ಸಂವಹನದ ಬಹು ಆಯಾಮ, ಸತ್ಯ-ಮುಕ್ತತೆಯೇ ಮೂಲ ನಿಯಮ
'ಟಿ.ವಿ ಆಫ್ ಮಾಡೋ. ಕೇಳಿ ಕೇಳಿ ಸಾಕಾಗ್ಹೋಯ್ತು'. ಶಾಲೆಗೆ ಹೋಗುವ ಮಕ್ಕಳಿರುವ ಪ್ರತಿಯೊಂದು ಭಾರತೀಯ ಕುಟುಂಬದಲ್ಲೂ ಈ ಪಲ್ಲವಿ ದಿನವೂ ಕೇಳಿಸುತ್ತಲೇ ಇರುತ್ತದೆ. ಸಾಮಾನ್ಯವಾಗಿ ಟಿವಿಗೆ ಅಂಟಿಕೊಂಡ ಮಕ್ಕಳಿಂದ ರೇಜಿಗೆ ಹುಟ್ಟಿ, ತಂದೆ ಅಥವಾ ತಾಯಿ ಈ ಮಾತನ್ನಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ತಿರುಗುಮರುಗಾಗುತ್ತಿದೆ. ನ್ಯೂಸ್ ಚಾನೆಲ್ಗಳ ಮುಂದೆ ಚಕ್ಕಳಮಕ್ಕಳ ಹಾಕಿಕೊಂಡು ಕುಳಿತ ಪೋಷಕರಿಗೆ ಟಿವಿ ಆಫ್ ಮಾಡಲು ಮಕ್ಕಳೇ ಹೇಳುತ್ತಿದ್ದಾರೆ. 'ನೋಡಿದ್ದನ್ನೇ ಮತ್ತೆ ಮತ್ತೆ ಎಷ್ಟು ಸರ್ತಿ ನೋಡ್ತೀರಿ? ಅದರಲ್ಲೇನು ಅಂಥ ಇಂಟ್ರೆಸ್ಟಿಂಗ್ ವಿಷಯ ಇದೆ?' ಎನ್ನುವ ವಾದ ಅವರದ್ದು.
ಮಕ್ಕಳು ಹೇಳುತ್ತಿರುವುದರಲ್ಲೂ ಸತ್ಯವಿದೆ. ನಾವು ಟೆಲಿವಿಷನ್ಗೆ ದಾಸರಾಗುತ್ತಿದ್ದೀವಾ? ಈ ಬಗ್ಗೆ ನಾವು ಯೋಚಿಸುತ್ತಲೇ ಇಲ್ಲ. 'ಇಂದು ಮಾಧ್ಯಮಗಳು ಟಿಆರ್ಪಿ(ಟೆಲಿವಿಷನ್ ರೇಟಿಂಗ್ ಪಾಯಿಂಟ್)ಯ ಒತ್ತೆಯಾಳಾಗಿಬಿಟ್ಟಿವೆ' ಎನ್ನುತ್ತಾರೆ ಮಾಧ್ಯಮ ಅಧ್ಯಯನ ಕೇಂದ್ರದ ಅಧ್ಯಕ್ಷ ಎನ್. ಭಾಸ್ಕರ್ ರಾವ್. 'ನ್ಯೂಸ್ ಚಾನೆಲ್ಗಳು ಸಮೂಹ ಸನ್ನಿ ಸೃಷ್ಟಿಸಿಬಿಟ್ಟಿವೆ. ಹಾಗಾಗೆ ನಾವು ಅವುಗಳ ಮೂಲಕ ದೇಶದ ತಿಣುಕಾಟ, ಧ್ಯೇಯ, ಅವಶ್ಯಕತೆಗಳ ಬಗ್ಗೆ ಅರಿತುಕೊಳ್ಳುವ ಉದ್ದೇಶವನ್ನೇ ತ್ಯಜಿಸಿಬಿಟ್ಟಿದ್ದೇವೆ. ಗ್ರಾಹಕೀಕರಣವನ್ನು ಬೆಂಬಲಿಸಿ ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದೇ ಭಾರತೀಯ ಚಾನೆಲ್ಗಳ ಮುಖ್ಯ ಉದ್ದೇಶವಾಗಿಬಿಟ್ಟಿದೆ. ನ್ಯೂಸ್ ಬುಲೆಟಿನ್ನಿಂದ ಹಿಡಿದು, ವಿಷಯಗಳ ಆಯ್ಕೆಯನ್ನೂ ಕೂಡ ಪ್ರತಿವಾರ ಬರುವ ಟಿಆರ್ಪಿಯೇ ನಿರ್ಧರಿಸತೊಡಗಿದೆ. ಈ ರೇಟಿಂಗ್ಗಳೆಲ್ಲ ಮೋಸವಲ್ಲದೇ ಬೇರೇನೂ ಅಲ್ಲ. ವರ್ಷಗಳಿಂದ ಈ ಟಿಆರ್ಪಿ, ದೇಶಕ್ಕುಂಟು ಮಾಡಿರುವ ನಷ್ಟ ಅಷ್ಟಿಷ್ಟಲ್ಲ. ಈ ವೈಪರೀತ್ಯವನ್ನು ಭೋಪಾಲ್ ಗ್ಯಾಸ್ ದುರಂತಕ್ಕೆ ಹೋಲಿಸಿದರೂ ತಪ್ಪಾಗಲಾರದು...' ಎನ್ನುತ್ತಾರವರು.
ಹಾಗಿದ್ದರೆ ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿಸುವ ಕೆಲಸವನ್ನು ಪ್ರಭಾವಿ ಮಾಧ್ಯಮ ಮನೆಗಳು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವವೇ ಎನ್ನುವ ಪ್ರಶ್ನೆಯೂ ಕಾಡದಿರದು. ಆದರೆ ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ಅದು ಮಾತ್ರ ಸಾಧ್ಯವಿಲ್ಲ. ಹಿರಿಯ ಪತ್ರಕರ್ತ ಎಮ್.ಬಿ.ಲಾಲ್ ಈ ವಿಚಾರವಾಗಿ ಮಾತನಾಡುತ್ತಾ-'ಸರ್ಕಾರ ಮತ್ತು ಮಾಧ್ಯಮ ಮನೆಗಳು ಪ್ರಮುಖ ಮಾಹಿತಿಯನ್ನು ಮುಚ್ಚಿಡಲು ಪ್ರಯತ್ನ ಪಟ್ಟಷ್ಟೂ ಸಾಮಾಜಿಕ ಮಾಧ್ಯಮಗಳ ರೆಕ್ಕೆ ಬೆಳೆಯುತ್ತಾ ಹೋಗುತ್ತದೆ. ಜನರಿಗೆ ಮಾಹಿತಿ ತಲುಪುವುದನ್ನು ಯಾರಿಂದಲೂ ತಪ್ಪಿಸುವುದು ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನ ಬೆಳೆಯುತ್ತಿರುವುದರಿಂದ ಉತ್ಪಾದನೆಗಳು ಅಗ್ಗವಾಗುತ್ತಾ ಹೋಗುತ್ತಿವೆ. ಎಲ್ಲರಿಗೂ ಕ್ಷಣಾರ್ಧದಲ್ಲಿ ಮಾಹಿತಿ ತಲುಪಿಬಿಡುತ್ತದೆ. ಹಾಗಾಗೇ ಮಾಹಿತಿ ಹರಿದಾಡುವಿಕೆಯನ್ನು ನಿಲ್ಲಿಸುವುದು ಸರ್ಕಾರಗಳಿಂದ ಸಾಧ್ಯವಿಲ್ಲ' ಎನ್ನುತ್ತಾರೆ. ಅವರ ಮಾತಿಗೆ ನಾನೊಂದಿಷ್ಟು ಪೂರಕ ಮಾಹಿತಿಯನ್ನು ಒದಗಿಸಬಯಸುತ್ತೇನೆ. ಹೇಗೆ ಮಾಹಿತಿಯನ್ನು ಮುಚ್ಚಿಡುವುದು ಸಾಧ್ಯವಿಲ್ಲವೋ, ಹಾಗೆಯೇ ಸತ್ಯವನ್ನೂ ಹುದುಗಿಸಿಡುವುದೂ ಸಾಧ್ಯವಿಲ್ಲ. ಇಜಿಪ್ಟ್ನ ತಾಹ್ರೀರ್ ಚೌಕದಲ್ಲಿ ನಡೆದ ಘಟನೆಗಳ ಬಗ್ಗೆ ಆ ದೇಶದ ಮಾಧ್ಯಮಗಳು ಗಪ್ಚುಪ್ ಕುಳಿತವಾದರೂ, 'ತಾಹ್ರೀರ್ ಸ್ಕ್ವಾಯರ್' ಎನ್ನುವ ಪುಟ ಫೇಸ್ಬುಕ್ನಲ್ಲಿ ಜನ್ಮ ತಾಳಿ ಅಲ್ಲಿ ನಡೆದಿದ್ದನ್ನೆಲ್ಲ ಹೊರಗೆಡವಲಿಲ್ಲವೇ?
ಇಂತಹ ಸಮಯದಲ್ಲಿ ಜಸ್ಟಿಸ್ ಕಾಟ್ಜುರಂತಹ ಸಕ್ರಿಯ ವ್ಯಕ್ತಿ ಪ್ರೆಸ್ ಕೌನ್ಸಿಲ್ನ ಅಧ್ಯಕ್ಷರಾಗಿರುವುದು ಒಳ್ಳೆಯದೇ ಆಯಿತು ಎಂದು ಕೆಲವರು ಹೇಳುತ್ತಾರೆ. ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ನ ನಿರ್ದೇಶಕಿ ಪಿ.ಎನ್. ವಾಸಂತಿ ಆ ರೀತಿಯ ಭಾವನೆ ಬೆಳೆಯುವುದಕ್ಕೆ ಕಾರಣವನ್ನೂ ಕೊಡುತ್ತಾರೆ. 'ಕಾಟ್ಜು ತಮಗೆ ಸತ್ಯ ಅನ್ನಿಸಿದ್ದನ್ನು ನೇರವಾಗೇ ಹೇಳುತ್ತಾರೆ. ಪ್ರಖ್ಯಾತ ಮಾಧ್ಯಮಗಳು ಅಸ್ಪಷ್ಟವಾಗಿ ಹೇಳುವ ವಿಷಯವನ್ನು ಅವರು ಸ್ಪಷ್ಟವಾಗಿ ತೆರೆದಿಡುತ್ತಾರೆ'.
ಪತ್ರಕರ್ತೆ ಶಕುಂತಲಾ ನರಸಿಂಹನ್, ಸಂವಹನದ ಪರ್ಯಾಯ ಮಾಧ್ಯಮವಾಗಬಲ್ಲ ಮಾರ್ಗವೊಂದರ ಬಗ್ಗೆ ಉದಾಹರಣೆಯನ್ನು ನೀಡುತ್ತಾರೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಎಡಿಫಿ ಶಾಲೆಯ ಮಕ್ಕಳು, ಕಂಡಲ್ಲಿ ಕಸ ಎಸೆಯುವವರನ್ನು ನೋಡಿದ ಕೂಡಲೇ ಸೀಟಿ ಊದಿ ಅವರನ್ನು ಎಚ್ಚರಿಸುತ್ತಿದ್ದಾರಂತೆ. ಅಷ್ಟೇ ಅಲ್ಲದೆ, ಹಾಗೆ ತಪ್ಪು ಮಾಡಿದವರ ಬಳಿ ತೆರಳಿ ಕರಪತ್ರ ನೀಡಿ, ತಿಳಿಹೇಳಿ, ಅವರ ಕೈಗೆ ಸೀಟಿಯೊಂದನ್ನೂ ಕೊಟ್ಟು ಕಳಿಸುತ್ತಾರೆ. ಈ ಸರಳ ಮತ್ತು ಸಕ್ರಿಯ ನಡೆ ಬಹಳ ಪರಿಣಾಮವನ್ನು ಬೀರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ಸಮರ್ಥ ಸಂವಹನ ಒಂದು ಕಲೆಯಿದ್ದಂತೆ, ಅದನ್ನು ಪ್ರಚುರ ಪಡಿಸಲು ಕೊಂಚ ನೈಪುಣ್ಯವಿರಬೇಕಾಗುತ್ತದೆ. ಸಂಗೀತದ ಮೂಲಕ, ಶೋಕ ಗೀತೆಗಳ ಮೂಲಕ, ಸ್ಮೋಕ್ ಸಿಗ್ನಲ್ಗಳ ಮೂಲಕ ಜನರಿಗೆ ಸ್ಪಷ್ಟವಾಗಿ ಸಂದೇಶ ಕಳುಹಿಸಬಹುದು. ಅಥವಾ 'ಅನಾಬೆಲ್ ಹರ್ನಾಂಡೇಜ್'ರಂತೆ ಜನರಿಗೆ ಪ್ರೇರಣೆ ನೀಡುವ ಕ್ಷಮತೆಯನ್ನು ಬೆಳೆಸಿಕೊಂಡರೂ ನಡೆಯುತ್ತದೆ. 'ಗೋಲ್ಡನ್ ಪೆನ್ ಆಫ್ ಫ್ರೀಡಂ' ಪ್ರಶಸ್ತಿ ಸ್ವೀಕರಿಸುತ್ತಾ ಈ ಮೆಕ್ಸಿಕನ್ ಪತ್ರಕರ್ತೆ, ತಾನನುಭವಿಸಿದ ಕಷ್ಟದ ಬಗ್ಗೆ, ಆರು ವರ್ಷಗಳಲ್ಲಿ 60,000 ಜನರನ್ನು ನೇಣಿಗೇರಿಸಿದ ತಮ್ಮ ರಾಷ್ಟ್ರದ ಬಗ್ಗೆ ಮಾತನಾಡಿದರು. ಆಕೆ, ಉನ್ನತ ಹುದ್ದೆಯ ಸರ್ಕಾರಿ ಅಧಿಕಾರಿಗಳ ಮತ್ತು ಮಾದಕ ವಸ್ತು ಸಾಗಣೆ/ ಸಂಘಟಿತ ಅಪರಾಧದ ಕೂಟಗಳ ನಡುವಿರುವ ಸಂಬಂಧವನ್ನು ಬಹಿರಂಗಪಡಿಸುವ 'ದಿ ಡ್ರಗ್ ಲಾರ್ಡ್ಸ್' ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕ ಪ್ರಕಟವಾಗುತ್ತಿದ್ದಂತೆಯೇ ಅಲ್ಲಿನ ಸರ್ಕಾರ ಅನಾಬೆಲ್ಗೆ
ಮರಣದಂಡನೆ ವಿಧಿಸಿತು! ಯಾವ ಮಾಧ್ಯಮಗಳೂ ಆಕೆಯ ಸಹಾಯಕ್ಕೆ ಬರಲಿಲ್ಲ. ಅಂದಿನಿಂದ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದಾಳಾಕೆ. ಸರ್ಕಾರದೊಂದಿಗಿನ ತಮ್ಮ ಆರ್ಥಿಕ ಹಿತಾಸಕ್ತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಹಲ್ಲು ಗಿಂಜುವ ಮಾಧ್ಯಮಗಳು ಆಕೆಯ ಪರವಾಗಿ ಮಾತನಾಡಲು ಮುಂದಾಗುತ್ತಿಲ್ಲ. ಇಷ್ಟೆಲ್ಲ ಕಷ್ಟಗಳ ನಡುವೆಯೇ ಕಿಚ್ಚೆದೆಯಿಂದ ಹೋರಾಡುತ್ತಿರುವ ಇಂತಹ ವ್ಯಕ್ತಿಗಳೇ ಜನರಿಗೆ ಪ್ರೇರಣಾ ಶಕ್ತಿಯಾಗಿ ಹೊರಹೊಮ್ಮುವುದು. ಬದಲಾವಣೆಯ ಹರಿಕಾರರಾಗುವುದು. ಸತ್ಯವನ್ನು ಯಾವ ಹೆದರಿಕೆಯಿಲ್ಲದೆ ನುಡಿವ ಗಟ್ಟಿತನವನ್ನು ಅನಾಬೆಲ್ ಮತ್ತು ಮಲಾಲಾ ಯೂಸುಫ್ಜಾಯ್ರಂಥವರು ತೋರಿಸುತ್ತಿರುವುದರಿಂದಲೇ ಅವರುಗಳು ಎಲ್ಲರಿಗೂ ಮಾದರಿಯಾಗುತ್ತಿದ್ದಾರೆ.
ಅಂಕಿ ಅಂಶಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ. ಭಾರತದ ಪ್ರತಿ 5 ಮಕ್ಕಳಲ್ಲಿ 1 ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂಬ ಸತ್ಯ ಹೊರಬಿದ್ದಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕಾದರೆ ಆರೋಗ್ಯ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಜಾಗೃತಿ ತಾಯಿ/ಪೋಷಕರಲ್ಲಿ ಮೂಡುವಂತಾಗಬೇಕು. ಈ ಬಗ್ಗೆ ಪತ್ರಕರ್ತೆ ಪಮೇಲಾ ಫಿಲಿಪೋಸ್ ಹೇಳುವುದು ಹೀಗೆ-'ಹೆಣ್ಣಿನ ಸ್ಥಾನಮಾನ ಕೇವಲ ತಾಯಿಯಾಗಿಯಷ್ಟೇ ಅಲ್ಲದೆ ಎಲ್ಲಾ ನಿಟ್ಟಿನಲ್ಲೂ ಬೆಳೆದಾಗ ಮಾತ್ರ ಶಾಶ್ವತ ಮತ್ತು ಸದೃಢ ಬದಲಾವಣೆ ಆಗಬಲ್ಲದು'. ಇದೆಲ್ಲ ಸಾಧ್ಯವಾಗಬೇಕಾದರೆ ಮೊದಲು ನಮ್ಮ ಮನಸ್ಥಿತಿಯಲ್ಲೂ ಬದಲಾವಣೆಯಾಗಬೇಕಲ್ಲವೇ?
- ಶಶಿ ನಾಯರ್
ಸಂಪಾದಕರು
'ವಿದುರಾ' ನಿಯತಕಾಲಿಕ, 'ಪ್ರೆಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ'ದಿಂದ ಪ್ರಕಾಶಿತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

