ಸಂಶೋಧನ ದಿಗ್ಗಜ ಎಚ್. ದೇವೀರಪ್ಪ

ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ (ಈಗ ದಾವಣಗೆರೆ ಜಿಲ್ಲೆ) ಮಲ್ಲಿಗೇನಹಳ್ಳಿಯಲ್ಲಿ ಜನಿಸಿದ (ದಿ) ಎಚ್. ದೇವೀರಪ್ಪನವರು (6.6.1913-3.1.1988) ಕನ್ನಡ ಸಾಹಿತ್ಯ ಲೋಕದ ಸಂಶೋಧನ ದಿಗ್ಗಜ. ಅವರ ಜನ್ಮಶತಮಾನೋತ್ಸವ ಈ ವರ್ಷ ಅವರನ್ನು ಕೃತಜ್ಞತೆಯಿಂದ ಅತ್ಯಂತ ಗೌರವ ಭಾವನೆಯಿಂದ ಕನ್ನಡಿಗರು ನೆನೆದು ಧನ್ಯರಾಗಬೇಕು. ಅವರೊಬ್ಬ ಶ್ರೇಷ್ಠ ಉನ್ನತ ಮಟ್ಟದ ಸಂಶೋಧಕರಾಗಿದ್ದಂತೆಯೇ ಒಳ್ಳೆಯ ಕಾದಂಬರಿಕಾರರೂ ಕಲೆಗಾರರೂ ಜೀವನ ಚರಿತ್ರಕಾರರೂ ಆಗಿದ್ದರು. ಅವರನ್ನು 1975ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸಾಹಿತ್ಯ ಪ್ರಶಸ್ತಿಯಲ್ಲಿ ಸಿರಿಗೆರೆಯ ತರಳಬಾಳು ಸಂಸ್ಥೆಯು ಮಾನ ಪತ್ರವನ್ನು ನೀಡಿ ಗೌರವಿಸಿದೆ.
ಅವರು ನನ್ನ ಹುಟ್ಟೂರು ಇರುವ ಚನ್ನಗಿರಿ ತಾಲ್ಲೂಕಿನ ವಿಕ್ಕಡ ಹೊನ್ನಾಳಿ ತಾಲ್ಲೂಕಿನವರಾಗಿದ್ದರಿಂದ ಆ ಪ್ರದೇಶದ ಗ್ರಾಮೀಣ ಬದುಕನ್ನೂ ಅನುಭವಿಸಿ ಅದರ ಸಂಸ್ಕೃತಿಯ ಮಧ್ಯೆ ಬಾಳಿ ಬೆಳೆದವನಾದ್ದರಿಂದ ಅವರ ಬಗ್ಗೆ ನನಗೆ ಸಹಜವಾಗಿಯೇ ಅಭಿಮಾನ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ಕಷ್ಟಪಟ್ಟು ಓದಿ ಆ ಕಾಲಕ್ಕೆ ಹೊನ್ನಾಳಿಯಿಂದ ದಾವಣಗೆರೆಗೆ ಬಂದು, ಅಲ್ಲಿಂದ ಬಹು ದೂರದಲ್ಲಿದ್ದ ಎಂದೇ ಆಗಿನ ಜನ ಭಾವಿಸಿದ್ದ ಮೈಸೂರಿಗೆ ಬಂದು ಅಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಲ್ಲಿ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿ ಮುಂದೆ ಅಲ್ಲಿಯ ಪ್ರಾಚ್ಯ ವಿದ್ಯಾ ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿ ಕೆಲಸವನ್ನು ಮಾಡಿ ನಿವೃತ್ತರಾಗಿ, ಕೊನೆಯ ವರ್ಷಗಳನ್ನು ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿ ಕಳೆದರು. ಅವರು ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನ ಕೆಲಸ ಮಾಡುತ್ತಿದ್ದಾಗ ನಾನು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಆನರ್ಸ್ ವಿದ್ಯಾರ್ಥಿಯಾಗಿ ಆಗಾಗ್ಗೆ ಹೋಗಿ ಅವರನ್ನೂ ಇತರ ವಿದ್ವಾಂಸರನ್ನು ಕಂಡು ಹಸ್ತಪ್ರತಿಗಳ ಪರಿಚಯ ಪಡೆಯುತ್ತಿದ್ದೆ. ಮುಂದೆ ಅಧ್ಯಾಪಕನಾದೆ "ಶೂನ್ಯ ಸಂಪಾದನೆಯನ್ನು ಕುರಿತು" ಎಂಬ ನನ್ನ ಮೊದಲ ಸಂಶೋಧನ ಕೃತಿ ರಚಿಸಲು ಆಗ ದೇವಿರಪ್ಪನವರು ಬಹು ಸಹಾಯವನ್ನು ಮಾಡಿದರು. ಶೂನ್ಯ ಸಂಪಾದನೆಯ ನಾಲ್ಕು ಸಂಕಲನಗಳಲ್ಲಿ ಗೂಳೂರು ಸಿದ್ಧವೀರಣ್ಣೊಡೆಯನ ಸಂಕಲನವು ಮಾತ್ರ ಅಚ್ಚಾಗಿದ್ದು ಉಳಿದ ಮೂರು ಸಂಪಾದನೆಗಳು ತಾಕೋಟೆ ಹಸ್ತಪ್ರತಿಗಳಲ್ಲಿದ್ದವು. ಆ ಹಸ್ತಪ್ರತಿಗಳನ್ನು ನೋಡಲು, ಓದಲು ಅವರು ನನಗೆ ಅನುಕೂಲ ಮಾಡಿಕೊಟ್ಟರಲ್ಲದೆ ನನಗೆ ಆ ನನ್ನ ತಾರುಣ್ಯದಲ್ಲಿ ಉತ್ಸಾಹವನ್ನು ತುಂಬಿದರು. ಸ್ವತಃ ಶ್ರೇಷ್ಠ ವಿದ್ವಾಂಸರಾಗಿದ್ದ ಅವರು ಎಲ್ಲ ಯುವ ಸಂಶೋಧಕರಿಗೆ ಪ್ರೋತ್ಸಾಹವನ್ನು ನೀಡಿ ಹುರಿದುಂಬಿಸಿ ಮುನ್ನಡೆಯುತ್ತಿದ್ದರು.
ಕನ್ನಡ ಹಸ್ತಪ್ರತಿ ಶಾಸ್ತ್ರದ ಚರಿತ್ರೆಯಲ್ಲಿ ದೇವೀರಪ್ಪನವರ ಹೆಸರು ಅಜರಾಮರ. ಡಾ. ನರಸಿಂಹಾಚಾರ್, ಎಸ್.ಜಿ. ನರಸಿಂಹಾಚಾರ್, ಆರ್. ಶಾಮಾಶಾಸ್ತ್ರಿ, ಎಂ.ಎ. ರಾಮಾನುಜ ಅಯ್ಯಂಗಾರ್, ಫ.ಗು. ಹಳಕಟ್ಟಿ, ಕೆ.ಕೆ. ಬಸವರಾಜ್, ಡಿ.ಎಲ್. ನರಸಿಂಹಾಚಾರ್, ತೀ.ನಂ. ಶ್ರೀಕಂಠಯ್ಯ, ಆರ್.ಸಿ. ಹಿರೇಮಠ ಇಂತಹ ಶ್ರೇಷ್ಠರ ಹೆಸರುಗಳಲ್ಲಿ ಇವರ ಹೆಸರೂ ಸೇರುತ್ತದೆ. 1950-60ರ ಸುಮಾರಿನಲ್ಲಿ ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನ ಸಂಸ್ಥೆಯು ಹಸ್ತಪ್ರತಿಗಳ ಸಂಗ್ರಹ ಮತ್ತು ಗ್ರಂಥ ಸಂಪಾದನೆ ಶಾಸ್ತ್ರ ವಿಷಯದಲ್ಲಿ ಭಾರತದಾದ್ಯಂತ ಖ್ಯಾತವಾಗಿತ್ತು. ಆ ಸಂದರ್ಭದಲ್ಲಿ ದೇವೀರಪ್ಪನವರು ಕರ್ನಾಟಕದಾದ್ಯಂತ ಸಂಚರಿಸಿ ಹತ್ತು ಸಾವಿರಕ್ಕೂ ಮೇಲ್ಪಟ್ಟು ತಾಡೋಲೆ, ಕೈ ಬರಹದ ಕಾಗದದ ಪ್ರತಿಗಳನ್ನು ಸಂಗ್ರಹಿಸಿದರು. ತಾಕೋಟೆ ಪ್ರತಿಗಳನ್ನು ಈಚಿನವರಿಗೆ ಓದಲು ಸಾಧ್ಯವಾಗದಿದ್ದರೂ ಅವುಗಳ ಒಡೆಯರು ಅವುಗಳಲ್ಲಿ ಕೊಡಲು ಹಿಂದೇಟು ಹಾಕುತ್ತಿದ್ದರು. ಕೆಲವರು ಅವುಗಳನ್ನು ಪೂಜಿಸುತ್ತಿದ್ದರು. ಧೂಳು ಹುಳ ಹತ್ತಿ ಅವು ಕೆಟ್ಟು ಹೋಗಿದ್ದರೂ ಯಾರೂ ಕೊಡುತ್ತಿರಲಿಲ್ಲ. (ಆ ಕಷ್ಟವನ್ನು ನಾನೇ ಸ್ವತಃ ಅನುಭವಿಸಿದ್ದೇನೆ). ಆ ವಿಷಯವನ್ನು ದೇವೀರಪ್ಪನವರು ಅವರ ಸಿಬ್ಬಂದಿ ಪಟ್ಟ ಶ್ರಮ ಅನೂಹ್ಯವಾದುದು. ಅವರು ಸಂಗ್ರಹಿಸಿದ ಓಲೆ ಕಟ್ಟುಗಳು ವೈಜ್ಞಾನಿಕವಾಗಿ ರಕ್ಷಿಸಲ್ಪಟ್ಟು ಇಂದಿಗೂ ಇವೆ.
ಅವರು ಸಂಪಾದಿಸಿದ ಪ್ರಾಚೀನ ಕೃತಿಗಳು ಹಲವಾರು. ಜನ್ನನ ಅಜಿತನಾಥ ಪುರಾಣ, ಹರಿಹರನ ಗಿರಿಜಾ ಕಲ್ಯಾಣ ಇಂತಹ ಹಲವು ಹಳಗನ್ನಡ ಕೃತಿಗಳನ್ನಲ್ಲದೆ ವಿಶೇಷವಾಗಿ ಹರಿಹರನ ಹಲವಾರು ರಗಳೆಗಳನ್ನು ಶಾಸ್ತ್ರೀಯವಾಗಿ ಸಂಪಾದಿಸಿದ್ದಾರೆ. ಹರಿಹರನ ಬಸವರಾಜ ದೇವರರಗಳೆ, ಕುಂಬರ ಗುಂಡಯ್ಯನ ರಗಳೆ ಇತ್ಯಾದಿ ಕೃತಿಗಳು. ಶರಣಚರಿತ ಮಾನಸಂ, ಶಿವಶರಣ ಸಂಪುಟ ಇತ್ಯಾದಿ ಸಂಪುಟಗಳಲ್ಲಿ ಪ್ರಕಟವಾಗಿವೆ. ಒಂದೊಂದು ಸಂಪುಟದಲ್ಲೂ ಪ್ರಸ್ತಾವನೆಯಲ್ಲಿ ಹರಿಹರನ ಕಾಲ ನಿರ್ಣಯ, ಅವನ ಕೃತಿಗಳ ಸಂಖ್ಯೆಯ ನಿರ್ಣಯ, ಅವನ ಭಾಷೆ, ಶೈಲಿ, ಜನಗಳ ಸಾಹಿತ್ಯದ ಚರಿತ್ರೆಯಲ್ಲಿ ಅವನಿಗಿರುವ ವಿಶಿಷ್ಟವಾದ ಸ್ಥಾನಮಾನ, ಟಿಪ್ಪಣಿಗಳು, ಅರ್ಥ ಕೋಶ ಇತ್ಯಾದಿಗಳನ್ನು ಕೊಟ್ಟಿದ್ದಾರೆ. ಅವರ ಪ್ರಸ್ತಾವನೆಗಳಲ್ಲಿ ವಿದ್ವಾಂಸನೊಬ್ಬನ ಜೀವಮಾನದ ನಿರಂತರ ಶ್ರಮ, ನಿಷ್ಠೆ ಎದ್ದು ಕಾಣುತ್ತದೆ. ಹರಿಹರನದು "ಜನತೆಯ ಮಾತು; ಬನಿಯುಳ್ಳ ಸವಿಯುಳ್ಳ ಹಸನಾದ ಹೊಸಕನ್ನಡ" ಎಂಬಂತಹ ಮಾತಾಡಿದ್ದಾರೆ. ಸತ್ಯ, ಡಿ.ಎಲ್. ನರಸಿಂಹಾಚಾರ್ ಕನ್ನಡ ಜನಪ್ರತಿ ಶಾಸ್ತ್ರದ ಕ್ಷೇತ್ರದಲ್ಲಿ ಒಬ್ಬ ಅತ್ಯಂತ ಶ್ರೇಷ್ಠ ವಿದ್ವಾಂಸರು- ಆ ಕ್ಷೇತ್ರದಲ್ಲಿ ಮೊತ್ತ ಮೊದಲ ಅತ್ಯಂತ ವೈಜ್ಞಾನಿಕ ಕೃತಿಯನ್ನು ಬರೆದಿದ್ದಾರೆ-ಅದು ಭಾರತದಲ್ಲಿಯೇ ಅನನ್ಯವಾದುದು. ಅವರು ಒಂದು ಕಡೆ ದೇವೀರಪ್ಪನವರದು "ಅಪಾರ ಶ್ರಮ" ಎಂಬ ಮಾತು ಹೇಳಿ ಅವರ ವಿದ್ವತ್ತನ್ನು ಮನಸಾರೆ ಕೊಂಡಾಡಿದ್ದಾರೆ.
ಅವರ ಹರಿಹರನ ಕಾಲನಿರ್ಣಯ ಮ. 1230 ಎಂಬ ಅಭಿಪ್ರಾಯವನ್ನು ನನ್ನ ಮುಂದಿನ ಶೋಧಗಳು ಸಾಬೀತುಗೊಳಿಸಿವೆ. ಹರಿಹರ ಬರೆದಿರುವ ರಗಳೆಗಳು ನೂರಕ್ಕಿಂತ ಹೆಚ್ಚು ಹೆಚ್ಚು ಪ್ರಕಟವಾಗಿದ್ದರೂ ಅವನು ಬರೆದದ್ದು "61 ಮಾತ್ರ, ಉಳಿದವು ಅವನ ಹೆಸರಲ್ಲಿ ಬೇರೆಯವರು ಬರೆದವು ಎಂಬ ಅವರ ವಾದ ಇನ್ನೂ ಬಗೆಹರಿದಿಲ್ಲ. ಅವರು ಬಸವರಾಜ ದೇವರ ರಗಳೆಯ 12 1/2 ಪುಟಗಳನ್ನು ಮಾತ್ರ ಬರೆದನೆಂದೂ ಇಡೀ ಕಾವ್ಯವನ್ನು ಮುಗಿಸಿರಲಿಲ್ಲವೆಂದೂ ಸರಿಯಾಗಿ ಮೊತ್ತ ಮೊದಲು ಹೇಳಿದ್ದಾರೆ. ಅದಕ್ಕೆ ಏನು ಕಾರಣವಿರಬಹುದು ಎಂದು ಊಹಿಸಿ ಲೇಖನ ಬರೆದಿದ್ದೇನೆ ಮತ್ತು ಅವರ ವಾದ ಸರಿ ಎಂದು ಎತ್ತಿ ಹಿಡಿದಿದ್ದೇನೆ. ಹರಿಹರನ ಬಗ್ಗೆ ಅವರು ಬರೆದಿರುವ ಹಲವು ಲೇಖನಗಳ ಅಭಿಪ್ರಾಯಗಳನ್ನು ನಾನು ಮುಂದುವರಿಸಿ ಬೆಳೆಸಿದ್ದೇನೆ ಎಂಬ ಹೆಮ್ಮೆ ನನ್ನದು.
ಅವರ "ಸಂಶೋಧನ ಸಂಪುಟ" ವು ಅವರ ಹಲವಾರು ಪಾಲಿಕ ಸಂಪ್ರಬಂಧ(ಸಂಶೋಧನ)ಗಳ ಸಂಗ್ರಹವಾಗಿದೆ. ಪಂಪನಿಗಿಂತ ಹಿಂದಿನ ಕಾಲದ ಮೊಟ್ಟ ಮೊದಲ ಅಪೂರ್ಣ ಗದ್ಯ ಕಾವ್ಯ ವಡ್ಡಾರಾಧನೆಯ ಕೃತಿಕಾರ ಶಿವಕೋಟ್ಯಚಾರನ ಊರು ಬಳ್ಳಾರಿ ಜಿಲ್ಲೆಯ ಕೋಗಳಿ ಎಂಬ ಅವರ ಊಹೆ ಸರಿಯಾಗಿದೆ. ಜೇಡರ ದಾಸಿಮಯ್ಯ ರಾಮನಾಥ ದಂಡಿನವರ ವಚನಕಾರ, ಅವನು ಶಿವಭಕ್ತ ದೇವರ ದಾಸಿಮಯ್ಯನಿಗಿಂತ ಭಿನ್ನ ಎಂಬ ಅವರ ವಾದವು ಈಗ ಅಂಗೀಕೃತವಾಗಿದೆ. ಕವಿ ಕುಮಾರ ವ್ಯಾಸನ ಹುಟ್ಟು ಹೆಸರು ನಾರಣಪ್ಪ ಅಲ್ಲ, ಕುಮಾರವ್ಯಾಸ ಎಂಬುದೇ ಅವನ ಹುಟ್ಟು ಹೆಸರು ಎಂಬ ಅವರ ವಾದ ಬಹುಶಃ ನಿಲ್ಲತಕ್ಕದ್ದಲ್ಲ. ಕ್ರಿ.ಶ. 1430ರ ವಿಜಯನಗರ ಕಾಲದ ಅಧಿಕಾರಿ, ಕವಿ ಲಕ್ಕಣ್ಣ ಲಂಕೇಶನು ಸಿಂಹಳದ ಮೇಲೆ ದಂಡೆತ್ತಿ ಹೋದುದು ದಾಖಲಾಗಿದೆ. ಅವನ ಔದಾರ್ಯದ ಕತೆಯನ್ನು ಕೊಂಡಾಡುವ ಹಾಡುಗಳು ಸಿಂಹಳೀ ಭಾಷೆಯಲ್ಲಿವೆ ಎಂಬ ಅಪೂರ್ವ ಹೊಸ ವಿಷಯವನ್ನು ದಾಖಲಿಸಿದ್ದಾರೆ. ಈ ವಿಷಯ ಹೆಚ್ಚಿನ ಶೋಧನೆಗೆ ಅವಕಾಶ ಮಾಡಿಕೊಡುತ್ತದೆ.
ಹರಿಹರನ ಬಗ್ಗೆ, ಅವನ ಕಾವ್ಯಗಳ ಬಗ್ಗೆ ಒಂದು ಬಗೆಯ ಅಪೂರ್ವ ಪ್ರೇಮವನ್ನು (ಅದನ್ನು 'ಹುಚ್ಚು' ಎಂದು ಕರೆದರೂ ತಪ್ಪಿಲ್ಲ) ಹೊಂದಿದ್ದ ಅವರು ಹರಿಹರನ ಬಗ್ಗೆ ಮಾಡಿರುವ ಕೆಲಸಗಳ ಬಗ್ಗೆ ಅವರಿದ್ದಾಗಲೇ ಗೌರವ ಡಾಕ್ಟರೇಟ್ ನೀಡಬೇಕಿತ್ತು. ಬೆಂಗಳೂರಿನ ವಿಜಯನಗರದ ಪ್ರದೇಶದ ಪ್ರಮುಖ ರಸ್ತೆಗೆ "ಹರಿಹರ ಮಾರ್ಗ" ಎಂಬ ಹೆಸರು ಇಡುವ ಬಗ್ಗೆ ತೀವ್ರ ಕಾತರರಾಗಿದ್ದರು. ಅವರ ಸಂಶೋಧನಾ ಕೃತಿಗಳು ಪಿ.ಎಚ್.ಡಿ. ಅಧ್ಯಯನಕ್ಕೆ ಒಳ್ಳೆಯ ವಸ್ತುವಾಗುತ್ತದೆ. ಅವರ ಹೆಸರು ಸಂಶೋಧನ ಕ್ಷೇತ್ರದಲ್ಲಿ "ಬೆಳುವಲದ ಮಡಿಲಲ್ಲಿ" ಇತ್ಯಾದಿಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಉಳಿಯುತ್ತದೆ.
- ಡಾ. ಎಂ. ಚಿದಾನಂದಮೂರ್ತಿ
ಹಿರಿಯ ಸಾಹಿತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


