-ಟಿಜೆಎಸ್ ಜಾರ್ಜ್
ತನ್ನ ದೇಶವನ್ನು ಬಿಟ್ಟು ಓಡಿಹೋಗಲು ಯಾವ ವ್ಯಕ್ತಿಯಾದರೂ ಬಯಸುತ್ತಾನೆಯೇ? ತಾನು ಹಾಗೆ ಮಾಡುವುದಾಗಿ ಕಮಲಹಾಸನ್ ಉದ್ಗರಿಸಿದಾಗ ಅವರು ಹತಾಶರಾಗಿದ್ದರು, ನಿರಾಶರಾಗಿದ್ದರು, ಆಕ್ರೋಶಭರಿತರಾಗಿದ್ದರು. ಎರಡು ನಿದರ್ಶನಗಳನ್ನೂ ಅವರು ನೀಡಿದರು. ಸುಭಾಶ್ಚಂದ್ರ ಬೋಸ್ ಮತ್ತು ಎಂ.ಎಫ್. ಹುಸೇನ್ ಪ್ರಕರಣಗಳನ್ನು ಪ್ರಸ್ತಾಪಿಸಿದರು. ವಾಸ್ತವವಾಗಿ ಇವೆರಡೂ ಪ್ರಕರಣಗಳು ಸಾಬೀತುಪಡಿಸಿದ್ದಾದರೂ ಏನು?- ನೀವೇನೋ ದೇಶದಿಂದ ಹೊರ ಹೋಗಬಲ್ಲಿರಿ, ಆದರೆ ದೇಶವನ್ನು ನಿಮ್ಮಿಂದ ದೂರ ಸರಿಸಲು ಸಾಧ್ಯವಿಲ್ಲ.
ಸುಭಾಶ್ಚಂದ್ರ ಬೋಸ್ ಭಾರತ ಬಿಟ್ಟು ಹೋಗಿದ್ದಾದರೂ ಏಕೆ? ಭಾರತದ ಜತೆಗೇ ಇರಲು ಮತ್ತು ಭಾರತಕ್ಕಾಗಿ ಹೋರಾಡಲು. ಬ್ರಿಟಿಷರ ದಾಖಲೆಗಳಲ್ಲಿ ಅವರು ಯುದ್ಧಾಪರಾಧಿಯಾಗಿ ದಾಖಲಾದರು. ಹಾಗಾಗಿ, ಯುದ್ಧದಲ್ಲಿ ಬ್ರಿಟನ್ ಗೆದ್ದಾಗ ಭಾರತಕ್ಕೆ ಮರಳಲು ಅವರಿಗೆ ಸಾಧ್ಯವಾಗಲಿಲ್ಲ. ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟರೆಂದು ಪ್ರಚಾರವಾಯಿತು. ಆದರೆ, ಅವರು ಹಾಗೆ ಮೃತಪಟ್ಟಿರಲಿಲ್ಲ, ಬದಲಾಗಿ ರಷ್ಯಾದ ಪ್ರಾಂತವೊಂದಕ್ಕೆ ತಪ್ಪಿಸಿಕೊಂಡು ಹೋಗಿದ್ದರು, ಬಳಿಕ ಭಾರತಕ್ಕೆ ಮರಳಿ ಒಬ್ಬ ಸನ್ಯಾಸಿಯಾಗಿ ಹಲವಾರು ವರ್ಷಗಳ ಕಾಲ ಜೀವಿಸಿದ್ದರು ಎಂಬುದಕ್ಕೆ ನಂಬಲರ್ಹ ಸಾಕ್ಷ್ಯಗಳಿವೆ.
ಎಂ.ಎಫ್. ಹುಸೇನ್ ತಾವಾಗಿಯೇ ಹೊರಹೋಗಲಿಲ್ಲ. ಅವರನ್ನು ದೇಶದಿಂದ ಹೊರಕ್ಕೆ ಅಟ್ಟಿಸಲಾಯಿತು. ಮತಾಂಧರು ಅವರ ಪ್ರಾಣಕ್ಕೇ ಅಪಾಯ ಒಡ್ಡಿದರು. ಸಲ್ಮಾನ್ ರಶ್ದಿಯನ್ನು ಅವರಿಗೆ ಆಶ್ರಯ ನೀಡಿದ ರಾಷ್ಟ್ರವು ರಕ್ಷಿಸಿದಂತೆ ಹುಸೇನ್‌ರನ್ನು ನಮ್ಮ ದೇಶ ರಕ್ಷಿಸಲಿಲ್ಲ. ಪರರಾಷ್ಟ್ರ ನೀಡಿದ ಆಶ್ರಯವನ್ನು ಹುಸೇನ್ ಸ್ವೀಕರಿಸಿದರು. ತಾನು ಎಲ್ಲೇ ಇರಲಿ, ತಾನೊಬ್ಬ 'ಭಾರತೀಯ ಕಲಾವಿದ' ಎಂದೇ ಗುರುತಿಸಿಕೊಳ್ಳಲು ಬಯಸುವುದಾಗಿ ಹೇಳಿದ್ದರು ಹುಸೇನ್. ಇತಿಹಾಸದಲ್ಲಿ, ಅನೇಕಾನೇಕ ಮಹಾನ್ ವ್ಯಕ್ತಿಗಳನ್ನು ಮೂಲಭೂತವಾದಿ ಶಕ್ತಿಗಳು ದೇಶದಿಂದ ಹೊರಗಟ್ಟಿವೆ. ಅಲ್ಬರ್ಟ್ ಐನ್‌ಸ್ಟೀನ್ ತಮ್ಮ ತಾಯ್ನಾಡು ಜರ್ಮನಿಯಲ್ಲಿ ಶಿಕ್ಷಕ ಹುದ್ದೆಯನ್ನು ಬಯಸಿದ್ದರು. ಆದರೆ ಅವರೊಬ್ಬ ಯಹೂದಿ ಎಂಬ ಕಾರಣದಿಂದ ಆ ಹುದ್ದೆಯನ್ನು ನಿರಾಕರಿಸಲಾಯಿತು. ಜರ್ಮನಿಯ ನಷ್ಟವು ಅಮೆರಿಕಕ್ಕೆ ಲಾಭವಾಗಿ ಪರಿಣಮಿಸಿತು. ಇನ್ನೊಬ್ಬ ಯಹೂದಿ ಸಿಗ್ಮಂಡ್ ಫ್ರಾಯ್ಡ್, ಆಸ್ಟ್ರಿಯಾಕ್ಕೆ ನಾಜಿಗಳು ಪ್ರವೇಶಿಸಿದಾಗ ತಮ್ಮ ರಾಷ್ಟ್ರದಿಂದ ಪಲಾಯನ ಮಾಡಬೇಕಾಯಿತು. ಯಹೂದಿ ಮೂಲದ ಕಾರ್ಲ್ ಮಾರ್ಕ್ಸ್ ಅವರನ್ನು ಕೂಡಾ ಹೊಸ ಆರ್ಥಿಕ ಸಿದ್ಧಾಂತದ ಹಿನ್ನೆಲೆಯಲ್ಲಿ ಜರ್ಮನಿ, ಫ್ರಾನ್ಸ್ ಮತ್ತು ಬೆಲ್ಜಿಯಂನಿಂದ ಹೊರಗಟ್ಟಲಾಯಿತು.
ಚಾರ್ಲಿ ಚಾಪ್ಲಿನ್ 40 ವರ್ಷಗಳ ಕಾಲ ಅಮೆರಿಕದಲ್ಲಿ ನೆಲೆಸಿದ್ದರು. ಆದರೆ, ತಮ್ಮ ಬ್ರಿಟಿಷ್ ಪೌರತ್ವವನ್ನು ಉಳಿಸಿಕೊಂಡಿದ್ದರು. ಮೆಕಾರ್ತಿ ಅವರ ಕಮ್ಯುನಿಸ್ಟ್ ವಿರೋಧಿ ಧರ್ಮಯುದ್ಧವು ಹುಚ್ಚು ಪರಾಕಾಷ್ಠೆಗೆ ತಲುಪಿದಾಗ, ಕಮ್ಯುನಿಸ್ಟ್ ಒಲವಿನ ಆರೋಪ ಎದುರಿಸಿದ ಅಸಂಖ್ಯಾತ ಕಲಾವಿದರು ಮತ್ತು ಬುದ್ಧಿಜೀವಿಗಳ ಸಾಲಿನಲ್ಲಿದ್ದವರಲ್ಲಿ ಚಾಪ್ಲಿನ್ ಕೂಡಾ ಒಬ್ಬರು. ಚಾಪ್ಲಿನ್ ಸ್ವಿಜರ್ಲೆಂಡ್‌ನಲ್ಲಿ ನೆಲೆಸಿ ಹೇಳಿದ್ದೇನು ಗೊತ್ತೇ?- 'ಯೇಸು ಕ್ರಿಸ್ತನೇ ಅಧ್ಯಕ್ಷನಾದರೂ ನಾನು ಇನ್ನು ಅಮೆರಿಕಕ್ಕೆ ಮರಳಿ ಹೋಗಲಾರೆ'. ಎಂ.ಎಫ್. ಹುಸೇನ್‌ರಂಥದ್ದೇ ಪ್ರಕರಣ ಸಾದತ್ ಹಸನ್ ಮಂಟೋ ಅವರದು. ಭಾರತದ ಮಹಾನ್ ಲೇಖಕರಲ್ಲೊಬ್ಬರಾದ ಅವರು ಎಂದೂ ಕೋಮುವಾದದ ಕಳಂಕ ತಗಲಿಸಿಕೊಂಡವರಲ್ಲ. ದೇಶ ವಿಭಜನೆಗೆ ಸಂಬಂಧಿಸಿದ ಅವರ ಕೆಲ ಕಥೆಗಳು ವಿಶ್ವದಲ್ಲೇ ಅತ್ಯುತ್ತಮ ಕಥಾನಕವೆನಿಸಿಕೊಂಡಿವೆ. ಅಣಕ ಬರಹಗಳಿಂದ ಅವರು ಖ್ಯಾತರಾದರು. ಚಿತ್ರೋದ್ಯಮದಲ್ಲೂ ದೊಡ್ಡ ಹೆಸರು ಗಳಿಸಿದರು. ಆದರೆ, ಭಾರತಕ್ಕೆ ಸ್ವಾತಂತ್ರ್ಯ ದೊರೆತ ಕೆಲ ತಿಂಗಳಲ್ಲೇ ದಿಢೀರನೆ ತಮ್ಮ ನೆಚ್ಚಿನ ಬಾಂಬೆಯನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದರು.
ಸಾದತ್ ಅವರ ಈ ಕ್ರಮ ಚಿತ್ರೋದ್ಯಮದ ಬಹುತೇಕ ಮುಸ್ಲಿಂ ದಿಗ್ಗಜರ ಕ್ರಮಕ್ಕಿಂತ ಭಿನ್ನವಾಗಿತ್ತು. ಚಿತ್ರೋದ್ಯಮದ ರಾಜಧಾನಿಯಾಗಿದ್ದ ಲಾಹೋರ್ ಕುಸಿತ ಕಂಡಾಗ, ಡಜನ್‌ಗಟ್ಟಲೆ ಕೆ. ಆಸಿಫ್‌ಗಳು, ಮೆಹಬೂಬ್ ಖಾನರು, ನೌಷಾದ್‌ಗಳು ಮತ್ತು ದಿಲೀಪ್ ಕುಮಾರರು ಭಾರತದಲ್ಲೇ ಉಳಿದು ಬಾಂಬೆಯನ್ನು ಬಲಿಷ್ಠ ಬಾಲಿವುಡ್ ಆಗಿ ಬೆಳೆಸುವಲ್ಲಿ ನೆರವಾದರು. ಅದಕ್ಕೆ ಸಾದತ್ ಹಸನ್ ಮಂಟೋ ಅಪವಾದವಾದದ್ದಾದರೂ ಏಕೆ? ಅದಕ್ಕೆ ಕಾರಣ ಬಹಿರಂಗವಾದಾಗ ವರ್ಷಗಳೇ ಉರುಳಿ ಹೋಗಿದ್ದವು. ದೇಶ ವಿಭಜನೆಯ ಬಳಿಕ 'ಫಿಲ್ಮಿಸ್ತಾನ' ಕಂಪನಿಯಲ್ಲೂ ದ್ವೇಷದ ಕಿಚ್ಚು ಕಾಣಿಸಿಕೊಂಡಿತ್ತಂತೆ. ಸಾದತ್ ಅಲ್ಲಿ ನೌಕರಿಯಲ್ಲಿದ್ದರು. ಕಂಪನಿಯೊಳಕ್ಕೆ ಅವರು ಮುಸ್ಲಿಮರನ್ನೇ ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತು. ಮುಸ್ಲಿಂ ನೌಕರರನ್ನು ಕಿತ್ತುಹಾಕದೇ ಇದ್ದರೆ ಸ್ಟುಡಿಯೋಗೆ ಬೆಂಕಿ ಹಚ್ಚಿ ನಾಶಪಡಿಸಲಾಗುವುದು ಎಂದು ಕೆಲ ಮತಾಂಧರು ಬೆದರಿಕೆ ಹಾಕಿದರು. ಸೂಕ್ಷ್ಮ ಮನಸ್ಸಿನ ಲೇಖಕ, ಕವಿ ಸಾದತ್ ವಿಪರೀತ ನೊಂದುಕೊಂಡರು. ಮದ್ಯದ ದಾಸನಾಗುವ ಮೂಲಕ ಮನಸ್ಸಿಗೆ ನೆಮ್ಮದಿ ಕಂಡುಕೊಂಡರು. 1968ರಲ್ಲಿ ಜೀವನಚರಿತ್ರೆಕಾರರೊಬ್ಬರಿಗೆ ಸಾದತ್ ಅವರ ಪತ್ನಿ ಸಫಿಯಾ ವಿವರಿಸಿದ್ದು ಹೀಗೆ- 'ಅವರಿಗೆ ಭಾರತವನ್ನು ತೊರೆಯುವ ಉದ್ದೇಶ ಖಂಡಿತ ಇರಲಿಲ್ಲ. ಆದರೆ ಫಿಲ್ಮಿಸ್ತಾನ್ ಅವರನ್ನು ಕೆಲಸದಿಂದ ಕಿತ್ತುಹಾಕಿತು. ಅದು ಅವರಿಗೆ ತೀವ್ರ ಆಘಾತ ಉಂಟುಮಾಡಿತ್ತು.' ವಲಸೆಯು ಸಾದತ್ ಅವರ ನೋವನ್ನು ಗುಣಪಡಿಸಲಿಲ್ಲ. ಅವರು ಬರೆಯುತ್ತಲೇ ಇದ್ದರು. ಆದರೆ, ಯಾವುದೂ ಖ್ಯಾತಿಯ ಮಟ್ಟಕ್ಕೆ ಏರಲಿಲ್ಲ. ಕೊನೆಗೆ ಮದ್ಯವೇ ಅವರನ್ನು ಬಲಿ ತೆಗೆದುಕೊಂಡಿತು. 43 ತಲುಪುವ ಮೊದಲೇ ಕೊನೆಯುಸಿರೆಳೆದರು.
ಐನ್‌ಸ್ಟೀನ್‌ರಂಥ ವಿಜ್ಞಾನಿಗಳು ಪ್ರಯೋಗಾಲಯ ಲಭ್ಯವಿರುವವರೆಗೂ ಕಾರ್ಯ ನಿರ್ವಹಿಸುತ್ತಲೇ ಇರಬಲ್ಲರು. ಮಾರ್ಕ್ಸ್ ಅವರು ಬ್ರಿಟಿಷ್ ಲೈಬ್ರರಿಯಲ್ಲಿ ಕುಳಿತುಕೊಂಡೇ ಅತ್ಯುತ್ತಮ ಕೃತಿಗಳನ್ನು ರಚಿಸಿದರು. ಆದರೆ, ಚಲನಚಿತ್ರ ಕಲಾವಿದರು ಮತ್ತು ಚಿತ್ರ ನಿರ್ಮಾಪಕರಿಗೆ ಏಕಾಂಗಿಯಾಗಿ ಕುಳಿತು ಕಾರ್ಯ ನಿರ್ವಹಿಸಲು ಸಾಧ್ಯವೇ? ಅವರಿಗೆ ತಮ್ಮ ಪ್ರೇಕ್ಷಕರ ಜತೆ ಸಂವಾದ ನಡೆಸುವ ಅವಕಾಶ ಬೇಕಾಗುತ್ತದೆ. ಚಿತ್ರರಸಿಕರ ಜತೆಗಿನ ಸಂಪರ್ಕ ಮುರಿದುಹೋಯಿತೆಂದರೆ, ಅವರು ಸ್ಫೂರ್ತಿಯನ್ನೇ ಕಳೆದುಕೊಳ್ಳುತ್ತಾರೆ. ಕೊಯಮತ್ತೂರು ಅಥವಾ ಬೆಂಗಳೂರಿನಲ್ಲಿ ಸಹಜವಾಗಿ ದೊರೆಯುವ ಇಂಥ ಸಂಪರ್ಕವನ್ನು ಕಮಲಹಾಸನ್ ಅವರು ಲಾಸ್ ಏಂಜಲಿಸ್ ಅಥವಾ ಲಂಡನ್‌ನಲ್ಲಿ ಕಂಡುಕೊಳ್ಳಲು ಸಾಧ್ಯವೇ? ತಮ್ಮ ಪ್ರೇಕ್ಷಕರು ಎಲ್ಲಿ ಇರುವರೋ ಅಲ್ಲೇ ಅವರ ಕಲೆಗೆ ಸ್ಥಾನ. ಇತರ ಎಲ್ಲ ಸೃಜನಶೀಲ ವ್ಯಕ್ತಿಗಳಂತೆ, ಅವರೂ ಹೋರಾಟ ನಡೆಸಲೇಬೇಕಾಗುತ್ತದೆ. ಆದರೆ ವಿದೇಶದಲ್ಲಲ್ಲ, ದೇಶದಲ್ಲಿದ್ದುಕೊಂಡೇ ಹೋರಾಟ ನಡೆಸಬೇಕಾಗುತ್ತದೆ. ದೇಶವನ್ನು ಬದಲಾಯಿಸಲು ನಮಗೆ ಖಂಡಿತ ಸಾಧ್ಯವಿಲ್ಲ.