ನಾಡಿ ಬಡಿತ ನೋಡಿ ಯೋಜನೆ ರೂಪಿಸುವುದು ಸರಿಯೇ?
ಮತದಾರರನ್ನು ಓಲೈಸಲಿಕ್ಕಾಗಿ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅನೇಕಾನೇಕ ಆಶ್ವಾಸನೆಗಳನ್ನು ನೀಡುವುದು ರೂಢಿಯಾಗಿದೆ. ಅವುಗಳ ಹೆಸರು ಬಹಳ ಆಕರ್ಷಕವಾಗಿರುತ್ತದೆ. ರೈತರಿಗೆ ಸಾಲಮನ್ನಾ, ನೇಗಿಲಭಾಗ್ಯ, ತಾಳಿಭಾಗ್ಯ, ಭಾಗ್ಯಲಕ್ಷ್ಮೀ ಯೋಜನೆ, ಇಂದಿರಾ ಆವಾಸ್, ಬಡವರಿಗೆ ಟಿವಿ, ಫ್ರಿಜ್, ವಾಷಿಂಗ್ಮೆಷಿನ್, ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ, ಶಾಲಾ ಮಕ್ಕಳಿಗೆ ಸೈಕಲ್, ಬಿಸಿಯೂಟ, ಹಾಲು ಇತ್ಯಾದಿ. ಪಕ್ಷ ಆಡಳಿತಕ್ಕೆ ಬಂದರೆ ಆಶ್ವಾಸನೆಗಳು ಅನುಷ್ಠಾನಕ್ಕೆ ಬರುತ್ತವೆ ಅನ್ನಿ. ಈ ಆಶ್ವಾಸನೆಗಳು ಮುಕ್ತ ಹಾಗೂ ನ್ಯಾಯಯುತ ಚುನಾವಣಾ ನಿರ್ವಹಣೆಗೆ ಆತಂಕ ಒಡ್ಡುತ್ತವೆ ಎಂದು ಮನಗಂಡ ಸರ್ವೋಚ್ಚ ನ್ಯಾಯಾಲಯ ಚುನಾವಣಾ ಆಯೋಗದ ಗಮನ ಸೆಳೆದಿದೆ. ಸಂವಿಧಾನದ ಮೂಲಾಶಯಕ್ಕೆ ವಿರೋಧವಾಗದ ಹಾಗೆ ಪ್ರಣಾಳಿಕೆಗಳನ್ನು ರೂಪಿಸಬೇಕು ಎಂದು ಚುನಾವಣಾ ಆಯೋಗ ಎಲ್ಲಾ ರಾಜಕೀಯ ಪಕ್ಷಗಳಿಗೂ ಸೂಚನೆ ನೀಡಿದೆ. ಆದರೆ ಈ ಕ್ರಮವನ್ನು ಎಲ್ಲ ರಾಜಕೀಯ ಪಕ್ಷಗಳೂ ಒಗ್ಗಟ್ಟಿನಿಂದ ವಿರೋಧಿಸಲು ಮುಂದಾಗಿರುವುದು ಅಚ್ಚರಿಯ ಸಂಗತಿ.
ನಿಜ. ಪ್ರಣಾಳಿಕೆ ರಾಜಕೀಯ ಪಕ್ಷದ ಧೋರಣೆಗೆ ಸಂಬಂಧಿಸಿದ್ದು. ಅದು ಪ್ರಜಾಸತ್ತೆಯಲ್ಲಿ ರಾಜಕೀಯ ಸಂಘಟನೆಯೊಂದು ಸಂವಿಧಾನದ ಕಕ್ಷೆಯ ಹೊರಗೆ ತೆಗೆದುಕೊಳ್ಳುವ ತೀರ್ಮಾನ. ಪ್ರಣಾಳಿಕೆಯಲ್ಲಿರುವ ಆಶ್ವಾಸನೆಗಳೆಲ್ಲವನ್ನೂ ಅನುಷ್ಠಾನಕ್ಕೆ ತರಬೇಕೆಂಬ ನಿಯಮವಿಲ್ಲ. ಅದು ಆ ಪಕ್ಷಕ್ಕೂ ಮತ್ತು ಆ ಪಕ್ಷವನ್ನು ನೆಚ್ಚಿಕೊಂಡ ಮತದಾರರ ವಿಶ್ವಾಸಕ್ಕೂ ಸಂಬಂಧಿಸಿದ ವಿಷಯ. ಸಂವಿಧಾನಕ್ಕೆ ಧಕ್ಕೆಯಿಲ್ಲ. ಆದರೆ ಆ ಪಕ್ಷ ಆಡಳಿತಕ್ಕೆ ಬಂದು ಆಶ್ವಾಸನೆ ಕಾರ್ಯರೂಪಕ್ಕೆ ಬಂದರೆ ಅದು ಸಂವಿಧಾನ ಬದ್ಧವಾಗಿರಬೇಕಲ್ಲವೇ ಎಂದಾಗ ಆಶ್ವಾಸನೆಯೂ ಸಂವಿಧಾನದ ಆಶಯಕ್ಕೆ ವಿರೋಧವಾಗಿರಬಾರದಷ್ಟೇ! ಇದು ಜಿಜ್ಞಾಸೆ. ದುರದೃಷ್ಟವೇನೆಂದರೆ ನಮ್ಮ ದೇಶದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಹಾಗೂ ದಲಿತೋದ್ಧಾರದ ಸೋಗಿನಲ್ಲಿ ಆಶ್ವಾಸನೆಗಳು ಹಾಗೂ ಪಕ್ಷ ಅಧಿಕಾರಕ್ಕೆ ಬಂದಲ್ಲಿ ತತ್ಸಂಬಂಧ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿವೆ. ಈ ಯೋಜನೆಗಳು ಮೇಲ್ನೋಟಕ್ಕೆ ಸಂವಿಧಾನಬದ್ಧವೆಂಬ ಹಾಗೆ ಕಂಡು ಬರುತ್ತವಾದರೂ ಅವುಗಳ ಅನುಷ್ಠಾನ ಮಾತ್ರ ಸಂವಿಧಾನದ ಮೂಲಾಶಯಕ್ಕೆ ವಿರೋಧವಾದುದೆಂಬುದು ಖೇದದ ವಿಚಾರ.
ನಮ್ಮ ಸಂವಿಧಾನ ಸಮಾನತೆಯನ್ನು ಪ್ರತಿಪಾದಿಸುತ್ತದೆ. ನಮಗೆ ಸ್ವಾತಂತ್ರ್ಯ ದೊರಕುವ ಕಾಲಕ್ಕೆ ನಮ್ಮಲ್ಲಿ ಎಲ್ಲರೂ ವಾಸ್ತವವಾಗಿ ಸಮಾನರಾಗಿಲ್ಲ. ಕೆಲವು ಹಿಂದುಳಿದವರಿದ್ದರು. ಅವರು ಮುಖ್ಯವಾಹಿನಿಗೆ ಬಂದಾಗ ಮಾತ್ರ ಎಲ್ಲರೂ ಸಮಾನರಾಗುತ್ತಾರೆ. ಪ್ರಸ್ತುತ ಅವರು ಮುಖ್ಯವಾಹಿನಿಯಲ್ಲಿರುವವರೊಡನೆ ಸ್ಪರ್ಧಿಸಲು ಅಸಮರ್ಥರಾಗಿದ್ದಾರೆ. ಅಂಥವರಿಗೆ ಒಂದು ನೆಗೆತದ ಸೌಕರ್ಯ ಅಥವಾ ಅವಕಾಶ ಕಲ್ಪಿಸಿದರೆ ಅವರು ಅದನ್ನು ಸಮರ್ಪಕವಾಗಿ ಬಳಸಿ ಶ್ರಮಿಸಿದಲ್ಲಿ ಮುಖ್ಯವಾಹಿನಿಯಲ್ಲಿ ಐಕ್ಯವಾಗಲು ಸಾಧ್ಯವಾಗುತ್ತದೆ. ಇದು ಈ ವಿಶೇಷ ಸೌಕರ್ಯ ಅಥವಾ ಅವಕಾಶ ಒದಗಿಸುವ ಹಿಂದಿನ ಆದರ್ಶ ಅಥವಾ ಧ್ಯೇಯ. ಅಂದರೆ ಫಲಾನುಭವಿ ಶ್ರಮಿಸಿ ಮುಂದೆ ಬರಬೇಕು. ಈ ವಿಶೇಷ ಸೌಲಭ್ಯ ಶ್ರಮಿಸಲು ಸಹಕಾರಿ ಅಷ್ಟೇ. ನೇರ ಒದಗಿಸಲ್ಪಟ್ಟರೆ ಆತ ಶ್ರಮಿಸುವುದಿಲ್ಲ. ಅನುಭವಿಸುತ್ತಾನೆ ಮಾತ್ರ. ಒಂದು ರುಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಟ್ಟರೆ ಆತ ಉಣ್ಣುತ್ತಾನೆ. ಶ್ರಮಪಡುವ ಅವಕಾಶವಿಲ್ಲ. ಅಗತ್ಯವೂ ಇಲ್ಲ. ಪರಿಣಾಮವಾಗಿ ಆತ ಮುಂದೆ ಬರುವುದೂ ಇಲ್ಲ. ಹಿಂದುಳಿದ ಒಂದು ವರ್ಗ ಸದಾ ಸಮಾಜದಲ್ಲಿರುತ್ತದೆ. ಅದು ಓಟ್ ಬ್ಯಾಂಕ್. ರಾಜಕಾರಣಿಗಳಿಗೆ ಬೇಕಾದುದು ಇದೇ. ಆದರೆ ಈ ಸ್ಥಿತಿ ಸಂವಿಧಾನದ ಮೂಲಾಶಯಕ್ಕೆ ವಿರೋಧವಾದುದು ಎಂಬುದು ಇಲ್ಲಿ ಎಲ್ಲರೂ ಚಿಂತಿಸಬೇಕಾದ ವಿಚಾರ.
ಒಂದು ಪ್ರಗತಿಪರ ಸರ್ಕಾರ ದಿನಬಳಕೆಯೆ ಸೊತ್ತುಗಳಾದ ಟಿವಿ, ಫ್ರಿಜ್, ಸೈಕಲ್ ಇತ್ಯಾದಿಗಳನ್ನು ನೇರ ಒದಗಿಸುವುದರಿಂದ ಸಮಾಜ ಅಭಿವೃದ್ಧಿ ಹೊಂದುವುದಿಲ್ಲ. ಅದೊಂದು ಕೆಟ್ಟ ಪ್ರವೃತ್ತಿಗೆ ಪ್ರಚೋದನೆ ನೀಡುತ್ತದೆ. ನೈಜ ಅಭಿವೃದ್ಧಿಗೆ ಬೇಕಾದುದು ಎರಡೇ ಸೂತ್ರಗಳು. ಅರಿವು ಹಾಗೂ ಕೊಳ್ಳುವ ಶಕ್ತಿ. ಶಿಕ್ಷಣದಿಂದ ಅರಿವು ಹಾಗೂ ಆರ್ಥಿಕ ಪುನಶ್ಚೇತನದಿಂದ ಕೊಳ್ಳುವ ಶಕ್ತಿ ಪ್ರಾಪ್ತವಾಗುತ್ತದೆ. ಸರ್ಕಾರ ಅಂಥ ಕ್ರಾಂತಿಕಾರಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಸಮಾಜದ ಕ್ರೋಢೀಕೃತ ದ್ರವ್ಯವನ್ನು ಒಂದು ವರ್ಗದ ಜನರಿಗೆ ನೇರ ಒದಗಿಸುವುದು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾದದ್ದು. ಅದು ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ. ಎಲ್ಲ ಅಭಿವೃದ್ಧಿ ಯೋಜನೆಗಳೂ ಉತ್ಪನ್ನ ಪ್ರಚೋದನಾದಾಯಕವಾಗಿರಬೇಕಲ್ಲದೆ ಚಮಚದಲ್ಲಿ ಉಣಿಸುವಂತಿರಬಾರದು. ಈ ಪ್ರತಿಪಾದನೆಗೆ ಒಂದೆರಡು ಅಪವಾದಗಳಿರಬಹುದು. ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ ಹಾಗೂ ಅಂಗವಿಕಲ ಫಲಾನುಭವಿಗಳಿಗೆ ಸೌಲಭ್ಯ ನೇರ ಸಂದಾಯವಾದರೆ ಈ ತತ್ವಕ್ಕೆ ವಿರೋಧವಾಗಲಾರದು.
ನಮ್ಮ ರಾಜಕೀಯ ಪಕ್ಷಗಳಿಗೆ ಈ ಯಾವ ತತ್ವಗಳೂ ಬೇಡ. ಬೇಕಾದುದು ಅಧಿಕಾರ. ಅದಕ್ಕಾಗಿ ಓಟ್ ಗಿಟ್ಟಿಸಿಕೊಳ್ಳಲು ಮತದಾರರನ್ನು ಓಲೈಸುವ ತಂತ್ರಗಳು. ನಾಡಿ ಬಡಿತವನ್ನು ಅಂದಾಜಿಸಿ ಆಕರ್ಷಕ ಹೆಸರಿನ ಯೋಜನೆಗಳನ್ನು ರೂಪಿಸುವುದು. ಇಂಥ ಯೋಜನೆಗಳಲ್ಲಿ ಕೆಲವು ಮೇಲ್ನೋಟಕ್ಕೆ ಮಾತ್ರ ಸಮಾಜ ಸ್ನೇಹಿ. ಅವುಗಳ ಅನುಷ್ಠಾನ ಕಾಲದಲ್ಲಿ ಸಂಭವಿಸಬಹುದಾದ ದುರ್ಘಟನೆಗಳನ್ನು ನೆನೆಸಿಕೊಂಡರೆ ಮೈ ಜುಮ್ಮೆನ್ನಿಸುತ್ತದೆ. ಉದಾಹರಣೆಗೆ ಶಾಲಾ ಮಕ್ಕಳ ಬಿಸಿಯೂಟ ಹಾಗೂ ಹಾಲು ವಿತರಣೆ. ಈ ಯೋಜನೆಯನ್ನು ಎಲ್ಲರೂ ಕೂಡ ಹೊಗಳುವುದಿದೆ. ಕೆಲವು ಅಧ್ಯಾಪಕರೂ ಕೂಡಾ. ಆದರೆ ಕಳಪೆ ಆಹಾರ ಪದಾರ್ಥ, ಅಸುರಕ್ಷಿತ ಸಂಗ್ರಹ ವಿಧಾನ ಮತ್ತು ನಿರ್ವಹಣಾ ದೋಷದಿಂದ ಶಾಲಾ ಮಕ್ಕಳ ಸಾವು, ಹೆತ್ತವರ ಆಕ್ರಂದನ ಪತ್ರಿಕೆಗಳಲ್ಲಿ, ವಿದ್ಯುದ್ಮಾನ ಮಾಧ್ಯಮಗಳಲ್ಲಿ ದಿನಾ ಒಂದಲ್ಲ ಒಂದು ಕಡೆಯಿಂದ ವರದಿಯಾಗುತ್ತಿದೆ. ದೊಡ್ಡ ಗುಂಪಿಗೆ ಆಹಾರ ತಯಾರಿ ಹಾಗೂ ವಿತರಣೆ ಬಹಳ ಜವಾಬ್ದಾರಿಯ ಹಾಗೂ ದಕ್ಷತೆಯಿಂದ ಕೂಡಿದ ಕೆಲಸ. ಪರಿಸ್ಥಿತಿಯ ತೀವ್ರತೆಯನ್ನು ಮುಂದಾಲೋಚಿಸಬೇಕು. ಇದು ಒಬ್ಬ ವ್ಯಕ್ತಿಯ ಯಾ ಒಂದು ಕುಟುಂಬದ ಕತೆಯಲ್ಲ. ಶಾಲಾ ಮಕ್ಕಳ ಆಹಾರದಲ್ಲಿ ವಿಷ ಬೆರಕೆಯಾದರೆ ಹಲವು ಕುಟುಂಬಗಳು ನಾಶವಾಗಬಹುದು. ಅನುಷ್ಠಾನದಲ್ಲಿ ಗುರುತರ ಜವಾಬ್ದಾರಿ ಇದೆ.
ಸಾಮಾನ್ಯವಾಗಿ ಬಡ ಮಕ್ಕಳಿಗೆ ದೊರಕದ ಪೌಷ್ಟಿಕ ಆಹಾರ ಪದಾರ್ಥ, ಹಾಲಿನ ಪುಡಿಗಳನ್ನು ಪೂರಕ ವ್ಯವಸ್ಥೆಯಡಿ ಸಂಸ್ಕರಿಸಿದ ಆಹಾರ ಪೊಟ್ಟಣಗಳಲ್ಲಿ ಪಡಿತರ ಅಂಗಡಿಗಳ ಮೂಲಕ ನೇರ ಕುಟುಂಬಗಳಿಗೆ ತಲುಪಿಸಬಹುದು. ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆಗೆ ತಗಲುವ ಖರ್ಚಿಗಿಂತ ಕಡಿಮೆ ವೆಚ್ಚದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಬಹುದು. ಈ ಆಹಾರ ಪದಾರ್ಥಗಳ ಶೇಖರಣೆ, ತಯಾರಿ ಹಾಗೂ ಮಕ್ಕಳಿಗೆ ಉಣಬಡಿಸುವ ಮಾಹಿತಿಯನ್ನು ಮನೆ ಭೇಟಿ ನೀಡುವ ಆರೋಗ್ಯ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ರಕ್ಷಕರಿಗೆ ನೀಡಬಹುದು. ಆ ಕೆಲಸ ಈಗಲೂ ನಡೆಯುತ್ತಿದೆ. ಹೊಸ ನೇಮಕಾತಿಯ ಅಗತ್ಯವಿಲ್ಲ. ಮಕ್ಕಳ ಆರೋಗ್ಯ ಪಾಲನೆ ರಕ್ಷಕರ ಜವಾಬ್ದಾರಿಯೂ ಹೌದು. ಸಾರ್ವಜನಿಕರು ತಮಗೆ ಏನೂ ಸಂಬಂಧವಿಲ್ಲದವರಂತೆ ನಿಶ್ಚಿಂತೆಯಿಂದಿರಲು ಸರ್ಕಾರ ಪ್ರೇರೇಪಿಸುವುದೇಕೆ? ಇತ್ತ ಶಿಕ್ಷಕರು ತಮ್ಮ ಬೋಧಕ ಚಟುವಟಿಕೆಗಳ ಕಡೆ ಹೆಚ್ಚು ಲಕ್ಷ್ಯ ಹರಿಸಬಹುದು. ಶಾಲೆ ಇರುವುದು ಕಲಿಕೆಗೆ. ಬೋಧನಾ ಮಟ್ಟವನ್ನು ಉತ್ತಮಪಡಿಸುವುದು ಶಿಕ್ಷಕರ ಕರ್ತವ್ಯ. ತಿಂಡಿ ತೀರ್ಥ ಕೊಟ್ಟು ಹಾಜರಾತಿ ಹೆಚ್ಚಿಸಲಾಗುತ್ತಿದೆ ಎಂದು ಹೇಳುವುದನ್ನು ಕೇಳಲೂ ಮುಜುಗರವೆನಿಸುತ್ತದೆ. ಶಿಕ್ಷಕರನ್ನು ಬೋಧಕ ಚಟುವಟಿಕೆಗಳಿಗಲ್ಲದೆ ಅನ್ಯಥಾ ಬಳಸಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕಳೆದ 65 ವರ್ಷಗಳಲ್ಲಿ ಆಡಳಿತಕ್ಕೆ ಬಂದ ಯಾವ ರಾಜಕೀಯ ಪಕ್ಷವೂ ಜನ ಸಾಮಾನ್ಯರಲ್ಲಿ ಕರ್ತವ್ಯ ಪ್ರಜ್ಞೆ ಜಾಗೃತಗೊಳಿಸುವ ಹಾಗೂ ರಾಷ್ಟ್ರೀಯತೆಯನ್ನು ಮೂಡಿಸುವ ಪ್ರಯತ್ನ ನಡೆಸಿಲ್ಲ. ಜಾತಿ, ಮತ, ಲಿಂಗ ಹಾಗೂ ಬಡತನ ಇತ್ಯಾದಿಗಳನ್ನು ಮುಂದಿಟ್ಟು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡಿದ್ದಷ್ಟೇ ಈವರೆಗಿನ ಸಾಧನೆ. ಯಾವುದೋ ಕಾಲದಲ್ಲಿ ಆಳವಡಿಸಿದ ಮಾನದಂಡದ ಆಧಾರದಲ್ಲಿ ಹಿಂದುಳಿದವರೆಂದು ಗುರುತಿಸಲಾದವರಿಗೆ ಸದಾ ಚಮಚದಲ್ಲಿ ಉಣ ಬಡಿಸುತ್ತಿದ್ದರೆ, ಓಟ್ ಗ್ಯಾರಂಟಿ ಎಂಬ ನಂಬಿಕೆಯಲ್ಲಿ ರಾಜಕೀಯ ಪಕ್ಷಗಳು ನೆಲೆಯೂರಿ ನಿಂತಿವೆ. ಈಗ ಕರ್ನಾಟಕದಲ್ಲಿರುವ ಕಾಂಗ್ರೇಸ್ ಒಂದು ರುಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡಲಾರಂಭಿಸಿದೆ. ಪ್ರಣಾಳಿಕೆಯ ಆಶ್ವಾಸನೆಯನ್ನು ಈಡೇರಿಸಿ ಕಾಲರ್ ಅಪ್ಮಾಡಿಕೊಳ್ಳುತ್ತಿದೆ. ಅತ್ತ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ದಿಢೀರ್ ಆಹಾರ ಭದ್ರತಾ ಕಾಯಿದೆ ತಂದಿದೆ. ಸ್ವಾತಂತ್ರ್ಯಾನಂತರ ಒಟ್ಟು 56 ವರ್ಷ ಈ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಆದಾಗ್ಯೂ ಆ ಪಕ್ಷದ ಜನಪ್ರಿಯ ಘೋಷಣೆಯಾದ ಗರಿಭೀ ಹಠಾವೋ ಯಶಸ್ವಿಗೊಳಿಸಲು ವಿಫಲವಾಗಿದೆ, ಎಂದರೆ ರಾಜಕೀಯ ಪಕ್ಷಗಳ ಉದ್ದೇಶವೇನೆಂಬುದು ಸ್ವಯಂವೇದ್ಯವಾದೀತು.
ಸಾರ್ವಜನಿಕರು ಈಗ ಈ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನೇ ಪ್ರಶ್ನಿಸಬೇಕಾದ ಕಾಲ ಸನ್ನಿಹಿತವಾಗಿದೆ. ಇನ್ನಾದರೂ ರಾಜಕೀಯ ಪಕ್ಷಗಳು ಸಂವಿಧಾನದ ಆಶಯಕ್ಕೆ ಹೊರತಾದ ಆಶ್ವಾಸನೆಗಳನ್ನು ನೀಡುವುದನ್ನು ಕೈ ಬಿಡಲಿ. ಆಮೂಲಾಗ್ರ ಬೆಳವಣಿಗೆ ತರಬಲ್ಲ ಯೋಜನೆಗಳನ್ನೇ ರೂಪಿಸಲಿ. ಪ್ರಣಾಳಿಕೆ ಪಕ್ಷದ ಹಕ್ಕು. ಪಕ್ಷ ಏನೋ ಗಿಮ್ಮಿಕ್ ಮಾಡಬಹುದೆಂದು ಭಾವಿಸಿದರೆ ಅದು ಶುದ್ಧ ತಪ್ಪು. ಪ್ರಣಾಳಿಕೆಯೂ ಸಂವಿಧಾನ ಬದ್ಧವಾಗಿರತಕ್ಕದೆಂದು ಒತ್ತಾಯಿಸುವುದು ಪೌರನ ಹಕ್ಕು.
- ಬೇಳೂರು ರಾಘವ ಶೆಟ್ಟಿ
ಸಾಲಿಗ್ರಾಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

