ಅಂಕಣಗಳು

ಯುವ ಮನಸ್ಸುಗಳ ಕೋಟೆಗೆ ಲಗ್ಗೆ ಹಾಕಿದ ಮೋದಿ

Published On :

ಗುಜರಾತ್‌ನ ರಾಜಕೀಯ ಭಾಷೆಯಲ್ಲಿ ನರೇಂದ್ರ ಮೋದಿಯವರನ್ನು ಹಳೆಯ ಮನುಷ್ಯ ಎಂದು ಕರೆಯಲಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಅವರು ಸತತ ಮೂರು ಬಾರಿ ಜಯಗಳಿಸಿದ್ದು, ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದದ್ದು, ನಾಲ್ಕನೇ ಬಾರಿಗೆ ಮುಖ್ಯ ಮಂತ್ರಿಯಾದದ್ದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ಮೊನ್ನೆ, ದೆಹಲಿಯ ಶ್ರೀರಾಮ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ದೊರೆತ ಅವಕಾಶವನ್ನು ಮೋದಿ ಚೆನ್ನಾಗಿ ಬಳಸಿಕೊಂಡರು. ತನ್ನನ್ನು ಹಳೆಯ ಮನುಷ್ಯ ಎಂದು ಕರೆದವರಿಗೆಲ್ಲ 'ಮುಟ್ಟಿ ನೋಡಿಕೊಳ್ಳುವಂಥ' ಉತ್ತರ ಕೊಟ್ಟರು. ಸಂವಾದದ ಸಂದರ್ಭದಲ್ಲಿ ಅವರ ಭಾಷಣ ಆಲಿಸಿದವರಿಗೆಲ್ಲ ಒಂದು ಸಂಗತಿ ಮನದಟ್ಟಾಯಿತು. ಏನೆಂದರೆ ಮೋದಿ, ಭವಿಷ್ಯದ ದಿನಗಳ ಕುರಿತು ನೂರೆಂಟು ಕನಸು ಹೊಂದಿರುವ ಮುತ್ಸದ್ಧಿ. ಆತ ಸದಾ ದೇಶದ ಅಭಿವೃದ್ಧಿ ಕುರಿತು ಚಿಂತಿಸುತ್ತಾರೆ. ಈ ಮಧ್ಯೆಯೇ ಮುಂದೆ ತಾನು ನಾಯಕನಾಗಿ ಮತ್ತು ರಾಜಕಾರಣಿಯಾಗಿ ಇಡಬೇಕಾದ ಹೆಜ್ಜೆಗಳ ಬಗ್ಗೆ ಕೂಡ ಯೋಚಿಸುತ್ತಾರೆ.
ಮುಂದಿನ ದಿನಗಳಲ್ಲಿ ಪ್ರಧಾನಿ ಹುದ್ದೆಯ ಗದ್ದುಗೆ ಸಿಗುವುದು ಬಿಜೆಪಿ ಅಥವಾ ಕಾಂಗ್ರೆಸ್‌ಗೆ. ಈ ಪೈಕಿ ರಾಹುಲ್ ಗಾಂಧಿಯೇ ತನ್ನ ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಈಗಾಗಲೇ ಘೋಷಿಸಿಕೊಂಡಿದೆ. ಬಿಜೆಪಿಯಿಂದ ಮೋದಿಯವರ ಹೆಸರನ್ನು ತೇಲಿ ಬಿಡುವ ಪ್ರಯತ್ನ ನಡೆದೇ ಇದೆ. ಅವಕ್ಕೆ ವಿರೋಧವೂ ವ್ಯಕ್ತವಾಗಿದೆ. ಇಂಥ ಸಂದರ್ಭದಲ್ಲಿ, ರಾಹುಲ್‌ಗಾಂಧಿ ಹಾಗೂ ನರೇಂದ್ರಮೋದಿಯವರ ಪೈಕಿ ಹೆಚ್ಚು ಪ್ರಭಾವಶಾಲಿ ವ್ಯಕ್ತಿತ್ವ ಹೊಂದಿದವರು ಯಾರು ಎಂಬುದು ಹಲವರ ಕುತೂಹಲ, ಪ್ರಶ್ನೆ.
ತನ್ನನ್ನು ತಾನು ಮಾರ್ಕೆಟಿಂಗ್ ಮಾಡಿಕೊಳ್ಳುವಲ್ಲಿ ಹಿಂದೆ ಮತ್ತು ಈಗ ನರೇಂದ್ರ ಮೋದಿಯವರೇ ಮುಂದಿದ್ದಾರೆ ಎಂಬುದು ಬಹಿರಂಗ ಸತ್ಯ. ಮೊನ್ನೆ, ಶ್ರೀರಾಮ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮೋದಿಯವರ ಉಪಸ್ಥಿತಿಯನ್ನು ವಿರೋಧಿಸಿ ಕೆಲವು ಸಂಘಟನೆಯ ವಿದ್ಯಾರ್ಥಿಗಳು  ಪ್ರತಿಭಟನೆ ನಡೆಸಿದರೂ, ಅದನ್ನು ಮೀರಿ ಎಲ್ಲರೂ ಮೆಚ್ಚುವಂಥ ಭಾಷಣದ ಮೂಲಕ ಜನಮನ ಗೆದ್ದದ್ದು ಮೋದಿಯವರ ಜನಪ್ರಿಯತೆಗೆ ಸಾಕ್ಷಿ. ನಮಗೆ ಈ ಸಂದರ್ಭದಲ್ಲಿ ಬೇಕಿರುವುದು ಭವಿಷ್ಯ ಕುರಿತು ಯೋಚಿಸಬೇಕಾದ ಮನಸ್ಸೇ ವಿನಃ ಭೂತಕಾಲದ ಬಗ್ಗೆ ಯೋಚಿಸುತ್ತಾ ಹಣೆಚಚ್ಚಿಕೊಳ್ಳುವ ಮನಸ್ಥಿತಿಯಲ್ಲಿ ಎಂದು ಹೇಳುವ ಮೂಲಕ, ನಾನು ಯಾವತ್ತೂ ಭವಿಷ್ಯದ ಕುರಿತೇ ಯೋಚಿಸುವವನು ಎಂಬುದನ್ನು ತುಂಬ ಸ್ಪಷ್ಟವಾಗಿ ಮೋದಿ ಹೇಳಿಬಿಟ್ಟರು.
ಕೋಮುವಾದ, ಜಾತಿ ರಾಜಕಾರಣ, ಭ್ರಷ್ಟಾಚಾರ ಹಾಗೂ ದಿನಕ್ಕೊಂದು ಹಗರಣದ ಕಾರಣದಿಂದ ದೇಶದ ನಾಗರಿಕರು ಕಂಗಾಲಾಗಿರುವ ಈ ಸಂದರ್ಭದಲ್ಲಿ 'ಮಿಸ್ಟರ್ ಕ್ಲೀನ್‌' ಬ್ರಾಂಡ್‌ನ ವ್ಯಕ್ತಿಯೊಬ್ಬನ ಭರವಸೆಯ ಮಾತುಗಳಿಗೆ ದೇಶ ಕಾದು ಕುಳಿತ ಸಂದರ್ಭ ಇದು. ಅಂಥದೊಂದು ಸ್ಥಾನವನ್ನು ತುಂಬಬಲ್ಲ ಸಾಮರ್ಥ್ಯ ನನಗಿದೆ ಎಂದು ಅನುಮಾನಕ್ಕೆ ಆಸ್ಪದವಿಲ್ಲದಂತೆ ಮೋದಿ ತೋರಿಸಿಕೊಟ್ಟರು. ದೆಹಲಿಯ ಶ್ರೀರಾಮ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ತಮ್ಮ ಭಾಷಣದುದ್ದಕ್ಕೂ ಅವರು ಕಾಂಗ್ರೆಸ್‌ನ ಮೇಲೆ ಹರಿಹಾಯ್ದರು ನಿಜ. ಆದರೆ, ಯಾವ ಸಂದರ್ಭದಲ್ಲೂ ಅವರು ತಮ್ಮ ಮಾತುಗಳನ್ನು ವೋಟ್‌ಬ್ಯಾಂಕ್ ರಾಜಕೀಯದ ಕಡೆಗೆ ಹೊರಳಿಸಲಿಲ್ಲ. ಕೋಮು ಭಾವನೆಯನ್ನು ಕೆರಳಿಸುವಂಥ ಮಾತುಗಳಾಡಲಿಲ್ಲ. ತನ್ನನ್ನು ಹೊಗಳಿಕೊಳ್ಳಲಿಲ್ಲ. ನಾನು ಮಾಡಿದ್ದೇ ಸರಿ ಎಂದು ವಾದಿಸಲಿಲ್ಲ. ಬದಲಿಗೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ದಾರಿಯ ಬಗ್ಗೆ ಮಾತಾಡಿದರು. ಜಪಾನ್‌ನಲ್ಲಿ ತಯಾರಾಗುವ ಉತ್ಪನ್ನಗಳಿಗೆ ಜನ ಮುಗಿಬೀಳುತ್ತಾರಲ್ಲ; ಹಾಗೆ, ಮೇಡ್ ಇನ್ ಇಂಡಿಯಾದ ವಸ್ತುಗಳಿಗೂ ಜನ ಮುಗಿಬೀಳುವ ಕಾಲ ಬೇಗನೇ ಬರಲಿ ಎಂದು ಆಶಿಸಿದ್ದು ನರೇಂದ್ರ ಮೋದಿಯವರ ಕಂಗಳಲ್ಲಿರುವ ಅಭಿವೃದ್ಧಿ ಮಂತ್ರ ಎಂಥವೆಂಬುದಕ್ಕೆ ಸಾಕ್ಷಿ.
ಒಂದು ರಾಜ್ಯ ಅಥವಾ ದೇಶದಲ್ಲಿ ಸರ್ಕಾರದ ಪಾತ್ರವೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳ ಕಡೆಯಿಂದ ತೂರಿ ಬಂದಾಗ ಮೋದಿ ತಕ್ಷಣವೇ ಹೀಗೆಂದರು: ಸರ್ಕಾರ ಎಂಬುದು ನೆಪ ಮಾತ್ರಕ್ಕೆ ಇರಲಿ. ಅಭಿವೃದ್ಧಿ ಎಂಬುದು ಇಡೀ ದಿನದ, ಇಡೀ ವರ್ಷದ ಜಪವಾಗಿರಲಿ.'
ಸದಾ ಅಭಿವೃದ್ಧಿಯ ಜಪದಲ್ಲೇ ಉಳಿದರೆ, ಅಲ್ಪಾವಧಿಯಲ್ಲೇ ಮಹತ್ವದ ಸಾಧನೆ ಮಾಡಬಹುದು ಎಂದರು ಮೋದಿ. ದೇಶದ ಅತಿ ದೊಡ್ಡ ಸಮುದಾಯ ಭವನವನ್ನು, ಗುಜರಾತ್‌ನ ಗಾಂಧಿನಗರದಲ್ಲಿ, ಕೇವಲ 152 ದಿನಗಳಲ್ಲಿ ಕಟ್ಟಿಸಿದ ಬಗೆಯನ್ನು ಈ ಸಂದರ್ಭದಲ್ಲಿ ಉದಾಹರಿಸಿದರು. ದೆಹಲಿಯಲ್ಲಿ ಮೆಟ್ರೋ ರೈಲುಗಳಿಗೆ ಅಳವಡಿಸಲಾಗಿರುವ ಕೋಚ್‌ಗಳನ್ನು ತಯಾರಿಸಿದ್ದು ಅದೇ ಗುಜರಾತ್‌ನಲ್ಲಿ ಎಂದ ಅವರು,  ಇತ್ತೀಚಿನ ದಿನಗಳಲ್ಲಿ ಗುಜರಾತ್‌ನಲ್ಲಿ ತಯಾರಾದ ವಸ್ತು ಎಂದರೆ ಅದರ ಗುಣಮಟ್ಟದ ಬಗ್ಗೆ ಯಾರೂ ಅನುಮಾನ ಪಡದಂಥ ವಾತಾವರಣ ಸೃಷ್ಟಿಯಾಗಿರುವುದು ನನ್ನ ಹೆಮ್ಮೆ ಎಂದರು. ಭಾಷಣದ ಸಂದರ್ಭದಲ್ಲಿ ಸಾಧನೆಯ ಮಾತು ಹೇಳಬೇಕಾದಾಗೆಲ್ಲ ಮೋದಿಯವರ ಮಾತು ಗುಜರಾತ್‌ಗೇ ಹೋಗಿ ನಿಲ್ಲುತ್ತಿತ್ತು. ಹೀಗೆ ಉದಾಹರಿಸುವ ಮೂಲಕ, ಒಂದು ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ತಂದು ನಿಲ್ಲಿಸಿದ ನಾನು, ಅವಕಾಶ ಸಿಕ್ಕರೆ ದೇಶವನ್ನೂ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬಲ್ಲೆ ಎಂದು ಪರೋಕ್ಷವಾಗಿ, ತುಂಬ ಸ್ಪಷ್ಟವಾದ ಮಾತುಗಳಲ್ಲಿ ಹೇಳಿಬಿಟ್ಟರು ನರೇಂದ್ರ ಮೋದಿ.
ರೈತರೇ ದೇಶದ ಬೆನ್ನೆಲುಬು. ದೇಶ ಉದ್ಧಾರವಾಗಬೇಕಾದರೆ, ರೈತರು ನೆಮ್ಮದಿಯಿಂದ ಬದುಕಬೇಕು. ಅವರ ನೆಮ್ಮದಿಯ ಬದುಕಿಗೆ ಪೂರಕವಾಗುವಂಥ ಸಂದರ್ಭ ಸೃಷ್ಟಿಯಾಗಬೇಕು ಎಂದು ಹೇಳಲು ಮೋದಿ ಮರೆಯಲಿಲ್ಲ. ರೈತರ ಅಭಿವೃದ್ಧಿಗೆ ನೆರವಾಗಲೆಂದೇ ಪಶುಸಂಗೋಪನಾ ಇಲಾಖೆಯಲ್ಲಿ ಹಲವು ಯೋಜನೆಗಳನ್ನು ಆರಂಭಿಸಲಾಗಿದೆ. ಇದರ ಪರಿಣಾಮವಾಗಿ ಜಾನುವಾರುಗಳಿಗೆ ಗಂಡಾಂತರಕಾರಿ ಎಂಬಂತೆ ಕಾಣಿಸಿಕೊಂಡಿದ್ದ 120ಕ್ಕೂ ಹೆಚ್ಚು ರೋಗಗಳಿಗೆ ಲಸಿಕೆ ಕಂಡು ಹಿಡಿಯಲಾಗಿದೆ ಎಂದ ಮೋದಿ ಮುಂದುವರಿದು ಮುತ್ತಿನಂಥ ಮಾತೊಂದನ್ನು ಹೇಳಿದರು: 'ಜಾನುವಾರು ಆರೋಗ್ಯ ಸುಧಾರಿಸಲು ಸಾಧ್ಯವಾಗಿದೆ ಎಂದ ಮೇಲೆ ದೇಶದ ಆರೋಗ್ಯವನ್ನು ಕಾಪಾಡಲು ಯಾಕೆ ಸಾಧ್ಯವಿಲ್ಲ?'
ಮೋದಿಯವರ ಮಾತುಗಾರಿಕೆ ಇಲ್ಲಿಗೇ ಮುಗಿಯಲಿಲ್ಲ. ತಮ್ಮ ರಾಜ್ಯ ಇವತ್ತು ಯಾವ್ಯಾವ ರಂಗದಲ್ಲಿ ಹೇಗೆಲ್ಲಾ ಅಭಿವೃದ್ಧಿ ಹೊಂದಿದೆ ಎಂಬುದನ್ನು ಅವರು ಸಾಕ್ಷ್ಯಾಧಾರಗಳ ಸಮೇತ ವಿವರಿಸಿದರು. ಇವತ್ತು ಗುಜರಾತ್‌ನಲ್ಲಿ ಬಂಡವಾಳ ಹೂಡಲು ಶ್ರೀಮಂತ ಉದ್ಯಮಿಗಳು ಮಾತ್ರವಲ್ಲ, ಒಂದು ಕಾಲದಲ್ಲಿ ಬಡತನ ರೇಖೆಯಿಂದ ಕೆಳಗಿದ್ದ ಸಮೂಹದ ಜನರೂ ಬರ್ತಾರೆ. ಅಂದ ಮೇಲೆ ಗುಜರಾತ್‌ನ ಅಭಿವೃದ್ಧಿ ಹೇಗೆ ನಡೆದಿದೆ ಎಂದು ಯಾರೂ ಅರ್ಥಮಾಡಿಕೊಳ್ಳಬಹುದು...
ಹೀಗೆ, ಒಂದೊಂದೇ ವಿಶಿಷ್ಟ ಮಾತುಗಳಿಂದ ತನ್ನ ವ್ಯಕ್ತಿತ್ವವನ್ನು ಹಿಗ್ಗಿಸಿಕೊಳ್ಳುತ್ತಲೇ ಹೋದ ಮೋದಿ, ದೇಶದೊಂದಿಗೆ ಗುಜರಾತ್‌ಗೆ ಇರುವ ಅವಿನಾಭಾವ ಸಂಬಂಧ, ದೇಶದ ಬಹುಪಾಲು ಎಲ್ಲ ನಗರಗಳಿಗೂ ಅಮೂಲ್‌ನ ರೂಪದಲ್ಲಿ ಬರುವ ಗುಜರಾತ್‌ನ ಆಹಾರ ಪದಾರ್ಥದ ಬಗ್ಗೆ ನೆನಪಿಸಿದರು. ಆ ಮೂಲಕ ತಮ್ಮ ಮೊನಚು ಭಾಷಣದ ಮಧ್ಯೆ ಸೆಂಟಿಮೆಂಟ್‌ನ ಅಂಶವನ್ನೂ ತಂದರು. ಮುಂದೆ, ಭಾರತವನ್ನು ಎಲ್ಲರೂ ಬೆರಗಿನಿಂದ ನೋಡುವಂತೆ ಮಾಡಿರುವ ಕಂಪ್ಯೂಟರ್ ತಂತ್ರಜ್ಞಾನದ ಕಡೆಗೆ ಮಾತು ಹೊರಳಿತು. ಆಗ ಮೋದಿ, ಯಾವುದೇ ಹಿಂಜರಿಕೆಯಿಲ್ಲದೆ ಹೇಳಿದರು: 'ಕಂಪ್ಯೂಟರ್ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ರಾಂತಿಯಾಗಿದ್ದರೆ ಅದಕ್ಕೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರ ದೂರದೃಷ್ಟಿಯೇ ಕಾರಣ. ಐಟಿ ರಂಗದ ಬಗ್ಗೆ ರಾಜೀವ್ ಕಂಡ ಕನಸುಗಳನ್ನೆಲ್ಲ ನಮ್ಮ ದೇಶದ ಯುವಜನತೆ ನನಸು ಮಾಡಿದರು. ರಾಜೀವ್ ಗಾಂಧಿಯವರ ಹಿಂದೆ ಮುಂದೆಯೇ ಸುಳಿದಾಡಿಕೊಂಡಿದ್ದವರು ತಮ್ಮ ನಾಯಕನನ್ನು ದಾರಿ ತಪ್ಪಿಸಿಬಿಟ್ಟರು. ಎಷ್ಟೋ ಮಂದಿ ವಿದೇಶಿ ಗಣ್ಯರು-ಭಾರತವೆಂದರೆ ಹಾವುಗಳನ್ನು ಆಡಿಸುವವರ ದೇಶ ಎಂದು ಭಾವಿಸಿದ್ದರು. ಅದನ್ನು ಒಂದು ಜೋಕ್ ಎಂಬಂತೆ ಪದೇ ಪದೇ ಹೇಳುತ್ತಿದ್ದರು. ಈಗ, ಅಂಥವರನ್ನು ಹತ್ತಿರ ಕರೆದು - ಈಗ ಕಾಲ ಬದಲಾಗಿದೆ ಸ್ವಾಮೀ, ಭಾರತವೆಂಬುದು ಈಗ ಇಲಿಗಳನ್ನು (ಮೌಸ್) ಆಡಿಸುವ ಪ್ರಚಂಡ ಬುದ್ಧಿವಂತರ ನಾಡಾಗಿದೆ ಎಂದು ಹೇಳಿದ್ದೇನೆ...'
ಹೌದು. ಹೀಗೆ ಹೇಳುವ ಮೂಲಕ ನರೇಂದ್ರ ಮೋದಿ ಒಂದೇ ಕಲ್ಲಿಂದ ಎರಡಲ್ಲ, ಮೂರು ಹಕ್ಕಿಗಳನ್ನು ಹೊಡೆದರು. ರಾಜೀವ ಗಾಂಧಿಯನ್ನು ಹೊಗಳುವ ಮೂಲಕ, ಉತ್ತಮ ನಾಯಕತ್ವದ ವ್ಯಕ್ತಿಯನ್ನು ಅಭಿನಂದಿಸಲು ನಾನು ಎಂದೆಂದೂ ಮುಂದಿದ್ದೇನೆ ಎಂದು ಸಾರಿದರು. ಐಟಿ ಕ್ಷೇತ್ರದ ಕ್ರಾಂತಿಗೆ ಯುವಜನತೆ ಕಾರಣ ಎನ್ನುವ ಮೂಲಕ ಅವರೆಲ್ಲರ ಮೆಚ್ಚುಗೆ ಗಳಿಸಿದರು. ರಾಜೀವಗಾಂಧಿಯವರ ಹಿಂಬಾಲಕರನ್ನು ಟೀಕಿಸುವ ಮೂಲಕ ಕಾಂಗ್ರೆಸ್ ನಾಯಕರಿಗೆ ನೇರವಾಗಿಯೇ ಚುರುಕು ಮುಟ್ಟಿಸಿದರು.
ತಮ್ಮ ಮಾತುಗಳುದ್ದಕ್ಕೂ ಸೂಕ್ತಿಗಳು, ನುಡಿಗಟ್ಟುಗಳನ್ನು ಬಳಸಿದ ಮೋದಿ, ಯುವಜನತೆಯ ಶಕ್ತಿ ಸದ್ಬಳಕೆಯಾದಾಗ ಮಾತ್ರ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದು ಒತ್ತಿ ಹೇಳಿದರು. ಉಳಿದೆಲ್ಲ ಪಕ್ಷಗಳು ಯುವ ಮತದಾರರ ಬಗ್ಗೆ, ಅವರ ವೋಟುಗಳಿಂದ ಆಗುವ ಲಾಭದ ಬಗ್ಗೆ ಚರ್ಚಿಸುತ್ತಿರುವಾಗ, ಯುವಶಕ್ತಿಯ ಸದ್ಬಳಕೆಯಾಗಲಿ ಎಂದು ಮೋದಿಯವರು ಹೇಳಿದ್ದು ವಿಶೇಷವಾಗಿತ್ತು.
ತಮ್ಮ ಆಡಳಿತದ ಅವಧಿಯಲ್ಲಿ ಗುಜರಾತ್ ಎಷ್ಟೆಲ್ಲಾ ಅಭಿವೃದ್ಧಿ ಹೊಂದಿದೆ ಎಂಬುದಕ್ಕೆ ಉದಾಹರಣೆಯಾಗಿ ದಲಿತನೊಬ್ಬನ ಯಶೋಗಾಥೆಯನ್ನು ಇದೇ ಸಂದರ್ಭದಲ್ಲಿ ಮೋದಿ ವಿವರಿಸಿದರು. ಮೋದಿಯವರ ಸರ್ಕಾರ ಜಾರಿಗೆ ತಂದ ಯೋಜನೆಗಳ ಸದುಪಯೋಗ ಮಾಡಿಕೊಂಡ ದಲಿತನೊಬ್ಬ ಮಹತ್ವದ ಯಶಸ್ಸು ಕಂಡನಂತೆ. ಮುಂದೆ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ಕ್ಲಿಂಟನ್ ರಾಜಸ್ಥಾನಕ್ಕೆ ಬಂದಿದ್ದಾಗ ಅವರನ್ನು ಭೇಟಿ ಮಾಡಿದನಂತೆ. ಈತನ ಯಶೋಗಾಥೆ ಕೇಳಿ ಬಿಲ್‌ಕ್ಲಿಂಟನ್ ಕೂಡ ಆನಂದಪಟ್ಟರಂತೆ. ಇಷ್ಟು ಹೇಳಿ ಸುಮ್ಮನಾಗಲಿಲ್ಲ ಮೋದಿ. ಇಂಥ ಯಶಸ್ವೀ ಮಂದಿಯನ್ನು ಗುಜರಾತ್‌ನ ಎಲ್ಲ ನಗರಗಳಲ್ಲೂ, ಜಾತಿ ಮತದ ಹಂಗಿಲ್ಲದೆ ಕಾಣಬಹುದು ಎಂದರು.
ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಬೇಕಾದುದು ಈ ಕ್ಷಣದ ತುರ್ತು ಅಗತ್ಯ. ನಾವು ಬದಲಾಗದಿದ್ದರೆ, ಈ ಜಗತ್ತು ನಮಗಾಗಿ ಕಾಯುತ್ತಾ ಕೂರುವುದಿಲ್ಲ. ಹಾಗಾಗಿ, ದೇಶದ ಯುವಜನತೆ ತಕ್ಷಣವೇ ಎದ್ದು ನಿಲ್ಲಬೇಕು. ತಮ್ಮ ಜವಾಬ್ದಾರಿ ಅರಿಯಬೇಕು. ನೆರೆಯ ಚೀನಾ ದೇಶದ ಯುವಕರು, ಎಲ್ಲ ಬಗೆಯ ಉತ್ಪನ್ನಗಳನ್ನು ತಯಾರಿಸಿ, ಮಾರುಕಟ್ಟೆಯ ಸಾರ್ವಭೌಮರು ಅನ್ನಿಸಿಕೊಳ್ಳಲು ಸಾಧ್ಯವಾದ ಮೇಲೆ, ಅಂಥದೇ ಸಾಧನೆ ಭಾರತೀಯರಿಂದಲೂ ಯಾಕಾಗಬಾರದು? ನನಗೆ ನಮ್ಮ ಯುವಜನರ ಮೇಲೆ ನಂಬಿಕೆಯಿದೆ. ಅವರಲ್ಲಿ ಭರವಸೆಯಿದೆ. ಮುಂಬರುವ ದಿನಗಳಲ್ಲಿ ಅವರು ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಾರೆ... ಎನ್ನುತ್ತಾ ಭಾಷಣ ಮುಗಿಸಿದರು ಮೋದಿ.  ಮರುಕ್ಷಣವೇ ಸಭಾಂಗಣದಲ್ಲಿದ್ದ ಯುವ ಸಮೂಹ ಚಪ್ಪಾಳೆಯ ಸುರಿಮಳೆಯೊಂದಿಗೆ ಅವರ ಮಾತನ್ನು ಒಪ್ಪಿಕೊಂಡಿತು. ಈ ಸಂಭ್ರಮದ ಕ್ಷಣವನ್ನು ಅದೆಷ್ಟೋ ಲಕ್ಷ ಜನ ಟಿ.ವಿ.ಗಳಲ್ಲಿ ವೀಕ್ಷಿಸಿದರು.
ರಾಜಕೀಯವಾಗಿ ರಾಹುಲ್‌ಗಾಂಧಿಯವರಿಗಿಂತ ಎಲ್ಲ ರೀತಿಯಲ್ಲೂ ವಿಪರೀತ ಮುಂದಿದ್ದಾರೆ ನರೇಂದ್ರ ಮೋದಿ. ಅದು ಈ ಹಿಂದೆಯೇ ಸಾಬೀತಾಗಿದೆ. ಶ್ರೀರಾಮ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಾಡಿದ ಭಾಷಣದ ಮೂಲಕ, ರಾಹುಲ್ ಮಾತ್ರವಲ್ಲ, ಭಾರತದ ಎಲ್ಲ ರಾಜಕಾರಣಿಗಳಿಗಿಂತಲೂ ನಾನು ಮುಂದಿದ್ದೇನೆ ಎಂದೂ ಮೋದಿ ತೋರಿಸಿಕೊಟ್ಟಿದ್ದಾರೆ. ಯುವ ಮನಸ್ಸುಗಳ ಕೋಟೆಗೆ ಲಗ್ಗೆ ಹಾಕಿದ್ದಾರೆ.



- ಆರ್.ಜಗನ್ನಾಥನ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.