ನಮ್ಮ ಸಂವೇದನೆಯ ವೈಕಲ್ಯ ಸರಿಹೋಗುವುದು ಯಾವಾಗ?

'ಮೂರನೇ ಕಿವಿ' ಎಂಬ ಪುಸ್ತಕದ ಮೂಲಕ ಶ್ರವಣ ದೋಷದ ಮಕ್ಕಳಿಗೆ ಮಾತು...
Updated on: 

'ಮೂರನೇ ಕಿವಿ' ಎಂಬ ಪುಸ್ತಕದ ಮೂಲಕ ಶ್ರವಣ ದೋಷದ ಮಕ್ಕಳಿಗೆ ಮಾತು ಕಲಿಸುವ ಸವಾಲುಗಳನ್ನು ತೆರೆದಿಟ್ಟಿದ್ದ ಪತ್ರಕರ್ತ ರವೀಂದ್ರ ಭಟ್ ಅವರ ಹೊಸಕೃತಿ 'ಅಕ್ಷಯನೇತ್ರ'. ಕಣ್ಣಿಲ್ಲದವರ ಜಗತ್ತು ಹಾಗೂ ಅವರನ್ನು ನೋಡಿಕೊಳ್ಳಬೇಕಾಗ ಪ್ರಪಂಚಕ್ಕಿರುವ ಮನಸ್ಸು ಇವನ್ನು ಅಂಧ ವ್ಯಕ್ತಿಯೊಬ್ಬರ ಅನುಭವಗಾಥೆ ಮೂಲಕ ಕಟ್ಟಿಕೊಟ್ಟಿದ್ದಾರೆ. ಹುಟ್ಟಿನಿಂದಲೇ ದೃಷ್ಟಿದೋಷವುಳ್ಳ ವೇಣುಗೋಪಾಲ್ ಅವರು ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಬೇರೆಯವರ ಹತ್ತಿರ ಓದಿಸಿಕೊಂಡು, ಪಠ್ಯ ರೆಕಾರ್ಡ್ ಮಾಡಿಕೊಂಡು ಹಲವು ಪದವಿಗಳನ್ನು ಗಳಿಸಿ ಪ್ರೊಫೆಸರ್ ಆದ ಕತೆ. ಕಾನೂನು ಪ್ರಾಧ್ಯಾಪಕರಾಗಿ ಶಿಷ್ಯರನ್ನು ಬೆಳೆಸಿದ, 70ಕ್ಕೂ ಹೆಚ್ಚು ನಾಟಕಗಳನ್ನು, ಹಲವು ಹಾಡುಗಳನ್ನು ಬರೆದ, ರಂಗ ನಿರ್ದೇಶಿಸಿದ ಬೆಳಕೊಂದರ ಕತೆ. ಪುಸ್ತಕ ಖುಷಿಗಿಂತ ವಿಷಾದವನ್ನು, ನಿರಾಳತೆಗಿಂತ ಪ್ರಶ್ನೆಗಳ ಅಲೆಯನ್ನು ಹೆಚ್ಚಾಗಿ ಎಬ್ಬಿಸಿತು. ವಿವರಣೆಗೆ ಮೊದಲು ಪುಸ್ತಕದಲ್ಲಿ ದಾಖಲಾಗಿರುವ ಪ್ರೊ. ಎಂ. ಎಸ್. ವೇಣುಗೋಪಾಲ್‌ರ ಕೆಲ ಧ್ವನಿಗಳನ್ನು ಆಯ್ದುಕೊಳ್ಳೋಣ.
----------
ನಾನು ಚಿಕ್ಕವನಾಗಿದ್ದಾಗ ನನಗೆ ಕಣ್ಣು ಕಾಣಿಸುವುದಿಲ್ಲ ಎಂಬ ಅರಿವೇ ಇರಲಿಲ್ಲ. ನಮ್ಮ ಮನೆಯ ಬಳಿ ನಡೆಯುತ್ತಿದ್ದ ನಾಟಕಗಳನ್ನು ನೋಡಲು ಹೋಗುತ್ತಿದ್ದೆ. ಆಗಿನ ಕಾಲದಲ್ಲಿ ರಾತ್ರಿಯೆಲ್ಲಾ ನಾಟಕವಾಡುತ್ತಿದ್ದರು. ಹೆಚ್ಚಾಗಿ ಶನಿ ಮಹಾತ್ಮೆ, ರಾಮಾಯಣ, ಮಹಾಭಾರತದ ನಾಟಕಗಳೇ ಇರುತ್ತಿದ್ದವು. ಅಂತಹ ಬಯಲು ನಾಟಕವನ್ನು ನೋಡುವುದು ನನಗೆ ಹುಚ್ಚು. ರಂಗಭೂಮಿಯ ಮೇಲಿನ ಯಾವುದೇ ಚಟುವಟಿಕೆಗಳು ನನಗೆ ಕಾಣುತ್ತಿರಲಿಲ್ಲ. ಶಬ್ದಗಳು ಕೇಳುತ್ತಿದ್ದವು. ಹಾಗೇ ಕೇಳುತ್ತಲೇ ನಿದ್ದೆ ಹೋಗುತ್ತಿದ್ದೆ. ನಾಟಕ ನೋಡಲು ಎಲ್ಲಿ ಕುಳಿತುಕೊಳ್ಳಬೇಕು ಎನ್ನುವುದೂ ನನಗೆ ಗೊತ್ತಾಗುತ್ತಿರಲಿಲ್ಲ. ಚರಂಡಿ ಬದಿಯಲ್ಲಿಯೇ ಕುಳಿತಿರುತ್ತಿದ್ದೆ. ರಸ್ತೆ ಬದಿಯಲ್ಲಿಯೇ ಮಲಗಿ ಬಿಡುತ್ತಿದ್ದೆ. ಬೆಳಿಗ್ಗೆ 8 ಗಂಟೆಯಾದರೂ ಏಳುತ್ತಿರಲಿಲ್ಲ.
----------
ದೃಷ್ಟಿ ಇಲ್ಲದ ಜನ ಯಾವಾಗಲೂ ಹೆಜ್ಜೆಯನ್ನೇ ಅವಲಂಬಿಸಿರುತ್ತಾರೆ. ಪ್ರತಿ ಹೆಜ್ಜೆ ಇಡುವಾಗಲೂ ಎಚ್ಚರಿಕೆಯಿಂದಲೇ ಇಡುತ್ತಾರೆ. ಆದರೂ ಹೆಜ್ಜೆ ತಪ್ಪುವುದು ಸಾಮಾನ್ಯ. ತಾಯಿಯ ಮುಖವನ್ನೇ ನೋಡದ, ತಂದೆಯನ್ನೇ ಗುರುತಿಸಲಾಗದ, ಮಲಮೂತ್ರ ವಿಸರ್ಜನೆಯಂತಹ ಅತ್ಯಂತ ನೈಸರ್ಗಿಕ ಕ್ರಿಯೆಗೂ ಇನ್ನೊಬ್ಬರನ್ನು ಅವಲಂಬಿಸಬೇಕಾದ ಅನಿವಾರ್ಯತೆ. ಕಣ್ಣು ಕಾಣದೇ ಇರುವುದರಿಂದ ಸ್ಪರ್ಶ ಜ್ಞಾನವನ್ನೇ ಅವಲಂಬಿಸುವುದು ಅಗತ್ಯ. ಆದರೆ ಸ್ಪರ್ಶ ಎಂದೂ ಸಂತಸವನ್ನು ತಂದಿಲ್ಲ.
ಒಮ್ಮೆ ನಾನು ಮನೆಯಲ್ಲಿ ಮಲಗಲೆಂದು ಹಾಸಿಗೆಯನ್ನು ಮುಟ್ಟಿ ನೋಡಿದೆ. ಏನೋ ಮೆತ್ತಗೆ ಇರುವುದು ಗೊತ್ತಾಯಿತು. ಏನೆಂದು ನೋಡಿದರೆ ನನ್ನ ತಂಗಿ ಅಲ್ಲಿ ಮಲಗಿದ್ದಳು. ತಂಗಿ ಏನೂ ತಿಳಿದುಕೊಳ್ಳಲಿಲ್ಲ. ಆದರೆ ನನಗೆ ಆದ ಮಾನಸಿಕ ಆಘಾತ ಏನೆಂದು ಬಣ್ಣಿಸಲಿ. ಹೀಗೆ ಬಸ್ಸಿನಲ್ಲಿ, ರೈಲಿನಲ್ಲಿ ಹೋಗುವಾಗ ಸ್ಪರ್ಶದಿಂದ ತಿಂದ ಹೊಡೆತಗಳು ನನ್ನ ದೇಹದ ಮೇಲೆ ಮಾಡುವ ಗಾಯಕ್ಕಿಂತ ಮನಸ್ಸಿನ ಮೇಲೆ ಮಾಡಿದ ಗಾಯಗಳೇ ಹೆಚ್ಚು.
----------
ಶಾಲೆಯಲ್ಲಿ ನನ್ನನ್ನು ಅರ್ಥ ಮಾಡಿಕೊಂಡವರು ಇರಲೇ ಇಲ್ಲ. ಮೇಷ್ಟ್ರಿಗೂ ಕೂಡ ನನ್ನ ಸಮಸ್ಯೆ ಅರ್ಥವಾಗುತ್ತಿರಲಿಲ್ಲ. ಗಣಿತ ಹೇಳಿಕೊಡಲು ಒಬ್ಬ ಮೇಷ್ಟ್ರು ಬರುತ್ತಿದ್ದರು. ಎಲ್ಲವನ್ನೂ ಬೋರ್ಡ್ ಮೇಲೆ ಬರೆದು ಕಲಿಸುತ್ತಿದ್ದರು. ಬೋರ್ಡ್‌ನಲ್ಲಿ ಬರೆದಿದ್ದು ನನಗೆ ಏನೂ ಕಾಣಿಸುತ್ತಿರಲಿಲ್ಲ ಎಂದು ಹೇಳಿದರೆ "ಎಷ್ಟು ಕಾಣಿಸುತ್ತದೋ ಅಷ್ಟು ಬರಿ" ಎನ್ನುತ್ತಿದ್ದರು. ಒಮ್ಮೆ ಹೀಗೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಏನು ಬರೆದಿದೆ ಎನ್ನುವುದು ಗೊತ್ತಾಗಲಿಲ್ಲ. ಪಕ್ಕದಲ್ಲಿ ಕುಳಿತಿದ್ದ ಹುಡುಗನಿಗೆ ಪ್ರಶ್ನೆ ಓದಿ ಹೇಳಲು ಕೇಳಿದೆ. ಆತ ಓದಿ ಹೇಳಿದ. ಇದನ್ನು ನೋಡಿದ ಮೇಷ್ಟ್ರು"ಕಾಪಿ ಹೊಡೀತಿಯೇನೋ ಮಗನೆ" ಎಂದು ನನಗೆ ಬಾರಿಸಿದರು. ನನ್ನ ಸಮಸ್ಯೆ ಅವರಿಗೆ ಅರ್ಥವಾಗುತ್ತಿರಲಿಲ್ಲ. ನನ್ನದಲ್ಲದ ತಪ್ಪಿಗೆ ಹೊಡೆತ ತಿಂದಿದ್ದೆ. ಬೆಳಕಿಲ್ಲದ ಕಣ್ಣಲ್ಲಿ ನೀರು ಮಾತ್ರ ಬರುತ್ತಿತ್ತು.
----------
ಒಮ್ಮೆ ನಾನು ಹೆಣ್ಣು ಮಕ್ಕಳ ಶಾಲೆಯಲ್ಲಿ ಪಾಠ ಮಾಡುತ್ತಿದ್ದೆ. ಹುಡುಗಿಯೊಬ್ಬಳಿಗೆ ಫಿಟ್ಸ್ ಬಂದು ಬಿದ್ದು ಬಿಟ್ಟಳು. ನನಗೆ ಏನು ಮಾಡಬೇಕೋ ತಿಳಿಯಲಿಲ್ಲ. ಆಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಬಂದಿದ್ದನ್ನು ನೋಡಿದ ಒಬ್ಬ ಶಿಕ್ಷಕಿ "ನಿಮಗೆ ನಾಚಿಕೆಯಾಗಲ್ವ. ಹೆಣ್ಣು ಮಗಳೊಬ್ಬಳನ್ನು ಮೈಮುಟ್ಟಿ ಎತ್ತಿಕೊಂಡು ಬಂದಿದ್ದೀರಲ್ಲ" ಎಂದು ದಬಾಯಿಸಿದಳು. ನನಗೆ ಆಕೆಯೊಬ್ಬಳು ವಿದ್ಯಾರ್ಥಿಯಾಗಿದ್ದಳು ಅಷ್ಟೇ. ಅಲ್ಲಿ ಹುಡುಗಿ, ಹುಡುಗ ಎನ್ನುವ ಭೇದ ಇರಲಿಲ್ಲ. ಶಿಕ್ಷಕನಾಗಿ ನಾನು ನನ್ನ ಕೆಲಸವನ್ನು ಮಾಡಿದ್ದೆ. ನನಗೆ ಕಣ್ಣು ಕಾಣದೇ ಇರುವುದರಿಂದ ಹೆಣ್ಣನ್ನು ನೋಡುವ ಸಾಧ್ಯತೆಯೂ ಇರಲಿಲ್ಲ. ಆದರೆ ಜಗತ್ತು ಮಾತ್ರ ಎಲ್ಲರಂತೆಯೇ ನನ್ನನ್ನು ನೋಡುತ್ತಿತ್ತು. ನನ್ನ ತೊಂದರೆಯನ್ನು ಅದು ಗಮನಿಸುತ್ತಲೇ ಇರಲಿಲ್ಲ.
----------
ಒಮ್ಮೆ ಗಣೇಶೋತ್ಸವ ಕಾರ್ಯಕ್ರಮಕ್ಕೆ ಕರೆದಿದ್ದರು. ನಾನು ಹೋದೆ. ಕಾಳಿದಾಸನ ಶಾಕುಂತಲೆ ಬಗ್ಗೆ ಮಾತನಾಡಿ ಎಂದರು. ನಾನು ಮಾತನಾಡುತ್ತಲೇ ಇದ್ದೆ. ಕೇಳಲು ಎಷ್ಟು ಜನ ಇದ್ದಾರೆ ಎನ್ನುವುದು ನನಗೆ ಗೊತ್ತಿರಲಿಲ್ಲ. ನನ್ನ ಪಾಡಿಗೆ ನಾನು ಭಾಷಣ ಮಾಡುತ್ತಿದ್ದೆ. ಸುಮಾರು ಹೊತ್ತಾದ ನಂತರ ಒಬ್ಬ ಬಂದು 'ಬೇಗ ಬೇಗ ಮುಗಿಸಿ ಸಾರ್. ದೊಡ್ಡ ದೊಡ್ಡ ಜನ ಎಲ್ಲಾ ಬಂದಿದ್ದಾರೆ. ಇನ್ನು ಕಾರ್ಯಕ್ರಮ ಆರಂಭಿಸೋಣ' ಎಂದ. ಈಗ ಬಂದವರು ದೊಡ್ಡ ದೊಡ್ಡ ಜನ ಆದರೆ ನಾನು?
----------
ಇವಿಷ್ಟೂ ಪುಸ್ತಕದಿಂದ ಆಯ್ದ ಭಾಗಗಳು. ಇವನ್ನೆಲ್ಲ ಓದುತ್ತ ಮನಸ್ಸು ಭಾರವಾದರೆ, ಇವೆಲ್ಲದರ ನಡುವೆಯೂ ತಮ್ಮ ಅಸ್ತಿತ್ವವನ್ನು ಜಗತ್ತಿಗೆ ಸಾರಿ ಹೇಳಿದ ವೇಣುಗೋಪಾಲರ ಬಗ್ಗೆ ಹೆಮ್ಮೆಯೆನಿಸಿದರೆ ಅದು ಸಹಜ. ಆದರೆ ಇಂಥ ಪುಸ್ತಕಗಳು, ವೈಕಲ್ಯವನ್ನು ಎದುರಿಸಿದ ಯಶೋಗಾಥೆಗಳು ಮನಸ್ಸಲ್ಲಿ ಮೆಚ್ಚುಗೆ- ಸಹಾನುಭೂತಿಗಳನ್ನಷ್ಟೇ ಹುಟ್ಟು ಹಾಕಿದರೆ ಸಾಲದು. ಕೈಯಿಲ್ಲದವಳು ವಿಮಾನ ಓಡಿಸಿದ ಸುದ್ದಿ, ಕಣ್ಣಿಲ್ಲದವ ವೈದ್ಯನಾದ ವಿದ್ಯಮಾನ ಇವೆಲ್ಲ ಜಗತ್ತಿನ ಯಾವುದೋ ಮೂಲೆಗಳಿಂದ ವರದಿಯಾದಾಗ ಭೇಷ್ ಎನ್ನುತ್ತೇವೆ. 'ಅಂಗವೈಕಲ್ಯ ಇದ್ದವರೇ ಇಷ್ಟು ಸಾಧನೆ ಮಾಡುತ್ತಾರೆ ಎಂದ ಮೇಲೆ ಎಲ್ಲ ಸರಿಯಾಗಿರುವ ನಾವು ಎಂಥದೆಲ್ಲ ಯಶಸ್ಸಿನ ಏಣಿ ಹತ್ತಬಹುದು' ಎಂಬ ಸ್ಫೂರ್ತಿಯ ಮಿಂಚಿಗೆ ಮೈಯೊಡ್ಡಿ ಪುಳಕಿತರಾಗುತ್ತೇವೆ. ಹೀಗೆ ಮಾಡುವುದು ತಪ್ಪೇನಲ್ಲ. ಆದರೆ ಈ ಬೆರಗಿನ ನಡುವೆ ನಮಗೆ ನಾವೇ ಕೇಳಿಕೊಳ್ಳಬೇಕಾದ ಮುಖ್ಯ ಪ್ರಶ್ನೆಯೊಂದು ಸ್ಫುರಿಸುವುದೇ ಇಲ್ಲ!
ಹೀಗೆ ಸಾಧನಾಪಥ ನಿರ್ಮಿಸಿದ ವಿಕಲಾಂಗರು ಬೆಳವಣಿಗೆ ಹಂತದಲ್ಲಿ, ಶಿಕ್ಷಣ ಪಡೆಯುವಾಗ, ಉದ್ಯೋಗ ಗಳಿಸಿಕೊಳ್ಳುವ ಸಂದರ್ಭದಲ್ಲಿ ಕಡುನೋವಿನ ಹಾದಿ ತುಳಿದಿರುವುದು ನಮ್ಮ ಗಮನಕ್ಕೆ ಬಂದಿದೆಯಲ್ಲ? ಹಾಗಾದರೆ ಆ ಹಾದಿಯ ಮುಳ್ಳುಗಳನ್ನು ಸರಿಸಿಡುವುದರಲ್ಲಿ ನಮ್ಮ ಪ್ರಯತ್ನ ಏನಿದೆ? ವಿಕಲಾಂಗ ಮಗುವೊಂದು ಸಹಜ ಮಕ್ಕಳ ಗುಂಪಿಗೆ ಸೇರಿ ಆಟವಾಡುವುದಕ್ಕೆ ಹೋದರೆ ಇವತ್ತಿಗೂ ಆಕ್ಷೇಪದಿಂದ ಹುಬ್ಬೇರಿಸುವವರೇ ಅಧಿಕ. ತಾವು ಶಿಕ್ಷಣ ಪಡೆಯುವುದಕ್ಕೆ ಏನೆಲ್ಲ ಪಡಿಪಾಟಲು ಪಡಬೇಕಾಯಿತು ಎಂಬುದನ್ನು ವೇಣುಗೋಪಾಲರು ವಿವರಿಸಿದ್ದಾರೆ. ಇದು ಅವರ ಜಮಾನಾಕ್ಕೆ  ಮುಗಿದ ಕತೆ ಎಂದುಕೊಳ್ಳಬೇಡಿ. ಇವತ್ತಿಗೂ ಆ ಸ್ಥಿತಿಯಲ್ಲಿ ಏನೂ ಬದಲಾವಣೆಯಾಗಿಲ್ಲ. ಅಂಧರು, ಕಾಲಿಲ್ಲದವರು ಇತ್ಯಾದಿ ವೈಕಲ್ಯವಿರುವವರ ಜತೆ ತಮ್ಮ ಮಕ್ಕಳು ಓದುವುದು ಬೇಡ ಎಂದೇ ಹೆಚ್ಚಿನವರು ಅಂದುಕೊಳ್ಳುತ್ತಾರೆ. ಈ ದಾರುಣ ಸ್ಥಿತಿಯನ್ನು ಅನೇಕ ನಿದರ್ಶನ ಮೂಲಕ 'ಸತ್ಯಮೇವ ಜಯತೆ'ಯ ಆರನೇ ಅವತರಿಣಿಕೆಯಲ್ಲಿ ಎಳೆ-ಎಳೆಯಾಗಿ ಬಿಡಿಸಿಟ್ಟಿದ್ದಾರೆ ಬಾಲಿವುಡ್ ನಟ ಅಮೀರ್‌ಖಾನ್. ನಿಜ, ವೈಕಲ್ಯ ಇರುವವರಿಗೆ ಶಿಕ್ಷಣ- ಆತ್ಮವಿಶ್ವಾಸಗಳು ದೊರೆತ ಸಂದರ್ಭದಲ್ಲಿ ಅವರು ಸಾಮಾನ್ಯರಿಗಿಂತ ಅಸಾಮಾನ್ಯವಾದುದನ್ನು ಸಾಧಿಸಿರುವ ಉದಾಹರಣೆಗಳಿವೆ. ಪಾಲಕರ ಹಠ- ಒತ್ತಾಸೆಗಳಿಂದ ಅಂಥ ಸಾಧನೆ ಶಿಖರ ಏರಿದವರ ಬಗ್ಗೆ ಹೆಮ್ಮೆ ಪಡುತ್ತಲೇ ಇನ್ನೊಂದು ವಿಷಯವನ್ನು ಅವಗಾಹನೆಗೆ ತಂದುಕೊಳ್ಳಬೇಕು. ನಾವು ಯಶೋಗಾಥೆಗಳನ್ನು ಹರವಿ ಕುಳಿತಿರುವ ವೇಳೆಗೆ ಸಹಸ್ರ ಸಂಖ್ಯೆಯ ಮಕ್ಕಳಿಗೆ ಶಾಲೆ-ಕಾಲೇಜುಗಳು ಅವರ ವೈಕಲ್ಯವನ್ನು ನೆಪ ಮಾಡಿಕೊಂಡು ದೂರ ತಳ್ಳಿವೆ. ಸರ್ಕಾರದ 'ಉಚಿತ ಮತ್ತು ಕಡ್ಡಾಯ ಶಿಕ್ಷಣ'ದ ಘೋಷಣೆಗಳೆಲ್ಲ ವಿಕಲಾಂಗರ ಪಾಲಿಗೆ ಕಾಗದದ ಮೇಲಿನ ಅರ್ಥವಿಲ್ಲದ ಪದಗುಚ್ಛ. ಅಮೀರ್ ವ್ಯಾಖ್ಯಾನಿಸಿದಂತೆ ಇದರಿಂದ ಎರಡು ಘೋರ ಪರಿಣಾಮಗಳು ಉಂಟಾಗುತ್ತವೆ. ವಿಕಲಾಂಗ ಮಕ್ಕಳ ಹಕ್ಕನ್ನು ನಿರಾಕರಿಸುವುದು ಒಂದೆಡೆಯಾದರೆ, ಸಾಮಾನ್ಯ ಮಕ್ಕಳಿಗೆ ಇವರೆಲ್ಲರ ಕಷ್ಟವೇ ಅರ್ಥವಾಗದ ರೀತಿಯಲ್ಲಿ ದೂರವಿಟ್ಟು ನಾವೇ ಸಂವೇದನಾಶೂನ್ಯ ಸಮಾಜವೊಂದನ್ನು ಕಟ್ಟುತ್ತಿದ್ದೇವೆ.
ಇನ್ನು ದಿನನಿತ್ಯದ ಬದುಕಿನಲ್ಲಂತೂ ಅವರ ಯೋಚನೆಗಳೇ ಸುಳಿಯುವುದಿಲ್ಲ. ಬಸ್ ಸ್ಟಾಪ್‌ನ ಹತ್ತಿರ ಬರದೇ ಅರ್ಧ ರಸ್ತೆಯಲ್ಲಿ ಬಸ್ ನಿಲ್ಲಿಸಿದ ಚಾಲಕನನ್ನು ಬೈಯ್ದುಕೊಳ್ಳುತ್ತೇವೆ. ಆದರೆ ಇಂಥ ಪರಿಸ್ಥಿತಿಯಲ್ಲಿ ವಿಕಲಾಂಗರ ಪಾಡೇನು ಎಂಬ ಬಗ್ಗೆ ಸಮಾಜ ಒಮ್ಮೆಯೂ ಯೋಚಿಸುವುದಿಲ್ಲ. ಅಂಗವೈಕಲ್ಯ ಇರುವವರಿಗೆ ಸುಸೂತ್ರವಾಗುವಂತೆ ನಿರ್ಮಿಸಿರುವ ಯಾವುದಾದರೂ ಬಸ್ ನಿಲ್ದಾಣ ಕಂಡಿರುವಿರೇನು? ಶಾಲೆ, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಉಪಯೋಗದ ಕಟ್ಟಡಗಳು ಇಲ್ಲೆಲ್ಲೂ ವಿಕಲಾಂಗರಿಗೆ ಸಹಕರಿಸುವಂಥ ನಿರ್ಮಿತಿ-ಮಾರ್ಪಾಟುಗಳೇ ಇಲ್ಲ. ನಮ್ಮ ಪಾಡಿಗೆ ಲಿಫ್ಟ್ ಏರಿ, ಮೆಟ್ಟಿಲು ಹತ್ತಿ ಬರುತ್ತೇವಾಗಲೀ ವಿಕಲಾಂಗ ಸ್ನೇಹಿ ವ್ಯವಸ್ಥೆ ಬಗ್ಗೆ ಯಾವತ್ತೂ ಕರುಳು ಚುರುಗೊಡಿಸಿಕೊಂಡಿದ್ದೇ ಇಲ್ಲ. ಫುಟ್‌ಪಾತ್‌ನಲ್ಲಿ ಕ್ಯಾಕರಿಸಿ ಉಗಿವ, ಬಾಳೆ ಹಣ್ಣಿನ ಸಿಪ್ಪೆ ಎಸೆದು ಮುಂದೆ ಸಾಗುವ ನಮ್ಮ ಅಸಭ್ಯತೆ, ಆ ದಾರಿಯಲ್ಲಿ ಸಾಗುವ ಕಣ್ಣಿಲ್ಲದವನ ಮಾರ್ಗವನ್ನು ಇನ್ನಷ್ಟು ದುಸ್ತರಗೊಳಿಸೀತೆಂಬ ಪ್ರಜ್ಞೆಯೂ ಇಲ್ಲ. ವಿಕಲಾಂಗರನ್ನು ನಮ್ಮ ಸಮಾಜ ಎರಡು ಅತಿರೇಕಗಳಲ್ಲಿಟ್ಟು ನೋಡುತ್ತದೆ. 'ಪೂರ್ವಜನ್ಮದ ಪಾಪದಿಂದ ಹೀಗಾಗಿದ್ದಾನೆ ಬಿಡು' ಎಂಬ ಅಮಾನವೀಯ ನೆಲೆ ಒಂದೆಡೆಯಾದರೆ, ಈ ಬಗ್ಗೆ ತಲೆಕೆಡಿಸಿಕೊಳ್ಳದಿದ್ದರೂ 'ಅಯ್ಯೋ ಪಾಪ' ಎಂಬ ಅತಿರೇಕಕ್ಕೆ ಹೊರಳುವವರು ಇನ್ನೊಂದೆಡೆ. ಅಂಗ ನ್ಯೂನತೆ ಇರುವವರಿಗೆ ಅನುಕಂಪ ಬೇಕು, ಅವರನ್ನು ಮನೆಯಲ್ಲೇ ಇಟ್ಟುಕೊಂಡು ಚೆನ್ನಾಗಿ ತಿನ್ನಿಸಿ ಸಲಹಬೇಕು, ಹೊರಗಡೆ ಬಿಡುವುದೇ ಬೇಡ ಎಂಬ ನಿಲುವು ಇವರದ್ದು.
ಆದರೆ ಅಂಗವೈಕಲ್ಯಕ್ಕೆ ಸ್ಪಂದಿಸಬೇಕಾದ ನೆಲೆ ಪ್ರಾಯೋಗಿಕವಾಗಿರಬೇಕಿರುವುದು ಅವಶ್ಯ. ಇಂಥದೊಂದು ನ್ಯೂನತೆ ಇದೆ ಎಂಬುದನ್ನು ಒಪ್ಪಿಕೊಂಡು ಅದನ್ನು ಮೀರುವ ರೀತಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ, ಪೂರಕ ಪರಿಸರ ನಿರ್ಮಾಣದ ಹೊಣೆ ಹೊರಬೇಕು. 'ಡಿಫರೆಂಟ್ಲಿ ಏಬಲ್ಡ್‌' ಎಂಬ ಚೆಂದದ ಪದ ಪಂಜರದಲ್ಲಿ ಅವರನ್ನು ಕೂರಿಸಿ ವಿಮರ್ಶೆಯ ಪರಿಕರವನ್ನಾಗಿಸದೇ ಸಮಾಜದಲ್ಲಿ ಅತ್ಯಂತ ಸಹಜವೆಂಬಂತೆ ಬೆರೆಯುವ ವಾತಾವರಣ ರೂಪಿಸಬೇಕು. ಆಗ ಮಾತ್ರವೇ ನಮ್ಮ ಕತೆ, ಕಾದಂಬರಿ, ಸಿನಿಮಾಗಳಲ್ಲಿ ಕೇವಲ ಭಿಕ್ಷುಕನಾಗಿ, ಹೊಟ್ಟೆಪಾಡಿಗೆ ಹಾಡುವವನಾಗಿ ಚಿತ್ರಣಕ್ಕೊಳಗಾಗುತ್ತಿರುವ ಅಂಧ, ಒಬ್ಬ ಆಫೀಸರ್, ಬಾಸ್ ಪಾತ್ರದಲ್ಲೂ ಕಾಣಿಸಿಕೊಳ್ಳಬಲ್ಲ. ನಮ್ಮ ವೈಯಕ್ತಿಕ ಉನ್ನತಿಗೆ ಸ್ಫೂರ್ತಿ ಒದಗಿಸುವ 'ಸಕ್ಸಸ್ ಸ್ಟೋರಿ'ಗಳಿಗಷ್ಟೇ ವಿಕಲಾಂಗರ ಸಾಧನೆಗಳನ್ನು ಸೀಮಿತಗೊಳಿಸದೆ, ಆ ಹಾದಿ ಇತರ ವಿಕಲಾಂಗರಿಗೆ ಇನ್ನಷ್ಟು ಹಸನಾಗಿ ಒದಗುವಂತೆ ಸಮಾಜ ಸಂವೇದನೆ ಮೆರೆವುದು ಯಾವಾಗ? ಇಂಥ ಸಂವೇದನೆ ಸಮಾಜದ ಎದೆಯಲ್ಲಿ ಮೊಳೆತಾಗಲೇ ಇದರಿಂದಲೇ ರೂಪಿತವಾಗಿರುವ ಸರ್ಕಾರದಲ್ಲೂ ಆ ಭಾವ ವ್ಯಾಪಿಸುತ್ತದೆ. ವಿಕಲಾಂಗ ಸ್ನೇಹಿ ಕಾಯ್ದೆ, ಮೂಲ ಸೌಕರ್ಯಾಭಿವೃದ್ಧಿಗಳು ಕೈಗೂಡುತ್ತವೆ.
ಈ ನಿಟ್ಟಿನಲ್ಲಿ ನಮ್ಮೆಲ್ಲರ ಹೃದಯವನ್ನು ಆರ್ದ್ರಗೊಳಿಸುವ ಕೆಲಸವನ್ನು 'ಅಕ್ಷಯ ನೇತ್ರ'ದಂಥ ಕೃತಿಗಳು ಮಾಡುತ್ತವೆ. ರವೀಂದ್ರ ಭಟ್ಟರ ಕೃತಿ ಮುಕ್ತಾಯವಾಗುವುದು ಈ ವಾಕ್ಯದೊಂದಿಗೆ- 'ಅಂಗವಿಕಲರ ಜೊತೆ ನಾವು ಸರಿಯಾಗಿ ನಡೆದುಕೊಳ್ಳದಿದ್ದರೆ ಅಂಗವೈಕಲ್ಯ ಇರುವುದು ಅವರಿಗಲ್ಲ, ನಮಗೆ.'



- ಚೈತನ್ಯ ಹೆಗಡೆ
cchegde@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com