

ಸಾಮಾನ್ಯವಾಗಿ ನಾವು ಒಂದು ಜೋಕಿಗೆ ಒಂದು ಸಲ ನಗುತ್ತೇವೆ. ಆದರೆ ಕೆಲವರು ಎರಡು ಸಲ ನಗುತ್ತಾರೆ. ಜೋಕನ್ನು ಹೇಳಿದಾಗ (ಅರ್ಥವಾಗಲಿ, ಅರ್ಥವಾಗದಿರಲಿ) ಮೊದಲ ಸಲ ನಗುತ್ತಾರೆ ಹಾಗೂ ಜೋಕು ಅರ್ಥವಾದಾಗ ಎರಡನೆ ಸಲ ನಗುತ್ತಾರೆ-ಇನ್ನು ಕೆಲವರು ನೆನಪಿಸಿಕೊಂಡಾಗಲೆಲ್ಲ ಮೂರನೆ, ನಾಲ್ಕನೆ ಸಲ ನಗುವುದೂ ಉಂಟು.
ಇದು ತಮಾಷೆಯಲ್ಲ. ಕೆಲವರು ಅದೆಷ್ಟು ಕಟ್ಟುನಿಟ್ಟಿನ ವ್ಯಕ್ತಿಗಳೆಂದರೆ ಅವರು ನಿಯಮವನ್ನು ಸ್ವಲ್ಪವೂ ಉಲ್ಲಂಘಿಸುವುದಿಲ್ಲ. ನೂರಕ್ಕೆ ನೂರು ನಿಯಮ ಪಾಲಿಸುತ್ತಾರೆ. ತಮ್ಮ ಕಾಮನ್ಸೆನ್ಸ್ನ್ನು ಪಕ್ಕಕ್ಕೆ ಇಟ್ಟು ನಿಯಮಗಳನ್ನು ಪಾಲಿಸುತ್ತಾರೆ. ಈ ರೀತಿ ನಿಯಮ ಪಾಲಿಸಿದರೆ ಏನಾಗುತ್ತದೆ? ಮೂರು ಪ್ರಸಂಗಗಳನ್ನು ಗಮನಿಸೋಣ.
ಪ್ರಸಂಗ 1: ಗಂಡ ಮನೆಗೆ ಬಂದು ನೋಡ್ತಾನೆ ಅಡುಗೆ ಮನೆಯಲ್ಲೆಲ್ಲಾ ಒಡೆದ ಕಪ್ಗಳು. ಒಂದು ಕ್ಷಣ ಗಾಬರಿಯಾದ. ಬರೀ ಕಪ್ಗಳು ಮಾತ್ರ ಒಡೆದು ಬಿದ್ದಿವೆ. ಹೆಂಡತಿಯನ್ನು ಕರೆದು, 'ಏನಾಯ್ತು. ಇದೇನು? ಎಂದು ಕೇಳಿದ. 'ಈ ಹೊಸ ರುಚಿ ಪುಸ್ತಕ ಸರಿಯಿಲ್ಲ ಅಂತ ಕಾಣುತ್ತದೆ' ಎಂದಳು ಹೆಂಡತಿ. ಗಂಡನಿಗೆ ಅರ್ಥವಾಗಲಿಲ್ಲ. 'ಕಪ್ ಒಡೆದಿರುವುದಕ್ಕೂ, ಹೊಸ ರುಚಿ ಪುಸ್ತಕಕ್ಕೂ ಏನು ಸಂಬಂಧ?' ಎಂದು ಕೇಳಿದ. ಅದಕ್ಕೆ ಹೆಂಡತಿ ಹೇಳಿದಳು- 'ಹಿಡಿಕೆಯಿಲ್ಲದ ಕಪ್ ಅನ್ನು ತೆಗೆದುಕೊಂಡು ಮೂರು ಬಾರಿ ಅಳೆಯಿರಿ ಎಂದು ಕುಕ್ಬುಕ್ನಲ್ಲಿ ಬರೆದಿತ್ತು. ನಾನು ಒಂದೊಂದೇ ಕಪ್ ತೆಗೆದುಕೊಂಡು ಅದರ ಹಿಡಿಕೆಯನ್ನು ಮುರಿಯಲು ಪ್ರಯತ್ನಿಸಿದೆ. ಪ್ರತಿಸಲ ಹೀಗೆ ಪ್ರಯತ್ನಿಸಿದಾಗಲೂ ಕಪ್ ಒಡೆದು ಹೋಗುತ್ತಿತ್ತು. ಈ ರೀತಿ ಹದಿನೆಂಟು ಕಪ್ಗಳು ಒಡೆದು ಹೋದವು.'
ಪ್ರಸಂಗ 2: ಡೋರ್ಬೆಲ್ ಸದ್ದಾಯಿತು. ಮನೆಯ ಆಳು ಬಾಗಿಲ ಬಳಿ ಹೋಗಿ ಗ್ಲಾಸಿನ ರಂಧ್ರದ ಮೂಲಕ ಹೊರಗಿರುವವ ಯಾರೆಂದು ನೋಡಿದ. ಅವನ ಕೈಯಲ್ಲೊಂದು ಬ್ಯಾಗ್ ಇತ್ತು. ನಿಧಾನವಾಗಿ ಬಾಗಿಲು ತೆರೆದ ಆಳು, 'ಬಾಗಿಲ ಬಳಿಯೇ ಛತ್ರಿಯನ್ನು ಬಿಟ್ಟು ಬನ್ನಿ' ಎಂದ. ಅದಕ್ಕೆ ಅತಿಥಿ, 'ನಾನು ಛತ್ರಿಯನ್ನು ತಂದಿಲ್ಲವಲ್ಲ' ಎಂದ, ಅದಕ್ಕೆ ಮನೆಯ ಆಳು, 'ಮನೆಗೆ ಹೋಗಿ ಛತ್ರಿ ತೆಗೆದುಕೊಂಡು ಬನ್ನಿ. ಯಾಕೆಂದರೆ ಮನೆಯ ಮಾಲೀಕರು ನನಗೆ ಕಟ್ಟುನಿಟ್ಟಾಗಿ ಹೇಳಿದ್ದಾರೆ-ಯಾರೇ ಬರಲಿ, ಮನೆ ಒಳಗೆ ಬರುವುದಕ್ಕಿಂತ ಮೊದಲು ಅವರ ಛತ್ರಿಯನ್ನು ಬಾಗಿಲ ಬಳಿಯೇ ಬಿಟ್ಟುಬರಬೇಕು. ಇಲ್ಲದಿದ್ದರೆ ಒಳಗೆ ಬಿಡಬೇಡ ಎಂದು ಹೇಳಿದ್ದಾರೆ. ಛತ್ರಿ ತರದಿದ್ದರೆ, ಮನೆಗೆ ಹೋಗಿ ತೆಗೆದುಕೊಂಡು ಬನ್ನಿ ಹಾಗೂ ಅದನ್ನು ಬಾಗಿಲ ಬಳಿಯೇ ಇಟ್ಟು ಬನ್ನಿ.'
ಪ್ರಸಂಗ 3: ಬ್ಯಾಂಕ್ ದರೋಡೆ ಮಾಡಿ ಪರಾರಿಯಾಗುತ್ತಿದ್ದ ನಾಲ್ವರು ದರೋಡೆಕೋರರನ್ನು ಪೊಲೀಸರು ಬೆನ್ನಟ್ಟಿ ಹೊರಟರು. ಬೆಂಗಳೂರಿನಿಂದ ಅವರನ್ನು ಚೇಸ್ ಮಾಡಿದರೆ ದಾವಣಗೆರೆ, ಹರಿಹರ ದಾಟಿದರೂ ಹಿಡಿಯಲು ಆಗಲಿಲ್ಲ. ಪೊಲೀಸರಿಗಿಂತ ಎರಡು ಕಿ.ಮೀ ಮುಂದೆ ದರೋಡೆಕೋರರ ಕಾರು ಹೋಗುತ್ತಿತ್ತು. ರಾಣೆಬೆನ್ನೂರು, ಹಾವೇರಿ ದಾಟಿ ಹುಬ್ಬಳ್ಳಿ ತಲುಪಬೇಕು ಎನ್ನುವಷ್ಟರಲ್ಲಿ ಪೊಲೀಸರು ದರೋಡೆಕೋರರನ್ನು ಹಿಡಿದೇ ಬಿಟ್ಟರು ಎನ್ನುವಾಗ, ಪೊಲೀಸ್ ಜೀಪ್ ಡ್ರೈವರ್ ವಾಹನ ವೇಗವನ್ನು ಕಡಿಮೆ ಮಾಡಿ ಪಕ್ಕದ ಪೆಟ್ರೋಲ್ ಬಂಕ್ನಲ್ಲಿ ತಂದು ನಿಲ್ಲಿಸಿದ. 'ಪೆಟ್ರೋಲ್ ಖಾಲಿಯಾಯ್ತಾ, ಅಯ್ಯೋ, ಎಂಥ ಗತಿ ಬಂತಪ್ಪ?' ಎಂದು ಇನ್ಸ್ಪೆಕ್ಟರ್ ಹಣೆಹಣೆ ಚಚ್ಚಿಕೊಳ್ಳುತ್ತಾ, ಸ್ಪೀಡೋಮೀಟರ್ ನೋಡಿದ. ಪೆಟ್ರೋಲ್ ಖಾಲಿ ಆಗಿರಲಿಲ್ಲ. ಇನ್ನೂ 80 ಕಿ.ಮೀ ಹೋಗುವಷ್ಟು ಪೆಟ್ರೋಲ್ ಇತ್ತು. ಆದರೂ ವಾಹನವನ್ನು ನಿಲ್ಲಿಸಿದ್ದೇಕೆ? ಎಂದು ಇನ್ಸ್ಪೆಕ್ಟರ್ ಡ್ರೈವರ್ನನ್ನು ಗದರಿದ. ಅದಕ್ಕೆ ಡ್ರೈವರ್ ಹೇಳಿದ-'ಪ್ರತಿ 600 ಕಿಮೀ.ಗೆ ಎಂಜಿನ್ ಆಯಿಲ್ ಬದಲಿಸಬೇಕೆಂಬ ನಿಯಮವಿರುವುದರಿಂದ ಜೀಪ್ ನಿಲ್ಲಿಸಿದೆ.'
ಜೋಕು ಒಂದು, ನಗು ಎರಡು
ಸಾಮಾನ್ಯವಾಗಿ ನಾವು ಒಂದು ಜೋಕಿಗೆ ಒಂದು ಸಲ ನಗುತ್ತೇವೆ. ಆದರೆ ಕೆಲವರು ಎರಡು ಸಲ ನಗುತ್ತಾರೆ. ಜೋಕನ್ನು ಹೇಳಿದಾಗ (ಅರ್ಥವಾಗಲಿ, ಅರ್ಥವಾಗದಿರಲಿ) ಮೊದಲ ಸಲ ನಗುತ್ತಾರೆ ಹಾಗೂ ಜೋಕು ಅರ್ಥವಾದಾಗ ಎರಡನೆ ಸಲ ನಗುತ್ತಾರೆ-ಇನ್ನು ಕೆಲವರು ನೆನಪಿಸಿಕೊಂಡಾಗಲೆಲ್ಲ ಮೂರನೆ, ನಾಲ್ಕನೆ ಸಲ ನಗುವುದೂ ಉಂಟು. ಇಲ್ಲೊಂದು ಜೋಕಿದೆ. ಅದರ ವೈಶಿಷ್ಟ್ಯವೇನೆಂದರೆ ಒಂದರಲ್ಲೇ ಎರಡು ಜೋಕುಗಳಿವೆ.
ಹೆಂಡತಿ- ಒಂದು ವೇಳೆ ನಾನೇನಾದರೂ ಯಾವುದಾದರೂ ರಾಕ್ಷಸನನ್ನು ಮದುವೆಯಾಗಿದ್ದಿದ್ದರೂ ಇಷ್ಟೊಂದು ಕಷ್ಟಗಳು ಅನುಭವಿಸುತ್ತಿರಲಿಲ್ಲ.
ಗಂಡ- ಅಯ್ಯೋ ಹುಚ್ಚಿ, ರಕ್ತಸಂಬಂಧಿಗಳಲ್ಲಿ ಮದುವೆ ಆಗುತ್ತಾ ಹೇಳು?
ಈ ಜೋಕಿಗೆ ಎಲ್ಲರೂ ಬಿದ್ದು ಬಿದ್ದು ನಗುತ್ತಾರೆ. ಇಲ್ಲಿಗೆ ಜೋಕು ಮುಗಿಯಿತು. ಆದರೆ ಜೋಕು ಹೇಳಿದವನು ಕೊನೆಯಲ್ಲಿ ಇನ್ನೊಂದು ಮಾತು ಹೇಳುತ್ತಾನೆ- ಅಂದ ಹಾಗೆ ಗಂಡನ ಹೆಸರು ಸಂತಾನೂಅಲ್ಲ, ಬಂತಾನೂ ಅಲ್ಲ. ಯಾವುದೇ ಸರ್ದಾರ್ಜಿ ಗಂಡ ಇಂಥ ಮಾತನ್ನು ಹೇಳಲು ಸಾಧ್ಯವಿಲ್ಲ.
ಕೊನೆಯವರೆಗೂ ಓದಬೇಕು...
ಕೆಲಸ ಮುಗಿಸಿಕೊಂಡು ತಡರಾತ್ರಿ ಮನೆಗೆ ಬಂದ ಆಕೆಗೆ ಬೆಡ್ರೂಮಿನಲ್ಲಿ ಏನೋ ಸದ್ದು ಕೇಳಿಸಿತು. ನಿಧಾನಕ್ಕೆ ಹೆಜ್ಜೆ ಹಾಕುತ್ತಾ ಅಷ್ಟೇ ನಿಧಾನವಾಗಿ ಬಾಗಿಲು ತಳ್ಳಿ ಒಳಗೆ ಇಣುಕಿದಳು. ಹೊದಿಕೆಯಡಿಯಿಂದ ಹೊರಬಿದ್ದ ನಾಲ್ಕು ಕಾಲುಗಳನ್ನು ನೋಡಿ ಆಕೆ ಹೌಹಾರಿಬಿಟ್ಟಳು! ತನ್ನ ಗಂಡ ಇನ್ನೊಬ್ಬ ಹೆಂಗಸಿನೊಡನೆ ಮಾತನಾಡಿದರೂ ಉರಿದುಬೀಳುತ್ತಿದ್ದವಳು, ಇಂಥದ್ದನ್ನೆಲ್ಲ ಸಹಿಸುತ್ತಾಳೆಯೇ? ಕೂಡಲೇ ಬಾಗಿಲ ಹಿಂದೆ ಇದ್ದ ಕ್ರಿಕೆಟ್ ಬ್ಯಾಟ್ ಎತ್ತಿಕೊಂಡು ಮಲಗಿದ್ದ ಆ ಇಬ್ಬರನ್ನು ಹಿಗ್ಗಾಮುಗ್ಗ ಬಡಿದಳು. ಮುಸುಕಿನಡಿಯಿಂದ ಬರೀ ನರಳಾಟಗಳ ನರ್ತನ!
ಭರ್ಜರಿ ಬ್ಯಾಟಿಂಗ್ ಆಡಿದ ಕಾರಣ ಆಕೆಗೆ ಬಾಯಾರಿಕೆಯಾಯಿತು. ಹೇಗೋ ಸಾವರಿಸಿಕೊಂಡು ನೀರು ಕುಡಿಯುವುದಕ್ಕೆ ಅಂತ ಕಿಚನ್ಗೆ ಹೋಗಿ ನೋಡುತ್ತಾಳೆ, ಅಲ್ಲಿ ಆಕೆಯ ಪತಿ ಮಹಾಶಯ ನಿಂತಿದ್ದಾನೆ! ಆಕೆಯನ್ನು ನೋಡುತ್ತಿದ್ದಂತೆಯೇ ಪತಿ ಖುಷಿಯಿಂದ ಹೇಳಿದ: "ಹಾಯ್ ಡಾರ್ಲಿಂಗ್... ನಿನ್ನ ಅಪ್ಪ, ಅಮ್ಮ ಬಂದಿದ್ದಾರೆ. ನಮ್ಮ ಬೆಡ್ರೂಮಲ್ಲೇ ಮಲಗಿದ್ದಾರೆ. ಹೋಗಿ ಮಾತಾಡಿಸು!"
ಓಶೋ ಹೇಳಿದ ಕಥೆ
ಓದುಗ ಮಿತ್ರ ಶೃಂಗೇರಿಯ ಪ್ರಭುಪ್ರಸಾದ್ ನಡುತೋಟ, ಓಶೋ ಅವರ Vedanta: The Ultimate Truth ಗ್ರಂಥದಲ್ಲಿ ಉಲ್ಲೇಖವಾಗಿರುವ ಕಥೆಯೊಂದನ್ನು ಕಳುಹಿಸಿಕೊಟ್ಟಿದ್ದಾರೆ. ನೀವೂ ಓದಿ...
ದೆಹಲಿಯಲ್ಲಿ ಒಬ್ಬರು ಮಹಾನ್ (?) ನೇತಾರರಿದ್ದರು. ಅವರು ಮುಲ್ಲಾ ನಸರುದ್ದೀನ್ ಮೇಲೆ ಒಂದು ದಾವೆ ಹೂಡಿದ್ದರು. ಅವರು ನ್ಯಾಯಾಲಯದಲ್ಲಿ ಹೀಗೆ ಹೇಳಿದರು: "ಈ ಮುಲ್ಲಾ ನಸರುದ್ದೀನ್ ನನ್ನನ್ನು ಸಾರ್ವಜನಿಕವಾಗಿ ಅಪಮಾನಿಸಿದ್ದಾನೆ. ಇವನು ಎಲ್ಲರೆದುರಿಗೆ ನನ್ನನ್ನು ಕತ್ತೆಯೆಂದು ಕರೆದಿದ್ದಾನೆ." ಆ ನೇತಾರ ಪ್ರಬಲನಾಗಿದ್ದವನು. ಹಾಗಾಗಿ ನ್ಯಾಯಾಧೀಶರು ಮುಲ್ಲಾ ನಸರುದ್ದೀನ್ನನ್ನು ಕೂಡಲೇ ನ್ಯಾಯಾಲಯಕ್ಕೆ ಕರೆಸಿ ಹೇಳಿದರು: "ಇದು ಒಳ್ಳೆಯ ಲಕ್ಷಣವಲ್ಲ. ನೀನು ಇದಕ್ಕಾಗಿ ಶಿಕ್ಷೆ ಅನುಭವಿಸಬೇಕಾಗುತ್ತದೆ."
ಆಗ ನಸರುದ್ದೀನ್ ಹೇಳಿದ: "ನೇತಾರರನ್ನು ಕತ್ತೆಯೆಂದು ಕರೆಯುವುದು ಅಪರಾಧವೆಂದು ನನಗೆ ತಿಳಿದಿರಲಿಲ್ಲ. ಹಾಗಾಗಿ ನನ್ನನ್ನು ಈ ಬಾರಿ ಕ್ಷಮಿಸಿಬಿಡಿ. ಈ ತಪ್ಪನ್ನು ನಾನು ಇನ್ನೆಂದೂ ಮಾಡುವುದಿಲ್ಲ." ಅವನನ್ನು ನ್ಯಾಯಾಲಯವು ಕ್ಷಮಿಸಿತು. ಹಾಗೂ ಅವನ ತಪ್ಪೊಪಿಗೆಯಿಂದ ನೇತಾರನೂ ಸಮಾಧಾನ ಹೊಂದಿದನು.
ಹೊರಡುವ ಮುನ್ನ ನಸರುದ್ದೀನ್ ನ್ಯಾಯಾಧೀಶರನ್ನು ಕೇಳಿದ: "ಆದರೆ ಮಹಾಸ್ವಾಮಿ, ನಾನೊಂದು ಕತ್ತೆಯನ್ನು ನೇತಾರನೆಂದು ಕರೆದರೆ ಅದಕ್ಕೆ ನಿಮ್ಮ ಆಕ್ಷೇಪಣೆಯೇನಾದರೂ ಇದೆಯೇ?" ಈ ಪ್ರಶ್ನೆಕೇಳಿ ನ್ಯಾಯಾಧೀಶರು ನಕ್ಕು ಉತ್ತರಿಸಿದರು "ತೊಂದರೆಯೇನೂ ಇಲ್ಲ. ಆದರೆ ಆ ಕತ್ತೆ ನ್ಯಾಯಾಲಯಕ್ಕೆ ಬಂದು ಫಿರ್ಯಾದು ಸಲ್ಲಿಸಬಾರದು ಅಷ್ಟೇ! ಯಾವ ಕತ್ತೆಯೂ ಇದಕ್ಕೆ ಆಕ್ಷೇಪಣೆ ಸಲ್ಲಿಸಲಾರದು. ಹಾಗಾಗಿ ನಿನಗೆ ಇಷ್ಟವಾಗುವಂತಿದ್ದರೆ ಯಾವ ಕತ್ತೆಗೆ ಬೇಕಾದರೂ ನೇತಾರನೆಂದು ಕರಿ. ಅದರ ಬಗ್ಗೆ ನಮದೇನೂ ತಕರಾರಿಲ್ಲ."
ತಕ್ಷಣ ಮುಲ್ಲಾ ನಸರುದ್ದೀನ್, ಆ ನೇತಾರನ ಕಡೆ ತಿರುಗಿ, ಅಲ್ಲಿ ನೆರೆದವರಿಗೆಲ್ಲಾ ಕೇಳಿಸುವಂತೆ ಹೇಳಿದ: "ನೇತಾರರೇ, ನೀವು ಹೇಗಿದ್ದೀರಿ?!"
ಮೋದಿ ಕುರಿತು ಮೆಹ್ತಾ
'ನನ್ನಂಥ ಹಳೆಯ ಸ್ಯೂಡೊ ಸೆಕ್ಯುಲರಿಸ್ಟೇ, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಸಿದ್ಧರಾಗಿರಿ ಎಂದು ಹೇಳುವಾಗ ನೀವದನ್ನು ನಂಬಲೇಬೇಕಾಗುತ್ತದೆ' ಹೀಗೆಂದೇ ತಮ್ಮ ಇತ್ತೀಚಿನ ಅಂಕಣದ ಮೊದಲ ವಾಕ್ಯ ಬರೆದಿದ್ದಾರೆ ಖ್ಯಾತ ಪತ್ರಕರ್ತ ವಿನೋದ್ ಮೆಹ್ತಾ. ನಂತರ ತಮ್ಮ ಎಂದಿನ ಶೈಲಿಯಲ್ಲಿ, 'ಮೋದಿ ಏಕಾಧಿಕಾರದ ಗುಂಗಿನಿಂದ ಹೊರಬರದಿದ್ದರೆ ಭಾರತವನ್ನು ನಿಭಾಯಿಸುವುದು ಕಷ್ಟ, ಅವರು ಈ ಹಂತದಲ್ಲಿ ವಾಜಪೇಯಿ ಅವರನ್ನು ಅನುಸರಿಸಬೇಕು' ಎಂದೆಲ್ಲ ಸಲಹೆ ನೀಡಿರುವ ಮೆಹ್ತಾ, ತಾವೇ ಪ್ರತಿನಿಧಿಸುವ ಮಾಧ್ಯಮ ಸಾಮ್ರಾಜ್ಯದ ಆತಂಕವನ್ನು ತೆರೆದಿಟ್ಟಿರುವ ರೀತಿ ಮಜವಾಗಿದೆ. 'ಮೀಡಿಯಾ ಬಿವೇರ್' ಎಂಬ ಶೀರ್ಷಿಕೆಯಲ್ಲಿ ಅವರು ಹೀಗೆಲ್ಲ ಬರೆಯುತ್ತಾರೆ: ಮೋದಿ ಸೇಡು ತೀರಿಸಿಕೊಳ್ಳುವುದಕ್ಕೆ ಪ್ರಯತ್ನಪಡಬಹುದಾದ ಒಂದು ವಲಯ ಎಂದರೆ ಮಾಧ್ಯಮವೇ. ಅದರಲ್ಲೂ ಇಂಗ್ಲಿಷ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ ಹೆದರಲೇಬೇಕಿದೆ. ನನಗೆ ತಿಳಿದಿರುವಂತೆ ಇಂಗ್ಲಿಷ್ನ ಎಲ್ಲ ಸಂಪಾದಕರೊಂದಿಗೂ ಮೋದಿ ಕಿತ್ತಾಡಿದ್ದಾರೆ. ಕೆಲವರ ವಿರುದ್ಧ ಕೋರ್ಟ್ ಕೇಸನ್ನೂ ದಾಖಲಿಸಿದ್ದಾರೆ. ಮೋದಿ ಎಲ್ಲವನ್ನೂ ಮರೆತು ಕ್ಷಮಿಸಬಹುದಾದ ಅಸಾಮಿ ಅಲ್ಲವಾದ್ದರಿಂದ ನನ್ನನ್ನೂ ಸೇರಿಸಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕಾಗಿದೆ. ಆದರೆ ಇಲ್ಲೂ ಮೋದಿ ಆಶ್ಚರ್ಯಕರ ನಡೆಯನ್ನೇ ಇಡಬಹುದು. ಯಾವುದಕ್ಕೂ ಕಾದು ನೋಡೋಣ. ಮೋದಿಯವರ ಸಿಟ್ಟಿನಿಂದ ತಪ್ಪಿಸಿಕೊಳ್ಳಬಹುದಾದ ಏಕೈಕ ಆಂಗ್ಲ ಸಂಪಾದಕ ಎಂದರೆ ನನ್ನ ಸನ್ಮಿತ್ರ ಚಂದನ್ ಮಿತ್ರ. ಭಾರತೀಯ ರಾಜಕಾರಣದ ಪೂರ್ಣ ಚಿತ್ರಣಕ್ಕೆ ಅವರ ಸಂಪಾದಕತ್ವದ 'ಪಯೋನೀರ್'ನ ಓದು ಕಡ್ಡಾಯ. ಚಂದನ್ಗೆ ಲಂಚರೂಪದಲ್ಲಿ ಷಿವಾಸ್ ರಿಗಲ್ ಹೆಂಡದ ಬಾಟಲಿಯೊಂದನ್ನು ಕಳುಹಿಸಿ ಸಂಬಂಧಪಟ್ಟವರ ಕಿವಿಯಲ್ಲಿ ನನ್ನ ಬಗ್ಗೆ ಒಳ್ಳೆ ಮಾತುಗಳನ್ನು ಬೀಳಿಸುವಂತೆ ನೋಡಿಕೊಳ್ಳಲು ನಾನು ಯೋಜಿಸಿದ್ದೇನೆ!
- ವಿಶ್ವೇಶ್ವರ ಭಟ್