರೂಪದಲ್ಲಿ ಆಗಮಿಸುವವನೇ ದೇವರು ಎಂಬ 'ಪಾಠ'ವನ್ನು ಹಿಂದೂಧರ್ಮ ಕಲಿಸುತ್ತದೆ. ಸಾಕಲ್ಲವೆ?
ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮಗಳ ಪಾಲಿಗೆ ಚಂದ್ರ, ನದಿ, ಬೆಟ್ಟ, ಗುಡ್ಡ, ಪುರಾತನ ವೃಕ್ಷ ಮುಂತಾದುವೆಲ್ಲ ಪ್ರಕೃತಿಯ ಒಂದು ಭಾಗ ಮಾತ್ರ ಆಗಿವೆ. ಆದರೆ ಹಿಂದೂಗಳ ಪಾಲಿಗೆ ಸೂರ್ಯ-ಚಂದ್ರರು ಕೇವಲ ಗ್ರಹಗಳಲ್ಲ. ಅವರೂ ದೇವರು. ಭೂಮಿಯೆಂಬುದು ಮಣ್ಣು-ಕಲ್ಲಿನ ಮಿಶ್ರಣವಲ್ಲ. ಅದು ಭೂಮಾತೆ. ನದಿಗಳು ಉಕ್ಕುವ ತೊರೆಗಳು ಮಾತ್ರವಲ್ಲ ಅದು ಜಲದೇವತೆ. ಬೃಹತ್ ವೃಕ್ಷಗಳು ಮುಗಿಲನ್ನು ಚುಂಬಿಸುವಂಥ ಮರಗಳಷ್ಟೇ ಅಲ್ಲ, ಹಿಂದೂಗಳ ಪಾಲಿಗೆ ಅದು ವೃಕ್ಷ ದೇವತೆ! ಭರತ ಖಂಡದಲ್ಲಿ ಹರಿಯುವ ಒಂದೊಂದು ನದಿಗೂ ಒಂದು ಪೌರಾಣಿಕ ಹಿನ್ನೆಲೆಯಿದೆ. ಪ್ರತಿಯೊಂದು ನದಿಯೂ ದೇವರ ಅಸ್ತಿತ್ವದೊಂದಿಗೆ, ಒಂದೊಂದು ಕಾಲದಲ್ಲಿ ನಡೆದ ಮೂರ್ತಿಪೂಜೆಯ ಘಟನೆಯೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಪ್ರತಿಯೊಂದು ಕತೆಯೂ ದೇವರ ಅಸ್ತಿತ್ವವನ್ನು ಸಾರಿ ಹೇಳುತ್ತದೆ.
ಈಗ ಹಿಂದೂಗಳ ಮೂರ್ತಿ ಪೂಜೆಯನ್ನು ವಿರೋಧಿಸುವವರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಮುಸ್ಲಿಮರು ನಮಾಜ್‌ಗೆ ನಿಲ್ಲುತ್ತಾರಲ್ಲ ಆಗ; ಕ್ರಿಶ್ಚಿಯನ್ನರು ಪ್ರಾರ್ಥನೆಗೆ ಕೂರುವಾಗ ತಮ್ಮ ದೈವದ ವಿಷಯವಾಗಿ ಅವರ ಒಳಮನಸ್ಸಿನಲ್ಲಿ ಒಂದು ಸ್ಪಷ್ಟ ಚಿತ್ರ ಇದ್ದೇ ಇರುತ್ತದೆ. ತಮ್ಮ ಮನಸ್ಸಿಗೆ ಬಂದ ದೈವವನ್ನು ಕುರಿತೇ ಅವರು ಪ್ರಾರ್ಥಿಸಿರುತ್ತಾರಲ್ಲವೆ? ಅಂದ ಮೇಲೆ, ಅವರದ್ದೂ ಕೂಡ ಮೂರ್ತಿಪೂಜೆಯೇ ಆಗುವುದಿಲ್ಲವೆ? ವಾಸ್ತವ ಹೀಗಿರುವಾಗ, ಹಿಂದೂಧರ್ಮದ ಶ್ರೇಷ್ಠ ಆಚರಣೆಯಿಂದ ಮೂರ್ತಿಪೂಜೆಯನ್ನು ಟೀಕಿಸಲು, ಯಾರಿಗೇ ಆದರೂ ಯಾವ ರೀತಿಯ ಹಕ್ಕಿದೆ?


- ಸುಯಶ್ ಭಾರದ್ವಾಜ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.