

ಇನ್ನೇನು, ಎರಡು ದಿನಗಳಲ್ಲಿ ಬೆಳಗಾವಿಯ ವಿಧಾನ ಮಂಡಲದ ಅಧಿವೇಶನ ಮುಗಿದು, ರಾಜ್ಯದ ರಾಜಕೀಯ ಮಹಾರಥಿಗಳೆಲ್ಲ ತಮ್ಮ ಹಳೆಯ ಬೀಡಾದ ಬೆಂಗಳೂರಿಗೆ ಹಿಂತಿರುಗುತ್ತಾರೆ. ಹಾಗೆಂದ ಮಾತ್ರಕ್ಕೇ ರಾಜ್ಯ ರಾಜಕೀಯದ ಚದುರಂಗದ ಆಟದಲ್ಲಿ ಬಿರುಸಾಗಿ ಚಲನ-ವಲನ ಮೂಡುತ್ತದೆ ಎಂದೇನೂ ಅರ್ಥವಲ್ಲ. ಸದ್ಯಕ್ಕೆ ಯಾವುದೇ ರೀತಿಯ ಬಾಣ ಬಿರುಸುಗಳ ಪ್ರಯೋಗಕ್ಕೆ ವಾತಾವರಣ ಅನುಕೂಲಕರವಾಗಿಲ್ಲ.
ಬೆಳಗಾವಿಯಲ್ಲಿ ನಮ್ಮ ನಾಯಕರು ಸಾಧಿಸಿದ್ದೇನು ಎನ್ನುವ ಪ್ರಶ್ನೆಗೆ ಖಚಿತವಾದ ಉತ್ತರ ನೀಡುವಂತಿಲ್ಲ. ವಾಸ್ತವದಲ್ಲಿ ಈ ಅಧಿವೇಶನದಲ್ಲಿ ಯಾವುದೇ ರೀತಿಯ ಮಹತ್ವದ ಕೆಲಸವಾಗುವ ನಿರೀಕ್ಷೆಯೇ ಇರಲಿಲ್ಲ. ಕರ್ನಾಟಕಕ್ಕೆ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ರಾಜ್ಯದ ಸ್ಥಾನಮಾನ ಸಿಕ್ಕ ಸುವರ್ಣ ಮಹೋತ್ಸವದ ಸಮಯದಲ್ಲಿ ರಾಜ್ಯದ ಎಲ್ಲ ಪ್ರದೇಶಗಳ, ಪ್ರಮುಖವಾಗಿ ಬೆಳಗಾವಿಯ ಸೀಮೆಯಲ್ಲಿ ಭಾವನಾತ್ಮಕ ಏಕತೆಯ ಸಂಕೇತವಾಗಿ, ಸುಮಾರು 350 ಕೋಟಿ ರುಪಾಯಿಗಳ ಭವ್ಯ ಸೌಧ ನಿರ್ಮಾಣವಾದ ಅನಂತರ ಅಲ್ಲಿ ವರ್ಷದಲ್ಲಿ ಒಂದು ಬಾರಿಯಾದರೂ ವಿಧಾನ ಮಂಡಲದ ಅಧಿವೇಶನವನ್ನು ನಡೆಸುವ ತೀರ್ಮಾನವಾಗಿದೆ. ಅದರಂತೆ ಈಗಲೂ ಒಂದು ಅಧಿವೇಶನ ನಡೆಯಿತು. ಅಧಿವೇಶನದ ಒಂದು ವಿಚಿತ್ರ ವೈಶಿಷ್ಟ್ಯ ಎಂದರೆ ಉಭಯ ಸದನಗಳ ಒಳಗೆ ನಡೆದ ಚರ್ಚೆ, ವಿಚಾರ-ವಿನಿಮಯ ಹಾಗೂ ಸಂಘರ್ಷಗಳಿಗಿಂತ ಹೆಚ್ಚಾಗಿ ಗಮನ ಸೆಳೆದಿದ್ದು ಹೊರಗಡೆ ನಡೆದ ಕಬ್ಬು- ಬೆಳೆಗಾರರ ಆಂದೋಲನ, ರೈತನೊಬ್ಬನ ಆತ್ಮಹತ್ಯೆ, ಅನಂತರದ ಪ್ರತಿಭಟನೆ.
ಈ ಪ್ರಕರಣದಲ್ಲಿ ಎದ್ದು ಕಂಡಿದ್ದು, ಭಾವನಾತ್ಮಕ ರಾಜಕೀಯದ ತಂತ್ರಗಳನ್ನು ಬಳಸಿ, ಕ್ಲಿಷ್ಟ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸುವ ಜಾಣ್ಮೆಯನ್ನು ಸರ್ಕಾರ ಪ್ರದರ್ಶಿಸಲಿಲ್ಲ ಎನ್ನುವ ಅಂಶವೇ.
ಕಬ್ಬಿನ ಬೆಲೆ ನಿಗದಿ, ರೈತರಿಗೆ ಬರಬೇಕಾದ ಬಾಕಿಯ ಪಾವತಿಯಂತಹ ಗಂಭೀರ ವಿಚಾರಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲೇ ಸುಮಾರು ಎರಡು ತಿಂಗಳ ಕಾಲ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಇತರ ಕಡೆಗಳಲ್ಲಿ ಸಂಘರ್ಷಗಳು ನಡೆದಿದ್ದರೂ, ಕರ್ನಾಟಕದಲ್ಲಿ ಸರ್ಕಾರ ಅಂತಹ ಸಮಸ್ಯೆ ಇದೆ ಎನ್ನುವುದನ್ನೇ ಗಮನಿಸಲಿಲ್ಲ. ದೇಶದಲ್ಲಿ ಕರ್ನಾಟಕಕ್ಕೆ ಸಕ್ಕರೆ ಉತ್ಪಾದನೆಯಲ್ಲಿ ಮೂರನೆ ಸ್ಥಾನ.
ಅದರ ಪರಿಣಾಮ ಬೆಳಗಾವಿಯ ಸ್ಫೋಟ. ಒಂದು ರೀತಿಯಲ್ಲಿ ಸರ್ಕಾರ ವಿಧಾನ ಮಂಡಲದ ಒಳಗೂ- ಹೊರಗೂ ಆಘಾತಕ್ಕೆ ಸಿಕ್ಕಿಬಿದ್ದಿದ್ದು ನಿಜ. ಆ ಸಮಸ್ಯೆ ಈಗಲೂ ಪೂರ್ತಿಯಾಗಿ ಬಗೆಹರಿದಿಲ್ಲ. ಈ ವಿಷಯ ರಾಜ್ಯದ ರಾಜಕೀಯವನ್ನು ಕದಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ಸಿನ ಆಂತರಿಕ ರಾಜಕೀಯದಲ್ಲಿ ಅಲ್ಲಕಲ್ಲೋಲವನ್ನು ನಿರ್ಮಿಸುವುದು ಖಚಿತ ಎನಿಸುತ್ತಿದೆ. ಸದ್ಯದಲ್ಲೇ ನಡೆಯಲಿರುವ ಪ್ರದೇಶ ಕಾಂಗ್ರೆಸ್- ಸರ್ಕಾರಗಳ ನಡುವಣ ಸಮನ್ವಯ ಸಮಿತಿಯ ಸಭೆಯೇ ಅದಕ್ಕೆ ವೇದಿಕೆಯಾಗಲೂಬಹುದು.
ಉಳಿದಂತೆ, ಪ್ರದೇಶ ಕಾಂಗ್ರೆಸ್ ಕೇಂದ್ರದ ಆದೇಶದಂತೆ, ಇನ್ನಾರು ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಎಲ್ಲ ಹಾಲಿ ಸದಸ್ಯರಿಗೂ ಟಿಕೆಟ್ ಖಚಿತ ಎಂದೂ ಹೇಳಲಾಗುತ್ತಿದೆ. ಅದನ್ನು ಬಿಟ್ಟರೆ, ಸದ್ಯಕ್ಕೆ ಕಾಂಗ್ರೆಸ್ಸಿನಲ್ಲಿ ಯಾವುದೇ ರೀತಿಯ ಸಂಘರ್ಷದ ವಾತಾವರಣ ಇದ್ದಂತಿಲ್ಲ. ಮಂತ್ರಿ ಮಂಡಲ ಪುನಾರಚನೆ, ಬೋರ್ಡು, ಮಂಡಳಿ, ನಿಗಮಗಳ ಅಧ್ಯಕ್ಷ- ನಿರ್ದೇಶಕರ ನೇಮಕಗಳೆಲ್ಲವೂ ಈಗ ಸ್ವಲ್ಪ ಮಟ್ಟಿಗಾದರೂ ಹಿಂದಕ್ಕೆ ಸರಿದಂತಿದೆ.
ಉತ್ತರ ರಾಜ್ಯಗಳ ಚುನಾವಣೆ: ಉತ್ತರ ಭಾರತದ ನಾಲ್ಕು ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆಯ ಮತದಾನವೂ ಮುಗಿದಿದೆ. ಬಹುತೇಕವಾಗಿ, ಶಾಂತಿಯುತ ಮತದಾನ ನಡೆದಿದ್ದೇ ಒಂದು ಸಮಾಧಾನದ ವಿಷಯ. ಮಧ್ಯ ಪ್ರದೇಶ, ರಾಜಸ್ಥಾನ, ಚತ್ತೀಸಘಡಗಳಲ್ಲಿನ ಚುನಾವಣೆಯ ಸ್ವರೂಪ ಹಿಂದಿಗಿಂತ ಭಿನ್ನವಾಗೇನು ಇರಲಿಲ್ಲ. ಈ ರಾಜ್ಯಗಳಲ್ಲಿ ಲಾಗಾಯ್ತಿನಿಂದಲೂ ಕಾಂಗ್ರೆಸ್- ಬಿಜೆಪಿಗಳ ನಡುವೆಯೇ ಸೆಣಸಾಟ ನಡೆದಿರುವುದು. ಈಗಲೂ ಅದೇ ಪರಿಸ್ಥಿತಿ. ಈ ಮೂರು ರಾಜ್ಯಗಳಲ್ಲಿ ಎರಡರಲ್ಲಿ ಗೆದ್ದರೂ ಬಿಜೆಪಿ ಖಂಡಿತವಾಗಿಯೂ ಬೀಗಬಹುದು.
ಆದರೆ ದೆಹಲಿಯ ಸ್ಥಿತಿ ಹಾಗಿಲ್ಲ. ಹಿಂದೆ ಇಲ್ಲೂ ಚುನಾವಣೆ ಕಣದಲ್ಲಿ ಬಿಜೆಪಿ- ಕಾಂಗ್ರೆಸ್ಗಳದ್ದೇ ಕಾರುಬಾರು. ಒಂದು ಕಾಲದಲ್ಲಿ ದೆಹಲಿ ಪಂಜಾಬಿನ ಪಾಳೆಯ ಪಟ್ಟಿಗೆ ಸೇರಿದಂತಹ ಪರಿಸ್ಥಿತಿ ಇತ್ತು. ಆಗ ಬಿಜೆಪಿಯದ್ದೇ ಮೇಲುಗೈ. ವರ್ಷಗಳು ಉರುಳಿದಂತೆ, ದೆಹಲಿಗೆ, ನೆರೆಯ ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ದೂರದ ಬಿಹಾರ- ಒಡಿಶಾಗಳಿಂದ ಶ್ರಮಿಕ ವರ್ಗದ ಜನ ಹಿಂಡು ಹಿಂಡಾಗಿ, ಕೆಲಸವನ್ನು ಹುಡುಕಿಕೊಂಡು ಬಂದು, ರಾಜಧಾನಿಯಲ್ಲೇ ಬೀಡು ಬಿಟ್ಟಾಗ ಬಿಜೆಪಿಯ ಶಕ್ತಿಯೂ ಕುಗ್ಗಿತ್ತು. ನಿರೀಕ್ಷೆಯಂತೆ, ಕಾಂಗ್ರೆಸ್ ಪ್ರಬಲವಾಯಿತು. ಆದರೂ ಸುತ್ತಮುತ್ತಲ ರಾಜ್ಯಗಳಿಂದ ವಲಸೆ ಬಂದವರಲ್ಲಿ ಬಹುತೇಕ ಮಂದಿ ಹಿಂದುಳಿದ ಜಾತಿ ಪಂಗಡಗಳವರು. ಅವರನ್ನು ಪ್ರತಿನಿಧಿಸುವುದರ ಮೂಲಕವೇ ರಾಜಕೀಯದಲ್ಲಿ ಪ್ರಸಿದ್ಧಿ ಪಡೆಯಲು ಯತ್ನಿಸುತ್ತಿರುವ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ ಹಾಗೂ ಮಾಯಾವತೀ ಅವರ ಬಹುಜನ ಸಮಾಜ ಪಕ್ಷಗಳು ಕಾಲಕ್ರಮದಲ್ಲಿ ಪ್ರಬಲವಾಗುವ ನಿರೀಕ್ಷೆ ಇನ್ನೂ ಈಡೇರಿಲ್ಲ.
ಆದರೆ ಈ ಬಾರಿ ದೆಹಲಿಯ ಮಧ್ಯಮ ವರ್ಗವನ್ನೇ ಪ್ರಧಾನವಾಗಿ ನಂಬಿಕೊಂಡಿರುವ ಅರವಿಂದ ಕೇಜ್ರಿವಾಲ, ಭ್ರಷ್ಟಾಚಾರ ವಿರೋಧೀ ಸಂಗ್ರಾಮದ ಜತೆಗೆ ರಾಜಕೀಯಕ್ಕೂ ನುಗ್ಗಿ ತಮ್ಮ ಪಕ್ಷದ ಹೆಸರನ್ನು, ಚುನಾವಣೆ ಚಿಹ್ನೆಯನ್ನು ಆಯ್ಕೆ ಮಾಡುವುದರಲ್ಲಿ ಆಮ್ ಆದ್ಮಿ ಪಾರ್ಟಿ, ಪೊರಕೆ- ಹೊಸತನವನ್ನು ಪ್ರದರ್ಶಿಸುವ ಜತೆಯಲ್ಲೇ, ಮಧ್ಯಮ ವರ್ಗದ ಬೆಂಬಲ ಗಳಿಸುವ ಉದ್ದೇಶದಿಂದಲೇ ಮೌಲ್ಯಾಧಾರಿತ ರಾಜಕೀಯದ ಮಾತನ್ನೂ ಆಡಿರುವುದರಿಂದ, ಚುನಾವಣೆಯ ಪ್ರಕ್ರಿಯೆಯಲ್ಲಿ ಒಂದು ರೀತಿಯ ಅಲೆಗಳನ್ನೇ ಸೃಷ್ಟಿಸಿದ್ದಾರೆ. ಅದನ್ನು ಇಂಗ್ಲಿಷ್ ಪತ್ರಿಕೆಗಳು, ಟಿ.ವಿ. ವಾಹಿನಿಗಳು ವಿಪರೀತ ಎನ್ನುವ ಮಟ್ಟಿಗೆ ವೈಭವೀಕರಿಸಿವೆ. ಎಲ್ಲ ಚುನಾವಣೆ ಸಮೀಕ್ಷಾ ಸಂಸ್ಥೆಗಳೂ ಆಮ್ ಆದ್ಮಿ ಪಾರ್ಟಿಗೆ, ಇತರರು ಎನ್ನುವ ವರ್ಗದಿಂದ ದೂರವಾಗಿ ಪ್ರತ್ಯೇಕವಾದ ಸ್ಥಾನವನ್ನೇ ಕಲ್ಪಿಸಿಕೊಟ್ಟಿವೆ. ಮಧ್ಯಮ ವರ್ಗದಿಂದ ಇಷ್ಟೊಂದು ಸಹೃದಯತೆಯನ್ನು ಒಂದೇ ವಾರದಲ್ಲಿ ಗಳಿಸುವುದು ಅಸಾಧಾರಣವಾದ ಸಾಧನೆಯೇ.
ಚುನಾವಣೆ ಪೂರ್ವ ಸಮೀಕ್ಷೆ: ಈ ಬಾರಿಯ ಚುನಾವಣೆ ಪೂರ್ವ ಸಮೀಕ್ಷೆಗಳಲ್ಲೂ ಹಿಂದಿಗಿಂತ ಸ್ವಲ್ಪ ಭಿನ್ನವಾದ ವರದಿಗಳು ಪ್ರಕಟವಾದವು. ಉದಾಹರಣೆಗೆ, ಪ್ರಚಾರ ಸಮರದ ಆರಂಭದ ದಿನಗಳಲ್ಲಿ ರಾಜಸ್ಥಾನದಲ್ಲಿ ಬಿಜೆಪಿ, ವಸುಂಧರಾ ರಾಜೆ ಅವರ ನಾಯಕತ್ವದಲ್ಲಿ ಕಾಂಗ್ರೆಸ್ಸಿಗಿಂತ ಮುಂದಿದೆ ಎನ್ನುವ ರೀತಿಯಲ್ಲಿ ಪ್ರಕಟವಾದ ವರದಿಗಳು, ಅನಂತರದ ದಿನಗಳಲ್ಲಿ ಕಾಂಗ್ರೆಸ್ ಮಖ್ಯಮಂತ್ರಿ ಅಶೋಕ ಗೆಹ್ಲಟ್ ಅವರು ಅಲ್ಲಿನ ಹಿಂದುಳಿದ ಜಾತಿ ಪಂಗಡಗಳಲ್ಲಿ ಹೊಸದಾಗಿ ಮೂಡಿಸಿರುವ ವಿಶ್ವಾಸದ ಪರಿಣಾಮವಾಗಿ, ಕಾಂಗ್ರೆಸ್ನ ಗೆಲವು ಅಸಂಭವವೇನೂ ಅಲ್ಲ, ಎನ್ನುವ ರೀತಿಯಲ್ಲಿ ವರದಿಗಳು ಬೆಳಕು ಕಂಡವು. ಕೊನೆಯ ಹಂತದ ಸಮೀಕ್ಷೆಗಳು ಹಣಾ ಹಣಿಯ ಸ್ಪರ್ಧೆ ನಡೆದಿದೆ, ಯಾರು ಬೇಕಾದರೂ ಗೆಲ್ಲಬಹುದು ಎನ್ನುವ ಹಂತಕ್ಕೆ ಬಂದು ನಿಂತವು.
ಮಧ್ಯಪ್ರದೇಶದಿಂದ ಬೇರ್ಪಟ್ಟು ಬೇರೆ ರಾಜ್ಯವಾಗಿರುವ ಖನಿಜ ಶ್ರೀಮಂತ ಚತ್ತೀಸಘಡ ರಾಜ್ಯದ ಪರಿಸ್ಥಿತಿಯೂ ಅದೇ ಆರಂಭದಲ್ಲಿ ಬಿಜೆಪಿಯ ಡಾ॥ ರಮಣಸಿಂಗ್ ಅವರೇ ಮುಂದಿದ್ದಾರೆನ್ನುವ ರೀತಿಯಲ್ಲಿ ಪ್ರಕಟವಾದ ವರದಿಗಳೇ ಸಮರದ ಮಧ್ಯಭಾಗದಲ್ಲಿ ಅಜಿತ್ ಜೋಗಿ ನೇತೃತ್ವದ ಕಾಂಗ್ರೆಸ್ಸಿಗೇ ಪರಿಸ್ಥಿತಿ ಅನುಕೂಲವಾಗಿರುವಂತೆ ಕಂಡು ಬರುತ್ತದೆ ಎನ್ನುವ ಭವಿಷ್ಯವನ್ನು ನುಡಿದವು. ಕೊನೆಯ ಹಂತದಲ್ಲಿ ಇಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಮಾತು ಒಗ್ಗರಣೆಯ ರೂಪದಲ್ಲಿ ಕಾಣಿಸಿಕೊಂಡಿತ್ತು.
ದೆಹಲಿಯಲ್ಲೂ ಪ್ರಚಾರದ ಆರಂಭದಲ್ಲಿ ಕೇಜ್ರಿವಾಲ ಅವರ ಆಮ್ ಆರ್ಮಿ ಪಾರ್ಟಿ, ಇಡೀ ಚುನಾವಣೆಯ ಪ್ರಚಾರ ಪ್ರಕ್ರಿಯೆಯನ್ನು ತಲೆ ಕೆಳಗಾಗುವಂತೆ ಮಾಡಿದೆ ಎಂದೂ ಪ್ರಸಾರ ಮಾಧ್ಯಮ ಸಾರಿತ್ತು. ಪ್ರಚಾರ ಸಮರದ ಕೊನೆಯ ಹಂತದಲ್ಲಿ ಆಮ್ ಆದ್ಮಿ ಪಾರ್ಟಿಗೆ ಎಷ್ಟೇ ಸ್ಥಾನಗಳು ಬಂದರೂ, ಅದೇ ಸಾಧನೆ ಎನ್ನುವ ಮಟ್ಟಕ್ಕೆ "ಆರಾಧನೆ" ಇಳಿದಿತ್ತು. ಹಾಗಿದ್ರೆ ವಾಸ್ತವ ಚಿತ್ರವೇನು? ಎಣಿಕೆ ಡಿಸೆಂಬರ್ 9. ಅಲ್ಲಿಯವರೆಗೆ ಕಾಯಬೇಕಷ್ಟೇ.
ಕರ್ನಾಟಕ ಬಿಜೆಪಿ-ಜೆಡಿಎಸ್: ಗುರುವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ. ರಾಜಕೀಯ ಪಕ್ಷಗಳ ಎಲ್ಲ ರಾಷ್ಟ್ರೀಯ-ಪ್ರಾದೇಶಿಕ ನಾಯಕರೂ ದೆಹಲಿಯಲ್ಲೇ ಬೀಡು ಬಿಡುವ ಸಮಯ ಅದು. ಲೋಕಸಭೆ ಚುನಾವಣೆಗೆ ಪಕ್ಷಗಳ ತಂತ್ರ, ಸಿದ್ಧತೆಗಳನ್ನು ಕುರಿತ ವಿಚಾರ ವಿನಿಮಯ ನಡೆಸಲಿಕ್ಕೆ ಪ್ರಶಸ್ತವಾದ ಸಮಯ.
ಆದರೆ, ಕರ್ನಾಟಕ ಬಿಜೆಪಿ ಇನ್ನೂ ಲೋಕಸಭೆ ಚುನಾವಣೆಯ ಸಿದ್ಧತೆಯ ಪ್ರಥಮ ಕ್ರಮಗಳನ್ನು ಕೈಗೊಂಡ ಲಕ್ಷಣಗಳೂ ಕಂಡು ಬರುತ್ತಿಲ್ಲ. ಸದ್ಯದಲ್ಲಿ ಆ ಪಕ್ಷದ ನಾಯಕರ ತಲೆಯಲ್ಲಿರುವ ಒಂದೇ ವಿಚಾರ ಎಂದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿಗೇ ಬರ್ತಾರಾ, ಅಥವಾ ಬಿಜೆಪಿಯ ಜತೆ ಕೆಜೆಪಿಯ ಹೊಂದಾಣಿಕೆಗೆ ಮುಂದಾಗುತ್ತಾರಾ ಅಥವಾ ಬಿಜೆಪಿಯಲ್ಲಿ ಕೆಜೆಪಿಯನ್ನು ವಿಲೀನಗೊಳಿಸುತ್ತಾರಾ? ಎನ್ನುವ ವಿಚಾರವೇ. ಯಡಿಯೂರಪ್ಪ ಅವರು ಬಂದರೆ, ಅನಂತರ ಬಿಎಸ್ಸಾರ್ ಕಾಂಗ್ರೆಸ್ಸಿನ ಶ್ರೀರಾಮುಲು ಅವರನ್ನೂ ಬಿಜೆಪಿಯಲ್ಲಿ ತರಲು ಪ್ರಯತ್ನಿಸಬಹುದು.
ಈ ಕೆಲಸಕ್ಕೆ ಈಗ ಮುಂದಾಗಿರುವುದು, ಕರ್ನಾಟಕ ಬಿಜೆಪಿಯ ಹಿಂದಿನ ಪ್ರದೇಶ ಸಮಿತಿಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು. ಯಡಿಯೂರಪ್ಪ ಈ ವಿಚಾರದಲ್ಲಿ ಯಾರ ಜತೆಯಲ್ಲೂ ನೇರವಾಗಿ ಮಾತಾಡಿದಂತಿಲ್ಲ, ಬಿಜೆಪಿ ನಾಯಕರೇ ತಣ್ಣಗಿರುವಾಗ ಅವರೇ ಹೇಗೆ ಮುಂದುವರಿಯುವುದು ಸಾಧ್ಯ? ಆದಷ್ಟು ಬೇಗ ಕರ್ನಾಟಕ ಬಿಜೆಪಿ, ತನ್ನ ಹಾಗೂ ಬಿಜೆಪಿ ಜತೆ ಸಂಬಂಧ ಕುರಿತ ನಿರ್ಧಾರವನ್ನು ಪ್ರಕಟಿಸದೇ ಹೋದರೆ, ಮುಂದೆ ಯಾವ ಸಂಬಂಧವೂ ಉಳಿಯುವುದಕ್ಕೆ ಸಾಧ್ಯವಿಲ್ಲ. ಇದು ಕೇವಲ ಅನಂತಕುಮಾರ್ ಯಡಿಯೂರಪ್ಪ ನಡುವಣ ಪ್ರಶ್ನೆ ಆಗಬಬಾರದು. ಜಾತ್ಯತೀತ ಜನತಾದಳದ ಅಗ್ರೇಸರ ದೇವೇಗೌಡರು ಆನೆ ಸಾಗಿದ್ದೇ ದಾರಿ ಎನ್ನುವಂತೆ ತಮ್ಮ ಪಾಡಿಗೆ ತಾವು ಪ್ರದೇಶ ಜೆಡಿಎಸ್ ಪಕ್ಷದ ಅಧ್ಯಕ್ಷ ಎ. ಕೃಷ್ಣಪ್ಪ ಅವರ ಜತೆ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಆಸಕ್ತಿ ರಾಷ್ಟ್ರೀಯ ಮಟ್ಟದ್ದೇ ಆಗಿದ್ದರೂ, ಅವರ ಪಕ್ಷದ ಆಸಕ್ತಿ ರಾಜ್ಯದಲ್ಲಿ ಐದಾರು ಸ್ಥಾನಗಳಷ್ಟೇ, ಆ ಸ್ಥಾನಗಳಲ್ಲಿ ಪಕ್ಷದ ಪದಾತಿದಳ ನಿರಂತರವಾಗಿ ಸಜ್ಜಾಗಿರುತ್ತದೆ. ಹೆಚ್ಚಿನ ಸಿದ್ಧತೆ ಅನಗತ್ಯ.
ಜೆಡಿಎಸ್ನಲ್ಲಿ ಈಗ ಕಂಡು ಬಂದಿರುವ ಎರಡು ಪ್ರಮುಖ ಬದಲಾವಣೆಗಳು; ಶಾಸಕಾಂಗ ಪಕ್ಷದ ಉಪನಾಯಕರಾಗಿ ಕಡೂರಿನ ಶಾಸಕ ವೈ.ಎಸ್.ವಿ. ದತ್ತಾ ಅವರ ನೇಮಕ. ಎರಡನೆಯದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಸ್ವಲ್ಪ ಅಂತಃರ್ಮುಖಿಯಾಗುತ್ತಿರುವುದು.
ಕಿಡಿಗೇಡಿತನ: ಬೆಂಗಳೂರಿನಲ್ಲಿ ಎಲ್ಲ ಕಡೆ ಈಗ ಕಾರ್ ಪಾರ್ಕಿಂಗ್ಗೆ ಜಾಗ ಹುಡುಕುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ರಸ್ತೆಗಳ ಎರಡೂ ಬದಿಗಳಲ್ಲಿ ಸಾಲು ಸಾಲಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ, ಅನೇಕ ಕಡೆಗಳಲ್ಲಿ ಸಂಜೆಯಿಂದ ಬೆಳಗಿನವರೆಗೆ ಕಾರ್ಗಳು ನಿಂತಿರುತ್ತವೆ. ಇದು ಸಾರ್ವಜನಿಕ ಜಾಗ. ಅದನ್ನು ಖಾಸಗಿಯಾಗಿ "ಶಾಶ್ವತ" ಎನ್ನುವ ರೀತಿಯಲ್ಲಿ ಬಳಸುವುವವರಿಂದ ನಿಗದಿತವಾಗಿ ನೆಲಬಾಡಿಗೆ ವಸೂಲು ಮಾಡಬೇಕಲ್ಲವನೇ?
- ಸತ್ಯ
anisikeprabha@gmail.com