ಕೇವಲ ಅಧಿಕಾರದ ಆಸೆಯಿದ್ದರೆ ಸಾಕೇ ನಿರ್ವಹಣೆಯ ಹೊಣೆಗಾರಿಕೆಯೂ ಬೇಕಲ್ಲವೇ?
ಕಳೆದ ತಿಂಗಳಲ್ಲಿ ಮುಖ್ಯಮಂತ್ರಿಗಳು ಉಡುಪಿಯ ಶ್ರೀಕೃಷ್ಣ ಮಠವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿಸಿಕೊಳ್ಳುವ ಮಾತನ್ನು ಹೇಳಿ, ಅದು ವಿವಾದಕ್ಕೆ ಕಾರಣವಾಗಿ ಮುಖ್ಯಮಂತ್ರಿಗಳು ತಮ್ಮ ಮಾತನ್ನು ಹಿಂದೆ ತೆಗೆದುಕೊಳ್ಳಬೇಕಾದದ್ದು ನಮಗೆ ತಿಳಿದ ವಿಷಯವೇ. ದೇವಾಲಯಗಳ ಆಡಳಿತದ ಮೇಲೆ ರಾಜಕಾರಣಿ ಹಾಗೂ ಅಧಿಕಾರಶಾಹಿಗಳಿಗಿರುವ ಆಸೆ, ಅದೇ ಅವುಗಳ ನಿರ್ವಹಣೆಯಲ್ಲಿ ಏಕಿಲ್ಲ ಎಂಬುದೇ ಸದ್ಯದ ಪ್ರಶ್ನೆ. ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ದೇಗುಲಗಳ ಸ್ಥಿತಿಗತಿಯ ಕುರಿತಾಗಿ ಕೊಂಚ ಯೋಚಿಸಬೇಕಾಗಿದೆ.
ನಮ್ಮ ಸಂಪ್ರದಾಯದಲ್ಲಿ ದೇಗುಲಗಳಿಗೆ ವಿಶೇಷ ಸ್ಥಾನವಿದೆ. ನಮ್ಮೆಲ್ಲರ ಪಾಲಿಗೆ ಅವು ಪುಣ್ಯಕ್ಷೇತ್ರಗಳೂ ಹೌದು. ಪವಿತ್ರ ಕ್ಷೇತ್ರಗಳೂ ಹೌದು. ಇಂತಹ ಅನೇಕ ಪುಣ್ಯಕ್ಷೇತ್ರಗಳ ತವರು ನಮ್ಮ ತಾಯ್ನಾಡು. ನಮ್ಮ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಇಂಥ ಹತ್ತರಿಂದ ಹದಿನೈದು ಪುಣ್ಯಕ್ಷೇತ್ರಗಳಿವೆ. ಪ್ರತಿ ದೇಗುಲಗಳು ಒಂದೊಂದು ಇತಿಹಾಸ, ಒಂದೊಂದು ಪುರಾಣ, ಒಂದೊಂದು ವಿಶೇಷತೆಯನ್ನು ಹೊತ್ತು ನಿಂತಿವೆ. ಅಲ್ಲಿಗೆ ಧಾವಿಸುವ ಆಸ್ತಿಕ ವರ್ಗವೂ ದೊಡ್ಡ ಸಂಖ್ಯೆಯದ್ದು. ದೇವರ ಒಂದು ನಿಮಿಷದ ಆ ಅಪೂರ್ವ ದರ್ಶನಕ್ಕಾಗಿ ಸಾವಿರಾರು ಮೈಲುಗಳಿಂದ ಜನ ಆಗಮಿಸಿರುತ್ತಾರೆ. ತನು, ಮನ, ಧನಗಳಿಂದ ಆರಾಧನೆಯಲ್ಲಿ ಭಾಗಿಯಾದರೆ ಮೈ-ಮನ ಪುಳಕ. ಒಂದು ರೀತಿಯ ಸಂತೃಪ್ತ ಭಾವ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತ ಸಮೂಹವನ್ನು ನೋಡಿದರೆ ಆಶ್ಚರ್ಯವಾಗದಿರದು. ಏಕೆಂದರೆ ಈ ಜನ ಕೇವಲ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳಿಗೆ ಮಾತ್ರವಲ್ಲ, ಪ್ರತಿ ಹುಣ್ಣಿಮೆ, ಅಮಾವಾಸ್ಯಕ್ಕಷ್ಟೇ ಅಲ್ಲಿ ಹೋಗುವುದಿಲ್ಲ. ಈ ಅಪಾರ ಭಕ್ತ ಸಮೂಹ ದೇವಾಲಯಕ್ಕೆ ತರುವ ವಾರ್ಷಿಕ ಆದಾಯದ ಆಧಾರದ ಮೇಲೆ ಎ, ಬಿ, ಸಿ ಗ್ರೇಡ್ ದೇವಾಲಯಗಳೆಂದು ವರ್ಗೀಕರಿಸಲಾಗಿದೆ. ವಾರ್ಷಿಕ ಒಂದು ಕೋಟಿಗೂ ಅಧಿಕ ಆದಾಯವನ್ನು ಹೊಂದಿರುವ ಎ ಗ್ರೇಡ್ ದೇವಾಲಯಗಳು ಕನಿಷ್ಟ 10 ಇವೆ. ಈ ದೇವಾಲಯದ ನೇರ ಆದಾಯ ಒಂದೆಡೆಯಾದರೆ ಸಾರಿಗೆ, ಪ್ರವಾಸೋದ್ಯಮದ ಹೆಸರಿನಲ್ಲಿಯೂ ಸರ್ಕಾರಕ್ಕೆ ಇವುಗಳಿಂದ ಹೆಚ್ಚಿನ ಲಾಭವಿದೆ. ಆದರೂ ಸರ್ಕಾರ ಇವುಗಳ ನಿರ್ವಹಣೆಗೆ ತೋರುತ್ತಿರುವ ಕಾಳಜಿ ತೀರ ನಿರಾಶಾದಾಯಕವಾಗಿದೆಯೆಂದೇ ಹೇಳಬೇಕು.
ರಾಜ್ಯದ ಅನೇಕ ದೇವಾಲಯಗಳ ಸ್ಥಿತಿ ಶೋಚನೀಯ. ಹಲವು ದೇವಸ್ಥಾನಗಳು ಮೂಲಸೌಕರ್ಯಗಳಿಂದಲೂ ವಂಚಿತವಾಗಿವೆ. ಕುಡಿಯುವ ಹನಿ ನೀರಿಗೂ ತತ್ವಾರ. ಯಾತ್ರಾರ್ಥಿಗಳಿಗೆ ವಸತಿ ವ್ಯವಸ್ಥೆಯಂತೂ ದೂರದ ಮಾತೇ ಸರಿ. ಶೌಚಾಲಯಗಳಿಲ್ಲದೆ ನದಿ ಹಾಗೂ ದೇಗುಲದ ಸುತ್ತಮುತ್ತಲಿನ ಪ್ರದೇಶವು ಬಯಲು ಆಲಯಗಳಾಗಿ ಪರಿವರ್ತನೆಗೊಂಡಿವೆ. ಈ ಪ್ರದೇಶಗಳು ದುರ್ವಾಸನೆಯೊಂದಿಗೆ ವಾಕರಿಕೆಯನ್ನೂ ತರುತ್ತಾವಾದ್ದರಿಂದ ಅಲ್ಲೆಲ್ಲ ಸಲಭವಾಗಿ ನಡೆದಾಡುವಂತಿಲ್ಲ. ನಾನಿಲ್ಲಿ ಹೇಳುತ್ತಿರುವುದು ಬಿ ಅಥವಾ ಸಿ ಗ್ರೇಡ್ ದೇವಾಲಯಗಳ ಕುರಿತಾಗಿಯಲ್ಲ, ವಾರ್ಷಿಕವಾಗಿ ಕೋಟಿಗೂ ಅಧಿಕ ಆದಾಯವನ್ನು ಹೊಂದಿರುವ ಲಕ್ಷಾಂತರ ಭಕ್ತರು ಭೇಟಿ ನೀಡುವ ಎ ಗ್ರೇಡ್ ದೇವಾಲಯಗಳ ಕುರಿತಾಗಿ. ಇವುಗಳ ಪರಿಸ್ಥಿತಿಯೇ ಹೀಗಿರುವಾಗ ಬೇರೆ ದೇವಾಲಯಗಳ ಕುರಿತು ಮಾತನಾಡದಿರುವುದೇ ಒಳಿತು! ದೇಶದ ನಾನಾ ಭಾಗಗಳಿಂದ ಜನ ಇಲ್ಲಿಗೆ ಆಗಮಿಸುತ್ತಾರಾದರೂ ಇವುಗಳ ನಿರ್ವಹಣೆ ಬಗ್ಗೆ ಸರ್ಕಾರಕ್ಕೇಕೆ ಈ ಪರಿಯ ನಿರ್ಲಕ್ಷ್ಯ?
ಸರ್ಕಾರದ ಈ ನಿರ್ಲಕ್ಷ್ಯ ಕೇವಲ ಭಕ್ತರಿಗೆ ಮೂಲಸೌಕರ್ಯ ಒದಗಿಸುವುದರಲ್ಲಾಗಲಿ ಅಥವಾ ಅದರ ಸ್ವಚ್ಛತೆ ನಿರ್ವಹಣೆಯ ವಿಚಾರದಲ್ಲಿ ಮಾತ್ರವೆಂದುಕೊಳ್ಳುವಂತಿಲ್ಲ. ಇದು ದೇವಾಲಯದ ಪೂಜಾ ಕಾರ್ಯಗಳಲ್ಲೂ ಮುಂದುವರೆಯುತ್ತದೆ. ಪೂಜಾ ಕಾರ್ಯಗಳಿಗೆ ಅಗತ್ಯವಿರುವ ಸಾಮಗ್ರಿಗಳೇ ಸರಿಯಾಗಿ ದೊರೆಯುವುದಿಲ್ಲವೆಂಬುದು ಅನೇಕ ಅರ್ಚಕರ ಅಳಲು. ಜಗತ್ಪ್ರಸಿದ್ಧ ಹಂಪೆಯ ಐತಿಹಾಸಿಕ ಶ್ರೀವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪೂಜೆಗೆ ಪ್ಲಾಸ್ಟಿಕ್ ಕೊಡವನ್ನು ಬಳಸಲಾಗುತ್ತದೆಂದು ಅಲ್ಲಿನ ವಿದ್ಯಾರಣ್ಯ ಪೀಠದ ಶ್ರೀಗಳು ಈ ಹಿಂದೆ ಆರೋಪಿಸಿದ್ದನ್ನು ಮರೆಯುವಂತಿಲ್ಲ. ಆ ಕಾರಣಕ್ಕಾಗಿಯೇ ಅವರು ಹಂಪೆಯ ಉತ್ಸವಕ್ಕೆ ಉತ್ಸವ ಮೂರ್ತಿಯನ್ನು ನೀಡಲು ನಿರಾಕರಿಸಿದ್ದು ಹಲವರಿಗೆ ನೆನಪಿರಬಹುದು. ಇವುಗಳು ನಮ್ಮ ಮುಜರಾಯಿ ಇಲಾಖೆಯ ದೇಗುಲಗಳ ನಿರ್ವಹಣೆಯ ಉದಾಹರಣೆಯಷ್ಟೆ.
ಭಕ್ತರಿಂದ ಸಂಗ್ರಹವಾಗುವ ಹಣ ಭಕ್ತರ ಶ್ರೇಯೋಭಿವೃದ್ಧಿಗೆ ತಾನೇ ವಿನಿಯೋಗವಾಗಬೇಕು? ರಾಜ್ಯದ ಹಲವು ದೇವಾಲಯಗಳಲ್ಲಿ ಸಂದಾಯವಾಗುವ ಹಣದಿಂದಲೇ ದೇಗುಲಗಳ ಖರ್ಚು ವೆಚ್ಚು ಸೇರಿದಂತೆ, ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಅನ್ನ ಸಂತರ್ಪಣೆಯಂತಹ ಬೃಹತ್ ಯೋಜನೆಗಳನ್ನು ಹಾಕಿಕೊಳ್ಳಬಹುದು. ಆದರೆ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಏನೂ ಇಲ್ಲದಂತಾಗಿದೆ. ಮಠಗಳು ಪಡೆಯುವ ಆದಾಯವನ್ನೇ ಹಾಗೂ ಕೆಲ ದೇವಾಲಯಗಳು ಅದಕ್ಕಿಂತಲೂ ಹೆಚ್ಚು ಆದಾಯವನ್ನು ಹೊಂದಿದ್ದರು, ಮಠಗಳ ನಿರ್ವಹಣೆಯಲ್ಲಿರುವ ದೇವಾಲಯಗಳ ಅಚ್ಚುಕಟ್ಟುತನ ಮುಜರಾಯಿ ಇಲಾಖಾ ದೇವಾಲಯಗಳಿಗೇಕೆ ಸಾಧ್ಯವಾಗಿಲ್ಲ?
ದೇವಾಲಯ, ಪುಣ್ಯಕ್ಷೇತ್ರಗಳೆಂದು ಬೇರೆ ಬೇರೆ ದೇಗುಲಗಳಿಗೆ ಭೇಟಿ ನೀಡುವವರಾಗಿದ್ದರೆ ಇದು ನಿಮ್ಮ ಅನುಭವಕ್ಕೂ ಬಂದಿರಬಹುದಾದ್ದರಿಂದ ಇಲ್ಲಿ ಹೇಳುತ್ತಿದ್ದೇನೆ- ಯಾವುದೇ ದೇವಾಲಯಗಳ ಮುಂದೆ ಹಣ್ಣು, ಹೂ, ಕಾಯಿ ಎಂದು ಹೋದರೆ ನಿಮ್ಮ ಜೇಬಿನಿಂದ ನೂರಾರು ರುಪಾಯಿ ಜಾರಿರುತ್ತದಲ್ಲವೇ? ನಾವು ಏನೋ ದೇವಸ್ಥಾನವೆಂದು ಕೇಳಿದ ಹಣವನ್ನು ತೆತ್ತು ಬರುತ್ತೇವೆ. ಆದರೆ ಗಮನಿಸಿ ಅವರು ಮಾರುವ ಬೆಲೆ ಎರಡು ಪಟ್ಟು. ಒಂದೊಂದೆಡೆ ಮೂರು ಪಟ್ಟು ಮಾರುವುದಿದೆ. ಇದು ಹಗಲು ದರೋಡೆಯಲ್ಲವಾ? ಇದನ್ನೇಕೆ ನಾವು ಪ್ರಶ್ನಿಸುವುದಿಲ್ಲ? ವಿಚಾರಿಸಿದರೆ, 'ಇವೆಲ್ಲ ದೇವಾಲಯದ ಮಳಿಗೆಗಳು. ಲಕ್ಷ ಲಕ್ಷ ಬಾಡಿಗೆ ಕಟ್ಟಬೇಕು. ಬೇರೆ ವಿಧಿಯಿಲ್ಲ' ಎಂಬ ಉತ್ತರ ಬರುತ್ತದೆ. ಇವುಗಳು ಸರ್ಕಾರದ ಮಳಿಗೆಗಳಾದ್ದರಿಂದ ಈ ಅಕ್ರಮ ಸುಲಿಗೆಗೆ ಸರ್ಕಾರ ಕಡಿವಾಣ ಹಾಕಬೇಕಲ್ಲವೇ?
ಹೋಟೆಲ್ ಮೊದಲಾದ ಪ್ರದೇಶಗಳಲ್ಲಿ ಮೂಗು ಮುಚ್ಚಿಕೊಂಡೇ ಹೋಗಬೇಕು. ಪ್ರಾಣಿ ಬಲಿ ನಿಷೇಧಿಸಿದ್ದರೂ ಇಲಾಖೆಯ ಹಲವು ದೇವಾಲಗಳಲ್ಲಿ ಅವ್ಯಾಹತವಾಗಿ ನಿತ್ಯ ಪ್ರಾಣಿ ಬಲಿಗಳು ನಡೆಯುತ್ತಲೇ ಇವೆ. ಇದನ್ನು ತಡೆಯುವ ಜವಾಬ್ದಾರಿಯಾದರೂ ಯಾರದ್ದು? ಇವೆಲ್ಲ ರಾಜ್ಯದ ಶ್ರೀಮಂತ ದೇವಾಲಯಗಳು ಎನಿಸಿಕೊಳ್ಳುವ, ಲಕ್ಷಾಂತರ ಭಕ್ತರು ಭೇಟಿ ನೀಡುವ 'ಎ' ಗ್ರೇಡ್ ದೇವಾಲಯಗಳ ಕತೆಯಾದರೆ ಇನ್ನು ಮುಜರಾಯಿ ಇಲಾಖೆಯ ಸಣ್ಣ ಪುಟ್ಟ ದೇಗುಲಗಳಿಗೆ ಅರ್ಚಕರಿಲ್ಲದೆ ಕನಿಷ್ಟ ಪೂಜೆಯೂ ಇಲ್ಲವಾಗಿದೆ. ಹಲವು ದೇಗುಲಗಳು ಪಾಳುಬಿದ್ದು ಬಾವಲಿಗಳ ಕೇಂದ್ರವಾಗಿವೆ. ಇನ್ನು ಕೆಲವು, ಬಾಗಿಲುಗಳಿಲ್ಲದೇ ಜಾನುವಾರುಗಳ ತಾಣವಾಗಿವೆ. ಇಂತಹ ದೇಗುಲಗಳ ಉತ್ತರದಾಯಿತ್ವ ಯಾರದ್ದು?
ಸದ್ಯ ಇಲಾಖಾ ವ್ಯಾಪ್ತಿಯ ದೇಗುಲಗಳ ನಿರ್ವಹಣೆಯೇ ಅಸಾಧ್ಯವಾದಾಗ, ಬೇರೆ ದೇಗುಲಗಳನ್ನು ಮುಜರಾಯಿ ಇಲಾಖೆಗೆ ಸೇರಿಸುತ್ತೇವೆಂದು ಹೊರಡುವುದು ಹುಂಬತನವೇ ಸರಿ. ಮಠಗಳು ಹೆಚ್ಚಿನ ಆದಾಯವನ್ನು ಪಡೆಯುತ್ತಿವೆಯಾದರು ಹಲವು ಮಠಗಳು ಕೆರೆಯ ನೀರನು ಕೆರೆಗೆ ಚೆಲ್ಲು ಎಂಬ ಮಾತಿನಂತೆ ಅನೇಕ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿಕೊಂಡಿವೆ. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರು ಪಾಳು ಬಿದ್ದಿರುವ ದೇಗುಲಗಳ ಜೀರ್ಣೋದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಆದರೆ ಸರ್ಕಾರ ವ್ಯವಸ್ಥಿತವಾಗಿರುವ ದೇವಾಲಯಗಳನ್ನೇ ತನ್ನ ನಿರ್ಲಕ್ಷ್ಯದಿಂದಾಗಿ ಅವನತಿಯತ್ತ ತಳ್ಳುತ್ತದೆ ಎಂದೆನಿಸುವುದಿಲ್ಲವೇ? ಕೇವಲ ಅಧಿಕಾರದ ಆಸೆಯಿದ್ದರೆ ಸಾಕೇ, ನಿರ್ವಹಣೆಯ ಹೊಣೆಗಾರಿಕೆಯೂ ಬೇಕಲ್ಲವೇ?
- ಕಿರಣ್ ಜೋಶಿ, ಉಪನ್ಯಾಸಕರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

