ದುಡುಕಿನ ಮಾತುಗಳಿಂದ ಕೆಡುಕುಗಳೇ ಜಾಸ್ತಿ...

Updated on: 

'ಸ್ವಾತಂತ್ರ್ಯ ದಿನಾಚರಣೆಯ ಕಾರಣದಿಂದ ಮಾಲ್‌ಗಳಲ್ಲಿ ಎಲ್ಲಾ ವಸ್ತುಗಳ ಮೇಲೂ ಭಾರಿ ಡಿಸ್ಕೌಂಟ್ ಇದೇ ಕಣೇ. ಫಿಫ್ಟಿ ಪರ್ಸೆಂಟ್ ಆಫ್! ಚೆನ್ನಾಗಿರೋ ಡ್ರೆಸ್‌ಗಳಿದ್ರೆ ಐದೈದು ಜೊತೆ ತಂದು ಬಿಡೋಣ ಕಣೇ. ನಾನು ನೇರವಾಗಿ ಮಾಲ್‌ಗೆ ಬರ್ತೇನೆ. ಮಧ್ಯಾಹ್ನ ಬೇಗ ವಾಪಸ್ ಹೋಗಬೇಕು. ಲೇಟ್ ಮಾಡಬೇಡ. ನೀನೂ ಬೇಗ ಬಂದು ಬಿಡು ಪ್ಲೀಸ್...' ಇಷ್ಟು ಹೇಳಿ, ನನ್ನ ಉತ್ತರಕ್ಕೂ ಕಾಯದೆ, ಫೋನ್ ಕಟ್ ಮಾಡಿದಳು ಗೀತಾಂಜಲಿ. ಅವಳು ಯಾವಾಗಲೂ ಹಾಗೆಯೇ. ಹೇಳಬೇಕು ಅನಿಸಿದ್ದನ್ನು ಚಟ್‌ಪಟ್ ಎಂದು ಹೇಳಿ ನಂತರ ಫೋನ್ ಕಟ್ ಮಾಡಿ ಬಿಡುತ್ತಾಳೆ.
ಸಮಯಕ್ಕೆ ಸರಿಯಾಗಿ ಮಾಲ್‌ಗೆ ಹೋದರೆ, ಅವಳು ನನಗಿಂತ ಮೊದಲೇ ಬಂದು ಕಾಯುತ್ತಿದ್ದಳು. ಸೋತ ದನಿಯಲ್ಲಿ 'ಹಲೋ' ಎಂದಳು. ಏನೋ ಎಡವಟ್ಟಾಗಿದೆ ಅಂದುಕೊಂಡು -ಯಾಕೆ ಸಪ್ಪಗಿದ್ದೀಯ? ಏನಾಯ್ತೆ? ಎಂದೆ. ಅಯ್ಯೋ, ಈ ಮಾಲ್‌ನವರು ಸರಿಯಾಗಿ ಟೊಪ್ಪಿ ಹಾಕ್ತಾರೆ ಕಣೇ. ಅರ್ಧ ಬೆಲೆಗೆ ತೀರುವಳಿ ಮಾರಾಟ ಅಂತ ಜಾಹೀರಾತು ನೀಡಿದ್ದಾರೆ ನಿಜ. ಆದರೆ, ಅವರ ಲೆಕ್ಕದಲ್ಲಿ ಅರ್ಧ ಬೆಲೆ ಅಂದ್ರೆ ಎಷ್ಟು ಗೊತ್ತಾ? ನಾಲ್ಕು ಸಾವಿರ! ಒಂದು ಡ್ರೆಸ್‌ಗೆ ಅಷ್ಟೊಂದು ದುಡ್ಡು ಕೊಡೋಕಾಗುತ್ತಾ ಅಂತ ಯೋಚಿಸ್ತಿದ್ದೆ. ಈ ಜಾಹೀರಾತಿನಿಂದ ಮೋಸ ಹೋಗಿ ಅರ್ಧ ದಿನ ಹಾಳಾಯ್ತಲ್ಲ ಅಂತ ಬೇಜಾರಾಯ್ತು ಎಂದಳು. ಅವಳು ಹೀಗೆಲ್ಲ ಹೇಳಿದ ಮೇಲೆ ನನಗೂ ಬಟ್ಟೆಗಳನ್ನು ನೋಡುವ, ಖರೀದಿಸುವ ಮನಸ್ಸು ಬರಲಿಲ್ಲ. ಇಬ್ಬರೂ ಸುಮ್ಮನೇ ಟೈಂಪಾಸ್‌ಗೆ ಎರಡು ರೌಂಡ್ ಹೊಡೆದು, ಜ್ಯೂಸ್ ಕುಡಿದು, ಪಾನಿಪುರಿ ತಿಂದೆವು. ಆನಂತರ ಮನೆಗೆ ಹೊರಟೇಬಿಟ್ಟಳು ಗೀತಾಂಜಲಿ. ಅವಳನ್ನು ಬಸ್ ಹತ್ತಿಸಿ ಹೆಜ್ಜೆ ಎತ್ತಿಡುವಾಗಲೇ ಎದುರಿಂದ ಬಂದಾಕೆ 'ಪ್ರ...' ಅಂದೇಬಿಟ್ಟಳು.
ಅವಳು ಅನಿತಾ. ಪಿಯೂಸಿಯಲ್ಲಿ ಕ್ಲಾಸ್‌ಮೇಟ್ ಆಗಿದ್ದವಳು. ಆನಂತರದಲ್ಲಿ ಸಂಪರ್ಕದಿಂದ ಕಳಚಿಕೊಂಡಿದ್ದ ಈಕೆ, ಈಗ ದಿಢೀರನೆ ಎದುರಾಗಿ 'ಪ್ರ...' ಅಂದಿದ್ದಳು. ಎಲ ಎಲಾ, ಈ ಬೆಂಗಳೂರಲ್ಲಿ ಜನ ಹೇಗೆಲ್ಲಾ ಸಿಕ್ಕಿ ಬಿಡ್ತಾರಲ್ಲ ಅಂದುಕೊಂಡೇ ಅವಳ ಸಾಂಗತ್ಯವನ್ನು ನೆನಪಿಸಿಕೊಂಡೆ. ಈ ಅನಿತಾಗೆ ಸುನೀತಾ ಎಂಬ ತಂಗಿಯಿದ್ದಳು. ಅವರು ಅವಳಿ ಸಹೋದರಿಯರು. ಸುನೀತಾಗಿಂತ ಅರ್ಧ ಗಂಟೆ ಮೊದಲು ಅನಿತಾ ಹುಟ್ಟಿದ್ದಳಂತೆ! ಅವಳಿಗಳು ಅಂದ ಮೇಲೆ ಕೇಳಬೇಕಾ? ಅವಳ್ಯಾರು, ಇವಳ್ಯಾರು ಎಂದು ಗುರುತಿಸಲಾಗದೆ ಎಲ್ಲರೂ ಫೂಲ್ ಆಗುತ್ತಿದ್ದರು. ಅನಿತಾಗೆ ಎಡಗೆನ್ನೆಯ ಮೇಲೆ ಮಚ್ಚೆ ಇತ್ತು. ಇಬ್ಬರನ್ನೂ ಖಡಕ್ಕಾಗಿ ಗುರುತಿಸಲು ಇದ್ದ ದಾರಿ ಇದೊಂದೇ.
'ಅವರಿಬ್ಬರೂ ಒಂದೇ ಸೆಕ್ಷನ್‌ನಲ್ಲಿದ್ದರು. ಹಾಗಾಗಿ ಪ್ರಶ್ನೆ ಕೇಳುವಾಗ, ಅಟೆಂಡೆನ್ಸ್ ಕೂಗುವಾಗ ಅವಳ್ಯಾರು, ಇವಳ್ಯಾರು ಎಂದು ತಿಳಿಯದೆ ಲೆಕ್ಚರರ್‌ಗಳೂ ಗೊಂದಲಕ್ಕೆ ಬೀಳುತ್ತಿದ್ದರು. 'ನೀವು ಬೇರೆ ಬೇರೆ ಸೆಕ್ಷನ್‌ಗೆ ಹಾಕಿಸಿಕೊಳ್ಳಿ. ಇಲ್ಲಾಂದ್ರೆ ಬೇರೆ ಬೇರೆ ಡಿಸೈನ್‌ನ ಡ್ರೆಸ್ ಹಾಕ್ಕೊಂಡು ಬಂದು, ಕ್ಲಾಸ್ ಶುರುವಾದ ತಕ್ಷಣ ಅನಿತಾ ಯಾರು, ಸುನೀತಾ ಯಾರು ಅಂತ ಅನೌನ್ಸ್ ಮಾಡಿಬಿಡಿ' ಎನ್ನುತ್ತಿದ್ದರು. ಕಾಲೇಜಿನಲ್ಲೇ ಇದ್ದ ಕೆಲವು ಪೋಲಿಗಳು- ಈ ಬೆಡಗಿಯರನ್ನು ಮದುವೆ ಆದ ಗಂಡಂದಿರಿಗೂ ಅವಳ್ಯಾರು, ಇವಳ್ಯಾರು ಅಂತ ಗುರುತೇ ಸಿಗದೆ ಹೋದ್ರೆ ಗತಿ ಏನು ಎಂದು ಪ್ರಶ್ನೆ ಹಾಕಿಕೊಂಡು ತಮ್ಮಷ್ಟಕ್ಕೆ ತಾವೇ ನಗುತ್ತಿದ್ದರು. ಅವರಿಬ್ಬರೂ ಅವಳಿಗಳಾಗಿದ್ದರಿಂದ, ಒಟ್ಟಿಗೇ ಮದುವೆಯಾಗುತ್ತಾರೆ ಎಂಬ ನಂಬಿಕೆ ಹಲವರಿಗಿತ್ತು. ಆದರೆ ಆಗಿದ್ದೇ ಬೇರೆ. ಡಿಗ್ರಿ ಮುಗೀತಿದ್ದಂತೆಯೇ ಸುನೀತಾಗೆ ಒಂದು ಒಳ್ಳೆಯ ಸಂಬಂಧ ಬಂತು. ಡಬ್ಬಲ್ ಡಿಗ್ರಿ ಮಾಡುವ ಉದ್ದೇಶ ಹೊಂದಿರುವುದರಿಂದ ನಾನು ಸದ್ಯಕ್ಕೆ ಮದುವೆಯಾಗಲಾರೆ. ತಂಗಿಗೇ ಮೊದಲು ಮದುವೆ ಮಾಡಿ ಎಂದಳಂತೆ ಅನಿತಾ. ಪರಿಣಾಮವಾಗಿ, ಸುನೀತಾಳ ಮದುವೆಯಾಗಿತ್ತು. ಈ ಸುದ್ದಿಗಳೆಲ್ಲಾ ಅವರಿವರ ಮೂಲಕ ಕಿವಿಗೆ ಬಿದ್ದಿದ್ದವು. ಈಗ ಎದುರಿಗೇ ನಿಂತಿದ್ದ ಅನಿತಾಗೆ ಕೇಳಿದೆ: ನಿನ್ನ ತಂಗಿಗೆ ಮದುವೆ ಆಯ್ತಂತಲ್ಲ? ಈಗ ಹೇಗಿದ್ದಾಳೆ? ಎಲ್ಲಿದ್ದಾಳೆ?
ತಂಗಿಯ ಪ್ರಸ್ತಾಪ ಬಂದಾಕ್ಷಣ ಅನಿತಾ ಮುಖ ಕಿವಿಚಿಕೊಂಡಳು. ಹುಟ್ತಾ ಅಣ್ಣ-ತಮ್ಮ. ಬೆಳೀತಾ ಬೆಳೀತಾ ದಾಯಾದಿ ಅಂತಾರಲ್ಲ; ಹಂಗಾಗಿದೆ ನಮ್ಮ ಸಂಬಂಧ. ಮದುವೆಯಾದ ಮೇಲೆ ತಂಗಿ ಸಂಪೂರ್ಣವಾಗಿ ಬದಲಾಗಿದ್ದಾಳೆ. ತಿಂಗಳ ಹಿಂದೆ ನಮ್ಮ ಬರ್ತ್‌ಡೇ ಇತ್ತು. ಇಷ್ಟು ವರ್ಷ ಒಟ್ಟಾಗಿಯೇ ಕೇಕ್ ಕಟ್ ಮಾಡಿದ್ದವರು ನಾವು. ಈ ಬಾರಿಯೂ ಹಾಗೇ ಮಾಡಬೇಕು ಅಂದ್ಕೊಂಡಿದ್ವಿ. ಅಪ್ಪ-ಅಮ್ಮ, ವಾರ ಮೊದಲೇ ಸುನೀತಾಗೂ, ಅವಳ ಗಂಡನಿಗೂ ನಾಲ್ಕು ಬಾರಿ ಫೋನ್ ಮಾಡಿ ಕರೆದ್ರು. ನಾನೂ ಆಹ್ವಾನಿಸಿದೆ. ಖಂಡಿತ ಬರ್ತೇವೆ ಅಂದವರು ಬರಲೇ ಇಲ್ಲ. ಯಾಕೆ ಬರಲಿಲ್ಲ ಅಂತ ಕೇಳಿದ್ರೆ ಬ್ಯುಸಿ ಅಂದ್ರು. ಅಪ್ಪ-ಅಮ್ಮನ ಜೊತೆ ಅರ್ಧಗಂಟೆ ಇರೋಕೆ ಆಗದಷ್ಟು ಬ್ಯುಸಿ ಆಗಿದಾಳೆ ನೋಡು ಎಂದೆಲ್ಲಾ ಅನಿತಾ ನೋವು ಹೇಳಿಕೊಂಡಳು. ಅವಳನ್ನು ಸಮಾಧಾನಿಸಿ ಬೀಳ್ಕೊಡುವ ಮುನ್ನ ಸುನೀತಾಳ ನಂಬರ್ ಪಡೆದುಕೊಂಡೆ.
ಎರಡು ದಿನಗಳ ನಂತರ ಸುನೀತಾಗೆ ಕಾಲ್ ಮಾಡಿ, ಅನಿತಾ ಹೇಳಿದ್ದನ್ನೆಲ್ಲ ಹೇಳಿ-'ನೀನು ಹೀಗೆಲ್ಲ ಮಾಡಬಹುದಾ ಡಿಯರ್? ಅಕ್ಕ ತುಂಬಾ ನೊಂದು ಕೊಂಡಿದಾಳೆ ಕಣೇ. ಬರ್ತ್‌ಡೇಗೂ ಹೋಗಲು ಆಗದಂಥ ಅದ್ಯಾವ ಘನಂದಾರಿ ಕೆಲ್ಸವಿತ್ತು ಸುನೀ...?' ಎಂದೆ. ಸುನೀತಾ ತಕ್ಷಣವೇ -'ಛೆ, ಛೆ, ಹಾಗೇನೂ ಇಲ್ಲ. ಮದುವೆ ಆದ ಮೇಲೆ ಇದು ನಿನ್ನ ಮೊದಲ ಬರ್ತ್‌ಡೇ. ಹಾಗಾಗಿ ನಮ್ಮ ಮನೇಲಿ ಮಾಡೋಣ. ಅದೂ ಅಲ್ಲದೆ, ನಾವು ಗಂಡ-ಹೆಂಡ್ತಿ ನಿಮ್ಮ ಮನೆಗೆ ಹೋದ್ರೆ, ಅಲ್ಲಿ ನಮಗೆ ಸಿಗುವ ರಾಜಾತಿಥ್ಯ, ನಾವು ಪಿಸಪಿಸ ಮಾತಾಡೋದು, ಮೈಗೆ ಮೈ ತಗುಲಿಸಿಕೊಂಡು ಓಡಾಡುವುದನ್ನು ಕಂಡು ನಮ್ಮ ಅಕ್ಕನಿಗೆ ಬೇಸರ ಆಗಬಹುದು. ಬರ್ತ್‌ಡೇ ದಿನ ನಮ್ಮ ಕಡೆಯಿಂದ ಆಕೆಗೆ ಬೇಸರ ಆಗುವುದು ಬೇಡ ಎಂದು ನಮ್ಮ ಯಜಮಾನರು ಹೇಳಿದ್ರು ಕಣೇ. ಅದಕ್ಕೇ ನಾನು ಹೋಗಲಿಲ್ಲ. ಅಕ್ಕ ಅದನ್ನೇ ತಪ್ಪಾಗಿ ಅರ್ಥ ಮಾಡ್ಕೊಂಡಿದ್ದಾಳೆ. ಇಷ್ಟು ದಿನದ ನಂತರ ನಾನೇ ಫೋನ್ ಮಾಡಿ ಹೇಳಿದ್ರೆ  ಅಕ್ಕ ಇದನ್ನೆಲ್ಲ ಖಂಡಿತ ನಂಬಲ್ಲ. ನೀನೇ ಹೆಲ್ಪ್ ಮಾಡು ಪ್ಲೀಸ್‌' ಅಂದಳು.
 ಮರುದಿನ ಅನಿತಾಗೆ ಫೋನ್ ಮಾಡಿ ಎಲ್ಲವನ್ನೂ ತಿಳಿಸಿದೆ. 'ತಂಗಿಯ ಮೇಲೆ ಸುಮ್ನೇ ಅನುಮಾನಪಟ್ಟೆ.  ನೀನು ಸಿಗದೇ ಹೋಗಿದ್ರೆ ನಮ್ಮ ಬಾಂಧವ್ಯ ಖಂಡಿತ ಹಾಳಾಗಿ ಬಿಡ್ತಿತ್ತು. ದುಡುಕಿನಿಂದ ಕೆಡುಕೇ ಜಾಸ್ತಿ ಎಂದು ತಿಳಿಸಿಕೊಟ್ಟವಳು ನೀನು. ಅದಕ್ಕಾಗಿ ಥ್ಯಾಂಕ್ಸ್ ಕಣೇ' ಎಂದಳು ಅನಿತಾ.
ಒಂದು ಒಳ್ಳೆಯ ಕೆಲಸ ಮಾಡಿದ ಖುಷಿಯಲ್ಲಿ ನಾನೂ ಸಂಭ್ರಮಿಸಿದೆ...

-ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com