ಅಂಕಣಗಳು

ಸ್ಥಳೀಯಾಭಿವೃದ್ಧಿ ಅನುದಾನವನ್ನು ವರದಾನವಾಗಿಸಿಕೊಳ್ಳುವ ಬಗೆ

ಸ್ಥಳೀಯಾಭಿವೃದ್ಧಿ ಅನುದಾನವನ್ನು ವರದಾನವಾಗಿಸಿಕೊಳ್ಳುವ ಬಗೆ
Published On :

 ಈ ಕನಸಿನ ಕೂಸಿಗೆ ಜನವರಿ 2 ಮೊದಲನೆ ಹುಟ್ಟಿದ ಹಬ್ಬ. ಈ ಜನುಮದಿನದ ಹರುಷವನ್ನು ತಮ್ಮ ಜೊತೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಬಹಳ ವಿಶಿಷ್ಟ ರೀತಿಯ ಕೂಸಿದು. ಈ ಕೂಸನ್ನು ನೋಡಿ ಅನೇಕರು ಬೆನ್ನು ತಟ್ಟಿದ್ದಾರೆ. ನಮ್ಮ ಕೂಸಿನ ರೀತಿಯೇ ತಮಗೊಂದು ಕೂಸು ಬೇಕೆಂದು ಆಶಿಸಿದ್ದಾರೆ. ಇದು ಯಾವ ರೀತಿಯ ಕೂಸು ಎಂಬ ಕುತೂಹಲ ನಿಮಗೆ ಬಂದಿರಬಹುದು.
ಪಿ. ವಿ. ನರಸಿಂಹರಾಯರು ಭಾರತದ ಪ್ರಧಾನ ಮಂತ್ರಿಯಾದಾಗ ಮೊಟ್ಟಮೊದಲನೆಯ ಬಾರಿಗೆ ಎಲ್ಲಾ ಸಂಸತ್ ಸದಸ್ಯರಿಗೆ ಅವರವರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನವನ್ನು ಕೊಡಲಾರಂಭಿಸಿದರು.  ಂಕಿ-ಔಆಉಖ ಎಂಬ ಹೆಸರಲ್ಲಿ ಮೊದಲು ವರ್ಷಕ್ಕೆ 1 ಕೋಟಿ ರೂಗಳಿಂದ ಪ್ರಾರಂಭವಾದ ಈ ಅನುದಾನ ನಂತರ 2 ಕೋಟಿಗೆ ಏರಿ, ಈಗ ವರ್ಷಕ್ಕೆ 5 ಕೋಟಿ ರೂಗಳಷ್ಟು ಹೆಚ್ಚಿದೆ. ಸಾಮಾನ್ಯವಾಗಿ ಈ ಅನುದಾನದಲ್ಲಿ ರಸ್ತೆ, ನೀರಿನ ಸರಬರಾಜು, ಒಳಚರಂಡಿ ವ್ಯವಸ್ಥೆ, ಶಾಲಾ ಕಟ್ಟಡಗಳ ನಿರ್ಮಾಣ, ಆಸ್ಪತ್ರೆ ನಿರ್ಮಾಣ, ಸ್ವಯಂ ಸೇವಾ ಸಂಸ್ಥೆಗಳಿಗೆ ಅನುದಾನ... ಇತ್ಯಾದಿಗಳಿಗೆ,ಆದ್ಯತೆ ಕೊಡಲಾಗುತ್ತದೆ. ಈ ರೀತಿ ಅನುದಾನ ಕೊಡುವ ವಿವೇಚನೆ ಕುರಿತು ಸಾಕಷ್ಟು ಅಪಸ್ವರವೂ ಇದೆ. ಈ ಅನುದಾನ ಕೊಡುವುದು ತಪ್ಪು ಎಂದು, ಇದನ್ನು ರದ್ದುಪಡಿಸಲು ಕೆಲವರು ನ್ಯಾಯಾಲಯಗಳ ಬಾಗಿಲನ್ನು ತಟ್ಟಿದ್ದಾರೆ. ಕೆಲವು ಸಂಸತ್ ಸದಸ್ಯರು ಈ ಅನುದಾನದ ಶೇಕಡ 80 ಕ್ಕಿಂತ ಹೆಚ್ಚು ಹಣವನ್ನು ಜನೋಪಯೋಗಿ ಕಾರ್ಯಗಳಿಗೆ ಉಪಯೋಗಿಸಿದ್ದಾರೆ. ಇನ್ನು ಕೆಲವರು ಈ ಅನುದಾನದ ಶೇಕಡ 20 ರಷ್ಟೂ ಖರ್ಚುಮಾಡದೇ ಪ್ರಸಿದ್ಧರೂ ಆಗಿದ್ದಾರೆ. ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದ ಉಪಯೋಗ ಕುರಿತು ಖ್ಯಾತ ಪತ್ರಕರ್ತ ಎ. ಸೂರ್ಯಪ್ರಕಾಶ್ ಅವರು ಒಂದು ಅತ್ಯುತ್ತಮ ಗ್ರಂಥವನ್ನೇ ಬರೆದಿದ್ದಾರೆ. ಈ ಪುಸ್ತಕದಲ್ಲಿ ಈ ಅನುದಾನ ಖರ್ಚು ಮಾಡುವುದರಲ್ಲಿ ಉಂಟಾಗಿರುವ ಅನೇಕ ಲೋಪದೋಷಗಳನ್ನು ಎತ್ತಿಹಿಡಿದಿದ್ದಾರೆ.
ಂಕಿ-ಔಆಉಖ ಅನುಸರಿಸಿ ಅನೇಕ ರಾಜ್ಯಗಳಲ್ಲಿ 'ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನ'ವನ್ನು ಪ್ರಾರಂಭಿಸಲಾಗಿದೆ. ನಮ್ಮ ರಾಜ್ಯದಲ್ಲಿ ಎಸ್.ಎಂ.ಕೃಷ್ಣ ರವರ ಅವಧಿಯಲ್ಲಿ 10 ಲಕ್ಷ ರೂಗಳಿಂದ ಕರ್ನಾಟಕ ರಾಜ್ಯ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಪ್ರಾರಂಭವಾಗಿದ್ದು, ಈಗ ವರ್ಷಕ್ಕೆ 2 ಕೋಟಿ ರೂಗಳಿಗೆ ತಲುಪಿದೆ. ಈ ಅನುದಾನವನ್ನು ಖರ್ಚು ಮಾಡಲು ರೂಪಿಸಿರುವ ನಿರ್ದಿಷ್ಟ ನಿಯಮಾವಳಿಗಳ ಅಡಿಯಲ್ಲಿಯೇ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಿದೆ. ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಅವರು ಈ ರೀತಿಯ ಅನುದಾನ ಕೊಡುವುದು ಸೂಕ್ತವಲ್ಲ ಎಂಬ ವಾದವನ್ನು ಮುಂದಿಟ್ಟು ತಮ್ಮ ರಾಜ್ಯದಲ್ಲಿ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರದ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನವನ್ನೂ ತನ್ನ ರಾಜ್ಯದಲ್ಲಿ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಇದೇ ಭಾವನೆಯನ್ನು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಸಹ ವ್ಯಕ್ತಪಡಿಸಿದ್ದಾರೆ.
ಆದರೆ ಈ ಅನುದಾನದಿಂದ ಸಾಕಷ್ಟು ಕಡೆ ಒಳ್ಳೆಯ ಕಾರ್ಯ ಆಗಿರುವುದೂ ನಿಜ. ಉದಾಹರಣೆಗೆ ಎನ್‌ಡಿಎ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ, ಅರುಣ್ ಶೌರಿ ಅವರು ರಾಜ್ಯಸಭಾ ಸದಸ್ಯರಾಗಿದ್ದಾಗ ಇಡೀ ದೇಶದಲ್ಲಿಯೇ ಅತ್ಯಂತ ವಿಶಿಷ್ಟವಾದ ಯೋಜನೆಯೊಂದನ್ನು ತನ್ನ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ಮಾಡಿ, ಅನೇಕರ ಹುಬ್ಬೇರುವಂತೆ ಮಾಡಿದರು. ಕಾನ್ಪುರ ಐಐಟಿಯಲ್ಲಿ ಪರಿಸರ ವಿಭಾಗ ಮತ್ತು ಪರಿಸರ ಇಂಜಿನಿಯರಿಂಗ್ ವಿಭಾಗಕ್ಕೆ ಅಗತ್ಯ ಸೌಲಭ್ಯಗಳಿರುವ ಪ್ರಯೋಗಾಲಯದ ಕೊರತೆ ಇರುವುದನ್ನು ಮನಗಂಡರು. ಅಲ್ಲಿನ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಇಲ್ಲದಿರುವುದರಿಂದ ವಿಶೇಷ ಅಧ್ಯಯನಕ್ಕೆ ವಿದೇಶಗಳಿಗೆ ತೆರಳಿ ಅಲ್ಲಿಯೇ ನೆಲಸುತ್ತಿರುವುದರಿಂದ ನಮ್ಮ ದೇಶಕ್ಕೆ ಉಂಟಾಗುತ್ತಿದ್ದ ಅಪಾರ ಪ್ರತಿಭಾ ನಷ್ಟವನ್ನು ಗಮನಿಸಿ ಪ್ರಪಂಚದಲ್ಲಿಯೇ ಅತ್ಯುತ್ತಮ ಪ್ರಯೋಗಾಲಯವನ್ನು ಸುಮಾರು 11 ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟರು. ಹಿಂದೆ ಉಂಟಾಗುತ್ತಿದ್ದ ಪ್ರತಿಭಾ ಪಲಾಯನ ಇಂದು ನಿಂತು ದೇಶಕ್ಕೆ ಪ್ರತಿಭೆಗಳಿಗೆ ಗರಿಷ್ಟ ಲಾಭ ದೊರಕಿದೆ.
ಜನಪ್ರತಿನಿಧಿಗಳ ಬಳಿ ಮುಖ್ಯಮಂತ್ರಿಗಳ ನಿಧಿಯಿಂದ ತಮ್ಮ ಚಿಕಿತ್ಸೆಗೆ ಸಹಾಯ ಕೊಡಿಸಬೇಕೆಂದು ವರ್ಷದಲ್ಲಿ ನೂರಾರು ಜನ ಬರುತ್ತಾರೆ. ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಸಾಕಷ್ಟು ಜನಕ್ಕೆ ಪ್ರಯೋಜನವೂ ಆಗಿದೆ. ಅದೇ ಸರಣಿಯಲ್ಲಿ ಮೂತ್ರ ಪಿಂಡದ ಸಮಸ್ಯೆಗೆ ಸಂಬಂಧಪಟ್ಟಂತೆ ಅಗತ್ಯವಿರುವುದು ಡಯಾಲಿಸಿಸ್ ಚಿಕಿತ್ಸೆ.  ಸಮಸ್ಯೆಯ ಗಂಭೀರತೆಯ ಅನುಗುಣವಾಗಿ ವಾರಕ್ಕೆ ಒಮ್ಮೆ, ಕೆಲವರಿಗೆ ವಾರಕ್ಕೆ ಎರಡು ಬಾರಿ, ಇನ್ನು ಕೆಲವು ವ್ಯಕ್ತಿಗಳಿಗೆ ಎರಡು ದಿನಗಳಿಗೆ ಒಮ್ಮೆ- ಈ ರೀತಿ ತ್ರಾಸದಾಯಕ ಡಯಾಲಿಸಿಸ್ ಕ್ರಿಯೆ ಅವಶ್ಯವಿರುತ್ತದೆ. ಸುಮಾರು 4 ಗಂಟೆಗಳ ಕಾಲ ಪ್ರತಿ ಬಾರಿ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ. ಚಿಕಿತ್ಸೆ ನಂತರ ವ್ಯಕ್ತಿ ದೈಹಿಕವಾಗಿ ಸಾಕಷ್ಟು ನಿಸ್ತೇಜನಾಗುತ್ತಾನೆ. ಆದರೆ ಅದಕ್ಕಿಂತ ಹೆಚ್ಚು ಪ್ರತಿರೋಗಿಯು ಆರ್ಥಿಕವಾಗಿ ಜರ್ಜರಿತರಾಗುತ್ತಾನೆ. ಖಾಸಗಿ ಆಸ್ಪತ್ರೆಯಲ್ಲಿ ಒಮ್ಮೆ ಡಯಾಲಿಸಿಸ್ ಮಾಡಿಸಿಕೊಂಡರೆ ರೂ 1000 ಕ್ಕೂ ಹೆಚ್ಚು ಹಣವನ್ನು ವೆಚ್ಚ ಮಾಡಬೇಕಾಗುತ್ತದೆ. ವಾರಕ್ಕೆ 3 ಬಾರಿ ಎಂದುಕೊಂಡರೆ ಕನಿಷ್ಟ ರೂ. 3000 ಮತ್ತು ತಿಂಗಳಿಗೆ ರೂ 12000, ವರ್ಷಕ್ಕೆ ಸುಮಾರು 1 ಲಕ್ಷ ರೂಗಳಿಗೂ ಹೆಚ್ಚು ಹಣ ಖರ್ಚಾಗುತ್ತದೆ. ಎಷ್ಟು ಜನ ಇದನ್ನು ಭರಿಸಲು ಸಾಧ್ಯ? ನಮ್ಮ ಸಮಾಜದ ಬಹಳಷ್ಟು ಬಂಧುಗಳಿಗೆ ಈ ಖರ್ಚನ್ನು ಭರಿಸುವುದು ಊಹೆ ಮಾಡಲಿಕ್ಕೂ ಸಾಧ್ಯವಿಲ್ಲ. ಈ ಸಮಸ್ಯೆಯಿಂದ ಪೀಡಿತರಾದ ರೋಗಿಗಳನ್ನು ನೋಡುತ್ತಾ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಿಂದ ಈ ಕುರಿತು ಒಂದು ಪ್ರಯೋಗವನ್ನೇಕೆ ಮಾಡಬಾರದೆಂದು ನನ್ನಲ್ಲಿ ಯೋಜನೆಯೊಂದು ಹೊಳೆಯಿತು. ಅದರ ಫಲವೇ ರಾಜಾಜಿನಗರದಲ್ಲಿ ಜನಿಸಿರುವ ನಮ್ಮ ಕೂಸು ಪಂ. ದೀನದಯಾಳ್ ಉಪಾಧ್ಯಾಯ ಡಯಾಲಿಸಿಸ್ ಕೇಂದ್ರ. ರಾಜ್ಯ ಆರೋಗ್ಯ ಇಲಾಖೆಯಿಂದ ಅಗತ್ಯ ಅನುಮತಿ ಪಡೆದು, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಕೇವಲ ಆರು ತಿಂಗಳಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಿಸಿ, 9 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಿ, ಶುದ್ಧನೀರು ದೊರಕಲು ಖ.ಕ ಯಂತ್ರವನ್ನು ಅಳವಡಿಸಿ ನಿರಂತರ ವಿದ್ಯುತ್ ಸರಬರಾಜು ಇರುವ ಅನುಕೂಲವಾಗುವಂತೆ ್ಖಕಿಖ ವ್ಯವಸ್ಥೆಯನ್ನು ಅಳವಡಿಸಿ ಜೊತೆಗೆ ಜನರೇಟರನ್ನು ಕೂಡ ಒಂದು ಭಾಗವನ್ನಾಗಿ ಸೇರಿಸಿ ನಮ್ಮ ಕೇಂದ್ರ ಎದ್ದುನಿಂತಿತು. ಡಯಾಲಿಸಿಸ್ ಕೇಂದ್ರ ತನ್ನ ಎಲ್ಲಾ ಪ್ರಾಥಮಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಿ 02-01-2012 ರಂದು ಕಾರ್ಯಾರಂಭ ಮಾಡಿತು.
ಈ ಕೇಂದ್ರ 3 ಕಾರಣಗಳಿಗಾಗಿ ಇಡೀ ರಾಜ್ಯದಲ್ಲಿ ವಿಶಿಷ್ಟ. ಮೊದಲನೆಯದಾಗಿ ಇಡೀ ವ್ಯವಸ್ಥೆ  ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಿಂದ ನಿರ್ಮಿಸಲ್ಪಟ್ಟಿರುವುದು. ಯಾರಿಂದಲೂ ಒಂದು ಪೈಸೆ ದೇಣಿಗೆಯನ್ನು ನಾವು ಪಡೆಯಲಿಲ್ಲ. ಎರಡನೆಯದಾಗಿ ರಾಜ್ಯದಲ್ಲೇ ಪ್ರಪ್ರಥಮ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಈ ವ್ಯವಸ್ಥೆ ಇಂದು ನಡೆಯುತ್ತಿದೆ. ಡಯಾಲಿಸಿಸ್ ಕೇಂದ್ರವನ್ನಂತೂ ನಿರ್ಮಿಸಿದೆವು. ಆದರೆ ಅದನ್ನು ಯಾರು ನಡೆಸಬೇಕು ಎಂದು ಬಹಳ ಗಂಭೀರ ಎದುರುಗೊಂಡಿತು. ಸರ್ಕಾರದಿಂದಲೇ ಇದನ್ನು ನಡೆಸುವ ಜವಾಬ್ದಾರಿ ತೆಗೆದುಕೊಂಡರೆ ಆಗಬಹುದಾದ ಸಾಧಕ-ಬಾಧಕಗಳನ್ನು ಯೋಚಿಸಿದೆವು. ಆ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಯವರಿಗೆ ಇದನ್ನು ಹಸ್ತಾಂತರಿಸಲು ನಿರ್ಧರಿಸಿದ್ದೆವು. ಸರ್ಕಾರದಲ್ಲೂ ಈ ನಿರ್ಧಾರಕ್ಕೆ ಪ್ರೋತ್ಸಾಹ ದೊರಕಿತು. ಯಾವ ಸ್ವಯಂಸೇವಾ ಸಂಸ್ಥೆಗೆ ಕೊಡುವುದು ಎಂದು ಯೋಚಿಸುತ್ತಿರುವಾಗ ಈ ಕಾರ್ಯವನ್ನು ಒಂದು ಸೇವೆಯನ್ನಾಗಿ ತಿಳಿದು ನಡೆಸಲು ನಮ್ಮ ಕಣ್ಣಮುಂದೆ ಕಂಡದ್ದು ರೋಟರಿ ಕ್ಲಬ್ ಸ್ನೇಹಿತರು. ಪೀಣ್ಯ ರೋಟರಿ ಸಂಸ್ಥೆಯ ಚಟುವಟಿಕೆಗಳನ್ನು ಬಹಳ ದಿನದಿಂದ ನಾನು ಗಮನಿಸಿದ್ದೆ. ಅವರು 15 ವರ್ಷಗಳಿಂದ ಜೈಪುರ ಕೃತಕ ಕಾಲುಗಳನ್ನು ವಿತರಿಸುತ್ತಿರುವ ಕಾರ್ಯಕ್ರಮವಿರಬಹುದು, ಪೀಣ್ಯದಲ್ಲಿ ಶಾಲಾ ಮಕ್ಕಳ ಆರೋಗ್ಯ ಕಾಪಾಡುವ ವ್ಯವಸ್ಥೆ ಇರಬಹುದು. ಹೆಂಗಸರಿಗೆ ಹಾಗೂ ಮಕ್ಕಳಿಗೆ ನಡೆಸುತ್ತಿರುವ ಸಂಜೀವಿನಿ ಕ್ಲಿನಿಕ್ ಇರಬಹುದು... ಇದುವರೆವಿಗೂ 27,000 ವ್ಯಕ್ತಿಗಳಿಗೆ ಕೃತಕ ಕಾಲುಗಳನ್ನು ಕೊಟ್ಟಿರುವ ಸಾಧನೆ ಇವರದು. ಈ ಎಲ್ಲದರಲ್ಲಿ ಅವರ ಶ್ರದ್ಧೆ ಮತ್ತು ಕ್ಷಮತೆ ಎದ್ದು ಕಾಣುತ್ತಿತ್ತು. ಪ್ರತಿ ತಿಂಗಳು ಡಯಾಲಿಸಿಸ್ ಕೇಂದ್ರವನ್ನು ನಡೆಸಲು ತಂತ್ರಜ್ಞರ ಮತ್ತು ಸಿಬ್ಬಂದಿಯ ವೇತನವೂ ಸೇರಿದಂತೆ ಕನಿಷ್ಟ 3 ಲಕ್ಷ ರೂಗಳ ಖರ್ಚು ಇದೆ. ಅದನ್ನು ತಾವು ದೇಣಿಗೆಗಳ ಮೂಲಕ ಭರಿಸುವುದಾಗಿ ಅವರು ನಿರ್ಧರಿಸಿದರು. ರೋಟರಿ ಸಂಸ್ಥೆ (ಪೀಣ್ಯ) ಮತ್ತು ಸರ್ಕಾರದ ನಡುವೆ ಂ.ಕ.್ಖ (ಒಡಂಬಡಿಕೆ) ಸಹ ಸಿದ್ದವಾಗಿ ಅದಕ್ಕೆ ಎರಡು ಕಡೆಯಿಂದ ಸಹಿಗಳನ್ನು ಹಾಕಲಾಗಿದೆ. ಈ ಕೇಂದ್ರದ ಮೂರನೆಯ ವೈಶಿಷ್ಟ್ಯ ಏನೆಂದರೆ ಬಡವರಿಗೆ ಸಂಪೂರ್ಣವಾಗಿ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ಕೊಡಲಾಗುತ್ತಿದೆ. ಇಕಿಔ ಕಾರ್ಡ್ ಹೊಂದಿದವರಿಗೆ, ಇಕಿಔ ಕಾರ್ಡ್ ಇಲ್ಲದಿದ್ದರೂ ಬಡವರಾಗಿರುವವರಿಗೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆರ್ಥಿಕವಾಗಿ ಹಣ ಪಾವತಿ ಮಾಡಲು ಶಕ್ತಿ ಇರುವವರು ಪ್ರತಿ ಡಯಾಲಿಸಿಸ್ ಚಿಕಿತ್ಸೆಗೆ ಪಾವತಿಸಬೇಕಾದ ಹಣ ಕೇವಲ 500 ರೂಗಳು ಮಾತ್ರ.
ಡಿಸೆಂಬರ್ ಕೊನೆವರೆಗೂ ನಮ್ಮ ಕೇಂದ್ರದಲ್ಲಿ ಆಗಿರುವ ಡಯಾಲಿಸಿಸ್ ಚಿಕಿತ್ಸೆ ಸಂಖ್ಯೆ ಸುಮಾರು 2700. ಮುಂದಿನ ವರ್ಷ ಇದನ್ನು 4000 ವರೆಗೂ ಏರಿಸುವ ಸಾಮರ್ಥ್ಯ ಈ ಕೇಂದ್ರಕ್ಕೆ ಬಂದಿದೆ. ನಮ್ಮ ಡಯಾಲಿಸಿಸ್ ಕೇಂದ್ರದ ವ್ಯವಸ್ಥೆ ಹಾಗೂ ಕಾರ್ಯವನ್ನು ನೋಡಿ ರಾಜ್ಯ ಸರ್ಕಾರ ಇನ್ನೆರಡು ಡಯಾಲಿಸಿಸ್ ಯಂತ್ರಗಳನ್ನು ಕೊಡುಗೆಯಾಗಿ ನೀಡಿದೆ. ಲೋಕಾರ್ಪಣೆಯ ದಿನ ಈ ಕೇಂದ್ರದ ಕಲ್ಪನೆ ಕೇಳಿ ಸಂತೋಷಗೊಂಡ ಅಂದಿನ ಮುಖ್ಯ ಮಂತ್ರಿಗಳಾದ  ಜಗದೀಶ್ ಶೆಟ್ಟರ್ ಅವರು ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಈ ರೀತಿ ಡಯಾಲಿಸಿಸ್ ಕೇಂದ್ರವನ್ನು ಸರ್ಕಾರದಿಂದಲೇ ಪ್ರಾರಂಭಿಸಲಾಗುವುದೆಂದು ಘೋಷಿಸಿದರು. ನಮ್ಮ ಕೇಂದ್ರದಿಂದ ಸ್ಫೂರ್ತಿ ಪಡೆದು ನಮ್ಮ ಶಾಸಕ ಮಿತ್ರರನೇಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿಯೂ ಸಹ ಈ ರೀತಿಯ ಡಯಾಲಿಸಿಸ್ ಕೇಂದ್ರಗಳನ್ನು ಪ್ರಾರಂಭಿಸಹೊರಟಿದ್ದಾರೆ.
ಈ ಕಾರ್ಯದಿಂದ ನಮಗೆ ಹೆಚ್ಚಿನ ವಿಶ್ವಾಸ ಬಂದಿದೆ. ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯನ್ನು ಹೊಸ ವರ್ಷದ ಮೊದಲನೆ ತಿಂಗಳಲ್ಲಿ ಇಡುತ್ತಿದ್ದೇವೆ. ಈ ಬಾರಿ ರೋಟರಿ ಬಸವೇಶ್ವರನಗರ ಜೊತೆಗೂಡಿ ಮೊತ್ತಮೊದಲ ಕಡಿಮೆ ಖರ್ಚಿನ ತಪಾಸಣಾ ಕೇಂದ್ರವನ್ನು ಪ್ರಾರಂಭಿಸುತ್ತಿದ್ದೇವೆ. ಕಟ್ಟಡದ ಪುನರ್ ವಿನ್ಯಾಸಕ್ಕೆ ತಗಲುವ ಸುಮಾರು 40 ಲಕ್ಷ ರೂಗಳನ್ನು ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಿಂದ ಭರಿಸಲಾಗುತ್ತದೆ. ಸುಮಾರು 50 ಲಕ್ಷ ರೂಗಳಷ್ಟು ವೆಚ್ಚದ ಅಗತ್ಯ ಯಂತ್ರೋಪಕರಣಗಳನ್ನು ರೋಟರಿ ಸಂಸ್ಥೆ ಅಳವಡಿಸುತ್ತಿದೆ. ರಕ್ತ, ಮೂತ್ರ, ಮಲ, ಇತ್ಯಾದಿಗಳ ವಿವರವಾದ ಪರೀಕ್ಷೆ, ಇಸಿಜಿ, ಇಕೋ, ಎಂಆರ್‌ಐ ಮುಂತಾದ ಪರೀಕ್ಷೆಗಳನ್ನು ಈ ಕೇಂದ್ರದಿಂದ ಬಡವರಿಗೆ ಕೈಗೆಟುಕುವ ದರದಲ್ಲಿ ಮಾಡಹೊರಟಿದ್ದೇವೆ. ನಮ್ಮ ಈ ಎರಡೂ ಕನಸಿನ ಕೂಸುಗಳನ್ನು ತಾವೆಲ್ಲರೂ ಹರಸಿ ಬೆನ್ನು ತಟ್ಟುತ್ತೀರೆಂದು ನನ್ನ ವಿಶ್ವಾಸ.


- ಎಸ್. ಸುರೇಶ್ ಕುಮಾರ್
ರಾಜ್ಯದ ಮಾಜಿ ಸಚಿವರು
nimmasuresh.2009@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.