ವಾರದ ಹಿಂದೆ ಶಾಪಿಂಗ್ಗೆಂದು ಬಿಗ್ಬಜಾರ್ಗೆ ಹೋದಾಗ ಉಸಿರುಗಟ್ಟಿದ ಅನುಭವವಾಗಿತ್ತು. ಕಾಲಿಡಲೂ ಜಾಗವಿಲ್ಲ ಎಂಬಷ್ಟು ರಶ್ ಇತ್ತು. ಆ ನೂಕುನುಗ್ಗಲು, ಹಲವರ ಮೈ ಬೆವರಿನ ಕೊಳಕು ವಾಸನೆ, ಮೈ ಉಜ್ಜಿಕೊಂಡೇ ಹೋಗುವ ಕಿಡಿಗೇಡಿಗಳ ಕಿತಾಪತಿ ಕಂಡು ತಲೆ ಚಿಟ್ಟು ಹಿಡಿಯಿತು. ಶಾಪಿಂಗ್ ಮಾಡುವುದೇ ಬೇಡ ಎಂದುಕೊಂಡು ಹೋದಷ್ಟೇ ವೇಗದಲ್ಲಿ ವಾಪಸ್ ಬಂದು ಬಿಟ್ಟೆ. ಮೊನ್ನೆ ಮಧ್ಯಾಹ್ನ, ಮತ್ತೆ ಅದೇ ದಾರಿಯಲ್ಲಿ ಬರುತ್ತಿರುವಾಗ ಬಿಗ್ಬಜಾರ್ ಖಾಲಿ ಖಾಲಿ ಎಂಬಂತೆ ಭಾಸವಾಯಿತು. ಕುತೂಹಲದಿಂದ ಒಳಹೊಕ್ಕರೆ- ಗ್ರಾಹಕರು ಬೆರಳೆಣಿಕೆಯಷ್ಟಿದ್ದರು.ಟೈಂ ಇದೆ. ಶಾಪಿಂಗ್ ಮುಗಿಸೋಣ ಎಂಬ ನಿರ್ಧಾರದೊಂದಿಗೆ ತಳ್ಳುಗಾಡಿಯೊಂದಿಗೆ ಮೊದಲನೇ ಮಹಡಿಯತ್ತ ಹೆಜ್ಜೆ ಹಾಕಿದೆ.
ಆಗಲೇ ಆ ಪುಟಾಣಿ ಕಣ್ಣಿಗೆ ಬಿದ್ದ. ಆತ ಹೆಚ್ಚೆಂದರೆ ಆರು ವರ್ಷದವನು. ಮುದ್ದು ಮುದ್ದಾಗಿದ್ದ ಅವನು ಮಿಕ್ಕಿಮೌಸ್ನಂಥ ಗೊಂಬೆಯೊಂದನ್ನು ಹಿಡಿದುಕೊಂಡು, ಕ್ಯಾಶ್ ಕೌಂಟರ್ಗೆ ಬಂದು ಹಣಕೊಟ್ಟ. ಅದನ್ನು ಎಣಿಸಿದ ಕೌಂಟರ್ಬಾಯ್-'ಈ ಗೊಂಬೆಗೆ ಆಗುವಷ್ಟು ದುಡ್ಡು ಇಲ್ಲಿಲ್ಲ. ಜೊತೆಗೆ ಯಾರೂ ಬಂದಿಲ್ವಾ?' ಎಂದು ಕೇಳಿದ. ಕ್ಯಾಶಿಯರ್ನ ಉತ್ತರದಿಂದ ಆ ಹುಡುಗನಿಗೆ ಸಮಾಧಾನವಾಗಲಿಲ್ಲ. ಆತ ಸೀದಾ ನನ್ನ ಬಳಿ ಬಂದವನೇ-'ಅಕ್ಕಾ, ನನ್ನಲ್ಲಿರೋ ಕಾಸು ಕಡಿಮೆಯಂತೆ. ಒಮ್ಮೆ ಲೆಕ್ಕ ಹಾಕಿ ನೋಡಿ' ಅಂದ. ಗೊಂಬೆ, ಆಗಲೂ ಅವನ ಬಳಿಯೇ ಇತ್ತು. ನನಗೂ ಕುತೂಹಲ. ತಕ್ಷಣವೇ ಎಣಿಸಿದೆ. ಕಡಿಮೆಯಿತ್ತು. ಹಾಗಂತ ಅವನಿಗೆ ತಿಳಿಸದೆ, ಮತ್ತೆ ಎಣಿಸುವವಳಂತೆ ನಟಿಸುತ್ತಾ-'ಈ ಗೊಂಬೇನ ಯಾರಿಗೆ ಕೊಡ್ತೀಯ ಚಿನ್ನೂ' ಎಂದೆ. 'ತಂಗಿಗೆ ಇದನ್ನು ಬರ್ತ್ಡೇ ಗಿಫ್ಟ್ ಅಂತ ಕೊಡ್ತಾ ಇದೀನಿ ಅಕ್ಕಾ. ಏನ್ ಗೊತ್ತಾ, ನನ್ ತಂಗಿ ದೇವರ ಹತ್ರ ಇದ್ದಾಳೆ. ಮುಂದಿನ ವಾರವೇ ಅವಳ ಬರ್ತ್ಡೇ. ಅಷ್ಟರೊಳಗೆ ಅಮ್ಮ ಕೂಡ ದೇವರ ಹತ್ರ ಹೋಗಿಬಿಡ್ತಾರಂತೆ. ಅಮ್ಮನ ಮೂಲಕ ತಂಗೀಗೆ ಈ ಗಿಫ್ಟ್ ಕೊಟ್ಟು ಕಳಿಸಬೇಕು ಅಂತ ನನ್ನಾಸೆ. ಈಗ ಡಾಲ್ ತಗೊಳ್ದೇ ಹೋದ್ರೆ ಏನ್ಮಾಡೋದು?' ಎಂದು ಮುದ್ದುಮುದ್ದಾಗಿ ಪ್ರಶ್ನೆ ಹಾಕಿದ. ಅವನ ಮಾತು ಕೇಳಿ ಶಾಕ್ ಆಯಿತು. ಈ ಹುಡುಗ ಹೇಳುತ್ತಿರುವ ಮಾತುಗಳಲ್ಲಿ ಏನೋ ವಿಶೇಷ ಅರ್ಥವಿದೆ ಅನ್ನಿಸಿತು. ಇದೇನನ್ನೂ ಗಮನಿಸದೆ ಜೇಬಿನಿಂದ ಒಂದು ೆಪೋಸ್ಟ್ ಕಾರ್ಡ್ ಸೈಜ್ನ ತನ್ನದೇ ಫೋಟೋ ತೋರಿಸುತ್ತಾ ಹೇಳಿದ. ಈ ಫೋಟೋ ತೋರಿಸಿ ತಂಗಿಗೆ ನೆನಪು ಹೇಳಮ್ಮಾ. ಅವಳಿಗೆ ಒಂದು ಡಾಲ್ ತಗೊಂಡು ಬರ್ತೀನಿ. ಅಲ್ಲಿ ತನಕ ಹೋಗಬೇಡ ಎಂದು ಹೇಳಿ, ಅಪ್ಪನಿಗೆ ಗೊತ್ತಾಗದಂತೆ ಇಲ್ಲಿಗೆ ಬಂದಿದೀನಿ. ನನಗಂತೂ ಮಮ್ಮೀನ ಬಿಟ್ಟು ಇರೋಕೆ ಸಾಧ್ಯವೇ ಇಲ್ಲ. ಆದ್ರೆ ಮೊನ್ನೆ ರಾತ್ರೀನೆ ಡ್ಯಾಡಿ ಹೇಳ್ತಾ ಇದ್ರು: 'ತಂಗಿ ಇರುವ ಜಾಗಕ್ಕೆ ಅಮ್ಮನೂ ಹೋಗಿಬಿಡ್ತಾಳೆ. ಅಂತ. ನಾನು ಬೇಗ ಗೊಂಬೆ ತಗೊಂಡು ಅಮ್ಮನ ಬಳಿ ಹೋಗಬೇಕು.. ಏನು ಮಾಡ್ಲಿ?' ಹುಡುಗನ ಮುದ್ದು ಮಾತು ಕರುಳು ತಾಕುವಂತಿದ್ದವು. 'ಒಂದು ನಿಮಿಷ ಇರು. ಮತ್ತೆ ದುಡ್ಡು ಎಣಿಸ್ತೇನೆ. ನಾನು ಎಣಿಸುವಾಗಲೇ ತಪ್ಪಾಗಿತ್ತೋ ಏನೋ ಎಂದೆ. ನಂತರ ಹಣ ಎಣಿಸುವಾಗ ಅವನಿಗೆ ಗೊತ್ತಾಗದಂತೆ ನನ್ನಲ್ಲಿದ್ದ ಒಂದಷ್ಟು ದುಡ್ಡು ಸೇರಿಸಿಬಿಟ್ಟೆ. ಗೊಂಬೆ ಖರೀದಿಗೆ ಬೇಕಿತ್ತಲ್ಲ; ಅದಕ್ಕಿಂತ ಹೆಚ್ಚು ಮೊತ್ತದ ಹಣ ಲೆಕ್ಕಕ್ಕೆ ಸಿಕ್ಕಿತ್ತು. ಈ ಹೊಸ ಲೆಕ್ಕವನ್ನು ಅವನಿಗೆ ಅರ್ಥವಾಗುವಂತೆ ತೋರಿಸಿಕೊಟ್ಟೆ. ಅದನ್ನು ಕಂಡು ಆ ಪುಟ್ಟ ಹುಡುಗ ನಿಂತಲ್ಲೇ ಕುಣಿದಾಡಿದ. ನಂತರ- 'ಅಕ್ಕಾ, ಗೊಂಬೆ ತಗೊಳ್ಳೋಕೆ ಸಾಕಾಗುವಷ್ಟು ದುಡ್ಡು ಗೋಲಕದಲ್ಲಿ ಇರುವಂತೆ ಮಾಡಪ್ಪಾ ದೇವ್ರೇ' ಎಂದು ರಾತ್ರಿ ಮಲಗುವ ಮುಂಚೆ ಪ್ರಾರ್ಥಿಸಿದ್ದೆ. ದೇವರು ನನ್ನ ಪ್ರಾರ್ಥನೆಯನ್ನು ಕೇಳಿಸ್ಕೊಂಡಿದಾನೆ. ಉಳಿಯುವ ಹಣದಲ್ಲಿ ಗುಲಾಬಿ ಹೂಗಳನ್ನು ತಗೊಂಡು ಹೋಗ್ತೇನೆ. ಗುಲಾಬಿ ಕಂಡ್ರೆ ಅಮ್ಮ ಅದೆಷ್ಟು ಖುಷಿ ಪಡ್ತಾಳೆ ಗೊತ್ತಾ?' ಇಷ್ಟೆಲ್ಲಾ ಮಾತಾಡಿ ಆತ, ಮೆಲ್ಲಗೆ ಕೈ ಹಿಡಿದು ಥ್ಯಾಂಕ್ಸ್ ಎಂದಿದ್ದ.
ಶಾಪಿಂಗ್ ಮುಗಿಸಿ ಮನೆಗೆ ಬಂದೆ. ಏನೋ ಅನುಮಾನ. ಯಾಕೋ ತಳಮಳ ಅನ್ನಿಸಲು ಶುರುವಾಯಿತು. ಸರಸರನೆ ದಿನಪತ್ರಿಕೆ ತಿರುವಿ ಹಾಕಿದೆ. ಅಲ್ಲಿ ಒಂದು ಸುದ್ದಿ ನನ್ನ ಗಮನ ಸೆಳೆಯಿತು: 'ಕುಡುಕನೊಬ್ಬ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿ, ಬಸ್ಗಾಗಿ ಕಾದು ನಿಂತಿದ್ದ ತಾಯಿ-ಮಗಳಿಗೆ ಡಿಕ್ಕಿ ಹೊಡೆಸಿದ್ದಾನೆ. ಮಗು ಸ್ಥಳದಲ್ಲೇ ಮೃತಪಟ್ಟಿದೆ. ಗಂಭೀರವಾಗಿ ಗಾಯಗೊಂಡಿರುವ ತಾಯಿಯನ್ನು ನಗರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಇಡಲಾಗಿದೆ'- ಎಂಬುದು ಸುದ್ದಿಯ ಸಾರಾಂಶ. ಆಕ್ಸಿಡೆಂಟ್ಗೆ ತುತ್ತಾಗಿರುವ ಅಮ್ಮ-ಮಗಳಿಗೂ, ಇವತ್ತು ಗೊಂಬೆ ಖರೀದಿಸಲು ಬಂದಿದ್ದ ಹುಡುಗನಿಗೂ ಸಂಬಂಧವಿಲ್ಲ ತಾನೆ ಎಂಬ ಅನುಮಾನ ಮತ್ತೆಮತ್ತೆ ಕಾಡಲು ಸುರುವಾಯಿತು. ದೇವರೇ, ಈ ಸಂದರ್ಭದಲ್ಲಿ ನನ್ನ ನಿರೀಕ್ಷೆ ಸುಳ್ಳಾಗಲಿ ಎಂದು ಪ್ರಾರ್ಥಿಸಿದೆ. ಆನಂತರದ ದಿನಗಳಲ್ಲಿ, ಅವನ ಮುದ್ದುಮಾತು, ತಂಗಿ ಇರುವ ಜಾಗಕ್ಕೇ ಅಮ್ಮನೂ ಹೋಗಿ ಬಿಡ್ತಾಳಂತೆ ಎಂದಾಗ ಅವನ ಕಣ್ಣಲ್ಲಿದ್ದ ಸಂಕಟ... ಇದೆಲ್ಲಾ ಮತ್ತೆ ಮತ್ತೆ ನೆನಪಾಗತೊಡಗಿತು. ಹೀಗಿರುವಾಗಲೇ ಮರುದಿನದ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು: 'ಎರಡು ದಿನಗಳ ಹಿಂದೆ ಕುಡುಕ ಚಾಲಕನ ಕಾರ್ಗೆ ಸಿಕ್ಕಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಕಳೆದ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಂದುಅಂತ್ಯಸಂಸ್ಕಾರ ನಡೆಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ...' ಈ ಸುದ್ದಿ ಓದಿದ ಮೇಲೆ ಮನಸ್ಸು ತಡೆಯಲಿಲ್ಲ. ಅವಸರದಲ್ಲೇ ಸಿದ್ಧಳಾಗಿ ಹೂಹಾರದೊಂದಿಗೆ ಬನಶಂಕರಿಯ ರುದ್ರಭೂಮಿಗೆ ಹೋದೆ. ಅಲ್ಲಿ ನನ್ನ ಪಾಲಿಗೆ ಅಪರಿಚಿತೆಯಾಗಿದ್ದ ಆಕೆ ಮಲಗಿದ್ದಳು. ಆಕೆಯ ಎದೆಯ ಬದಿಯಲ್ಲಿ ಬೊಂಬೆಯಿತ್ತು. ಅದರ ಪಕ್ಕದಲ್ಲೇ ಒಂದು ಗುಲಾಬಿ ಹೂವಿತ್ತು. ನನ್ನ ಕಣ್ಣುಗಳು ಆ ಮುದ್ದು ಹುಡುಗನನ್ನು ಹುಡುಕುತ್ತಿದ್ದವು. ಎರಡೇ ನಿಮಿಷದಲ್ಲಿ ಹಿರಿಯರೊಬ್ಬರ ಕೈ ಬಿಡಿಸಿಕೊಂಡು, 'ಅಕ್ಕಾ' ಎಂದ ಆತ ಮುಂದೇನೂ ಮಾತಾಡದೆ, ಹೂಗಳ ಮಧ್ಯೆ ಮಾತಿಲ್ಲದೆ ಮಲಗಿದ್ದ ಅಮ್ಮನತ್ತ ಕೈ ಮಾಡಿದ.
----------
ಇದು ಇಂಟರ್ನೆಟ್ನಲ್ಲಿ ಕಾಣಿಸಿದ ಬರಹ. ಇದನ್ನು ಓದಿ ವಾರ ಕಳೆದಿದೆ ನಿಜ. ಆದರೂ ಈ ಕತೆ ನೆನಪಾದಾಗಲೆಲ್ಲ ಮನಸ್ಸು ಖಿನ್ನವಾಗುತ್ತದೆ. ದನಿ ಭಾರವಾಗುತ್ತದೆ. ಕೆನ್ನೆ ತೇವವಾಗುತ್ತದೆ, ನಿಮಗೆ?
- ನಾನು ಪ್ರಣತಿ