ಅಂಕಣಗಳು

ಸ್ವಾತಂತ್ರ್ಯ ದಿನದ ಪ್ರತಿವಾದಿ ಭಾಷಣ, ಮೋದಿ ನಿರೂಪಿಸಿದ್ದು ಏನನ್ನು?

ಸ್ವಾತಂತ್ರ್ಯ ದಿನದ ಪ್ರತಿವಾದಿ ಭಾಷಣ, ಮೋದಿ ನಿರೂಪಿಸಿದ್ದು ಏನನ್ನು?
ಮನಮೋಹನ್ ಸಿಂಗ್, ನರೇಂದ್ರ ಮೋದಿ
Published On :

ರಾಷ್ಟ್ರೀಯ ಏಕತೆಯನ್ನು ತೋರಿಸುವ ಸ್ವಾತಂತ್ರ್ಯ ದಿನವನ್ನು ಪ್ರಧಾನಿಯ ಭಾಷಣಕ್ಕೆ ಪ್ರತಿವಾದವನ್ನು ವ್ಯಕ್ತಪಡಿಸುವುದಕ್ಕೆ ಬಳಸಿಕೊಂಡ ನರೇಂದ್ರ ಮೋದಿಯವರ ಕ್ರಮವನ್ನು ಸಂಪ್ರದಾಯವಾದಿಗಳು ವಿರೋಧಿಸಬಹುದೇನೋ. ಆದರೆ ಅವರು ಪ್ರಧಾನಿ ಸಿಂಗ್ ಅವರ ಭಾಷಣದ ಅಂಶಗಳನ್ನು ಪ್ರಶ್ನಿಸುತ್ತಾ ಅವರಿಗೆ ಸವಾಲು ಹಾಕಿದ್ದು ಮತ್ತು ಕೇಂದ್ರ ಸರ್ಕಾರ ಹಾಗೂ ಮನಮೋಹನ್ ಸಿಂಗ್ ಅವರ ಮೇಲೆ ನಿರ್ಭೀಡೆಯ ವಾಕ್ ಪ್ರಹಾರ ನಡೆಸಿದ್ದು ಒಂದು ಸಾಮಾನ್ಯ ತರ್ಕವನ್ನು ಅವಲಂಬಿಸಿದೆ.
ಅಮರ್ತ್ಯ ಸೇನ್ ಅವರಂಥ ತಜ್ಞರು ವಾದದ ವರ್ಚಸ್ಸುಗಳನ್ನು ಹೇಗೆಯೇ ವ್ಯಾಖ್ಯಾನಿಸಿರಲಿ, ಭಾರತದಲ್ಲಿ ವಾದ ಸರಣಿ ಎಂಬುದು ಕೇವಲ ಕಾರಣಗಳನ್ನು ಒದಗಿಸುವಿಕೆ ಮೇಲೆ ನಿಂತಿಲ್ಲ. ವಾದವೊಂದನ್ನು ಗೆಲ್ಲಬೇಕಾದರೆ ತನ್ನ ಬಲವನ್ನು ಹಾಗೂ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶನಕ್ಕೆ ಇಡಬೇಕಿರುವುದು ಅನಿವಾರ್ಯ. ಕಳೆದ ಕೆಲ ತಿಂಗಳುಗಳಿಂದ ಮೋದಿ ಮಾಡಿಕೊಂಡು ಬರುತ್ತಿರುವುದು ಇದನ್ನೇ. ಸ್ವಾತಂತ್ರ್ಯ ದಿನದ ಪ್ರಧಾನಿ ಭಾಷಣವನ್ನು ಟೀಕಿಸಿದ್ದರಲ್ಲೂ ಅವರು ಇದೇ ಕ್ರಮವನ್ನು ಅನುಸರಿಸಿದ್ದಾರೆ.
ತನ್ನ ಇರುವಿಕೆಯನ್ನು ಛಾಪೊತ್ತುವ, ಪಾಶ್ಚಾತ್ಯ ಪೌರುಷದ ಮಾರ್ಗವನ್ನು ಮೋದಿ ಅನುಸರಿಸುತ್ತಿದ್ದಾರೆ. ಅಚ್ಚರಿಯೊಂದನ್ನು ಹುಟ್ಟಿಸಿ ಮೊದಲು ಗೆಲ್ಲುವುದು ಹಾಗೂ ನಂತರವಷ್ಟೆ ಅಗತ್ಯ ರಾಜಿಗೆ ಮುಂದಾಗುವುದು ನರೇಂದ್ರ ಮೋದಿ ವೈಖರಿ. ಇದು ಭಾರತದ ಲಾಗಾಯ್ತಿನ ಮಾದರಿಗೆ ಸಂಪೂರ್ಣ ಭಿನ್ನವಾದದ್ದು. ಇಲ್ಲಿ ಮೊದಲಿಗೆ ಸರ್ವಸಮ್ಮತಿಯನ್ನು ರೂಪಿಸುವುದಕ್ಕೆ ಒದ್ದಾಡಲಾಗುತ್ತದೆ. ನಮಗೆ ರಾಜಕೀಯ ಅಧಿಕಾರದ ಅವಶ್ಯವೇ ಇಲ್ಲ ಎಂಬ ಆಣಿಮುತ್ತನ್ನು ಉದುರಿಸಲಾಗುತ್ತದೆ. ನಂತರ ರಹಸ್ಯ ಯೋಜನೆಗಳು ಹಾಗೂ ಏನೆಲ್ಲ ಕುಟಿಲ ತಂತ್ರಗಳನ್ನು ಪ್ರಯೋಗಿಸಿ ಅಧಿಕಾರವನ್ನು ಪಡೆಯಲಾಗುತ್ತದೆ.
ನರೇಂದ್ರ ಮೋದಿ ಈ ಇಡಿಯ ಚಿತ್ರಕಥೆಯನ್ನೇ ಬದಲಾಯಿಸುತ್ತಿದ್ದಾರೆ. ಅವರ ನುಡಿಗಟ್ಟುಗಳು ಭಾರತೀಯವಾಗಿದ್ದರೂ ನೇರ ಆಕ್ರಮಣಕ್ಕೆ ಇಳಿಯುವ ಅವರ ನಡೆ ಪಾಶ್ಚಾತ್ಯ ಮಾದರಿಯದ್ದು. ಅವರು ಗರ್ವಿಯಂತೆ ಕಂಡುಬರುತ್ತಾರೆ. ಆದರೆ ಎಂದೂ ಅವರು ವಿಧೇಯತೆ ತಮ್ಮ ಹೆಗ್ಗುರುತು ಎಂಬುದನ್ನು ಸಾಬೀತುಪಡಿಸಿಕೊಳ್ಳುವುದಕ್ಕೆ ಹೆಣಗಾಡಲಿಲ್ಲ. ನರೇಂದ್ರ ಮೋದಿಯವರು ಇಲ್ಲಿಯವರೆಗೆ ಬಂದಿರುವುದನ್ನು ಯಾರಾದರೂ ಪರಾಮರ್ಶೆಗೆ ಒಳಪಡಿಸಿದರೆ ಅಲ್ಲಿ ಕಾಣುವ ಅಂಶವೆಂದರೆ ಅವರು ಯಾವತ್ತೂ ಆಡಳಿತ ಮತ್ತು ಕಾರ್ಯಕ್ಷಮತೆ ನಿರೂಪಿಸುವುದಕ್ಕೆ ರಾಜಕೀಯ ಅಧಿಕಾರ ನಿರ್ಣಾಯಕವಾದದ್ದು ಎಂಬ ಧೋರಣೆಯನ್ನೇ ಇಟ್ಟುಕೊಂಡಿರುವುದು ಮನದಟ್ಟಾಗುತ್ತದೆ.
ಅಧಿಕಾರ ಮುಖ್ಯ ಎಂಬ ಅವರ ಮುನ್ನುಗ್ಗುವ ಪ್ರವೃತ್ತಿಯೇ 2001ರಲ್ಲಿ ಅವರನ್ನು ಗುಜರಾತ್ ಮುಖ್ಯಮಂತ್ರಿಯಾಗಿ ನೇಮಕವಾಗಿಸಿತು. ಕಛ್ ಭೂಕಂಪದ ಪರಿಹಾರ ಕಾರ್ಯ ಒದಗಿಸುವಲ್ಲಿ ಸರ್ಕಾರಿ ವ್ಯವಸ್ಥೆ ಗೊಂದಲಕ್ಕೆ ಬಿದ್ದಿದ್ದನ್ನು ಗಮನಿಸಿ ನಾಯಕತ್ವವನ್ನು ಬದಲಿಸುವ ಪ್ರಶ್ನೆ ಬಿಜೆಪಿ ಮುಂದಿತ್ತು. ಕೆಲಕಾಲ ಕೇಶುಭಾಯಿ ಪಟೇಲರಿಗೆ ಉಪ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರನ್ನು ನೇಮಿಸೋಣ ಎಂಬ ಚಿಂತನೆ ಬಿಜೆಪಿಯ ಕೇಂದ್ರ ನಾಯಕತ್ವದ ತಲೆಯಲ್ಲಿ ಸುಳಿದಿತ್ತು. ಆಗಲೂ ಆಕ್ರಮಣಕಾರಿ ಧೋರಣೆ ಬಿಟ್ಟುಕೊಡದ ಮೋದಿ ತಾವು ಇರುವುದಾದರೆ ಮುಖ್ಯ ಭೂಮಿಕೆಯಲ್ಲೇ, ಇಲ್ಲದಿದ್ದರೆ ಹೊರಟೆ ಎಂಬ ನಿಲವು ವ್ಯಕ್ತಪಡಿಸಿ ಗೆದ್ದಿದ್ದರು.
ನಂತರದ ನಿರ್ಣಾಯಕ ಸವಾಲು ಎದುರಾಗಿದ್ದು 2002ರ ಗೋಧ್ರೋತ್ತರ ಗಲಭೆ ಸಂದರ್ಭದಲ್ಲಿ. ಆಗ ಆದ ಕೋಮು ಧ್ರುವೀಕರಣವನ್ನೂ ಅವರು ತಮ್ಮ ಅಧಿಕಾರದ ಲಗಾಮನ್ನು ಬಿಗಿಗೊಳಿಸುವುದಕ್ಕೆ ಬಳಸಿಕೊಂಡಿದ್ದರು. ಈ ಬಗೆಯ ಧ್ರುವೀಕರಣ ಎಂಬುದು ಭಾರತ ರಾಜಕಾರಣದ ವಾಸ್ತವವೇ ಆಗಿದೆ. ಈ ಧ್ರುವೀಕರಣವನ್ನು ಅಧಿಕಾರ ಗಳಿಕೆಗೆ ಬಳಸಿಕೊಂಡ ನಂತರ ಅದನ್ನು ಹಿಂಬದಿ ಸೀಟ್‌ನಲ್ಲಿ ಕೂರಿಸಿದರು ಮೋದಿ. ಮೋದಿ ಕೋಮುವಾದಿಯೋ ಅಲ್ಲವೋ ಗೊತ್ತಿಲ್ಲವಾಗಲೀ ಅಧಿಕಾರಕ್ಕೆ ಸೂಕ್ತವಾದದ್ದನ್ನೇ ಅವರು ಆಗ ಮಾಡಿದರು.
2007 ಮತ್ತು 2012ರ ವಿಧಾನಸಭೆ ಚುನಾವಣೆಗಳಲ್ಲಿ ಅವರು ಕೋಮು ಧ್ರುವೀಕರಣವನ್ನು ನೆಚ್ಚಿಕೊಳ್ಳಲಿಲ್ಲ. ಈ ಎರಡೂ ಚುನಾವಣೆಗಳಲ್ಲಿ ಪ್ರಸ್ತಾಪವಾಗಬೇಕಾದ ವಿಷಯಗಳನ್ನು ಅವರೇ ನಿರ್ಧರಿಸಿ ಗೆದ್ದುಕೊಂಡರು. ಅವರ ಎಲ್ಲ ವಿರೋಧಿಗಳೂ ಆ ಮೂಲಕ ನಾಶವಾದರು. ತಾನು ಇಲ್ಲವೇ ಯಾರಿಲ್ಲ ಎಂಬ ಧಾಡಸಿ ಧೋರಣೆ ತಾಳದಿದ್ದರೆ ಅವರು ರಾಜಿ ಮಾಡಿಕೊಂಡು ಗೊಂದಲದ ಗೂಡಿನಲ್ಲಿ ಕೂತಿರಬೇಕಿತ್ತು. ತನಗೆ ಸಿಕ್ಕ ಜನಮತವ್ವು ಸರಿಯಾಗಿ ಉಪಯೋಗಿಸಿಕೊಳ್ಳಬೇಕೆಂದರೆ ಅಲ್ಲಿ ರಾಜಿಗೆ ಜಾಗವಿರಬಾರದು ಎಂಬುದನ್ನು ಚೆನ್ನಾಗಿ ಅರಿತುಕೊಂಡವರು ಮೋದಿ.
ಬಿಜೆಪಿಯ ಆಂತರಿಕ ಅಧಿಕಾರ ವಲಯದಲ್ಲಿ ಅಗ್ರಸ್ಥಾನಕ್ಕೆ ಬರುವಲ್ಲಿಯೂ ಸಹಕರಿಸಿದ್ದು ಇದೇ ಧೋರಣೆ. ಅಧಿಕಾರಕ್ಕೆ ಮರಳಲು ಹಪಾಹಪಿಸುತ್ತಿರುವ, ಆಕ್ರಮಣಕಾರಿ ನಾಯಕನೊಬ್ಬನ ಹುಡುಕಾಟದಲ್ಲಿರುವ ಪಕ್ಷದ ತಳಮಟ್ಟದ ಧ್ವನಿಗಳನ್ನು ಅವರು ಸಮರ್ಥವಾಗಿ ಬಳಸಿಕೊಂಡರು. ಸಂಘ ಪರಿವಾರ ಮತ್ತು ಬಿಜೆಪಿಗೆ ಇವರ ಹಕ್ಕುದಾರಿಕೆಯನ್ನು ಮಾನ್ಯ ಮಾಡುವುದು ಅನಿವಾರ್ಯವಾಯಿತು. ಮೊದಲೇ ಹೇಳಿದಂತೆ ಮೋದಿ ನಂಬಿಕೆ ಇರಿಸಿಕೊಂಡಿರುವುದು ಅಮೆರಿಕನ್ ಮಾದರಿಯ ಜನಪ್ರಿಯತೆಯ ಪ್ರಚಾರಾಂದೋಲನದಲ್ಲಿ. ಅವರೀಗ ತಮ್ಮ ಮೊದಲನೇ ಗೋಲ್ ಬಾರಿಸುವ ಸನ್ನಾಹದಲ್ಲಿದ್ದಾರೆ. ಅದೆಂದರೆ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಗೊಳ್ಳುವುದು.
ಮೋದಿಯವರ ಇನ್ನೊಂದು ಗುಣಲಕ್ಷಣ ಎಂದರೆ ಯುದ್ಧ ಗೆದ್ದ ಬಳಿಕ ಔದಾರ್ಯ ಮೆರೆಯುವುದು. ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ಗೆಲ್ಲುತ್ತಲೇ ಎದುರಾಳಿ ಕೇಶುಭಾಯ್ ಪಟೇಲರ ಬಳಿ ತೆರಳಿ ಆಶೀರ್ವಾದ ಪಡೆದರು. ಮೊನ್ನೆಯ ಭಾಷಣದಲ್ಲೂ ಅವರು ತಮ್ಮ ಈ ಕಾರ್ಯತಂತ್ರದ ಝಲಕ್ ಅನ್ನು ತೋರಿಸಿದರು. ಬಿಜೆಪಿಯ ಆಂತರಿಕ ಗಾಯಗಳಿಗೆ ಮುಲಾಮು ಹಚ್ಚುತ್ತ ಚುನಾವಣೋತ್ತರ ಮೈತ್ರಿಗಳಿಗೆ ಈಗಲೇ ಬಲೆ ಬೀಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಎಲ್. ಕೆ. ಆಡ್ವಾಣಿ ಅವರ ಕುರಿತ ಪ್ರಶಂಸಾರ್ಹ ಮಾತು, ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಮಣ್ ಸಿಂಗ್ ಅವರನ್ನು ಹೊಗಳಿದ್ದು, ಕಾಂಗ್ರೆಸ್ ವಿರೋಧಿ ವೇದಿಕೆ ರಚಿಸುವುದಕ್ಕೆ ಶ್ರಮಿಸಿದ ಎನ್. ಟಿ. ರಾಮರಾವ್ ಅವರನ್ನು ಹೈದರಾಬಾದ್ ಭಾಷಣದ ವೇಳೆ ಸ್ಮರಿಸಿಕೊಂಡಿದ್ದು ಇವೆಲ್ಲ ಬಿಜೆಪಿಯಲ್ಲಿ ಏಕತೆ ಮೂಡಿಸಿ ಭವಿಷ್ಯದ ಮೈತ್ರಿಗಳನ್ನು ರಚಿಸಿಕೊಳ್ಳುವ ಏಕಕಾಲದ ನಡೆಗಳು.
ಸ್ವಾತಂತ್ರ್ಯೋತ್ಸವ ದಿನದ ಪ್ರಧಾನಿ ಭಾಷಣದ ಕುರಿತು ನಿಲವು ಪ್ರಕಟಿಸುವ ಪ್ರತಿವಾದದ ಭಾಷಣ ಮಾಡಿದ್ದರಲ್ಲೂ ತಮ್ಮ ಪಕ್ಷ ಹಾಗೂ ಅದರ ಹೊರಗಿರುವ ಎದುರಾಳಿಗಳನ್ನು ಮಟ್ಟ ಹಾಕುವ ಲೆಕ್ಕಾಚಾರದ ಹೆಜ್ಜೆಯಿದೆ. ಪ್ರಧಾನಿ ಹುದ್ದೆಗೆ ಅಧಿಕೃತ ನಾಮನಿರ್ದೇಶನವೆಂಬ ಕೊಡುಗೆಯನ್ನು ಪಕ್ಷದಿಂದ ಅವರಿನ್ನೂ ಪಡೆಯಬೇಕಿದೆ. ಆದರೆ ಪ್ರಧಾನಿಯವರನ್ನು ನೇರವಾಗಿ ಎದುರಿಸುವ ಮೂಲಕ ಅವರು ತಮ್ಮ ಪಕ್ಷ ಸಿದ್ಧವಾಗಿರಲಿ, ಇಲ್ಲದಿರಲಿ ಆ ಹುದ್ದೆಗೆ ತಾವೇ ಪರ್ಯಾಯ ಎಂಬ ಸಂದೇಶವನ್ನು ಸಾರಿಬಿಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಅವರು ಆಯ್ದುಕೊಂಡ ಸ್ಥಳ ಮತ್ತು ವ್ಯಂಗ್ಯದ ಚಾಟಿಯನ್ನು ಗಮನಿಸಿ. ಪ್ರಧಾನಿ ಕೆಂಪುಕೋಟೆ ಮೇಲೆ ನಿಂತು ಮಾತನಾಡಿದರೆ ಇವರು ಕಛ್ ಭೂಕಂಪದ ಕೇಂದ್ರ ನೆಲೆ ಭುಜ್‌ನಲ್ಲಿರುವ ಲಲ್ಲನ್ ಕಾಲೇಜಿನಲ್ಲಿ ನಿಂತು ಮಾತನಾಡಿದರು. ಭುಜ್ ಭೂಕಂಪದ ಬಳಿಕ ಮೋದಿ ಮಾಡಿದ ಕೆಲಸ ಹಾಗೂ ಯುಪಿಎ ಆಡಳಿತದಲ್ಲಿ ಅರ್ಥವ್ಯವಸ್ಥೆ ಮಣ್ಣುಗೂಡಿ ಹೋಗಿರುವುದರ ಹೋಲಿಕೆಯ ರೂಪಕವನ್ನು ಇದು ಪ್ರತಿನಿಧಿಸುತ್ತಿತ್ತು. ಉಡುಗೆಯಲ್ಲೂ ಸಾಂಕೇತಿಕ ಪ್ರತಿರೋಧ. ಸಿಂಗ್ ಅವರು ತಮ್ಮ ಎಂದಿನ ನೀಲಿ ರುಮಾಲು ಧರಿಸಿದ್ದರೆ, ಮೋದಿಯವರು ವಿಶೇಷ ಸಮಾರಂಭಗಳಿಗೆ ಧರಿಸಲಾಗುವ ಕೆಂಪು ರುಮಾಲು ಧರಿಸಿದ್ದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರೆಡ್ ಸ್ಟೇಟ್ಸ್ ಮತ್ತು ಬ್ಲ್ಯೂ ಸ್ಟೇಟ್ಸ್‌ಗಳೆಂದೇ ವಿಭಜನೆ ಆಗುವುದನ್ನು ಗಮನಿಸಬಹುದು.
ಪ್ರಧಾನಿ ಸುದ್ದಿಯಲ್ಲಿರಬೇಕಾದ ಅಂದಿನ ದಿನವನ್ನು ತಮ್ಮತ್ತ ವಾಲಿಸಿಕೊಳ್ಳುವ ಮೂಲಕ ನರೇಂದ್ರ ಮೋದಿ ಸಾಬೀತುಪಡಿಸಿದ ಅಂಶಗಳು ಹೀಗಿವೆ:
- ಮೊದಲ ಬಾರಿಗೆ ದೆಹಲಿ ದುರಾಡಳಿತವನ್ನು ಹೊರಗಿನವರೊಬ್ಬರು ಸವಾಲು ಮಾಡಿದಂತಾಯಿತು. ಈ ಮೂಲಕ ಕಾಂಗ್ರೆಸ್ ಪಾಳಯವನ್ನು ಮಾತ್ರ ಅವರು ಅಲುಗಾಡಿಸಿದಂತಾಗಲಿಲ್ಲ. ಬದಲಿಗೆ ಚುನಾವಣೆಯಲ್ಲಿ ಆಯ್ಕೆಯಾಗದಿದ್ದರೂ ಬಿಜೆಪಿ ಕೇಂದ್ರೀಯ ನಾಯಕತ್ವ ಸುತ್ತುವರಿದುಕೊಂಡಿದ್ದವರಿಗೂ ಬಿಸಿ ಮುಟ್ಟಿಸಿದರು.
- ಬದಲಾವಣೆಗಾಗಿ ತಲೆ ಎತ್ತಿ ಹೊರಗಡೆಯೂ ನೋಡಬೇಕಾಗುತ್ತದೆ. ಸಂಘಟನೆಯ ಒಳಗಷ್ಟೇ ನೋಡಿಕೊಂಡಿರುವುದು ನಿಮ್ಮ ನಿರಂತರತೆ ಉಳಿಸಿಕೊಳ್ಳುವ ಕಾರಣಕ್ಕೆ ಮಾತ್ರ. ದೆಹಲಿಯ ಅಧಿಕಾರಸ್ಥರಿಗೆ ತಾವು ಹೊರಗಿನವರಾಗಿ ಬಿಂಬಿಸಿಕೊಳ್ಳುವುದರ ಮೂಲಕ ಮೋದಿಯವರು ನಿಮಗೆ ಬದಲಾವಣೆ ಬೇಕಿದ್ದರೆ ನನ್ನನ್ನು ಆರಿಸಿಕೊಳ್ಳಿ ಎಂದು ಹೇಳಿದಂತಾಯಿತು.
- ಭಾರತೀಯ ಮಾದರಿಗಳಾದ ತಲೆಬಗ್ಗಿಸುವಿಕೆ, ವಿನಮ್ರತೆ, ರಾಜಿ ಸೂತ್ರಗಳು ಎಲ್ಲಿಗೂ ಕೊಂಡೊಯ್ಯುವುದಿಲ್ಲ. ಮೋದಿ ಅದನ್ನು ತೊರೆದಿದ್ದಾರೆ. ಅಧಿಕಾರದ ಮೋಹವೇನೂ ತನಗಿಲ್ಲವೆಂದು ನಟಿಸುವುದು, ಅತಿ ವಿಧೇಯತೆ ತೋರ್ಪಡಿಕೆ ಇವೆಲ್ಲ ಹಳೆ ಸ್ಟೈಲುಗಳಾದವು. ಅತಿ ಪಾತಾಳಕ್ಕೆ ಜಾರಿ ಯಾರೂ ತಮ್ಮನ್ನು ಇನ್ನಷ್ಟು ಅದಕ್ಷತೆಗೆ ದೂಷಿಸುವ ಅವಕಾಶವಿಲ್ಲ ಎಂಬ ವಾತಾವರಣ ನಿರ್ಮಿಸಿರುವುದು ಮನಮೋಹನರ ಮಾದರಿ. ಇದಕ್ಕೆ ವ್ಯತಿರಿಕ್ತ ಮಾದರಿಯನ್ನು ಮೋದಿ ಪ್ರತಿನಿಧಿಸುತ್ತಿದ್ದಾರೆ. ಇವತ್ತು ಹೆಚ್ಚಿನವರು ಗುಜರಾತ್ ಮಾದರಿ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ ಎಂದರೆ ಅವರು ಪರಾಮರ್ಶೆಗೆ ತಮ್ಮನ್ನು ತೆರೆದಿರಿಸಿಕೊಂಡಿದ್ದಾರೆ. ತಮ್ಮ ವೈಫಲ್ಯಗಳ ವಿಷಯದಲ್ಲಿ ನುಣುಚಿಕೊಳ್ಳುವ ಯತ್ನ ಅವರಲ್ಲಿಲ್ಲ. 2002ರ ಗಲಭೆ ಕುರಿತೂ ಅವರು ಕ್ಷಮೆಯಾಚಿಸದೇ ಇರುವುದು ಜವಾಬ್ದಾರರಾಗಿರುವುದನ್ನು ಸೂಚಿಸುತ್ತದೆ. 1984ರ ಸಿಖ್ ನರಮೇಧಕ್ಕೆ ಕಾಂಗ್ರೆಸ್ ಪೊಳ್ಳು ಕ್ಷಮೆಯಾಚನೆ ನೀಡಿತು. ಸಿಖ್ಖರಿಗೆ ನ್ಯಾಯವನ್ನೇನೂ ಕೊಡಿಸಲಿಲ್ಲ.
ಈಗಿರುವ ಪ್ರಶ್ನೆ ಎಂದರೆ- ಭಾರತಕ್ಕೆ ಬೇಕಿರುವುದು ಪೊಳ್ಳು ವಿನಮ್ರತೆ ಹಾಗೂ ಬೂಟಾಟಿಕೆ ಧೋರಣೆಯೋ ಅಥವಾ ನೇರವಂತಿಕೆಯೋ? ಯುವ ಭಾರತವು ನಿಸ್ಸಂಶಯವಾಗಿ ಕಾಣಲು ಬಯಸುತ್ತಿರುವುದು ಆತ್ಮವಿಶ್ವಾಸದಿಂದ ತುಳುಕುತ್ತಿರುವ ನಾಯಕನನ್ನು ಹೊರತು ನೆಪ ಹೇಳುವವರನ್ನಲ್ಲ. ನಗರದ ಮಧ್ಯಮ ವರ್ಗದ ವಿಷಯದಲ್ಲಂತೂ ಇದು ಸತ್ಯ. ಅತಿ ವಿನಮ್ರತೆಗೆ ಇಲ್ಲಿ ಬೆಲೆಯಿಲ್ಲ. 2002ರ ಘಟನೆಯನ್ನು ಆಧಾರವಾಗಿಟ್ಟುಕೊಂಡು ಮೋದಿಯವರನ್ನು ಅಳೆಯುವುದಕ್ಕೆ ಇವರ್ಯಾರೂ ಸಿದ್ಧರಿಲ್ಲ.
- ಅಮೆರಿಕ ಮಾದರಿಯ ಅಧ್ಯಕ್ಷೀಯ ಚುನಾವಣೆ ಪ್ರಚಾರಾಂದೋಲನವನ್ನು ರೂಪಿಸುವುದು ಮೋದಿ ಇರಾದೆ. ಹೀಗಾಗಿ ಕಾಂಗ್ರೆಸ್ ಪ್ರತಿಬಾರಿ ಮೋದಿ ಮೇಲೆ ಮುಗಿಬಿದ್ದಾಗಲೂ ಅದು ನರೇಂದ್ರ ಮೋದಿಯವರಿಗೆ ಲಾಭವನ್ನೇ ತಂದುಕೊಡುತ್ತಿದೆ. ಯಾವುದೇ ನಾಯಕ ಪ್ರಾರಂಭದಲ್ಲಿ ಬಯಸುವುದು ತನ್ನ ಪ್ರಾಬಲ್ಯಕ್ಕೆ ಎಲ್ಲರಿಂದ ಮಾನ್ಯತೆ ದೊರೆಯಬೇಕು ಎಂಬುದನ್ನು. ಯಾರನ್ನೋ ದಾಳಿ ಮಾಡುತ್ತಿದ್ದೇವೆ ಎಂದರೆ ಅವರ ಬಗ್ಗೆ ಹೆದರಿದ್ದೇವೆ ಎಂದೇ ಅರ್ಥ. 2014ರ ಲೋಕಸಭೆ ಚುನಾವಣೆಯಲ್ಲಿ ಮುಖ್ಯ ವಿಷಯವೇ ಮೋದಿ. ತಮ್ಮನ್ನೇ ವಿಷಯವಾಗಿಸಿಕೊಳ್ಳುವುದರತ್ತಲೇ ಮೋದಿಯವರ ಎಲ್ಲ ಪ್ರಯತ್ನಗಳಿವೆ. ಪ್ರತಿಬಾರಿ ಎದುರಾಳಿಗಳು ವಾಗ್ಬಾಣ ಎಸೆದಾಗಲೂ ಮೋದಿ ಸಾಬೀತುಪಡಿಸಬೇಕಿರುವ ವಿಷಯ ಒಂದೇ ಆಗಿರುತ್ತದೆ. ತಾನು ನೈಜ ವಿಷಯಗಳ ಮೇಲೆ ಮಾತನಾಡುತ್ತಿರುವಾಗ ಇವರು ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ ಎಂಬುದು.
ಇಂದಿರಾ ಗಾಂಧಿ ತಮ್ಮ ಎದುರಾಳಿಗಳನ್ನು ಎದುರಿಸಿದ್ದೂ ಹೀಗೆಯೇ. ಈ ವಿಷಯದಲ್ಲಿ ಮೋದಿಯವರನ್ನೂ ತಡೆಯಲಾಗದು.     

- ಆರ್. ಜಗನ್ನಾಥ್, ಸಂಪಾದಕರು,
ಫಸ್ಟ್‌ಪೋಸ್ಟ್ ಜಾಲತಾಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.