ಅಂಕಣಗಳು

ಜನರಿಂದ ಬಂದ ಸಂದೇಶ-ಬಿಟ್ಟಿ ಕೊಡುಗೆಯಲ್ಲ, ಆಡಳಿತ ಅವಶ್ಯ

ಜನರಿಂದ ಬಂದ ಸಂದೇಶ-ಬಿಟ್ಟಿ ಕೊಡುಗೆಯಲ್ಲ, ಆಡಳಿತ ಅವಶ್ಯ
Published On :

ರಾಜಸ್ಥಾನದ ಮತದಾರರು ಅಭಿವೃದ್ಧಿ ಪರ ಕಾರ್ಯಸೂಚಿಯನ್ನು ಅದೇಕೆ ತಿರಸ್ಕರಿಸಿದರೋ ಅರ್ಥವಾಗದು ಎಂದಿದ್ದಾರೆ ಗೆಹ್ಲೋಟ್. ಅಭಿವೃದ್ಧಿಪರ ಎಂದರೆ ಬಿಟ್ಟಿ ಕೊಡುಗೆಗಳನ್ನು ಕೊಡುವ ತಮ್ಮ ಕ್ರಮ ಅಲ್ಲವೇ ಅಲ್ಲ ಎಂಬುದು ಅವರಿಗಿನ್ನೂ ಅರಿವಾದಂತಿಲ್ಲ.
ವಿಧಾನಸಭೆ ಚುನಾವಣೆಗಳ ಫಲಿತಾಂಶವನ್ನು ಬೇರೆ ಬೇರೆ ಪಕ್ಷಗಳು ಬೇರೆಯವೇ ನೆಲೆಯಲ್ಲಿ ವಿಶ್ಲೇಷಿಸುತ್ತಿವೆ. ಆದರೆ ಯಾವುದೇ ಪಕ್ಷ ಬಹಿರಂಗವಾಗಿ ಒಪ್ಪಿಕೊಳ್ಳುವುದಕ್ಕೆ ಹಿಂಜರಿಯುತ್ತಿರುವ ಸಂಗತಿ ಎಂದರೆ- ತೆರಿಗೆದಾರರ ಹಣದಲ್ಲಿ ಮತದಾರರನ್ನು ಖರೀದಿಸಬಹುದು ಎಂಬುದನ್ನು ಜನರು ತಮ್ಮ ತೀರ್ಪಿನ ಮೂಲಕ ಸುಳ್ಳು ಮಾಡಿದ್ದಾರೆ- ಎಂಬ ಅಂಶವನ್ನು. ರಾಜಕಾರಣಿಗಳು ಉಡುಗೊರೆ ಪದ್ಧತಿಯನ್ನು ಕೈಬಿಡಬೇಕು. ಇಲ್ಲದಿದ್ದರೆ ಅವರು ಭವಿಷ್ಯದ ಬೆಳವಣಿಗೆಯನ್ನೂ ತಮ್ಮ ಗಟ್ಟಿತನವನ್ನೂ ಕೊಂದುಕೊಳ್ಳುತ್ತಾರೆ. ಹೆಚ್ಚು ಹೆಚ್ಚು ಉಡುಗೊರೆ ನೀಡುತ್ತ ಹೋದಂತೆ ಒಳ್ಳೆಯದಾಗುತ್ತದೆ ಹಾಗೂ ನೀಡುತ್ತಿರುವ ಸಬ್ಸಿಡಿಯನ್ನು ಕಡಿತಗೊಳಿಸುವ ಬಗ್ಗೆ ಮಾತನಾಡಿದರೆ ಜನ ಅಸಂತೃಪ್ತರಾಗುತ್ತಾರೆ ಎಂದೇ ಪ್ರತಿ ರಾಜಕಾರಣಿಯೂ ನಂಬಿಕೊಂಡಿದ್ದಾನೆ. ಅದು ನಿಜವೆ. ಆದರೆ ಈ ಪರಿಸ್ಥಿತಿ ಏಕೆ ಬಂದಿದೆಯೆಂದರೆ, ಬಿಟ್ಟಿ ಕೊಡುಗೆ ನೀಡುವುದರಿಂದ ಮತದಾರರು ದೀರ್ಘಾವಧಿಯಲ್ಲಿ ಕಳೆದುಕೊಳ್ಳುತ್ತಿರುವುದು ಏನನ್ನು ಎಂಬುದನ್ನು ಅರ್ಥ ಮಾಡಿಸುವುದಕ್ಕೆ ರಾಜಕಾರಣಿಗಳು ಮುಂದಾಗಿಲ್ಲ.
ನೀವು ಮತದಾರನನ್ನು ಮೂರು ರುಪಾಯಿಗೆ ಕೆಜಿ ಅಕ್ಕಿ ಬೇಕೆ ಅಂತ ಕೇಳಿದರೆ ಆತ ಖಂಡಿತವಾಗಿಯೂ ಹೌದೆಂದೇ ಹೇಳುತ್ತಾನೆ. ಸಬ್ಸಿಡಿ ಅಕ್ಕಿ ಕೊಡುತ್ತೇನೆ ್‌ಂದರೆ ಟಾಟಾ-ಬಿರ್ಲಾಗಳೂ ಬೇಡ ಅನ್ನಲಾರರು. ಆದರೆ, ನಿಮಗೆ 10 ರುಪಾಯಿಗೆ ಕೆಜಿ ಅಕ್ಕಿ ಕೊಡುವುದಕ್ಕಷ್ಟೇ ಸಾಧ್ಯ, ಆದರೆ ನಿಮ್ಮ ಬೀದಿಗಳನ್ನು ಹೆಣ್ಣುಮಕ್ಕಳು ನಡೆದಾಡುವುದಕ್ಕೆ ಸುರಕ್ಷಿತ ಮಾಡುತ್ತೇನೆ ಎಂಬ ಆಯ್ಕೆ ಕೊಟ್ಟಾಗ ಖಂಡಿತ ಜನರು ಲಾಭವನ್ನು ತೂಗಿ ನೋಡುತ್ತಾರೆ. ತಮಗೆ ಪುಕ್ಕಟ್ಟೆ ಕೊಡುಗೆಗಳನ್ನು ಕೊಡುತ್ತಿರುವುದು ಹೌದಾದರೂ ಇನ್ನೊಂದೆಡೆಯಿಂತ ಆತ್ಮಸಮ್ಮಾನ, ಸುರಕ್ಷತೆ, ಉದ್ಯೋಗ ಹಾಗೂ ಆದಾಯದ ಬೆಳವಣಿಗೆಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂಬ ಜ್ಞಾನೋದಯ ಮತದಾರರಲ್ಲಿ ಆಗುತ್ತಿರುವುದೂ ಕಾಂಗ್ರೆಸ್‌ನ ಸೋಲಿಗೆ ಕಾರಣಗಳಲ್ಲಿ ಒಂದಾಗಿದೆ. ಅರವಿಂದ ಕೇಜ್ರಿವಾಲ್ ಅವರ ಪಕ್ಷದ ಅಪೂರ್ವ ಸಾಧನೆಯು ಸರ್ಕಾರಗಳು ವ್ಯವಹರಿಸುತ್ತಿರುವ ರೀತಿಗೆ ಜನರ ಆಕ್ರೋಶದಿಂದ ಸಾಧ್ಯವಾಗಿರುವುದೇ ಹೊರತು ವಿದ್ಯುತ್ ದರವನ್ನು ಶೇ. 50ರಷ್ಟು ಕಡಿಮೆ ಮಾಡುತ್ತೇನೆ ಎಂಬ ಭರವಸೆ ನೀಡಿದ್ದರಿಂದ ಅಲ್ಲ.
ಹೀಗೇಕೆ ಹೀಗೇಕೆ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವುದರಿಂದ ನಾವು ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್‌ನ ಸೋಲನ್ನು ವಿಶ್ಲೇಷಿಸಬಹುದಾಗಿದೆ. ದೆಹಲಿ ಮತ್ತು ರಾಜಸ್ಥಾನಗಳಲ್ಲಿ ಡಜನ್‌ಗಟ್ಟಲೇ ಕಲ್ಯಾಣ ಕಾಯಂಕ್ರಮಗಳನ್ನು ರೂಪಿಸಿಯೂ ಕಾಂಗ್ರೆಸ್ ಸೋತಿದ್ದೇಕೆ? ರಾಹುಲ್ ಹಾಗೂ ಸೋನಿಯಾ ಹೇಳುವಂತೆ, ಕಾಂಗ್ರೆಸ್ ತನ್ನ ಸಂದೇಶವನ್ನು ಜನರಿಗೆ ತಲುಪಿಸಲು ವಿಫಲವಾಗಿದ್ದೇ ಕಾರಣ ಎಂದು ಹೇಳಿಬಿಡಬಹುದು. ಆಗಲೂ ಎರಡನೆಯ 'ಯಾಕೆ' ಪ್ರಶ್ನೆ ಉಳಿದುಬಿಡುತ್ತದೆ. ಏಕೆ ಸಂದೇಶ ತಲುಪುವಲ್ಲಿ ವಿಫಲವಾಯಿತು? ಕೇವಲ ಕೆಟ್ಟ ಸಂವಹನವನ್ನಷ್ಟೇ ಇದಕ್ಕೆ ಹೊಣೆ ಮಾಡೋಣವೇ? ಅಥವಾ ಇವರು ನೀಡಿದ ಸಂದೇಶ ಜನರಿಗೆ ಸ್ವೀಕಾರಾರ್ಹವಾಗಲಿಲ್ಲವೇ? ಮೊದಲನೆಯದಂತೂ ಆಗಿರಲಿಕ್ಕಿಲ್ಲ. ಏಕೆಂದರೆ 2004ರಿಂದಲೂ ಕಾಂಗ್ರೆಸ್ ಅಗ್ಗದ ಆಹಾರ ಪಡೆಯುವುದು ಜನಸಾಮಾನ್ಯನ ಹಕ್ಕು ಎಂದೇ ಹೇಳಿಕೊಂಡುಬಂದಿದೆ. ಆದರೆ ಮತದಾರರು ಮತ್ತೊಂದು ಧ್ವನಿಗೆ ಆಕರ್ಷಿತರಾದರು ಎಂದೆನಿಸುತ್ತದೆ. ಮೂರನೇ ಪ್ರಶ್ನೆ ಎದುರಾಗುತ್ತದೆ. ಏಕೆ ಮತದಾರರು ಕಾಂಗ್ರೆಸ್ ಮಾತು ಕೇಳಿಸಿಕೊಳ್ಳಲಿಲ್ಲ ಹಾಗೂ ಇವರಿಗೆ ಬದಲಾಗಿ ಅವರು ಕಿವಿಗೊಟ್ಟದ್ದು ಯಾರಿಗೆ? ಅಶೋಕ್ ಗೆಹ್ಲೊಟ್ ಏನೇ ಪುಕ್ಕಟೆ ಕೊಡುಗೆ ಘೋಷಿಸುತ್ತಿದ್ದರೂ ರಾಜಸ್ಥಾನದ ಜನರೇಕೆ ವಸುಂಧರಾ ಮತ್ತು ಮೋದಿಯ ಮಾತನ್ನೇ ಆಲಿಸಿದರು? ಅಲ್ಲಿಗೆ ಜನರು ಮೋದಿ ಮತ್ತು ವಸುಂಧರಾ ಅವರ ಉತ್ತಮ ಆಡಳಿತದ ಭರವಸೆಗೆ ಕಿವಿಯಾದರೇ ಹೊರತು ಕಾಂಗ್ರೆಸ್‌ನ ಉಡುಗೊರೆ ಪದ್ಧತಿಗಲ್ಲ ಎಂದಾಯಿತು. ಏಕೆಂದರೆ ಉತ್ತಮ ಆಡಳಿತ ಎಂಬ ಪರಿಕಲ್ಪನೆಯಲ್ಲಿ ಹಲವು ಸಂಗತಿಗಳು ಮಿಳಿತವಾಗಿವೆ. ಭ್ರಷ್ಟಾಚಾರ ಹತ್ತಿಕ್ಕುವುದು, ಕೆಲಸಗಳು ಸುಗಮವಾಗುವಂತೆ ಮಾಡುವುದು, ಉದ್ಯೋಗ ಸೃಷ್ಟಿ, ಜೀವನಮಟ್ಟ ಸುಧಾರಣೆ ಇತ್ಯಾದಿ. ಅತಿ ಅವಶ್ಯವಿರುವವರಿಗೆ ಉಡುಗೊರೆ ರೂಪದಲ್ಲಿ ಏನನ್ನೊ ನೀಡುವುದೂ ಉತ್ತಮ ಆಡಳಿತದ ಒಂದಂಶವಾಗಿರಬಹುದೇ ಹೊರತು ಅದೇ ಎಲ್ಲ ಆಗುವುದಿಲ್ಲ. ನಿಮಗೆ ಒಂದಿಷ್ಟು ಪುಕ್ಕಟೆ ಕೊಡುತ್ತೇವೆ ಎಂಬ ಕಾಂಗ್ರೆಸ್ ಆಮಿಷಕ್ಕಿಂತ ಉದ್ಯೋಗ ಸೃಷ್ಟಿ, ಹಣದುಬ್ಬರ ನಿಯಂತ್ರಣದ ಬಿಜೆಪಿ ಪರಿಭಾಷೆಯೇ ಜನರಿಗೆ ಆಪ್ತವಾಯಿತು.
ಐದನೇ ಪ್ರಶ್ನೆ. ಇಷ್ಟಕ್ಕೂ ಪುಕ್ಕಟೆ ಕೊಡುಗೆಗಳ ಬಗ್ಗೆ ಜನರೇಕೆ ನಿರಾಸಕ್ತರಾಗಬೇಕು? ಯಾರಿಗೆ ತಾನೇ ಬಿಟ್ಟಿ ಕೊಡುಗೆ ಇಷ್ಟವಾಗೋಲ್ಲ? ಇದಕ್ಕೆ ಉತ್ತರವನ್ನು ಮಾನವನ ಮನೋವಿಶ್ಲೇಷಣೆಯಲ್ಲಿ ಕಂಡುಕೊಳ್ಳಬಹುದು. ಬಿಟ್ಟಿ ಕೊಡುಗೆಗಳು ಆತನನ್ನು ಹಗುರವಾಗಿಸುತ್ತವೆ. ಆದರೆ ದುಡಿಮೆ ಅವಕಾಶ ಒದಗಿದರೆ ಆತನ ಬದುಕಿಗೆ ಘನತೆ ಸಿಗುತ್ತದೆ. ಕಾಂಗ್ರೆಸ್‌ನ ಸಂದೇಶಗಳೆಲ್ಲ ಇದ್ದಿದ್ದು- 'ನಾವು ನಿಮಗೆ ಅಗ್ಗದ ಆಹಾರ ಕೊಡುತ್ತೇವೆ', 'ನಾವು ನಿಮ್ಮ ನೆಲಕ್ಕೆ ನಾಲ್ಕುಪಟ್ಟು ಬೆಲೆ ಒದಗಿಸುತ್ತೇವೆ', 'ನಾವು ಕೂಲಿ ಹೆಚ್ಚಿಸುತ್ತೇವೆ, ಕೆಲಸವಿರಲಿ, ಇಲ್ಲದಿರಲಿ ನೂರು ದಿನಗಳ ಉದ್ಯೋಗ ಖಾತ್ರಿ ನೀಡುತ್ತೇವೆ' ಹೀಗೆ.. ಇಲ್ಲಿ ಪ್ರತಿವಾಕ್ಯದಾರಂಭದಲ್ಲಿ ಕಾಣಿಸಿಕೊಳ್ಳುವ 'ನಾವು' ಎಂದರೆ ರಾಜಕೀಯ ವಂಶಸ್ಥರು! ಇದು ಪಕ್ಕ ಊಳಿಗಮಾನ್ಯ ದಿನಗಳನ್ನು ನೆನಪಿಸುತ್ತದೆ. ಬಡವರು ತಮ್ಮತ್ತ ಎಸೆದ ವಸ್ತು- ಕೊಡುಗೆಗಳ ಬಗ್ಗೆ ಕೃತಜ್ಞರಾಗಿರಬೇಕು. ಆದರೆ ಈಗ ಕಾಲ ಬದಲಾಗಿದೆ. ಆತ್ಮಸಮ್ಮಾನವೂ ಎಲ್ಲರಿಗೂ ಮುಖ್ಯವೆನಿಸಹತ್ತಿದೆ. ಬಿಟ್ಟಿ ಕೊಡುಗೆಗಳ ಬಗ್ಗೆ ಕೃತಜ್ಞರಾಗಿರುವುದು ಹಾಗಿರಲಿ, ಸಂಘ ಪರಿವಾರ ಮತ್ತು ಮೋದಿಯೆಂಬ ಸೈತಾನರಿಂದ ರಕ್ಷಿಸುವವರು ನಾವೇ ಎಂಬ ಕಾಂಗ್ರೆಸ್‌ನ ಬೊಬ್ಬೆಯನ್ನು ಅಲ್ಪಸಂಖ್ಯಾತವರ್ಗ ಗಣನೆಗೆ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಇದರರ್ಥ ಅವರೆಲ್ಲ ಮೋದಿಯನ್ನು ಪ್ರೀತಿಸುತ್ತಾರೆ ಎಂದಲ್ಲ. ಆದರೆ ಮೋದಿ ದ್ವೇಷದ ತುತ್ತೂರಿ ಬಾರಿಸಿದೊಡನೆ ಮಂತ್ರಮುಗ್ಧರಾಗಿ ಕಾಂಗ್ರೆಸ್‌ಗೆ ಮತಹಾಕಿಬಿಡುತ್ತಾರೆ ಎಂಬ ಸ್ಥಿತಿ ಇಲ್ಲವಾಗಿದೆ.
ಇದನ್ನು ಅರ್ಥಮಾಡಿಕೊಳ್ಳದ ಅಶೋಕ್ ಗೆಹ್ಲೋಟ್, ಸೋನಿಯಾ, ರಾಹುಲ್‌ರ ಆಘಾತವನ್ನೂ ಗಮನಿಸಬೇಕು. ರಾಜಸ್ಥಾನದ ಮತದಾರರು ಅಭಿವೃದ್ಧಿ ಪರ ಕಾರ್ಯಸೂಚಿಯನ್ನು ಅದೇಕೆ ತಿರಸ್ಕರಿಸಿದರೋ ಅರ್ಥವಾಗದು ಎಂದಿದ್ದಾರೆ ಗೆಹ್ಲೋಟ್. ಅಭಿವೃದ್ಧಿಪರ ಎಂದರೆ ಬಿಟ್ಟಿ ಕೊಡುಗೆಗಳನ್ನು ಕೊಡುವ ತಮ್ಮ ಕ್ರಮ ಅಲ್ಲವೇ ಅಲ್ಲ ಎಂಬುದು ಅವರಿಗಿನ್ನೂ ಅರಿವಾದಂತಿಲ್ಲ. ಗಂಭೀರ ವಿಮರ್ಶೆ ಮಾತನಾಡಿರುವ ಸೋನಿಯಾರಿಗೂ ಈ ಅಂಶದತ್ತ ಚಿತ್ತವಿಲ್ಲ. ಏಕೆಂದರೆ ಅವರೂ, 'ನಾವುಬಹಳ ಕೆಲಸ ಮಾಡಿದ್ದರೂ' ಈಫಲಿತಾಂಶ ಬಂತು ಎಂದಿದ್ದಾರೆ. ಇವರೆಲ್ಲ ನಂಬಿಕೊಂಡಿರುವುದೇನೆಂದರೆ ತಮ್ಮ ಪಕ್ಷದ ಸಂದೇಶವನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾಗಿದ್ದು ಸೋಲಿಗೆ ಕಾರಣ ಎಂದು. ಹಣದುಬ್ಬರವೂ ಈ ಫಲಿತಾಂಶಕ್ಕೆ ಕಾರಣವಾಗಿರಬಹುದು ಎನ್ನುವ ಸೋನಿಯಾರಿಗೆ ಅದು ತಮ್ಮದೇ ಪ್ರಮಾದಗಳ ಫಲ ಎಂಬುದು ಅರಿವಾಗುವುದಿಲ್ಲ. ರಾಹುಲ್ ಗಾಂಧಿ ಬಗ್ಗೆ ಹೇಳದಿರುವುದೇ ಲೇಸು. ಉತ್ತಮ ಆಡಳಿತದ ಪದ್ಧತಿ ಮುಂದುವರಿಸಿ, ಹೆಚ್ಚಿನ ಜನಸಾಮಾನ್ಯರನ್ನು ಒಳಗೊಳ್ಳಲಿದ್ದೇವೆ ಎನ್ನುವ ಅವರು, 'ನಾವು ನಿಮ್ಮ ಕಲ್ಪನೆಗೂ ನಿಲುಕದಂತೆ ಮುಂಬರುವ ದಿನಗಳಲ್ಲಿ ಸುಧಾರಣೆಗೆ ಒಳಗಾಗುತ್ತೇವೆ' ಎಂದಿದ್ದಾರೆ. ಈ ಎಲ್ಲ ಪ್ರತಿಕ್ರಿಯೆಗಳೂ ಬಿಂಬಿಸುವುದೇನೆಂದರೆ- ಕೊನೆಗೂ ಗೆಹ್ಲೋಟ್, ಸೋನಿಯಾ, ರಾಹುಲ್‌ರು ಅಭಿವೃದ್ಧಿಯ ಮೂಲತತ್ವವನ್ನು ಅರ್ಥ ಮಾಡಿಕೊಂಡಿಲ್ಲ ಎಂಬುದು. ಅಭಿವೃದ್ಧಿ ಎಂದರೆ ಜನ ಮತ್ತು ಅರ್ಥವ್ಯವಸ್ಥೆಯಲ್ಲಿ ಹೊಸ ಸಾಮರ್ಥ್ಯವನ್ನು ತುಂಬುವುದು. ಆ ಸಾಮರ್ಥ್ಯ ಒಂದು ವ್ಯವಸ್ಥೆ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವಂತೆ ಮಾಡಬೇಕು.
ಸೋನಿಯಾ ಮತ್ತು ರಾಹುಲ್ ತಕ್ಷಣಕ್ಕೆ ಮಾಡಬೇಕೆರುವುದೇನೆಂದರೆ ಜನರಿಂದ ಬರುತ್ತಿರುವ ಸಂದೇಶವನ್ನು ಅರ್ಥಮಾಡಿಕೊಳ್ಳುವ ವಾತಾವರಣವನ್ನು ತಮ್ಮ ಸುತ್ತ ನೆಲೆಗೊಳಿಸಿಕೊಳ್ಳುವುದು. ಅವರ ಸುತ್ತ ವಂಶಸ್ಥರನ್ನು ಗುಣಗಾನ ಮಾಡುವ ವಿದೂಷಕರೇ ತುಂಬಿಕೊಂಡಿದ್ದಾರೆ. ಅದರ ಬದಲು ನೈಜ ರಾಜಕಾರಣಿಗಳನ್ನು ಬೆಳೆಸುವ ಕೆಲಸವಾದರೆ, ಜನ ನಿಜಕ್ಕೂ ಏನನ್ನು ಕೇಳುತ್ತಿದ್ದಾರೆ ಎಂಬುದನ್ನು ಅಂಥ ನಾಯಕರ ಮೂಲಕ ಅರ್ಥ ಮಾಡಿಕೊಳ್ಳಬಹುದು. ಆದರೆ ರಾಷ್ಟ್ರೀಯ ಸಲಹಾ ಮಂಡಳಿಯ ಪ್ರಭೃತಿಗಳ ಮಾತಿಗೆ ಕಿವಿಯಾಗಿ ಬಡವರ ಹೆಸರಲ್ಲಿ ಬಿಟ್ಟಿ ಯೋಜನೆ ಮಾಡುತ್ತ ಹೋದರೆ ಉಳಿಗಾಲವೆಲ್ಲಿ?
ಬಿಟ್ಟಿ ಕೊಡುಗೆಯಿಂದ ಜನರನ್ನು ಗೆಲ್ಲುವುದಕ್ಕೇ ಸಾಧ್ಯವಿಲ್ಲ ಎಂಬ ಉತ್ಪ್ರೇಕ್ಷೆಗೆ ಇಳಿಯುತ್ತಿಲ್ಲ. ಆದರೆ ಈ ತಂತ್ರ ದೀರ್ಘಾವಧಿಯಲ್ಲಿ ಮುಳುವಾಗುತ್ತದೆ ಎಂಬುದು ಸ್ಪಷ್ಟ. ಭಾನುವಾರದ ಫಲಿತಾಂಶ ಗಮನಿಸಿದರೆ ಜನ ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತಿದ್ದಾರೆ ಎನ್ನಿಸುತ್ತಿದೆ.

- ಆರ್. ಜಗನ್ನಾಥನ್
ಸಂಪಾದಕರು, ಫಸ್ಟ್‌ಪೋಸ್ಟ್ ಡಾಟ್‌ಕಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.