ಅತಿರೇಕದ ವರ್ತನೆಗೆ ಅಂತ್ಯ ಇದ್ದೇ ಇರುತ್ತದೆ

ಅಮೆರಿಕದ ಅಧಿಕಾರಿಗಳು, ನ್ಯೂಯಾರ್ಕ್ನಲ್ಲಿರುವ ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಕ್ಷುಲ್ಲಕ ಆರೋಪದ ಮೇಲೆ ಬಂಧಿಸಿ, ಅವಮಾನಕಾರಿಯಾಗಿ ನಡೆಸಿಕೊಂಡಿರುವುದು ಈಗ ಹಳೆಯ ಸುದ್ದಿ. ಈ ಹೇಯ ಕೃತ್ಯದ ನೆಪದಲ್ಲಿ ಅಮೆರಿಕದ ಸಣ್ಣತನ ಮತ್ತೆ ಬಯಲಾಗಿದೆ. ತನ್ನ ದೇಶದಲ್ಲಿರುವ ವಿದೇಶಿಯರೊಂದಿಗೆ ಕನಿಷ್ಠ ಸೌಜನ್ಯದಿಂದ ವರ್ತಿಸಬೇಕೆಂಬ ಸಾಮಾನ್ಯ ತಿಳಿವಳಿಕೆಯೂ ಅಮೆರಿಕದ ಅಧಿಕಾರಿಗಳಿಗೆ ಇಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ.
ಸಮಾಧಾನದ ಸಂಗತಿಯೆಂದರೆ, ಅಮೆರಿಕದ ಈ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಪ್ರತೀಕಾರದ ಕ್ರಮವಾಗಿ, ಅಮೆರಿಕದ ರಾಜತಾಂತ್ರಿಕರು ಹಾಗೂ ರಾಯಭಾರ ಕಚೇರಿ, ಕಾನ್ಸುಲ್ ಕಚೇರಿಗಳ ಸಿಬ್ಬಂದಿಗೆ ನೀಡಲಾದ ಹಲವು ವಿನಾಯ್ತಿ ಹಾಗೂ ಸೌಲಭ್ಯಗಳನ್ನು ವಾಪಸ್ ಪಡೆದಿದೆ. ಆ ಮೂಲಕ, ಅಮೆರಿಕದ ಕ್ರಮಕ್ಕೆ, ರಾಜತಾಂತ್ರಿಕ ಮಾರ್ಗದಲ್ಲಿಯೇ ಕಟುವಾದ ಉತ್ತರ ನೀಡಿದೆ.
ಕಾನೂನುಪಾಲನೆಯ ನೆಪ ಹೇಳಿಕೊಂಡು, ಭಾರತದ ಗಣ್ಯರನ್ನು ಅಮೆರಿಕ ಅವಮಾನಿಸುತ್ತಿರುವುದು ಇದು ಎಷ್ಟನೇ ಸಲವೋ? ಪ್ರತಿ ಬಾರಿಯೂ ಅಹಿತಕರ ಘಟನೆ ನಡೆವವರೆಗೂ ಜಾಣ ಕುರುಡು ಪ್ರದರ್ಶಿಸುವ ಅಮೆರಿಕ, ಆ ನಂತರದಲ್ಲಿ ಭಾರತದಿಂದ ಪ್ರತಿಭಟನೆಯ ಮಾತು ಕೇಳಿಸಿದ ತಕ್ಷಣ-'ಈಗ ನಡೆದಿರುವ ಘಟನೆಯ ಕುರಿತು ವಿಷಾದಿಸುತ್ತೇವೆ. ಈ ಸಂಬಂಧವಾಗಿ ಪೂರ್ಣ ಪ್ರಮಾಣದ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ' ಎನ್ನುವ ಮೂಲಕ ಹೊಣೆಗೇಡಿತನವನ್ನು ಪ್ರದರ್ಶಿಸುತ್ತಲೇ ಇದೆ. ದುರಂತವೆಂದರೆ, ಪ್ರತಿ ಬಾರಿಯೂ ತಪ್ಪು ತಿದ್ದಿಕೊಳ್ಳಲು ಭಾರತೀಯ ಸರ್ಕಾರಗಳು ಅಮೆರಿಕಕ್ಕೆ ಮತ್ತೆ ಮತ್ತೆ ಲಾಸ್ಟ್ ಛಾನ್ಸ್ಗಳನ್ನು ಕೊಡುತ್ತಲೇ ಬಂದಿವೆ. ಆದರೆ, ವಿದೇಶಿಯರ ಮೇಲೆ ದೌರ್ಜನ್ಯ ಎಸಗುವುದು ನಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ವರ್ತಿಸುವ ಅಮೆರಿಕದ ಅಧಿಕಾರಿಗಳ ವರ್ತನೆಯಲ್ಲಿ ಸಾಸಿವೆಯಷ್ಟೂ ಬದಲಾವಣೆ ಕಂಡು ಬಂದಿಲ್ಲ.
ಅಮೆರಿಕನ್ ಅಧಿಕಾರಿಗಳ ದೌರ್ಜನ್ಯ ಎಷ್ಟು ಹೇಯವಾಗಿತ್ತು ಎಂಬುದನ್ನು ತಿಳಿಯಬೇಕಾದರೆ, ಇಂಡಿಯನ್ ಎಕ್ಸ್ಪ್ರೆಸ್ಗೆ ದೇವಯಾನಿ ಕಳಿಸಿರುವ ಮೇಲ್ ಓದಬೇಕು. ಅದರಲ್ಲಿ ದೇವಯಾನಿಯವರ ಮಾತುಗಳು ಹೀಗಿವೆ: 'ನಾನವತ್ತು ಮಗಳನ್ನು ಶಾಲೆಗೆ ಬಿಡಲು ಹೋಗಿದ್ದೆ. ಅಲ್ಲಿಗೆ ದಿಢೀರನೆ ಆಗಮಿಸಿದ ಅಮೆರಿಕದ ಅಧಿಕಾರಿಗಳು, ವೀಸಾ ನಿಯಮಗಳನ್ನು ಉಲ್ಲಂಘಿಸಿ ವಂಚಿಸಿದ ಆರೋಪದಡಿ ನಿಮ್ಮನ್ನು ಬಂಧಿಸುತ್ತೇವೆ ಎಂದರು. ತಕ್ಷಣವೇ ನಾನು ಪರಿಚಯ ಹೇಳಿಕೊಂಡೆ. ನನ್ನ ಗುರುತಿನ ಪತ್ರ ತೋರಿಸಿದೆ. ಅದೆಲ್ಲ ತಮಗೆ ಕಾಣಲೇ ಇಲ್ಲ ಎಂಬಂತೆ ಅಧಿಕಾರಿಗಳು ವರ್ತಿಸಿದರು. ಶಾಲೆಯ ಆವರಣದಲ್ಲಿಯೇ ಕೈಕೋಳ ತೊಡಿಸಿ ಬಂಧಿಸಿಬಿಟ್ಟರು. ಆನಂತರದಲ್ಲಿ, ರಾಜತಾಂತ್ರಿಕ ರಕ್ಷಣೆ ಇದ್ದರೂ ನನ್ನನ್ನು ಬಂಧಿಸಿ ಮಾದಕ ವಸ್ತು ವ್ಯಸನಿಗಳ ಜತೆ ಕೂಡಿ ಹಾಕಿದ್ದರು. ಕೈ ಕೋಳ ತೊಡಿಸಿ ಬಂಧಿಸಿದಾಗ ಹಾಗೂ ವಿವಸ್ತ್ರಗೊಳಿಸಿ ಒಳಾಂಗಗಳನ್ನು ತಪಾಸಣೆ ಮಾಡಿದಾಗ ದುಃಖದಿಂದ ಕುಸಿದು ಹೋಗಿದ್ದೆ.
ಒಂದು ಸಂಗತಿಯನ್ನು ತಪ್ಪದೇ ಗಮನಿಸಬೇಕು. ಅಮೆರಿಕದ ಅಧಿಕಾರಿಗಳಿಂದ ಅವಮಾನಕ್ಕೆ ಒಳಗಾದ ದೇವಯಾನಿ ಖೋಬ್ರಾಗಡೆ, ಅಮೆರಿಕದಲ್ಲಿರುವ ಇತರೆ ಭಾರತೀಯರಂತಲ್ಲ. ಆಕೆ ಅಮೆರಿಕದಲ್ಲಿ ಭಾರತವನ್ನು ಪ್ರತಿನಿಧಿಸುವ ನಂಬರ್.1 ಗ್ರೇಡ್ನ ಅಧಿಕಾರಿ. ರಾಜತಾಂತ್ರಿಕ ಮಟ್ಟದ ಅಧಿಕಾರಿ ಅಂದ ಮೇಲೆ ಅವರಿಗೆ ವಿದೇಶಗಳಲ್ಲಿ ಎಲ್ಲ ರೀತಿಯಲ್ಲೂ ಹಲವು ವಿನಾಯಿತಿಗಳಿರುತ್ತವೆ. ಇದೆಲ್ಲಾ ಗೊತ್ತಿದ್ದರೂ ಅಮೆರಿಕದ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿದ್ದಾರೆ. ಅಷ್ಟೇ ಅಲ್ಲ; ಅಮೆರಿಕದಲ್ಲಿ ಜಾರಿಯಲ್ಲಿರುವ ಕಾನೂನಿನ ಪ್ರಕಾರವೇ ವಿಚಾರಣೆ ನಡೆಸಲಾಗಿದೆ ಎಂದು 'ಸ್ಪಷ್ಟೀಕರಣ' ನೀಡಿದ್ದಾರೆ! ಇಲ್ಲಿ ಒಂದು ವಿಷಯ ನೆನಪಿಸಬೇಕು. ವೀಸಾ ನಿಯಮಗಳನ್ನು ಉಲ್ಲಂಘಿಸಿ ತೆರಿಗೆ ವಂಚಿಸಿದ ಆರೋಪ ಈ ಹಿಂದೆ ಇನ್ಫೋಸಿಸ್ನ ಮೇಲೂ ಬಂದಿತ್ತು. ಆ ಸಂದರ್ಭದಲ್ಲಿ ಹೆಚ್ಚುವರಿ ದಂಡ ಕಟ್ಟಿಸಿಕೊಂಡ ಅಮೆರಿಕನ್ ಅಧಿಕಾರಿಗಳು, ಇಡೀ ಪ್ರಕರಣಕ್ಕೆ ಮಂಗಳ ಹಾಡಿದ್ದರು. ಈಗ ನನ್ನ ಪ್ರಶ್ನೆ ಇಷ್ಟೇ: ದೇವಯಾನಿ ಮತ್ತು ಇನ್ಫೋಸಿಸ್ನವರು ಮಾಡಿರುವುದು ಒಂದೇ ರೀತಿಯ ತಪ್ಪು ಎಂದ ಮೇಲೆ, ಎರಡು ರೀತಿಯ ನ್ಯಾಯ ಹೇಳುವುದೇಕೆ? ಇನ್ಫೋಸಿಸ್ಗೆ ನೀಡಿದ ವಿನಾಯಿತಿಯನ್ನು ದೇವಯಾನಿ ಅವರಿಗೂ ನೀಡಬಹುದಿತ್ತು ತಾನೆ?
ಈ ಮೊದಲೇ ಹೇಳಿದಂತೆ, ಭಾರತದ ಗಣ್ಯರನ್ನೇ ಗುರಿಯಿಟ್ಟುಕೊಂಡು ಅಮೆರಿಕನ್ ಅಧಿಕಾರಿಗಳು ಅವಮಾನಿಸುತ್ತಿರುವುದು ಇದು ಮೊದಲೇನಲ್ಲ. ಹಾಗಿದ್ದರೂ, ಭಾರತೀಯರು ಪ್ರತಿಭಟನೆ ಮಾತಾಡದೆ ಉಳಿದು ಬಿಡುತ್ತಾರೆ. ಮತ್ತೆ ಕೆಲವರು, ಅಮೆರಿಕದಲ್ಲಿ ಇಂಥವೆಲ್ಲ ಮಾಮೂಲು ಬಿಡ್ರೀ ಎಂದು ಮಾತು ತೇಲಿಸುತ್ತಾರೆ. ನಮ್ಮದೇ ನೆಲದ ಪ್ರಜೆಗೆ ಅವಮಾನವಾದರೂ, ಅಂಥ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇದ್ದರೂ ಭಾರತೀಯರು ಏಕೆ ಗಪ್ಚುಪ್ ಆಗಿ ಇರುತ್ತಾರೆ ಎಂಬುದಕ್ಕೆ ಹೀಗೆ ಉತ್ತರಿಸಬಹುದು: ವಿದೇಶಗಳು ನಮಗೆ ನೀಡಬೇಕಾದ ಗೌರವ ಮತ್ತು ನಡೆಸಿಕೊಳ್ಳಬೇಕಾದ ಕ್ರಮ ಹಾಗೂ ಈ ಸಂಬಂಧವಾಗಿ ಇರುವ ಅಂತಾರಾಷ್ಟ್ರೀಯ ಮಟ್ಟದ ರೀತಿ-ನೀತಿಗಳ ಬಗ್ಗೆ ಹೆಚ್ಚಿನ ಭಾರತೀಯರಿಗೆ ತಿಳಿವಳಿಕೆ ಕಡಿಮೆ. ಎರಡನೇ ಕಾರಣವೆಂದರೆ, ನಮ್ಮ ಮಕ್ಕಳ ಭವಿಷ್ಯ ಅಮೆರಿಕದಲ್ಲಿಯೇ ಇದೆ ಎಂಬ ನಂಬಿಕೆಯಲ್ಲಿ ಭಾರತದ ಬಹುಸಂಖ್ಯಾತರು ಇರುವುದು. ಒಬ್ಬ ವಕೀಲ, ಪತ್ರಕರ್ತ, ಉದ್ಯಮಿ, ಮಧ್ಯಮ ವರ್ಗದ ನೌಕರ ಅಥವಾ ಉನ್ನತ ಹುದ್ದೆಯಲ್ಲಿರುವ ಅಧಿಕಾರಿ...ಈ ಎಲ್ಲ ಮಕ್ಕಳೂ ಒಂದೋ ಅಮೆರಿಕದಲ್ಲಿ ನೌಕರಿ ಮಾಡುತ್ತಿರುತ್ತಾರೆ. ಅಥವಾ ಅಲ್ಲಿಗೆ ಹಾರಿ ಹೋಗಲು ತುದಿಗಾಲ ಮೇಲೆ ನಿಂತಿರುತ್ತಾರೆ. ವಾಸ್ತವ ಹೀಗಿರುವಾಗ ಅಮೆರಿಕದ ವಿರುದ್ಧ ಮಾತಾಡಿದರೆ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಬಹುದೇನೋ ಎಂಬ ಅಂಜಿಕೆಯಿಂದ, ಏನೊಂದು ಮಾತಾಡದೆ ಉಳಿದು ಬಿಡುತ್ತಾರೆ. ಮೂರನೇ ಕಾರಣವೆಂದರೆ -ರಾಜತಾಂತ್ರಿಕ ಕಾರಣಗಳನ್ನು ಮುಂದಿಟ್ಟು ವಿದೇಶಗಳು ಅವಮಾನ ಮಾಡಿದಾಗಲೆಲ್ಲ, ಏನೋ ಆಕಸ್ಮಿಕವಾಗಿ ತಪ್ಪಾಗಿರಬಹುದು. ಹೋಗ್ಲಿ ಬಿಡಿ ಎಂದು ಉಡಾಫೆಯ ಮಾತಾಡಿ, ತಪ್ಪು ಮಾಡಿದವರನ್ನು ಕ್ಷಮಿಸಿ ಬಿಡುವ ಉದಾರಗುಣ ಭಾರತೀಯರಿಗೆ ಹುಟ್ಟಿನಿಂದಲೇ ಬಂದು ಬಿಟ್ಟಿದೆ. ವಾಸ್ತವ ಹೀಗಿರುವಾಗ, ಯಾರನ್ನು ದೂರಿ ಏನು ಪ್ರಯೋಜನ?
ಆದರೆ ಅಮೆರಿಕದವರು ಇಂಥ ತಪ್ಪುಗಳನ್ನು ಯಾವತ್ತೂ ಮಾಡುವುದಿಲ್ಲ. ಉದಾಹರಣೆಗೆ, ಪೆಂಟಗಾನ್ ಕಟ್ಟಡದ ಮೇಲಿನ ದಾಳಿಯ ವಿಷಯವನ್ನೇ ಗಮನಿಸಿ. ಆ ಕೃತ್ಯದ ರೂವಾರಿಯಾಗಿದ್ದವನು ಲಾಡೆನ್ ಎಂದು ತಿಳಿದಾಗ, ಅವನನ್ನು ಹೊಡೆದು ಹಾಕುವವರೆಗೂ ಅಮೆರಿಕದ ಸರ್ಕಾರ ವಿಶ್ರಮಿಸಲಿಲ್ಲ. ಲಾಡೆನ್ನನ್ನು ಹುಡುಕಲು ಅವರು ಹತ್ತು ವರ್ಷ ಶ್ರಮಿಸಿದರು. ಅದಕ್ಕಾಗಿ ಕೋಟ್ಯಂತರ ಡಾಲರ್ಗಳನ್ನು ಖರ್ಚು ಮಾಡಿದರು. ಯಾವುದೇ ಸಂದರ್ಭದಲ್ಲೂ 'ಲಾಡೆನ್ ವಿಷಯವಾಗಿ 'ಅಯ್ಯೋ ಪಾಪ' ಎಂಬಂತೆ ಅವರು ಮಾತಾಡಲಿಲ್ಲ. ಆದರೆ, ಭಾರತದ ವಿಷಯದಲ್ಲಿ ಹೀಗೆ ಯೋಚಿಸಲೂ ಸಾಧ್ಯವಿಲ್ಲ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಮುಂಬಯಿನ ತಾಜ್ ಹೋಟೆಲ್ ದುರಂತದ ರೂವಾರಿ ಹಫೀಜ್ ಸಯೀದ್ ಎಂಬಾತನ ನೆಲೆ ಪತ್ತೆ ಹಚ್ಚಲು ನಮಗೆ ಈಗಲೂ ಸಾಧ್ಯವಾಗಿಲ್ಲ. ಸರ್ಕಾರದ ಅತ್ಯುನ್ನತ ಹುದ್ದೆಗಳಲ್ಲಿ ಇರುವ ಹಲವರಿಗೆ ಹಫೀಜ್ನ ಹೆಸರೇ ಗೊತ್ತಿಲ್ಲ!
ಮತ್ತೊಂದು ಸೂಕ್ಷ್ಮವನ್ನು ನಾವಿಲ್ಲಿ ಗಮನಿಸಬೇಕು. ಯಾವುದೋ ಕಾನೂನಿನ ನೆಪ ಹೇಳಿಕೊಂಡು ಅಮೆರಿಕದ ಅಧಿಕಾರಿಗಳು ಮತ್ತು ಸರ್ಕಾರ ಕಿರಿಕಿರಿಗೆ ಮುಂದಾಗುವುದು, ಅದರ ಸಾರ್ವಭೌಮತೆಗೆ ಸವಾಲು ಹಾಕುವಂಥ; ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ನಿರಾಕರಿಸುವ ರಾಷ್ಟ್ರಗಳ ವಿರುದ್ಧ ಮಾತ್ರ. ಭಾರತದ ಗಣ್ಯರನ್ನು ಆಗಿಂದ್ದಾಗ್ಗೆ ತನ್ನ ದೇಶದಲ್ಲಿ ಅವಮಾನಿಸಿ ತೀಟೆ ತೀರಿಸಿಕೊಳ್ಳುವ ಅಮೆರಿಕ, ಪಾಕಿಸ್ತಾನದ ಗಡಿ ಭಾಗಕ್ಕೆ ಡ್ರೋನ್ ಕ್ಷಿಪಣಿಗಳನ್ನು ಹಾರಿಸುತ್ತದೆ! ಇದೇ ಕೆಲಸವನ್ನು ಅಪಘಾನಿಸ್ತಾನದ ಮೇಲೂ ಮಾಡುತ್ತದೆ. ಇದನ್ನು ಆಯಾ ರಾಷ್ಟ್ರಗಳು ವಿರೋಧಿಸಿದರೆ, ಉಗ್ರಗಾಮಿಗಳು ನೆಲೆ ನಿಂತಿರಬಹುದು ಎಂಬ ಅಂದಾಜಿನಿಂದ ಡ್ರೋನ್ ಕ್ಷಿಪಣಿಗಳನ್ನು ಹಾರಿಸಲಾಯಿತು. ಇದರಲ್ಲಿ ಬೇರ್ಯಾವುದೇ ದುರುದ್ದೇಶವಿಲ್ಲ' ಎಂದು ಮತ್ತೆ ಮತ್ತೆ ಮಾತು ಮರೆಸಲು ಮುಂದಾಗುತ್ತದೆ.
ಇರಲಿ. ಈಗ ಮತ್ತೆ ದೇವಯಾನಿ ಖೋಬ್ರಾಗಡೆಯ ವಿಷಯಕ್ಕೆ ಬರೋಣ. ಒಬ್ಬ ರಾಜತಾಂತ್ರಿಕ ಅಧಿಕಾರಿಯನ್ನು ಅಮಾನವೀಯವಾಗಿ ನಡೆಸಿಕೊಳ್ಳಲು ಇದ್ದ ಕಾರಣವಾದರೂ ಏನು ಎಂದರೆ, ಮೊದಲಿಗೆ ಗೋಚರಿಸುವುದು, ನಾವು ಏನು ಮಾಡಿದರೂ ನಡೆಯುತ್ತದೆ ಎಂಬಂಥ ಅಮೆರಿಕನ್ ಅಧಿಕಾರಿಗಳ ಸೊಕ್ಕಿನ ವರ್ತನೆ. ಎರಡನೆಯದು, ಹೇಗೇ ಅವಮಾನಿಸಿದರೂ ಭಾರತದ ಕಡೆಯಿಂದ ತೀವ್ರ ಪ್ರತಿರೋಧ ಬರುವುದಿಲ್ಲ. ಒಂದು ಬಾರಿ ಕ್ಷಮಿಸಿ. ಅಚಾತುರ್ಯದಿಂದ ತಪ್ಪು ನಡೆದು ಹೋಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ' ಎಂಬ ಹೇಳಿಕೆ ನೀಡಿಬಿಟ್ಟರೆ ಭಾರತೀಯರು ಸುಮ್ಮನಾಗಿ ಬಿಡುತ್ತಾರೆ ಎಂಬ ಅಮೆರಿಕನ್ನರ ನಂಬಿಕೆ. ಆದರೆ ಈ ಬಾರಿ ಅವರು ಅಂದುಕೊಂಡಿದ್ದೆಲ್ಲ ಉಲ್ಟಾ ಆಯಿತು. ದೇವಯಾನಿಯ ಪರವಾಗಿ ಇಡೀ ದೇಶ ಕೂಗು ಹಾಕಿತು. ಅಪರೂಪಕ್ಕೆ ನಮ್ಮ ರಾಜಕಾರಣಿಗಳೂ ಪಕ್ಷಬೇಧ ಮರೆತು ಅಮೆರಿಕನ್ ಸರ್ಕಾರದ ಉದ್ಧಟತನವನ್ನು ಖಂಡಿಸಿದರು. ಅಷ್ಟೇ ಅಲ್ಲದೆ, ಭಾರತದಲ್ಲಿದ್ದ ಅಮೆರಿಕನ್ ಅಧಿಕಾರಿಗಳಿಗೆ ನೀಡಲಾಗಿದ್ದ ಸವಲತ್ತುಗಳನ್ನು ಕೂಡಲೇ ಹಿಂದೆ ಪಡೆವ ಧೈರ್ಯವನ್ನು ಕೇಂದ್ರ ಸರ್ಕಾರ ತೋರಿತು.
ದೇವಯಾನಿ ಖೋಬ್ರಾಗಡೆಯ ಪ್ರಕರಣದ ಮೂಲಕ, ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿರುವ ನರೇಂದ್ರ ಮೋದಿಯವರಿಗೂ ಪರೋಕ್ಷ ಎಚ್ಚರಿಕೆ ನೀಡುವ ಮತ್ತೊಂದು ಕೆಲಸವನ್ನು ಅಮೆರಿಕ ಮಾಡಿದೆಯೇನೋ ಎಂಬುದು ಮತ್ತೊಂದು ಊಹೆ. ಸೌದಿಯ ದೊರೆ, ಪಾಕಿಸ್ತಾನದ ಅಧ್ಯಕ್ಷ, ರಷ್ಯಾದ ಪ್ರಧಾನಿ... ಹೀಗೆ ಎಲ್ಲರಿಗೂ ವೀಸಾ ನೀಡಿರುವ ಅಮೆರಿಕ, ನರೇಂದ್ರ ಮೋದಿಯವರಿಗೆ ವೀಸಾ ನೀಡದೆ 'ಆಟ' ಆಡುತ್ತಿದೆ. ಮುಂದೆ, ಚುನಾವಣೆಯ ನಂತರ ಸರ್ಕಾರವೇ ಬದಲಾಗಿ, ಮೋದಿಯವರಿಗೆ ವೀಸಾ ನೀಡಲೇಬೇಕಾಗಿ ಬಂದರೆ, ಆನಂತರದಲ್ಲಿ ತಾನು ಹೇಗೆಲ್ಲ ಆಟ ಆಡಬಲ್ಲೆ ಎಂಬುದನ್ನು ಪರೋಕ್ಷವಾಗಿ ಭಾರತಕ್ಕೆ ಮನವರಿಕೆ ಮಾಡಿಕೊಡಲೆಂದೇ ಅಮೆರಿಕದ ಸರ್ಕಾರ ದೇವಯಾನಿ ಖೋಬ್ರಾಗಡೆಯ ಪ್ರಕರಣವನ್ನು 'ಸೃಷ್ಟಿಸಿದೆ' ಎಂಬ ಮಾತುಗಳೂ ಜೋರಾಗಿಯೇ ಕೇಳಿ ಬರುತ್ತಿವೆ.
ಆದರೆ ಒಂದಂತೂ ಸ್ಪಷ್ಟ: ಪ್ರತಿಯೊಂದು ಅತಿರೇಕದ ವರ್ತನೆಗೂ ಒಂದು ಅಂತ್ಯ ಇದ್ದೇ ಇರುತ್ತದೆ ಎಂಬುದು ದೇವಯಾನಿ ಖೋಬ್ರಾಗಡೆಯ ಪ್ರಕರಣದಿಂದ ಮತ್ತೆ ಸಾಬೀತಾಗಿದೆ. ಬೇಕೆಂದೇ ತಪ್ಪು ಮಾಡಿ,ಆನಂತರದಲ್ಲಿ -'ಸಾರಿ, ಅಧಿಕಾರಿಗಳ ಅವಸರದ ವರ್ತನೆಯಿಂದ ಈ ಪ್ರಮಾದ ಆಗಿಹೋಯಿತು' ಎಂದು ಹೇಳಿಕೆ ನೀಡಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು
ಸಾಧ್ಯವಿಲ್ಲ ಎಂಬುದು ಅಮೆರಿಕಕ್ಕೆ ಈಗಲಾದರೂ ಅರ್ಥವಾಗಿದೆ. ತನ್ನ ನೆಲಕ್ಕೆ ಬಂದಿಳಿಯುವ ವಿದೇಶಿಯರನ್ನು ಗೌರವದಿಂದ ನಡೆಸಿಕೊಳ್ಳದಿದ್ದರೆ ಎಲ್ಲ ರಾಷ್ಟ್ರಗಳಿಂದಲೂ ಛೀಮಾರಿಗೆ ಈಡಾಗಬೇಕಾಗುತ್ತದೆ ಎಂಬ ಮತ್ತೊಂದು ಸತ್ಯವೂ ಅಮೆರಿಕಕ್ಕೆ ಈ ವೇಳೆಗೆ ಅರಿವಾಗಿದೆ.
ಕಾನೂನು ಹಾಗೂ ಸುರಕ್ಷತೆಯ ಹೆಸರು ಹೇಳಿಕೊಂಡು ಎಲ್ಲರನ್ನೂ ಹೆದರಿಸಬಹುದು ಎಂದು ಗಟ್ಟಿಯಾಗಿ ನಂಬಿದ್ದ ಅಮೆರಿಕ, ಇನ್ನು ಮುಂದಾದರೂ ತನ್ನ ವರ್ತನೆ ಬದಲಿಸಿಕೊಂಡರೆ ಅದಕ್ಕೆ ಒಳ್ಳೆಯದು.
- ಆರ್.ಜಗನ್ನಾಥನ್,
ಸಂಪಾದಕರು, ಫಸ್ಟ್ಪೋಸ್ಟ್ ಜಾಲತಾಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


