ಅಹಂಕಾರಿ ಅಮೆರಿಕಕ್ಕೆ ಪಾಠ ಕಲಿಸುವ ಸಮಯ ಬಂದಿದೆ..

9 ತಿಂಗಳ ಹಿಂದೆ ಜಿ 8 ರಾಷ್ಟ್ರದ ಭಾಗವಾದ ಇಟಲಿ, ಭಾರತದ ಒತ್ತಡಕ್ಕೆ ಮಣಿದು, ಇಬ್ಬರು ಭಾರತೀಯ ಮೀನುಗಾರರನ್ನು ಕೊಂದ, ತನ್ನ ನೌಕಾಪಡೆಯ ಸಿಬ್ಬಂದಿಯನ್ನು ಭಾರತಕ್ಕೆ ಕಳುಹಿಸಿತ್ತು. ಈಗ ಪ್ರಪಂಚದ ಅತ್ಯಂತ ಬಲಿಷ್ಠ ರಾಷ್ಟ್ರವಾದ ಅಮೆರಿಕದ ಸರದಿ.
ಅಮೆರಿಕಕ್ಕೆ ದೇವಯಾನಿ ಖೋಬ್ರಾಗಡೆ ಪ್ರಕರಣ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಒಂದು ವೇಳೆ ಭಾರತ ಈಗ ನುಡಿಯುತ್ತಿರುವಂತೆಯೆ ನಡೆದರೆ ಅಮೆರಿಕ ಕೂಡ ಇಟಲಿಯ ಮಾರ್ಗವನ್ನೇ ಹಿಡಿಯಬೇಕಾಗುತ್ತದೆ. ಅಮೆರಿಕನ್ನರು ಭಾರತವನ್ನು ತಪ್ಪು ಸಮಯದಲ್ಲಿ ಕೆಣಕಿದ್ದಾರೆ. ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿರುವುದರಿಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೂ ಈ ವಿಷಯವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡತೊಡಗಿದೆ.
ಆದರೆ ಇಲ್ಲಿನ ವ್ಯಂಗ್ಯವನ್ನು ನೀವು ಗಮನಿಸಬೇಕು. ಕಳೆದ ಬಾರಿಯ ಚುನಾವಣೆಯಲ್ಲಿ ಅಮೆರಿಕ ಪರೋಕ್ಷವಾಗಿ ಯುಪಿಎ ಸರ್ಕಾರಕ್ಕೆ ಲಾಭಮಾಡಿಕೊಟ್ಟಿತ್ತು. ಆ ಸಮಯದಲ್ಲಿ ಪ್ರಧಾನಿ ಮನಮೋಹನ ಸಿಂಗ್ರಿಗೆ ಅಮೆರಿಕದ ಮೇಲಿದ್ದ ಅಪರಿಮಿತ ಪ್ರೇಮ ಎಂಥದ್ದು! ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಅವರು ತೋರಿಸಿದ ಕೆಚ್ಚೆದೆ, ಈ ಕಾರಣಕ್ಕಾಗಿ ಅವರು ತಮ್ಮ ಸರ್ಕಾರವನ್ನೇ ಅಪಾಯದ ಅಂಚಿಗೆ ಒಯ್ದು ನಿಲ್ಲಿಸಿದ್ದನ್ನು ಮರೆಯುವುದಕ್ಕೆ ಸಾಧ್ಯವೇ? ಈಗ ಯುಪಿಎ-2ರ ಅವಧಿ ಮುಗಿಯುವುದಕ್ಕೆ ಬಂದಿದೆ. ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೆರಿಕ ಮತ್ತು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ನಡುವಿನ ಪ್ರೀತಿಯೇನೂ ಕಡಿಮೆಯಾಗಿಲ್ಲ. ಆದರೂ ದೇವಯಾನಿ ಪ್ರಕರಣ ಎರಡೂ ದೇಶಗಳ ಸರ್ಕಾರಗಳ ನಡುವೆ ವೈಮನಸ್ಸನ್ನು ಹುಟ್ಟುಹಾಕಿರುವುದಂತೂ ಸುಳ್ಳಲ್ಲ.
ಹಿಂದಿನ ಬಾರಿ ಪ್ರಧಾನಿ ಮನಮೋಹನ ಸಿಂಗ್ ಅವರು ತಮ್ಮ ಆತ್ಮಾಭಿಮಾನವನ್ನು ಪಣಕ್ಕಿಟ್ಟು ಅಮೆರಿಕದೊಂದಿಗೆ ಪರಮಾಣು ಒಪ್ಪಂದಕ್ಕೆ ಮುಂದಾಗಿದ್ದರು. ಅದಾಗಿ 5 ವರ್ಷಗಳು ಕಳೆದರೂ ಆ ಕ್ಷೇತ್ರದಲ್ಲಿ ಹೇಳಿಕೊಳ್ಳುವಂಥದ್ದೇನೂ ನಡೆದಿಲ್ಲ. ಅದಕ್ಕೆ ಹೋಲಿಸಿದರೆ ಈ ಬಾರಿಯ ಸಮಸ್ಯೆ ಅಷ್ಟೇನೂ ತೀವ್ರತರವಾಗಿಲ್ಲ. ಅಮೆರಿಕನ್ನರು ದೇವಯಾನಿ ಪ್ರಕರಣದಲ್ಲಿ ಕಾನೂನು ರೀತ್ಯಾ ಸರಿಹೆಜ್ಜೆಯಿಟ್ಟಿರಬಹುದು ಆದರೆ ರಾಜಕೀಯವಾಗಿ ಅಲ್ಲ.
ಈ ಎರಡೂ ವಿಷಯದಲ್ಲಿ ಅಮೆರಿಕ ಭಾರತದ ರಾಜಕೀಯದಲ್ಲಿ ಗೇಮ್ ಚೇಂಜರ್ ಆಗಿರುವುದು ಸುಳ್ಳಲ್ಲ. ಆದರೆ ಎರಡೂ ಸಂಪೂರ್ಣ ಭಿನ್ನ ಪ್ರಕರಣಗಳೇ. ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿರುವುದರಿಂದ ಮನಮೋಹನ್ ಸಿಂಗ್ ಮತ್ತವರ ಸರ್ಕಾರ ಮತಗಳನ್ನು ಸೆಳೆಯಲು ಯಾವುದಾದರೂ ಮ್ಯಾಜಿಕ್
ನಡೆಯುತ್ತದೇನೋ ಎಂದು ಕಾಯುತ್ತಾ ಕುಳಿತಿದ್ದರು. ಈಗ ದೇವಯಾನಿ ಪ್ರಕರಣ ಆ ಗುಂಪಿಗೆ ಲಾಭದಂತೆ ಕಾಣುತ್ತಿದೆ.
ಕುಸಿಯುತ್ತಿರುವ ತನ್ನ ಗತ್ತನ್ನು ಗಟ್ಟಿಯಾಗಿ ನಿಲ್ಲಿಸಲು ಯುಪಿಎ ಸರ್ಕಾರ ದೇವಯಾನಿ ಪ್ರಕರಣವನ್ನು ಎರಡೂ ಕೈಗಳಿಂದ ಗಟ್ಟಿಯಾಗಿ ಹಿಡಿದುಕೊಂಡಿದೆ. ಯಾವ ಆಡಳಿತ ಸರ್ಕಾರವೂ ಇಂಥ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ ಎನ್ನುವುದೂ ನಿಜ. ಈ ಕಾರಣಕ್ಕಾಗಿ ಈ ಚದುರಂಗದಾಟದಲ್ಲಿ ಯುಪಿಎದ ಮುಂದಿನ ನಡೆ ಕುತೂಹಲ ಹುಟ್ಟಿಸಿದೆ. ಅದಾಗ್ಯೂ, ಭಾರತ ಮತ್ತು ಅಮೆರಿಕದ ನಡುವಿನ ಈ ಆಟದಲ್ಲಿ ದೇವಯಾನಿ ರಾಣಿ ಕಾಯಿಯಂತೆ ಕಾಣಿಸುತ್ತಿದ್ದಾರೆ. ಬುಧವಾರ ಸಂಸತ್ತಿನಲ್ಲಿ ಮಾತನಾಡಿದ ಸಲ್ಮಾನ್ ಖುರ್ಷಿದ್ ದೇವಯಾನಿ ವಿಷಯವಾಗಿ ಅಮೆರಿಕ ನಡೆದುಕೊಂಡಿರುವ ರೀತಿಯನ್ನು ಕಠಿಣ ಪದಗಳಿಂದ ವಿರೋಧಿಸಿ, "ಇದೊಂದು ವ್ಯವಸ್ಥಿತ ಸಂಚು" ಎಂದಿದ್ದಾರೆ.
ಆದರೆ ದೇವಯಾನಿ ಅವರನ್ನು ಭಾರತಕ್ಕೆ ತರುವುದು ಅಷ್ಟು ಸುಲಭವಲ್ಲ. ಅಮೆರಿಕ ಅಷ್ಟು ಸುಲಭವಾಗಿ ಮಂಡಿಯೂರಿ ಕುಳಿತುಕೊಳ್ಳುವ ದೇಶವಲ್ಲ. ಇನ್ನು ಭಾರತದಲ್ಲಿನ ಅಮೆರಿಕದ ರಾಯಭಾರಿಗಳ ವಿರುದ್ಧ ನಮ್ಮವರು ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಆ ದೇಶದ ಸರ್ಕಾರ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ.
ಆದರೆ ಅವರಲ್ಲಿ ಅಧೈರ್ಯ ಹುಟ್ಟಿಸಿರುವ ಪ್ರಮುಖ ಸಂಗತಿಯೊಂದಿದೆ. ಅದು ದೆಹಲಿಯಲ್ಲಿನ ಅಮೆರಿಕದ ರಾಜತಾಂತ್ರಿಕ ನಿವಾಸದ ಮುಂದಿನಿಂದ ಭಾರತದ ಭದ್ರತಾ ತಡಪುಗಳನ್ನು ತೆಗೆದುಹಾಕಿರುವುದು. ಈ ವಿಷಯದಲ್ಲಿ ಮಾತ್ರ ಅಮೆರಿಕನ್ನರ ಎದೆ ಝಲ್ಲೆಂದಿರುವುದರಲ್ಲಿ ಸಂದೇಹವಿಲ್ಲ. ವಿದೇಶಗಳಲ್ಲಿರುವ ತಮ್ಮ ರಾಯಭಾರಿಗಳ ಭದ್ರತೆಯ ವಿಷಯದಲ್ಲಂತೂ ಅಮೆರಿಕ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುತ್ತದೆ.
ಆಯಾ ದೇಶಗಳೇ ತಮ್ಮ ರಾಯಭಾರಿಗಳಿಗೆ ಭದ್ರತೆ ಒದಗಿಸಬೇಕು ಎಂದು ಭಾರತ ಸ್ಪಷ್ಟವಾಗಿ ಹೇಳಿದೆಯಾದರೂ, ಅಮೆರಿಕದ ಭದ್ರತಾವ್ಯವಸ್ಥೆಯಂತೂ ಭಾರತದ ಈ ಹಠಾತ್ ಹೆಜ್ಜೆಯಿಂದ ನಿದ್ದೆಗೆಟ್ಟಿದೆ. ಇಂಥ ಕ್ರಮಗಳನ್ನು ಕೈಗೊಂಡಾಕ್ಷಣ ಅಮೆರಿಕ ಭಾರತಕ್ಕೆ ಮಣಿದುಬಿಡುತ್ತದಾ ಎನ್ನುವ ಪ್ರಶ್ನೆಯೂ ಇದರಿಂದ ಉದ್ಭವವಾಗುತ್ತದೆ. ಸಲ್ಮಾನ್ ಖುರ್ಷಿದ್ರ "ವ್ಯವಸ್ಥಿತ ಸಂಚು" ಎನ್ನುವ ಹೇಳಿಕೆ ಅನ್ಯ ಪರಿಣಾಮವನ್ನೂ ಬೀರಬಹುದಾದ ಸಾಧ್ಯತೆಯೂ ಇದೆ.
ಇದೇನೇ ಇದ್ದರೂ, ಖೋಬ್ರಾಗಡೆಯ ಮನೆಕೆಲಸದಾಕೆಯ(ಸಂಗೀತಾ ರಿಚರ್ಡ್ಸ್) ಪತಿ ಮತ್ತು ಇಬ್ಬರು ಮಕ್ಕಳು, ಡಿಸೆಂಬರ್ 10 ರಂದು, ಅಂದರೆ ಖೋಬ್ರಾಗಡೆ ಅರೆಸ್ಟ್ ಆಗುವುದಕ್ಕೂ ಎರಡು ದಿನ ಮುಂಚೆಯೇ ನ್ಯೂಯಾರ್ಕ್ಗೆ ಹೋಗಿರುವುದು ಮತ್ತು ಜೂನ್ ತಿಂಗಳಿಂದ ಸಂಗೀತಾ ಕಾಣೆಯಾದ ವಿಷಯ ಹೆಚ್ಚು ಅನುಮಾನ ಹುಟ್ಟುಹಾಕುತ್ತಿದೆ. ಭಾರತದ ರಾಯಭಾರ ಕಚೇರಿ ಸಂಗೀತಾಳ ಪಾಸ್ಪೋರ್ಟ್ ಅನ್ನು ಅನರ್ಹಗೊಳಿಸಿದ್ದರೂ ಆಕೆಯಿನ್ನೂ ಅದೇ ದೇಶದಲ್ಲಿದ್ದಾಳೆ. ಇವೆಲ್ಲದರಲ್ಲಿ ಅಮೆರಿಕ ಸರ್ಕಾರ ಯಾವುದೋ ರೀತಿಯಲ್ಲಿ ಭಾಗಿಯಾಗಿದೆ ಎಂದು ಭಾರತಕ್ಕೆ ಅನುಮಾನ ಶುರುವಾಗಿದೆ. ಅದಾಗ್ಯೂ ದೇವಯಾನಿಯವರನ್ನು ಬಂಧಿಸುವ ಬಗ್ಗೆ ಅಮೆರಿಕದ ಅಧಿಕಾರಿಗಳು ಭಾರತಕ್ಕೆ ಮಾಹಿತಿಯನ್ನು ಕೊಡುವ ಗೋಜಿಗೂ ಹೋಗಲಿಲ್ಲ. ಭಾರತ ಈ ರೀತಿ ದಿಟ್ಟವಾಗಿ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಅವರು ನಿರೀಕ್ಷಿಸಿರಲಿಲ್ಲ ಬಿಡಿ.
ಅಮೆರಿಕನ್ನರು ಈ ರೀತಿ ಹಿಂದೆಯೂ ನಡೆದುಕೊಂಡಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ರಂಥ ನಟರಷ್ಟೇ ಅಲ್ಲದೆ, ಎಪಿಜೆ ಅಬ್ದುಲ್ ಕಲಾಂ, ಜಾರ್ಜ್ ಫರ್ನಾಂಡಿಸ್ರಂಥ ನಾಯಕರನ್ನೂ ಅವಮಾನಿಸಿದ್ದಾರೆ. ಪ್ರತಿಬಾರಿಯೂ ತಾವು ಇಂಥವರನ್ನು ಅವಮಾನ ಮಾಡಿದಾಗ ಮೂಲೆಗೋಡಿ ಬಚ್ಚಿಟ್ಟುಕೊಳ್ಳುತ್ತಿದ್ದ ಭಾರತ ಸರ್ಕಾರ, ದೇವಯಾನಿಯಂಥ ಅಷ್ಟೇನೂ ಪ್ರಭಾವಿಯಲ್ಲದ ರಾಯಭಾರಿಯ ವಿಷಯ ಹಿಡಿದುಕೊಂಡು ಏಕ್ದಂ ಹೆಡೆಬಿಚ್ಚಿದ್ದನ್ನು ನೋಡಿ ಅಮೆರಿಕ ಗಾಬರಿಗೊಂಡಿದೆ. ಇನ್ನು ಎಲ್ಲಾ ಪಕ್ಷಗಳು ಮತ್ತು ಭಾರತೀಯರೂ ಒಕ್ಕೊರಲಿನಿಂದ ಅಮೆರಿಕದ ವಿರುದ್ಧ ಹರಿಹಾಯುತ್ತಿರುವುದರಿಂದ ಮುಂದಿನ ಹೆಜ್ಜೆಯನ್ನಂತೂ ಅದು ಎಚ್ಚರಿಕೆಯಿಂದ ಇಡಲಿದೆ. ಅಮೆರಿಕ ತಪ್ಪು ಸಮಯವನ್ನು ಆಯ್ಕೆಮಾಡಿಕೊಂಡಿದೆ.
ತನ್ನ 100 ಬಿಲಿಯನ್ ಡಾಲರ್ಗಳಷ್ಟು ದ್ವಿಪಕ್ಷೀಯ ವ್ಯಾಪಾರ ವಹಿವಾಟು ನಡೆಸುತ್ತಿರುವ ರಾಷ್ಟ್ರವನ್ನು ಅದು ದೂರಮಾಡಿಕೊಳ್ಳುತ್ತಿದೆ. ಪಾಪ!
- ರಾಜೀವ್ ಶರ್ಮ,
ರಕ್ಷಣಾ ಪರಿಣತ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


