ಅಂಕಣಗಳು

ಭಟ್ಕಳ್ ಬಂಧನದಿಂದ ಭಯೋತ್ಪಾದನೆ ಕಡಿಮೆಯಾಗುವುದೆ?

ಭಟ್ಕಳ್ ಬಂಧನದಿಂದ ಭಯೋತ್ಪಾದನೆ ಕಡಿಮೆಯಾಗುವುದೆ?
Published On :

ಕಡೆಗೂ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್‌ನ ಬಂಧನವಾಗಿದೆ. ರಾಷ್ಟ್ರೀಯ ತನಿಖಾ ದಳದ ಪೊಲೀಸರು (ಎಸ್‌ಐಎ) ಆತನನ್ನು ಭಾರತ-ನೇಪಾಳ ಗಡಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಪೊಲೀಸರ ಬಲೆಗೆ ಬಿದ್ದ ದಾವೂದ್ ಇಬ್ರಾಹಿಂನ ಆಪ್ತ ಅಬ್ದುಲ್ ಕರೀಂ ತುಂಡಾ ನೀಡಿದ ಮಾಹಿತಿ ಆಧರಿಸಿಯೇ ಯಾಸಿನ್ ಭಟ್ಕಳ್‌ನನ್ನು ಬಂಧಿಸಲಾಗಿದೆ. ಭಟ್ಕಳ್‌ನೊಂದಿಗೆ ಮತ್ತೊಬ್ಬ ಉಗ್ರ ಅಸದುಲ್ಲಾ ಅಖ್ತರ್ ಹಡ್ಡಿ ಕೂಡಾ ಬಂಧಿತನಾಗಿದ್ದಾನೆ. ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಫೋಟದಲ್ಲಿ ಇವರಿಬ್ಬರೂ ಭಾಗವಹಿಸಿದ್ದರು ಎಂದು ನಂಬಲಾಗಿದೆ.
 ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಹಿಂದಿರುವ ಶಕ್ತಿಗಳನ್ನು ಬಗ್ಗು ಬಡಿಯಬೇಕು ಎಂಬ ನಿರ್ಧಾರವನ್ನು ಭಾರತದ ಪೊಲೀಸರು ತೀವ್ರಗೊಳಿಸಿದ್ದು 2008ರಲ್ಲಿ. ಈ ಸಂದರ್ಭದಲ್ಲಿ ಜೆಹಾದ್‌ನ ಹೆಸರಲ್ಲಿ ಮುಜಾಹಿದ್ದೀನ್ ಸಂಘಟನೆಗೆ ಆರ್ಥಿಕ ನೆರವು ಸೇರಿದಂತೆ ಹಲವು ರೀತಿಯಲ್ಲಿ ನೆರವಾಗುತ್ತಿದ್ದ ಕೆಲವೊಂದು ಇಸ್ಲಾಮಿಕ್ ಸಂಘಟನೆಗಳನ್ನು ನಿಷ್ಕ್ರಿಯಗೊಳಿಸಲು ಹಲವು ಕ್ರಮ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿಯೇ ದೇಶದ ನಾನಾ ಕಡೆಗಳಲ್ಲಿ ಬಾಂಬ್ ಸ್ಫೋಟಿಸುವ ಸಂಚನ್ನು ಇಂಡಿಯನ್ ಮುಜಾಹಿದ್ದೀನ್‌ನ ಉಗ್ರರು ರೂಪಿಸಿರುವ ಸುದ್ದಿ ಬಂದದ್ದು. ಪೊಲೀಸರ ಸಕಾಲಿಕ ಕ್ರಮದಿಂದಾಗಿ ಅಂಥ ಯೋಜನೆಗಳನ್ನೆಲ್ಲ ವಿಫಲಗೊಳಿಸಿದ್ದಾಯಿತು.
ಈ ಸಂದರ್ಭದಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಹಲವು ರೀತಿಯಲ್ಲಿ ನೆರವಾಗುವವರೆಂದು ನಂಬಲಾಗಿರುವ ಅಜಂಗಡದ ಮಿರ್ಜಾ ಶಹಬಾದ್ ಬೇಗ್, ಶಹನವಾಜ್ ಆಲಂ, ಮೊಹಮ್ಮದ್ ಬಡಾ ಸಜೀದ್, ಗುಜರಾತ್‌ನ ಅಲಂಜೇಬ್ ಆಫ್ರಿದಿ, ಮಹಾರಾಷ್ಟ್ರದ ಜುಲ್ಫೀಕರ್ ಫಯಾಜ್, ರಾಹುಲ್ ಶೇಖ್, ಉತ್ತರ ಪ್ರದೇಶದ ಅರೀಜ್‌ಖಾನ್ ಮುಂತಾದವರೆಲ್ಲ ಪೊಲೀಸರಿಂದ ಬಂಧಿತರಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಇವರೆಲ್ಲರೂ ತಲೆತಪ್ಪಿಸಿಕೊಂಡು ಬಿಟ್ಟರು. ಅಷ್ಟೇ ಅಲ್ಲ, ತುಂಬ ಹಿಂದಿನಿಂದಲೂ ಇಂಡಿಯನ್ ಮುಜಾಹಿದ್ದೀನ್  ಸಂಘಟನೆಯ ಬೆಂಬಲಕ್ಕೆ ನಿಂತಿರುವ ರಿಯಾಜ್ ಶಾಬಂಡ್ರಿ, ಆತನ ಸೋದರ ಇನ್ಫಿಲ್ ರಜಾಖಾನ್ ಕೂಡ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದನ್ನೆಲ್ಲ ಗಮನಿಸಿದವರು -ಓಹ್, ಉಗ್ರರನ್ನು ಮಟ್ಟ ಹಾಕಲು ಭಾರತೀಯ ಪೊಲೀಸರು ವಿಫಲರಾಗುತ್ತಿದ್ದಾರೆ ಎಂದು ಊಹಿಸುತ್ತಿದ್ದಾಗಲೇ, ತಿಮಿಂಗಿಲ ಬಲೆಗೆ ಬಿದ್ದಿದೆ: ಯಾಸಿನ್ ಭಟ್ಕಳ್‌ನ ಬಂಧನವಾಗಿದೆ.
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮಾಸ್ಟರ್ ಮೈಂಡ್ ಆಗಿದ್ದ ಯಾಸಿನ್ ಭಟ್ಕಳ್, ಬೆಂಗಳೂರು, ಹೈದರಾಬಾದ್, ಸೂರತ್, ಮುಂಬೈ, ಪುಣೆ, ಅಹಮದಾಬಾದ್ ಹಾಗೂ ನವದೆಹಲಿಯಲ್ಲಿ ಸಂಭವಿಸಿದ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂಬುದು ಈಗ ಎಲ್ಲರಿಗೂ ಗೊತ್ತಾಗಿ ಹೋಗಿರುವ ಸತ್ಯ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥರನ್ನು ಭೇಟಿಯಾಗುವ ಉದ್ದೇಶದಿಂದ ಯಾಸಿನ್ ಭಟ್ಕಳ್ ಪಾಕಿಸ್ತಾನಕ್ಕೆ ಹೋಗಿ ಬಂದ ಎನ್ನಲು ಖಚಿತ ಸಾಕ್ಷಿಗಳಿಲ್ಲ. ಆದರೆ, ಇ-ಮೇಲ್ ಹಾಗೂ ಫೋನ್ ಮೂಲಕ ಆತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಪ್ರಮುಖರೊಂದಿಗೆ ಸತತ ಸಂಪರ್ಕದಲ್ಲಿದ್ದಾನೆ ಎಂಬುದು ಎಲ್ಲರೂ ನಂಬುತ್ತಾರೆ. ಒಪ್ಪುತ್ತಾರೆ.
ಯಾಸಿನ್ ಭಟ್ಕಳ್‌ನ ಬಂಧನವಾಗಿದೆ ಎಂಬುದು ದೇಶಾದ್ಯಂತ ದೊಡ್ಡ ಸುದ್ದಿಯಾಗಿರುವ ಸಂದರ್ಭದಲ್ಲಿಯೇ ಹಲವರನ್ನು ಕಾಡುತ್ತಿರುವ ಪ್ರಶ್ನೆಗಳೆಂದರೆ-ಪಾಕಿಸ್ತಾನದಲ್ಲಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮುಂದಿನ ಯೋಜನೆಗಳು ಏನು? ಐಎಂ ಸಂಘಟನೆಯ ಪ್ರಮುಖರಾಗಿ ಅಲ್ಲಿ ಇರುವವರಾದರೂ ಯಾರು?
ಮತ್ತೊಬ್ಬ ಉಗ್ರ ಡೇವಿಡ್ ಹೆಡ್ಲಿ ನೀಡಿರುವ ಮಾಹಿತಿಯಂತೆ ಪಾಕಿಸ್ತಾನದಲ್ಲಿ, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ನೇತೃತ್ವವನ್ನು ಎರಡು ಗುಂಪುಗಳು ವಹಿಸಿಕೊಂಡಿವೆಯಂತೆ. ಒಂದು ಗುಂಪು  ಲಷ್ಕರೆ ತೊಯ್ಬಾ ಸಂಘಟನೆಗೆ ಸೇರಿದ್ದು. ಮತ್ತೊಂದು ಗುಂಪಿನ ಮುಖ್ಯಸ್ಥನಾಗಿರುವಾತ ಅದೇ ಪಾಕಿಸ್ತಾನದ ನಿವೃತ್ತ ಸೇನಾಧಿಕಾರಿ. ಅವನ ಹೆಸರು ಅಬ್ದುರ್ ರೆಹಮಾನ್ ಹಾಶಿಂ. ಆತ 'ಪಾಶಾ' ಎಂಬ ಅಡ್ಡ ಹೆಸರಿನಿಂದಲೇ ಪಾಕಿಸ್ತಾನದಲ್ಲಿ ಜನಪ್ರಿಯನಂತೆ.
ಹೆಡ್ಲಿ ನೀಡಿರುವ ಮಾಹಿತಿಯ ಪ್ರಕಾರ ಈ ಹಾಶಿಂ ಅಲಿಯಾಸ್ ಪಾಶಾನ ಇತಿಹಾಸವೂ ಕುತೂಹಲಕರವಾಗಿದೆ. ಈತ, 2002ರವರೆಗೂ ಬಲೂಚ್ ರೆಜಿಮೆಂಟ್‌ನಲ್ಲಿ ಸೇನಾಧಿಕಾರಿಯಾಗಿದ್ದನಂತೆ. ಅಘಘಾನಿಸ್ತಾನದಲ್ಲಿ ಯುದ್ಧ ಶುರುವಾಗಿ, ಬಿನ್ ಲಾಡೆನ್ ಮತ್ತು ಅವನ ಸಂಗಡಿಗರು ಅಡಗಿದ್ದಾರೆ ಎಂದು ನಂಬಲಾಗಿದ್ದ ತೋರಾ ಬೋರಾ ಪ್ರದೇಶದ ಮೇಲೆ ದಾಳಿ ನಡೆಸಲು ಸೇನೆಯ ಮುಖ್ಯಸ್ಥರು ಆದೇಶಿಸಿದಾಗ, ಆ ಆದೇಶವನ್ನೇ ಪಾಶಾ ತಿರಸ್ಕರಿಸದನಂತೆ. ಅದೇ ಕಾರಣಕ್ಕೆ ಈತನನ್ನು ಮುಖ್ಯಾಧಿಕಾರಿಯ ಹುದ್ದೆಯಿಂದ ಕೆಳಗಿಳಿಸಲಾಯಿತು. ಮುಂದೆ ಈತ ಕೆಲಸಕ್ಕೆ ರಾಜಿನಾಮೆ ನೀಡಿ ಲಷ್ಕರ್ ಸಂಘಟನೆಗೆ ಸೇರಿದ. ಅಲ್ಲಿ ಉಗ್ರರಿಗೆ ಸಕಲ ತರಬೇತಿ ನೀಡುವ ಜವಾಬ್ದಾರಿಯನ್ನು ಇವನಿಗೆ ವಹಿಸಲಾಯಿತು. 2004ರಲ್ಲಿ ಶ್ರೀನಗರದಲ್ಲಿ ನಡೆದ ರ್ಯಾಲಿಯ ಸಂದರ್ಭದಲ್ಲಿ ಪ್ರಧಾನಿ ಮನಮೋಹನಸಿಂಗ್ ಅವರ ಮೇಲೆ ಹಲ್ಲೆ ನಡೆಸಲು ಉಗ್ರನೊಬ್ಬ ನುಗ್ಗಿ ಹೋಗಿದ್ದ: ಅವನನ್ನು ತಯಾರು ಮಾಡಿದವನೇ ಹಾಶಿಂ ಅಲಿಯಾಸ್ ಪಾಶಾ.
 ಇಂಥ ಅಪಾಯಕಾರಿ ಹಿನ್ನೆಲೆ ಹೊಂದಿರುವ ಹಾಶಿಂನನ್ನು 2009ರಲ್ಲಿ ಪಾಕಿಸ್ತಾನದ ಗುಪ್ತಚರ ಇಲಾಖೆಯ ಪೊಲೀಸರು ಬಂಧಿಸಿದರು ನಿಜ. ಆದರೆ, ಅಂದಿನಿಂದ ಇಂದಿನವರೆಗೂ ಅವನನ್ನು ವಿಚಾರಣೆ ನಡೆಸಿಲ್ಲ. ಆತ ಎಸಗಿರುವ ಕುಕೃತ್ಯಗಳ ಬಗ್ಗೆ ಸಣ್ಣದೊಂದು ಮಾಹಿತಿಯನ್ನೂ ಪಾಕಿಸ್ತಾನದ ಪೊಲೀಸರು ಬಹಿರಂಗಪಡಿಸಿಲ್ಲ.
ನಿಜ ಹೇಳಬೇಕೆಂದರೆ, ಹಕೀಂನಂಥ ಅನಾಹುತಕಾರಿ ಆಸಾಮಿಗಳು ಪಾಕಿಸ್ತಾನದಲ್ಲಿ ಸಾಕಷ್ಟು ಜನ ಸಿಗ್ತಾರೆ. ಅವರಲ್ಲಿ ತಕ್ಷಣಕ್ಕೆ ನೆನಪಾಗುವ ಹೆಸರೆಂದರೆ ಝಕಿ-ಉರ್-ರೆಹಮಾನ್ ಲಕ್ವಿಯದು. ಪಾಕಿಸ್ತಾನದಲ್ಲಿರುವ ಯುವಕರಿಗೆ ಜೆಹಾದ್‌ನ ಉಪದೇಶ ಮಾಡುವುದು. ಕಾಶ್ಮೀರ ನಮ್ಮದು. ಹೇಗಾದರೂ ಮಾಡಿ, ಮರಾಮೋಸದಿಂದಾದರೂ ಸರಿ, ಅದನ್ನು ಕೈವಶ ಮಾಡಿಕೊಳ್ಳಿ ಎಂದು ಧರ್ಮೋಪದೇಶ ಮಾಡುವುದೇ ಲಕ್ವಿಯ ಪೂರ್ಣಾವಧಿ ಕಾಯಕ.
ಹೀಗೆಯೇ ಪ್ರಚೋದನಕಾರಿ ಮಾತಾಡುವ ಅಲ್-ಖೈದಾ ಸಂಘಟನೆಯ ಮತ್ತೊಬ್ಬ ಪ್ರಮುಖನಿದ್ದಾನೆ. ಅವನ ಹೆಸರು ಮೌಲಾನಾ ಆಸೀಂ ಉಮರ್. ಆತ ಭಾರತದಲ್ಲಿರುವ ಮುಸ್ಲಿಮರಿಗೆ ಒಂದು ಪ್ರಶ್ನೆ ಎಸೆದಿದ್ದಾನೆ. ಅದು ಹೀಗಿದೆ: 'ನಿಮ್ಮ ಮನಸ್ಸಿನೊಳಗೆ ಒಂದು ಬಿರುಗಾಳಿ ಏಳಬೇಕಿತ್ತು. ಅದು ಭಾರತದ ವಿರುದ್ಧ ಸುಂಟರಗಾಳಿಯಂತೆ ತಿರುಗಬೇಕಿತ್ತು. ಅಂಥದೊಂದು ಸಂದರ್ಭವೇ ಸೃಷ್ಟಿಯಾಗಲಿಲ್ಲವಲ್ಲ ಏಕೆ?'
ಇಷ್ಟು ಹೇಳಿ ಆತ ಸುಮ್ಮನಾಗುವುದಿಲ್ಲ. ಅವನ ಮಾತುಗಳು ಹೀಗೆ ಮುಂದುವರಿಯುತ್ತವೆ: 'ಇಲ್ಲಿ ಕೇಳಿ. ಹಿಂದೂ ದೇಶವನ್ನು ಒಂದೆರಡಲ್ಲ, ಎಂಟು ನೂರು ವರ್ಷಗಳ ಕಾಲ ಆಳಿದ್ದು ಮುಸ್ಲಿಂ ದೊರೆಗಳು. ಅಂದ ಮೇಲೆ ಹಿಂದೂ ದೇಶದ ಮೇಲೆ, ಹಿಂದೂಗಳಿಗಿಂತ ಹೆಚ್ಚಿನ ಅಧಿಕಾರ ಮುಸ್ಲಿಮರಿಗೇ ಸಿಗಬೇಕು. ಆದರೆ ಈಗಿನ ಪರಿಸ್ಥಿತಿಯಲ್ಲಿ ಭಾರತದಲ್ಲಿರುವ ಮುಸ್ಲಿಮರಿಗೆ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಸವಲತ್ತುಗಳು ಸಿಗುವುದಿಲ್ಲ. ಹಾಗಾಗಿ ಧರ್ಮಯುದ್ಧಕ್ಕೆ ಸಿದ್ಧರಾಗಿ. ಭಾರತದ ಪ್ರಮುಖ ನಗರಗಳಲ್ಲಿ ಅಶಾಂತಿಗೆ ಕಾರಣವಾಗುವಂಥ ಸಂದರ್ಭಗಳನ್ನು ಸೃಷ್ಟಿಸಿ ಆ ಮೂಲಕ ನಿಮ್ಮ ಮನದೊಳಗಿನ ಕಿಚ್ಚನ್ನು ಶಮನ ಮಾಡಿಕೊಳ್ಳಿ...'
ಮತ್ತೆ ಡೇವಿಡ್ ಹೆಡ್ಲಿ ನೀಡಿರುವ ಮಾಹಿತಿಯತ್ತ ನೋಡಿದರೆ, ಪಾಕಿಸ್ತಾನದಲ್ಲಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಪ್ರಮುಖರು, ಭಾರತದಲ್ಲಿರುವ ತಮ್ಮ ಸಹಚರರಿಗೆ ಇ-ಮೇಲ್ ಸಂದೇಶಗಳನ್ನು ಕಳುಹಿಸಿದ್ದಾರಂತೆ. ಅದರ ಪ್ರಮುಖ ಸಂದೇಶ:  'ಭಾರತದ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟದಂಥ ಕೃತ್ಯಗಳನ್ನು ನಡೆಸಲೇಬೇಕು. ಆ ಮೂಲಕ ಅಶಾಂತಿ ಸೃಷ್ಟಿಸಬೇಕು. ಹೀಗೆ ಮಾಡುವುದರ ಮೂಲಕ ಜೆಹಾದ್‌ನ ಧರ್ಮಯುದ್ಧದಲ್ಲಿ ಜೀವತೆತ್ತ ಸಯ್ಯದ್ ಅಹಮದ್ ಶಹೀದ್ ಹಾಗೂ ಶಾ ಇಸ್ಮಾಯಿಲ್ ಶಹೀದ್‌ರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ...'
ಇಂಥ ಪ್ರಚೋದನಾಕಾರಿ ಮಾತುಗಳಿಂದಲೇ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಪ್ರಮುಖರು ಭಾರತದಲ್ಲಿರುವ ತರುಣರ ತಲೆ ಕೆಡಿಸುತ್ತಾರೆ. ಆನಂತರದಲ್ಲಿ ಅವರನ್ನೇ ಉಗ್ರಗಾಮಿ ಚಟುವಟಿಕೆಯ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾರೆ.
ಸಂದರ್ಭ ಹೀಗಿರುವಾಗಲೇ ಯಾಸಿನ್ ಭಟ್ಕಳ್‌ನ ಬಂಧನವಾಗಿದೆ. ಇದರಿಂದ, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಭಾರೀ ಹೊಡೆತ ಬೀಳುತ್ತದೆ ನಿಜ. ಆದರೆ, ಭಟ್ಕಳ್‌ನ ಬಂಧನದೊಂದಿಗೆ ಉಗ್ರರ ಕಾರ್ಯ ಚಟುವಟಿಯಾಗಲಿ, ಅವರ ಸಂಖ್ಯೆಯಾಗಲಿ ಖಂಡಿತ ನಿಲ್ಲುವುದಿಲ್ಲ, ಕಡಿಮೆಯಾಗುವುದೂ ಇಲ್ಲ...

- ಪ್ರವೀಣ್ ಸ್ವಾಮಿ
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.