ಅಂಕಣಗಳು

ಮೋದಿ ಹಾದಿ ಸುಗಮಕ್ಕೆ ಬೇಕು ದೆಹಲಿ ಮರ್ಮದ ಸ್ಪಷ್ಟನೋಟ

ಮೋದಿ ಹಾದಿ ಸುಗಮಕ್ಕೆ ಬೇಕು  ದೆಹಲಿ ಮರ್ಮದ ಸ್ಪಷ್ಟನೋಟ
Published On :

ನರೇಂದ್ರ ಮೋದಿ ಪ್ರಧಾನಮಂತ್ರಿಯೇ ಆದರೂ ಟೀಕಾಕಾರರು ಅವರ ಪ್ರಭಾವ ಇದೆ ಎಂಬುದನ್ನು ನಿರಾಕರಿಸುತ್ತಲೇ ಇರುತ್ತಾರಾದ್ದರಿಂದ, ಕಾಂಗ್ರೆಸ್, ಬಿಜೆಪಿ ಮತ್ತು ಮುಖ್ಯವಾಹಿನಿ ಮಾಧ್ಯಮದ ಎಲ್ಲ ಟೀಕಾಕಾರರನ್ನು ನಿರ್ಲಕ್ಷಿಸಿ ಮೋದಿಯವರು ತಾವು ಮಾಡಬೇಕಾದ ಕೆಲಸದಲ್ಲಿ ತೊಡಗಿಸಿಕೊಳ್ಳುವುದೇ ಉತ್ತಮ ಮಾರ್ಗ. ಅವರ ಪಾಲಿನ ಕಾರ್ಯವೆಂದರೆ ಚುನಾವಣೆಗೆ ತಯಾರಿ, ಯೋಜನೆ ಹೆಣೆಯುವುದು ಹಾಗೂ ಗೆಲ್ಲುವುದು. ದೆಹಲಿಯಲ್ಲಿ ಆಮ್ ಆದ್ಮಿ ಎಂಬ ಬಿರುಗಾಳಿಯನ್ನು ತಕ್ಕಮಟ್ಟಿಗೆ ತಡೆದ ಶ್ರೇಯಸ್ಸು ಮೋದಿಯವರಿಗೇ ಸಲ್ಲಬೇಕು. ಆದರೆ ಆ ವೇಳೆಗಾಗಲೇ ಘಾಸಿಯಾಗಿಬಿಟ್ಟಿತ್ತು. ಏಕೆಂದರೆ ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿ ಹುದ್ದೆಗೆ ಕಳಂಕರಹಿತ ಮುಖವೊಂದನ್ನು ಬಿಂಬಿಸುವುದಕ್ಕೆ ಭಾರತೀಯ ಜನತಾ ಪಕ್ಷದ ದೆಹಲಿ ಹಿತಾಸಕ್ತಿಗಳು ತಡ ಮಾಡಿದರು. ಈ ಹಿತಾಸಕ್ತಿಗಳೇ ಕೊನೆಯವರೆಗೂ ಅಸಮರ್ಥ ವಿಜಯ್ ಗೋಯಲ್ ಅವರನ್ನೇ ಉಳಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದವು. ಶಿವರಾಜ್‌ಸಿಂಗ್ ಚೌಹಾಣ್ ಅವರು ಒಪ್ಪಲಿ, ಬಿಡಲಿ ಮಧ್ಯಪ್ರದೇಶದಲ್ಲಿ ಅವರ ಬಹುಸಂಖ್ಯಾತ ಬಲ ಇನ್ನಷ್ಟು ಹಿಗ್ಗಿದ್ದಕ್ಕೆ ನರೇಂದ್ರ ಮೋದಿ ಅಭಿಯಾನವೇ ಕಾರಣ. ರಾಜಸ್ಥಾನದಲ್ಲಿ ವಸುಂಧರಾ ರಾಜೆ ಅವರನ್ನು ಉತ್ತುಂಗಕ್ಕೆ ಏರಿಸಿದರು. ಆ ಶ್ರೇಯಸ್ಸನ್ನು ರಾಜೆಯವರು ಮೋದಿಗೆ ನೀಡಲು ಹಿಂಜರಿಯಲಿಲ್ಲ. ಛತ್ತೀಸ್‌ಗಡದಲ್ಲಿ ರಮಣ್‌ಸಿಂಗ್ ಅವರಿಗೆ ಮೂರನೇ ಅವಧಿ ಒಲಿಯುವುದಕ್ಕೂ ಮೋದಿ ಪ್ರಚಾರಾಂದೋಲನದ ಕೊಡುಗೆ ಇದೆ.
ದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಸಾಧನೆ ಮೋದಿಗೆ ತೃಪ್ತಿ ತಂದಿರಲಿಕ್ಕಿಲ್ಲ. ಆದರೆ ಅಲ್ಲಿ ಸರ್ಕಾರವನ್ನು ರಚಿಸುವುದಕ್ಕೆ ಮುಂದಾಗದೆ ಪಕ್ಷದ ವರ್ಚಸ್ಸು ಕಾಪಾಡಿರುವುದರ ಹಿಂದೆ ಮೋದಿ ದೃಢ ನಿರ್ಧಾರವೇ ಕೆಲಸ ಮಾಡಿದೆ ಎಂಬುದರಲ್ಲಿ ಸಂಶಯವಿಲ್ಲ. ದೆಹಲಿ ರಾಜಕೀಯದ ಸೂಕ್ಷ್ಮಗಳನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಪಕ್ಷವು ಹಿತಕರವಾದ ಜಯವನ್ನು ಪಡೆಯುವುದು ಅವಶ್ಯವಾಗಿದೆ. ಬಿಜೆಪಿ ಮತ್ತು ಕೇಜ್ರಿವಾಲ ಇಬ್ಬರೂ ಈಗಿನ ತಮ್ಮ ನಿಲವಿಗೆ ಅಂಟಿಕೊಂಡಿದ್ದೇ ಆದರೆ ಮುಂದಿನ ಆರು ತಿಂಗಳಲ್ಲಿ ಮರು ಚುನಾವಣೆ ನಡೆಯುವುದು ಅನಿವಾರ್ಯವಾಗುತ್ತದೆ. ಲೋಕಸಭೆ ಚುನಾವಣೆಯ ಜತೆಯಲ್ಲೇ ದೆಹಲಿ ವಿಧಾನಸಭೆ ಚುನಾವಣೆಯೂ ನಡೆಯುವ ಸಾಧ್ಯತೆ ಇರುವುದರಿಂದ ಅದು ಮೋದಿಗೆ ಅನುಕೂಲವೇ ಆಗಲಿದೆ. ಈ ನಡುವಿನ ಅವಧಿಯಲ್ಲಿ ಪಕ್ಷದಲ್ಲಿರುವ ಭ್ರಷ್ಟ ಮುಖಗಳನ್ನು ಬದಿಗೆ ಸರಿಸಿ, ಇನ್ನಷ್ಟು ಪ್ರಖರವಾಗಿ ಚುನಾವಣಾ ಕಣಕ್ಕೆ ಧುಮುಕುವುದು ಸಾಧ್ಯವಾಗಲಿದೆ. ಹಿನ್ನಡೆಗಳು ಹಾಗೂ ನಿರೀಕ್ಷೆಗೆ ತಕ್ಕುದಲ್ಲದ ಸಾಧನೆಗಳು ನರೇಂದ್ರ ಮೋದಿಯವರನ್ನು ಇನ್ನಷ್ಟು ಗಟ್ಟಿಯಾಗಿಸುತ್ತವೆ ಹಾಗೂ ಆಮ್‌ಆದ್ಮಿ ಪಕ್ಷ ಇನ್ನೊಂದು ಅಚ್ಚರಿ ಕೊಡುವುದಕ್ಕೆ ಅವಕಾಶವಿಲ್ಲದಂತೆ ಮಾಡುವ ಸಾಮರ್ಥ್ಯ ಅವರಿಗಿದೆ.
ದೆಹಲಿಯಲ್ಲಿ ನರೇಂದ್ರ ಮೋದಿ ತಮ್ಮದೇ ಹೆಚ್ಚುಗಾರಿಕೆಯನ್ನು ಸ್ಥಾಪಿಸುವ ಕದನದಲ್ಲೂ ತೊಡಗಿಕೊಂಡಿದ್ದಾರೆ ಎಂಬುದನ್ನು ಮರೆಯಬಾರದು. ಈ ಲೇಖಕನು ಎಲ್ಲ ರಾಜಕೀಯ ವ್ಯವಸ್ಥೆಗಳಿಂದ ದೂರವಿದ್ದಾನೆ. ನರೇಂದ್ರ ಮೋದಿಯವರನ್ನಾಗಲೀ ಅವರ ಅಧಿಕಾರಿಗಳನ್ನಾಗಲೀ ಭೇಟಿಯಾಗಿಲ್ಲ. ಭವಿಷ್ಯತ್ತಿನಲ್ಲಿ ಹಾಗೆ ಮಾಡುವ ಯೋಜನೆಗಳನ್ನೂ ಹೊಂದಿಲ್ಲ. ಹೀಗೆ ಅಧಿಕಾರ ಕೇಂದ್ರದಿಂದ ದೂರ ನಿಂತು ವಿಶ್ಲೇಷಿಸುವುದು ಹಲವು ಸ್ಪಷ್ಟತೆಗಳಿಗೆ ಅವಕಾಶ ಒದಗಿಸುತ್ತದೆ ಎಂಬುದನ್ನು ಗಮನಿಸಬೇಕು. ಅದೇನೆ ಇರಲಿ ದೆಹಲಿಯಲ್ಲಿ ಅವರದೇ ಪಕ್ಷದ ದೊಡ್ಡ ತಲೆಗಳು ಮೋದಿಯವರನ್ನು ಕಾರ್ಮೋಡದಂತೆ ಸುತ್ತುವರಿದಿವೆ. ಹೀಗಾಗಿ ಈ ಭಾಗದಲ್ಲಿ ಸಕ್ರಿಯ ಪ್ರಚಾರಾಂದೋಲನದ ಮೂಲಕ ತಮ್ಮ ಹಿಡಿತವನ್ನು ಸಾಧಿಸಿಕೊಳ್ಳುವುದು ಅವರ ಆದ್ಯತೆ ಆಗಬೇಕಿದೆ.
ಭಾರತವನ್ನು ಪರಿವರ್ತಿಸುವುದಕ್ಕೆ ಉದ್ಯುಕ್ತರಾಗಿರುವ ನರೇಂದ್ರ ಮೋದಿ ಅವರನ್ನು ಅವರದೇ ಪಕ್ಷದ ನೇತಾರರು ಅಸೂಯೆಯಿಂದ ನೋಡುತ್ತಿರುವುದು ದುರಂತ ವ್ಯಂಗ್ಯವಾಗಿದೆ. ಪರಿಣಾಮವಾಗಿ, ವಿಶ್ವಾಸ ಕಳೆದುಕೊಂಡಿರುವ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್‌ಗೆ ಲಾಭವಾಗುತ್ತದೆ ಎಂಬುದು ಗೊತ್ತಿದ್ದೂ ಅವರು ಇಂಥ ಕ್ರಮಕ್ಕೆ ಎಳಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷವನ್ನು ಎದುರಿಸಲಿಕ್ಕೆ ಇರುವ ಆಯ್ಕೆಯೆಂದರೆ ದೆಹಲಿಯಲ್ಲಿ ಬಿಜೆಪಿಯನ್ನು ಸ್ವಚ್ಛಗೊಳಿಸಿ ಸಂಪೂರ್ಣ ಪರಿವರ್ತನೆ ತರುವುದು. ಇದನ್ನು ಬಿಡುಬೀಸಾಗಿ ಮಾಡುವುದಕ್ಕೆ ತಮ್ಮದೇ ಪಕ್ಷದ ಹಿರಿತಲೆಗಳ ಅಡ್ಡಿಯಿಂದಾಗಿ ನರೇಂದ್ರ ಮೋದಿಯವರಿಗೆ ಸಾಧ್ಯವಾಗುತ್ತಿಲ್ಲ. ಆಮ್ ಆದ್ಮಿ ಪಕ್ಷವನ್ನು ನೀವು ಹತ್ತಿರದಿಂದ ಗಮನಿಸಿದ್ದೇ ಆದರೆ ಅದು ಪ್ರತಿಭಟನೆಯ ಕಾವಿನಲ್ಲಿ ಬೆಂಬಲ ಪಡೆಯುತ್ತಿದೆಯೇ ಹೊರತು ಉತ್ತಮ ಆಡಳಿತದ ಭರವಸೆ ಮೇಲಿಂದ ಅಲ್ಲ ಎಂಬುದು ಗೊತ್ತಾಗುತ್ತದೆ. ಅದಕ್ಕೆ ದೃಷ್ಟಿಕೋನವಿಲ್ಲ. ಯೋಗೇಂದ್ರ ಯಾದವ್ ಅವರಂಥ ಚಿಂತಕರಿದ್ದಾರೆ ಎಂದು ನೀವು ಹೇಳಬಹುದಾದರೂ ಅಂಥವರ ಸಂಖ್ಯೆ ಅಲ್ಪ. ಹೀಗಾಗಿ ನರೇಂದ್ರ ಮೋದಿ ಬಿಜೆಪಿಯನ್ನೇ ದೆಹಲಿಯ ಪರ್ಯಾಯವಾಗಿಸಬೇಕಾದರೆ ಅಲ್ಲಿನ ಸಂಘಟನೆಯ ರಿಪೇರಿ ಆಗಬೇಕಾಗುತ್ತದೆ. ಭರವಸೆಗುಂದಿದ ಕೆಲ ನೇತಾರರನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಬೇಕಾಗುತ್ತದೆ. ಉದಾಹರಣೆಗೆ, ಸುಷ್ಮಾ ಸ್ವರಾಜ್ ನಿಶ್ಚಿತವಾಗಿಯೂ ದೆಹಲಿ ಬಿಜೆಪಿಗೆ ಭಾರವೇ. ಸಂಸತ್ತಿನಲ್ಲಿ ಭಾಷಣ ಮಾಡುವುದು ಬಿಟ್ಟರೆ ಬಿಜೆಪಿಗೆ ಆಕೆಯ ಕೊಡುಗೆ ಏನೂ ಇಲ್ಲ. ಆಕೆ ದೆಹಲಿ ಮುಖ್ಯಮಂತ್ರಿಯಾಗಿದ್ದರ ಪರಿಣಾಮವಾಗಿಯೇ ಆನಂತರದ ಹದಿನೈದು ವರ್ಷಗಳ ಅವಧಿಗೆ ಅದು ಕಾಂಗ್ರೆಸ್ ಪಾಲಾಯಿತು. ಈ ಸುಷ್ಮಾ ಸ್ವರಾಜ್‌ರನ್ನು ಅವರು ತಮ್ಮ ರಾಜಕೀಯ ವೃತ್ತಿ ಪ್ರಾರಂಭಿಸಿದ ಹರ್ಯಾಣಕ್ಕೆ ವರ್ಗಾಯಿಸುವುದು ಸಾಧ್ಯವಾದರೆ, ದೆಹಲಿಯ ಬಿಜೆಪಿ ಘಟಕ ಕೇಜ್ರಿವಾಲರನ್ನು ಎದುರಿಸುವಲ್ಲಿ ಬಲಗೊಳ್ಳುತ್ತದೆ. ಸುಷ್ಮಾ ಸ್ಥಳಾಂತರದೊಂದಿಗೆ ಆಡ್ವಾಣಿ ಬಲವೂ ಕುಂದಿದಂತಾಗಿ ಕಾಂಗ್ರೆಸ್ಸಿಗೆ ದೆಹಲಿಯಲ್ಲಿ ಬಿಜೆಪಿ ದೌರ್ಬಲ್ಯಗಳ ಮೇಲೆ ಸವಾರಿ ಮಾಡುವ ಅವಕಾಶ ತಪ್ಪಿ ಹೋಗುತ್ತದೆ. ಆಗ ಸಾರ್ವತ್ರಿಕ ಚುನಾವಣೆಗೂ ಮುನ್ನ ನರೇಂದ್ರ ಮೋದಿ ತಮ್ಮ ಪಕ್ಷವನ್ನು ಸದೃಢವಾಗಿ ಇರಿಸಬಹುದು.
ಹತ್ತೆಂಟು ದಿಕ್ಕಿನಲ್ಲಿ ಎಳೆದಾಡಿಕೊಂಡಿದ್ದರೆ ಯಾವ ರಾಜಕೀಯ ಪಕ್ಷವೂ ಯಶಸ್ಸನ್ನು ಸಾಧಿಸಲಾರದು. ವಂಶಾಡಳಿತದ ಅಪಾಯಕ್ಕೆ ಬೀಳದ ರೀತಿ ಗಟ್ಟಿ ಕೇಂದ್ರವೊಂದನ್ನು ಎಲ್ಲ ಪಕ್ಷಗಳೂ ಹೊಂದಿರಬೇಕಾಗುತ್ತದೆ. ಕೇಂದ್ರ ನಾಯಕತ್ವ ಎಂಬುದು ಒಂದು ಕೊಡುಗೆಯೇ ಸರಿ. ಅದು ಅರ್ಹತೆಯ ಆಧಾರದಲ್ಲಿ ರೂಪುಗೊಂಡಿದ್ದಿರಬೇಕು. ರಾಜನಾಥ ಸಿಂಗ್ ತಾವೇ ತಾವಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗುವುದು ಶಕ್ಯವಿರಲಿಲ್ಲ. ನರೇಂದ್ರ ಮೋದಿಯವರನ್ನು ಅಂಕೆಯಲ್ಲಿಡುವುದಕ್ಕಾಗಿ ಆರೆಸ್ಸೆಸ್ ಅವರನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿದೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಪಕ್ಷದ ದೈನಂದಿನ ವಿದ್ಯಮಾನವನ್ನು ಗಮನಿಸುತ್ತ ಇರಬೇಕಾದ ತೊಂದರೆ ತಪ್ಪಿಸಿರುವ ಈ ವ್ಯವಸ್ಥೆ ಇಲ್ಲಿಯವರೆಗೇನೋ ಒಳಿತನ್ನೇ ಉಂಟುಮಾಡಿದೆ. ಆದರೆ ಈಗಷ್ಟೇ ತೆರೆಕಂಡ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಕಾರ್ಯತಂತ್ರವನ್ನು ಮನ್ನಿಸಿ ಅವರಿಗೆ 2014ರ ಪ್ರಚಾರಾಂದೋಲನದ ಸಂಪೂರ್ಣ ಅಧಿಕಾರವನ್ನು ನೀಡಬೇಕು. ಈ ಮೂಲಕ ಬಿಜೆಪಿಯ ದೆಹಲಿ ವ್ಯವಸ್ಥೆ ಇಟ್ಟಿರುವ ಎಲ್ಲ ಅಡೆತಡೆಗಳನ್ನೂ ನಿವಾರಿಸುವಂತಾಗಬೇಕು. ಇಷ್ಟಕ್ಕೂ ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚಿನ ಜವಾಬ್ದಾರಿ ಇರುವುದು ಮೋದಿ ಮೇಲೆಯೇ ತಾನೆ? ಹೀಗಾದಾಗ ಮಾತ್ರ ಆಮ್ ಆದ್ಮಿಯಂಥ ಪಕ್ಷ ಬೇರೆಡೆಯೂ ನಿರ್ವಾತದ ಲಾಭ ಪಡೆಯುವುದು ತಪ್ಪುತ್ತದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಲಾಳುಗಳು ತಮ್ಮ ಮಾತೃಸಂಸ್ಥೆ ಬಿಟ್ಟರೆ ಅತಿ ವ್ಯಾಪಕ ಬೆಂಬಲದ ನೆಲೆಯನ್ನು ನರೇಂದ್ರ ಮೋದಿಯವರಿಗೇ ಕಟ್ಟಿಕೊಡುತ್ತಿದ್ದಾರೆ. ಇವರೊಂದಿಗೆ ನೇರ ಸಂವಹನ ಇರಿಸಿಕೊಂಡು 2014ರ ಪ್ರಚಾರಾಂದೋಲನ ರೂಪಿಸುವುದು ಮೋದಿಗೆ ಸಾಧ್ಯವಾಗಬೇಕು. ದೆಹಲಿಯ ಹರ್ಷವರ್ಧನ್ ನಿಸ್ಸಂಶಯವಾಗಿ ಇದೇ ಕಾಲಾಳು ಪಡೆಗೆ ಸೇರಿದವರು. ಅವರಿಗೆ ಚರಿಷ್ಮಾ ಇಲ್ಲದಿದ್ದರೇನಂತೆ ದೆಹಲಿ ಮುಖ್ಯಮಂತ್ರಿ ಗಾದಿಗೆ ಪ್ರಾಮಾಣಿಕ ಹಾಗೂ ಉತ್ತಮ ಮುಖವಾಗಿ ಹೊರಹೊಮ್ಮಿದ್ದಾರೆ. ಬಹಳ ಕಾಲದವರೆಗೆ ಬಿಜೆಪಿಯು ಕಾಂಗ್ರೆಸ್‌ನ ಬಿ ಟೀಮ್‌ನಂತೆ ನಡೆದುಕೊಂಡುಬಂದಿದೆ. ಕಾಂಗ್ರೆಸ್‌ನ ವಂಶಾಡಳಿತ ಶಿಥಿಲಗೊಂಡಿರುವ ಹೊತ್ತಿನಲ್ಲಿ ಉಳಿದಿರುವ ಏಕೈಕ ಭರವಸೆ ಎಂದರೆ ಬಿಜೆಪಿಯು ತನ್ನ ದೆಹಲಿ ವ್ಯವಸ್ಥೆಯನ್ನು ಬದಲಿಸಿ ಕಾಲಾಳುಗಳ ಸುಪರ್ದಿಗೆ ನೀಡುವುದು. ಈ ಕಾಲಾಳುಗಳಲ್ಲಿ ನವಚೈತನ್ಯ ತುಂಬುವ ತಾಕತ್ತಿರುವುದು ನರೇಂದ್ರ ಮೋದಿಯವರಿಗೆ ಮಾತ್ರ.  

- ಎನ್. ವಿ. ಸುಬ್ರಮಣಿಯನ್
'ನ್ಯೂಸ್‌ ಇನ್‌ಸೈಟ್‌' ಸಂಪಾದಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.