ಶೌಚಾಲಯ ನಿರ್ಮಾಣಕ್ಕೆ ಬಾರ್ಗಳು ಎತ್ತಂಗಡಿಯಾಗಲಿ!
"ಗಲ್ಲಿ ಗಲ್ಲಿಗೆ ಬೇಕಾದುದು ದೇವಾಲಯಗಳಲ್ಲ, ಶೌಚಾಲಯಗಳು!" ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಡಾ. ಕೆ.ಪಿ. ಪುತ್ತೂರಾಯರ ಲೇಖನದಲ್ಲಿ ಕೇವಲ ಪ್ರಾಸಕ್ಕೆ ಒತ್ತು ನೀಡಿಲಾಗಿದೆ. ಶೌಚಾಲಯಗಳ ಮೇಲಿನ ಕಾಳಜಿಯನ್ನು ವ್ಯಕ್ತಪಡಿಸುವ ಭರದಲ್ಲಿ ಪುತ್ತೂರಾಯರು ದೇವಾಲಯಗಳನ್ನು 'ಮೌಢ್ಯ'ಕ್ಕೆ ಹೋಲಿಸಿದ್ದಾರೆ. ದೇವರನ್ನು ಸೃಷ್ಟಿಸಿರುವುದು ಮಾನವರೇ! ದೇವರನ್ನು ಹೇಗೆ ಪೂಜಿಸಬೇಕೆಂದನ್ನು ಲೇಖಕರಿಂದ ನಾವೆಲ್ಲ ಕಲಿಯಬೇಕಿಲ್ಲ.
'ಮನೆಯೇ ಮಂತ್ರಾಲಯ' ಎಂಬ ಸಿನೆಮಾ ರಿಲೀಸ್ ಆದ ಸಮಯದಲ್ಲೊಂದು ಇಂತಹುದೇ ಡೈಲಾಗ್ ಕೇಳಿಬರುತ್ತಿತ್ತು. 'ಮನೆಯೇ ಮಂತ್ರಾಲಯ, ಬಯಲೇ ಶೌಚಾಲಯ' ಎಂಬ ಮಾತದು. ಅದನ್ನು ಕೇಳಲು ಕಿವಿಗೆ ತಂಪಾಗಿರಬಹುದು. ಆ ಸಾಲಿನಲ್ಲಿನ ಪ್ರಾಸವೂ ಚೆನ್ನಾಗಿರಬಹುದು. ಆದರೆ ಪ್ರಾಸಕ್ಕಾಗಿ ಆಸ್ತಿಕರನ್ನು ಹೀಯಾಳಿಸುವುದು ತರವಲ್ಲ. ಪುತ್ತೂರಾಯರಿಗೆ ಹೀಯಾಳಿಸಲು ಬೇರೇನೂ ಸಿಗಲಿಲ್ಲವೇ?
ದೇವಾಲಯ ಒಂದು ಶ್ರದ್ಧಾಕೇಂದ್ರ. ಅದು ಎಲ್ಲೇ ಇರಲಿ, ಹೇಗೆ ಇರಲಿ, ಗಲ್ಲಿಯಲ್ಲಿಯೇ ಇರಲಿ, ದಿಲ್ಲಿಯಲ್ಲೇ ಇರಲಿ, ಅದು ಭಕ್ತರಿಗೆ ಪವಿತ್ರ ಕೇಂದ್ರವೇ. ದೇವಾಲಯ ಎಂದಿಗೂ ದೇವಾಲಯವೇ!
ಇನ್ನು ಬಯಲನ್ನೆಲ್ಲಾ ನಮ್ಮ ನೇತಾರರು ನುಂಗಿ ನೀರು ಕುಡಿದಿರುವುದರಿಂದ ಶೌಚಾಲಯಗಳಿಗೆಲ್ಲಿಯ ಜಾಗ?
ಪುತ್ತುರಾಯರೇ, ಶೌಚಾಲಯದ ಮೇಲಿನ ನಿಮ್ಮ ಕಾಳಜಿ ಮೆಚ್ಚುವಂತಹುದೇ. ಹೌದು ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಶೌಚಾಲಯಗಳ ಅಗತ್ಯವಿದೆ. ಆದರೆ ಈ ಕಾಳಜಿ ನಿಮ್ಮ ಬರಹದಲ್ಲಿ ದೇವಾಲಗಳ ಮೇಲಿನ ದಾಳಿಯ ರೂಪದಲ್ಲಿ ಅಭಿವ್ಯಕಿಗೊಂಡಿರುವುದು ವಿಪರ್ಯಾಸ. ಶೌಚಾಲಯಕ್ಕೆ ದೇವಾಲಯ ಬಲಿಯಾಗಬೇಕೆ?
ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೋಂದಿದೆ. ಯಾವುದೇ ಊರಿರಲಿ, ಹಳ್ಳಿಯಿರಲಿ, ಪಟ್ಟಣವಿರಲಿ, ನಗರವಾಗಿರಲಿ ಆ ಸ್ಥಳಗಳಲ್ಲಿರುವ ದೇವಾಲಯಗಳಿಗಿಂತ 'ಬಾರ್ ಮತ್ತು ರೆಸ್ಟೋರೆಂಟ್'ಗಳ ಸಂಖ್ಯೆ ಅತಿ ಹೆಚ್ಚು. ಉದಾಹರಣೆಗೆ ನಮ್ಮ ಮೈಸೂರಿನ ವಿಷಯಕ್ಕೇ ಬರೋಣ. ಮೈಸೂರಿನ ನಗರ ಬಸ್ ನಿಲ್ದಾಣದಿಂದ ಯಾವುದೇ ಬಸ್ ಹತ್ತಿದರೂ ಸಹ ಪ್ರತಿಯೊಂದು ನಿಲ್ದಾಣದಲ್ಲೂ ವೈನ್ ಸ್ಟೋರ್ಗಳು, ಬಾರ್ಗಳು ಕಣ್ಣೆದುರಾಗುತ್ತವೆ. ಆ ಪ್ರದೇಶಗಳಲ್ಲೆಲ್ಲ ದೇವಾಲಯಗಳಿಗಿಂತ ಹೆಚ್ಚು ವೈನ್ ಸ್ಟೋರ್ಗಳಿವೆ. ಈ ವೈನ್ಸ್ಟೋರ್ ಮತ್ತು ಬಾರ್ಗಳನ್ನು ಮುಚ್ಚಿ ಆ ಸ್ಥಳದಲ್ಲಿ ಶೌಚಾಲಯಗಳನ್ನು ಸ್ಥಾಪಿಸಬಾರದೇಕೆ? ದೇವಾಲಯಗಳಿಗೆ ಬರುವ ಭಕ್ತರಲ್ಲಿ ಶ್ರದ್ಧೆಯಿರುತ್ತದೆ, ಭಕ್ತಿ ಇರುತ್ತದೆ. ದೇವಾಲಯಕ್ಕೆ ಬರುವವರೆಲ್ಲ ಸಭ್ಯರು. ದೇವರಿಂದ ಸಮಾಜಕ್ಕೇನೂ ಭಂಗವಿಲ್ಲ. ಆ ಭಕ್ತರಿಂದಲೂ ಕೂಡ! ಆದರೆ ಬಾರ್ಗಳು? ಅಲ್ಲಿಗೆ ಬರುವವರು?ಹಾಗಂತ ಬಾರ್ಗಳಿಗ ೆಹೋಗುವವರು ಸಭ್ಯರೇ ಇರಬಹುದು. ಆದರೆ ಅಲ್ಲಿಂದ ತೆರಳುವಾಗ ಅವರು ಅಷ್ಟೂ ಸಭ್ಯರಾಗಿರುತ್ತಾರೆಯೇ? ಗಲ್ಲಿಗಲ್ಲಿಗೊಂದರಂತೆ ನಮ್ಮ ದೇಶದಲ್ಲೀಗ ಬಾರ್ಗಳಿವೆ, ಮೊದಲು ಅವುಗಳನ್ನು ಎತ್ತಂಗಡಿ ಮಾಡಿಸಿ
ಶೌಚಾಲಯಗಳನ್ನು ಸ್ಥಾಪಿಸಬಹುದಲ್ಲವೇ?
ಪುತ್ತೂರಾಯರ ಕೋಪ ದೇವಾಲಯದೆಡೆಗೆ ತಿರುಗುವ ಬದಲು ಬಾರ್ಗಳೆಡೆಗೆ ತಿರುಗಿದ್ದರೆ ಲೇಖನ ಮಾರ್ಮಿಕವಾಗಿರುತ್ತಿತ್ತು. ವಿಪರ್ಯಾಸವೆಂದರೆ ಪ್ರಾಸಕ್ಕೆ ಸುಲಭವಾಗಿ ಬಲಿಯಾಗುವುದು ಹಿಂದು ದೇವಾನುದೇವತೆಗಳೇ. ಇದು ನಮ್ಮ ದೌರ್ಭಾಗ್ಯ. ಮೈಸೂರಿನ ಪೊಲೀಸ್ ಇಲಾಖೆಯೂ ಸಹ ಇತ್ತೀಚೆಗೆ ಹೆಲ್ಮೆಟ್ ಕಾರ್ಯಾಚರಣೆಯ ಅಂಗವಾಗಿ ರಸ್ತೆಗಳ ವೃತ್ತಗಳಲ್ಲಿ ಕೆಲವು ಬ್ಯಾನರ್ ಅಳವಡಿಸಿದೆ. ಈ ಬ್ಯಾನರ್ನ ಚಿತ್ರಗಳಲ್ಲಿ ಗಣೇಶ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಿರುವ ವ್ಯಂಗ್ಯ ಚಿತ್ರವಿದೆ. ಗಣೇಶ ವ್ಯಂಗ್ಯಕ್ಕೆ ಮೀಸಲೇ?!
ಅಷ್ಟೇ ಅಲ್ಲ, ಮೈಸೂರು ನಗರಪಾಲಿಕೆಯೂ ಸಹ ತನ್ನ ಚಪಲ ತೀರಿಸಿಕೊಳ್ಳಲು ದೇವರ ಚಿತ್ರಗಳನ್ನೇ ದುರುಪಯೋಗಪಡಿಸಿಕೊಳ್ಳುತ್ತಿದೆ. ದೇವರ ಫೋಟೋಗಳನ್ನು ದೇವಾಲಯದಲ್ಲಿಡಬಹುದು, ಮನೆಯ ದೇವರ ಕೋಣೆಯಲ್ಲಿ ಪ್ರತಿಷ್ಠಾಪಿಸಬಹುದು. ಆದರೆ ಮೈಸೂರಿನ ನಗರಪಾಲಿಕೆಯು ಶೌಚಾಲಯಗಳ ಬಳಿ ದೇವರ ಚಿತ್ರಗಳನ್ನು ಪ್ರತಿಷ್ಠಾಪಿಸಿದೆ. ಜನರು ಮೂತ್ರ ವಿಸರ್ಜಿಸುವ ಸ್ಥಳಗಳಲ್ಲೆಲ್ಲಾ ಹಿಂದು ದೇವರ ಚಿತ್ರಗಳನ್ನು ಅಳವಡಿಸಿದೆ. ಜನರು ಮೂತ್ರ ವಿಸರ್ಜಿಸುವುದನ್ನು ತಡೆಗಟ್ಟಲು ಹಿಂದು ದೇವರ ಚಿತ್ರಗಳನ್ನು ಅವಮಾನಿಸುತ್ತಿದೆ ಪಾಲಿಕೆ. ಶೌಚಾಲಯ ನಿರ್ಮಿಸುವ ಯೋಗ್ಯತೆ ಇಲ್ಲದ ಪಾಲಿಕೆಗೆ ಹಿಂದು ದೇವರ ಚಿತ್ರಗಳನ್ನು ಅವಮಾನಿಸುವ ಅಧಿಕಾರವಿದೆಯೇ? ಇದೇ ರೀತಿಯ ಸನ್ನಿವೇಶವನ್ನು ಬಹಳ ನಗರಗಳಿಂದು ಎದುರಿಸುತ್ತಿವೆ. ಇನ್ನೊಂದು ವಿಷಯ, ಹಿಂದುಗಳ ನಂಬಿಕೆಯನ್ನು ಮೌಢ್ಯ ಎಂದು ಕೆಲವರು ಹಂಗಿಸುತ್ತಾರಾದರೂ, ಆ ಮೌಢ್ಯ ಹಿಂದುಗಳನ್ನು ಉಗ್ರರನ್ನಾಗಿಸಿಲ್ಲ, ಅವರೆಲ್ಲಾ ಶಾಂತಿಪ್ರಿಯರು. ಇದರಿಂದ ಯಾರಿಗೂ ಹಾನಿಯಿಲ್ಲವಲ್ಲವೇ? ಬಹುಶಃ ಇದೇ ಕಾರಣಕ್ಕಾಗಿಯೇನೋ ಮತಾಂಧರೂ ಕ್ಷೇಮವಾಗಿದ್ದಾರೆ.
ಮೈಸೂರು ಮುಂತಾದ ಬಹತೇಕ ನಗರಗಳಲ್ಲಿ ನಾಗರಿಕ ಸೌಲಭ್ಯಗಳಿಗಾಗಿ ಸಿ.ಎ. ನಿವೇಶನಗಳಲ್ಲೆಲ್ಲಾ ದೋಚುವ ಶಿಕ್ಷಣ ಸಂಸ್ಥೆಗಳು, ಬಾಚುವ ನರ್ಸಿಂಗ್ ಹೋಂಗಳು, ಗೋರುವ ಕಲ್ಯಾಣ ಮಂಟಪಗಳಿವೆ. ಈ ಸಿ.ಎ ನಿವೇಶನಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದರೆ ನಾಗರಿಕ ಸೌಲಭ್ಯ ಒದಗಿಸಿದಂತಾಗುತ್ತದೆ ಅಲ್ಲವೇ?
ಇದೇನೇ ಇದ್ದರೂ, ನೀವು ನಾಸ್ತಿಕರಾಗಿದ್ದರೆ ನಾಸ್ತಿಕರಾಗಿಯೇ ಇರಿ. ಇದಕ್ಕೆ ಯಾವ ತಕರಾರೂ ಇಲ್ಲ. ಆದರೆ ಆಸ್ತಿಕರನ್ನು ಹೀಯಾಳಿಸಬೇಡಿ. ಕಡೆಗೆ ನಾನು ಹೇಳುವುದು ಇಷ್ಟೆ-'ದೇವರ ಭಯವೇ ಜ್ಞಾನಕ್ಕೆ ಮೂಲ' ಎಂಬುದನ್ನು ಮರೆಯದಿರಿ.
- ಪಿ.ಜೆ. ರಾಘವೇಂದ್ರ
ಮೈಸೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

