ಸೋಮವಾರ ವಿಧಾನ ಮಂಡಲದಲ್ಲಿ ರಾಜ್ಯಪಾಲರ ಭಾಷಣದ ಧಾಟಿ, ಮಂಗಳವಾರ ಉಭಯ ಸದನಗಳ ಕಾರ್ಯಕಲಾಪದ ವೈಖರಿಯನ್ನು ಕಂಡಾಗ,ಇದೇನಿದು ರಣರಂಗವಾಗಬೇಕಾಗಿದ್ದ ವೇದಿಕೆಯಲ್ಲಿ ಇಷ್ಟೊಂದು ಕ್ರಮಬದ್ಧವಾಗಿ, ನಿಯಮಗಳಿಗೆ ಅನುಸಾರವಾಗಿ ಎಲ್ಲವೂ ನಡೆಯುತ್ತಿದೆಯಲ್ಲಾ ಎನ್ನುವ ಭಾವನೆ, ಅನೇಕರಲ್ಲಿ ಮೂಡಿರಬೇಕು.
ಈಗ ಹೇಳಿಕೇಳಿ ವಿಧಾನ ಮಂಡಲದ ಹೊರಗಡೆ ನಡೆದಿರುವುದು ಮಾನಸಿಕವಾಗಿ ಭೀಕರ ರಾಜಕೀಯ ಸಮರ. ರಾಜಕೀಯ ಪಕ್ಷಗಳ ದೊಡ್ಡ, ಸಣ್ಣ ನಾಯಕರ ಮಾತುಗಳನ್ನು ಕೇಳಿದರೆ ಗಾಬರಿಯಾಗುವಂತಹ ವಿಷಯಗಳ ಪ್ರಸ್ತಾಪ ಅನಿವಾರ್ಯ ಎನಿಸುತ್ತಿದೆ. ಆದರೆ ವಿಧಾನ ಮಂಡಲದ ಮೊಗಸಾಲೆಗಳಲ್ಲೂ ರಾಜಕೀಯ ಚರ್ಚೆ ಇದ್ದರೂ ಕಾವಿಲ್ಲ. ಸದನಗಳಲ್ಲಂತೂ ಎಲ್ಲವೂ ಠೀಕಾಗಿ ನಡೆಯುತ್ತಿದೆ. ವಿಧಾನ ಸಭೆಯ ಸ್ಪೀಕರ್ ಕೆ.ಜಿ. ಬೋಪಯ್ಯ ಅವರನ್ನು ಹೊರಗಡೆ ಮನಸ್ಸಿಗೆ ಬಂದಂತೆ ತೆಗಳುತ್ತಿರುವವರು, ಒಳಗಡೆ ಗಂಭೀರವಾಗಿ ಸನ್ಮಾನ್ಯ ಸಭಾಧ್ಯಕ್ಷರೇ ಎಂದೇ ಸಂಭೋದಿಸುತ್ತಿದ್ದಾರೆ.
ನಿಜ. ಇದೆಲ್ಲವೂ ಕೃತಕವಾದದ್ದೇ. ಈಗ ಕೊನೆಯ ದಿನಗಳಲ್ಲಿರುವ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವನ್ನು "ಉರುಳಿಸಿದ ಅಪಕೀರ್ತಿ" ಯಡಿಯೂರಪ್ಪ, ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳದ ನಾಯಕರಿಗೆ ಬೇಡವಾಗಿದೆ. ಸರ್ಕಾರ ತಾನಾಗಿಯೇ ಉರುಳಿದರೆ, ಎಲ್ಲರೂ ಸಂತೃಪ್ತರಾಗಿ ತಮ್ಮ ಮುಂದಿನ ಕೆಲಸದಲ್ಲಿ ತೊಡಗಬಹುದು. ಜಗದೀಶ ಶೆಟ್ಟರ್ ಅವರನ್ನು ಎಷ್ಟು ಬೇಗ ಕುರ್ಚಿಯಿಂದ ಕೆಳಗೆ ಇಳಿಸಿದರೆ ಅಷ್ಟು ಒಳ್ಳೆಯದೆಂದು ಭಾವಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದು ಪತ್ರಿಕಾ ಸಂದರ್ಶನದಲ್ಲಿ ಇನ್ನು ಬಿಜೆಪಿಯ ಯಾವ ಶಾಸಕರೂ, ಮಂತ್ರಿಗಳೂ ರಾಜಿನಾಮೆ ಕೊಡುವುದಿಲ್ಲ ಎಂದೇ ತಮ್ಮ ಅನಿಸಿಕೆ ಎಂದು ಹೇಳಿಬಿಟ್ಟಿದ್ದಾರೆ. ಅಂದರೆ ಸದ್ಯಕ್ಕೆ (ಕೆಲವು ದಿನಗಳಾಗಬಹುದು, ತಿಂಗಳುಗಳಾಗಬಹುದು) ಸರ್ಕಾರದ ಪತನಕ್ಕೆ ಪ್ರಯತ್ನಿಸುವ ಉದ್ದೇಶ ಅವರಿಗೆ ಇದ್ದಂತಿಲ್ಲ.
ಇನ್ನು ಕೆಲವು ಮಂತ್ರಿಗಳು ಈಗಲೇ ರಾಜಿನಾಮೆ ಕೊಟ್ಟು ಬಿಕ್ಕಟ್ಟನ್ನು ಸೃಷ್ಟಿಸುವ ಪ್ರಯತ್ನದ ಮಾತು ಕೇಳಿ ಬಂದಿತ್ತು. ಆದರೆ ರಾಜ್ಯದ ಪ್ರಮುಖ ರಾಜಕೀಯ ಜನಾಂಗವಾದ, ಅದರಲ್ಲೂ ಉತ್ತರ ಕರ್ನಾಟಕದ ಪ್ರಬಲ ಶಕ್ತಿ ಎನಿಸಿದ ವೀರಶೈವ ಮಠಾಧಿಪತಿಗಳಿಗೆ ಅಂತಹ ಬೆಳವಣಿಗೆ ಬೇಕಾಗಿರಲಿಲ್ಲ. ಮಠಾಧೀಶ್ವರರ ಅನಿಸಿಕೆಗಳನ್ನು ಒತ್ತರಿಸುವ ಧೈರ್ಯವಿಲ್ಲದ ಲಿಂಗಾಯತ ರಾಜಕೀಯ ಮುಖಂಡರು ಸುಮ್ಮನಿದ್ದಾರೆ. ಅಂದರೆ ಈಗ ವಾಸ್ತವದಲ್ಲಿರುವುದು ಬಿಜೆಪಿ ಸರ್ಕಾರವೋ ಅಥವಾ ವೀರಶೈವರು ಭಾವನಾತ್ಮಕವಾಗಿ ಒಪ್ಪಿರುವ ಸರ್ಕಾರವೋ ಎನ್ನುವುದು ಬಿಡಿಸಲಾಗದ ಒಗಟು.
ಗೆದ್ದೇ ಗೆಲ್ಲುವವರು: ಚುನಾವಣೆಗೆ ಹಲವು ವಾರಗಳಷ್ಟೇ ಉಳಿದಿವೆ ಎನ್ನುವ ಸಂದರ್ಭದಲ್ಲಿ, ಇದ್ದಕ್ಕಿದ್ದಂತೆ, ಆಳುವ ವರ್ಗಗಳು, ವೀರಶೈವರೇ ನಿರ್ಣಾಯಕವಾದ ರಾಜಕೀಯ ಶಕ್ತಿ ಎನ್ನುವ ವಾತಾವರಣವನ್ನು ಸೃಷ್ಟಿಸಿರುವುದು ನಿಜ. ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಹಲವು ಲಿಂಗಾಯತ ನಾಯಕರು ಎಷ್ಟೇ ಕೆಟ್ಟ ರಾಜಕೀಯ ಮಾಡಿರಲಿ, ಎಲ್ಲ ವಿಧದ ಮಾನವೀಯ ತತ್ವಗಳನ್ನು (ರಾಮಕೃಷ್ಣ ಹೆಗಡೆ ಪ್ರತಿಪಾದಿಸಿದ್ದ ಆದರೆ ಪಾಲನೆಯಲ್ಲಿ ಸೋತಿದ್ದ ಮೌಲ್ಯಾಧಾರಿತ ರಾಜಕೀಯವನ್ನಲ್ಲ) ದಿಕ್ಕರಿಸಿದ್ದರೂ, ಅವರೇ ಈಗ ಯಾವ ಪಕ್ಷದ ಪರವಾಗಿ ನಿಂತರೂ, ಅವರವರ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತಾರೆನ್ನುವ ಭಾವನೆಯೂ ನಿಧಾನವಾಗಿ ಮತದಾರರಲ್ಲಿ ಬೇರೂರುವಂತಹ ಪ್ರಚಾರವೂ ನಡೆದಿದೆ. ರಾಜ್ಯದಲ್ಲಿ ಹನ್ನೆರಡಕ್ಕೂ ಹೆಚ್ಚು ವಿಧಾನ ಸಭೆ ಚುನಾವಣೆಗಳು, 15-16 ಲೋಕಸಭೆ ಚುನಾವಣೆಗಳು ನಡೆದ ಅನಂತರವೂ ಇದೇ ಪರಿಸ್ಥಿತಿ ಎಂದಾದರೆ, ಭಾರತೀಯರ ರಾಜಕೀಯ ಬಡತನ, ಅವರ ಆರ್ಥಿಕ ಬಡತನಕ್ಕಿಂತ ಹೆಚ್ಚು ಎನ್ನುವುದು ನಿಜ ಎಂದಾಯಿತು.
ಇಂತಹ ರಾಜಕಾರಣಿಗಳು ಗೆಲ್ಲುವುದು ಯಾಕೆ? ಅವರ ಜಾತಿಯಲ್ಲಿ ಅವರೇ ಪ್ರಬಲರು. (ಭೂ ಸ್ವಾಮಿಗಳೂ ಆಗಿರಬಹುದು) ಆ ಕ್ಷೇತ್ರದಲ್ಲಿ ಅವರ ಜಾತಿಯೇ ಪ್ರಬಲವಾಗಿರುವುದು. ಅಂದರೆ ವ್ಯಾಪಾರ, ಉದ್ಯಮ, ಶಿಕ್ಷಣ ಸಂಸ್ಥೆಗಳೆಲ್ಲವೂ ಅವರ ವಶದಲ್ಲೇ ಇರಬಹುದು. ಹೇರಳವಾದ ಹಣದ ಶಕ್ತಿ ಎಲ್ಲರನ್ನೂ ಒಲಿಸಿಕೊಳ್ಳುವ ತಾಕತ್ ಗಳಿಸಿದ್ದಾರೆ, ಅವರು. ಈ ಮಾತು ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಿಗೆ ಅನ್ವಯವಾದಂತೆಯೇ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಿಗೂ ಅನ್ವಯವಾಗುತ್ತಿದೆ.
ಸರ್ಕಾರದ ಪತನ ಬೇಡ: ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಜಗದೀಶ ಶೆಟ್ಟರ್ ಸರ್ಕಾರ ಬಹುಮತವನ್ನು ಕಳೆದುಕೊಂಡಿರುವುದರಿಂದ ಅದನ್ನು ವಜಾ ಮಾಡಲು ರಾಜ್ಯಪಾಲರು ಶಿಫಾರ್ಸು ಮಾಡಬೇಕು ಎಂದಿದ್ದಾರೆ. ಸಿದ್ದರಾಮಯ್ಯ ಅವರು ತಾವೇ ಸರ್ಕಾರದ ವಿರುದ್ಧ ಅವಿಶ್ವಾಸ ಸೂಚಕ ನಿರ್ಣಯವನ್ನು ಮಂಡಿಸುವುದಿಲ್ಲವಂತೆ. ಅದಕ್ಕೆ ಬೇಕಾದ ಸಂಖ್ಯಾ ಬಲ ಅವರಲ್ಲಿ ಇಲ್ಲವಂತೆ. ಅವರು ಮಾಡಲೇ ಬೇಕಾದ ಕರ್ತವ್ಯವನ್ನು ಮಾಡಿದರೆ, ಉಳಿದವರು ತಮ್ಮ ಕರ್ತವ್ಯವನ್ನು ಮಾಡುವುದಕ್ಕೆ ಅವಕಾಶವಾಗುತ್ತದೆ ಎನ್ನುವುದನ್ನು ಸಿದ್ದರಾಮಯ್ಯ ಮರೆತಂತಿದೆ. ವಿಧಾನ ಸಭೆ ಅಧಿವೇಶನ ಸೇರಿರುವಾಗ, ಸರ್ಕಾರದ ಬಹುಮತದ ಪ್ರಶ್ನೆಯನ್ನು ಇತ್ಯರ್ಥಪಡಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಅವರ ಹಸ್ತಕ್ಷೇಪ ಸಾಧ್ಯವಿಲ್ಲ. ವಿಧಾನ ಸಭೆಯಲ್ಲಿ ಸರ್ಕಾರದ ಸಂಖ್ಯಾಬಲಕ್ಕೆ ಸವಾಲೆಸೆಯುವ ಕೆಲಸವನ್ನು ಅವಿಶ್ವಾಸದ ನಿರ್ಣಯದ ಮೂಲಕವೇ ಮಾಡಬೇಕೆಂದೇನೂ ಇಲ್ಲ. ರಾಜ್ಯಪಾಲರ ಭಾಷಣಕ್ಕೆ ವಂದನೆಯನ್ನು ಅರ್ಪಿಸುವ ನಿರ್ಣಯದ ಮೇಲೆ, ಬಜೆಟ್ ಮೇಲೆ, ಲೇಖಾನುದಾನದ ವಿಧೇಯಕದ ಮೇಲೆ, ಕೊನೆಗೆ ಧನವಿನಿಯೋಗದ ವಿಧೇಯಕದ ಮೇಲಿನ ಮತದಾನದ ಸಮಯದಲ್ಲಿ ಆ ಪ್ರಯತ್ನ ಸಾಧ್ಯ.
ಇದುವರೆಗೆ ಕಾಂಗ್ರೆಸ್, ಜಾತ್ಯತೀತ ಜನತಾದಳ ಹಾಗೂ ಯಡಿಯೂರಪ್ಪ ಬೆಂಬಲಿಗ ಶಾಸಕರು ಈ ವಿಚಾರದಲ್ಲಿ ಯಾವ ಪ್ರಸ್ತಾಪವನ್ನೂ ಮಾಡಿಲ್ಲ. ಜಗದೀಶ ಶೆಟ್ಟರ್ ಪ್ರತಿನಿತ್ಯ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಾಗಿದೆ. ಅದು ಶೆಟ್ಟರ್‌ಗೆ ಅನಿವಾರ್ಯ.
ಬಿಜೆಪಿಯ ಶಾಸಕರಿಗೆಲ್ಲ ಸದನಗಳಲ್ಲಿ ಹಾಜರಿರಲೇ ಬೇಕೆನ್ನುವ ಆದೇಶ ರವಾನೆಯಾಗಿದೆ. ಈ ಆದೇಶಕ್ಕೆ ಸಹಿ ಹಾಕಿರುವವರು ಯಡಿಯೂರಪ್ಪ ಅವರ ಪರಮಾಪ್ತರಲ್ಲಿ ಒಬ್ಬರಾದ ಲಕ್ಷ್ಮಣ ಸವದಿ. ಕಾವೇರಿ ನೀರಿನ ವಿವಾದದ ಪ್ರಾಧಿಕಾರದ ತೀರ್ಪಿನ ಆಧಾರದ ಅಧಿಸೂಚನೆ ಕುರಿತ ಸುಪ್ರೀಮ್ ಕೋರ್ಟಿನ ಆದೇಶ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದಕ್ಕೆ ಹಾಕುವ ವಿಚಾರಗಳಲ್ಲಿ ಸರ್ಕಾರಕ್ಕೆ ಎಲ್ಲ ಪಕ್ಷಗಳ ಸಂಪೂರ್ಣವಾದ, ಬೇಷರತ್ ಬೆಂಬಲ ಸಿಕ್ಕಿದೆ. ಸಂವಿಧಾನದ ವಿಧಿ-ನಿಯಮಗಳಂತೆ, ಸ್ಥಳೀಯ ಸಂಸ್ಥೆಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಸಲೇ ಬೇಕಾದ ರಾಜ್ಯದ ಕರ್ತವ್ಯಕ್ಕೆ ಚ್ಯುತಿ ಬಂದಾಗಲೂ ಸಂವಿಧಾನದ ಪಾವಿತ್ರ್ಯದ ಹೆಸರಿನಲ್ಲಿ ಒಂದೇ ಒಂದು ಕೀರಲು ಧ್ವನಿಯೂ ಕರ್ನಾಟಕ ವಿಧಾನ ಮಂಡಲದಲ್ಲಿ ಕೇಳಿಬರಲಿಲ್ಲ. ಈ ಸ್ಥಿತಿಯಲ್ಲಿ ಜನಸಾಮಾನ್ಯ ವರ್ಗಗಳನ್ನು ಜನಪ್ರತಿನಿಧಿಗಳು ತಮ್ಮ ವಿಶೇಷ ಅಧಿಕಾರವನ್ನು ಬಳಸಿ, ಅಸಹಾಯಕ ತಬ್ಬಲಿಗಳನ್ನಾಗಿ ಮಾಡಿರುವುದಂತೂ ನಿಜ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧದಲ್ಲಿ, ಮೀಸಲು ಸ್ಥಾನಗಳ ನಿಗದಿಯನ್ನು ಕುರಿತು ರಾಜ್ಯ ಚುನಾವಣೆ ಆಯೋಗ ಕಳೆದ ನವೆಂಬರ್‌ನಲ್ಲೇ ಪತ್ರ ಬರೆದಿದ್ದರೂ ಈ ಸ್ಥಿತಿಯ ನಿರ್ಮಾಣಕ್ಕೆ ಹೊಣೆಗಾರರು ಯಾರು?
ರಾಜಕೀಯದ ತಿರುವು: ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ 2008 ರಲ್ಲಿ ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಬರಲಿಕ್ಕೆ ಕಾರಣ ಮೂಲದ ಐವರು ಪಕ್ಷೇತರರು. ಅನಂತರ ಆಪರೇಷನ್ ಕಮಲದ ಹೊಸ ರಾಜಕೀಯ ತಂತ್ರದಲ್ಲಿ ಗೆದ್ದ ವೀರಾಧಿವೀರರು. ಇವರೇ ಈಗಲೂ ಬಿಜೆಪಿ ಸರ್ಕಾರದ ಬೆನ್ನೆಲುಬಿನಂತಿದ್ದಾರೆ ಎಂದರೆ, ಜನ 2008 ರಲ್ಲಿ ಓಟು ಕೊಟ್ಟಿದ್ದು ಯಾರಿಗೆ?
ಈಗ ರಾಜಕೀಯವಾಗಿ, ತಾತ್ವಿಕವಾಗಿ ವಿಧಾನ ಸಭೆಯಲ್ಲಿ ಬಹುಮತವನ್ನು ಕಳೆದುಕೊಂಡಿರುವ ಜಗದೀಶ ಶೆಟ್ಟರ್ ಅವರ ಸರ್ಕಾರ ಯಾಕೆ ಉಳಿಯಬೇಕು? ಕೇವಲ ಐದು ವರ್ಷಗಳ ಅವಧಿಯನ್ನು ಮುಗಿಸುವ ಶಾಸ್ತ್ರದ ಪಾಲನೆಗೆ ಮಾತ್ರವೇ? ಒಂದು ವೇಳೆ ಅವರ ಸರ್ಕಾರ ಉಳಿಯಲೇಬೇಕು ಎನ್ನುವುದೇ ಆದರೆ, ಆ ಮಾತನ್ನು ಯಾರು ಹೇಳಬೇಕು? ಶಾಸಕರೋ, ಮಂತ್ರಿಗಳೋ, ಜನಾಂಗೀಯ ನಾಯಕರೋ, ಯಾರು?
ಜೈಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನ ಶಿಬಿರದಲ್ಲೂ ಇಂತಹ ಪ್ರಸಂಗ ಬಂದರೆ, ಸಕಾಲದಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳುವ ಅಧಿಕಾರವನ್ನು ಪಕ್ಷ ವರಿಷ್ಠರಿಗೇ ನೀಡಿದೆಯೆಂತೆ. ಅದರ ಅರ್ಥ ಈಗ ಪಕ್ಷಾಂತರಿಗಳಿಗೆ ಕಾಂಗ್ರೆಸ್ಸಿನ ಬಾಗಿಲು ಮುಕ್ತವಾಗಿ ತೆರೆದಿದೆ ಎಂದೇ ಅಲ್ಲವೇ?
ವಿಧಾನ ಸಭೆಯ ಸಭಾಂಗಣದಲ್ಲೇ ತಮ್ಮ ಕುರ್ಚಿಯ ಮೇಲೆ ನಿಂತು ಅರೆನಗ್ನ ಅವಸ್ಥೆಯಲ್ಲಿ ಟಿ.ವಿ. ಕ್ಯಾಮೆರಾಗಳಿಗೆ ಪೋಸ್ ಕೊಟ್ಟವರೇ ಈಗ ಜನತಂತ್ರದ ಹೀರೋಗಳೇನು? ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನದಲ್ಲಿದ್ದಾಗಲೇ ಪ್ರಕಟವಾಗಿರುವ ಒಂದು ಸುದ್ದಿ; ಚುನಾವಣೆ ಸಿದ್ಧತೆ ಹಾಗೂ ತಂತ್ರ ಕುರಿತ ವಿಚಾರ ವಿನಿಮಯಕ್ಕೆ ಬಿಜೆಪಿಯ ಶಾಸಕರ ಸಭೆ ಕರೆದಾಗ ಪಟ್ಟಿಯಲ್ಲಿ ಇರುವವರೆಲ್ಲರೂ ಸಭೆಗೆ ಹಾಜರಾಗಿದ್ದರು.
ಫೆಬ್ರವರಿ ಹದಿನಾರರ ಅನಂತರ ಅವರಲ್ಲಿ ಅನೇಕರು "ರಾಷ್ಟ್ರವಾದಿ" ಬಿಜೆಪಿಯನ್ನು ತೊರೆದು ಯಾವುದಾದರೂ "ಸೆಕ್ಯುಲರ್" ಪಕ್ಷಗಳ ನಾಯಕರಾಗಿ ಪರಿವರ್ತನೆಯಾಗಿ ಬಿಡುತ್ತಾರೆ. ಈಗ ರಾಜ್ಯದಲ್ಲಿ ಉಳಿದಿರುವುದು ಜನತಂತ್ರದ ಚೌಕಟ್ಟಷ್ಟೇ. ತಿರುಳು ಎಂದೋ ಮಾಯವಾಗಿದೆ.
ಕಿಡಿಗೇಡಿತನ: ಯಡಿಯೂರಪ್ಪ ಅವರು ಹಾವೇರಿಯ ಕರ್ನಾಟಕ ಜನತಾ ಪಾರ್ಟಿಯ ಅಧ್ಯಕ್ಷರಾದ ಅನಂತರ ಜಗದೀಶ ಶೆಟ್ಟರ್ ಅವರನ್ನು ಭೇಟಿಯಾಗಿಲ್ಲ, ಅಕಸ್ಮಾತ್ತಾಗಿ ಮುಖಾಮುಖಿ ಯಾಗಲೇ ಬೇಕಾಗಿ ಬಂದರೆ ಪರಸ್ಪರ ಪರಿಚಯವೇ ಇಲ್ಲದವರಂತೆ ವರ್ತಿಸುತ್ತಾರೆನ್ನುವುದಕ್ಕೆ ನಿದರ್ಶನ ಸಿಕ್ಕಿದೆ, ಅದೇನೂ ರಾಜಕೀಯದಲ್ಲಿ ದೊಡ್ಡದಲ್ಲ ಬಿಡಿ.
ಸತ್ಯ
anisikeprabha@gmail.com