ಅಂಕಣಗಳು

ಜಪಾನ್ ರಾಜರ ಪ್ರವಾಸವೇಕೆ ನಮಗೆ ಮುಖ್ಯವಾಗುತ್ತದೆ?

ಜಪಾನ್ ರಾಜರ ಪ್ರವಾಸವೇಕೆ ನಮಗೆ ಮುಖ್ಯವಾಗುತ್ತದೆ?
Published On :

ಜಪಾನ್‌ನ ರಾಜಾ ಅಕಿಹಿತೋ ಮತ್ತು ರಾಣಿ ಮಿಚಿಕೋ ಅವರ ಆರು ದಿನಗಳ ಭಾರತೀಯ ಪ್ರವಾಸ, ಹಿಂದೆ ಭಾರತಕ್ಕೆ ಬಂದ ಅನೇಕ ವಿದೇಶೀ ನಾಯಕರ ಭೇಟಿಗಿಂತಲೂ ಅತ್ಯಂತ ಭಿನ್ನವಾದದ್ದು ಮತ್ತು ಪ್ರಮುಖವಾದದ್ದು. ಅಕಿಹಿತೋ ಮತ್ತು ಮಿಚಿಕೋ ವಿದೇಶ ಪ್ರವಾಸ ಕೈಗೊಳ್ಳುವುದು ಬಹಳ ವಿರಳ. ಕಳೆದ ಹತ್ತು ವರ್ಷಗಳಿಂದ ಭಾರತ ಅವರಿಗೆ ಆಮಂತ್ರಣ ನೀಡುತ್ತಲೇ ಇತ್ತು. ಪ್ರಖರ ರಾಷ್ಟ್ರೀಯವಾದಿ ಮತ್ತು ಭಾರತದ ಆಪ್ತರಾದ ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಅಧಿಕಾರ ವಹಿಸಿಕೊಂಡ ನಂತರವೇ, ಅಚಾನಕ್ಕಾಗಿ ಭಾರತದ ಆಮಂತ್ರಣವನ್ನು ಒಪ್ಪಿಕೊಳ್ಳುವ ನಿರ್ಣಯ ತೆಗೆದುಕೊಳ್ಳಲಾಯಿತು ಮತ್ತು ಅಕಿಹಿತೋ ಅವರ ಭಾರತೀಯ ಪ್ರವಾಸಕ್ಕೆ ಮೊಹರು ಬಿತ್ತು ಎಂದು ಹೇಳಲಾಗುತ್ತಿದೆ. ಅಕಿಹಿತೋ ಮತ್ತು ಮಿಚಿಕೋ ಜಪಾನಿಯರ ಪರಂಪರಾಗತಮೌಲ್ಯಗಳ ಮತ್ತು ನಂಬಿಕೆಗಳ ಪ್ರತೀಕವಾಗಿದ್ದಾರೆ ಎನ್ನುವುದು ಎಷ್ಟು ಸತ್ಯವೋ, ಅದೇ ರೀತಿ ಅವರುಗಳು ಜಪಾನ್‌ನ ರಾಷ್ಟ್ರೀಯ ಅಸ್ಮಿತೆಯ ಮಹತ್ವಪೂರ್ಣ ಪ್ರತೀಕವಾಗಿದ್ದಾರೆ ಎನ್ನುವುದೂ ಅಷ್ಟೇ ಸತ್ಯ.  ಅವರ ಆರು ದಿನಗಳ ಭಾರತ ಪ್ರವಾಸದ ಅರ್ಥವಿಷ್ಟೆ- ಈ ಆರೂ ದಿನಗಳವರೆಗೆ ಜಪಾನಿಯರ ದೃಷ್ಟಿ ಭಾರತದತ್ತ ನೆಟ್ಟಿರುತ್ತದೆ!
ಭಾರತ ಮತ್ತು ಜಪಾನ್‌ನ ನಡುವೆ ಹೆಚ್ಚುತ್ತಿರುವ ಗೆಳೆತನವನ್ನು ಚೀನಾ ಅಥವಾ ಅನ್ಯ ರಾಷ್ಟ್ರಗಳಿಗೆ ತೋರಿಸುವುದು ಈ ಪ್ರವಾಸದ ಉದ್ದೇಶ ಎಂದು ನಾವು ಭಾವಿಸಬಾರದು. ಏಕೆಂದರೆ ಜಪಾನ್ ಮತ್ತು ಭಾರತದ ಬಾಂಧವ್ಯ ಬುದ್ಧನಿಗಿಂತಲೂ ಹಿಂದಿನದ್ದು. ಒಂದು ಸಂಶೋಧನೆಯ ಪ್ರಕಾರ ಜಪಾನಿಯರು ತಮ್ಮ ಭಾಷೆಗಾಗಿ ಯಾವ ಲಿಪಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಲೆಕೆಡಿಸಿಕೊಂಡಿದ್ದಾಗ ಅವರ ಕಣ್ಣಿಗೆ ಬಿದ್ದದ್ದು ನಮ್ಮ 'ತಮಿಳು' ಭಾಷೆ! ಆದರೆ ಕೊನೆಗೆ ಅವರು ತಮ್ಮದೇ ಆದ ಕಾಂಜಿ ಲಿಪಿ(ಚಿತ್ರಾಕ್ಷರ)ಯನ್ನು ಹುಟ್ಟುಹಾಕಿದರು.
ನಿಸ್ಸಂದೇಹವಾಗಿಯೂ 79 ವರ್ಷದ ರಾಜಾ ಅಕಿಹಿತೋ ಅವರಿಗೆ ಭಾರತದ ಮೇಲೆ ಪ್ರೇಮವಿದೆ. 1960ರಲ್ಲಿ, ಅಂದರೆ ಅವರು ರಾಜಕುಮಾರನಾಗಿದ್ದಾಗ ಭಾರತಕ್ಕೆ ಬಂದು, ದೆಹಲಿಯ 'ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌'ನ ಶಿಲಾನ್ಯಾಸ ನೆರವೇರಿಸಿದ್ದರು. ಈಗ 53 ವರ್ಷಗಳ ನಂತರ ಅವರು ಮತ್ತೊಮ್ಮೆ ಭಾರತಕ್ಕೆ ಬಂದಿದ್ದಾರೆ. ಅವರು ಶಿಂತೋ ದರ್ಶನದ ವಿದ್ವಾಂಸರು. ಅಷ್ಟೇ ಅಲ್ಲದೆ ಹಾಕಾನಾಸಾ ಸಿದ್ಧಾಂತವನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು. "ನದಿ ಯಾವಾಗಲೂ ಸನಾತನವಾದದ್ದು. ಆದರೆ ಜಲ ಮಾತ್ರ ಬದಲಾಗುತ್ತಿರುತ್ತದೆ. ಅದೇ ರೀತಿಯಲ್ಲಿ ಬದಲಾದ ಜೀವನದ ಸ್ಮೃತಿ ಮತ್ತು ಪರಂಪರೆಗಳು ಸನಾತನವಾದವುಗಳು, ಅವುಗಳನ್ನು ರಕ್ಷಿಸುವುದರಿಂದ ಮಾತ್ರ ರಾಷ್ಟ್ರ ಬದುಕುಳಿಯಬಲ್ಲದು" ಎನ್ನುತ್ತದೆ ಹಕಾನಾಸಾ ಸಿದ್ಧಾಂತ. ಜಪಾನ್ ಪ್ರಧಾನಿ ಶಿಂಜೋ ಅಬೆ, ನಮ್ಮ ಉಪನಿಷತ್ತುಗಳ ಮೇಲೆ ದಾರಾ ಶಿಖೋ ಮಾಡಿದ ಉಲ್ಲೇಖದಿಂದ ಒಂದು ಸಾಲನ್ನು ಎರವಲು ಪಡೆಯುತ್ತಾ ಹೀಗೇ ಹೇಳಿದ್ದರು-" ಭಾರತ ಮತ್ತು ಜಪಾನ್ ನಡುವಿನ ಸಂಬಂಧ ಎರಡು ಮಹಾಸಾಗರಗಳ ಮಿಲನ".  ಭಾರತ ಮತ್ತು ಜಪಾನ್ ನಡುವೆ ಇರುವಂಥ 'ಸಂಸ್ಕೃತಿಮತ್ತು ಶ್ರದ್ಧೆಯ' ಬಾಂಧವ್ಯವನ್ನು ಪ್ರಪಂಚದ ಬೇರೆ ಯಾವ ಮಿತ್ರ ರಾಷ್ಟ್ರಗಳಲ್ಲೂ ಕಾಣಲು ಸಾಧ್ಯವಿಲ್ಲ. ಬುದ್ಧ ಮತ್ತು ಶಿಂತೋವಾದ ಈ ಎರಡೂ ದೇಶಗಳ ಸಮಾಜ ಮತ್ತು ಸಂಸ್ಕೃತಿಯನ್ನು ಬೆಸೆಯುತ್ತವೆ. ಶಿಂತೋ ಸಿದ್ಧಾಂತ ಮತ್ತು ಹಿಂದು ಧರ್ಮಕ್ಕೆ ಬಹಳ ಸಾಮ್ಯತೆ ಇದೆ. ಅಕಿಹಿತೊ ಈ ಮಿಲನದ ಸರ್ವಶ್ರೇಷ್ಠ ಪ್ರತೀಕ ಎನ್ನುವುದರಲ್ಲಿ ಎರಡು ಮಾತಿಲ್ಲ.  
ಭಾರತದ ಮಹಾನ್ ಕ್ರಾಂತಿಕಾರಿಗಳಾದ ರಾಸ್‌ಬಿಹಾರಿ ಬೋಸ್ ಮತ್ತು ಸುಭಾಷ್ ಚಂದ್ರ ಬೋಸರಿಗೆ ಜಪಾನ್ ಆಶ್ರಯ ನೀಡಿತ್ತು ಎನ್ನುವುದಷ್ಟೇ ನಮಗೆ ಗೊತ್ತಿದೆ. ಆದರೆ ಆ ದೇಶಕ್ಕೆ ರವೀಂದ್ರನಾಥ್ ಠಾಗೂರರ ಬಗ್ಗೆಯೂ ಬಹಳ ಪ್ರೀತಿಯಿದೆ. ಇನ್ನು ಬುದ್ಧನ ಪ್ರಭಾವ ಸರ್ವವ್ಯಾಪಿಯೆಂಬುದು ನಮಗೆ ಗೊತ್ತಿರುವಂಥದ್ದೇ. ಜಪಾನ್‌ನ ಬೌದ್ಧ ಭಿಕ್ಷುಗಳು ಬೆಂಗಳೂರು ಮತ್ತು ಬೌದ್ಧಗಯಾಗಳ ಶಿಲ್ಪಿಗಳನ್ನು, ಕ್ಯೋತೋ, ಕೋಬೆ ಮತ್ತು ಟೋಕ್ಯೋದಲ್ಲಿನ ಬೌದ್ಧಮಂದಿರಗಳ ನಿರ್ಮಾಣಕ್ಕೆ ಕರೆದೊಯ್ಯುತ್ತಿದ್ದರು. ಇದೇ ಸಾಂಸ್ಕೃತಿಕ ವಿಶ್ವಾಸದ ಬುನಾದಿಯ ಮೇಲೆಯೇ ಅಧುನಿಕ ಯುಗದಲ್ಲಿ ಭಾರತ ಮತ್ತು ಜಪಾನ್ ನಡುವೆ ಬೃಹತ್ ಆರ್ಥಿಕ ಸಹಯೋಗ ಸ್ಥಾಪನೆಯಾಯಿತು. ಮಾರುತಿ ಸುಝುಕಿ ಭಾರತೀಯ ರಸ್ತೆಗಳ ಚಹರೆಯನ್ನೇ ಬದಲಿಸಿ ವಾಹನ ಕ್ರಾಂತಿಯನ್ನು ಮಾಡಿದರೆ, ಮೆಟ್ರೋ ಭಾರತದ ರೇಲ್ವೆಯ ದಿಸೆಯನ್ನೇ ಬದಲಿಸುತ್ತಿದೆ. ಜಪಾನ್‌ನ ವಾಹನಗಳು, ಕ್ಯಾಮೆರಾ, ಕಂಪ್ಯೂಟರ್ ಮತ್ತು ಇನ್ನಿತರ ತಂತ್ರಜ್ಞಾನಗಳು ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿವೆ. ಆದರೆ ಇದಕ್ಕಿಂತಲೂ ಹೆಚ್ಚಾಗಿ, ವಿಶ್ವದ ಎರಡು ಸಶಕ್ತ ಲೋಕತಾಂತ್ರಿಕ ದೇಶಗಳ ನಡುವಿನ ಸೈನ್ಯ ಸಹಯೋಗ ಭಾರತದ ಪೂರ್ವ ಭಾಗಗಳಲ್ಲಿನ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತಿದೆ ಎನ್ನುವುದು ನಮಗೆ ಅರ್ಥವಾಗಬೇಕು.
ಒಂದು ವೇಳೆ ಚೀನಾ ಯಾವುದಾದರೂ ವಿಷಯಕ್ಕೆ ಹೆದರುತ್ತದೆಂದರೆ, ಅದು ಭಾರತ ಮತ್ತು ಜಪಾನ್ ನಡುವೆ ಹೆಚ್ಚುತ್ತಿರುವ ಬಾಂಧವ್ಯವನ್ನು ನೋಡಿಯೇ. ಇದು ಅತಿಶಯೋಕ್ತಿಯಲ್ಲ, ಏಕೆಂದರೆ ಭವಿಷ್ಯದ ಭದ್ರತಾ ನೀತಿಗಳು ಸಮುದ್ರದ ರಣನೀತಿಗಳಿಂದಲೇ ಪ್ರಭಾವಿತವಾಗಿರುತ್ತವೆ. ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ, ಪೆಸಿಫಿಕ್ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಾಗರ ಆರ್ಥಿಕ ಮತ್ತು ಭದ್ರತಾ ಕೂಟನೀತಿಯ ಮೂಲಾಧಾರಗಳಾಗಿ ಬದಲಾಗಿವೆ. ಈ ಮೂರೂ ಕ್ಷೇತ್ರಗಳಲ್ಲೂ ಚೀನಾ ಇಷ್ಟು ವರ್ಷಗಳವರೆಗೆ ಪ್ರಭುತ್ವ ಸಾಧಿಸುತ್ತಾ ಬಂದಿತ್ತು. ಆದರೆ ಯಾವಾಗ 2011ರಲ್ಲಿ ಜಪಾನ್ ಮತ್ತು ಭಾರತ, ಆಸ್ಟ್ರೇಲಿಯಾ ಮತ್ತು ಅಮೆರಿಕದೊಂದಿಗೆ ಸಂಯುಕ್ತ ಸೇನಾ ಅಭ್ಯಾಸವನ್ನು ಪ್ರಾರಂಭಿಸಿದವೋ ಅಂದೇ ಚೀನಾದ ಏಕಾಧಿಕಾರ ಮುಗ್ಗರಿಸಿಬಿದ್ದಿತು.
ಜಪಾನ್ ರಾಜರ ಭಾರತ ಪ್ರವಾಸ ನಮ್ಮ ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಧ್ಯಾಯವೊಂದನ್ನು ಪ್ರಾರಂಭಿಸಲಿದೆ. ಆ ದೇಶ(ಜಪಾನ್) ಭಾರತದೊಂದಿಗೆ ಪ್ರಪಂಚದ ಅತ್ಯಂತ ಸಶಕ್ತ ಮತ್ತು ದೀರ್ಘಕಾಲಿಕ ಲೋಕತಾಂತ್ರಿಕ ಸಹಯೋಗ ಮಾಡಿಮಾಡಿಕೊಳ್ಳಲು ಉತ್ಸುಕವಾಗಿದೆ. ಆದರೆ ಭಾರತಕ್ಕೂ ಜಪಾನ್‌ನಷ್ಟೇ ಉತ್ಸಾಹವಿದೆಯೇ? ಕೀಳು ಮಟ್ಟದ ರಾಜಕೀಯ ಮತ್ತು ಕ್ಷುದ್ರ, ಸಂಕೀರ್ಣ ವಿಷಯಗಳಲ್ಲಿ ಸಿಲುಕಿಕೊಂಡಿರುವ ಭಾರತದ ರಾಜಕಾರಣಿಗಳು ರಾಜಕೀಯದ ವಿಶ್ವಪಟಲದಲ್ಲಿ ನಡೆಯುತ್ತಿರುವ ಸ್ಥಿತ್ಯಂತರಗಳಿಗೆ ತಕ್ಕಂತೆ ಬದಲಾಗಬಲ್ಲರೇ? ಭಾರತದ ಹಿತದೃಷ್ಟಿಯಿಂದ ನಮ್ಮವರು ಜಪಾನ್‌ನೊಂದಿಗೆ ಹೆಚ್ಚಿನ ದೋಸ್ತಿ ಮಾಡಿಕೊಳ್ಳಲು ಮುಂದಾಗುವರೇ? ಈ ವಿಷಯದಲ್ಲಿ ನನಗೆ ಸಂದೇಹವಿದೆ!
ಅಕಿಹಿತೋ ಮತ್ತು ಮಿಚಿಕೋ ಅವರ ಭೇಟಿಯನ್ನು 'ರಾಷ್ಟ್ರೀಯ ಘಟನೆ'ಯನ್ನಾಗಿಸಲು ಪ್ರಯತ್ನಿಸಬೇಕಿದ್ದ ನಮ್ಮ ವಿದೇಶಾಂಗ ಸಚಿವಾಲಯ, ಆ ನಿಟ್ಟಿನಲ್ಲಿ ಕೆಲಸ ಮಾಡಿಯೇ ಇಲ್ಲ ಎನ್ನುವುದು ಈಗ ತಿಳಿಯುತ್ತಿದೆ.
ವ್ಯಂಗ್ಯವೆಂದರೆ, ಸಾಮಾನ್ಯ ಜನತೆಯ ದೃಷ್ಟಿ ಇಂದಿಗೂ ಕೂಡ ಪಶ್ಚಿಮ ದೇಶಗಳತ್ತಲೇ ನೆಟ್ಟಿದೆ.  ಭಾರತದ ಭವಿಷ್ಯ ಮಿಂಚಲಿರುವುದು ಪಶ್ಚಿಮದೊಂದಿಗಲ್ಲ, ಬದಲಾಗಿ ಪೂರ್ವ ದೇಶಗಳೊಂದಿಗೆ ಎನ್ನುವ ಅರಿವೇಅವರಿಗಿಲ್ಲ. ಅಕಿಹಿತೊ ಅವರ ಈ ಅತ್ಯಂತ ಮಹತ್ವಪೂರ್ಣ ಪ್ರವಾಸದಿಂದಾಗಿ ಆಗುವ ಲಾಭವನ್ನು ಭಾರತ ಕೈ ಜಾರಿ ಹೋಗಲು ಬಿಡಬಾರದು. ಅವರ ಈ ಪ್ರವಾಸಕ್ಕೆ ಹೆಚ್ಚಿನ ಮನ್ನಣೆ ಕೊಟ್ಟು, ನಿಜವಾಗಲೂ ಇದನ್ನು "ಎರಡು ಮಹಾಸಾಗರಗಳ ಮಿಲನ'ವಾಗಿಸಲು ನಾವು ಪ್ರಯತ್ನಿಸಬೇಕು.

- ತರುಣ್ ವಿಜಯ್
tarunvijay2@yahoo.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.