

ಸತ್ತವರ ಬಗ್ಗೆ ಆಡಿಕೊಳ್ಳಬಾರದು. ಕೆಟ್ಟದ್ದನ್ನು ಎತ್ತಿ ಆಡಬಾರದು ಅನ್ನೋದು ವಾಡಿಕೆ ಮಾತು. ಅಂದರೆ ಸತ್ತವರು ಸತ್ತರು, ಅವರ ಗುಣದೋಷಗಳ ಬಗ್ಗೆ ಮಾತಾಡಿ ಏನು ಪ್ರಯೋಜನ ? ಅನ್ನುವುದು ಇದರ ತಿರುಳು. ಆದರೆ ಬದುಕಿದ್ದಾಗ ಯಾರಿಗೂ ಗೊತ್ತೇ ಇರದ ಕೆಲವರು ಸತ್ತ ಮೇಲೆ ಮಾತಾಗಿಬಿಡುತ್ತಾರೆ. ಬೇಡ-ಬೇಡ ಅಂದರೂ ಅವರ ಬಗ್ಗೆ ಮಾತಾಡದೇ ಇರಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ.
ಸತ್ತವರ ಬಗ್ಗೆ ಮಾತನಾಡುವುದು ಸಂಸ್ಕಾರ ಅಲ್ಲ ಅನ್ನಿಸಿಕೊಳ್ಳುತ್ತದೆ. ಆದರೆ ಅದೇ ಕಾಲಕ್ಕೆ ಮಾತಾಡದೇ ಇದ್ದರೆ ಅದು ಅತ್ಮವಂಚನೆಯೂ ಆಗುತ್ತದೆ. ಸಂಸ್ಕಾರದ ಸೋಗಿನಲ್ಲಿ ಸತ್ಯ ಮುಚ್ಚಿಡಲು ಆಗುವುದಿಲ್ಲ. ಸಂಸ್ಕಾರದ ಲೇಪ ಹೊದ್ದಾಕ್ಷಣ ಸುಳ್ಳು ಸತ್ಯವಾಗುವುದಿಲ್ಲ. ಅದೇ ರೀತಿ ಸತ್ಯ ಸುಳ್ಳಾಗುವುದೂ ಇಲ್ಲ. ಆದರೆ ಇದು ಗೊತ್ತಿದ್ದೂ ಗೊತ್ತಿಲ್ಲದವರಂತೆ ನಾಟಕ ಆಡುವವರು ರಾಜಕಾರಣಿಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ.
ಹೌದು, ಬೆಳಗಾವಿ ಸುವರ್ಣಸೌಧದ ಎದುರು ಕಂಕಣವಾಡಿಯ ರೈತ ವಿಠಲ ಅರಭಾವಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾನವೀಯತೆಯ ಎಲ್ಲ ಮಜಲುಗಳನ್ನು ದಾಟಿ ರಾಜಕೀಕರಣಗೊಂಡದ್ದು ಇದಕ್ಕೊಂದು ಸ್ಪಷ್ಟ ನಿದರ್ಶನ. ಆತ್ಮಹತ್ಯೆ ಮಾಡಿಕೊಂಡ ರೈತ, ಆತನ ಕುಟುಂಬದವರ ವರ್ತನೆ, ರೈತನ ಆತ್ಮಹತ್ಯೆ ಮುಂದಿಟ್ಟುಕೊಂಡು ಆಡಳಿತ ಹಾಗೂ ಪ್ರತಿಪಕ್ಷ ಎಂಬ ಬೇಧ ಇಲ್ಲದೇ ಎಲ್ಲರೂ ಮಾಡಿದ ರಾಜಕೀಯ, ಸಾವನ್ನೇ ನಾಚಿಸಿದೆ. ರೈತನ ಆತ್ಮಹತ್ಯೆಯ ನೈಜ ಕಾರಣ ಒಂದು ಕಡೆಯಾದರೆ, ನಿಜ ಕಾರಣ ಗೊತ್ತಿದ್ದರೂ ಅದನ್ನು ಮರೆಮಾಚಿ ರಾಜಕಾರಣಿಗಳು ಬೆಂದ ಮನೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋದದ್ದು ನಿಜಕ್ಕೂ ಅಕ್ಷಮ್ಯ. ಒಬ್ಬರ ಸಾವಲ್ಲಿ ಕೆಟ್ಟದ್ದನ್ನು ಹುಡುಕಬಾರದು ಎನ್ನುವ ಮಾತೇ ದಿಕ್ಕುದೆಸೆ ತಪ್ಪಿ ಹೋಗುವುದು ಇದೇ ಕಾರಣಕ್ಕೆ.
ಹೌದು, ವಿಠಲ ಅರಭಾವಿ ಕಬ್ಬು ಬೆಳೆಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆತ ಆರು ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದ ಎಂಬುದೂ ನಿಜ. ಆದರೆ ಈ ಸಾಲ ಕಬ್ಬು ಬೆಳೆಯಲಾಗಲಿ ಅಥವಾ ಬೆಳೆದ ಕಬ್ಬಿಗೆ ದರ ಸಿಗದೆ ಲುಕ್ಸಾನು ಅದದ್ದರ ಫಲವೇನೂ ಅಲ್ಲ. ಆತ ಹಿಂದಿನ ವರ್ಷ ಬೆಳೆದು ಪೂರೈಸಿದ ಕಬ್ಬಿಗೆ ನಿರಾಣಿ ಸಕ್ಕರೆ ಕಾರ್ಖಾನೆಯಿಂದ ಹಣ ಸಂದಾಯವಾಗಿದೆ. ಈ ವರ್ಷದ ಕಬ್ಬು ಇನ್ನೂ ಕಟಾವಾಗಬೇಕಿದೆ. ಹಾಗಿದ್ದರೆ ಆತ ಅತ್ಮಹತ್ಯೆ ಮಾಡಿಕೊಂಡದ್ದು ಏಕೆ?
ಈ ಬಗ್ಗೆ ರಾಜ್ಯ ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಆದರೆ ಪ್ರಾಥಮಿಕ ವರದಿಗಳ ಪ್ರಕಾರ ಸಾಲಗಾರರ ಕಾಟ ಈತನಿಗೆ ಹೆಚ್ಚಾಗಿತ್ತು. ಅತ್ಮಹತ್ಯೆಗೆ ಮೂರು ದಿನ ಮೊದಲು ಮನೆ ಬಿಟ್ಟಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಈತ ಮದ್ಯವ್ಯಸನಿ. ವಿಷ ಸೇವಿಸುವುದಕ್ಕೆ ಮುನ್ನ ಮದ್ಯಪಾನ ಮಾಡಿದ್ದ. ಇದರ ಫಲ ಭಾವೋದ್ವೇಗಕ್ಕೆ ಒಳಗಾಗಿ ವಿಷ ಸೇವಿಸಿಬಿಟ್ಟ. ಸುವರ್ಣಸೌಧದಲ್ಲಿ ಕಬ್ಬಿಗೆ ಹೆಚ್ಚಿನ ಬೆಲೆ ನಿಗದಿ ವಿಷಯ ಹಿಡಿದುಕೊಂಡು ಹಗ್ಗಜಗ್ಗಾಟ ನಡೆಸಿದ್ದ ರಾಜಕಾರಣಿಗಳು ಈತನಿಗೆ ಹುತಾತ್ಮನ ಪಟ್ಟ ಕಟ್ಟಿದರು. ಆ ಪಟ್ಟ ಕಟ್ಟಿದ ನಂತರ ಅವರಿಗೆ ಅತ್ಮಹತ್ಯೆ ನೈಜ ಕಾರಣ ಗೊತ್ತಾಗಿದೆ. ಆದರೆ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಸಿಕ್ಕ ವಿಷಯ ಬಿಡಲಿಲ್ಲ. ವಿಷಯ ಕೈಬಿಡುವ ಹೊತ್ತಿಗೆ ಎಲ್ಲರೂ ಸಾಕಷ್ಟು ಸುಸ್ತಾಗಿದ್ದರು.
ಇಲ್ಲಿ ರೈತನ ಆತ್ಮಹತ್ಯೆ ಹಾಗೂ ಆತನ ಸಾವನ್ನು ನಿಕೃಷ್ಟವಾಗಿ ಕಾಣುವ ಯಾವುದೇ ಉದ್ದೇಶ ಇಲ್ಲ. ಆದರೆ ಒಂದು ವಿಷಯ ಹೇಗೆ ರಾಜಕೀಕರಣಗೊಳ್ಳುತ್ತದೆ, ರಾಜಕೀಯ ಕಾರಣಗಳಿಗೆ ದುರ್ಬಳಕೆ ಆಗುತ್ತದೆ, ಹಾಗೆ ದುರ್ಬಳಕೆ ಆಗುವಾಗ ಹೇಗೆ ಸತ್ಯ ನಾಶವಾಗಿ ಬಿಡುತ್ತದೆ ಎಂಬುದಷ್ಟೇ ಮುಖ್ಯ. ರೈತರ ಆತ್ಮಹತ್ಯೆಯಂತ ಸೂಕ್ಷ್ಮ ವಿಚಾರವನ್ನು ಈ ರೀತಿ ಬಳಸಿಕೊಳ್ಳುವುದು ಇಂದು, ನಿನ್ನೆಯ ಕಥೆ ಅಲ್ಲ. ಹಿಂದೆ ಎಸ್.ಎಂ. ಕೃಷ್ಣ ಸರಕಾರ ಇದ್ದಾಗ ರಾಜ್ಯದಲ್ಲಿ ತೀವ್ರ ಬರಗಾಲ. ಆಗ ಆನೇಕ ರೈತರು ಸಾವಿಗೆ ಶರಣಾದರು. ರಾಜ್ಯದ್ಯಾಂತ ಸಮೂಹ ಸನ್ನಗೆ ಒಳಗಾದವರಂತೆ ರೈತರು ಜವರಾಯನನ್ನು ಅಪ್ಪಿಕೊಂಡರು. ಪ್ರತಿ ರೈತನ ಆತ್ಮಹತ್ಯೆಗೂ ಕೃಷಿಸಾಲದ ಲೇಬಲ್ ಹಚ್ಚಲಾಯಿತು. ನೆರೆಯ ಮಹಾರಾಷ್ಟ್ರ ಸರಕಾರವನ್ನು ಆದಾರವಾಗಿಟ್ಟುಕೊಂಡು ಕೃಷ್ಣ ಸರಕಾರ ಕೂಡ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ತಲಾ ಲಕ್ಷ ರುಪಾಯಿ ಪರಿಹಾರ ಘೋಷಿಸಿತು. ಈ ಪರಿಹಾರ ಘೋಷಿಸಿದ ನಂತರ ರೈತರ ಆತ್ಮಹತ್ಯೆಗೆ ನೈಜ ಕಾರಣವೇನು? ಅವರಿಗೆ ಪರಿಹಾರ ಕೊಡುವುದು ಸೂಕ್ತವೇ? ಆತ್ಮಹತ್ಯೆ ತಡೆಯಲು ಪರಿಹಾರೋಪಾಯಗಳೇನು ಎಂಬುದನ್ನು ಅಧ್ಯಯನ ಮಾಡಲು ವೀರೇಶ್ ಸಮಿತಿ ನೇಮಕ ಮಾಡಲಾಗಿತ್ತು. ಈ ಸಮಿತಿ ಕೊಟ್ಟ ವರದಿ ಪ್ರಕಾರ ಆತ್ಮಹತ್ಯೆ ಮಾಡಿಕೊಂಡವರೆಲ್ಲರೂ ರೈತರಲ್ಲ. ಅದೇ ರೀತಿ ಎಲ್ಲರ ಆತ್ಮಹತ್ಯೆಗೂ ಕೃಷಿ ಸಾಲವೇ ಕಾರಣವಾಗಿರಲಿಲ್ಲ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಸಾಲದಿಂದ ಬಸವಳಿದಿದ್ದರು. ಉಳಿದವರ ಆತ್ಮಹತ್ಯೆಗೆ ಕೌಟುಂಬಿಕ ಸಮಸ್ಯೆಗಳೇ ಪ್ರಮುಖ ಕಾರಣವಾಗಿದ್ದವು. ಆಗ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದ ಪ್ರತಿಪಕ್ಷಗಳಿಗೂ ಇದು ಚೆನ್ನಾಗಿ ಗೊತ್ತಿತ್ತು. ಆದರೆ ರಾಜಕೀಯ ಬಳಕೆಗೆ ಯೋಗ್ಯವಾದ ವಿಷಯವನ್ನು ಅಷ್ಟು ಸುಲಭದಲ್ಲಿ ಬಿಟ್ಟುಕೊಡುವುದಕ್ಕೆ ಸಾಧ್ಯವೇ ? ಹೀಗಾಗಿ ಎಷ್ಟೋ ರೈತರು ಹುತಾತ್ಮರಾದರು.
ಇದೇ ಕೃಷ್ಣ ಸರಕಾರದ ಕಾಲದಲ್ಲಿ ಮತ್ತೊಂದು ರೈತ ಆತ್ಮಾಹುತಿ ಪ್ರಕರಣ ಇಡೀ ದೇಶದ ಗಮನ ಸೆಳೆಯಿತು. ತಮಿಳುನಾಡಿಗೆ ಕಬಿನಿ ಜಲಾಶಯದಿಂದ ನೀರು ಹರಿಯಬಿಟ್ಟದ್ದನ್ನು ರೈತರು ಉಗ್ರವಾಗಿ ಪ್ರತಿಭಟಿಸಲಾರಂಭಿಸಿದರು. ಕಬಿನಿ ಡ್ಯಾಂ ಪಕ್ಕದ ಪುರ ಗ್ರಾಮದ ಗುರುಸ್ವಾಮಿ ನದಿಗೆ ಹಾರಿ ಆತ್ಮಾಹುತಿ ಮಾಡಿಕೊಂಡ. ಈ ಪ್ರಕರಣದ ಸುತ್ತಲೂ ಅನುಮಾನವಿತ್ತು. ಮಂಜುಳಾ ಎಂಬುವರು ಸೇರಿದಂತೆ ನಾಲ್ವರು ನದಿಗೆ ಹಾರಿದರು. ಅವರು ಹಾರಿದ್ದನ್ನು ನೋಡಿದ ಗುರುಸ್ವಾಮಿ ಅಲ್ಲೇ ಇದ್ದ ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರ ಎದುರು ತೋರಿಸಿಕೊಳ್ಳಲು ತಾವೂ ಧುಮುಕಿದರು. ಮೊದಲು ಹಾರಿದ ನಾಲ್ವರ ಪೈಕಿ ಇಬ್ಬರನ್ನು ಮೊದಲೇ ಯೋಜಿಸಿದ್ದಂತೆ ರಕ್ಷಿಸಲಾಯಿತು. ಇನ್ನಿಬ್ಬರು ಈಜಿ ದಡ ಸೇರಿದರು. ಈಜು ಬಾರದ, ಮದ್ಯದ ಅಮಲಿನಲ್ಲಿದ್ದ ಗುರುಸ್ವಾಮಿ ಕೊಚ್ಚಿಕೊಂಡು ಹೋದರು. ಆ ಪ್ರಕರಣ ಮುಂದಿಟ್ಟುಕೊಂಡು ಕೃಷ್ಣ ಸರಕಾರವನ್ನು ಪ್ರತಿಪಕ್ಷಗಳು ಹಿಗ್ಗಾಮುಗ್ಗಾ ಜಗ್ಗಾಡಿದ್ದರಿಂದ ಗುರುಸ್ವಾಮಿ ಹುತಾತ್ಮರಾಗಿ, ತಮ್ಮೂರಿನಲ್ಲಿ ಪುತ್ಥಳಿಯಾಗಿ ನಿಂತಿದ್ದಾರೆ.
ಹುಬ್ಬಳ್ಳಿಯಲ್ಲಿ ಕೋಮುಗಲಭೆ ಪರಿಹಾರ ಪಡೆಯಲು ಸಹಜ ಸಾವನ್ನಪ್ಪಿದ ವ್ಯಕ್ತಿಯ ಶವಕ್ಕೆ ಚೂರಿ ಇರಿದ ವಿಲಕ್ಷಣ ಘಟನೆ ಕೂಡ ಕಣ್ಣ ಮುಂದಿದೆ. ಪರಿಹಾರಕ್ಕಾಗಿ ಸಾವನ್ನೇ ವ್ಯಾಪಾರ ಮಾಡಿಕೊಳ್ಳುವ ಜನರು ನಮ್ಮ ನಡುವೆ ಇದ್ದಾರೆ. ಇಂಥ ಜನರಿಂದ ರೈತ ಸಮುದಾಯಕ್ಕೆ ಅವಮಾನ ಆಗುತ್ತಿದೆ. ಆದರೆ ಇದ್ಯಾವುದನ್ನೂ ಲೆಕ್ಕಿಸದ ರಾಜಕಾರಣಿಗಳು ಅನ್ಯರ ಸಾವನ್ನು ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ.
ಶಾದಿಭಾಗ್ಯ ವಿರುದ್ಧದ ಹೋರಾಟವನ್ನು ವಿಠಲ ಅರಭಾವಿ ಆತ್ಮಹತ್ಯೆ ಪ್ರಕರಣಕ್ಕೆ ತಿರುಗಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಿಂದೆ ಇಂಥದ್ದೇ ಪ್ರಸಂಗ ಎದುರಿಸಿದ್ದರು. ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆದು, ಇಬ್ಬರು ಸತ್ತರು. ಈಗ ಯಡಿಯೂರಪ್ಪನವರು ಮಾಡಿದ ಹೋರಾಟವನ್ನು ಆಗ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಕೈಗೆತ್ತಿಕೊಂಡಿದ್ದವು. ಗೋಲಿಬಾರ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿದ ಜಗನ್ನಾಥ ಶೆಟ್ಟಿ ಆಯೋಗ ಸತ್ತವರಲ್ಲಿ ಇಬ್ಬರು ರೈತರೇ ಅಲ್ಲ ಎಂದು ವರದಿ ಕೊಟ್ಟಿತು. ಇಂಥದ್ದೆಲ್ಲ ಕಣ್ಣ ಮುಂದಿರುವಾಗ ಪ್ರತಿಪಕ್ಷಗಳು ವಿಠಲ ಅರಭಾವಿ ಪ್ರಕರಣವನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳಬಾರದಿತ್ತು.
ಆದರೆ ಇಲ್ಲಿ ಅರ್ಥವಾಗದ ವಿಷಯವೇನೆಂದರೆ ರಾಜಕೀಯ ಕಾರಣಗಳಿಗಾಗಿ ಸುಳ್ಳು-ಸುಳ್ಳು ಪ್ರಕರಣಗಳನ್ನು ಮುಂದಿಟ್ಟುಕೊಂಡು ಹೀಗೆ ಹೋರಾಟ ನಡೆಸುವ ಅಗತ್ಯವಿದೆಯೇ? ಸತ್ಯ ಇದ್ದರೆ ಹೋರಾಟ ಮಾಡಲಿ. ಆದರೆ ನಿಜ ಗೊತ್ತಿದ್ದೂ ಆತ್ಮವಂಚನೆ ಮಾಡಿಕೊಳ್ಳುವುದು ಸರಿಯೇ?! ಇವತ್ತು ಪ್ರತಿಪಕ್ಷ ಸ್ಥಾನದಲ್ಲಿದ್ದವರು ನಾಳೆ ಆಡಳಿತ ಪಕ್ಷವಾಗಬಹುದು. ಇವತ್ತು ಇವರಿಗೆ ಸಿಕ್ಕ ಅಸ್ತ್ರ ನಾಳೆ ಅವರಿಗೂ ಸಿಗಬಹುದು. ಹೋರಾಟಕ್ಕಾಗಿ ಹೋರಾಟ, ಪ್ರತೀಕಾರಕ್ಕಾಗಿ ಹೋರಾಟ ನಡೆಸುವುದು ಎಷ್ಟರ ಮಟ್ಟಿಗೆ ಸರಿ?
ಈ ಪ್ರಕರಣದಲ್ಲಿ ಆಡಳಿತ ಪಕ್ಷದ ಪಾತ್ರ ಕಡಿಮೆಯೇನಿಲ್ಲ. ಸಿದ್ದರಾಮಯ್ಯನವರ ಸರಕಾರ ಕೂಡ ಕಬ್ಬು ಬೆಂಬಲ ಬೆಲೆ ನಿಗದಿ ವಿಚಾರವನ್ನು ಆರಂಭದಲ್ಲಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆರಭಾವಿ ಆತ್ಮಹತ್ಯೆ ಕಾರಣ ಏನಾದರೂ ಇರಲಿ, ಆದರೆ ಕಬ್ಬು ಬೆಳೆಗಾರರ ಸಮಸ್ಯೆ ಸುಳ್ಳೇನೂ ಆಗಿರಲಿಲ್ಲ. ಎರಡು ಬಾರಿ ಕರೆದಿದ್ದ ಕಬ್ಬು ಬೆಲೆ ನಿಗದಿ ಮಂಡಳಿ ಸಭೆಯಲ್ಲೇ ಅವರಿಗೆ ರೈತ ಪರವಾದ ನಿರ್ಣಯ ಪ್ರಕಟಿಸುವುದಕ್ಕೆ ಸಾಧ್ಯವಿತ್ತು. ಆದರೆ ಸಿದ್ದರಾಮಯ್ಯನವರ ಸರ್ಕಾರಕ್ಕೆ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಸಕ್ಕರೆ ಲಾಭಿ ಅವರ ಕೈ ಕಟ್ಟಿ ಹಾಕಿತ್ತು. ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಕೈಯಲ್ಲೇ ಇವೆ. ಅವರಲ್ಲಿ ಅನೇಕರು ಸಚಿವರಿದ್ದಾರೆ, ಶಾಸಕರಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷಎರಡೂ ಕಡೆಯವರು ಇದ್ದಾರೆ. ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ, ಪ್ರಕಾಶ್ ಹುಕ್ಕೇರಿ, ಶಾಮನೂರು ಶಿವಶಂಕರಪ್ಪ, ಬಿಜೆಪಿಯ ಮುರುಗೇಶ್ ನಿರಾಣಿ, ಲಕ್ಷ್ಮಣ ಸವದಿ, ಉಮೇಶ್ ಕತ್ತಿ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯಲ್ಲಿದ್ದಾರೆ. ಇವರನ್ನು ಎದಿರು ಹಾಕಿಕೊಂಡು ಬೆಂಬಲ ಬೆಲೆ ನಿಗದಿ ಮಾಡಲು ಸಿದ್ದರಾಮಯ್ಯ ಮೀನಮೇಷ ಎಣಿಸಿದರು. ಅರಭಾವಿ ಆತ್ಮಹತ್ಯೆಗೆ ಕಾರಣ ಏನೇ ಇರಲಿ, ಆದರೆ ಬೆಂಬಲ ಬೆಲೆ ನಿಗದಿ ವಿಳಂಬಕ್ಕೆ ಸಿದ್ದರಾಮಯ್ಯ ಸರಕಾರವೇ ನೇರ ಹೊಣೆ. ಹೋಗಲಿ ಬೆಂಬಲ ಬೆಲೆ ನಿಗದಿ ಆದ ಮೇಲಾದರೂ ಎಲ್ಲವೂ ಬಗೆಹರಿದು ಹೋಯಿತೇ? ಬಿಲ್‌ಕುಲ್ ಇಲ್ಲ. ಸಿದ್ದರಾಮಯ್ಯ ಬೆಲೆ ಘೋಷಿಸುತ್ತಾರೆ. ಇದನ್ನು ಧಿಕ್ಕರಿಸುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ಅವರದೇ ಸರಕಾರದಲ್ಲಿ ಮಂತ್ರಿ-ಶಾಸಕರಾಗಿದ್ದಾರೆ. ಸಕ್ಕರೆ ಲಾಬಿ ಶಕ್ತಿಯುತವಾಗಿದೆ. ಸಿದ್ದರಾಮಯ್ಯ ಕಸರತ್ತು ದುರ್ಬಲವಾಗಿದೆ. ಮೂವತ್ತು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಸಕ್ಕರೆ ಲಾಬಿ ಸರಕಾರವನ್ನು ನಿಯಂತ್ರಿಸುತ್ತಿತ್ತು. ನಂತರ ಹೆಂಡ-ಸಾರಾಯಿ ಲಾಬಿ ಕೈಯಲ್ಲಿ ಸರಕಾರಗಳು ತಲೆ ಕೊಟ್ಟಿದ್ದವು. ತದನಂತರ ಗಣಿ ಲಾಬಿ ಸರಕಾರ ನಿಯಂತ್ರಿಸುವುದಿರಲಿ, ಸರಕಾರದ ಭಾಗವಾಗಿಯೇ ಪರಿವರ್ತನೆ ಕಂಡಿತು. ತತ್ಪರಿಣಾಮವಾಗಿ ಸರಕಾರದ ಚುಕ್ಕಾಣಿ ಹಿಡಿದಿದ್ದು ಮುಖ್ಯಮಂತ್ರಿ ಸೇರಿದಂತೆ ಮಂತ್ರಿ ಮಹೋದಯರು ಜೈಲು ಪಾಲಾದರು. ಈಗ ಗಣಿ ಲಾಬಿ ಪಕ್ಕಕ್ಕೆ ಸರಿದು ಮತ್ತೇ ಸಕ್ಕರೆ ಲಾಬಿ ಸಕ್ರಿಯವಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಅದು ಸಿದ್ದರಾಮಯ್ಯನವರ ಸರಕಾರವನ್ನು ನಿಯಂತ್ರಿಸುವುದಷ್ಟೇ ಅಲ್ಲ, ಸರಕಾರದ ಭಾಗವೂ ಆಗಿದೆ! ಹೀಗಾಗಿ ಅವರಿಗೆ ರೈತ ಗೌಣ. ಸರ್ಕಾರದ ಭಾಗವಾಗಿರುವ ಸಚಿವರ ಹಿತಾಸಕ್ತಿ ಕಾಯುವುದೂ ಮುಖ್ಯ. ಒಂದೊಮ್ಮೆ ಅವರ ಮನವೊಲಿಸಲು ನಿರ್ಧರಿಸಿದರೆ, ಅದಕ್ಕೆ ಇನ್ನೆಷ್ಟು ಸಮಯ ಬೇಕೋ? ಅಷ್ಟರಲ್ಲಿ ಏನೇನೂ ಅನಾಹುತಗಳಾಗಬೇಕೋ..?
ಇದೆಲ್ಲದರ ಜತೆಗೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ಪರಿಹಾರ ನೀಡುವುದರಿಂದಷ್ಟೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಇದು ಸಾವಿಗೆ ಬೆಲೆ ಕಟ್ಟುವ ವ್ಯರ್ಥ ಪ್ರಯತ್ನವಾಗಬಹುದಷ್ಟೇ. ಇಲ್ಲಿ ಪರಿಹಾರ ಸಿಗಬೇಕಿರುವುದು ಸಾವಿಗಲ್ಲ. ರೈತರ ಸಮಸ್ಯೆಗಳಿಗೆ. ಅದೂ ಶಾಶ್ವತ ಪರಿಹಾರ. ಕಾಲಾನುಕ್ರಮಕ್ಕೆ ಅನುಗುಣವಾಗಿ ಕೃಷಿ ಪದ್ಧತಿ ಬದಲಾವಣೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಹವಾಮಾನ, ಪರಿಸರಕ್ಕೆ ತಕ್ಕ ಕ್ರಮಬದ್ಧ ಬೇಸಾಯಕ್ಕೆ ಅಣಿಗೊಳಿಸಬೇಕು. ಸಾಲ-ಸವಲತ್ತು ಒದಗಿಸಬೇಕು. ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಅದು ಬಿಟ್ಟು ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳಲು ಒಬ್ಬರ ಸಾವಿಗಾಗಿ ಕಾಯ್ದು ಕುಳಿತುಕೊಳ್ಳುವುದು ಸರಿಯಲ್ಲ. ಇಂಥ ಪರಂಪರೆ ಮುಂದುವರಿದರೆ ಮುಂದೊಂದು ದಿನ ಸರಕಾರವೇ ಹುತಾತ್ಮ ಸ್ಥಾನಕ್ಕೇರಬಹುದು. ಏಕೆಂದರೆ ರಾಜ್ಯದಲ್ಲಿ ರೈತ ವಿರೋಧವನ್ನು ಕಟ್ಟಿಕೊಂಡ ಯಾವ ಸರ್ಕಾರವೂ ಬಹಳ ಕಾಲ ಬಾಳಿಲ್ಲ.
ಲಗೋರಿ: ಎಡವಿ ಬಿದ್ದ ಮೇಲೆ ನೆಲಕ್ಕೆ ಒದೆದರೆ ಬೇರೆಯವರ ಕಾಲಿಗೆ ನೋವಾಗುವುದಿಲ್ಲ.
- ಪಿ. ತ್ಯಾಗರಾಜ್
thyagarjun@gmail.com