ಅಂಕಣಗಳು

ಪಕ್ಷ ಪರಿವರ್ತಿಸುತ್ತೇನೆ ಎನ್ನುವವರು ಸ್ವಂತದ ಬದಲಾವಣೆಗೆ ಸಿದ್ಧರೇ?

ಪಕ್ಷ ಪರಿವರ್ತಿಸುತ್ತೇನೆ ಎನ್ನುವವರು ಸ್ವಂತದ ಬದಲಾವಣೆಗೆ ಸಿದ್ಧರೇ?
Published On :

'ಪಕ್ಷದ ಸಂಘಟನೆಯಲ್ಲಿ ಪರಿವರ್ತನೆ ಆಗುವುದನ್ನು ನಾನು ಖಾತ್ರಿ ಪಡಿಸುತ್ತೇನೆ. ಅದನ್ನು ನಾನು ನನ್ನದೇ ಆದ ಶೈಲಿಯಲ್ಲಿ ಮಾಡುವವನಿದ್ದೇನೆ. ನೀವು ಅದನ್ನು ಊಹೆ ಕೂಡ ಮಾಡಲಾರಿರಿ.' ದೆಹಲಿ, ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಡಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದ ಸ್ವಲ್ಪ ಹೊತ್ತಿನಲ್ಲೇ ರಾಹುಲ್ ಗಾಂಧಿ ಅವರು ಮಾಧ್ಯಮದ ಎದುರು ಬಂದು ನೀಡಿದ ಹೇಳಿಕೆ ಇದು.
ಅತ್ಯಂತ ಹೀನಾಯವಾದ ಸೋಲನ್ನು ಅನುಭವಿಸಿದ ನಂತರ ಬಹಳ ಅಸಮಾಧಾನಕ್ಕೆ ಒಳಗಾದಂತೆ ತೋರುತ್ತಿದ್ದ ತಾಯಿ ಪಕ್ಕದಲ್ಲಿ ನಿಂತು ಈ ಮಾತುಗಳನ್ನು ಹೇಳಿದ ರಾಹುಲ್ ಗಾಂಧಿಯವರು ಅಂಥ ಆಘಾತಕಾರಿ ಸೋಲಿನ ನಂತರವೂ ಕಾಳಜಿ ತೆಗೆದುಕೊಂಡಂತೆ ಧ್ವನಿಸಲಿಲ್ಲ. ಅವರು ಯಾವತ್ತೂ ಯಾವ ಧಾಟಿಯಲ್ಲಿ ಮಾತನಾಡಿಕೊಂಡು ಬಂದಿದ್ದಾರೋ ಅಂಥದೇ ಹೇಳಿಕೆಯನ್ನು ಈಗಲೂ ಒಗಾಯಿಸಿದಂತಿತ್ತು. ಅವರ ಹೇಳಿಕೆಯಲ್ಲಿ ಯಾವ ಅಂಶವಿದೆ ಎಂದು ಬಗೆದರೆ ಏನೂ ಕಾಣುವುದಿಲ್ಲ. ಆದರೆ ಸೋಲಿನಿಂದ ಕುಸಿದಿರುವ ಪಕ್ಷದ ಕಾರ್ಯಕರ್ತರಿಗೆ ವಿಶ್ವಾಸ ತುಂಬುವ ನುಡಿಯಂತೂ ಅದಾಗಿರಲಿಲ್ಲ. ಅವರನ್ನು ಇನ್ನಷ್ಟು ಹೆದರಿಸಿದಂತಾಯಿತಷ್ಟೆ.
ಸಮರ್ಥ ಇತಿಹಾಸಕಾರರು ಎಂಬುದಾಗಿ ಗುರುತಿಸಿಕೊಂಡಿರುವ ರಾಮಚಂದ್ರ ಗುಹಾ ಅವರು, ಇದು ರಾಹುಲ್ ಗಾಂಧಿ ರಾಜಕೀಯವನ್ನು ತೊರೆದು ಇನ್ಯಾವುದಾದರೂ ಉದ್ಯೋಗ ಹುಡುಕಿಕೊಳ್ಳುವುದಕ್ಕೆ ಸೂಕ್ತಕಾಲ ಎಂದುಬಿಟ್ಟರು. 'ಕಾಂಗ್ರೆಸ್ ಉಳಿದುಕೊಳ್ಳುವ ಏಕೈಕ ಮಾರ್ಗ ಎಂದರೆ ರಾಹುಲ್ ಗಾಂಧಿಯವರನ್ನು ಹೊರದಬ್ಬುವುದು' ಅಂತ ತಮ್ಮ ಎಂದಿನ ಶೈಲಿಯ ಛಾಟಿ ಬೀಸಿದರು ಗುಹಾ. ಇದು ನಿಜಕ್ಕೂ ಅತ್ಯಂತ ಕಠಿಣ ಹೇಳಿಕೆಯೇ ಆಯಿತು. ಆದರೆ ಗುಹಾ ಅವರು ವಾಸ್ತವದಲ್ಲಿ ಬಹುಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರ ಮನದಿಂಗಿತವನ್ನೇ ಧ್ವನಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನ ಮಾಡುವುದಕ್ಕೆ ಮುಖ್ಯ ಅಡ್ಡಿ ಎಂದರೆ ರಾಹುಲ್ ಗಾಂಧಿಯೇ ಎಂಬ ಅಭಿಪ್ರಾಯ ಹೊಂದಿರುವವರು ಹಲವರಿದ್ದಾರೆ.
್ಡಹಾಗೆ ನೋಡಿದರೆ ರಾಹುಲ್ ತಾಯಿ ಸೋನಿಯಾ ಗಾಂಧಿ, ವಾಸ್ತವವನ್ನು ಅರ್ಥಮಾಡಿಕೊಂಡು ಮುಂದಡಿ ಇಡುವ ನಾಯಕಿ. ಪಕ್ಷವನ್ನು ಎರಡು ಅವಧಿಗೆ ಅಧಿಕಾರಕ್ಕೆ ತಂದ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಆದರೆ ಅವರ ಉತ್ತರಾಧಿಕಾರಿಯಾದ ಮಗ ಕಳೆದ 10-15 ವರ್ಷಗಳಲ್ಲಿ ಏನನ್ನೂ ಕಲಿಯದೇ ಇರುವವರಂತೆ ಕಾಣುತ್ತಿದ್ದಾರೆ.  
ರಾಹುಲ್ ಗಾಂಧಿಯವರ ಭಾರತದ ಕುರಿತ ತಿಳಿವಳಿಕೆ ಬಹಳ ಬಡವಾದದ್ದು. ಅವರು ಪುಸ್ತಕದ ಸಿದ್ಧಾಂತಗಳನ್ನಷ್ಟೇ ಓದಿಕೊಂಡಿರುವ ರಾಜಕಾರಣಿ. ತಮ್ಮ ಕೆಲಸಕ್ಕೆ ಬಾರದ ಸಿದ್ಧಾಂತಗಳು ಪಕ್ಷವನ್ನೂ ರಾಷ್ಟ್ರವನ್ನೂ ಮುನ್ನೆಡೆಸುತ್ತವೆ ಎಂದು ಅವರಿನ್ನೂ ನಂಬಿಕೊಂಡಿದ್ದಾರೆ.
ಸೋಲಿನ ನಂತರ, ಆಮ್ ಆದ್ಮಿ ಪಕ್ಷದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು ಹೀಗೆ- 'ಅವರು ಜನರನ್ನು ಭಾಗಿದಾರರನ್ನಾಗಿಸಿದರು. ಮುಖ್ಯವಾಹಿನಿ ಪಕ್ಷಗಳು ಹೆಚ್ಚಿನದಾಗಿ ಸಾಮಾನ್ಯ ಜನರನ್ನು ಒಳಗೊಳ್ಳುವುದೇ ಇಲ್ಲ. ನಾನು ಈ ಬಗ್ಗೆ ಯೋಚಿಸುತ್ತೇನೆ. ಅವರೆಲ್ಲ ಭಾಗಿದಾರರಾಗುವಂತೆ ನೋಡಿಕೊಳ್ಳುತ್ತೇನೆ.'
ಇಷ್ಟಕ್ಕೂ ರಾಹುಲ್ ಗಾಂಧಿ ಅವರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಹುಡುಕಿಕೊಂಡು ಹೋಗಿ ಅವರ ಮಾದರಿಯನ್ನು ಅಭ್ಯಸಿಸಬೇಕಾಗಿಲ್ಲ. ಅದು ಅವರಿಗೆ ಸಾಧ್ಯವೂ ಇಲ್ಲ. ಏಕೆಂದರೆ ರಾಹುಲ್ ಗಾಂಧಿ ಅವರನ್ನು ಚಿಕ್ಕ ಕೂಟವೊಂದು ಸುತ್ತುವರಿದಿದೆ. ಸ್ವಹಿತಾಸಕ್ತಿಯೇ ಧ್ಯೇಯವನ್ನಾಗಿಸಿಕೊಂಡಿರುವ ಈ ಗುಂಪೇ ರಾಹುಲ್‌ರನ್ನು ನಿರ್ದೇಶಿಸುತ್ತ ಅವರನ್ನು ತಪ್ಪುದಾರಿಗೆ ನೂಕುತ್ತಿದೆ. ಈ ಕೂಟದ ಕಾರಣದಿಂದಲೇ ರಾಹುಲ್ ಗಾಂಧಿ ಇತರರಿಗೆ ನಿಲುಕದಂತಾಗಿದ್ದಾರೆ ಹಾಗೂ ಆ ಮೂಲಕ ತಾವೂ ಬಹಳಷ್ಟು ವಿಷಯಗಳಲ್ಲಿ ಕತ್ತಲಿನಲ್ಲಿದ್ದಾರೆ.
ರಾಹುಲ್ ಗಾಂಧಿಯವರ ಹೆಚ್ಚಿನ ಸಲಹಾಕಾರರೆಲ್ಲ ಪ್ರಭಾವಿ ವಲಯಕ್ಕೆ ಸೇರಿದವರು. ಅರವಿಂದ ಕೇಜ್ರಿವಾಲರ ಪಾಳಯದಲ್ಲಿ ಇದ್ದವರಂತೆ ಇವರೂ ಸುಶಿಕ್ಷಿತರು ಹಾಗೂ ನಿರ್ದಿಷ್ಟ ಅರ್ಹತೆ ಹೊಂದಿದವರಾಗಿದ್ದಿರಬಹುದು. ಆದರೆ ದೇಶಕ್ಕೆ ಒಳಿತು ಮಾಡಬೇಕು ಎಂಬ ಉದ್ದೇಶದಿಂದ ಇವರ್ಯಾರೂ ರಾಹುಲ್ ಗಾಂಧಿಯವರನ್ನು ಸುತ್ತುವರಿದುಕೊಂಡಿಲ್ಲ. ಸಿದ್ಧಾಂತವೊಂದರಿಂದ ಪ್ರಭಾವಿತರಾಗಿರುವವರೂ ಅವರಲ್ಲ. ತಮ್ಮ ವೈಯಕ್ತಿಕ ಲಾಭ ಹಾಗೂ ರಾಜಕೀಯ ವೇದಿಕೆಗಾಗಿ ಅವರು ಅಂಥ ಕೂಟ ನಿರ್ಮಿಸಿಕೊಂಡಿದ್ದಾರೆ ಅಷ್ಟೆ.
ಕೇಜ್ರಿವಾಲ್ ಅವರ ಬೆಂಬಲಿಗರು ಅತ್ಯುನ್ನತ ಸ್ಫೂರ್ತಿಯೊಂದನ್ನು ಜತೆಗಿರಿಸಿಕೊಂಡವರು. ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವವರು. ಹೆಚ್ಚಿನವರಿಗೆ ತಮ್ಮದೇ ವೈಯಕ್ತಿಕ ಕಾರ್ಯಸೂಚಿ, ಹಿತಾಸಕ್ತಿ ಹಾಗೂ ಉದ್ಯಮ ಹಿತಾಸಕ್ತಿಗಳೇನೂ ಇಲ್ಲ. ದೇಶಕ್ಕೆ ಸಮರ್ಥ, ಸ್ವಚ್ಛ, ಜನಪರ ಸರ್ಕಾರ ಸಿಗುವಂತಾಗಬೇಕು ಎಂಬ ಧ್ಯೇಯ ಅವರದ್ದು. ಕೇಜ್ರಿವಾಲ್ ಹೇಳುವಂತೆ ಆಪ್‌ನಲ್ಲಿರುವವರೆಲ್ಲ ಆಮ್ ಆದ್ಮಿಗಳೇ ಅಂದರೆ ಜನಸಾಮಾನ್ಯರೇ. ಈ ಧೋರಣೆಯ ಜನ ಕಾಂಗ್ರೆಸ್ ಸೇರಿಕೊಂಡು ರಾಹುಲ್ ಗಾಂಧಿಯವರಿಗೆ ಸಹಕರಿಸುವ ಇರಾದೆಯನ್ನಂತೂ ಹೊಂದಿರುವುದಿಲ್ಲ. ಕುಟುಂಬ ಕೇದ್ರಿತವಾಗಿ ನಡೆಸುತ್ತಿರುವ, ಆಯ್ದ ಕೂಟದ ಉದ್ಯಮವೊಂದನ್ನು ಬೆಳೆಸುವುದಕ್ಕೆ ಅವರಾದರೂ ಏಕೆ ಇಷ್ಟಪಡುತ್ತಾರೆ? ರಾಹುಲ್ ಗಾಂಧಿ ಅವರ ಹೇಳಿಕೆ ಅವರ ಅರಿವಿನ ಕೊರತೆಯನ್ನು ಹಾಗೂ ಜನಸಾಮಾನ್ಯರ ಬಗ್ಗೆ ಅವರು ಎಷ್ಟು ಕಡಿಮೆ ತಿಳಿವಳಿಕೆ ಹೊಂದಿದ್ದಾರೆ ಎಂಬುದನ್ನೂ ತೋರಿಸುತ್ತದೆ ಅಷ್ಟೆ. ಆಪ್ ಥರದ ವ್ಯಕ್ತಿಗಳನ್ನು ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಒಳಗೊಳ್ಳುತ್ತದೆ ಎಂದು ಹೇಳುವುದಕ್ಕೆ ಅವರು ಬಿಕರಿಗಿರುವ ಪದಾರ್ಥಗಳಲ್ಲ. ತನ್ನ ಗುರಿ ಹಾಗೂ ನಾಯಕತ್ವವನ್ನು ಜನಸಾಮಾನ್ಯರ ಜಾಯಮಾನದಲ್ಲೇ ಹೊಂದಿರುವ ಆಪ್ ಆವರನ್ನು ಆಕರ್ಷಿಸಿ ಹಿಡಿದಿಟ್ಟಿದೆ ಅಷ್ಟೆ.  
ತಮ್ಮದೇ ಪಕ್ಷದ ಅಹಂಕಾರ, ಭ್ರಷ್ಟಾಚಾರ ಹಾಗೂ ನಿಷ್ಕಾಳಜಿಗಳೇ ಆಪ್ ಮತ್ತು ಅದರ ಬೆಂಬಲಿಗರ ಹುಟ್ಟಿಗೆ ಕಾರಣವಾಯಿತು ಎಂಬ ಸತ್ಯವನ್ನು ರಾಹುಲ್ ಗಾಂಧಿ ಮರೆತಿದ್ದಾರೆ. ಹೀಗಿರುವಾಗ ಆ ಬೆಂಬಲಿಗರು ತಮಗೆ ಬೆಂಬಲ ಕೊಡುವಂತೆ ಮಾಡುವ ರಾಹುಲ್ ಆಸೆಗೆ ಬಲವೇ ಇಲ್ಲ. ದೆಹಲಿ ಚುನಾವಣೆ ಫಲಿತಾಂಶ ಸಾರುವ ಪ್ರಕಾರ ಕಾಂಗ್ರೆಸ್‌ನ ಹೆಚ್ಚಿನ ಮತಗಳು ಆಪ್‌ಗೆ ಹೋಗಿವೆ. ಹಾಗಾದರೆ ಈ ಜನ ಆಪ್‌ಗೇ ಏಕೆ ಮತ ಹಾಕಿದರು? ಏಕೆಂದರೆ ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಇವರನ್ನೆಲ್ಲ ಸಂಪೂರ್ಣ ವಿಫಲರನ್ನಾಗಿಸಿತ್ತು. ರಾಹುಲ್ ಗಾಂಧಿಯವರ ಅಚ್ಚುಮೆಚ್ಚಿನ ಉದ್ಯೋಗ ಖಾತ್ರಿ ಹಾಗೂ ಆಹಾರ ಭದ್ರತೆಯ ಯೋಜನೆಗಳೆಲ್ಲ ದೇಶವನ್ನು ಬಡವಾಗಿಯೇ ಇಡುವುದಕ್ಕೆ ಯೋಗದಾನ ನೀಡುತ್ತವೆ. ಅದರ ಫಲಾನುಭವಿಗಳೇ ಕಾಂಗ್ರೆಸ್ ಬಗ್ಗೆ ಭ್ರಮನಿರಸನ ಹೊಂದಿದ್ದಾರೆ. ತಾವು ಬಡವರಾಗಿಯೇ ಇದ್ದುಕೊಂಡು ಯಾವತ್ತೂ ಕಾಂಗ್ರೆಸ್‌ಗೆ ಮತ ಒತ್ತುವ ಸಾರ್ಥಕ್ಯ ಅನುಭವಿಸಿಕೊಂಡಿರುವುದಕ್ಕೆ ಅವರು ಸಿದ್ಧರಿಲ್ಲ. ಈ ಜನರೇ ದೆಹಲಿಯಲ್ಲಿ ಆಪ್‌ಗೆ ಮತ ಹಾಕಿದವರು.
ಈ ಎಲ್ಲ ಜನರ ಆಕ್ರೋಶ- ಹತಾಶೆಗಳನ್ನೇ ಕೇಜ್ರಿವಾಲ್ ಮತಗಳನ್ನಾಗಿ ಪರಿವರ್ತಿಸಿದರು. ಈಗ ರಾಹುಲ್ ಗಾಂಧಿಯವರು ಯಾರ ಆಕ್ರೋಶವನ್ನು ಮತವಾಗಿ ಪರಿವರ್ತಿಸುತ್ತಾರೆ? ಅವರ ಬಳಿ ಉತ್ತರವಿದೆಯೇ? ರಾಹುಲ್ ಗಾಂಧಿಯವರಿಗೆ ನಿಜವಾಗಿಯೂ ಕಾಂಗ್ರೆಸ್ ಪರಿವರ್ತನೆಯ ಉದ್ದೇಶವಿದ್ದರೆ ಮೊದಲು ಅವರೇ ಕೇಜ್ರಿವಾಲ್ ಆಗಿ ಪರಿವರ್ತನೆ ಹೊಂದಬೇಕು. ಅಗ್ರಶ್ರೇಣಿಯಲ್ಲಿ ಉಂಟಾಗುವ ಬದಲಾವಣೆ ಎಲ್ಲೆಡೆ ಪಸರಿಸುತ್ತದೆ. ಆ ಕೆಲಸ 10, ಜನಪಥದಿಂದಲೇ ಆಗಲಿ.

- ಡಿ. ಪಿ. ಸತೀಶ್
ಸಿಎನ್‌ಎನ್- ಐಬಿಎನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.