ಪ್ರತಿಭೆಗಳ ರೂವಾರಿ ಮೂರ್ತಿ ನೆನಪು ಮತ್ತೆ ಮತ್ತೆ...

ನನ್ನ ಅಲೆಮಾರಿ ಜೀವನವನ್ನು ದಿಕ್ಕು ಬದಲಿಸಿ ಉತ್ತಮ ಹಾದಿ ತೋರಿಸಿದ ಪ್ರಸಿದ್ಧ ರಂಗಕರ್ಮಿ ದಿ. ಎ.ಎಸ್. ಮೂರ್ತಿಯವರು. ಇವರು ಅಸ್ತಂಗತರಾಗಿ ಡಿಸೆಂಬರ್ 18ನೇ ತಾರೀಕಿಗೆ ಒಂದು ವರ್ಷವಾಗುತ್ತೆ. ಇವರ ಸವಿ ನೆನಪಿನ ಅಂಗವಾಗಿ ಕಲಾಮಂದಿರದ ಹಳೇ ವಿದ್ಯಾರ್ಥಿಗಳು, ಈಗಿನ ವಿದ್ಯಾರ್ಥಿಗಳು, ಅಭಿನಯ ತರಂಗ, ಹನುಮಂತನಗರ ಬಿಂಬ, ವಿಜಯನಗರ ಬಿಂಬ, ಹಿತೈಷಿಗಳು, ಚಲನಚಿತ್ರ ಕಲಾವಿದರು, ಸಾಹಿತಿಗಳು, ನಾಟಕಕಾರರು, ಜನಪದ ಕಲಾವಿದರು, ಕವಿಗಳು, ಚಿತ್ರಕಾರರು, ಸಂಗಮ ಸಂಗೀತದವರು ಸೇರಿದಂತೆ ಒಟ್ಟಾಗಿ ಬೆಸೆದು ಕಲೋತ್ಸವವನ್ನು ಏರ್ಪಡಿಸಲು ಸಿದ್ಧವಾಗಿರುವ ಈ ಸುಸಂದರ್ಭದಲ್ಲಿ ಅಣ್ಣ ಎ.ಎಸ್. ಮೂರ್ತಿ ಅವರ ಜತೆ ಒಡನಾಡಿದ ಆ ದಿನಗಳನ್ನು ಮೆಲುಕು ಹಾಕುವುದನ್ನು ಲೇಖನಿ ಮುಖೇನ ಹಂಚಿಕೊಳ್ಳುತ್ತಿದ್ದೇನೆ.
1962ನೇ ವರ್ಷ. ನಾನಿನ್ನೂ ಹನ್ನೆರಡು ವರ್ಷದ ಹುಡುಗನಾಗಿದ್ದೆ. ಬೆಂಗಳೂರು ಡಿ.ವಿ.ಜಿ. ರಸ್ತೆ ಪಕ್ಕದಲ್ಲೊಂದು ಕಲ್ಲಿನ ಬೆಂಚು. ಅದರ ಮೇಲೆ ನಿಂತು ಬಿಳಿ ಕಾರ್ಡ್ನಲ್ಲಿ ಎದುರಿಗೆ ನಿಂತ ವ್ಯಕ್ತಿಯ ರೂಪ ಚಿತ್ರವನ್ನು ಉಗುರಿನ ಸಹಾಯದಿಂದ ಉಬ್ಬು ಚಿತ್ರದಂತೆ ಮಾಡಿಕೊಟ್ಟು ಶಹಭಾಸ್ಗಿರಿಯನ್ನು ಪಡೆಯುತ್ತಿದ್ದೆ. ಅಲ್ಲಿಗೆ ನೇರವಾಗಿ ಸೈಕಲ್ಲಿನಲ್ಲಿ ಬಂದಿಳಿದ ಎ.ಎಸ್. ಮೂರ್ತಿಯವರು ನನ್ನ ಕೈಗೆ 'ಮಲ್ಲಿಗೆ ಅರಳೆ' ಎಂಬ ನಾಟಕದ ಕರಪತ್ರ ಒಂದನ್ನು ಕೊಟ್ಟು 'ಬಾರಯ್ಯ ನೀನೂ ನಾಟಕ ನೋಡಿವಿಯಂತೆ' ಎಂದರು. ಕರಪತ್ರ ನನ್ನ ಕೈ ಸೇರಿದ್ದೇ ತಡ ನನಗರಿವಿಲ್ಲದೇ ಅವರನ್ನು ನೋಡುತ್ತಾ ನಿಂತೆ, ಎಷ್ಟೋ ವರ್ಷಗಳ ಸಂಬಂಧದಂತೆ ಬಾಸವಾಯಿತು. ಕೂಡಲೇ ಕಲ್ಲು ಬೆಂಚಿನಿಂದಿಳಿದು ನಾನೂ ನಿಮ್ಮ ಜತೇನೆ ಬರುತ್ತೇನೆ ಅಂತ, ಅವರ ಸೈಕಲ್ಲಿನ ಹಿಂಬದಿಯಲ್ಲಿನ ಸೀಟಿನ ಮೇಲೆ ಕುಳಿತೆ. 'ಸರಿ ಬಾ' ಎನ್ನುತ್ತಾ ಸೈಕಲ್ಲು ತುಳಿಯುತ್ತಾ ನೇರವಾಗಿ ಕಲಾಮಂದಿರಕ್ಕೆ ಕರೆದೊಯ್ದರು. ಗಾಂಧೀ ಬಜಾರಿನ ಮಹಡಿ ಮೇಲಿನ ಎರಡು ಕೋಣೆಗಳಲ್ಲಿ ಚಿತ್ರಕಲಾ ತರಗತಿಗಳು ನಡಿಸುತ್ತಿದ್ದರು. ಅಣ್ಣ, ಮೂರ್ತಿಯವರ ತಂದೆ, ಅ.ನ. ಸುಬ್ಬರಾಯರನ್ನು ಪರಿಚಯ ಮಾಡಿಸಿದರು. ಎತ್ತರವಾದ ದೇಹ, ಲಿಯೋನಾರ್ ಡಾವಿಂಚಿಯ ದಪ್ಪವಾದ ಕಣ್ಣು ಉಬ್ಬುಗಳು. ಮುಗುಳ್ನಗೆಯಿಂದ ಪಕ್ಕದಲ್ಲಿ ಕೂರಿಸಿಕೊಂಡು 'ನೀನು ಚಿತ್ರ ಬರೀಯುವುದನ್ನು ಕಲೀತೀಯ' ಎಂದರು. ಭಯ ಮಿಶ್ರಿತ ಧ್ವನಿಯಲ್ಲಿ 'ಆಗಲಿ' ಎಂದು ತಲೆಯಾಡಿಸಿದೆ. ಅಲ್ಲಿ ಕಲಿಯುತಿದ್ದ ವಿದ್ಯಾರ್ಥಿಗಳ ಪಕ್ಕದಲ್ಲಿ ಕುಳ್ಳಿರಿಸಿ ಕಬ್ಬಿನ ಚಿತ್ರ ಬರೀ ನೋಡೋಣವೆಂದರು.
ಆ ಕಬ್ಬಿನ ಚಿತ್ರದಿಂದ ನನ್ನ ಬದುಕೇ ಸಿಹಿ ಆಯಿತು. ಆದಿನ ಸಂಜೆ ಅಣ್ಣ, ಎ.ಎಸ್. ಮೂರ್ತಿಗಳು, ಮನೆಗೆ ಬಂದು ಇಲ್ಲೇ ಇರ್ತೀಯಾ ಇನ್ನೆಲ್ಲಿಗಾದ್ರು ಹೊರಟುಬಿಡ್ತಿಯಾ ಎಂದರು. ಇನ್ನೆಲ್ಲಿಗೂ ಹೋಗೊಲ್ಲ ಇಲ್ಲೇ ಇರ್ತೀನಿ ಎಂದೆ. ನನಗೆ ಆಗಲೇ ನನ್ನ ಗುರುಗಳ ಮಗ ಇವರೆಂದು ಅರ್ಥವಾಯಿತು. ಎಲ್ಲರೂ ಊಟ ಮಾಡುತ್ತಾ ಒಂದೇ ಮನೆಯಲ್ಲಿ ಮಲಗುತ್ತಿದ್ದೆವು. ರಾತ್ರಿ ಎಷ್ಟೊತ್ತಾದರೂ ಅಣ್ಣ, ಮೂರ್ತಿಯವರು ಮಲಗುತ್ತಿರಲಿಲ್ಲ. ರಾತ್ರಿಯಲ್ಲಾ ಏನೇನೋ ಬರೀತಾ ಇರುತ್ತಿದ್ದರು. ಅವರ ಹಾಸಿಗೆ ದಿಂಬಿನ ಪಕ್ಕ ಪೆನ್ನು ಬಿಳಿ ಹಾಳೆಗಳು ಒಂದು ಸಿಗರೇಟು ಪ್ಯಾಕು ಸದಾ ಇರುತ್ತಿತ್ತು. ರಾತ್ರಿ ಅಷ್ಟು ಹೊತ್ತಿನಲ್ಲೂ ಅಕ್ಕ ಕಮಲಮ್ಮನವರು ಅಣ್ಣನಿಗೆ ಕಾಫಿ ಮಾಡಿಕೊಡುತ್ತಿದ್ದರು. ಇದನ್ನೆಲ್ಲಾ ನಾನೂ ನೋಡುತ್ತಾ ನನಗೂ ನಿದ್ದೆ ಬರುತ್ತಿರಲಿಲ್ಲ. ನಾನೂ ಒಂದು ಕಡೆ ಗುರುಗಳ ಜತೆ ಕಲಾಮಂದಿರಕ್ಕೆ ಬರುತಿದ್ದೆ. ದಿನಗಳು ಕಳೆದಂತೆ ನನ್ನ ಸ್ವಂತ ಮನೆಯಂತೆ ಭಾಸವಾಗುತ್ತಾ ಇತ್ತು. ಈಗಿನ ಕಲಾಮಂದಿರದ ಪ್ರಾಂಶುಪಾಲರಾಗಿರುವ ಎ.ಎಂ. ಪ್ರಕಾಶ್ ಇನ್ನೂ ಹುಟ್ಟಿರಲಿಲ್ಲ. ಅಣ್ಣನ ಮಕ್ಕಳಾದ ಇಂದಿರಾ, ಗೌರಿ, ಶೋಭಾ ಇವರ ನಡುವೆ ನನ್ನನ್ನೂ ಒಬ್ಬ ಮಗನಾಗಿ ಬೆಳೆಸಿದರು. ಎಷ್ಟೊ ಸಲ ಬೆಳದಿಂಗಳ ಊಟ. ಮನೆ ಪಕ್ಕದಲ್ಲೇ ಇರುವ ಹನುಮಂತನ ಗುಡ್ಡದ (ಈಗಿನ ರಾಮಾಂಜನೇಯ ಗುಡ್ಡ)ಲ್ಲಿ ಎಲ್ಲರೂ ವೃತ್ತಾಕಾರವಾಗಿ ಕುಳಿತು ಅಕ್ಕ ಕಮಲಮ್ಮನವರು, ಕೈತುತ್ತು ಹಾಕುವುದನ್ನು ಕಾಯುತಿದ್ದೆವು. ಬಿಸಿ ಬೇಳೆಬಾತು, ಬೆಳದಿಂಗಳ ಬೆಳಕಿನಲ್ಲಿ ತಣ್ಣಗೆ ಬೀಸುತಿದ್ದ ತಂಗಾಳಿ ಸವಿಯುತ್ತಿದ್ದ ಆ ದಿನಗಳು ಎಂದಿಗೂ ಮರೆಯುವಂತಿಲ್ಲ. ಅಕ್ಕ, ಕಮಲಮ್ಮನವರು ತೋರುತ್ತಿದ್ದ ತಾಯಿ ಪ್ರೇಮ, ಅಣ್ಣ ಮೂರ್ತಿಯವರ ಸಖ್ಯ, ಗುರುಗಳ ವಾತ್ಸಲ್ಯ ಇವು ಯಾವುದೋ ಜನ್ಮದ ಸಂಬಂಧವಲ್ಲದೇ ಮತ್ತೇನು ಎನ್ನಿಸುತ್ತದೆ. ಅವರಿಗಿದ್ದ ಕಷ್ಟ ಕಾಲದಲ್ಲೂ ಸಹ ನನ್ನಂತವನನ್ನು ಸಾಕಿದ್ದು ಅಲ್ಲದೇ ನಾಲ್ಕು ಜನ ಗುರ್ತಿಸುವಂತೆ ಮಾಡಿದ ಗುರುಗಳಿಗೆ, ತಾಯಿಯಂತೆ ನನ್ನನ್ನು ನೋಡಿಕೊಂಡ ಅಕ್ಕ, ಕಮಲಮ್ಮನವರಿಗೂ ಅಣ್ಣ, ಮೂರ್ತಿಯವರಿಗೆ ತುಂಬಾ ಋಣಿಯಾಗಿರುತ್ತೇನೆ.
ಎಷ್ಟೋ ಕಡೆ, ವೇದಿಕೆ ಮೇಲೆ ಚಿತ್ರ ಬರಿಯುವ ಕಾರ್ಯಕ್ರಮಕ್ಕೆ ಅಣ್ಣ ಎ.ಎಸ್. ಮೂರ್ತಿಯವರೇ ನಿರೂಪಣೆ ಮಾಡುತ್ತಿದ್ದರು. ಒಮ್ಮೆ ತುಮಕೂರು ಕಾಲೇಜು ಒಂದರಲ್ಲಿ ನಮ್ಮ ಕಾರ್ಯಕ್ರಮವಿತ್ತು. ಈಗಿನ ಪ್ರಸಿದ್ಧ ಸಾಹಿತಿಗಳಾದ ಬರುಗೂರು ರಾಮಚಂದ್ರಪ್ಪ ಅವರು ಆಗ ಇನ್ನೂ ವಿದ್ಯಾರ್ಥಿಗಳಾಗಿದ್ದರು. ಅವರೇ ಬರೆದ ಲೇಖನ ಒಂದು ಅಣ್ಣ, ಎ.ಎಸ್. ಮೂರ್ತಿ ಅವರ ಕೈನಲ್ಲಿ ತಿದ್ದಿಸಿಕೊಳ್ಳಲು ಬೆಂಗಳೂರು ಹನುಮಂತನಗರಕ್ಕೆ ಬಂದಿದ್ದರು.
ಆ ದಿನ ರಾತ್ರಿ ಪೂರ ಅಣ್ಣನ ಮನೆಯಲ್ಲೇ ತಂಗಿದ್ದರು. ರಾತ್ರಿ ಪೂರ ನಿದ್ದೆಗೆಟ್ಟು ಬರುಗೂರು ಹಸ್ತಪ್ರತಿ ಪೂರ ಹೊಸದಾಗಿ ರಚಿಸಿಕೊಟ್ಟಿದ್ದರು. ಇಂದಿಗೂ ಅಣ್ಣನ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದಾರೆ. ಅಣ್ಣನ ಒಡನಾಡಿಗಳಾಗಿ ತುಂಬಾ ಜನ ಬಂದು ಹೋಗುತ್ತಿದ್ದರು. ಅವರಲ್ಲಿ ಗಿರೀಶ್ ಕಾರ್ನಾಡ್, ಪಿ. ಲಂಕೇಶ್, ವೈ.ಎನ್.ಕೆ., ಸುಮತೀಂದ್ರ ನಾಡಿಗ್, ಕಿ.ರಂ. ನಾಗರಾಜ್, ನಿಸಾರ್ ಅಹಮದ್, ಗಿರಡ್ಡಿ ಗೋವಿಂದರಾಜು, ಚಂದ್ರಶೇಖರ ಕಂಬಾರ, ಮೈಸೂರು ಅನಂತಸ್ವಾಮಿ, ಸಿ.ಆರ್. ಸಿಂಹ ಮುಂತಾದವರೆಲ್ಲರು ಬಂದುಹೋಗುತ್ತಿದ್ದರು. ಇವರ ಭಾವನವರಾದ ನಿರ್ದೇಶಕರು, ನಿರ್ಮಾಪಕರೂ ಆದ ಎಸ್. ರಾಮನಾಥ್, ಎಸ್. ಶಿವರಾಮು ಇವರುಗಳು ಎಷ್ಟೋ ಸಲ ಇವರ ಜತೆ ಇರುತಿದ್ದರು.
ಅಣ್ಣ ಮೂರ್ತಿಯವರು ಕಟ್ಟಿ ಬೆಳೆಸಿದ 'ಚಿತ್ರ ಕಲಾವಿದರು' ಬ್ಯಾನರ್ ಕೆಳಗೆ ನೂರಾರು ನಾಟಕಗಳನ್ನು ಆಡಿದ್ದಾರೆ. ಇವರ ನಾಟಕಗಳಲ್ಲಿ ನಾನು ಸಹ ಅಭಿನಯಿಸಿದ್ದೀನಿ. ನನ್ನ ಬಗ್ಗೇನೆ ಒಂದು ನಾಟಕ ಬರೆದು ಪ್ರದರ್ಶನ ಮಾಡಿದ್ದರು. 'ಇದು ಇತಿಹಾಸ' ವೆಂಬ ಆ ನಾಟಕದಲ್ಲಿ ವರ್ಮನ ಪಾತ್ರ ನಾನೇ ಮಾಡಿದ್ದೀನಿ. ಒಂದಲ್ಲ ಒಂದು ಪ್ರಯೋಗಗಳು ನಿರಂತರ ನಡಿಯುತ್ತಲೇ ಇರುತ್ತಿತ್ತು. ಇವರ ಸ್ಫೂರ್ತಿ ಸಿಗರೇಟ್. ಎಷ್ಟೋ ಸಲ ಸಿಗರೇಟು ಬೆಂಕಿ ತುದಿ ಕೊನೆಯವರೆಗೂ ಉರಿಯುತ್ತಲೇ ಕೈ ಚುರುಕ್ ಎಂದಾಗಲೇ ತುಂಡು ಸಿಗರೇಟು ಬಿಸಾಕಿ ಮತ್ತೊಂದು ಸಿಗರೇಟು ಬೆರಳುಗಳ ಮಧ್ಯ ಸೇರುತ್ತಿತ್ತು. ಇಂತಹ ಸನ್ನಿವೇಶದಲ್ಲಿ ಟಿ.ಪಿ. ಕೈಲಾಸಂ ಅವರ ನೆನಪು ಬರುತ್ತಿತ್ತು.
ಒಮ್ಮೆ ಹನುಮಂತನಗರದ ಗುಡ್ಡದ ಬಂಡೆಗಳನ್ನೆಲ್ಲ ಬಳಿಸಿಕೊಂಡು ರಾಮಾಯಣ, ಮಹಾಭಾರತ ಚಿತ್ರಗಳನ್ನು ಬರೆಯುತ್ತಿದ್ದೆ. ಸಾವಿರಾರು ಜನ, ನಿತ್ಯ ಚಿತ್ರಗಳನ್ನು ನೋಡಲು ಬರುತ್ತಿದ್ದರು. ಗುಡ್ಡಕ್ಕೆ ಮೆಟ್ಟಿಲು ಇರಲಿಲ್ಲ. ಮೂರ್ತಿಯವರು 'ಆಕಾಶವಾಣಿ' ಈರಣ್ಣನಾಗಿ ಜನಮನ ಗೆದ್ದಿದ್ದರು. ಇವರು ಗುಡ್ಡ ಏರುತ್ತಾ ಜಾರಿ ಬಿದ್ದು ಎದ್ದು ನಿಂತರು. ಈ ಗುಡ್ಡಕ್ಕೆ ಮೆಟ್ಟಿಲು ಬೇಕೇ ಬೇಕೆಂದು ಈರಣ್ಣನ ಪಾತ್ರದಲ್ಲಿ ಅಣ್ಣ ಹೇಳಿದ ಮಾತಿಗೆ ಆಗಿನ ಮೇಯರ್ ಆಗಿದ್ದ ಶ್ರೀಲಿಂಗಯ್ಯನವರು ನಗರಸಭೆ ಸಿಬ್ಬಂದಿಯೊಂದಿಗೆ ಬಂದು ರಸ್ತೆ ಹಾಗೂ ಮೆಟ್ಟಿಲು ಮಾಡಿಯೇಬಿಟ್ಟರು. ಜನತೆ ಬಂದು ಹೋಗಲು ಸುಲಭವಾಯ್ತು. ನಂತರ, ಆಗಿನ ರೈಲ್ವೇ ಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರನ್ನು ಸುಮಾರು ನೂರು ಜನವಿರುವ ಹನುಮನ ದಂಡು ಅವರ ಮನೆ ಹತ್ತಿರ ಹೋಗಿ ಕರೆದೆವು. ಗುಡ್ಡದ ಮೇಲಿನ ದೇವಾಲಯದ ವಿನ್ಯಾಸ, ಗೋಪುರದ ಬದಲು ರಾಮ ಮತ್ತು ಹನುಮ ಒಬ್ಬರನ್ನೊಬ್ಬರು ಆಲಂಗಿಸಿಕೊಂಡಂತೆ ಚಿತ್ರ ಬರೆದುಕೊಟ್ಟು 'ಸಾರ್, ಈ ದೇವಾಲಯ ಹೀಗೆ ಇದ್ದರೆ ಚನ್ನ, ಭಕ್ತ ಭಗವಂತ ಆಲಿಂಗನ ಗೋಪುರ ಎಲ್ಲೂ ಇಲ್ಲ' ಎಂದೆ. ಅವರು ಮನಸ್ಸು ಮಾಡಿ ದೇವಾಲಯ ನಿರ್ಮಾಣ ಮಾಡಿಕೊಟ್ಟರು. ಇದೇ ಗುಡ್ಡದಲ್ಲಿ ಕಲಾಮಂದಿರದ ಕಲೋತ್ಸವ ಹಬ್ಬದ ರೀತಿಯಲ್ಲಿ ನಡಿಯಲಿದೆ.
ಅಣ್ಣ ಮೂರ್ತಿಯವರು ಸುಮ್ಮನೆ ಕೂರುವ ವ್ಯಕ್ತಿಯಾಗಿರಲಿಲ್ಲ. ಏನಾದರೊಂದು ಪ್ರಯೋಗ ಮಾಡುತ್ತಲೇ ಇರುತ್ತಿದ್ದರು. ಕರ್ನಾಟಕದಲ್ಲಿ ಲೇಖಕಿಯರು ತುಂಬಾ ಇರುವುದರಿಂದ ಲೇಖಕಿಯರ ಸಂಘ ಸ್ಥಾಪನೆ ಮಾಡಲು ನಿರ್ಧಾರ ಮಾಡಿದರು. ಏಷಿಯನ್ ಟ್ರಾವೆಲ್ಸ್ ಸಂಸ್ಥಾಪಕರಾದ ಎಚ್.ವಿ. ನಾರಾಯಣ್ ಜತೆ ಯೋಜನೆಯನ್ನು ಕೈಗೆತ್ತಿಕೊಂಡು ಸಂಘ ಸ್ಥಾಪಿಸಿಯೇಬಿಟ್ಟರು. ಇದರ ಅಧ್ಯಕ್ಷತೆ ಹೆಚ್.ಆರ್. ಇಂದಿರಾ, ಪದಾಧಿಕಾರಿಗಳಾದ, ಎ.ಕೆ. ಇಂದಿರಾ, ಆರ್ಯಾಂಬ ಪಟ್ಟಾಭಿ, ಹೆಚ್.ಎಸ್. ಪಾರ್ವತಿ, ಡಾ. ವಿಜಯಾ ಮುಂತಾದವರು ಸಂಘದಲ್ಲಿದ್ದರು. ನಾನು ಆಸಂಘಕ್ಕೆ ಸುಮಾರು 25 ಲೇಖಕಿಯರ ಭಾವಚಿತ್ರ ಬರೆದು ಆ ಲೇಖಕಿಯರು ಬರೆದ ಪ್ರಸಿದ್ಧ ಕಾದಂಬರಿಯ ಬಹಳ ಮುಖ್ಯವಾದ ಒಂದು ಸಾಲು ಹಾಗೂ ಆ ಕಾದಂಬರಿಗೆ ಸಂಬಂಧ ಪಟ್ಟ ಹಾಗೆ ಒಂದು ಚಿತ್ರಗಳನ್ನು ಸಿದ್ಧಗೊಳಿಸಿದೆ. ನಂತರ ಹೆಚ್.ಬಿ. ಸಮಾಜದಲ್ಲಿ, ಸಾರ್ವಜನಿಕರಿಗೋಸ್ಕರ ಚಿತ್ರ ಪ್ರದರ್ಶನ ನಡೆಯಿತು. ಅದೊಂದು ಹೊಸದಾದ ಪ್ರಯತ್ನವಾದರೂ ಬಹಳ ಯಶಸ್ವಿಯಾಯಿತು. ಹಾಗೆಯೇ ಎಲ್ಲ ಲೇಖಕಿಯರ ಲೇಖನಗಳನ್ನು ಸಂಗ್ರಹಿಸಿ 'ಕಥಾಪಲ್ಲವ' ಎಂದು ನಾಮಕರಣ ಮಾಡಿ ಗ್ರಂಥವನ್ನು ತರಲು ಸಿದ್ಧತೆ ನಡಿಯುತ್ತಿದ್ದಾಗ, ಆ ಪುಸ್ತಕಕ್ಕೂ ಲೇಖಕಿಯರ ರೂಪ ಚಿತ್ರಗಳನ್ನು ಬರೆದುಕೊಟ್ಟೆ. ಆ ಚಿತ್ರಗಳು ಕಥಾಪಲ್ಲವದಲ್ಲಿ ಪ್ರಕಟವಾಗಿವೆ. ಇದಕ್ಕೆ ಅಣ್ಣ ಮೂರ್ತಿಯವರಿಗೆ ಅಭಿನಂದನೆ ಸಲ್ಲಿಸಲೇಬೇಕು.
ಇದಾದ ನಂತರ ಗೊಂಬೆಯಾಟ ಅಂದರೆ ಸೂತ್ರದ ಗೊಂಬೆಗಳಿಂದ ನಾಟಕ, ನೃತ್ಯ. ಕಥಾನಕಗಳ ದೃಶ್ಯಗಳನ್ನು ಗೊಂಬೆಗಳ ಮುಖೇನ ಸಾರ್ವಜನಿಕರಿಗೆ ಸಂತೋಷವನ್ನು ಉಣಬಡಿಸುತಿದ್ದರು. ಇದಕ್ಕೆ ಹಿನ್ನಲೆ ಧ್ವನಿ ಅಣ್ಣ ಮೂರ್ತಿಯವರದ್ದೇ ಇರುತ್ತಿತ್ತು. ಹೆಣ್ಣು ಧ್ವನಿಗೆ ಇಂದಿರಾ, ಗೌರಿ, ಶೋಭಾ ಮುಂತಾದವರು ಧ್ವನಿ ನೀಡುತ್ತಿದ್ದರು. ನಾಡಿನಾದ್ಯಂತ, ಬೀದಿ ನಾಟಕಗಳನ್ನು ಆಡಿ ಅನ್ಯಾಯದ ವಿರುದ್ಧ ನಾಟಕ ಮುಖಾಂತರ ಖಂಡಿಸುತ್ತಿದ್ದರು. ಇವರ ಹೃದಯ ಗಡಿಯಾರ ನಿಲ್ಲುವ ತನಕ ಒಂದಲ್ಲ ಒಂದು ಪ್ರಯೋಗ ಮಾಡುತ್ತಲೇ ಇದ್ದರು. ಇಂತಹ ಕ್ರಿಯಾಶೀಲ ಮನೋಶಕ್ತಿ ಮುಂದಿನ ಯುವ ಕಲಾವಿದರಿಗೆ ಸ್ಫೂರ್ತಿಯಾಗಲಿ.
- ಡಾ. ಬಿ.ಕೆ.ಎಸ್. ವರ್ಮ
ಖ್ಯಾತ ಚಿತ್ರಕಲಾವಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


