ಮೂಲಸೌಕರ್ಯಗಳಿದ್ದಲ್ಲಿ, ಬಡತನಕ್ಕೆ ಜಾಗವೆಲ್ಲಿ?

ಸರ್ಕಾರದ ನಾನಾ ಇಲಾಖೆಗಳು ಅನುಷ್ಠಾನಗೊಳಿಸುವ ಕಾರ್ಯಕ್ರಮಗಳಲ್ಲಿ ಎರಡು ಮುಖ್ಯ ಉದ್ದೇಶಗಳು ಇರುತ್ತವೆ. ಮೊದಲನೆಯದು, ಬಡತನ ಹಾಗೂ ಇನ್ನಿತರ ಕಷ್ಟಗಳು ಅನುಭವಿಸುತ್ತಿರುವ ಜನರ ಕಲ್ಯಾಣ ಹಾಗೂ ಉತ್ಥಾನ. ಎರಡನೆಯದು, ರಾಜ್ಯದ ಸಂಪನ್ಮೂಲಗಳನ್ನು ಉತ್ತಮವಾಗಿ ಬೆಳೆಸಿ ಸಮುದಾಯಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ಉದಾ: ರಸ್ತೆ, ನೀರು, ಚರಂಡಿ, ವಿದ್ಯುತ್, ನೀರಾವರಿ ಇತ್ಯಾದಿ.
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅಭಿವೃದ್ಧಿ ಕೊರತೆ ಇದ್ದರೂ ಮಾನವ ಸಂಪನ್ಮೂಲಗಳ ಹಾಗೂ ಖನಿಜಗಳ ಕೊರತೆ ಇರುವುದಿಲ್ಲವೆಂದು ನಾನು ಮನಗಂಡಿದ್ದೆ. ಆದುದರಿಂದ, ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿ ಸರ್ಕಾರದಿಂದ ಲಭ್ಯವಿರುವ ಅನುದಾನಗಳನ್ನು ವೈಜ್ಞಾನಿಕ ರೀತಿಯಲ್ಲಿ ಉಪಯೋಗಿಸಿ ಆದ್ಯತೆಯ ಮೇರೆಗೆ ಖರ್ಚು ಮಾಡುವ ಯೋಜನೆಯನ್ನು ರೂಪಿಸಿಸಬೇಕು. ನಂತರ ಜನರ ಸಹಭಾಗಿತ್ವ ಹಾಗೂ ಆಡಳಿತ ಪಾರದರ್ಶಕತೆಯೊಂದಿಗೆ ಕ್ರಮವನ್ನು ಜರುಗಿಸಿದರೆ ಖಂಡಿತವಾಗಿ ಕೆಲವೇ ವರ್ಷಗಳಲ್ಲಿ ಅಭಿವೃದ್ಧಿಯ ಸೂಚಕಗಳು ತಾವಾಗಿಯೇ ಕಂಡುಬರುತ್ತವೆ. ಇಂಥ ಕೆಲವು ಉದಾಹರಣೆಗಳನ್ನು ಹಂಚಿಕೊಳ್ಳಲು ನಾನು ಇಷ್ಟಪಡುತ್ತೇನೆ.
ನಮ್ಮ ರಾಜ್ಯದಲ್ಲಿ ಪ್ರಪ್ರಥಮವಾಗಿ ಭೂ ತಂತ್ರಾಂಶದ ಮೂಲಕ ರಾಜ್ಯದ ಎಲ್ಲಾ ಕೃಷಿ ಭೂಮಿ ವಿಸ್ತರಣೆಯನ್ನು ಅದರ ಭೂ ಮಾಲೀಕರ ವಿವರಗಳೊಂದಿಗೆ ಗಣಕೀಕರಣ ಮಾಡಲಾಗಿತ್ತು. ಅದಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಮ್ಮ ರಾಜ್ಯದ ಅಧಿಕಾರಿಗಳಿಗೆ 'ಪ್ರಧಾನ ಮಂತ್ರಿ' ಪ್ರಶಸ್ತಿ ಸಿಕ್ಕಿರುತ್ತದೆ. ಅದೇ ರೀತಿ, 'ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್' ಮೂಲಕ ಪ್ರತಿಯೊಂದು ಸರ್ವೇ ನಂಬರ್ ಹಾಗೂ ಅದರ ಭಾಗಾಂಶಗಳನ್ನು ಭೌಗೋಳಿಕವಾಗಿ ಗಣಕೀಕರಣ ಮಾಡಲಾಗಿರುತ್ತದೆ. ಅಂದರೆ, ಗಣಕಯಂತ್ರದ ಮೂಲಕ ನಾವು ಒಂದು ಜಿಲ್ಲೆ, ತಾಲೂಕು, ಹಳ್ಳಿಯಲ್ಲಿರುವ ಎಲ್ಲಾ ಸರ್ವೇ ನಂಬರುಗಳನ್ನು ವೀಕ್ಷಿಸಬಹುದು. ಮಾತ್ರವಲ್ಲ ಆಯಾ ಸರ್ವೇ ನಂಬರುಗಳಲ್ಲಿ ಕ್ಷೇತ್ರ ಎಷ್ಟು, ಅದರ ವಿಸ್ತೀರ್ಣ ಎಷ್ಟು, ಅಲ್ಲಿ ಬೆಳೆಯುತ್ತಿರುವ ಬೆಳೆಗಳು, ಮರಗಳು, ಅಂತರ್ಜಲದ ವಿವರ, ಭೂಮಿ ಗುಣಮಟ್ಟ, ಅದರ ಇಳಿಜಾರು ಪ್ರಮಾಣ, ಹಳ್ಳ, ನದಿ ಅಥವಾ ಕೆರೆಗಳು ಎಷ್ಟು ಮತ್ತು ಎಲ್ಲಿವೆ ಎಂದು ಕೂಡಲೇ ಮಾಹಿತಿ ಸಿಗುತ್ತದೆ. ಹೀಗಾಗಿ ಕೇವಲ ಗಣಕಯಂತ್ರದ ಮುಂದೆ ಕುಳಿತುಕೊಂಡು ನಾವು ಒಂದು ಹಳ್ಳಿ ಪ್ರದೇಶದ ನೈಸರ್ಗಿಕ ಬೆಳವಣಿಗೆಯನ್ನು ಸಾಧಿಸಲು ಜಲಾನಯನ ಅಭಿವೃದ್ಧಿ ಯೋಜನೆ, ಚೆಕ್ಡ್ಯಾಂ, ಕೃಷಿ ಹೊಂಡ ಕಟ್ಟಲು ಅತ್ಯುತ್ತಮ ಸ್ಥಳಗಳು, ಮರಗಳ, ಬೆಳೆಗಳ ಸರಿಯಾದ ಆಯ್ಕೆಯನ್ನು ಮಾಡಬಹುದು. ಈ ಯೋಜನೆಯನ್ನು ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ರೈತರೊಂದಿಗೆ ಚರ್ಚಿಸಬಹುದು. ಅದರಂತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೇಕಾಗಿರುವ ಕಾಮಗಾರಿಗಳನ್ನು ಸಂಬಂಧಪಟ್ಟ ಯೋಜನೆಗಳಲ್ಲಿ ಸೇರಿಸಲು ಕ್ರಿಯಾ ಯೋಜನೆಯನ್ನು ತಯಾರಿಸಬಹುದು. ಪ್ರತ್ಯೇಕ ಕಾಮಗಾರಿಗಾಗಿ ಒಂದು ಘಟಕದ ಅಂದಾಜು ವೆಚ್ಚವನ್ನು ನಮ್ಮ ಅಭಿಯಂತರರು ಅಥವಾ ಕೃಷಿ ಅಧಿಕಾರಿಗಳಿಂದ ಪಡೆಯಬಹುದು. ಈ ರೀತಿ ಪ್ರತಿಯೊಂದು ಹಳ್ಳಿಯ ಭೌತಿಕ ಹಾಗೂ ಆರ್ಥಿಕ ಅಭಿವೃದ್ಧಿ ಯೋಜನೆಯನ್ನು ಕ್ರೋಢೀಕರಿಸಿ ತಾಲೂಕು ಹಾಗೂ ಜಿಲ್ಲಾಮಟ್ಟದ ಯೋಜನೆಯನ್ನು ತಯಾರಿಸಬಹುದಾಗಿದೆ. ಈ ತಂತ್ರಜ್ಞಾನವನ್ನು ಆಧಾರವಾಗಿ ಇಟ್ಟುಕೊಂಡು ಸಂಬಂಧಪಟ್ಟ ಜಿಲ್ಲಾ ಪಂಚಾಯ್ತಿಯ ಯೋಜನಾ ಅಧಿಕಾರಿಗಳ ಕಾರ್ಯಾಗಾರವನ್ನು ಏರ್ಪಡಿಸಿ ತರಬೇತಿ ನೀಡಿ ನಂತರ ಅವರ ಮೂಲಕ ಗ್ರಾಮ ಪಂಚಾಯ್ತಿ ಮಟ್ಟದ ಅಧಿಕಾರಿಗಳಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕೃಷಿ ಸಹಾಯಕರು ಹಾಗೂ ಕಿರಿಯ ಅಭಿಯಂತರರಿಗೆ ಈ ಬಗ್ಗೆ ಮನವೊಲಿಸಲಾಯಿತು. ಫಲಿತಾಂಶವಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸುಮಾರು 1478 ಹಳ್ಳಿಗಳಲ್ಲಿ 31265 ರೈತರು ಬಂಜರು ಭೂಮಿಯನ್ನು ಹೊಂದಿದ್ದು, ಅವರು ಜೈವಿಕ ಇಂಧನ ಜಾತಿಯ ಸಸಿಗಳನ್ನು ನೆಡಲು ಪ್ರೇರಣಾ ಶಿಬಿರಗಳನ್ನು ಏರ್ಪಡಿಸಲು ಪ್ರಾರಂಭ ಮಾಡಲಾಯಿತು.
ಅದೇ ರೀತಿ, 105925 ಹೆಕ್ಟೇರ್ ಪ್ರದೇಶ ಅರಣ್ಯ ಭೂಮಿ ಈ ವಿಭಾಗದಲ್ಲಿ ಹೆಚ್ಚಾಗಿ ಬಂಜರು ಭೂಮಿಯಾಗಿ ಉಳಿದಿತ್ತು. ಅಲ್ಲಿಯೂ ಸಹ ಅರಣ್ಯ ಇಲಾಖೆಯ ವತಿಯಿಂದ ಪ್ರಸ್ತಾವನೆಯನ್ನು ಪಡೆದು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೇರಿಸಲು ಆಯಾ ಗ್ರಾಮ ಪಂಚಾಯ್ತಿಗಳಿಗೆ ಸಲ್ಲಿಸಲಾಯಿತು. ಆದರೆ, ಗ್ರಾಮ ಪಂಚಾಯ್ತಿಗಳಲ್ಲಿ ಇದರ ಮಹತ್ವದ ಬಗ್ಗೆ ಅಷ್ಟೊಂದು ತಿಳಿವಳಿಕೆ ಇಲ್ಲದೇ ಇರುವುದರಿಂದ ಸದರಿ ಪ್ರಸ್ತಾವನೆಗಳನ್ನು ಅನುಮೋದಿಸಲು ತುಂಬಾ ಕಷ್ಟಸಾಧ್ಯವಾಗಿತ್ತು. ಆದಾಗ್ಯೂ, ಯಾವ ಹಳ್ಳಿಯಲ್ಲಿ ಮುಂದುವರೆದ ರೈತರು ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ಇಲಾಖೆಗಳೊಂದಿಗೆ ಸಹಕರಿಸಿದರೋ ಅಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜೈವಿಕ ಇಂಧನ ಜಾತಿಯ ಮರಗಳ ಉತ್ತಮ ನೆಡತೋಪುಗಳನ್ನು ಸಿದ್ಧಪಡಿಸಲು ಸಾಧ್ಯವಾಯಿತು.
ಒಣ ಭೂಮಿ ಹೊಂದಿರುವ ಈ ಪ್ರದೇಶದಲ್ಲಿ ಹೊಂಗೆ, ಪೊಂಗೇಮಿಯ ಮತ್ತು ಬೇವು ಮುಂತಾದ ಜೈವಿಕ ಇಂಧನ ಜಾತಿಯ ಮರಗಳನ್ನು ಬೆಳೆಸಲು ಹೆಚ್ಚು ಅವಕಾಶಗಳು ಇರುತ್ತವೆ. ಏಕೆಂದರೆ ಈ ಮರಗಳಿಗೆ ಹೆಚ್ಚು ನೀರು ಬೇಕಾಗಿರುವುದಿಲ್ಲ. ಮಳೆಗಾಲಕ್ಕೆ ಮುಂಚೆ ಗುಂಡಿಗಳನ್ನು ತಯಾರಿಸಿ ನಂತರ ಬೇಸಿಗೆ ಕಾಲದಲ್ಲಿ ಒಂದೆರಡು ಸಲ ಮಡಿಕೆಗಳಲ್ಲಿ ನೀರು ತುಂಬಿ ತುಂತುರು ನೀರಾವರಿ ವ್ಯವಸ್ಥೆಯನ್ನು ಮಾಡಿದರೆ ಶೇಕಡಾ 70 ರಷ್ಟು ಮರಗಳು ಉಳಿಯುತ್ತವೆ. ಮೂರರಿಂದ ಐದು ವರ್ಷದ ಒಳಗೆ ಈ ಮರಗಳಿಂದ ಜೈವಿಕ ಬೀಜಗಳು ಉತ್ಪನ್ನವಾಗುತ್ತವೆ. ಅದರಿಂದ ಪ್ರತಿ ವರ್ಷ ಕನಿಷ್ಠ ಮೂವತ್ತು ಸಾವಿರದಿಂದ ಐವತ್ತು ಸಾವಿರ ರುಪಾಯಿ ಆದಾಯ ಬರುವುದಕ್ಕೆ ಶುರುವಾಗುತ್ತದೆ. ಈ ಜೈವಿಕ ಇಂಧನ ಸಸಿಗಳನ್ನು ತಯಾರಿಸಲು ಹಾಗೂ ಮಾರುಕಟ್ಟೆ ವ್ಯವಸ್ಥೆ ಜೊತೆಗೆ ಜೈವಿಕ ಬೀಜಗಳಿಂದ ಇಂಧನವನ್ನು ತಯಾರಿಸುವ ತಾಂತ್ರಿಕ ಘಟಕವನ್ನು ಸ್ಥಾಪಿಸಲು ಗುಲ್ಬರ್ಗಾ ವಿಶ್ವವಿದ್ಯಾಲಯ ಮುಂದೆ ಬಂದು ರೈತರಿಗೆ ಅತ್ಯುತ್ತಮ ಸಹಾಯವನ್ನು ನೀಡಿತು. ಸುಮಾರು 1.17 ಲಕ್ಷ ಹೆಕ್ಟೇರ್ ಪ್ರದೇಶವನ್ನು ಜೈವಿಕ ಇಂಧನ ಪ್ರದೇಶವಾಗಿ ಉಪಯೋಗಿಸಲು ಯೋಜನೆ ತಯಾರಿಸಲಾಗಿತ್ತು.
ಜೈವಿಕ ಇಂಧನದ ಜೊತೆಗೆ ಸೌರಮಾನ ಶಕ್ತಿಯ ವಿದ್ಯುಚ್ಛಕ್ತಿಯನ್ನು ಸಹ ಈ ಬಿಸಿಲೂರಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಬಹುದು ಎಂದು ಯೋಜನೆ ತಯಾರಿಸಲಾಗಿತ್ತು. ಸುಮಾರು 60948 ಹೆಕ್ಟೇರ್ ಭೂಮಿಯಲ್ಲಿ ಯಾವುದೇ ರೀತಿ ಬೆಳೆ ಬೆಳೆಯಲು ಅಥವಾ ಮರಗಳನ್ನು ಹಾಕಲು ಸಾಧ್ಯವಿಲ್ಲದೇ ಇರುವುದರಿಂದ ಈ ಭೂಮಿ (ಸರ್ಕಾರಿ ಹಾಗೂ ಖಾಸಗಿ) ಸರ್ವೇ ನಂಬರುವಾರು ವಿವರದೊಂದಿಗೆ ಪ್ರಕಟಿಸಿ ಸೌರಮಾನ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಇಷ್ಟ ಇರುವ ಉದ್ಯಮಿಗಳಿಗೆ ಆಕರ್ಷಿಸಲು ಪ್ರಯತ್ನ ಮಾಡಲಾಯಿತು. ಆದರೆ, ಸರ್ಕಾರಿ ಭೂಮಿಯನ್ನು ಉದ್ಯಮಿಗಳಿಗೆ ನೀಡಲು ಬಹಳ ಉದ್ದದ ಕಾರ್ಯವಿಧಾನ ಇರುವುದರಿಂದ ಇದಕ್ಕಾಗಿ ತುಂಬಾ ಸಮಯ ಕಳೆದು ಹೋಯಿತು. ಅದಾಗಿಯೂ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಎಂಬ ರಾಷ್ಟ್ರೀಯ ಸಂಸ್ಥೆ ಕೆಲವು ಸ್ಥಳಗಳನ್ನು ಪರಿಶೀಲಿಸಿ ಸೌರಮಾನ ಘಟಕಗಳನ್ನು ಹಾಕಲು ಆಸಕ್ತಿ ವಹಿಸಿತು.
ಹಳ್ಳಿಗಳ ಅತಿ ಮುಖ್ಯ ಬೇಡಿಕೆ ರಸ್ತೆಗಳನ್ನು ಕಟ್ಟಿಕೊಡಬೇಕೆಂಬುದೇ ಆಗಿರುತ್ತದೆ. ಆದರೆ ಬೇಡಿಕೆಗಳಿಗೆ ಅನುಗುಣವಾಗಿ ಸರ್ಕಾರದ ಹತ್ತಿರ ಸಾಕಷ್ಟು ಹಣ ಲಭ್ಯವಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಸರ್ಕಾರದಲ್ಲಿ ಬೇರೆಬೇರೆ ಇಲಾಖೆಗಳು, ಯೋಜನೆಗಳ ಮೂಲಕ ಪ್ರತಿ ವರ್ಷ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಅವರಲ್ಲಿ ಹೊಂದಾಣಿಕೆ ಇರುವುದಿಲ್ಲ. ಉದಾ: ಗ್ರಾಮ ಪಂಚಾಯ್ತಿ, ತಾಲೂಕು, ಜಿಲ್ಲಾ ಪಂಚಾಯ್ತಿ ಅನುಮೋದಿಸಿದ ರಸ್ತೆ ಕಾಮಗಾರಿಗಳು ಕೆಲವೊಮ್ಮೆ ಅತಿ ಹೆಚ್ಚು ಬಸ್ ಸಂಚಾರ ಇರುವಂತಹ ರಸ್ತೆಗಳಿಗೆ ಅನ್ವಯಿಸುವುದಿಲ್ಲ ಅಥವಾ ಹೊಸ ರಸ್ತೆ ಪ್ರಸ್ತಾವನೆಗಳನ್ನು ಅನುಮೋದಿಸಿದಾಗ ಈ ಹಿಂದೆ ಅದರ ಅಕ್ಕ-ಪಕ್ಕ ಇರುವ ರಸ್ತೆಗಳ ಅಭಿವೃದ್ಧಿಯನ್ನು ಕಡಿಮೆ ಖರ್ಚಿನಲ್ಲಿ ಮಾಡಬಹುದೇ ಅಥವಾ ಇಲ್ಲವೇ ಎಂದು ಪರಿಶೀಲಿಸಲು ಯಾವುದೇ ಮಾಹಿತಿ, ಇಲಾಖೆ ಅಥವಾ ಜನರ ಬಳಿ ಇರುವುದಿಲ್ಲ. ಈ ದಿಸೆಯಲ್ಲಿ ನಾವು ವಿಭಾಗದಲ್ಲಿರುವ ಎಲ್ಲಾ ರಸ್ತೆಗಳ ನಕಾಶೆಯನ್ನು ತಯಾರಿಸಿ ಗಣಕೀಕರಣಗೊಳಿಸಿದೆವು. ಅದರಂತೆ ನಕಾಶೆ ಮೇಲೆ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಅಥವಾ ಒಂದು ತಾಲೂಕಿನಿಂದ ಹಳ್ಳಿಗೆ ಹೋಗುವಂಥ ರಸ್ತೆಯ ಪ್ರಸ್ತುತ ಪರಿಸ್ಥಿತಿ ಏನು ಎಂಬುದು ನಿಖರವಾಗಿ ಒಬ್ಬ ಅನಕ್ಷರಸ್ಥ ನಾಗರಿಕರಿಗೂ ಸಹ ತಿಳಿಯುತ್ತದೆ. ಇಂತಹ ನಕಾಶೆಗಳನ್ನು ಪಂಚಾಯ್ತಿಯ ಎಲ್ಲಾ ಹಂತಗಳಲ್ಲಿ ಲಭ್ಯಗೊಳಿಸಿ ಅತೀ ಅಗತ್ಯವಾಗಿ ಇರುವ ಕಾಮಗಾರಿಯನ್ನು ಪಾರದರ್ಶಕ ರೀತಿಯಲ್ಲಿ ಆಯ್ಕೆ ಮಾಡಬೇಕೆಂದು ಕೋರಲಾಯಿತು. ಲೋಕೋಪಯೋಗಿ ಇಲಾಖೆ, ಪ್ರಧಾನ ಮಂತ್ರಿ ಗ್ರಾಮ ರಸ್ತೆ ಯೋಜನೆ ಹಾಗೂ ಜಿಲ್ಲಾ ಪಂಚಾಯ್ತಿಯ ಕಾರ್ಯಪಾಲಕ ಅಭಿಯಂತರರ ಕಾರ್ಯಾಗಾರಗಳನ್ನು ನಡೆಸಿ ನಾವು ಈ ಯೋಜನೆಯ ಲೆಕ್ಕವನ್ನು ಹಾಕಿದೆವು. ಸಾಮಾನ್ಯವಾಗಿ ವಿಭಾಗಕ್ಕೆ ಒಂದು ವರ್ಷದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ ಒಂದೂವರೆ ಕೋಟಿ ಅನುದಾನ ಕೇಂದ್ರ ಸರ್ಕಾರದಿಂದ ಬರುತ್ತದೆ. ಈ ಹಣವನ್ನು ಸರಿಯಾಗಿ ಉಪಯೋಗಿಸಿದರೆ ನಾವು 318 ಕೋಟಿಯಲ್ಲಿ ಎಲ್ಲಾ ಹಳ್ಳಿಗಳನ್ನು ತಾಲೂಕು ಮಟ್ಟಕ್ಕೆ ಜೋಡಿಸುವ ಒಂದು ಕ್ರಾಂತಿಕಾರಿ ಬದಲಾವಣೆಯನ್ನು ತರಬಹುದಾಗಿತ್ತು. ಆದರೆ, ಕೇಂದ್ರ ಸರ್ಕಾರದ ನಿಯಮಾವಳಿಯಂತೆ ಹಳೇ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಕಾಮಗಾರಿಗಾಗಿ ಅವರ ಮಾನದಂಡಗಳನ್ನೇ ಉಪಯೋಗಿಸಿ ಸುಮಾರು 30 ಲಕ್ಷ ಪ್ರತಿ ಕಿ.ಮೀ ರಂತೆ ಅಂದಾಜು ತಯಾರಿಸಬೇಕಾಗಿತ್ತು. ಈ ಪ್ರಕಾರ ಸುಮಾರು 2085 ಕೋಟಿ ಹಣದ ಅವಶ್ಯಕತೆ ಇತ್ತು. ಇದು ಬಹುಶಃ ಹತ್ತು ವರ್ಷದಲ್ಲಿಯೂ ಸಹ ಸಿಗುವುದು ಕಷ್ಟ
2002 ರಲ್ಲಿ ವಿಶ್ವ ಬ್ಯಾಂಕ್ನ ಒಂದು ಅಧ್ಯಯನದ ಪ್ರಕಾರ ರು. ಹತ್ತು ಲಕ್ಷ ಹಣವನ್ನು ಹಳ್ಳಿ ರಸ್ತೆಗಳ ಮೇಲೆ ಸರಿಯಾಗಿ ಖರ್ಚು ಮಾಡಿದರೆ ಅದರಿಂದ ಕನಿಷ್ಠ 163 ಜನರನ್ನು ಬಡತನದ ರೇಖೆಗಿಂತ ಮೇಲೆ ಏರಿಸಲು ಸಾಧ್ಯ. ಈ ಮಾನದಂಡವನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಂಡು ಪ್ರಾಮಾಣಿಕವಾಗಿ ರಸ್ತೆ ಸಂಪರ್ಕವನ್ನು ಸುಧಾರಿಸಿದರೆ ನಮ್ಮ ಹಳ್ಳಿಯ ಜನರು ಬಡತನವನ್ನು ಇದೇ ರಸ್ತೆಗಳ ಮೂಲಕ ಸಮುದ್ರಕ್ಕೆ ಕಳುಹಿಸುತ್ತಾರೆಂದು ನಾನು ಭಾವಿಸುತ್ತೇನೆ.
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


