ಹೌದು, ಇದು 'ರಾಜಕೀಯ ಧರ್ಮ'ದಾಟವಯ್ಯ...

Updated on: 

ಒಂದು ಕಡೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಗಲು-ರಾತ್ರಿ ತಂತ್ರಗಳ ಜತೆಗೆ ಕುತಂತ್ರಗಳನ್ನೂ ಹೆಣೆಯುತ್ತಿದ್ದಾರೆ. ಇನ್ನೊಂದು ಕಡೆ ಹೇಗಾದರೂ ಮಾಡಿ ಈ ಸರ್ಕಾರವನ್ನು ಉಳಿಸಿಕೊಂಡು ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸ್ವರೂಪದ ಬಜೆಟ್ ಕೊಡಬೇಕು ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹಪಾಹಪಿಸುತ್ತಿದ್ದಾರೆ. ಇದೂ ಕೂಡ ಒಂದು ರೀತಿಯಲ್ಲಿ ಅಧಿಕಾರದಿಂದ ತೆಗೆಯುವ ಮತ್ತು ಉಳಿಸಿಕೊಳ್ಳುವ ಮಲ್ಲಯುದ್ಧ. ಅದರಲ್ಲೂ ತಾವೇ ಮುಖ್ಯಮಂತ್ರಿ ಮಾಡಿದ ಶೆಟ್ಟರ್ ವಿರುದ್ಧ ಯಡಿಯೂರಪ್ಪ, ತಮ್ಮನ್ನು ಮುಖ್ಯಮಂತ್ರಿ ಮಾಡಿದ ಯಡಿಯೂರಪ್ಪ ಅವರ ವಿರುದ್ಧ ಶೆಟ್ಟರ್ ಪರಸ್ಪರ ಯುದ್ಧರಂಗದಲ್ಲಿ ಸೆಣಸಾಡುತ್ತಿದ್ದಾರೆ. ಇವರಿಬ್ಬರ ಜಗಳದಲ್ಲಿ ಬೇಳೆ ಬೇಯಿಸಿಕೊಳ್ಳಬೇಕು ಎಂದು ಪ್ರತಿಪಕ್ಷಗಳು ಬಕಪಕ್ಷಿಯ ತರಹ ಹೊಂಚು ಹಾಕಿಕೊಂಡು ಕುಳಿತಿವೆ.
ಇಷ್ಟೆಲ್ಲದರ ನಡುವೆ ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪ ನಡುವಿನ 'ಕಂದರಕ್ಕೆ' ತಮ್ಮದೇ ಆದ ರೀತಿಯಲ್ಲಿ 'ತೇಪೆ' ಹಚ್ಚಲು ಕೂಡ ಪ್ರಯತ್ನ ನಡೆಯುತ್ತಿದೆ. ಅಂದರೆ, ಇವರಿಬ್ಬರ ನಡುವೆ ಒಂದು ಹಂತದ ಹೊಂದಾಣಿಕೆ ಮೂಡಿಸಲು ಜನಾಂಗದ ಮಠಾಧೀಶರು, ನಾಯಕರು ಪ್ರಯತ್ನಶೀಲರಾಗಿದ್ದಾರೆ. ಎರಡು ದ್ರುವಗಳಂತಾಗಿರುವ ಇಬ್ಬರನ್ನೂ ಎಲ್ಲಾದರೂ ಒಂದು ಕಡೆ ಜತೆ ಸೇರಿಸಬೇಕು ಎಂದು ಶ್ರಮಿಸುತ್ತಿದ್ದಾರೆ. ಈ ರಾಜಕೀಯ ಹಗ್ಗ ಜಗ್ಗಾಟವನ್ನು ನೋಡುತ್ತಿರುವ ಜನರು ನಗಬೇಕೋ? ಅಳಬೇಕೋ? ಗೊತ್ತಾಗದೆ ಒದ್ದಾಡುತ್ತಿದ್ದಾರೆ.
ಹೇಗಾದರೂ ಮಾಡಿ ಸರ್ಕಾರ ತೆಗೆಯಬೇಕು ಎಂದು ಯಡಿಯೂರಪ್ಪ ಅವರು ಶಾಸಕರಿಂದ ರಾಜಿನಾಮೆ ಕೊಡಿಸುವುದು, ಏನೇ ಆದರೂ ಸರ್ಕಾರ ಉಳಿಸಿಕೊಳ್ಳಬೇಕು ಎಂದು ರಾಜಿನಾಮೆ ನೀಡದೇ ಇರುವ ನಿಟ್ಟಿನಲ್ಲಿ ಶಾಸಕರನ್ನು ಜಗದೀಶ್ ಶೆಟ್ಟರ್ ತಡೆಯುವುದು ಒತ್ತಟ್ಟಿಗಿರಲಿ, ಇನ್ನೊಂದು ಕಡೆ ಕೆಲವು ಮಠಾಧೀಶರು ಏತಕ್ಕೆ ಈ ಸರ್ಕಾರ ಉಳಿಯಬೇಕು ಎಂಬುದಕ್ಕೆ ಕಾರಣಕೊಟ್ಟು ಆ ನಿಟ್ಟಿನಲ್ಲಿ ಪ್ರಯತ್ನಶೀಲರಾಗಿರುವುದನ್ನು ಗಮನಿಸಿದರೆ ಅದರ ಹಿಂದೆ ಬೇಡ ಬೇಡ ಎಂದರೂ ಜಾತಿ ರಾಜಕಾರಣ ತನಗರಿವಿಲ್ಲದಂತೆ ನುಸುಳಿದೆ.
ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲಿಂಗಾಯತರು. ಅದರಲ್ಲೂ ಈ ಜನಾಂಗದವರು ಹೆಚ್ಚಾಗಿರುವ ಉತ್ತರ ಕರ್ನಾಟಕ ಭಾಗದವರು. ಇನ್ನು ಅವರ ಸರ್ಕಾರ ಬೀಳಿಸಲು ಹೊರಟಿರುವ ಯಡಿಯೂರಪ್ಪ ಅವರು ಕೂಡ ಲಿಂಗಾಯತರೆ. ಹೀಗಾಗಿ ಸರ್ಕಾರದಅಳಿವು- ಉಳಿವಿಗೆ ಒಂದೇ ಜನಾಂಗದ ಇಬ್ಬರು ಮುಖಂಡರು ತೊಡೆತಟ್ಟಿ ನಿಂತಿರುವುದು ಸಮುದಾಯವನ್ನೇ ಒಡೆಯುವ ಮಟ್ಟಕ್ಕೆ ಬಂದು ನಿಲ್ಲಬಹುದು ಎಂಬ ಆತಂಕ ಕಾಡುತ್ತಿದೆ. ವೀರೇಂದ್ರ ಪಾಟೀಲ್ ಮತ್ತು ಎಸ್.ಆರ್. ಬೊಮ್ಮಾಯಿ ಅವರ ನಂತರ ಮುಖ್ಯಮಂತ್ರಿ ಪಟ್ಟ ಮತ್ತೆ ಈ ಸಮುದಾಯಕ್ಕೆ ಸಿಗಬೇಕಾದರೆ ನಡೆದಿರಬಹುದಾದ ಹೋರಾಟ ಕಡಿಮೆ ಏನೂ ಅಲ್ಲ. ಈಗ ಒಂದೇ ಅವಧಿಯಲ್ಲಿ ಅದೇ ಜನಾಂಗದ ಇಬ್ಬರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿದೆ. ಅಂದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ನಂತರದಲ್ಲಿ ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾದರೂ ಅವರನ್ನು ಕೆಳಗಿಳಿಸಿ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಅವರಿಗೆ ಪಟ್ಟ ಕಟ್ಟಲಾಯಿತು. ಹೀಗಿರುವಾಗ ಸಮುದಾಯಕ್ಕೆ ಬಂದಿರುವ ಅಧಿಕಾರವನ್ನು ಯಾತಕ್ಕಾಗಿ ಕಳೆದುಕೊಳ್ಳಬೇಕು? ಅದರಲ್ಲೂ ಸಮುದಾಯದವರೇ ಕಿತ್ತಾಡಿಕೊಂಡು ಇರುವ ಅಧಿಕಾರವನ್ನು ಏಕೆ ಬಲಿಕೊಡಬೇಕು ಎಂಬ ಚಿಂತೆ ಸಮುದಾಯದ ಗಣ್ಯರನ್ನು ಕಾಡುವುದು ಸಹಜವೇ.
ಒಂದೊಮ್ಮೆ ಆಡಳಿತ ಪಕ್ಷದಲ್ಲಿರುವ ಇನ್ನಷ್ಟು ಶಾಸಕರ ಕೈಯ್ಯಲ್ಲಿ ರಾಜಿನಾಮೆ ಕೊಡಿಸಿದರೆ ತನ್ನಿಂತಾನಾಗಿಯೇ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ. ಆಗ ಸರ್ಕಾರ ಉಳಿಸಲು ಜೆಡಿಎಸ್ ಬೆಂಬಲ ಪಡೆದುಕೊಳ್ಳುವುದು ಖಚಿತ. ಒಕ್ಕಲಿಗ ಸಮುದಾಯದ ಪಕ್ಷ ಎಂದೇ ಗುರುತಿಸಿಕೊಂಡಿರುವ ಜೆಡಿಎಸ್ ಬೆಂಬಲ ಪಡೆದರೆ ಮುಂದೆ ಲಿಂಗಾಯತ ಸಮುದಾಯದ ಮತಗಳು ವಿಭಜನೆಯಾಗಬಹುದು. ಅಷ್ಟೇ ಅಲ್ಲ, ಲಿಂಗಾಯತ ಮುಖಂಡರ ನಡುವಿನ ಹೋರಾಟದಲ್ಲಿ ಉರುಳಬಹುದಾಗಿದ್ದ ಸರ್ಕಾರವನ್ನು ಒಕ್ಕಲಿಗ ಮುಖಂಡರ ಪಕ್ಷ ಎಂಬ ಹಣೆಪಟ್ಟಿ ಹೊಂದಿರುವ ಜೆಡಿಎಸ್ ಉಳಿಸಿತು ಎಂಬ ಸಂದೇಶ ರವಾನೆಯಾಗಬಹುದು. ಆಗ ಜೆಡಿಎಸ್‌ಗೂ ಸದ್ಯದಲ್ಲೇ ಬರುವ ಚುನಾವಣೆಯಲ್ಲಿ ಹೊಸ ಅಸ್ತ್ರ ಸಿಕ್ಕಂತಾಗುತ್ತದೆ. ನಮ್ಮದು ಒಕ್ಕಲಿಗರಿಗೆ ಮಾತ್ರ ಸೀಮಿತವಾದ ಪಕ್ಷವಲ್ಲ. ಲಿಂಗಾಯತ ಮುಖಂಡರ ಸರ್ಕಾರ ಉಳಿಸಿದ್ದೇವೆ ಎಂದು ಹೇಳಿಕೊಂಡು ಮತದಾರರ ಅನುಕಂಪ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಬಹುದು. ಆಗ ನಮ್ಮವರ ಸರ್ಕಾರವನ್ನು ಉಳಿಸಿದರಲ್ಲಾ ಎಂದು ಲಿಂಗಾಯತರೂ ಸ್ವಲ್ಪ ಮಟ್ಟಿಗೆ ಜೆಡಿಎಸ್ ಪರ ವಾಲಬಹುದು. ಇದರ ಪರಿಣಾಮ ಸಮುದಾಯದ ಮತಗಳು ಒಡೆದುಹೋಗುತ್ತವೆ. ಆಗ ರಾಜಕೀಯ 'ಕೆಮಿಸ್ಟ್ರಿ'ಯೇ ಸಂಪೂರ್ಣ ಬದಲಾಗುತ್ತದೆ. ಹೀಗಾಗಿ ನಮ್ಮವರೇ ಹೊಡೆದಾಡಿಕೊಂಡು ಇನ್ನೊಬ್ಬರಿಗೆ ಏಕೆ ಲಾಭ ಮಾಡಿಕೊಡಬೇಕು ಎಂಬುದು ಕೆಲವು ಮಠಾಧೀಶರ ತರ್ಕ. ಇದು ಯಡಿಯೂರಪ್ಪ ಅವರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆಯೋ ಗೊತ್ತಿಲ್ಲ. ಆದರೆ, ಇಂತಹ ಒಂದು ಚಿಂತನೆ ಹರಿದುಬಂದಿದೆ. ಆ ಚಿಂತನೆ ಲಿಂಗಾಯತ ಮುಖ್ಯಮಂತ್ರಿಗಳಿರುವ ಬಿಜೆಪಿ ಸರ್ಕಾರವನ್ನು ಎಷ್ಟರಮಟ್ಟಿಗೆ ಉಳಿಸಬಹುದು ಎಂಬುದನ್ನು ಕಾದುನೋಡಬೇಕು.
ಏಕೆಂದರೆ, 222 ಸದಸ್ಯಬಲದ ವಿಧಾನಸಭೆಯಲ್ಲಿ 14 ಶಾಸಕರು ರಾಜಿನಾಮೆ ನೀಡಿದ್ದು, 12 ಶಾಸಕರ ರಾಜಿನಾಮೆ ಅಂಗೀಕಾರವಾಗಿದೆ. ಇದರಿಂದ ವಿಧಾನಸಭೆ ಬಲ 210ಕ್ಕೆ ಕುಸಿದಿದ್ದು, ಬಿಜೆಪಿ ಬಲ 106ಕ್ಕೆ ಇಳಿದಿದೆ. ಹೀಗಾಗಿ ಸದ್ಯಕ್ಕೆ ಯಾವುದೇ ಅಪಾಯ ಇಲ್ಲ. ಅದೇ ರೀತಿ ಎಲ್ಲಾ 14 ಶಾಸಕರ ರಾಜಿನಾಮೆ ಅಂಗೀಕಾರವಾದರೆ ವಿದಾನಸಭೆ ಬಲ 208ಕ್ಕೆ ಇಳಿಯುತ್ತದೆ. ಬಿಜೆಪಿ ಸದಸ್ಯರ ಸಂಖ್ಯೆ 104 ಆಗುತ್ತದೆ. ಪಕ್ಷೇತರ ಸದಸ್ಯರಾಗಿರುವ ಸಚಿವ ವರ್ತೂರು ಪ್ರಕಾಶ್ ಸರ್ಕಾರದ ಭಾಗವೇ ಆಗಿರುವುದರಿಂದ ಅವರ ಬೆಂಬಲ ಸಿಕ್ಕಿ ಸರ್ಕಾರಕ್ಕೆ ಅಪಾಯ ಉಂಟಾಗುವುದಿಲ್ಲ. ಸದ್ಯಕ್ಕೆ ಇನ್ನೊಬ್ಬ ಪಕ್ಷೇತರ ಸದಸ್ಯ ಶ್ರೀರಾಮುಲು ಕೂಡ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ 17 ಶಾಸಕರು ರಾಜಿನಾಮೆ ನೀಡಿದರೂ ಸರ್ಕಾರಕ್ಕೆ ಅಪಾಯ ಎದುರಾಗುವುದಿಲ್ಲ. ಆದರೆ, ಈ ಸಂಖ್ಯೆ 18 ದಾಟಿದರೆ ಮಾತ್ರ ಸರ್ಕಾರಕ್ಕೆ ಹೊರಗಿನವರ ಬೆಂಬಲ ಬೇಕೇ ಬೇಕು.
ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಮೊದಲು ಕಣ್ಣು ಹಾಕಿದ್ದೇ ಆರಂಭದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಕಾರಣರಾದ ಪಂಚ ಪಕ್ಷೇತರರ ಮೇಲೆ. 2008ರಲ್ಲಿ ಬಿಜೆಪಿ 110 ಸ್ಥಾನಗಳನ್ನು ಮಾತ್ರ ಗಳಿಸಿದ್ದಾಗ ಶಿವರಾಜ್ ತಂಗಡಗಿ, ಸುಧಾಕರ್, ನರೇಂದ್ರಸ್ವಾಮಿ, ಗೂಳಿಹಟ್ಟಿ ಶೇಖರ್ ಮತ್ತು ವೆಂಕಟರಮಣಪ್ಪ ಅವರು ಬೆಂಬಲ ನೀಡಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವಂತೆ ನೋಡಿಕೊಂಡರು. ಆದರೆ, ನಂತರದಲ್ಲಿ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಭದ್ರಪಡಿಸಿಕೊಂಡ ಯಡಿಯೂರಪ್ಪ ಅವರು ಸರ್ಕಾರ ಉಳಿಸಿಕೊಳ್ಳಲು ಇದೇ ಪಕ್ಷೇತರರನ್ನು ಹೊರಹಾಕಿದರು. ಈ ಸಿಟ್ಟು ಪಕ್ಷೇತರರಲ್ಲಿ ಇನ್ನೂ ಆರಿಲ್ಲ. ಹೀಗಾಗಿ ಯಡಿಯೂರಪ್ಪ ಅವರ ಕಾರಣಕ್ಕೆ ಸರ್ಕಾರ ಉರುಳದಂತೆ ಇವರು ನೆರವು ನೀಡಲಿದ್ದಾರೆ ಎನ್ನುವುದು ಬಿಜೆಪಿಯ ನಿರೀಕ್ಷೆಯಾಗಿತ್ತು.
ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈ ಐವರು ಪಕ್ಷೇತರರು ಮುಂಬರುವ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರಿ ಆ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಬಿಜೆಪಿಯವರು ಇವರತ್ತ ಕಣ್ಣು ಹಾಯಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್, ಸರ್ಕಾರಕ್ಕೆ ಬೆಂಬಲ ನೀಡಿದರೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂಬ ಸಂದೇಶ ರವಾನಿಸಿದೆ. ಇದು ಪಕ್ಷೇತರರಲ್ಲೂ ಆತಂಕ ಮೂಡಿಸಿದೆ. ಯಡಿಯೂರಪ್ಪ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾದರೂ ಚುನಾವಣೆ ಸಂದರ್ಭದಲ್ಲಿ ತಮ್ಮ ಕಾಲ ಮೇಲೆ ಕಲ್ಲುಚಪ್ಪಡಿ ಹಾಕಿಕೊಳ್ಳಬೇಕೇಕೆ? ಅಲ್ಪಾಯುಷಿ ಸರ್ಕಾರವನ್ನು ಬೆಂಬಲಿಸುವ ಮೂಲಕ ನೊಣ ತಿಂದು ಜಾತಿ ಕೆಡಿಸಿಕೊಂಡರು ಎಂಬ ಪರಿಸ್ಥಿತಿಗೆ ಏಕೆ ಒಳಗಾಗಬೇಕು ಎಂಬ ಯೋಚನೆ ಪಕ್ಷೇತರರದ್ದು.
ಇದು ಗೊತ್ತಾಗುತ್ತಿದ್ದಂತೆ ಬಿಜೆಪಿ ಜೆಡಿಎಸ್‌ನತ್ತ ಕಣ್ಣು ಹಾಕಿತು. ಯಡಿಯೂರಪ್ಪ ಮತ್ತು ಬಿಜೆಪಿ ಇಬ್ಬರೂ ಜೆಡಿಎಸ್‌ಗೆ ರಾಜಕೀಯ ಶತ್ರುಗಳೇ ಆದರೂ ಮೊದಲ ಶತ್ರು ಯಡಿಯೂರಪ್ಪ. ಹೀಗಾಗಿ ಅವರ ಕಾರಣಕ್ಕೆ ಸರ್ಕಾರ ಉರುಳಿದರೆ ಜೆಡಿಎಸ್ ಬೆಂಬಲಿಸಬಹುದು ಎಂಬ ಯೋಚನೆಯೊಂದಿಗೆ ಬಿಜೆಪಿ ಜೆಡಿಎಸ್ ಬೆಂಬಲ ಪಡೆಯುವ ಬಗ್ಗೆ ಯೋಚಿಸಿತು.
ಈ ಮಧ್ಯೆ ಜೆಡಿಎಸ್ ಬೆಂಬಲ ಪಡೆಯುವುದು ಬೇಡ. ಶಾಸಕರ ರಾಜಿನಾಮೆಯಿಂದ ಸರ್ಕಾರ ಅಲ್ಪಮತಕ್ಕೆ ಕುಸಿಯಿತು ಎಂದಾದರೆ ವಿಧಾನಸಭೆಯನ್ನೇ ವಿಸರ್ಜಿಸಿ ಚುನಾವಣೆಗೆ ಹೋಗೋಣ ಎಂದೂ ಬಿಜೆಪಿ ಯೋಚಿಸಿತ್ತು. ಏಕೆಂದರೆ, ಸರ್ಕಾರ ಉಳಿಸಿಕೊಳ್ಳಲು ಯಾರ ನೆರವೂ ಪಡೆಯದಿದ್ದರೆ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಬಹುದು. ಎಲ್ಲರೂ ಸೇರಿ ಸರ್ಕಾರ ಉರುಳಿಸಿದರು. ಉತ್ತರ ಕರ್ನಾಟಕ ಭಾಗದ ಮುಖ್ಯಮಂತ್ರಿಗಳನ್ನು ಅಧಿಕಾರ ಪೂರ್ಣಗೊಳಿಸಲು ಬಿಡಲಿಲ್ಲ. ಜನಪರ ಬಜೆಟ್ ಮಂಡಿಸಲೂ ಅವಕಾಶ ಕೊಡಲಿಲ್ಲ ಎಂದು ಹೇಳಿಕೊಂಡು ಜನರೆದುರು ಹೋದರೆ ಸಿಗುವ ಅನುಕಂಪ ಮತಗಳಾಗಿ ಮಾರ್ಪಾಡಾಗಬಹುದು ಎಂಬುದು ಬಿಜೆಪಿಯ ಚಿಂತನೆಯಾಗಿತ್ತು.
ಈ ಸಾಧ್ಯಾಸಾಧ್ಯತೆಗಳ ಪೈಕಿ ಯಾವುದು ಯಶಸ್ವಿಯಾದರೂ ಲಿಂಗಾಯತ ಮಧ್ಯೆ ಮೂರನೆಯವರು ಮಧ್ಯೆ ಪ್ರವೇಶಿಸಿದಂತಾಗುತ್ತದೆ, ಇಲ್ಲವೇ ಅಧಿಕಾರ ಹೊಗುತ್ತದೆ. ಈ ಕಾರಣಕ್ಕೆ ಲಿಂಗಾಯತ ಮುಖಂಡರು, ಕೆಲ ಮಠಾಧೀಶರು ಮಧ್ಯೆ ಪ್ರವೇಶಿಸಿ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಿಸಲು ಮುಂದಾಗಿದ್ದಾರೆ.
ಇನ್ನೊಂದೆಡೆ ಸಚಿವ ಬಸವರಾಜ ಬೊಮ್ಮಾಯಿ ಅವರ ಪ್ರವೇಶ. ತಮ್ಮ ತಂದೆ ಎಸ್.ಆರ್. ಬೊಮ್ಮಾಯಿ ಅವರು ಅಧಿಕಾರ ಕಳೆದುಕೊಂಡಿರುವುದನ್ನು ಹತ್ತಿರದಿಂದ ನೋಡಿರುವ ಆ ಸಂದರ್ಭದಲ್ಲಿ ತಂದೆಯ ರಾಜಕೀಯ ವಿರೋಧಿಗಳು ಹಾಕಿದ ಪಟ್ಟುಗಳ ಪರಿಚಯವಿತ್ತು. ಮೇಲಾಗಿ ಅವರು ಜಗದೀಶ್ ಶೆಟ್ಟರ್ ಅವರಿಗೆ ಆತ್ಮೀಯರೂ ಹೌದು. ಜತೆಗೆ ಇಬ್ಬರೂ ಉತ್ತರ ಕರ್ನಾಟಕ ಭಾಗದವರು. ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಟಿಕೆಟ್ ನೀಡಿ, ಅವರನ್ನು ಗೆಲ್ಲಿಸಿ ಅಧಿಕಾರ ಕೊಟ್ಟವರು ಯಡಿಯೂರಪ್ಪ ಹೌದಾದರೂ ಅವರು ಪಕ್ಷಕ್ಕೆ ಬರಲು ಪ್ರಮುಖ ಕಾರಣ ಜಗದೀಶ್ ಶೆಟ್ಟರ್. ಶೆಟ್ಟರ್ ಅವರನ್ನು ತಮ್ಮ ರಾಜಕೀಯ ಗುರು ಎಂದೇ ಅವರು ಪರಿಗಣಿಸಿದ್ದಾರೆ. ಹೀಗಾಗಿ ತಮ್ಮ ಗುರುಗಳ ಅಧಿಕಾರ ಕಳೆಯಲು ಅವರಿಗೆ ಸುತಾರಾಂ ಇಷ್ಟವಿಲ್ಲ. ಹೀಗಾಗಿ ಇನ್ನಷ್ಟು ಶಾಸಕರು ರಾಜಿನಾಮೆ ನೀಡದಂತೆ ನೋಡಿಕೊಂಡಿದ್ದಾರೆ.
ಅಷ್ಟರ ಮಟ್ಟಿಗೆ ಒಂದೇ ಸಮುದಾಯದ ಇಬ್ಬರು ಪರಸ್ಪರ ಜಗಳವಾಡಿಕೊಂಡು ಸರ್ಕಾರ ಉರುಳದಂತೆ ನೋಡಿಕೊಳ್ಳುವಲ್ಲಿ ತಕ್ಕಮಟ್ಟಿನ ಯಶಸ್ಸು ದೊರೆತಿದೆ. ಆದರೆ, ಇದು ಎಷ್ಟು ದಿನವೋ ಗೊತ್ತಿಲ್ಲ. ಅದರೂ, ಬಜೆಟ್ ಮಂಡನೆಯಾಗುವವರೆಗೆ ಈ ತೇಪೆ ಕೆಲಸ ಮಾಡುತ್ತದೆ ಎಂಬ ಭರವಸೆ ಇದೆ.
ಒಟ್ಟಿನಲ್ಲಿ ಬಜೆಟ್ ಮೂಲಕ ಸರ್ಕಾರ ನೀಡಲಿರುವ ಚುನಾವಣಾ ಪ್ರಣಾಳಿಕೆಯನ್ನು ತಡೆಯಬೇಕು ಎಂಬ ವಿಚಾರದಲ್ಲಿ ಯಡಿಯೂರಪ್ಪ ನಡೆಸುತ್ತಿರುವ ಹೋರಾಟ, ಇದರ ವಿರುದ್ಧ ಜಗದೀಶ್ ಶೆಟ್ಟರ್ ಅವರು ನಡೆಸುತ್ತಿರುವ ಪ್ರತಿ ಹೋರಾಟದ ನಡುವೆ ಸರ್ಕಾರ ಕುಟುಕು ಜೀವ ಹಿಡಿದು ಆಮೆಗತಿಯಲ್ಲಿ ತೆವಳುತ್ತಿದೆ.
ಲಗೋರಿ: ಶ್ರದ್ಧೆ - ನಂಬಿಕೆಗಳಿರುವುದು ಗೊಂದಲ ನಿವಾರಣೆಗೆ. ಅದೇ ಗೊಂದಲ ಮೂಡಿಸಬಾರದು.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com