ಹೈ.ಕ. ಪ್ರವಾಸೋದ್ಯಮ ಅಭಿವೃದ್ಧಿಯ ಮೊದಲ ಹೆಜ್ಜೆ...
ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಆ ಪ್ರದೇಶದ ಪ್ರವಾಸೋದ್ಯಮದ ಬಗ್ಗೆ ಅತೀವ ಆಸಕ್ತಿಯಿಂದ ವಿಷಯಗಳನ್ನು ತಿಳಿದುಕೊಂಡು ಆಶ್ಚರ್ಯಗೊಂಡೆ. ಅಮೆರಿಕಾದಂಥದೇಶಗಳಲ್ಲಿ ಏನೂ ಇಲ್ಲದ ಪ್ರದೇಶಗಳಲ್ಲೂ ವೈಭವೀಕರಿಸಿ ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡಿಬಿಡುತ್ತಾರೆ. ಆದರೆ ನಾವು ದೊಡ್ಡ ಪ್ರವಾಸೋದ್ಯಮ ಸಂಪತ್ತನ್ನೇ ಹೊಂದಿದ್ದರೂ ಸಹ, ತಾತ್ಸಾರದಿಂದ ಆ ಪ್ರೇಕ್ಷಣೀಯ ಸ್ಥಳಗಳನ್ನು ಕಾಪಾಡುವುದೂ ಇಲ್ಲ, ಅವುಗಳತ್ತ ಪ್ರವಾಸಿಗರನ್ನು ಆಕರ್ಷಿಸುವವ ಕೆಲಸವನ್ನೂ ಮಾಡುವುದಿಲ್ಲ.
ಹಾಗಾಗೇ ನಾವು ಈ ಪ್ರದೇಶದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಒಂದು ನೀಲನಕ್ಷೆಯನ್ನು ತಯಾರಿಸಲು ನಮ್ಮ ಕೇಂದ್ರದ ಸಮಿತಿಯಲ್ಲಿ ಮಾತನಾಡಿದೆವು. ಪ್ರವಾಸಿ ವೃತ್ತ ಯೋಜನಾ ವರದಿಗೆ ಸಂಬಂಧಿಸಿದಂತೆ ಚರ್ಚೆಯಲ್ಲಿ ಭಾಗವಹಿಸಿದ ವಿವಿಧ ಕ್ಷೇತ್ರಗಳ ಪರಿಣಿತರು- ಸಾಹಿತಿಗಳು, ಇತಿಹಾಸ ಮತ್ತಿತರ ತಜ್ಞರು ಬೀದರ, ಗುಲ್ಬರ್ಗಾ ಮತ್ತು ವಿಜಾಪೂರ ಜಿಲ್ಲೆಗಳ ಅತ್ಯಂತ ಶ್ರೀಮಂತವಾಗಿರುವ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಪ್ರವಾಸಿ ತಾಣಗಳಿಗೆ ಉತ್ತಮ ರಸ್ತೆ ಸಂಪರ್ಕ, ರಸ್ತೆಗಳಲ್ಲಿ ಪ್ರವಾಸ ತಾಣಗಳ ಮಹತ್ವ ಬಿಂಬಿಸುವ ಆಕರ್ಷಕ ಫಲಕಗಳ ನಿರ್ಮಾಣ, ಪ್ರವಾಸಿ ಸ್ಥಳಗಳಲ್ಲಿ ವಿದ್ಯುದ್ದೀಪ, ವಸತಿ ಸೌಕರ್ಯ ಕಲ್ಪಿಸುವ ಬಗ್ಗೆ ಸಲಹೆಗಳನ್ನು ನೀಡಿದರು. ಈ ಜಿಲ್ಲೆಗಳ ವಿವಿಧ ಪ್ರಮುಖ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳ ಮಹತ್ವವನ್ನು ಸಾರುವ ಕಿರುಹೊತ್ತಿಗೆಗಳನ್ನು ಬಹು ಭಾಷೆಗಳಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡಬೇಕು. ಪ್ರವಾಸಿ ವೃತ್ತಕ್ಕಾಗಿ ಜಿಲ್ಲೆಗಳ ಸ್ಮಾರಕಗಳ ಪಟ್ಟಿ, ಯೋಜನೆಯ ಅಂದಾಜು ಕರಡು ವರದಿಯನ್ನು ಸಿದ್ಧಪಡಿಸಬೇಕೆಂದು ಅಭಿಪ್ರಾಯಪಟ್ಟರು.
ನಾನು ಎಷ್ಟೇ ಉತ್ಸುಕಳಾಗಿದ್ದರೂ ಅದಕ್ಕೆ ಪೂರಕವಾಗಿ ಸ್ಥಳೀಯರು ಸ್ಪಂದಿಸದಿದ್ದರೆ ನನ್ನ ಪ್ರಯತ್ನಗಳು ವ್ಯರ್ಥವಾಗುತ್ತವೆ ಎನ್ನುವುದು ಗೊತ್ತಿತ್ತು. ಹಾಗಾಗಿ ಸ್ಥಳೀಯರನ್ನು ಮೊದಲು ಸಂಪೂರ್ಣವಾಗಿ ಸಕ್ರಿಯರನ್ನಾಗಿ ಮಾಡಬೇಕು ಎಂಬ ಆಶಯದೊಂದಿಗೆ "ಏಳು ಅದ್ಭುತ ಪ್ರವಾಸೀ ತಾಣಗಳು" ಎಂಬ ಹೆಸರಿನಲ್ಲಿ ಕಿರು ಹೊತ್ತಿಗೆಯನ್ನು ಆಕರ್ಷಕವಾಗಿ ತಯಾರಿಸಿ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಕಾರ್ಯದರ್ಶಿಯಾದ ಶ್ರೀವಾಸ್ತವ್ರನ್ನು ಕರೆಸಿ ಗುಲ್ಬರ್ಗಾ ಕೋಟೆಯಲ್ಲಿ ಬಿಡುಗಡೆ ಮಾಡಿಸಿದೆ. ಅವರನ್ನು ಮುಖ್ಯವಾದ ಪ್ರೇಕ್ಷಣೀಯ ಸ್ಥಳಗಳಿಗೆಲ್ಲಾ ಕರೆದುಕೊಂಡು ಹೋಗಿ ಆ ಸ್ಥಳಗಳ ಅಭಿವೃದ್ಧಿಗಾಗಿ ಕೇಂದ್ರದಿಂದ ಹಣ ಸಹಾಯವನ್ನು ಬೇಡಿದೆವು.
ಇದರಿಂದಾಗಿ ಟೂರಿಸ್ಟ್ ಸರ್ಕ್ಯೂಟ್, ಗುಲ್ಬರ್ಗಾ ಉತ್ಸವ ಆಚರಣೆ, ಪಾರಂಪರಿಕ ನಡಿಗೆಗಳು, ಶಾಲಾ ಮತ್ತು ಕಾಲೇಜುಗಳಿಂದ ಈ ಪ್ರೇಕ್ಷಣೀಯ ಸ್ಥಳಗಳ ಪ್ರವಾಸ, ದೇಶ ಮತ್ತು ವಿದೇಶದ ಪ್ರವಾಸಿಗರಿಗೆ ಉಳಿದುಕೊಳ್ಳಲು ಯಾತ್ರಿ ನಿವಾಸದ ಕಟ್ಟಡಗಳ ರಚನೆ, ಮುಂತಾದವುಗಳು ಕೆಲಸಗಳು ಆರಂಭಗೊಂಡವು. ಈ ನಿಟ್ಟಿನಲ್ಲಿ ಅತ್ಯಂತ ಉತ್ಸಾಹದಿಂದ ಜವಾಬ್ದಾರಿಯನ್ನು ತೆಗೆದುಕೊಂಡು ಕೆಲಸ ಮಾಡಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಚರಿತ್ರೆಯ ವಿಭಾಗ ಮತ್ತು ಪ್ರವಾಸೋದ್ಯಮ ನಿರ್ವಹಣೆಯ ವಿದ್ಯಾರ್ಥಿಗಳನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸಲು ಇಚ್ಛಿಸುತ್ತೇನೆ. ನಂತರದ ದಿನಗಳಲ್ಲಿ ಸ್ಥಳೀಯರು ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕೇವಲ ಏಳು ಸ್ಥಳಗಳು ಮಾತ್ರ ಪ್ರೇಕ್ಷಣೀಯವಲ್ಲ, ಇನ್ನೂ ಹಲವಾರು ಇವೆ ಎಂದು ಹೇಳತೊಡಗಿದರು. ನನಗೂ ಅದೇ ಬೇಕಾಗಿದ್ದುದು. ಸ್ಥಳೀಯರು ಎಚ್ಚೆತ್ತು ತಮ್ಮ ಸ್ಥಳಗಳನ್ನು ಕಾಪಾಡಿಕೊಳ್ಳುವ ಮನೋಭಾವವನ್ನು ಹೊಂದಿದರೆ ಪರಂಪರೆಯಿಂದ ಪ್ರಾಪ್ತವಾದ ಈ ಪ್ರೇಕ್ಷಣೀಯ ಸ್ಥಳಗಳು ಅಭಿವೃದ್ಧಿ ಹೊಂದುತ್ತವೆ ಎನ್ನುವ ಸಮಾಧಾನ ನನಗೆ ಉಂಟಾಯಿತು. ಈಗ ನಿಮಗೆ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಿಸುತ್ತೇನೆ. ಮೊದಲು ಬೀದರ್ ಜಿಲ್ಲೆಯಿಂದ ಆರಂಭಿಸುತ್ತೇನೆ.
ಕರ್ನಾಟಕದ ಕಿರೀಟ ಎಂದು ಕರೆಸಿಕೊಳ್ಳುವ ಬೀದರ್ ಜಿಲ್ಲೆ ಕರ್ನಾಟಕದ ತುತ್ತತುದಿಯ ಜಿಲ್ಲೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮುಖಾಂತರ ಹೈದ್ರಾಬಾದಿನಿಂದ ಸುಮಾರು ನೂರಿಪ್ಪತ್ತೈದು ಕಿ.ಮಿ. ದೂರದಲ್ಲಿರುವ ಈ ಜಿಲ್ಲೆಯಲ್ಲಿ ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು, ಕಲಚೂರಿಗಳು ಹಾಗೂ ಬಹಮನಿ ಸಾಮ್ರಾಜ್ಯದ ಅರಸರು ಆಳ್ವಿಕೆ ನಡೆಸಿದ್ದಾರೆ. ಜಿಲ್ಲಾ ಕೇಂದ್ರದಲ್ಲಿರುವ ಬೀದರ ಕೋಟೆ ಬಹಮನಿ ಸಾಮ್ರಾಜ್ಯದ ಅದ್ಭುತ ಕೊಡುಗೆಯಾಗಿದೆ. ಮುನ್ನೂರು ಎಕರೆ ಪ್ರದೇಶದಲ್ಲಿರುವ ಈ ವಿಶಾಲವಾದ ಕೋಟೆಯ ಭವ್ಯತೆ ತುಂಬಾ ವೈಶಿಷ್ಟ್ಯಪೂರ್ಣವಾದದ್ದು. ಮೂಲತಃ ರಾಷ್ಟ್ರಕೂಟರಿಂದ ನಿರ್ಮಿಸಲ್ಪಟ್ಟಿರುವ ಈ ಕೋಟೆ ನಂತರದ ದಿನಗಳಲ್ಲಿ ಬಹಮನಿ ಸಾಮ್ರಾಜ್ಯದವರಿಂದ ನವೀಕರಿಸಲ್ಪಟ್ಟಿತು. ಸುಮಾರು ಮೂರು ಮೈಲಿಗಳಷ್ಟು ನಡೆದರೆ ಮಾತ್ರ ಈ ಕೋಟೆಯನ್ನು ಸಂಪೂರ್ಣವಾಗಿ ವಿಕ್ಷೀಸಲು ಸಾಧ್ಯ. ವಿಶಾಲವಾದ ಸಭಾಮಂಟಪಗಳು, ಕಮಾನುಗಳು, ಸುಸಜ್ಜಿತ ಕೋಣೆಗಳು ತುಂಬಾ ಆಕರ್ಷಣಿಯವಾಗಿವೆ. ಈ ಸ್ಮಾರಕದಲ್ಲಿ ಅಳವಡಿಸಿರುವ ಕುಸರಿ ಕಲೆ ಸುಪ್ರಸಿದ್ಧ ಆಗ್ರಾದ ತಾಜಮಹಲನ್ನು ಹೋಲುವಂತಿದೆ. ಇಲ್ಲಿ ಸುಮಾರು ಐವತ್ತೆರಡು ಬಾವಿಗಳು ಒಂದಕ್ಕೊಂದು ಸಂಪರ್ಕ ಪಡೆದುಕೊಂಡಿವೆ. ಭಾರತದ ಸರ್ವೇಕ್ಷಣಾ ಇಲಾಖೆ ನಡೆಸುತ್ತಿರುವ ಉತ್ಖನನದಲ್ಲಿ ಭೂ ಗರ್ಭದಲ್ಲಿ ಹುದಗಿರುವ ಇನ್ನೂ ಹಲವು ಸ್ಮಾರಕಗಳು ದೊರೆಯುವ ಸಂಭವ ಇದೆ ಎಂದು ಊಹಿಸಲಾಗಿದೆ. ಬೀದರ ಜಿಲ್ಲೆ ಬಿದರಿ ಕುಸುರಿ ಕಲೆ ಜಗತ್ಪ್ರಸಿದ್ಧವಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಬೇಕು. ಅದನ್ನು ತಯಾರಿಸಲು ಕೋಟೆಯ ಮಣ್ಣು ಮಾತ್ರ ಉಪಯೋಗಿಸುತ್ತಾರೆ ಎಂಬ ವಿಷಯ ಅತ್ಯಂತ ವಿಸ್ಮಯಕಾರಿ.
ಏಷಿಯಾ ಖಂಡದ ಪ್ರಪ್ರಥಮ ವಿಶ್ವವಿದ್ಯಾಲಯವೆಂದೇ ಪ್ರಖ್ಯಾತಿ ಪಡೆದ ಗವಾನನ ಮದರಸಾ ಬೀದರ್ ನಗರದಲ್ಲಿ ಕಂಗೊಳಿಸುತ್ತಿದೆ. ಕ್ರಿ.ಶ ಹದಿನೈದನೇ ಶತಮಾನದಲ್ಲಿ ಈ ವಿಶ್ವವಿದ್ಯಾಲಯ ನಿರ್ಮಿಸಲ್ಪಟ್ಟಿತು. ಮಹಮ್ಮದ್ ಗವಾನನು ನಿರ್ಮಿಸಿದ ಈ ಮದರಸಾ ಅತ್ಯದ್ಭುತ ಐತಿಹಾಸಿಕ ಸ್ಮಾರಕವಾಗಿದೆ. ಮಹಮ್ಮದ್ ಗವಾನ್ ಒಬ್ಬ ಶ್ರೇಷ್ಠ ವಿದ್ವಾಂಸ ಮತ್ತು ದೂರ ದೃಷ್ಟಿಯ ಮೇಧಾವಿಯಾಗಿದ್ದನು. ಈ ಮದರಸಾ ಈಗಲೂ ಸುಸಜ್ಜಿತವಾಗಿದೆ. ಅಧ್ಯಯನ ಕೋಣೆಗಳು, ಮೂರು ಅಂತಸ್ತಿನ ಕಟ್ಟಡಗಳ ಮೇಲೆ ಹತ್ತಲು ಮೆಟ್ಟಿಲುಗಳು ಪರ್ಷಿಯಾ ಶಿಲ್ಪಮಾದರಿಯಲ್ಲಿದ್ದು ಎತ್ತರವಾದ ಗೋಪುರಗಳಿಂದ ಆವರಿಸಿದೆ. ಪ್ರಾಚೀನ ಶಿಕ್ಷಣ ಪದ್ಧತಿಯನ್ನು ನೆನಪಿಸುವ ಈ ಮದರಸಾ ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿಗಳು ನೋಡಿ ಆನಂದಿಸಬೇಕಾದ ರಾಷ್ಟ್ರೀಯ ಸ್ಮಾರಕ.
ಬೀದರ ನಗರದಲ್ಲಿರುವ ಮತ್ತೊಂದು ಅದ್ಭತ ಪ್ರವಾಸಿ ತಾಣ ಅಂದರೆ ನರಸಿಂಹ ಝರಣಿ. ಈ ದೇವಸ್ಥಾನ ಗುಹಾಂತರ ದೇವಾಲಯವಾಗಿದೆ. ನಗರದ ಹೊರವಲಯದಲ್ಲಿರುವ ಈ ದೇವಸ್ಥಾನವು ಪೌರಣಿಕ ಮಹತ್ವವುಳ್ಳ ಪುರಾತನ ಸ್ಥಳ. ವಿಷ್ಣು ಪರಮಾತ್ಮನು ಝರಾ ಎಂಬ ರಾಕ್ಷಸನನ್ನು ಸಂಹಾರಮಾಡಿದನೆಂಬುದು ಇಲ್ಲಿಯ ಪ್ರತೀತಿ. ಸುಮಾರು ಮೂರು ಅಡಿ ನೀರಿನಲ್ಲಿ ನಡೆಯುತ್ತಾ ಹೋದಾಗ ಮಾತ್ರ ನರಸಿಂಹಸ್ವಾಮಿಯ ಮೂರ್ತಿ ಕಂಡುಬರುತ್ತದೆ. ಆರಂಭದಲ್ಲಿ ಭಯಾನಕವೆನಿಸುವ ಈ ಗುಹಾಂತರ ದೇವಾಲಯ ನೀರಿನಲ್ಲಿ ನಡೆದಂತೆಲ್ಲ ಖುಷಿ ನೀಡುತ್ತದೆ. ಗುಹೆಯ ಒಳಗಡೆ ಅನೇಕ ಬಾವಲಿಗಳ ಹಾರಾಟ ಭಯವೆನಿಸುತ್ತದೆ. ಇತ್ತೀಚೆಗೆ ಅಲ್ಲಲ್ಲಿ ಕೃತಕ ಆಮ್ಲಜನಕ ಸರಬರಾಜು ವ್ಯವಸ್ಥೆಯನ್ನು ಮಾಡಲಾಗಿದೆ.
ಬೀದರ್ ನಗರದಲ್ಲಿ ಇರುವ ಮತ್ತೊಂದು ಅಧ್ಭುತ ಕ್ಷೇತ್ರ ಅಂದರೆ ನಾನಕ್ಝರಾ. ತಮ್ಮ ಹೆಬ್ಬೆರಳಿನಿಂದ ಬೆಟ್ಟದಿಂದ ನೀರನ್ನು ತೆಗೆದು ತಮ್ಮ ಭಕ್ತರಿಗೆ ತಣಿಸಿದರೆಂಬ ಪ್ರತೀತಿ ಇದೆ. ಅದುದರಿಂದ ಇದನ್ನೆ ನಾನಕ್ಝ್ರಾ ಎಂದು ಕರೆಯುತ್ತಾರೆ. ಅಮೃತಸರ್, ನಾಂದೇಡದಂತೆ ಬೀದರದ ನಾನಕ್ಝ್ರಾ ಕೂಡಾ ಸಿಖ್ಖರಿಗೆ ಪವಿತ್ರವಾದ ಸ್ಥಳವಾಗಿದೆ. ಸಿಖ್ಗುರು ಗುರುನಾನಕ್ ಅವರ ಚರಣ ಸ್ಪರ್ಶದಿಂದ ಪವಿತ್ರವಾದ ಭೂಮಿ ಇದು. ಭೀಕರ ಬರಗಾಲವಿದ್ದಾಗ ಗುರುನಾನಕರು ಇಲ್ಲಿ ಒಂದು ವಿಶಾಲವಾದ ಗುರುದ್ವಾರ, ಸುಂದರವಾದ ಉದ್ಯಾನವನ, ಅತ್ಯಂತ ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಿಸಿದ್ದಾರೆ. ಅಲ್ಲದೆ ಕಲ್ಯಾಣ ಮಂಟಪ, ಪ್ರವಾಸಿಮಂದಿರದ ಸೌಲಭ್ಯ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಗುರುದ್ವಾರದಲ್ಲಿ ನಿರಂತರವಾಗಿ ಗುರು ಗ್ರಂಥಸಾಹೇಬದ ಪಠಣ ನಡೆಯುತ್ತದೆ.
ಬೀದರ ಜಿಲ್ಲೆಯ ಬಸವಕಲ್ಯಾಣದ "ಅನುಭವ ಮಂಟಪವು" ವಿಶ್ವದ ಮೊದಲನೆ 'ಪಾರ್ಲಿಮೆಂಟ್" ಎಂದೇ ಸುಪ್ರಸಿದ್ಧವಾಗಿದೆ. ಇದು ಹನ್ನೆರಡನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ವೈಚಾರಿಕ ಕ್ರಾಂತಿಯನ್ನು ಹುಟ್ಟುಹಾಕಿದ ಸ್ಥಳ. ವಿಶ್ವ ಗುರು ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಗಳಾಗಿದುದರಿಂದ ಇಲ್ಲಿ ಅನುಭವಮಂಟಪವನ್ನು ಸ್ಥಾಪಿಸಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದರು. ಇಲ್ಲಿ ಅರಿವಿನಮನೆ, ಭವ್ಯಕೋಟೆ ಮುಂತಾದ ಪ್ರೇಕ್ಷಣೀಯ ಸ್ಥಳಗಳಿವೆ.
ಬಸವಕಲ್ಯಾಣ ತಾಲೂಕಿನಿಂದ ಕೇವಲ ಮೂರು ಕಿ.ಮೀ. ದೂರದಲ್ಲಿ ನಾರಾಯಣಪುರವೆಂಬ ಪುಟ್ಟ ಗ್ರಾಮ ಇದೆ. ಇಲ್ಲಿ ಚಾಲುಕ್ಯರ ಕಾಲದ ಹೊಯ್ಸಳೇಶ್ವರ ದೇವಸ್ಥಾನ ಅಥವಾ ಶಿವಮಂದಿರವೆಂಬ ಒಂದು ಅಧ್ಭುತವಾದ ಶಿಲ್ಪಕಲೆಯಿಂದ ಕೂಡಿದ ದೇವಸ್ಥಾನವಿದೆ. ಈ ದೇವಾಲಯವನ್ನು ಕಲ್ಯಾಣಿ ಚಾಲುಕ್ಯರ ದೊರೆ ಆರನೇ ವಿಕ್ರಮಾದಿತ್ಯನು ಕಟ್ಟಿಸಿದನೆಂಬ ಉಲ್ಲೇಖಗಳಿವೆ. ಈ ದೇವಾಲಯದ ಪ್ರದಕ್ಷಿಣಾ ಪಥದಲ್ಲಿ ಶಿಲಾಬಾಲಿಕೆಯರ ಮೂತರ್ಗಳು ಅತ್ಯಾಕರ್ಷಕವಾಗಿವೆ. ಹುಮನಾಬಾದದಿಂದ ಸುಮಾರು ಹತ್ತು ಕೀ.ಮಿ ದೂರದಲ್ಲಿ ಜಲಸಂಗ್ವಿ ಗ್ರಾಮದಲ್ಲಿ ಅತ್ಯಂತ ಸುಂದರ ಮಹಾದೇವ ದೇವಾಲಯವಿದೆ. ಈ ಪ್ರದೇಶದಲ್ಲೂ ಇಂಥ- ಸುಂದರ ಶಿಲ್ಪ ಕಲೆ ನೋಡಲು ಸಿಗುತ್ತದೆ. ವಿಶೇಷವಾಗಿ ದರ್ಪಣ ಸುಂದರಿ ಶಿಲ್ಪ ಮನಸೆಳೆಯುತ್ತದೆ.
ಆರುನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಜಿಲ್ಲೆಯ ವಿಶೇಷತೆಗಳ ಬಗ್ಗೆ ಜನರಿಗೆ ಗೊತ್ತಾದರೆ ಖಂಡಿತವಾಗಿ ಸೋಜಿಗದ ಭಾರತ (Incredible India) ಇಲ್ಲೇ ಇದೆ. ಮುಂದಿನ ವಾರ ಗುಲ್ಬರ್ಗಾ ಜಿಲ್ಲೆಯ ಪ್ರವಾಸೀ ತಾಣಗಳ ಬಗ್ಗೆ ತಿಳಿಸುತ್ತೇನೆ.
(ಮುಂದುವರೆಯುವುದು)
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

