'ಜೈ ಕಿಸಾನ್' ಎಂದವರ ನಾಡಲ್ಲೇಕೆ ಈಗ ಈರುಳ್ಳಿ 80 ರುಪಾಯಿ?
ಈರುಳ್ಳಿ 80 ರುಪಾಯಿ ತಲುಪಿದೆ. ದಿನನಿತ್ಯದ ಆಹಾರದಲ್ಲಿ ಪ್ರಮುಖ ಪದಾರ್ಥವಾಗಿರುವ ಈರುಳ್ಳಿ ಬೆಲೆ ಗಗನಕ್ಕೇರಿರುವುದು ಸಾಮಾನ್ಯ ಜನರ ಬದುಕಲ್ಲಿ ಚೆಲ್ಲಾಟವಾಡುತ್ತಿರುವಂತಿದೆ. ಬೆಲೆ ಏರಿಕೆ ಬಿಸಿ ನೇರವಾಗಿ ತಟ್ಟುವುದು ನಿಗದಿತ ಮಾಸಿಕ ವರಮಾನ ಪಡೆಯುವವರಿಗೆ, ದಿನಗೂಲಿ ನೌಕರರಿಗೆ, ಕೂಲಿ ಕಾರ್ಮಿಕರಿಗೆ. ಕೇಂದ್ರದ ಕೃಷಿ ಸಚಿವರೊ, ಪ್ರಧಾನಮಂತ್ರಿಯವರೋ ಹೇಳಿಕೆಯೊಂದನ್ನು ನೀಡಿ ಒಂದೆರಡು ವಾರದಲ್ಲಿ ಬೆಲೆ ಇಳಿಕೆಯಾಗುತ್ತದೆ ಎಂಬ ಭರವಸೆ(?) ನೀಡಬಹುದು. ಅವರು ಹೇಳುವ ಒಂದೆರಡು ವಾರದಲ್ಲಿ ಅದೆಷ್ಟು ಪ್ರಮಾಣದಲ್ಲಿ ಹಣ ಕೈಬದಲಾಗುತ್ತದೆ ಎಂಬುದೇ ಸ್ವಾರಸ್ಯಕರ. 2010ರಲ್ಲಿ ಈರುಳ್ಳಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದಾಗ ಒಂದೇ ದಿನದಲ್ಲಿ ಆದ ಬೆಳವಣಿಗೆಗಳನ್ನು ಒಮ್ಮೆ ಗಮನಿಸೋಣ.
2010ರ ಡಿಸೆಂಬರ್ನಲ್ಲಿ ದೆಹಲಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 34 ರುಪಾಯಿ ಇತ್ತು. ಈರುಳ್ಳಿ ಪೂರೈಕೆಯ ಪ್ರಮಾಣವು ಕಡಿಮೆಯಾಗುತ್ತಲೇ ಇತ್ತು. ಇದನ್ನರಿತ ಮಧ್ಯವರ್ತಿಗಳು ಸಂಗ್ರಹಿಸಿದ್ದ ಈರುಳ್ಳಿಯನ್ನು ಮಾರುಕಟ್ಟೆಗೆ ಅಲ್ಪ ಪ್ರಮಾಣದಲ್ಲಿ ಮಾತ್ರ ಬಿಡುಗಡೆ ಮಾಡಿದರು. ಇನ್ನಷ್ಟು ಸಮಸ್ಯೆ ಬಿಗಡಾಯಿಸಿತು. ಅಂದು ಮಂಗಳವಾರ. ಬೆಳಿಗ್ಗೆ ಒಂದು ಕೆ.ಜಿ.ಗೆ 34 ರುಪಾಯಿಯಿದ್ದ ಬೆಲೆ ನೋಡನೋಡುತ್ತಿದ್ದಂತೆಯೇ 80 ರುಪಾಯಿಗೆ ಏರಿಕೆ ಕಂಡಿತು. ಅಂದು ದೆಹಲಿಯಲ್ಲಿ 11,445 ಕ್ವಿಂಟಲ್ನಷ್ಟು ಈರುಳ್ಳಿ ಮಾರಾಟವಾಗಿ, ಕೆ.ಜಿ.ಗೆ 46 ರುಪಾಯಿಯಂತೆ ಶೇ.135ರಷ್ಟು ಹೆಚ್ಚಿನ ಲಾಭ ಮಧ್ಯವರ್ತಿಗಳ ಕೈ ಸೇರಿತ್ತು. ದೆಹಲಿ ಜನರು ಆ ಒಂದೇ ದಿನದಲ್ಲಿ ಸುಮಾರು ನಾಲ್ಕು ಕೋಟಿಗೂ ಹೆಚ್ಚಿನ ಹಣವನ್ನು ವ್ಯಯಿಸಬೇಕಾಯಿತು. ಇದು ದೆಹಲಿ ಮಾರುಕಟ್ಟೆಯ ಒಂದು ದಿನದ ಈರುಳ್ಳಿ ಏರು-ಪೇರಿನ ವಿಚಾರವಷ್ಟೇ. ದೇಶದಲ್ಲಿ ಇಂತಹ 44 ಪ್ರಮುಖ ಈರುಳ್ಳಿ ಮಾರುಕಟ್ಟೆಗಳಿವೆ. ಇನ್ನು ಇತರೆ ಅಗತ್ಯವಸ್ತುಗಳು, ಅವುಗಳ ಬೆಲೆಯಲ್ಲಿನ ಏರು-ಪೇರಿನ ಲಾಭವೆಲ್ಲ ಮಧ್ಯವರ್ತಿಗಳಿಗೋ, ಮಾಫಿಯಾಗಳಿಗೋ ಸೇರುತ್ತಿದೆ.
ಬೆಲೆ ನಿಯಂತ್ರಣದ ಗುರುತರ ಜವಾಬ್ದಾರಿ ಹೊತ್ತಿರುವ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಒಂದೆರಡು ವಾರಗಳೆಂಬ ಭರವಸೆ ನೀಡುತ್ತಿದ್ದರೆ, ನೂರಾರು ಕೋಟಿ ರುಪಾಯಿ ಜನರಿಂದ ಹಿಡನ್ ಟ್ಯಾಕ್ಸ್ ಆಗಿ ಸೋರಿಕೆಯಾಗಿರುತ್ತದೆ. ಇತ್ತ ಸಾಮಾನ್ಯ ಜನರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದರೆ, ಅತ್ತ ಸೈನಿಕರು ದಿಟ್ಟತನದ ಆದೇಶ ವಿಲ್ಲದೆ ವಿನಾಕಾರಣ ಹತರಾಗುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದವರು ಮಾತ್ರ ಜಾಣಮೌನಕ್ಕೆ ಶರಣಾದಂತಿದೆ. ಅತ್ಯುನ್ನತ ಸ್ಥಾನಗಳಲ್ಲಿ ಕುಳಿತ ನಾಯಕರು ಇಚ್ಛಾಶಕ್ತಿ ಮೆರೆದರೆ ಎಂತಹುದೇ ಸಮಸ್ಯೆಯಾದರೂ ಪರಿಹರಿಸಬಹುದು ಎಂಬುದಕ್ಕೆ ಲಾಲ್ಬಹದ್ದೂರ್ ಶಾಸ್ತ್ರಿಯವರೇ ಸಾಕ್ಷಿ. ಆಹಾರ ಧಾನ್ಯದ ಸಮಸ್ಯೆಯ ಜೊತೆಗೆ ದೇಶವನ್ನು ರಕ್ಷಿಸಿಕೊಳ್ಳುವ ಸವಾಲು ಎದುರಾದಾಗ ಶಾಸ್ತ್ರಿಯವರು ಯಶಸ್ವಿಯಾಗಿ ನಿಬಾಯಿಸಿದ್ದಿದೆ.
1965ರಲ್ಲಿ ಪಾಕಿಸ್ತಾನ ಕಾಲುಕೆರೆದುಕೊಂಡು ಯುದ್ಧಕ್ಕೆ ಮುಂದಾಯಿತು. ಕೃಷ್ಣ ಮೆನನ್ರ ಎಡಬಿಡಂಗಿ ನಿರ್ಧಾರಗಳಿಂದಾಗಿ ಚೀನಾದ ಎದುರು ಮಂಡಿಯೂರಿದ್ದ ಭಾರತೀಯ ಸೇನೆಗೆ ಪಾಕಿಸ್ತಾನವನ್ನು ಮಣಿಸಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರುವ ಅವಶ್ಯಕತೆ ಇತ್ತು. ತಾಯ್ನೆಲವನ್ನು ಪಣಕ್ಕಿಟ್ಟು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಶಾಂತಿಧೂತನಾಗ ಬಯಸದ ಪ್ರಾಮಾಣಿಕ ವ್ಯಕ್ತಿತ್ವದ ಶಾಸ್ತ್ರಿಯವರು ದೇಶದ ಪ್ರಧಾನಮಂತ್ರಿಯಾಗಿದ್ದರು. ಇದು ಸೈನ್ಯಕ್ಕೆ ಆನೆಬಲವನ್ನು ತಂದುಕೊಟ್ಟಂತಿತ್ತು. ಭಾರತೀಯ ಸೇನೆಗೆ ಸಕಲರೀತಿಯಲ್ಲೂ ನೆರವಾಗಿ ನಿಂತ ಶಾಸ್ತ್ರಿಯವರು ಲಾಹೋರ್ಗೆ ಲಗ್ಗೆಯಿಡುವಂತೆ ಹುರಿದುಂಬಿಸಿದರು. ಭಾರತ ನೀಡಿದ ಪ್ರತ್ಯುತ್ತರಕ್ಕೆ ನಲುಗಿದ ಪಾಕಿಸ್ತಾನದ ಅಧ್ಯಕ್ಷ ಆಯೂಭ್ ಖಾನ್ ಸ್ವತಃ ಕೈಬರಹದಲ್ಲಿ ಪತ್ರ ಬರೆಯುವ ಮೂಲಕ ಶಾಂತಿ ಮಾತುಕತೆ ಗೆ(ಶರಣಾಗತಿ) ಬೇಡಿದರು. ರಾಷ್ಟ್ರರಕ್ಷಣೆಯಲ್ಲಿ ವಿಜಯಿಯಾಗುತ್ತಿದ್ದಂತೆ ಶಾಸ್ತ್ರಿಯವರಿಗೆ ಮತ್ತೊಂದು ಸವಾಲು ಎದುರಾಯಿತು. ಯುದ್ಧಾನಂತರ ಅಮೆರಿಕಗೆ ಭೇಟಿ ಕೊಡುವುದು ನಿಗದಿಯಾಗಿತ್ತು. ಅಮೆರಿಕಾದ ಒಲವೇನಿದ್ದರೂ ಸದಾ ಪಾಕಿಸ್ತಾನದ ಪರವಾಗಿಯೇ. ಅಂದಿನ ಅಮೆರಿಕಾ ಅಧ್ಯಕ್ಷ ಲಿಂಡನ್ ಜಾನ್ಸನ್ ಶಾಸ್ತ್ರಿಯವರು ಭೇಟಿ ನೀಡುವ ಸಮಯದಲ್ಲೇ ಆಯೂಬ್ ಖಾನ್ ಅವರನ್ನೂ ಅಮೆರಿಕಾಗೆ ಆಮಂತ್ರಿಸಿದರು. ಪಾಕಿಸ್ತಾನವನ್ನು ಬದ್ಧವೈರಿಯೆಂದೇ ಪರಿಗಣಿಸಿದ್ದ ಶಾಸ್ತ್ರಿಯವರು ಕೆನೆಡಾಗೆ ಮಾತ್ರ ಭೇಟಿ ನೀಡಿ, ಸ್ವದೇಶಕ್ಕೆ ಮರಳಿದರು. ಕಳಪೆ ಗುಣಮಟ್ಟದ ಗೋಧಿಯನ್ನು ಭಾರತಕ್ಕೆ ಸರಬರಾಜು ಮಾಡಲು ಹವಣಿಸುತ್ತಿದ್ದ ಅಮೆರಿಕದ ನಿಲುವನ್ನೂ ನಯವಾಗಿಯೇ ತಿರಸ್ಕರಿಸಿದರು. ಹೊರದೇಶಗಳಿಂದ ಗೋಧಿ ಬಾರದಿದ್ದುದರಿಂದ ದೇಶದಲ್ಲಿ ಗೋಧಿ ಸಮಸ್ಯೆ ಉಲ್ಭಣಿಸಿತು. ಗೋಧಿಗಾಗಿ ಇತರೆ ದೇಶಗಳತ್ತ ಮುಖ ಮಾಡದೆ, ದೇಶದಲ್ಲಿಯೇ ಹೆಚ್ಚಿನ ಗೋಧಿ ಬೆಳೆಯಲು ಪ್ರೋತ್ಸಾಹಿಸಿದರು. ವಾರದಲ್ಲಿ ಒಂದು ಹೊತ್ತಿನ ಊಟ ಬಿಡುವಂತೆ ಜನರಲ್ಲಿ ವಿನಂತಿಸಿಕೊಂಡರು. ಪ್ರೋತ್ಸಾಹಕ ಕ್ರಮಗಳ ಮೂಲಕ ಕೃಷಿ ಚಟುವಟಿಕೆಗಳು ಗರಿಗೆದರುವಂತೆ ಮಾಡಿದರು. ಇದರ ಫಲವೇ ಶೇಖರಿಸಲು ಸ್ಥಳದ ಅಭಾವವಾಗುವಂತಹ ಇಳುವರಿ ದೊರೆಯಿತು. ಪಂಜಾಬ್ನ ಕೆಲವೆಡೆ ಉಗ್ರಾಣಗಳು ಸಾಲದೆ, ಶಾಲೆಗಳಿಗೆ ರಜೆ ನೀಡಿ, ಗೋಧಿ ಶೇಖರಣೆ ಮಾಡುವಂತಾಯಿತು. ದೇಶದ ರಕ್ಷಣೆಯ ಸಮಸ್ಯೆ ಮತ್ತು ಆಹಾರ ಧಾನ್ಯದ ಸಮಸ್ಯೆ ಏಕಕಾಲಕ್ಕೆ ಬಂದರೂ ನಾಜೂಕಾಗಿ ಪರಿಹರಿಸಿದ ಹಿರಿಮೆ-ಗರಿಮೆ ಶಾಸ್ತ್ರಿಯವರಿಗೊಬ್ಬರಿಗೆ ಸಲ್ಲಬೇಕು.
1965ರ ಸಮಸ್ಯೆಗಳಲ್ಲದಂತಿದ್ದರೂ, ಈಗಲೂ ಸಮಸ್ಯೆಗಳು ಇವೆ. ಆದರೆ ರಾಜಕೀಯ ಇಚ್ಛಾಶಕ್ತಿಯದ್ದೇ ಬಹುದೊಡ್ಡ ಕೊರತೆ. 1965ರ ನಂತರ 1972ರಲ್ಲಿ, 1999ರಲ್ಲಿ ಪಾಕಿಸ್ತಾನವನ್ನು ಭಾರತೀಯ ಸೇನೆ ಸದೆಬಡಿದಿದೆ. ಸೇನೆಯ ಶಕ್ತಿ, ಆತ್ಮವಿಶ್ವಾಸ ಸಾಕಷ್ಟೇ ಹೆಚ್ಚಿದೆ. 2004ರಿಂದಲು ಪಾಕಿಸ್ತಾನ ಒಂದಿಲ್ಲೊಂದು ರೀತಿಯಲ್ಲಿ ತಂಟೆ ತಕರಾರು ಮಾಡತ್ತಲೆ ಇದ್ದರೂ, ಮಾತುಕತೆ ಅಥವಾ ಮೌನ ದ ಉತ್ತರ ಬಿಟ್ಟರೆ ಸೇನೆಯಿಂದ ಉತ್ತರಿಸುವ ಗೋಜಿಗೆ ಸರ್ಕಾರ ಹೋಗಲೇ ಇಲ್ಲ. ಮುಂಬೈ ದಾಳಿಯಲ್ಲಿ ಸೆರೆಸಿಕ್ಕವನು ಪಾಕಿಸ್ತಾನದವನು ಎಂದರೂ ಆ ದೇಶದ ವಿರುದ್ಧ ಕಠಿಣ ಕ್ರಮವಿಲ್ಲ ಭಾರತೀಯ ಸೈನಿಕರ ಶಿರಚ್ಛೇದ ಮಾಡಿ ಕೊಂಡೊಯ್ದರೂ ಪತ್ರ ಬರೆದರೇ ಹೊರತು, ಗಟ್ಟಿದನಿಯಲ್ಲಿ ಉತ್ತರಿಸಲಿಲ್ಲ ವಿನಾಕಾರಣ ಸೈನಿಕರ ಹತ್ಯೆ, ಕದನವಿರಾಮ ಉಲ್ಲಂಘನೆ, ಪದೇ ಪದೇ ದಾಳಿ ಮಾಡುತ್ತಿದ್ದರೂ ಪಾಕಿಸ್ತಾನವನ್ನೇ ಸಮರ್ಥಿಸಿಕೊಳ್ಳುವಂತಹ ಹೇಳಿಕೆಗಳು ರಕ್ಷಣಾ ಸಚಿವರಿಂದಲೇ ಬರುತ್ತಿವೆ ಇದು ಇಂದಿನ ಸರ್ಕಾರ ದೇಶ ರಕ್ಷಣೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯದ ನಿದರ್ಶನ.
ಇನ್ನು ಈರುಳ್ಳಿ ಬೆಲೆ ಏರಿಕೆ ಸಮಸ್ಯೆ. ಮುಂಜಾಗ್ರತ ಕ್ರಮಗಳಿದ್ದಿದ್ದರೆ ಇದೊಂದು ಸಮಸ್ಯೆಯೇ ಆಗುತ್ತಿರಲಿಲ್ಲವೇನೋ? 2010ರಲ್ಲಿ ಈರುಳ್ಳಿ ಬೆಲೆ ಏರಿಕೆಯಾದಾಗ, ರಫ್ತನ್ನು ನಿಷೇಧಿಸಿ, ಬೆಲೆಯನ್ನು ನಿಯಂತ್ರಣ ಮಾಡಲಾಯಿತು, ಸರಿ. ಆದರೆ ಪದೇ ಪದೇ ಸಮಸ್ಯೆ ಎದುರಾದಾಗ ರಫ್ತನ್ನು ನಿಲ್ಲಿಸುವುದು ದೇಶದ ವಿದೇಶಿ ವ್ಯಾಪಾರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮೇಲಿರುವ ಅಭಿಪ್ರಾಯಕ್ಕೆ ಧಕ್ಕೆಯುಂಟು ಮಾಡುತ್ತದೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಒಂದು ಕ್ವಿಂಟಾಲ್ ಈರುಳ್ಳಿಯ ಬೆಲೆ 350 ಡಾಲರ್, ಪಾಕಿಸ್ತಾನದ ಈರುಳ್ಳಿ ಬೆಲೆ 410 ಡಾಲರ್ ಇದ್ದರೆ ಭಾರತದ ಈರುಳ್ಳಿಯ ಬೆಲೆ 480 ಡಾಲರ್ ಇದೆ. ರಫ್ತು ನಿಷೇಧದ ವಿಷಯದಲ್ಲಿ ಸರಿಯಾದ ಕ್ರಮಕೈಗೊಳ್ಳದೇ ಇದ್ದರೆ, ಕಪ್ಪುಹಣದ ಸರಬರಾಜಿಗೂ ಅನುಕೂಲವಾಗುತ್ತದೆ ಬೆಳೆಯುವವರಿಗಾಗಲಿ, ಬಳಸುವವರಿಗಾಗಲಿ ಅನುಕೂಲವಾಗದೆ ಕೋಟ್ಯಂತರ ರುಪಾಯಿ ಮಧ್ಯವರ್ತಿಗಳ ಕೈಸೇರುತ್ತದೆ.
ಈರುಳ್ಳಿ ಪೂರೈಕೆಯಲ್ಲಿ ಶೇ.22ರಷ್ಟು ಕಡಿತವಾದದ್ದೇ ಬೆಲೆ ಏರಿಕೆಗೆ ಕಾರಣ ಎಂಬುದು ಎಪಿಎಂಸಿಯವರ ವಾದ. ದೇಶದ ಈರುಳ್ಳಿ ಉತ್ಪನ್ನದಲ್ಲಿ ಶೇ.45ರಷ್ಟು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಂದ ಬರುತ್ತದೆ. ಇದರಲ್ಲಿ ಸಿಂಹಪಾಲು ಮಹಾರಾಷ್ಟ್ರದ್ದೇ. ಮಹಾರಾಷ್ಟ್ರದಲ್ಲೋ, ಕರ್ನಾಟಕದಲ್ಲೋ ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂಭವಿಸಿದರೆ ನೇರವಾಗಿ ಈರುಳ್ಳಿ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಅರ್ಧದಷ್ಟು ಸಮಸ್ಯೆಗೆ ಮೂಲ. 2010ರಲ್ಲಿಯೇ ಎಚ್ಚೆತ್ತುಕೊಂಡು ಮಹಾರಾಷ್ಟ್ರ, ಕರ್ನಾಟಕಗಳಲ್ಲಿ ಮಾತ್ರವಲ್ಲದೆ ಈರುಳ್ಳಿ ಬೆಳೆಗೆ ಅನುಕೂಲವಿರುವ ಇತರೆ ರಾಜ್ಯಗಳಲ್ಲಿ ರೈತರನ್ನು ಪ್ರೋತ್ಸಾಹಿಸಿ, ಇಳುವರಿ ಹೆಚ್ಚಿಸಬಹುದಿತ್ತು. ಕಡಿಮೆ ದರದಲ್ಲಿ ಅಕ್ಕಿ, ಸುಖಾಸುಮ್ಮನೆ ಸಹಾಯಧನಗಳನ್ನು ನೀಡುವುದಕ್ಕಿಂತ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಪೂರೈಸುವ ಕ್ರಮ ಕೈಗೊಂಡಿದ್ದರೆ ಸಮಸ್ಯೆ ಇಷ್ಟು ಬಿಗಡಾಯಿಸುತ್ತಿರಲಿಲ್ಲ.
ಡಿಮ್ಯಾಂಡ್/ ಸಪ್ಲೈ ಸಿದ್ಧಾಂತ ಮಂಡಿಸುವ ನೀತಿ ನಿರೂಪಕರಿಗಾಗಲಿ, ಸದಾ ದೋಷಾರೋಪಣೆಯಲ್ಲಿ ಕಾಲಕಳೆಯುವ ಜನಪ್ರತಿನಿಧಿಗಳಿಗಾಗಲಿ ಇಚ್ಛಾಶಕ್ತಿಯೊಂದಿದ್ದರೆ ಸಮಸ್ಯೆಗಳನ್ನು ಸಲೀಸಾಗಿ ಬಗೆಹರಿಸಬಹುದು. ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗಿರುವುದು ಸರ್ಕಾರದ ಅತಿಮುಖ್ಯ ಜವಾಬ್ದಾರಿಗಳಲ್ಲಿ ಪ್ರಮುಖವಾದುದು. ನಿಯಂತ್ರಣ ತಪ್ಪಿದರೆ ಸಮಸ್ಯೆಗಳು ಹಿಂಡಿನಂತೆ ಬಂದೆರಗುತ್ತವೆ. ಸಮರ್ಥವಾಗಿ ಕೊಂಡೊಯ್ಯುವ ನಾಯಕತ್ವ ಇರದ ಹೊರತು ಇಂತಹ ಸಮಸ್ಯೆಗಳೆಲ್ಲ ನಿರೀಕ್ಷಿತವೇ.
- ಗೋಪಾಲ್. ಸಿ
gkckm@yahoo.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

