ಅಂಕಣಗಳು

ಹೆಡ್ಲಿಯ ಹಸ್ತಾಂತರದಲ್ಲಿ ಕೈ ಸುಟ್ಟುಕೊಂಡವರು ರಾಣಾನನ್ನಾದರೂ ಕಟಕಟೆಗೆ ತಂದಾರೇ?

Published On :

ಭಾರತದ ಗೃಹ ಸಚಿವಾಲಯ, ತಾನು ಡೇವಿಡ್ ಹೆಡ್ಲಿಯನ್ನು ಭಾರತಕ್ಕೆ ಕರೆತರಲು ಪ್ರಯತ್ನ ಪಡುತ್ತಿರುವುದಾಗಿ ಬಿಂಬಿಸಿಕೊಂಡು ನಿಜಕ್ಕೂ ಅಪ್ರಾಮಾಣಿಕತೆ ಮೆರೆಯುತ್ತಿದೆ. 26/11 ಮುಂಬೈ ದಾಳಿಗೆ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಮತ್ತು ಐಎಸ್‌ಐನೊಂದಿಗೆ ಸಂಚು ರೂಪಿಸಿದ್ದ ಕ್ಕಾಗಿ ಮತ್ತು ಪ್ರವಾದಿ ಮೊಹಮ್ಮದ್‌ರ ವ್ಯಂಗ್ಯಚಿತ್ರ ಪ್ರಕಟಿಸಿದ್ದ ಪತ್ರಿಕಾ ಕಚೇರಿಯನ್ನು ಸ್ಫೋಟಿಸುವ ಯೋಜನೆ ರೂಪಿಸಿದ್ದಕ್ಕಾಗಿ ಚಿಕಾಗೋ ನ್ಯಾಯಾಲಯ ಆತನಿಗೆ 35 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಹೆಡ್ಲಿ ಹಸ್ತಾಂತರವಂತೂ ಸಾಧ್ಯವಿಲ್ಲದ ಮಾತು. ಏಕೆಂದರೆ 'ಶಿಕ್ಷೆ ಕಡಿಮೆಗೊಳಿಸಿದರೆ ಮತ್ತು ಭಾರತಕ್ಕೆ ಹಸ್ತಾಂತರಿಸದಿದ್ದರೆ ಎಲ್ಲಾ ವಿವರಗಳನ್ನೂ ನೀಡುವುದಾಗಿ' ಆತ ಎಫ್‌ಬಿಐಗೆ ಷರತ್ತು ವಿಧಿಸಿದ್ದ. ಎಫ್‌ಬಿಐ ಕೂಡ ಆತನ ಷರತ್ತುಗಳಿಗೆ ಒಪ್ಪಿ, ಶಿಕ್ಷೆಯನ್ನು ಕಡಿಮೆಗೊಳಿಸಬೇಕೆಂದು ನ್ಯಾಯಾಲಯವನ್ನು ಕೋರಿತ್ತು. ಇನ್ನು ಆತನಿಗೆ 26/11 ಪ್ರಕರಣದಲ್ಲೂ ಶಿಕ್ಷೆ ವಿಧಿಸಲಾಗಿದೆ. ಅಮೆರಿಕದ 'ಡಬಲ್ ಜಿಯೋಪಾರ್ಡಿ' ಎನ್ನುವ ಕಾನೂನಿನನ್ವಯ ಒಂದೇ ತಪ್ಪಿಗಾಗಿ ಒಬ್ಬ ವ್ಯಕ್ತಿಗೆ ಎರಡು ಬಾರಿ ಶಿಕ್ಷೆಯಾಗುವಂತಿಲ್ಲ. ಹಾಗಾಗಿ ಅದು ಹೆಡ್ಲಿಯನ್ನು ಭಾರತಕ್ಕೆ ಹಸ್ತಾಂತರಿಸುವ ಮಾತೇ ಉದ್ಭವವಾಗುವುದಿಲ್ಲ.
ಆತನ ಷರತ್ತುಗಳ ಬಗ್ಗೆ ಎಫ್‌ಬಿಐ, ನ್ಯಾಯಾಲಯಕ್ಕೆ ಮಾಹಿತಿ ನೀಡಿದಾಗ, 'ಕೂಡಲೇ ಭಾರತ ಸರ್ಕಾರ ಮತ್ತು 26/11ರಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರು ಈ ಕುರಿತು ಚಿಕಾಗೋ ನ್ಯಾಯಾಲಯದೊಂದಿಗೆ ಚರ್ಚಿಸದಿದ್ದರೆ, ಹೆಡ್ಲಿ ಹಸ್ತಾಂತರ ಮತ್ತು ಮರಣದಂಡನೆಯಿಂದ ತಪ್ಪಿಸಿಕೊಳ್ಳುತ್ತಾನೆ' ಎಂದು ನಾನು ಎಚ್ಚರಿಸಿದ್ದೆ. ಆದರೆ ಭಾರತ ಸರ್ಕಾರ ಮತ್ತು ಮೃತಪಟ್ಟವರ ಕುಟುಂಬದವರು ಆಗ ಎಚ್ಚೆತ್ತುಕೊಳ್ಳಲೇ ಇಲ್ಲ.  
ತನ್ನ ಎಡವಟ್ಟಿನಿಂದಾಗಿಯೇ ಹಸ್ತಾಂತರದ ಮಾರ್ಗ ಶಾಶ್ವತವಾಗಿ ಮುಚ್ಚಿಕೊಂಡಿತು ಎನ್ನುವುದನ್ನು ಗೃಹ ಸಚಿವಾಲಯ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಇಷ್ಟೆಲ್ಲಾ ಆದರೂ ಕೂಡ ಅದರೆದುರು ಚಿಕ್ಕ ಮಾರ್ಗವೊಂದು ತೆರೆದುಕೊಂಡಿದೆ. ಒಪ್ಪಂದದ ಸಮಯದಲ್ಲಿ ಹೆಡ್ಲಿ, ಭವಿಷ್ಯದಲ್ಲಿ ಯಾವುದೇ ತನಿಖೆಯಾಗಲಿ ತಾನು ಎಫ್‌ಬಿಐಗೆ ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳಿಗೆ ಸಹಕರಿಸುವುದಾಗಿ ಹೇಳಿದ್ದಾನೆ. ಈ ಒಪ್ಪಂದದಡಿಯಲ್ಲಿ ನಮ್ಮ ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್‌ಐಎ) ಅಮೆರಿಕಕ್ಕೆ ತೆರಳಿ ಎಫ್‌ಬಿಐ ಸಮ್ಮುಖದಲ್ಲಿ ಹೆಡ್ಲಿಯ ವಿಚಾರಣೆ ನಡೆಸುವ ಅಧಿಕಾರ ಸಿಕ್ಕಿದೆ. ವಿಚಾರಣೆಯಿಂದ ಮಹತ್ವದ ಸುದ್ದಿಗಳು ಹೋರಬೀಳುತ್ತವೆ ಎನ್ನುವುದು ಅನುಮಾನವೇ ಆದರೂ, ಪ್ರಯತ್ನ ಪಡುವುದರಲ್ಲಿ ತಪ್ಪೇನೂ ಇಲ್ಲ. ಕೊನೆ ಪಕ್ಷ ಆತನ ಜಾಲ ಭಾರತದಲ್ಲಿ ಎಲ್ಲೆಲ್ಲಿ ಹರಡಿದೆ ಎನ್ನುವುದಾದರೂ ತಿಳಿಯುತ್ತದಲ್ಲವೇ?
ಹೆಡ್ಲಿಯೊಂದಿಗೆ ಸಿಕ್ಕಿಬಿದ್ದ ಇನ್ನೊಬ್ಬ ವ್ಯಕ್ತಿ ರಾಣಾ. ಕುತೂಹಲಕರ ಅಂಶವೆಂದರೆ, ಹೆಡ್ಲಿಯಂತೆ ರಾಣಾನ ಜೊತೆ ಎಫ್‌ಬಿಐ ಚೌಕಾಶಿಗಿಳಿದಿಲ್ಲ ಎನ್ನುವುದು. ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ಹೆಡ್ಲಿ ಅಮೆರಿಕದ 'ಡ್ರಗ್ ಎನ್ಫೋರ್ಸ್‌ಮೆಂಟ್ ಏಜೆನ್ಸಿಯ' ಏಜೆಂಟ್ ಆಗಿದ್ದ. ಒಂದು ವೇಳೆ ಭಾರತ ಸ್ವತಂತ್ರವಾಗಿ ಆತನ ವಿಚಾರಣೆ ನಡೆಸಿತೆಂದರೆ ತನ್ನ ಹುಳುಕುಗಳೆಲ್ಲ ಎಲ್ಲಿ ಬಯಲಾಗುತ್ತದೋ ಎನ್ನುವ ಭಯ ಆ ದೇಶಕ್ಕಿತ್ತು. ಆದರೆ ರಾಣಾ ಅಮೆರಿಕಕ್ಕೆ ಅಷ್ಟೊಂದು ಬೇಕಾದ ವ್ಯಕ್ತಿಯಲ್ಲ. ಹಾಗಾಗೆ ಆತನ ವಿಷಯವಾಗಿ ಅದು ಅಷ್ಟು ತಲೆಕೆಡಿಸಿಕೊಂಡಿಲ್ಲ.
ರಾಣಾ, ಹೆಡ್ಲಿಗೆ ನೆರವಾಗಿದ್ದ ಮತ್ತು ಮುಂಬೈ ಉಗ್ರ ಕೃತ್ಯದ ಬಗ್ಗೆ ಆತನಿಗೆ ಮೊದಲೇ ಮಾಹಿತಿಯಿತ್ತು ಎನ್ನುವುದಕ್ಕೆ ದಂಡಿಯಾಗಿ ಸಾಕ್ಷಿಯಿದ್ದರೂ, ಚಿಕಾಗೋ ನ್ಯಾಯಾಲಯ ಆತನಿಗೆ ಶಿಕ್ಷೆ ವಿಧಿಸಿದ್ದು 'ಕೋಪನ್‌ಹೇಗನ್‌'ನ ಕೇಸಿನ ವಿಚಾರವಾಗಿಯಷ್ಟೇ ಹೊರತು, ಮುಂಬೈ ದಾಳಿಗಾಗಿ ಅಲ್ಲ. ಹಾಗಾಗಿ 'ಡಬಲ್ ಜಿಯೋಪಾರ್ಡಿ'
ನಿಯಮ ರಾಣಾನ ವಿಷಯದಲ್ಲಿ ಅನ್ವಯವಾಗುವುದಿಲ್ಲ.
ರಾಣಾ ಸೆರೆಸಿಕ್ಕಾಗಿನಿಂದಲೂ ನಾನು ಹೇಳುತ್ತಿದ್ದೇನೆ- ಹೆಡ್ಲಿಯ ಹಸ್ತಾಂತರ ಕಷ್ಟದ ವಿಚಾರ, ಆದರೆ ರಾಣಾನನ್ನು ಸುಲಭವಾಗಿ ಭಾರತಕ್ಕೆ ಕರೆತರಬಹುದು. ಆಗ ಭಾರತದಲ್ಲಿನ ಹೆಡ್ಲಿ-ರಾಣಾ ಜಾಲದ ಬಗ್ಗೆಯಾದರೂ ತಿಳಿದುಕೊಳ್ಳಬಹುದು ಎಂದು. ಇನ್ನೊಂದು ಕುತೂಹಲಕರ ವಿಚಾರವೆಂದರೆ, ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಎನ್‌ಐಎ ಈ ಬಗ್ಗೆ ಯೋಚಿಸುತ್ತಲೇ ಇಲ್ಲ ಎನ್ನುವುದು. ಈಗಲಾದರೂ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅದು ಅಮೆರಿಕವನ್ನು ಒತ್ತಾಯಿಸಬೇಕು.
26/11ರ ಕೃತ್ಯವನ್ನು ಎಫ್‌ಬಿಐ ತಡೆಯಬಹುದಾಗಿತ್ತು. ಮೊದಲನೆಯದಾಗಿ, ಹೆಡ್ಲಿ 'ದಾವೂದ್ ಗಿಲಾನಿ' ಎಂಬ ಹೆಸರಿನಲ್ಲಿ ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದಾನೆಂಬ ವಿಷಯ ಎಫ್‌ಬಿಐಗೆ ತಿಳಿದಿತ್ತು. ಪಾಕಿಸ್ತಾನಕ್ಕೆ ಮತ್ತು ಭಾರತಕ್ಕೆ ಆತ ಪದೇ ಪದೇ ಅಡ್ಡಾಡುವುದಕ್ಕೂ ಮುನ್ನ 'ಡೇವಿಡ್ ಕೋಲ್‌ಮನ್ ಹೆಡ್ಲಿ' ಎಂಬ ಹೆಸರಿನಲ್ಲಿ ಅಮೆರಿಕದ ಹೊಸ ಪಾಸ್ ಪೋರ್ಟ್ ಪಡೆದ. ಒಂದು ವೇಳೆ ಭಾರತದಲ್ಲಿ ಯಾರಾದರೂ ಬದಲಾಯಿಸಿದ ಹೆಸರಿನಲ್ಲಿ ಹೊಸ ಪಾಸ್‌ಪೋರ್ಟ್ ಪಡೆದರೆ, ಹೊಸ ಪಾಸ್‌ಪೋರ್ಟ್‌ನಲ್ಲಿ ಆತ 'ಹಿಂದೆ ಯಾವ ಹೆಸರಿನಲ್ಲಿ ಪಾಸ್‌ಪೋರ್ಟ್ ಹೊಂದಿದ್ದ' ಎನ್ನುವುದನ್ನೂ ನಮೂದಿಸಲಾಗುತ್ತದೆ. ಭದ್ರತೆಯ ಕಾರಣಕ್ಕೆ ಅನೇಕ ರಾಷ್ಟ್ರಗಳು ಈ ನಿಯಮವನ್ನು ಅನುಸರಿಸುತ್ತವೆ. ಆಶ್ಚರ್ಯವೆಂದರೆ, ಅಮೆರಿಕ ಈ ಕೆಲಸವನ್ನು ಮಾಡಲೇ ಇಲ್ಲ. ತತ್ಫಲವಾಗಿ, ಹೆಡ್ಲಿಗೆ ಮಲ್ಟಿಪಲ್ ಎಂಟ್ರಿ ವೀಸಾ ಕೊಟ್ಟ ಚಿಕಾಗೋದಲ್ಲಿನ ಭಾರತೀಯ ದೂತವಾಸಕ್ಕೆ, ಆತ ಹಿಂದೆ ಗಿಲಾನಿ ಎಂಬ ಹೆಸರಿನಲ್ಲಿಯೂ ಪಾಸ್‌ಪೋರ್ಟ್ ಹೊಂದಿದ್ದ ಎನ್ನುವುದು ತಿಳಿಯಲೇ ಇಲ್ಲ. ಮುಂಬೈ ದಾಳಿಯಾದ ನಂತರವೇ ಹೆಡ್ಲಿ ಭಾರತಕ್ಕೆ ಅನೇಕ ಬಾರಿ ಹೋಗಿ ಬಂದು ಮಾಡಿದ್ದ ಎನ್ನುವುದು ಅರಿವಾಯಿತು. ಗಿಲಾನಿ ಎಂಬ ಹೆಸರಿನಲ್ಲಿ ಆತ ಭಾರತದಲ್ಲಿ ಮಾಡಿದ ಪ್ರವಾಸದ ಬಗ್ಗೆ ನಮಗೆ ತಿಳಿದಿದೆಯೇ?
ಎರಡನೆಯದಾಗಿ, ಹೆಡ್ಲಿ ತಮ್ಮ ಡ್ರಗ್ ಎನ್ಫೋರ್ಸ್‌ಮೆಂಟ್ ಏಜೆಂಟ್ ಆಗಿ ದುಡಿಯುತ್ತಿದ್ದಾಗ ಪಾಕಿಸ್ತಾನದಿಂದ ಭಾರತಕ್ಕೂ ಭೇಟಿ ಕೊಡುತ್ತಿದ್ದ ಎನ್ನುವುದು ಅಮೆರಿಕಕ್ಕೂ ಗೊತ್ತಿತ್ತು. ದಾಳಿಯ ನಂತರವೂ ಆತ ಒಮ್ಮೆ ಭಾರತಕ್ಕೆ ಬಂದು ಹೋಗಿದ್ದ. ದಾಳಿಗೂ ಮುಂಚೆ ಎಫ್‌ಬಿಐ ಭಾರತವನ್ನು ಎಚ್ಚರಿಸಬಹುದಿತ್ತು. ಆದರೆ ಭಾರತೀಯರು ಆತನ ವಿಚಾರಣೆ ಮಾಡಿ, ಆತ ಡ್ರಗ್ ಎನ್ಫೋರ್ಸ್‌ಮೆಂಟ್ ಏಜೆನ್ಸಿಯ ಏಜೆಂಟ್ ಎಂಬ ಸತ್ಯ ಎಲ್ಲಿ ಹೊರಬೀಳುತ್ತದೋ ಎನ್ನುವ ಭಯ ಅದಕ್ಕಿತ್ತು. ಹಾಗಾಗೇ ತುಟಿ ಬಿಗಿದುಕೊಂಡು ಕುಳಿತು ಬಿಟ್ಟಿತು.
 ಮೂರನೆಯದಾಗಿ, ಮುಂಬೈ ದಾಳಿಯಾದ ತಕ್ಷಣ 'ಹಿಂದುಸ್ತಾನ್ ಟೈಮ್ಸ್‌' ಪತ್ರಿಕೆ ವೀರ್ ಸಾಂಘ್ವಿಯವರ ಲೇಖನವೊಂದನ್ನು ಪ್ರಕಟಿಸಿತ್ತು. ಸಾಂಘ್ವಿಯವರೊಂದಿಗೆ ಮಾತನಾಡಿದ 'ರಾ'ದ ಹಿರಿಯ ಅಧಿಕಾರಿಯೊಬ್ಬರು, 'ಲಷ್ಕರ್‌ನ ಉಗ್ರವಾದಿಗಳು ಸಮುದ್ರ ಮಾರ್ಗದ ಮೂಲಕ ಬಂದು ಮುಂಬೈನ ಮೇಲೆ ದಾಳಿ
ಮಾಡಲಿದ್ದಾರೆ ಎನ್ನುವ ವಿಷಯವನ್ನು ಸಿಐಎ ಬಾಹ್ಯ ಗುಪ್ತಚರ ಸಂಸ್ಥೆಗೆ ಎರಡು ಬಾರಿ ತಿಳಿಸಿತ್ತು. ಕೂಡಲೇ ಈ ಮಾಹಿತಿಯನ್ನು ಅದು ಗುಪ್ತಚರ ದಳಕ್ಕೆ ರವಾನಿಸಿತ್ತು' ಎಂದು ಹೇಳಿದರಂತೆ. ಹಾಗಿದ್ದರೆ ಈ ಮಾಹಿತಿ ಸಿಐಎಗೆ ಹೇಗೆ ದೊರಕಿತು? ಹೆಡ್ಲಿ ಆ ಮಾಹಿತಿ ನೀಡಿದನೇ ಅಥವಾ ಪಾಕಿಸ್ತಾನದಲ್ಲಿನ ಸಿಐಎದ ಮೂಲಗಳು ಈ ವಿಷಯವನ್ನು ತಿಳಿಸಿದವೆ? ಈ ಬಗ್ಗೆ ಇದುವರೆಗೂ  ಭಾರತದ ಯಾವೊಬ್ಬ ಪತ್ರಕರ್ತನಾಗಲಿ ಅಥವಾ ವಿಶೇಷಜ್ಞನಾಗಲಿ ಆಳವಾಗಿ ಅಧ್ಯಯನ ನಡೆಸಲು ಮುಂದಾಗಿಲ್ಲ.
ಇನ್ನು ಈ ಪ್ರಕರಣದಲ್ಲಿ ಭಾರತೀಯ ಗುಪ್ತಚರ ದಳವೂ ಹುಳುಕೆಸಗಿದೆ ಎಂದರೆ ಸುಳ್ಳಾಗದು. ಹೆಡ್ಲಿಗೆ ಮಲ್ಟಿಪಲ್ ವೀಸಾ ನೀಡಿದ ಚಿಕಾಗೋದಲ್ಲಿನ ಭಾರತೀಯ ದೂತವಾಸದ ವಿಚಾರಣೆಯನ್ನು ಅದು ನಡೆಸಿದ ಪರಿ ಅತೃಪ್ತಿಕರವಾಗಿಯೇ ಇದೆ.
ಹೆಡ್ಲಿ ಪಾಕಿಸ್ತಾನದಿಂದ ಭಾರತಕ್ಕೆ, ಮತ್ತೆ ಇಲ್ಲಿಂದ ಪಾಕಿಸ್ತಾನಕ್ಕೆ ಅಷ್ಟೊಂದು ಬಾರಿ ಅಡ್ಡಾಡಿದರೂ ನಮ್ಮ ಇಮಿಗ್ರೇಶನ್ ಇಲಾಖೆಯೇಕೆ ಆತನನ್ನು ಪ್ರಶ್ನಿಸಲಿಲ್ಲ? ಭಾರತದಲ್ಲಿ ಆತ ಏನು ಮಾಡುತ್ತಿದ್ದಾನೆ ಎನ್ನುವುದನ್ನು ಪತ್ತೆ ಹಚ್ಚಲು ಹೋಗಲಿಲ್ಲ?  26/11 ದಾಳಿಯ ನಂತರವೂ ಆತ ಭಾರತಕ್ಕೆ ಭೇಟಿ ಕೊಟ್ಟರೂ ಆತನ ಜಾಲದ ಬಗ್ಗೆ ಏಕೆ ನಮ್ಮಲ್ಲಿ ಸೂಕ್ತ ತನಿಖೆಗಳಾಗಿಲ್ಲ?
1998ರಲ್ಲಿ ಅಮೆರಿಕದ ಫೆಡರಲ್ ಏವಿಯೇಷನ್ ಏಜೆನ್ಸಿಗೆ(ಎಫ್‌ಎಎ)ಗೆ ಅದರ ಮೂಲಗಳಿಂದ ಮಾಹಿತಿಯೊಂದು ದೊರಕಿತು. ಕ್ರಿಸ್‌ಮಸ್ ಹಬ್ಬದ ವೇಳೆ ಯುರೋಪ್‌ಗೆ ಹೊರಡುವ ಅಮೆರಿಕದ ವಿಮಾನವನ್ನು ಪ್ಯಾಲಸ್ತೇನಿ ಉಗ್ರರು ಸ್ಫೋಟಿಸಲಿದ್ದಾರೆ ಎನ್ನುವುದು ಆ ಮಾಹಿತಿ. ಕೂಡಲೇ ಎಫ್‌ಎಎ ಈ ಕುರಿತು ಎಫ್‌ಬಿಐ, ಸಿಐಎ ಮತ್ತು ಯೂರೋಪ್‌ನಲ್ಲಿನ ಅಮೆರಿಕದ ರಾಯಭಾರ ಕಚೇರಿಗೆ ಎಚ್ಚರಿಕೆ ನೀಡಿತು. ಆದರೆ ಅಮೆರಿಕದ ಜನತೆಗೆ ಮಾತ್ರ ಅದು, ಈ ಬಗ್ಗೆ ಸುಳಿವು ನೀಡಲಿಲ್ಲ.
ಆ ಮಾಹಿತಿ ಸತ್ಯವೇ ಆಗಿತ್ತು. ಸ್ಕಾಟ್ಲೆಂಡ್‌ನ ಲಾಕರ್ಬಿ ಬಳಿ ಆ ವಿಮಾನವನ್ನು ಉಗ್ರಗಾಮಿಗಳು ಸ್ಫೋಟಿಸಿದರು.ಅದರಲ್ಲಿದ್ದ ಎಲ್ಲಾ ಪ್ರಯಾಣಿಕರೂ ಸಾವನ್ನಪ್ಪಿದರು. ಅಮೆರಿಕದ ಗುಪ್ತಚರದಳಕ್ಕೆ ಈ ಬಗ್ಗೆ ಪೂರ್ವ ಮಾಹಿತಿ ಇತ್ತಾದರೂ ಅದು ಬಹಿರಂಗಗೊಳಿಸಲಿಲ್ಲ ಎಂದು ಅಲ್ಲಿನ ಮಾಧ್ಯಮಗಳು ಉಗ್ರವಾಗಿ ಸರ್ಕಾರವನ್ನು ಟೀಕಿಸತೊಡಗಿದವು. ಮೃತಪಟ್ಟವರ ಕುಟುಂಬದವರು ಆ ಸರ್ಕಾರವನ್ನೇ ಕೋರ್ಟಿನ ಮೆಟ್ಟಿಲೇರಿಸಿದರು. ಆಗ ಎಚ್ಚೆತ್ತು ಕೊಂಡ ಅಮೆರಿಕ, ಸಂಭಾವ್ಯ ಉಗ್ರ ದಾಳಿಯ ಬಗ್ಗೆ ಜನತೆಗೆ ಎಚ್ಚರಿಕೆ ನೀಡುವ ಪರಿಪಾಠ ಬೆಳೆಸಿಕೊಂಡಿತು.   
 ವೀರ್ ಸಾಂಘ್ವಿಯವರ ವರದಿಯ ಪ್ರಕಾರ, ಲಷ್ಕರ್ ಉಗ್ರರು ಮುಂಬೈ ದಾಳಿ ನಡೆಸುವ ವಿಚಾರ ಅಮೆರಿಕಕ್ಕೆ ಮೊದಲೇ ತಿಳಿದಿತ್ತು. ಆದರೂ ಮುಂಬೈಗೆ ಪ್ರಯಾಣ ಮಾಡಿದ ತಮ್ಮ ಜನತೆಗೆ ಅದು ಏಕೆ ಎಚ್ಚರಿಕೆ ನೀಡಲಿಲ್ಲ? ಈ ವಿಷಯವನ್ನು ಅದು ಸಾರ್ವಜನಿಕಗೊಳಿಸಿಬಿಟ್ಟಿದ್ದರೇ ಸಾಕಿತ್ತು, ಮುಂಬೈ ದಾಳಿ ನಡೆಯುತ್ತಲೇ ಇರಲಿಲ್ಲ.  
ಮುಂಬೈ ದಾಳಿಯಲ್ಲಿ ಹೆಡ್ಲಿ ಮತ್ತು ರಾಣಾರ ಪಾತ್ರವೆಷ್ಟಿತ್ತು ಎನ್ನುವುದರ ಬಗ್ಗೆ ಈಗಲೂ ನಮ್ಮ ಬಳಿ ಸರಿಯಾದ ಮಾಹಿತಿಯಿಲ್ಲ. ಅದು ಹೊರಬರಬೇಕಾದರೆ, ದಾಳಿಯಲ್ಲಿ ಮೃತಪಟ್ಟವರ ಕುಟುಂಬದವರು ಮೊದಲು ಎಚ್ಚೆತ್ತುಕೊಳ್ಳಬೇಕು. ಈ ವಿಷಯವನ್ನು ಅವರು ಅಮೆರಿಕ ಮತ್ತು ಭಾರತದ ನ್ಯಾಯಾಲಯಗಳಿಗೆ ತೆಗೆದುಕೊಂಡು ಹೋದರೆ, ಎರಡೂ ಸರ್ಕಾರಗಳು ಸತ್ಯವೇನೆಂಬುದನ್ನು ಒಪ್ಪಿಕೊಳ್ಳುವ ಅನಿವಾರ್ಯತೆಗೆ ಬೀಳುತ್ತವೆ.

- ಬಿ. ರಾಮನ್,
'ರಾ' ಮಾಜಿ ಮುಖ್ಯಸ್ಥ

anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.