ಶುರುವಾಗಿದೆ ಈರುಳ್ಳಿ, ಬೆಳ್ಳುಳ್ಳಿ ಗಲಾಟೆ!
ಈಗ ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ ಈರುಳ್ಳಿಯದ್ದೇ ಚರ್ಚೆ. ಏಕೆಂದರೆ ಈರುಳ್ಳಿಯ ದರ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಇಲ್ಲಿ ಹೇಳುತ್ತಿರುವುದು ಆ ಕಥೆಯಲ್ಲ. ಊಟದಲ್ಲಿ ಕೆಲವರು ಈರುಳ್ಳಿ ಬಳಸಲ್ಲ, ಮತ್ತೆ ಕೆಲವರು ಬೆಳ್ಳುಳ್ಳಿ ಬಳಸಲ್ಲ. ಆದರೆ ಮೈಸೂರಿನಲ್ಲಿ ಇಸ್ಕಾನ್ ಸಂಸ್ಥೆ ಪೂರೈಸುತ್ತಿರುವ ಊಟದಲ್ಲಿ ಇವರೆಡನ್ನೂ ಬಳಸುತ್ತಿಲ್ಲ. ಇದು ವಿವಾದಕ್ಕೆ ಕಾರಣವಾಗಿದೆ. ಇದರಿಂದ ಮಕ್ಕಳಿಗೆ ಪೌಷ್ಟಿಕಾಂಶ ದೊರೆಯುತ್ತಿಲ್ಲ. ಆದ್ದರಿಂದ ಇಸ್ಕಾನ್ಗೆ ವಹಿಸಿರುವ ಬಿಸಿಯೂಟ ಯೋಜನೆಯನ್ನು ರದ್ದು ಮಾಡಿ, ಸರ್ಕಾರವೇ ನಿರ್ವಹಿಸಿ, ಮಕ್ಕಳಿಗೆ ಮೊಟ್ಟೆ, ಮಾಂಸ, ಬಾಳೆಹಣ್ಣು ಜತೆಗೆ ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಎಲ್ಲ ಪೌಷ್ಟಿಕಾಂಶವಿರುವ ಆಹಾರ ಪೂರೈಸಬೇಕು ಎಂದು ಎಸ್ಎಫ್ಐ ಆಗ್ರಹಿಸಿದೆ. ದಲಿತ ಸಂರ್ಘ ಸಮಿತಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಇವರ ಆಗ್ರಹ ಏನೇ ಇರಲಿ, ಈಗಾಗಲೇ ಪಾಠ ಮಾಡುವುದನ್ನು ಬಿಟ್ಟು ಬಿಸಿಯೂಟ, ಹಾಲು, ಕಬ್ಬಿಣಾಂಶದ ಮಾತ್ರೆ ವಿತರಿಸುತ್ತಿರುವ ನಾವು ಇನ್ನು ಮುಂದೆ ಮೊಟ್ಟೆ, ಬಾಳೆಹಣ್ಣು, ಮಾಂಸಾಹಾರ ವಿತರಿಸಬೇಕಾಗಿ ಬರಬಹುದು ಎಂದು ಶಿಕ್ಷಕರು ಚಿಂತಾಕ್ರಾಂತರಾಗಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುವ ಬದಲು ಗುಣಮಟ್ಟದ ಆಹಾರ ನೀಡುವ ಕಡೆ ಗಮನಹರಿಸಬೇಕಾಗುತ್ತದೆಯೋ ಏನೋ?!
ನಾನ್ ಮಾಡಿದ್ರೆ ಓಕೆ, ಅವರು ಮಾಡಿದ್ದೇಕೆ?
ಮೈಸೂರು ಸಂಸದ ಎಚ್.ವಿಶ್ವನಾಥ್ ಅವರು ತೀಕ್ಷ್ಣವಾದ ಮಾತಿಗೆ ಹೆಸರಾದವರು. ಅವರ ಹರಿತವಾದ ನಾಲಿಗೆಗೆ ಸ್ವಪಕ್ಷೀಯರೇ ಇರಲಿ, ವಿಪಕ್ಷೀಯರೇ ಇರಲಿ ಆಹಾರವಾಗದೆ ಉಳಿಯುವುದಿಲ್ಲ. ಹೀಗಿರುವಾಗ ಅವರು ಈ ಹಿಂದೆ ಪ್ರತಿನಿಧಿಸಿದ್ದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಸದಸ್ಯ ಸಾ.ರಾ. ಮಹೇಶ್ ಹಾಗೂ ವಿಶ್ವನಾಥ್ ನಡುವೆ ಇತ್ತಿತ್ತಲಾಗಿ ವಾಕ್ಸಮರ ಜೋರಾಗಿದೆ. ಸ್ವಕ್ಷೇತ್ರ, ಮೈಸೂರಿನಲ್ಲಿ ಆಗಾಗ ಇಬ್ಬರೂ ಪರಸ್ಪರ ಹೇಳಿಕೆ ಕೊಡುತ್ತಲೇ ಇರುತ್ತಾರೆ. ಈ ಬಾರಿ ಸಾ.ರಾ. ಮಹೇಶ್ ಪ್ರೆಸ್ಮೀಟ್ ಮಾಡಿದ ನಂತರ ವಿಶ್ವನಾಥ್ ಪ್ರೆಸ್ಮೀಟ್ ಮಾಡಿದ್ರು. ಮಾಧ್ಯಮಗಳ ವರದಿಗಳ ಬಗ್ಗೆ ಆಕ್ಷೇಪ ತೆಗೆದರು. ನಾನು ಟೀಕೆ ಮಾಡಿದ್ರೆ ಓಕೆ, ಬೇರೆಯವ್ರು ಮಾಡಿದ್ರೆ ಯಾಕೆ ಎಂಬಂತಿತ್ತು ಅವರ ಮಾತು. ನಾನು ಏನೆಂದು ಗೊತ್ತಿದ್ದರೂ ನನ್ನ ವಿರುದ್ಧ ಸಾ.ರಾ. ಮಹೇಶ್ ಮಾಡಿದ್ದ ಟೀಕೆಗೆ ಪ್ರಾಮುಖ್ಯತೆ ನೀಡಿ ಪ್ರಕಟಿಸಿದ್ದು ಸರಿಯಲ್ಲ ಎಂದು ಮುನಿಸು ತೋರಿದರು. ಆಗ ಪತ್ರಕರ್ತರೊಬ್ಬರು, ಸಾರ್, ನೀವು ಯಾರನ್ನೂ ಬಿಡುವುದಿಲ್ಲ. ಎಲ್ಲರನ್ನು ಟೀಕೆ ಮಾಡ್ತೀರಾ. ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳು ಎರಡೂ ಕಡೆಯ ಹೇಳಿಕೆಗಳಿಗೂ ಮಹತ್ವ ಕೊಡಬೇಕಾಗುತ್ತದೆ ಎಂದು ಸಮಾಧಾನಪಡಿಸಿದ್ರು!
ಪೊಲೀಸರ ಕೈಯಲ್ಲಿ ಕ್ಯಾಮರಾ ಕೊಟ್ಟ ಸಲೀಂ!
ಮೈಸೂರಿನಲ್ಲಿ ಈಗ ಎಲ್ಲೆಡೆ ಪೊಲೀಸರ ಕೈಯಲ್ಲಿ ಕ್ಯಾಮರಾ. ಅರೇ ಇದೇನಿದು ಎಂದು ಹುಬ್ಬೇರಿಸಬೇಡಿ. ಸಂಚಾರ ನಿರ್ವಹಣೆ ವಿಷಯದಲ್ಲಿ ಪಿಎಚ್ಡಿ ಪಡೆದಿರುವ ಎಂ.ಎ.ಸಲೀಂ ಎಂಬವರು ಮೈಸೂರು ನಗರಕ್ಕೆ ಪೊಲೀಸ್ ಆಯುಕ್ತರಾಗಿ ಬಂದಿದ್ದಾರೆ. ಇವರಿಗೆ ಕಾನೂನು ಮತ್ತು ಸುವ್ಯವಸ್ಥೆಗಿಂತ ಸಂಚಾರ ಎಂದರೇ ಪ್ರಿಯ. ಹೀಗಾಗಿ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲು ಪ್ರಮುಖ ರಸ್ತೆ, ವೃತ್ತಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ಡಿಜಿಟಲ್ ಕ್ಯಾಮರಾ ಕೊಡಿಸಿದ್ದಾರೆ. ಪೊಲೀಸರು ಸಂಚಾರ ನಿಯಂತ್ರಣ ಮಾಡುವುದನ್ನು ಬಿಟ್ಟು ಕೈಯಲ್ಲಿ ಕ್ಯಾಮರಾ ಹಿಡಿದು, ನಿಯಮ ಉಲ್ಲಂಘಿಸುವವರ ಫೋಟೋ ತೆಗೆಯುವುದರಲ್ಲಿ ಬಿಜಿಯಾಗಿದ್ದಾರೆ.
ಡೈಲಾಗ್ನಲ್ಲೇ 11,11,111 ವಂತಿಗೆ ಕೊಟ್ಟ ಉಮಾಶ್ರೀ!
ಖ್ಯಾತ ಹಾಸ್ಯ ನಟಿ ಉಮಾಶ್ರೀ ಡೈಲಾಗ್ ಹೊಡೆಯುವುದರಲ್ಲಿ ಎತ್ತಿದ 'ಕೈ'. ಇತ್ತೀಚೆಗೆ ಬಾಗಲಕೋಟೆಯಲ್ಲಿ ನಡೆದ ದೇವರಾಜ ಅರಸು ಜನ್ಮ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೊದಲಿಗೆ ಭಾಷಣ ಮಾಡಿದ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲು ಉಮಾಶ್ರೀ ಅವರು 11,11,111 ವಂತಿಗೆ ನೀಡುತ್ತಾರೆ ಎಂದು ಘೋಷಿಸಿದರು. ಬಳಿಕ ಮೈಕ್ ಮುಂದೆ ಬಂದು ನಿಂತ ಉಮಾಶ್ರೀ ಅವರು, ಪಾಟೀಲಣ್ಣ ಹೇಳಿದಂತೆ ನಾನು ದೇಣಿಗೆ ನೀಡ್ತಿನಿ ಎಂದರು. ಇವರ ಮಾತು ಕೇಳಿ ಸಭಿಕರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು. ಆದರೆ, ಚಪ್ಪಾಳೆ ನಿಲ್ಲುತ್ತಿದ್ದಂತೆ ಮಾತು ಬದಲಿಸಿದ ಉಮಾಶ್ರೀ, 'ಅಯ್ಯೋ ನಾನು ಜೋಕ್ಗೆ ಅಷ್ಟು ಹಣ ಕೊಡುವುದಾಗಿ ಡೈಲಾಗ್ ಹೊಡೆದೆ. ನೀವು ಅದನ್ನ ನಂಬೇ ಬಿಟ್ಟರಲ್ಲ. ನಾನೇನು ಅಷ್ಟು ಹಣ ಕೊಡೋದಿಲ್ಲ. ಕೈಲಾದಷ್ಟು ಕೊಡ್ತೇನಿ' ಎಂದು ಆಸೀನರಾದರು. ಇದನ್ನೆಲ್ಲಾ ಆಲಿಸಿದ ತೇರದಾಳ ಕ್ಷೇತ್ರದ ಜನತೆ ಚುನಾವಣೆಗೆ ಮುನ್ನ ನೀಡಿದ ಭರವಸೆಗಳೂ ಡೈಲಾಗ್ ಇರಬಹುದಾ ಎಂದು ಕನ್ಫ್ಯೂಸ್ ಆಗಿದ್ದಾರೆ!
ರೈ ಸಮಯ ಪಾಲನೆಗೆಸಂಘಟಕ ಅಡ್ಡಿ!
ರಮಾನಾಥ ರೈ ಸಚಿವರಾದ ಬಳಿಕ ಸಮಯ ಪಾಲನೆಯಲ್ಲಿ ಬಹಳ ಖಡಕ್ ಆಗಿದ್ದಾರೆ! ದಿನದ ಮೊದಲ ಕಾರ್ಯಕ್ರಮಕ್ಕೆ ಐದ್ಹತ್ತು ನಿಮಿಷ ಮೊದಲೇ ಬಂದು ಕೂರುತ್ತಾರೆ. ಶನಿವಾರ ಶಕ್ತಿನಗರ ಸಾನ್ನಿದ್ಯ ವಿಶೇಷ ಮಕ್ಕಳ ವಿದ್ಯಾರ್ಥಿನಿಯರ ನಿಲಯ ಉದ್ಘಾಟನೆಗೆ ನಿಗದಿತ ಸಮಯಕ್ಕೆ ಸರಿಯಾಗಿಯೇ ರೈ ಆಗಮಿಸಿದ್ದರು. ಕಾರ್ಯಕ್ರಮದ ದೀಪ ಬೆಳಗಬೇಕಾದವರು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ. ಉಳಿದಂತೆ ಆರೋಗ್ಯ ಸಚಿವ ಖಾದರ್, ಶಾಸಕ ಮೋನಪ್ಪ ಭಂಡಾರಿ ಬರಬೇಕಿತ್ತು. ಅಷ್ಟರಲ್ಲೇ ಗಂಟೆ 10.15 ದಾಟಿತ್ತು. ಉಳಿದವರಿಗೆ ಕಾದು ಸಹನೆ ಕಳಕೊಂಡ ಸಚಿವ ರೈ, ಸಂಘಟಕರನ್ನು ಕರೆದವರೇ ನೇರವಾಗಿ ತಾವೇ ಉದ್ಘಾಟನೆಗೆ ಮುಂದಾದರು. ಸಚಿವರ ತರಾತುರಿ ಗಮನಿಸಿದ ಸಂಘಟಕರು ಆಗಲೇ ಉದ್ಘಾಟನೆ ನೆರವೇರಿಸಿದರು. ಬಳಿಕ ಭಾಷಣದಲ್ಲಿ ಸಚಿವ ರೈ ಹೇಳಿದ್ದು, 'ನಾನು ಹಿಂದೆ ಸಚಿವನಾಗಿದ್ದಾಗ ಕಾರ್ಯಕ್ರಮಕ್ಕೆ ವಿಳಂಬವಾಗಿ ಹೋಗುವುದಾಗಿ ಅಪವಾದವಿತ್ತು. ಈ ಬಾರಿ ಆ ಕಳಂಕ ನಿವಾರಿಸಲು ಸಮಯಕ್ಕೆ ಸರಿಯಾಗಿ ಬರುತ್ತಿದ್ದೇನೆ. ಆದರೆ ಸಮಾರಂಭ ಶುರು ಮಾಡುವಾಗಲೇ ವಿಳಂಬ ಮಾಡುತ್ತಾರೆ. ನಾನು ಸರಿಯಾಗಬೇಕೆಂದರೂ ಸಂಘಟಕರು ಬಿಡುತ್ತಿಲ್ಲವಲ್ಲ' ಎಂದು ಪರಿತಪಿಸಿದರು.
- ನಂಬಿರಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

