ದೆಹಲಿ-ಬೆಂಗಳೂರು: ಕಾಂಗ್ರೆಸ್ ಗೊಂದಲದ ಗೂಡು

2013ರ ಕೊನೆಯ ದಿನಗಳಲ್ಲಿ ದೆಹಲಿ, ಬೆಂಗಳೂರುಗಳಲ್ಲಿ ಕಾಂಗ್ರೆಸ್...
Updated on: 

2013ರ ಕೊನೆಯ ದಿನಗಳಲ್ಲಿ ದೆಹಲಿ, ಬೆಂಗಳೂರುಗಳಲ್ಲಿ ಕಾಂಗ್ರೆಸ್ ನಿಜವಾಗಲೂ ಗೊಂದಲದಲ್ಲಿತ್ತು. ಹಲವು ಪ್ರಮುಖ ರಾಜಕೀಯ ವಿವಾದಗಳನ್ನು ಕುರಿತು ದೇಶದ ಅತಿ ದೊಡ್ಡ ಹಾಗೂ ಅತಿ ಹಳೆಯ (ಅಲ್ಲಿ ಈಗ ಅಧಿಕಾರದಲ್ಲಿರುವವರು ತೀರ ಹೊಸಬರೇ ಆಗಿರಬಹುದು) ರಾಜಕೀಯ ಪಕ್ಷ ಹೊಚ್ಚ ಸವಾಲುಗಳನ್ನೇ ಎದುರಿಸುತ್ತಿದೆ.
ಸಂಕ್ರಮಣ ಕಳೆದ ಅನಂತರ, ಜನವರಿ 17 ರಂದು ದೆಹಲಿಯಲ್ಲಿ ಕಾಂಗ್ರೆಸ್ನ ಎಐಸಿಸಿ ಅಧಿವೇಶನದಲ್ಲಿ ಎಲ್ಲ ಸಮಸ್ಯೆಗಳೂ ಬಗೆಹರಿಯುವ ಪವಾಡ ಸದೃಶ ಸಾಧನೆಯನ್ನು ಕಾಂಗ್ರೆಸ್ಸಿಗರು ನಿರೀಕ್ಷಿಸುತ್ತಿದ್ದಾರೆ. ಈಗ ಕಾಂಗ್ರೆಸ್ಸಿನ ಎಲ್ಲ ಗೊಂದಲಕ್ಕೂ ಉತ್ತರ ಭಾರತದ ದೊಡ್ಡ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪರಾಭವ ಹಾಗೂ ದೆಹಲಿಯಲ್ಲಿನ ಹೀನಾಯ ಸೋಲಿನ ಅನಂತರ ನಿಜವಾಗಲೂ ಹೊಣೆಗಾರಿಕೆಯನ್ನು ಹೊರಬೇಕಾದವರು ತಬ್ಬಿಬ್ಬಾಗಿದ್ದಾರೆ.
ಕಾಂಗ್ರೆಸ್ಸಿಗರಿಗೇ ಅರ್ಥವಾಗದ ರೀತಿಯಲ್ಲಿ, ಹೆಚ್ಚು ಕಡಿಮೆ ದಿಢೀರ್ ಎನ್ನುವಂತೆ, ಪ್ರಧಾನಿ ಮನಮೋಹನ ಸಿಂಗ್ ಪರದೆಯ ಹಿಂದಕ್ಕೆ ಸರಿಯಲು ಸಿದ್ಧರಾಗಿದ್ದಾರೆ. ಅವರ ಮಾತು ಕಡಿಮೆಯಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಕೂಡಾ ದಿಢೀರ್ ಎನ್ನುವಂತೆ ತಮ್ಮ ಪುತ್ರ ರಾಹುಲ್ ಗಾಂಧಿಗೆ ಪಟ್ಟ ಕಟ್ಟಿ (ಜನವರಿ 17 ಪಟ್ಟಾಭಿಷೇಕ) ತಾವು ಮೌನವ್ರತ ಹಿಡಿದಿದ್ದಾರೆ. ಇದ್ದಕ್ಕಿದ್ದಂತೆ ರಾಹುಲ ಬ್ರಿಗೇಡ್ ಚುರುಕಾಗಿದೆ. ರಾಜಸ್ಥಾನ, ಮಧ್ಯ ಪ್ರದೇಶ, ದೆಹಲಿ ಚುನಾವಣೆಯಲ್ಲಿ ರಾಹುಲ್ ಬ್ರಿಗೇಡ್ನ ಸಚಿನ್ಫೈಲಟ್, ಜ್ಯೋತಿರಾದಿತ್ಯ ಸಿಂಧ್ಯ ಹಾಗೂ ಇತರರು ತಮ್ಮ ಸರ್ಕಾರದ ಮಂತ್ರಿ ಸ್ಥಾನದ ಕರ್ತವ್ಯಗಳನ್ನು ಮರೆತು ಚುನಾವಣೆ ಪ್ರಚಾರದಲ್ಲಿ ದುಡಿದಿದ್ದು ನಿಜ. ಚುನಾವಣೆಯಲ್ಲಿ ಸೋಲು- ಗೆಲವು ಇದ್ದಿದ್ದೇ. ಅದನ್ನೇ ದೊಡ್ಡದನ್ನಾಗಿ ಮಾಡಬೇಕಾಗಿಲ್ಲ. ಆದರೆ ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರ ಸನ್ನಿಧಾನದಲ್ಲೇ, ದೆಹಲಿಯಲ್ಲಿ ಚುನಾವಣೆಯಲ್ಲಿ ಪಕ್ಷ ಸೋತರೂ, ಸರ್ಕಾರದ ರಚನೆ ಯಾರಿಂದಲೂ ಸಾಧ್ಯವೇ ಇಲ್ಲವೆನ್ನುವ ಸ್ಥಿತಿಯಲ್ಲೂ ಅರವಿಂದ ಕೇಜ್ರಿವಾಲ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರ ಸ್ಥಾಪಿಸುವುದಾದರೆ, ಅದಕ್ಕೆ ಬೆಂಬಲ ಕೊಡುವ ನಿರ್ಧಾರ ಪ್ರಕಟವಾಗಿದ್ದರೂ, ನಿಜವಾಗಲೂ ಆ ನಿರ್ಧಾರವನ್ನು ಕೈಗೊಂಡವರು ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ. ಶೀಲಾ ದೀಕ್ಷಿತ್ ಅವರೇನೋ ಅದು ಷರತ್ತುಬದ್ಧ ಬೆಂಬಲ ಎಂದು ಹೇಳಿ ಸುಮ್ಮನಾಗಿದ್ದಾರೆ. ಕೆಲವು ಕಾರ್ಯಕರ್ತರು ಈ ನಿರ್ಧಾರವನ್ನು ಪ್ರತಿಭಟಿಸಿದ್ದಾರೆ. ಅವರಿಗೆ ಯಾರ ಪ್ರಚೋದನೆ ಇತ್ತೋ ಗೊತ್ತಿಲ್ಲ. ಹಾಗಿದ್ರೆ ದೆಹಲಿಯಲ್ಲೇ ನಾಯಕರೆನಿಸಿಕೊಂಡವರ ನಡುವೆ ಪರಸ್ಪರ ಸಮಾಲೋಚನೆಯ ವ್ಯವಸ್ಥೆಯೇ ಕುಸಿದು ಬಿದ್ದಿದೆಯೇ? ಈಗ ರಾಹುಲ ಗಾಂಧಿ ಹಾಗೂ ಕಾಂಗ್ರೆಸ್ ಪರವಾಗಿ ಚಿಂತನೆ ನಡೆಸುವ ಚಾವಡಿಯ ಮಾಲಿಕರು ಯಾರು?: ಹಿಂದೆ ಕಾಂಗ್ರೆಸ್ಸಿನಿಂದ ಸ್ವಲ್ಪ ದೂರ ನಿಂತು ರಾಷ್ಟ್ರೀಯ ಸಲಹಾ ಸಮಿತಿಯ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ನಿಜವಾದ ಮೂರನೆಯ ರಾಜಕೀಯ ಶಕ್ತಿಯ ಚಿಂತನೆಗೆ ಬೆಂಬಲ ನೀಡಿದ್ದೂ ನಿಜ. ಆದರೆ ಈಗ ಆ ಸಮಿತಿಯೂ ಸದ್ದು ಮಾಡುತ್ತಿಲ್ಲ.  ಕಾರ್ಗಿಲ್ ಸಮರದಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ಪತ್ನಿಯರಿಗೆಂದು ರೂಪಿಸಿದ್ದ ಆದರ್ಶ ಹೌಸಿಂಗ್ ಕಾಂಪ್ಲೆಕ್ಸ್ನ ವಸತಿ ಯೋಜನೆಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಸೇನೆಯ ಹಿರಿಯರು ಅವ್ಯವಹಾರ ನಡೆಸಿದ ವಿಚಾರದಲ್ಲಿ ತನಿಖೆ ನಡೆಸಿದ್ದ ನ್ಯಾಯಾಂಗ ಆಯೋಗದ ವರದಿಯನ್ನು ಮಹಾರಾಷ್ಟ್ರ ಸರ್ಕಾರ ಕಸದ ಬುಟ್ಟಿಗೆ ಎಸೆದಿದ್ದಕ್ಕೆ ಈಗ ವಿವರಣೆ ಕೊಡುವವರು ಯಾರು? ದೆಹಲಿ ನಾಯಕರ ಹೊಣೆಗಾರಿಕೆ ಇಲ್ಲವೇ? ಆಂಧ್ರ ಪ್ರದೇಶದಲ್ಲಿ ತೆಲಂಗಾಣದ ಸಮಸ್ಯೆಯನ್ನು ಉಲ್ಬಣಗೊಳಿಸಿ, ತೆಲಂಗಾಣ- ಸೀಮಾಂಧ್ರ ಪ್ರದೇಶಗಳಲ್ಲಿ ಗೊಂದಲ ಸೃಷ್ಟಿಸಿ, ಅನಂತರ ಅದರ ನಿವಾರಣೆಗೆ ಸೂಕ್ತ ಮಾರ್ಗದರ್ಶನಕ್ಕಾಗಿ ತೊಳಲಾಡುತ್ತಿರುವವರು ಯಾರು?
ಕಳೆದ (2009) ಲೋಕಸಭೆ ಚುನಾವಣೆಯಲ್ಲಿ ಆಂಧ್ರದಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಸುಗ್ಗಿ ಸಿಕ್ಕಿತ್ತು. ಈಗ ಅಭ್ಯರ್ಥಿಗಳನ್ನು ಹುಡುಕುವುದೇ ಕಷ್ಟವಾಗಿದೆ. ಆಂಧ್ರದ ಎಂ.ಪಿ.ಗಳು, ಲೋಕಸಭೆಯಲ್ಲಿ ಇತರ ಪಕ್ಷಗಳು ಸಲ್ಲಿಸಿದ್ದ ಅವಿಶ್ವಾಸ ಸೂಚಕ ನಿರ್ಣಯಕ್ಕೆ ಸಹಿ ಹಾಕಿದ್ದರೂ, ಅದನ್ನು ಸಹಿಸಿಕೊಂಡಿರಬೇಕಾದ ಸ್ಥಿತಿ ಪಕ್ಷದ ನಾಯಕತ್ವಕ್ಕೆ ಬಂದಿದೆ. ದೇಶದ ಅತಿ ದೊಡ್ಡ ರಾಜ್ಯಗಳಲ್ಲಿ (ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು) ಕಾಂಗ್ರೆಸ್ಸಿಗೆ ತನ್ನ ಸಂಗಾತಿ ಪಕ್ಷಗಳು ಯಾವುವು ಎನ್ನುವುದೇ ಗೊತ್ತಿರುವಂತಿಲ್ಲ.

ಕರ್ನಾಟಕ: ಗೊತ್ತುಗುರಿ ಇಲ್ಲ: ಕರ್ನಾಟಕದಲ್ಲಿ ಕಾಂಗ್ರೆಸ್ನ ಅತ್ಯಂತ ಶಕ್ತಿಶಾಲಿ (ಸಂಖ್ಯಾಬಲದ ದೃಷ್ಟಿಯಿಂದ) ಸರ್ಕಾರವಿದೆ. ಆದರೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅತ್ಯಂತ ಹುರುಪಿನಿಂದ ಅಭಿವೃದ್ಧಿ ಮುಖವಾಗಿ ಸಾಗಬೇಕಾಗಿದ್ದ ಸರ್ಕಾರದಲ್ಲಿ ಅದೇಕೋ ಉತ್ಸಾಹದ ಕಳೆಯೇ ಇಲ್ಲ. ಕೆಲವು ಮಂತ್ರಿಗಳನ್ನು ಬಿಟ್ಟರೆ, ಉಳಿದವರೆಲ್ಲ ತಾವುಂಟೋ ಮೂರು ಲೋಕ ಉಂಟೋ ಎನ್ನುವಂತೆ ವರ್ತಿಸುತ್ತಿದ್ದಾರೆ. ಸರ್ಕಾರಕ್ಕೆ ಸ್ಪಷ್ಟವಾದ ಗೊತ್ತು ಗುರಿಯೇ ಇದ್ದಂತಿಲ್ಲ. ಅಧಿಕಾರವನ್ನು ವಹಿಸಿಕೊಂಡು ಏಳು ತಿಂಗಳಾದರೂ ಇನ್ನೂ ಜನರಿಗೆ ಹೊಸ ಹೊಸ ಉಡುಗೊರೆ- ಕೊಡುಗೆಗಳ ವಿಚಾರವನ್ನೇ ಸರ್ಕಾರ ಪರಿಶೀಲಿಸುತ್ತಿದೆ. ನೀರಾವರಿ, ಉದ್ಯಮ, ವಿದ್ಯುತ್, ಮೂಲ ಸೌಲಭ್ಯಗಳ ನಿರ್ಮಾಣ ಕುರಿತಂತೆ ಯಾವ ಚಟುವಟಿಕೆಯೂ ಕಂಡು ಬರುತ್ತಿಲ್ಲ. ಅಭಿವೃದ್ದಿ ತಾನೇ ತಾನಾಗಿ ಆಗುವುದಿಲ್ಲ. ಸಾಮಾನ್ಯ ಆಡಳಿತ ತಾನೇ ತಾನಾಗಿ ನಡೆಯಬಹುದಷ್ಟೇ.
ಈಗ ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಶಕ್ತಿಗಳು ಜೆಡಿಎಸ್- ಬಿಜೆಪಿಗಳ ನಡುವೆ ಹಂಚಿಹೋಗಿ, ಪರಸ್ಪರ ಜಗಳದಲ್ಲಿ ನಿರತವಾಗಿವೆ. ಒಂದು ರೀತಿಯಲ್ಲಿ ಸರ್ಕಾರಕ್ಕೆ ಈಗ ಅರಸನ ಕಾಟವೂ ಇಲ್ಲ. ದೆವ್ವದ ಅಂಜಿಕೆಯೂ ಇಲ್ಲ. ಇಂತಹ ಸನ್ನಿವೇಶದಲ್ಲೂ ಅಬಿವೃದ್ಧಿಗೆ ಸಂಬಂಧಿಸಿದಂತೆ ಕಠಿಣ ನಿರ್ಧಾರಗಳನ್ನು ಜಾರಿಗೆ ತರದೇ ಹೋದರೆ, ಆ ಕೆಲಸ ಆಗುವುದು ಯಾವಾಗ? ಅಧಿಕಾರಿಗಳಿಗೆ ಸೂಕ್ತ ಆದೇಶಗಳನ್ನು ಕೊಡುವವರೇ ಇಲ್ಲದಂತಾಗಿದೆ. ನಿಜ. ಜನಪ್ರಿಯತೆಯ ಮಾನದಂಡದಲ್ಲಿ, ಸಿದ್ದರಾಮಯ್ಯ ಅವರು ಈಗಲೂ ಕಾಂಗ್ರೆಸ್ಸಿನಲ್ಲಿ ಅತಿ ಪ್ರಕಾಶಮಾನವಾದ ಮಹಾ ತಾರೆಯೇ. ಆದರೆ ಸಮಯಕ್ಕೆ ತಕ್ಕಂತೆ ಚುರುಕಾಗಿ, ಚಾಕಚಕ್ಯತೆಯ ದೃಢ ನಿರ್ಧಾರಗಳು ಅವರಿಂದ ಹೊರಬೀಳುತ್ತಿಲ್ಲ. ಅವರಿಗೆ ಸಮಾಲೋಚನೆಗೆ ಸಮಯವೇ ಇಲ್ಲದಂತಾಗಿದೆ. ಹೀಗಾಗಿ ಅವರು ಏಕಾಂಗಿಯಾಗಿದ್ದಾರೇನೋ ಎನ್ನುವ ಭಾವನೆ ಮೂಡುತ್ತಿದೆ. ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆದ ಅಧಿವೇಶನ ನೀರಿನಲ್ಲಿ ಹೋಮ ಮಾಡಿದಂತೆಯೇ ಆಯಿತು. ಸುಮಾರು ಹತ್ತು ಕೋಟಿ ರುಪಾಯಿ ಖರ್ಚು. ಕೊನೆಗೆ ಶಾಸಕಾಂಗದ ಇತಿಹಾಸಗಾರರು ಆ ಅಧಿವೇಶನವನ್ನು (ಹತ್ತೇ ಹತ್ತು ದಿನ) ರೈತನೊಬ್ಬನ ಆತ್ಮಹತ್ಯೆ, ಕಬ್ಬು ಬೆಳೆಗಾರರು- ಸಕ್ಕರೆ ಕಂಪೆನಿಗಳ ಮಾಲಿಕರ ಹಟಮಾರಿತನದಿಂದಲೇ ಗುರ್ತಿಸಬೇಕಾಗುತ್ತದೆ. ಸದನದ ಒಳಗಡೆ- ಹೊರಗಡೆ ಎಲ್ಲ ವ್ಯವಹಾರಗಳನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಏಕಾಂಗಿಯಾಗಿ ಹೊರಬೇಕಾಗಿ ಬಂದಿತ್ತು. ಅವರುತಾನೇ ಏನು ಮಾಡಿಯಾರು? ಸಾಧ್ಯವಿರುವಷ್ಟು ಮಟ್ಟಿಗೂ ತೇಪೆ ಹಾಕಿದ್ದಾರೆ.
ಬೆಳಗಾವಿಯಿಂದ ಬೆಂಗಳೂರಿಗೆ ಹಿಂತಿರುಗಿದ ಅನಂತರ ವೃತ್ತಿ ಶಿಕ್ಷಣ ಸಂಸ್ಥೆಗಳ ಶುಲ್ಕ, ಪ್ರವೇಶ ನಿಯಮಗಳ ವಿಚಾರದಲ್ಲಿ ಹೊಸದೊಂದು ವ್ಯವಸ್ಥೆಯನ್ನು ಪ್ರಕಟಿಸಿ (ಅದು ಕಾಯಿದೆಯ ರೂಪದಲ್ಲೂ ಇದೆ) ಅನಂತರದ ಪ್ರತಿಭಟನೆಗೆ ಹೆದರಿ, ಅದನ್ನು ಪಕ್ಕಕ್ಕೆ ಸರಿಸಲಾಯಿತು.
ಇಂತಹ ಎಲ್ಲ ಪ್ರಕರಣಗಳು ಹಾಗೂ ವಿವಾದಗಳಲ್ಲಿ ಸರ್ಕಾರದ ನಿಲವಿನ ಸಮರ್ಥನೆಗೆ ಸಂಬಂಧಪಟ್ಟ ಸಚಿವರೂ ಮುಂದಾಗದೇ ಇರುವುದು, ಪಕ್ಷವಂತೂ ತನಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎನ್ನುವ ರೀತಿಯಲ್ಲಿ ವರ್ತಿಸುವುದು ಅರಾಜಕತೆಯ ಲಕ್ಷಣ.   ಸಿದ್ದರಾಮಯ್ಯ ಅವರ ಆತ್ಮೀಯ ಸಂಗಾತಿ, ಸಚಿವ ಮಹದೇವ ಪ್ರಸಾದ್ ಒಂದು ಸುಳ್ಳು ಪ್ರಮಾಣಪತ್ರದ ವ್ಯವಹಾರದಲ್ಲಿ ಸಿಕ್ಕಿಹಾಕಿಕೊಂಡಿರುವಂತೆ ಕಾಣುತ್ತಿದೆ. ನಿವೇಶನ ಪಡೆಯಲಿಕ್ಕಾಗಿ ಸುಳ್ಳು ಮಾಹಿತಿಯ ಪ್ರಮಾಣ ಪತ್ರ ಸಲ್ಲಿಸಿದರೆನ್ನಲಾದ ಪ್ರಕರಣವಿದು. ಖಾಸಗಿ ದೂರೊಂದರ ಮೂಲಕ ಬೆಳಕಿಗೆ ಬಂದಿದೆ. ಜಿಲ್ಲಾ ನ್ಯಾಯಾಧೀಶರು ಆರೋಪದ ತನಿಖೆಗೆ ಲೋಕಾಯುಕ್ತ ಪೋಲಿಸರಿಗೆ ಆದೇಶ ನೀಡಿದ್ದಾರೆ. ಇಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ. ಈ ಪ್ರಕರಣ ಸಾಕಷ್ಟು ಧೂಳನ್ನೆಬ್ಬಿಸುವ ಸಾಧ್ಯತೆ, ಸಂಭವ ಇದ್ದೇ ಇದೆ.

ಪ್ರದೇಶ ಕಾಂಗ್ರೆಸ್: ಲೋಕಸಭೆ ಚುನಾವಣೆಗೆ ಪಕ್ಷ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ॥ ಜಿ. ಪರಮೇಶ್ವರ ಅವರು ಮಂತ್ರಿಮಂಡಲವನ್ನು ಪ್ರವೇಶಿಸಿ ಹೆಚ್ಚು ಪರಿಣಾಮಕಾರಿಯಾಗಿ ಜನಪರ ಕೆಲಸ ಮಾಡಲಿಕ್ಕೆ ಒಲವನ್ನು ತೋರಿಸಿರುವಂತಿದೆ. ಅವರ ಬಯಕೆ ಈಡೇರುವ ಸಂಭವವೂ ಕಂಡು ಬಂದಿದೆ. ಇನ್ನು ಕಾಂಗ್ರೆಸ್ ಕಾರ್ಯಕರ್ತರು, ತಮ್ಮ ಇತರ ಕೆಲಸ-ಉದ್ಯೋಗಗಳನ್ನೆಲ್ಲ ಮರೆತು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಬೋರ್ಡು-ಮಂಡಳಿ-ನಿಗಮಗಳ ಅಧ್ಯಕ್ಷರು-ನಿರ್ದೇಶಕರ  ನಾಮಕರಣಕ್ಕೆ ಮುಹೂರ್ತ ಕೂಡಿ ಬಂದಿಲ್ಲ. ಅದಕ್ಕೂ ಸಂಕ್ರಮಣ ಕಳೆಯಬೇಕು. ಪ್ರದೇಶ ಕಾಂಗ್ರೆಸ್ ಸಮಿತಿಯ ಪುನಾರಚನೆಯ ವಿಚಾರ ಇದ್ದಕ್ಕಿದ್ದಂತೆ ಪ್ರಾಮುಖ್ಯವಾಗಿ ಪ್ರಸ್ತಾಪವಾಗುತ್ತಿದೆ. ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಸ್ಥಾನವೆನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು "ಮೇಲಿನಿಂದ" ಆದೇಶ ಬಂದಿರುವುದರಿಂದ, ಮಂತ್ರಿಗಳು ಪಕ್ಷದ ಸಂಘಟನಾಂಗದಲ್ಲಿನ ಪ್ರಾತಿನಿಧಿಕ ಸ್ಥಾನಗಳನ್ನು ತೆರವು ಮಾಡಬೇಕಾಗಿ ಬರುತ್ತದೆ. ಆ ಸ್ಥಾನಗಳಿಗೆ ಮನವಿ ಸಲ್ಲಿಸಲು ಕಾರ್ಯಕರ್ತರ  ಪಡೆಗಳೇ ಸಿದ್ಧವಾಗುತ್ತಿವೆ.

ಕಿಡಿಗೇಡಿತನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆಯನ್ನು ರಕ್ಷಿಸಬೇಕಾದ ಕರ್ತವ್ಯವನ್ನು ಅವರ ಹಿರಿಯ ಕಿರಿಯ ಸಂಗಾತಿಗಳು ಮರೆಯಬಾರದು. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ. ಸರ್ಕಾರದ ವಕ್ತಾರರಲ್ಲ ಎನ್ನುವುದು ನೆನಪಿನಲ್ಲಿರಲಿ. ವಕ್ತಾರಿಕೆ, ವಕೀಲಿ ಕೆಲಸವನ್ನು ಇತರರು ಮಾಡಲಿ.

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com