ಕಾಂಗ್ರೆಸ್‌ಗೆ ಅದರ ಅಹಂಕಾರವೇ ಮುಳುವಾಯಿತೇ?

ನಾವು ಏನು ಮಾಡಿದರೂ ನಡೆಯುತ್ತೆ, ಏನು ಹೇಳಿದರೂ ಜನ ಕೇಳುತ್ತಾರೆ ಮತ್ತು...
ಕಾಂಗ್ರೆಸ್‌ಗೆ ಅದರ ಅಹಂಕಾರವೇ ಮುಳುವಾಯಿತೇ?
Updated on: 

1. ನಿರ್ಭಯಾ ಎಂಬ ಅಮಾಯಕ ಯುವತಿಯ ಮೇಲೆ ದೌರ್ಜನ್ಯ ನಡೆದದ್ದು ಖಾಸಗಿ ಬಸ್‌ನಲ್ಲಿ. ಡಿಟಿಸಿ (ದಿಲ್ಲಿ ಸಾರಿಗೆ ಸಂಸ್ಥೆ) ಬಸ್‌ನಲ್ಲಲ್ಲ. ಹೀಗಿರುವಾಗ ಸರ್ಕಾರ ಹೇಗೆ ಅದಕ್ಕೆ ಹೊಣೆ ಹೊರಲು ಸಾಧ್ಯ?
2. ದಿಲ್ಲಿಯಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ಅನಾಚಾರಗಳಿಗೆ ಇಲ್ಲಿನ ವಲಸಿಗರು ಬಹುಮಟ್ಟಿಗೆ ಕಾರಣ! ಮಹಿಳೆಯರ ಪಾಲಿಗೆ ದಿಲ್ಲಿ ಖಂಡಿತವಾಗಿಯೂ ಸುರಕ್ಷಿತ ಅಲ್ಲ!
3. ತಿಂಗಳಿಗೆ 600 ರೂ. ಪಗಾರ ದುಡಿದರೆ ಸಾಕು. ಐದು ಜನರ ಕುಟುಂಬ ಹೊಟ್ಟೆ ತುಂಬ ಉಂಡು ಬದುಕು ಸಾಗಿಸಬಹುದು!
- ಇವು ದಿಲ್ಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರ ಬಾಯಿಂದ ಉದುರಿದ ಆಣಿಮುತ್ತುಗಳು.

1. ಸುರೇಶ್ ಕಲ್ಮಾಡಿ ಅವರನ್ನು ನೋಡಿದರೆ ನನಗೆ ಮರುಕ ಹುಟ್ಟುತ್ತದೆ. ಅವರು ಪಡುತ್ತಿರುವ ಪಾಡು ನೋಡಿದರೆ ಅಯ್ಯೊ ಎನಿಸುತ್ತದೆ. ಅದೇ ರೀತಿ ಅಶೋಕ್ ಚವಾಣ್ ಅನುಭವಿಸುತ್ತಿರುವ ಯಾತನೆ ನೋಡಿದಾಗಲೂ ಮನಸ್ಸು ಭಾರವಾಗುತ್ತದೆ!
2. ಅರವಿಂದ್ ಕೇಜ್ರಿವಾಲ್ ಒಂದು ರೀತಿ ರಾಖಿ ಸಾವಂತ್ ಇದ್ದಂತೆ. ಇಬ್ಬರೂ ಎಕ್ಸ್‌ಪೋಸ್ ಮಾಡುತ್ತಾರೆ. ಆದರೆ ಒಳಗೆಲ್ಲ ಖಾಲಿ!
- ಇವು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ರಾಹುಲ್ ಗಾಂಧಿ ಪಾಲಿಗೆ ಕಣ್ಣು-ಕಿವಿ ಎಂಬಂತಿರುವ ದಿಗ್ವಿಜಯ್ ಸಿಂಗ್ ಸ್ವಗತ.

1. ನನ್ನನ್ನು ಈ ದೇಶದ ಕಾನೂನು ಮಂತ್ರಿ ಮಾಡಲಾಗಿದೆ. ನನ್ನ ಕೆಲಸ ಏನಿದ್ದರೂ ಪೆನ್ನಿನ ಮೂಲಕ. ಆದರೆ, ರಕ್ತದ ಮೂಲಕವೂ ಕೆಲಸ ಮಾಡಲು ನಾನು ಬಲ್ಲೆ!
2. ಅರವಿಂದ್ ಕೇಜ್ರಿವಾಲ್ ಮತ್ತವರ ಸಂಗಡಿಗರು ಫರುಕ್ಕಾಬಾದ್‌ಗೆ ಬರಲು ಏನು ಅಡ್ಡಿ ಇಲ್ಲ. ಆದರೆ ಅವರು ಅಲ್ಲಿಂದ ಸುರಕ್ಷಿತವಾಗಿ ಹಿಂತಿರುಗಲಿ ನೋಡುವ!
- ಇವು ಅಂದು ಕಾನೂನು ಮತ್ತು ಈಗ ವಿದೇಶ ವ್ಯವಹಾರಗಳ ಸಚಿವರಾಗಿರುವ ಸಲ್ಮಾನ್ ಖುರ್ಷಿದ್ ಅವರ ಎಲುಬಿಲ್ಲದ ನಾಲಗೆಯಿಂದ ಹರಿದ ಮಾತಿನ ಲಹರಿ.

2ಜಿ ತರಂಗಾಂತರ ಗುಚ್ಛ ಹಂಚಿಕೆ ವಿಚಾರದಲ್ಲಿ ದೇಶದ ನಿಯಂತ್ರಕರು ಹಾಗೂ ಮಹಾಲೆಕ್ಕ ಪರಿಶೋಧಕರ ವರದಿ ಶುದ್ಧ ಸುಳ್ಳಿನ ಕಂತೆ. ಬೊಕ್ಕಸಕ್ಕೆ ಕೋಟ್ಯಂತರ ರೂ.ಗಳ ನಷ್ಟ ಉಂಟಾಗಿದೆ ಎಂದು ಹೇಳಲು ಅವರು ಅನುಸರಿಸಿರುವ ವಿಧಾನ ಅತಾರ್ಕಿಕ. ಹಾಗೆ ನೋಡಿದರೆ ಸರ್ಕಾರ ಅನುಸರಿಸಿದ ಹಂಚಿಕೆ ನೀತಿಯಿಂದ ಬೊಕ್ಕಸಕ್ಕೆ ಶೂನ್ಯ ನಷ್ಟ (zero loss) ಉಂಟಾಗಿದೆ. ಹೀಗಿರುವಾಗ ಪ್ರಧಾನಿ ಏಕೆ ರಾಜೀನಾಮೆ ನೀಡಬೇಕು? ಈ ಬೇಡಿಕೆಯೇ ಅಪದ್ಧ.
- ಇದು ಐಟಿ ಸಚಿವ ಕಪಿಲ್ ಸಿಬಲ್ ಅವರ ಅಸಂಬದ್ಧ ಪ್ರಲಾಪ.

ಇದಕ್ಕೆಲ್ಲಕ್ಕೂ ಕಳಸವಿಟ್ಟಂತೆ ಅಪರೂಪಕ್ಕೊಮ್ಮೆ ಬಾಯಿ ತೆರೆಯುವ ನಮ್ಮ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದು ನೋಡಿ, 'ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆ ಕುರಿತಾದ ಕೆಲವು  ಸೂಕ್ಷ್ಮ ಕಡತಗಳು ಇಲಾಖೆಯಿಂದ ಕಾಣೆಯಾಗಿದ್ದರೆ ನಾನೇನು ಮಾಡಲು ಸಾಧ್ಯ? ನಾನು ಕಡತಗಳ ರಕ್ಷಕನಲ್ಲ!'
ಯಾವುದೇ ದೃಷ್ಟಿಯಿಂದ ನೋಡಿದರೂ ಈ ಮಾತುಗಳು ಅಹಂಕಾರದ ಪರಮಾವಧಿ ಎನ್ನದೇ ಬೇರೆ ದಾರಿ ಇಲ್ಲ. ಅದರಲ್ಲೂ 10 ವರ್ಷಗಳ (ಶೀಲಾ ವಿಚಾರದಲ್ಲಿ 15 ವರ್ಷ) ಅಧಿಕಾರದ ಮದ ತಲೆಗೆ ಏರಿದ್ದೇ ಇಂತಹ ಹೇಳಿಕೆಗಳಿಗೆ ಕಾರಣ ಎನ್ನಲು ಯಾವುದೇ ಸಂಶೋಧನೆ ಮಾಡಬೇಕಿಲ್ಲ. ನಾವು ಏನು ಮಾಡಿದರೂ ನಡೆಯುತ್ತೆ, ಏನು ಹೇಳಿದರೂ ಜನ ಕೇಳುತ್ತಾರೆ ಮತ್ತು ಚುನಾವಣೆ ಬಂದಾಗ ನಮಗೇ ಮುದ್ರೆ ಒತ್ತುತ್ತಾರೆ ಎಂಬ ಉಡಾಫೆ ಕಾಂಗ್ರೆಸ್ ನಾಯಕರನ್ನು ಆವರಿಸಿಕೊಂಡಿದೆ. ಆದರೆ, ಸಾರ್ವಜನಿಕ ಬದುಕಿನಲ್ಲಿ, ಅದರಲ್ಲೂ ರಾಜಕಾರಣದಲ್ಲಿ ಜನ ಇಂತಹ ದುರಹಂಕಾರವನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ. ಬಿಜೆಪಿ ನಾಯಕರಲ್ಲಿನ ಒಳಜಗಳ ಹಾಗೂ ಈರುಳ್ಳಿ ಬೆಲೆ ಏರಿಕೆಯ ವಿಷಯ ಮುಂದಿಟ್ಟುಕೊಂಡು 1998ರಲ್ಲಿ ದಿಲ್ಲಿ ಗದ್ದುಗೆ ಏರಿದ ಶೀಲಾ ದೀಕ್ಷಿತ್ ಇಂದು ಸ್ವತಃ ಚುನಾವಣೆ ಗೆಲ್ಲಲಾಗದೆ ಭಾರಿ ಅಂತರದಿಂದ ತಿರಸ್ಕೃತಗೊಂಡಿದ್ದರೆ ಅದಕ್ಕೆ ಅವರ ಉದ್ಧಟತನದ ಹೇಳಿಕೆ, ನಡವಳಿಕೆಗಳೂ ಕಾರಣ. ಸುಸೂತ್ರವಾಗಿ ಹಳಿ ಏರಿದ ಮೆಟ್ರೊ ರೈಲು ಶೀಲಾ ದೀಕ್ಷಿತರಿಗೆ 2003ರಲ್ಲಿ ಎರಡನೇ ಬಾರಿಗೆ ಅಧಿಕಾರದ ಹಳಿ ಏರಿಸಿತು. 2008ರಲ್ಲಿ ಯಾವುದೇ ಪರ್ಯಾಯ ಇಲ್ಲದೆ ಮಧ್ಯಮ ವರ್ಗ ಮೂರನೇ ಬಾರಿಗೆ ಶೀಲಾ ಅವರ ಕೈಹಿಡಿಯಿತು. ಆದರೆ, 2013ರಲ್ಲಿ ಅಂತಹ ಯಾವುದೇ ವಿನಾಯಿತಿಯನ್ನು ಜನ ತೋರಿಲ್ಲ. ವಿನಾಯಿತಿ ನೀಡುವ ರೀತಿಯಲ್ಲಿ ಶೀಲಾ ಅವರ ಸರ್ಕಾರ ನಡೆದುಕೊಳ್ಳಲೂ ಇಲ್ಲ, ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜನೆ ಸಂಬಂಧ ಬೆಳಕಿಗೆ ಬಂದ ಪ್ರಕಾಂಡ ಭ್ರಷ್ಟಾಚಾರ ಶೀಲಾ ದೀಕ್ಷಿತ್ ಪಾಲಿಗೆ ಮೊದಲ ಅಗ್ನಿ ಪರೀಕ್ಷೆಯಾಯಿತು. ಆದರೆ ಅವರು ಮಾಡಿದ್ದಾದರೂ ಏನು? ಕೇಂದ್ರ ಸರ್ಕಾರ, ಒಲಿಂಪಿಕ್ ಸಮಿತಿಯ ಖಾತೆಗೆ ಎಲ್ಲ ದುರಾಚಾರವನ್ನೂ ಜಮೆ ಮಾಡಿ ಕೈತೊಳೆದುಕೊಂಡರು. ಶೀಲಾ ಸೋಲಿಗೆ ಕಾಮನ್ವೆಲ್ತ್ ಕರ್ಮಕಾಂಡ ಮುನ್ನುಡಿ ಬರೆದರೆ ಅದು ತಾರಕಕ್ಕೇರಿದ್ದು ನಿರ್ಭಯಾ ಹತ್ಯಾಚಾರ ವಿಚಾರವಾಗಿ.
ಇದರ ಜೊತೆಗೆ ಕೇಂದ್ರ ಸರ್ಕಾರದ ಭ್ರಷ್ಟಾಚಾರ, ಹಗರಣಗಳ ಎಲುಬುಗಳು ಕಪಾಟಿನಿಂದ ಒಂದೊಂದಾಗಿ ಹೊರಬರುತ್ತಿದ್ದಂತೆಯೇ ದೇಶಾದ್ಯಂತ ಭ್ರಷ್ಟಾಚಾರ ವಿಚಾರವಾಗಿ ಜನರಲ್ಲಿ ದೊಡ್ಡ ಮಟ್ಟದ ಆಕ್ರೋಶ ಮಡುವುಗಟ್ಟಿತು. ಇದೇ ಸಂದರ್ಭದಲ್ಲಿ ಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆ ದಿಲ್ಲಿಯಲ್ಲಿ ಹಮ್ಮಿಕೊಂಡ ನಿರಶನ ಇದಕ್ಕೆ ಒಂದು ರೀತಿಯ ಆಂದೋಲನದ ರೂಪ ಕೊಟ್ಟಿತು. ಇಡೀ ದೇಶ ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರಿಗಳ ವಿರುದ್ಧ ದನಿ ಎತ್ತಿದ್ದಾಗ ದಿಗ್ವಿಜಯ್ ಸಿಂಗ್ ಅದೇ ಭ್ರಷ್ಟಾಚಾರದ ಕಳಂಕ ಹೊತ್ತು ಕಂಬಿ ಎಣಿಸುತ್ತಿದ್ದ ಸುರೇಶ್ ಕಲ್ಮಾಡಿ ಬಗ್ಗೆ ಮರುಕದ ಮಾತುಗಳನ್ನಾಡಿದರೆ ಮತ್ತು ಜನ ಅದನ್ನು ಸಹಿಸಿಕೊಳ್ಳುತ್ತಾರೆ ಎಂದು ನಂಬಿದ್ದರೆ ಅವರಷ್ಟು ಮೂರ್ಖ ಇನ್ನೊಬ್ಬ ಇರಲು ಸಾಧ್ಯವಿಲ್ಲ ಎಂಬುದು ಬಹುಶಃ ಈಗ ಅವರಿಗೂ ಗೊತ್ತಾಗಿರಬಹುದು.
ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪ ಸಹಜ. ಅಣ್ಣಾ ಆಂದೋಲನದ ಕಾವಿನಲ್ಲಿಯೇ ರಾಜಕೀಯದ ಮೊದಲ ಹೆಜ್ಜೆ ಇಟ್ಟ ಅರವಿಂದ ಕ್ರೇಜಿವಾಲ್, ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾಡಿದ್ದೂ ಅದನ್ನೇ. ಆಗ ಕಾನೂನು ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್‌ಗೆ ಸಂಬಂಧಿಸಿದ ಟ್ರಸ್ಟ್‌ನಿಂದ ಹಣದ ದುರ್ಬಳಕೆಯಾಗಿದೆ ಎಂದು ಕೇಜ್ರಿವಾಲ್ ಬೊಬ್ಬಿಟ್ಟಾಗ ಅದಕ್ಕೆ ಸೂಕ್ತ ಸಮಜಾಯಿಷಿ ನೀಡಬೇಕಾಗಿದ್ದ ಸಲ್ಮಾನ್ ಖುರ್ಷಿದ್ ಮಾಡಿದ್ದಾದರೂ ಏನು? 'ನನ್ನೂರಿಗೆ ಬಾ. ನಿನ್ನ ಒಂದು ಕೈ ನೋಡ್ಕೋತೀನಿ' ಎಂಬರ್ಥದ ಪರೋಡಿ ಧಮ್ಕಿ. ಒಬ್ಬ ಸಾಮಾನ್ಯ ರಾಜಕಾರಣಿಯಿಂದಲೂ ಜನ ಇಂತಹ ಉತ್ತರ ನಿರೀಕ್ಷಿಸುವುದಿಲ್ಲ. ಹಾಗಿದ್ದಾಗ ಅಧಿಕಾರಸ್ಥ ರಾಜಕಾರಣಿ, ಅದರಲ್ಲೂ ದೇಶದ ಕಾನೂನು ಮಂತ್ರಿ ನಿನ್ನೆ ಮೊನ್ನೆ ರಾಜಕೀಯಕ್ಕೆ ಕಾಲಿಟ್ಟ ವ್ಯಕ್ತಿಯ ವಿರುದ್ಧ ಹೀಗೆ ತೋಳೇರಿಸಿ ಹೋದರೆ ಜನ ಸುಮ್ಮನಿದ್ದಾರೆಯೇ? ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಸಲ್ಮಾನ್ ಖುರ್ಷಿದ್‌ರ ಪತ್ನಿ ಲೂಯಿ ಅವರನ್ನು ಸೋಲಿಸುವ ಮೂಲಕ ಪಾಠ ಕಲಿಸಿದರು. ಇಷ್ಟಾದರೂ ಕಾಂಗ್ರೆಸ್ ನಾಯಕರು ಬದಲಾಗಿಲ್ಲ. ಕಲ್ಲಿದ್ದಲು ಹಗರಣ ಬೆಳಕಿಗೆ ಬರುವ ಮೊದಲು ದೇಶದ ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಪ್ರಕರಣ ಎಂದು ತರಂಗಾಂತರ ಗುಚ್ಛ ಹಂಚಿಕೆಯಲ್ಲಿನ ಅಕ್ರಮ. ಇಡೀ ದೇಶ ಈ ವಿಚಾರವಾಗಿ ಸರ್ಕಾರವನ್ನು ಪ್ರಶ್ನಿಸಿದಾಗ ಕಪಿಲ್ ಸಿಬಲ್ ಬಿಚ್ಚಿಟ್ಟ zero loss ಥಿಯರಿ ಜನರ ವಿಶ್ವಾಸವನ್ನೇ ಪ್ರಶ್ನೆ ಮಾಡುವ ದುಸ್ಸಾಹಸವಾಗಿತ್ತು. ದಿನಬೆಳಗಾದರೆ ಇಂದಿರಾಗಾಂಧಿ, ಜವಹರಲಾಲ್ ನೆಹರೂ ನಾಮಸ್ಮರಣೆ ಮಾಡುವ ಕಾಂಗ್ರೆಸ್ ನಾಯಕರು ರಾಜಕೀಯ ವಿರೋಧಿಗಳ ಬಗ್ಗೆ ಮಾತನಾಡುವಾಗ ಕನಿಷ್ಠ ಅವರಷ್ಟಾದರೂ ಸೌಜನ್ಯ ತೋರುವುದನ್ನು ಮಾತ್ರ ಕಲಿತಿಲ್ಲ. ಉತ್ತರ ಪ್ರದೇಶದ ಬಲರಾಂಪುರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸ್ಪರ್ಧಿಸಿದ್ದಾರೆ ಮತ್ತು ಅವರಂತಹವರು ಲೋಕಸಭೆಗೆ ಭೂಷಣ ಎಂಬ ಒಂದೇ ಕಾರಣಕ್ಕೆ ನೆಹರೂ ಅಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಹೋಗಿರಲಿಲ್ಲ. ಅದೇ ರೀತಿ ವಾಜಪೇಯಿ ಕುರಿತು 'ಸೂಕ್ತವಲ್ಲದ ಪಕ್ಷದಲ್ಲಿರುವ ಅತ್ಯಂತ ಸೂಕ್ತ ವ್ಯಕ್ತಿ' ಎಂದು ಇಂದಿರಾಗಾಂಧಿ ಸಹ ಹೇಳಿದ್ದರು. ಆದರೆ, ಅವರ ಸೊಸೆ ಸೋನಿಯಾ ಗಾಂಧಿ ಅದೇ ಪಕ್ಷದ ಅಧ್ಯಕ್ಷರಾಗಿ ಮೋದಿ ಕುರಿತು 'ಮೌತ್ ಕಾ ಸೌದಾಗರ್‌' ಎಂದಿದ್ದು ಎಂತಹ ವಿಪರ್ಯಾಸ. ಪಕ್ಷದ ಅಧ್ಯಕ್ಷೆಯೇ ಇಂತಹ ಮೇಲ್ಪಂಕ್ತಿ ಹಾಕಿಕೊಟ್ಟ ಮೇಲೆ ಉಳಿದ ನಾಯಕರು ಕೇಳಬೇಕೆ? ಇದು ತೀರಾ ಅತಿರೇಕದ ಮಟ್ಟಕ್ಕೆ ಹೋಗಿದ್ದು ಸ್ವತಃ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸಂಸತ್ತಿನಲ್ಲಿ ನೀಡಿದ ಹೇಳಿಕೆಯಿಂದ. ಕಲ್ಲಿದ್ದಲು ಹಂಚಿಕೆ ಕಡತಗಳು ನಾಪತ್ತೆಯಾದ ಬಗ್ಗೆ ವಿರೋಧ ಪಕ್ಷಗಳ ತೀಕ್ಷ್ಣ ವಾಗ್ದಾಳಿ ಎದುರಿಸಿ ಅದಕ್ಕೆ ಉತ್ತರವಾಗಿ 'ಕಡತಗಳಿಗೆ ನಾನು ರಕ್ಷಕನಲ್ಲ' ಎಂದು ಸಿಂಗ್ ಹೇಳಿದ್ದು ಅಹಂಕಾರದ ಪರಾಕಾಷ್ಠೆಯೇ ಸರಿ.
ದಿಲ್ಲಿ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡದ ಜನ ಕಾಂಗ್ರೆಸ್ ವಿರುದ್ಧ ನಿರ್ಣಾಯಕವಾಗಿ ದನಿ ಎತ್ತಿದ್ದಾರೆ. ದಿಲ್ಲಿಯಲ್ಲಿ ಕಾಂಗ್ರೆಸ್ ಇದನ್ನು ಆಡಳಿತ ವಿರೋಧಿ ಎಂದು ಸುಮ್ಮನಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಆಡಳಿತದ ವಿರುದ್ಧ ಜನರಲ್ಲಿ ಎಂತಹ ಸಿಟ್ಟಿದೆ ಎಂಬುದು ಬಯಲಾಗಿದೆ. ದಿಲ್ಲಿ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತದ ವಿರುದ್ಧ ಜನ ಸಿಡಿದು ಬಿದ್ದಿದ್ದಾರೆ. ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎರಡಂಕಿಯೊಳಗೆ ಕಟ್ಟಿ ಹಾಕುವ ಮೂಲಕ ಮತದಾರ ಕಾಂಗ್ರೆಸ್ ಎಂಬ ಹೆಸರಿನ ಜೊತೆಗೆ ಬೆಸೆದುಕೊಂಡಿರುವ ದುರಹಂಕಾರ, ದುರಾಚಾರದ ಹೆಡೆಮುರಿ ಕಟ್ಟಿದ್ದಾನೆ. ಈ ಸೋಲನ್ನು ಶೀಲಾ ದೀಕ್ಷಿತ್, ಅಶೋಕ್ ಗೆಹ್ಲೋಟ್ ಹೆಗಲಿಗೆ ಕಟ್ಟಿ ಸಾಂಸ್ಥಿಕ ವೈಫಲ್ಯದ ಲೇಪ ಹಚ್ಚಿ ಕಾಂಗ್ರೆಸ್ ನಾಯಕತ್ವ ಕೈತೊಳೆದುಕೊಳ್ಳುವುದು ಸಹಜ. ಈಗ ಬಿದ್ದಿರುವ ಪೆಟ್ಟಿನಿಂದ ಕಾಂಗ್ರೆಸ್ ಚೇತರಿಸಿಕೊಳ್ಳಬೇಕಾದರೆ ತನ್ನಲ್ಲಿ ಅಂತರ್ಗತವಾಗಿರುವ ಅಹಂಕಾರ, ಅಸಹನೆಯನ್ನು ಕಳೆದುಕೊಳ್ಳಬೇಕು. ಅದು ಪಕ್ಷದ ಅಗ್ರ ನಾಯಕರಿಂದಲೇ ಆರಂಭವಾಗಬೇಕು!

- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com