ಅವನು ಬದಲಾಗುವ ಹೊತ್ತಿಗೆ ಹೂವು ಬಾಡಿತ್ತು...

ಆಗಿದ್ದು ಆಗಿ ಹೋಗಲಿ. ಇವತ್ತು ಡೈವೊರ್ಸ್ ಬಗ್ಗೆ ಮಾತಾಡಿಬಿಡಬೇಕು. ಹೆಚ್ಚೆಂದರೆ...
Updated on: 

ಆಗಿದ್ದು ಆಗಿ ಹೋಗಲಿ. ಇವತ್ತು ಡೈವೊರ್ಸ್ ಬಗ್ಗೆ ಮಾತಾಡಿಬಿಡಬೇಕು. ಹೆಚ್ಚೆಂದರೆ, ಅವಳು ಒಂದೆರಡು ತಾಸು ಗೋಳಾಡಬಹುದು. ತವರಿನವರನ್ನು ಕರೆದು ಪಂಚಾಯ್ತಿ ನಡೆಸಬಹುದು. ಒಂದಿಬ್ಬರು ಹಿರಿಯರನ್ನು ಮುಂದಿಟ್ಟುಕೊಂಡು 'ರಾಜಿ'ಗೆ ಪ್ರಯತ್ನಿಸಬಹುದು. ಮಗನ ಕಡೆ ಕೈ ತೋರಿಸಿ ಇವನ ಭವಿಷ್ಯವೇನು ಎಂದು ಬಿಕ್ಕಳಿಸಬಹುದು. ಉಹುಂ, ಯಾವುದಕ್ಕೂ ನಾನು ಬಗ್ಗಬಾರದು. ಸೆಂಟಿಮೆಂಟ್ಗೆ ಬಲಿಯಾಗಬಾರದು. ಮಗನನ್ನು ಯಾವುದಾದರೂ ರೆಸಿಡೆನ್ಶಿಯಲ್ ಸ್ಕೂಲ್ಗೆ ಸೇರಿಸಿದರಾಯ್ತು. ನಂತರ, ಈಗಿರುವ ಮನೆ, ಕಾರು, ಎಂಟು ಲಕ್ಷ ಬ್ಯಾಂಕ್ ಬ್ಯಾಲೆನ್ಸ್... ಇದಿಷ್ಟನ್ನೂ ಹೆಂಡತಿಯ ಹೆಸರಿಗೆ ಬರೆದು ಹೋಗಿಬಿಡಬೇಕು. ಒಮ್ಮೆ ಇವಳಿಂದ ಕಳಚಿಕೊಂಡರೆ ಸಾಕು: ನಂತರದ ಕೆಲವೇ ದಿನಗಳಲ್ಲಿ ವೃಂದಾಳ ಜೊತೆ ಹೊಸ ಬದುಕು ಆರಂಭಿಸಬಹುದು...
ಹೀಗೆಲ್ಲ ಯೋಚಿಸುತ್ತಲೇ ಮನೆಯ ಹಾದಿ ಹಿಡಿದಿದ್ದ ವಿನಾಯಕ. ಬ್ಯಾಂಕ್ ಕ್ಯಾಷಿಯರ್ ಆಗಿದ್ದ ಅವನಿಗೆ ಐದನೇ ತರಗತಿ ಓದುವ ಮಗನಿದ್ದ. ಸಾಧಾರಣ ಸುಂದರಿ ಎಂಬಂಥ ಹೆಂಡತಿಯಿದ್ದಳು. ಊಟ-ತಿಂಡಿ, ನಿದ್ರೆಯ ಹಾಗೆ ಸೆಕ್ಸ್ ಕೂಡ ದಿನನಿತ್ಯದ ಕ್ರಿಯೆಯಾಗಬೇಕು ಎಂದು ಅವನು ವಾದಿಸುತ್ತಿದ್ದ. ಈ ಮಾತನ್ನು ವಿನಾಯಕನ ಹೆಂಡತಿ ಖಂಡತುಂಡವಾಗಿ ವಿರೋಧಿಸಿದ್ದಳು. ಎದೆಯೆತ್ತರ ಬೆಳೆದ ಮಗ ಇರುವಾಗ ರೊಮಾನ್ಸ್ ಮಾಡಬೇಕು ಅಂತ ಬರ್ತೀರಲ್ಲ, ನಿಮಗೆ ನಾಚಿಕೆ ಆಗಲ್ವ ಎಂದು ಛೀಮಾರಿ ಹಾಕಿದ್ದಳು. ಈ ವಿಷಯವಾಗಿ ಶುರುವಾದ ಜಗಳ ಮೆಗಾ ಧಾರಾವಾಹಿಯಂತೆ ಮುಂದುವರಿಯಿತು. ಅಂದಿನಿಂದ ವಿನಾಯಕನಿಗೆ ಹೆಂಡತಿಯ ಪ್ರತಿಯೊಂದು ಹೆಜ್ಜೆಯಲ್ಲೂ ತಪ್ಪುಗಳೇ ಕಾಣತೊಡಗಿದವು. ಹೀಗಿದ್ದಾಗಲೇ ಅವನಿದ್ದ ಬ್ಯಾಂಕ್ಗೆ ಕ್ಲರ್ಕ್ ಆಗಿ ಬಂದವಳು ವೃಂದಾ.
ಥಳಕು-ಬಳುಕಿನ ಸಮ್ಮಿಶ್ರಣದಂತಿದ್ದಳು ವೃಂದಾ. ಪರಿಚಯವಾದ ದಿನವೇ ನಾನು ಡೈವೋರ್ಸಿ ಎಂದಾಕೆ ವಿನಾಯಕನಿಗೆ ಹೇಳಿಬಿಟ್ಟಿದ್ದಳು. ತುಂಬ ಆಪ್ತವಾಗಿ, ಮುಕ್ತವಾಗಿ ಮಾತಾಡುತ್ತಿದ್ದಳು. ರಜೆಯ ದಿನಗಳಲ್ಲಿ ಸಂಕೋಚವಿಲ್ಲದೆ ಮನೆಗೆ ಬನ್ನಿ, ಹರಟೋಣ ಎಂದು ಆಹ್ವಾನಿಸಿದ್ದಳು. ಹುಡುಗಿಯೊಬ್ಬಳು ತಾನೇ ಮುಂದಾಗಿ ಆಹ್ವಾನ ನೀಡಿದಳು ಅಂದ ಮೇಲೆ ಕೇಳಬೇಕೆ? ವಿನಾಯಕ ಸುಲಭವಾಗಿ ಅವಳ ಕಡೆಗೆ ವಾಲಿಕೊಂಡ. ತನ್ನ ಬದುಕಿನ ಕಥೆ ಹೇಳಿಕೊಂಡ. ತನ್ನ ಆಸೆ, ಹೆಂಡತಿಯ ಅಸಹಕಾರದ ಬಗ್ಗೆಯೂ ಹೇಳಿದ. ಹೀಗೆ ಕಷ್ಟ-ಸುಖ ಮಾತಾಡುವ ಸಂದರ್ಭದಲ್ಲೇ -ನಾವಿಬ್ರೂ ಮದುವೆಯಾದರೆ ಹೇಗೆ ಎಂಬ ಯೋಚನೆ ಕೂಡ ವಿನಾಯಕನಿಗೆ ಬಂತು. ಅದನ್ನೇ ವೃಂದಾಳಿಗೆ ಹೇಳಿದ. ನನಗೆ ಬೇಕಿರುವುದು ನೀವು ಮಾತ್ರ. ನಿಮ್ಮ ಹಣ, ಆಸ್ತಿಯಲ್ಲ. ಒಬ್ಬರ ಬದುಕನ್ನು ಹಾಳು ಮಾಡಿದ ಆರೋಪ ನನ್ನ ಮೇಲೆ ಬರಬಾರ್ದು. ಮೊದಲು ಡೈವೋರ್ಸ್ ತಗೊಳ್ಳಿ ಎಂದಿದ್ದಳು ವೃಂದಾ.
ಅವತ್ತು, ರಾತ್ರಿ ಮನೆಗೆ ಬಂದ ವಿನಾಯಕ, ಹೆಂಡತಿಗೆ ನೇರವಾಗಿ ಹೇಳಿದ: 'ನೋಡೂ, ಬದುಕನ್ನ ನಾನು ನೋಡುವ ದೃಷ್ಟಿಯೇ ಬೇರೆ. ನಿನ್ನ ಯೋಚನೆಗಳೇ ಬೇರೆ. ಹಾಗಾಗಿ ಇಬ್ರಿಗೂ ಹೊಂದಾಣಿಕೆ ಆಗಿಲ್ಲ. ಇದೇ ಕಾರಣಕ್ಕೆ ದಿನಾ ಜಗಳ, ನನಗೂ ನೆಮ್ಮದಿ ಇಲ್ಲ. ನಿನಗೂ. ಈ ಕಾರಣಕ್ಕೇ ನಾನು ಡೈವೊರ್ಸ್ ಕೇಳ್ತಾ ಇದೀನಿ. ಮನೆ, ಕಾರು, ಬ್ಯಾಂಕ್ ಬ್ಯಾಲೆನ್ಸ್ ಎಲ್ಲಾ ನಿನ್ನ ಹೆಸರಲ್ಲೇ ಇರುತ್ತೆ. ಮಗನ ಬಗ್ಗೆಯೂ ನಾನು ಕೇರ್ ತಗೋತೇನೆ. ಗಲಾಟೆ ಮಾಡಬೇಡ. ಸುಮ್ನೆ ಡೈವೊರ್ಸ್ ಪೇಪರ್ಗೆ ಸೈನ್ ಮಾಡು. ಆರು ತಿಂಗಳಿಂದ ನಾನೂ ನೋಡ್ತಾನೇ ಇದೀನಿ. ರಾತ್ರಿ ಮನೆಗೆ ಬಂದ್ರೆ ಸಾಕು; ಐದಾರು ಮಾತ್ರೆ ನುಂಗ್ತೀಯ. ನಂತರ, ಯಾಕೋ ಎದೆಯ ಹತ್ರ ನೋಯ್ತಾ ಇದೆ ಅಂದುಕೊಂಡು ಮಲಗಿಬಿಡ್ತೀಯ! ಇದನ್ನು ನಾನು ತಾನೆ ಎಷ್ಟು ದಿನ ಅಂತ ನೋಡಲಿ? ಜೊತೇಲಿದ್ದು ದಿನಾ ಕಿತ್ತಾಡುವ ಬದಲು ದೂರವಿದ್ದು ನೆಮ್ಮದಿಯಾಗಿರೋಣ...
ಈ ಮಾತು ಕೇಳಿ ವಿನಾಯಕನ ಹೆಂಡತಿ ನಿರೀಕ್ಷೆಯಂತೆಯೇ ಗೋಳಾಡಿದಳು. ಕ್ಷಮೆ ಕೇಳಿದಳು. ಕುಟುಂಬದ ಹಿರಿಯರನ್ನು ಕರೆದು ಪಂಚಾಯ್ತಿ ಮಾಡಿಸಿದಳು. ಉಪವಾಸ ಕೂತಳು. ಉಹುಂ, ಯಾವುದಕ್ಕೂ ವಿನಾಯಕ ಬಗ್ಗಲಿಲ್ಲ. ತನ್ನ ವಿಷಯವಾಗಿ ಗಂಡನ ಮನಸ್ಸು ಕಲ್ಲಾಗಿದೆ ಎಂಬುದು ಖಚಿತವಾದಾಗ ವಿನಾಯಕನ ಹೆಂಡತಿ ಹೇಳಿದಳು: 'ಸರಿ. ನಿಮ್ಮ ಇಷ್ಟದಂತೆಯೇ ಆಗಲಿ. ಮನೆ, ಕಾರು, ದುಡ್ಡು, ಇವೆಲ್ಲಾ ನನಗೆ ಬೇಡ. ಡೈವೋರ್ಸ್ ತಗೋತಿದೀನಿ ಎಂಬ ವಿಷಯ ಮಗೂಗೆ ಗೊತ್ತಾಗದ ಹಾಗೆ ನೋಡಿಕೊಳ್ಳಿ. ಜೊತೆಗೆ, ನೀವು ನನ್ನಿಂದ ಅಧಿಕೃತವಾಗಿ ಬೇರೆ ಆಗೋದು ಯಾವತ್ತು ಅಂತ ಒಂದು ತಿಂಗಳ ಮೊದಲೇ ತಿಳಿಸಿ. ಆ ಒಂದು ತಿಂಗಳ ಕಾಲ, ಮದುವೆಯಾದ ಮೊದಲ ತಿಂಗಳು ನಾವು ಬದುಕಿದ್ದೆವಲ್ಲ; ಆ ಥರಾ ಬದುಕಿಬಿಡಿ. ಅದು ನಟನೆ ಆದ್ರೂ ಪರವಾಗಿಲ್ಲ. ಬೇರೆ ಆಗುವ ಮುನ್ನ ಆ ಥರಾ ಬದುಕಬೇಕು ಅನ್ನೋದು ನನ್ನ ಆಸೆ...' ಈ ಮಾತಿಗೆ ವಿನಾಯಕ ಒಪ್ಪಿದ. ತಕ್ಷಣವೇ ಅವನ ಹೆಂಡತಿ ಡೈವೋರ್ಸ್ ಪತ್ರಕ್ಕೆ ಸಹಿ ಮಾಡಿದ್ದಳು.
ಮುಂದಿನ ಹದಿನೈದು ದಿನಗಳಲ್ಲಿ ಲಾಯರ್ಗಳ ನೆರವಿನಿಂದ ಡೈವೊರ್ಸ್ ಪಡೆವ ಹಾದಿ ಸುಗಮವಾಯಿತು. ಅದೊಂದು ರಾತ್ರಿ ಊಟಕ್ಕೆ ಕುಳಿತ ವಿನಾಯಕ, ತಣ್ಣಗಿನ ದನಿಯಲ್ಲಿ ಹೇಳಿದ: 'ಇವತ್ತಿಗೆ ಸರಿಯಾಗಿ ಒಂದು ತಿಂಗಳಿಗೆ ನಾನು ಬೇರೆ ಹೋಗ್ತೇನೆ. ನೆನಪಿರಲಿ...'
'ಸರಿ. ನಾಳೆಯಿಂದ ಒಂದು ತಿಂಗಳವರೆಗೂ, ಮದುವೆಯಾದ ಆರಂಭದ ದಿನಗಳಲ್ಲಿ ನೋಡಿಕೊಂಡ್ರಲ್ಲ, ಅದೇ ಥರಾ ನೋಡಿಕೊಳ್ಳಿ. ನಿಮ್ಮಲ್ಲಿ ನಾನು ಬೇಡಿಕೊಳ್ಳುವುದು ಇಷ್ಟೇ, ಇದಿಷ್ಟೇ...'
ಮದುವೆಯಾದ ಮೊದಲ ದಿನಗಳು ಅಂದ ಮೇಲೆ ಕೇಳಬೇಕೆ? ಅವು ಆಸೆಯ ದಿನಗಳು. ಮೋಹದ ಕ್ಷಣಗಳು. ಆಗ ಆಫೀಸಿಗೆ ಹೊರಡುವ ಮುನ್ನ ಬೆಡ್ರೂಮಿನಿಂದ ಅಡುಗೆ ಮನೆಯವರೆಗೂ ಎತ್ತಿಕೊಂಡು ಬಂದು, ಜೋಪಾನವಾಗಿ ಇಳಿಸಿ, ಜಾಸ್ತಿ ನಡೆದಾಡಿದರೆ ಕಾಲು ನೋವು ಬರುತ್ತೆ ಎಂದು ಎಚ್ಚರಿಸಿಯೇ ಕೆಳಗೆ ಇಳಿಸುತ್ತಿದ್ದ ವಿನಾಯಕ. ಈಗ ಹದಿಮೂರು ವರ್ಷಗಳ ನಂತರ ಮತ್ತೆ ಹಾಗೆ ಮಾಡಬೇಕಿತ್ತು. ಹುಂ, ಈ ನಾಟಕವೂ ಆಗಿ ಹೋಗಲಿ ಎಂದುಕೊಂಡು ಆಫೀಸಿಗೆ ಹೊರಡುವ ಮುನ್ನ ಹೆಂಡತಿಯನ್ನು ಅನಾಮತ್ತಾಗಿ ಎತ್ತಿಕೊಂಡ. ಅದನ್ನು ಕಂಡು, ಶಾಲೆಗೆ ಹೋಗಲು ರೆಡಿಯಾಗುತ್ತಿದ್ದ ಮಗ ಚಪ್ಪಾಳೆ ಹೊಡೆದು ಖುಷಿಪಟ್ಟ... ನಂತರ ಅಮ್ಮನ ಬಳಿ ಬಂದು- 'ಮಮ್ಮಿ, ಮಮ್ಮಿ, ಪಪ್ಪ ನಿನ್ನನ್ನು ಮಗು ಥರಾ ಎತ್ಕೊಂಡಿದ್ರು ಅಲ್ವಾ? ನೋಡ್ಬಿಟ್ಟೆ. ನಾನು ಅದನ್ನು ನೋಡ್ಬಿಟ್ಟೆ...' ಎಂದು ನಾಚಿಕೊಂಡ.  ಮಗುವಿಗೆ ಸಂಭ್ರಮ ತಂದ ಈ ದೃಶ್ಯದ ಹಿಂದೆ ಇರುವ ಸಂಕಟ ನೆನೆದು ವಿನಾಯಕನಿಗೆ ಕಸಿವಿಸಿಯಾಯಿತು. ಅದೇ ಕ್ಷಣಕ್ಕೆ ವೃಂದಾಳ ನಗುಮುಖ, ಅವಳ ವಯ್ಯಾರದ ಮಾತುಗಳೂ ಕಣ್ಮುಂದೆ ತೇಲಿ ಹೋದವು. ಅಷ್ಟೇ; ವಿನಾಯಕ ಗೆಲುವಾದ.
ಅಂದಿನಿಂದ ಪ್ರತಿದಿನವೂ ಆಫೀಸಿಗೆ ಹೋಗುವ ಮುನ್ನ ಹೆಂಡತಿಯನ್ನು ಬೆಡ್ರೂಂನಿಂದ ಅಡುಗೆಮನೆಯ ತನಕ ಎತ್ತಿಕೊಂಡು ಬರುವುದು ವಿನಾಯಕನ ಕರ್ತವ್ಯವಾಯಿತು. ಈ ನಟನೆಗೆ ಗಂಡ-ಹೆಂಡತಿ ಇಬ್ಬರೂ ಹೊಂದಿಕೊಂಡರು. ಡೈವೊರ್ಸ್ಗೆ ಒಪ್ಪಿದ ನಂತರ ಹೆಂಡತಿ ತುಂಬಾ ಇಳಿದು ಹೋಗಿದ್ದಾಳೆ. ಈಗಲೂ ತಪ್ಪದೇ ರಾತ್ರಿ ವೇಳೆ ಆರಾರು ಮಾತ್ರೆ ನುಂಗುತ್ತಿದ್ದಾಳೆ ಎಂಬುದನ್ನು ವಿನಾಯಕ ಗಮನಿಸಿದ. ಈ ಮಧ್ಯೆ ವೃಂದಾಳೊಂದಿಗೇ ಊಟ ಮುಗಿಸಿ, ಭವಿಷ್ಯದ ಬಗ್ಗೆ ಗಂಟೆಗಟ್ಲೆ ಮಾತಾಡಿ ತುಂಬ ತಡವಾಗಿ ಮನೆಗೆ ಬರತೊಡಗಿದ.
ಹೀಗೆಯೇ ಹದಿನೈದು ದಿನಗಳು ಕಳೆದು ಹೋದವು. ಈಚೀಚೆಗೆ ಹೆಂಡತಿಯ ಹತ್ತಿರ ಹೋದರೆ ಸಾಕು; ಅವಳನ್ನು ಬಿಗಿದಪ್ಪುವ ಆಸೆಯಾಗುತ್ತಿದೆ ಎಂಬುದು ವಿನಾಯಕನ ಗಮನಕ್ಕೂ ಬಂದಿತ್ತು. ಅವನು ತುಂಬ ಕಷ್ಟದಿಂದ ಮನಸ್ಸನ್ನು ನಿಗ್ರಹಕ್ಕೆ ತಂದುಕೊಳ್ಳುತ್ತಿದ್ದ. ತನ್ನೊಳಗೆ ಉಂಟಾಗುವ ತಳಮಳವನ್ನೆಲ್ಲ ವೃಂದಾಳಿಗೆ ತಪ್ಪದೇ ಹೇಳುತ್ತಿದ್ದ. ಅವಳು- 'ಮೊದಲು ನೀವು ಮೋಹದಿಂದ ಹೊರಬನ್ನಿ' ಎಂದು ಸಲಹೆ ನೀಡುತ್ತಿದ್ದಳು. ಪ್ರತಿದಿನವೂ ತಾನು ಎತ್ತಿಕೊಂಡು ಹೋಗುವಾಗ ಹೆಂಡತಿಯ ಮನಸ್ಸು ಹೇಗಿರುತ್ತದೆ ಎಂದು ತಿಳಿಯುವ ಆಸೆ ವಿನಾಯಕನಿಗಿತ್ತು. ಆದರೆ, ಇವನು ಬಳಿ ಬಂದ ತಕ್ಷಣವೇ ಆಕೆ ಮೊದಲೇ ನಿರ್ಧರಿಸಿದ್ದಂತೆ ಕಣ್ಮುಚ್ಚಿ ಬಿಡುತ್ತಿದ್ದಳು. ಈತ ಕೆಳಗಿಳಿಸಿದ ಬಳಿಕ ಕಣ್ತೆರೆಯುತ್ತಿದ್ದಳು. ಹಾಗಾಗಿ, ಹೆಂಡತಿಯ ಮನಸ್ಸಾಗಲಿ, ಕಣ್ಣಲ್ಲಿ ಮಿಂಚಿದ ಭಾವವಾಗಲಿ ವಿನಾಯಕನಿಗೆ ಗೊತ್ತಾಗಲೇ ಇಲ್ಲ.
ಅವತ್ತು ಶುಕ್ರವಾರ. ವಿನಾಯಕ ಹಾಸಿಗೆಯಿಂದ ಎದ್ದವನೇ ಕ್ಯಾಲೆಂಡರ್ ಗಮನಿಸಿದ. ಹೆಂಡತಿಯಿಂದ ಬೇರೆಯಾಗಲು ಬಾಕಿ ಉಳಿದಿದ್ದುದು ನಾಲ್ಕೇ ದಿನ. ವೃಂದಾಗೆ ಈ ವಿಷಯ ತಿಳಿಸಲು ಎಸ್ಸೆಮ್ಮೆಸ್ ಕಳಿಸಬೇಕು ಎಂದುಕೊಂಡ. ಆಗಲೇ ಬಾಗಿಲ ಮರೆಯಲ್ಲಿ ತುಂಟ ನಗೆಯೊಂದಿಗೆ ಕಾಣಿಸಿಕೊಂಡ ಮಗ-ಪಪ್ಪಾ, ನೀನು ಮಮ್ಮೀನ ಎತ್ಕೊಂಡು ಹೋಗುವ ಟೈಮ್ ಆಯ್ತು. ಇವತ್ತು ಆ ಥರ ಎತ್ತಿಕೊಳ್ಳಲ್ವ? ಎಂದು ಕೇಳಿಬಿಟ್ಟ. ಓಹ್, ನನ್ನ ಚಲನವಲನವನ್ನು ಮಗ ಹುಶಾರಾಗಿ ಗಮನಿಸ್ತಾ ಇದಾನೆ ಎಂಬುದು ವಿನಾಯಕನಿಗೆ ಆಗಷ್ಟೇ ಅರಿವಾಯಿತು. ಏನೆಂದು ಉತ್ತರಿಸುವುದೋ ತಿಳಿಯದೆ ಹೆಂಡತಿಯ ಕಡೆ ನೋಡಿದ. ಆಕೆ, ದೇವಾಲಯಕ್ಕೆ ಹೊರಡುವ ಗಡಿಬಿಡಿಯಲ್ಲಿದ್ದಳು. ಬಟ್ಟೆ ಬದಲಿಸುತ್ತಿದ್ದಳು. ವಿನಾಯಕ ಸೂಕ್ಷ್ಮವಾಗಿ ಗಮನಿಸಿದ. ಎಲ್ಲ ರವಿಕೆಗಳೂ/ ಚೂಡಿದಾರ್ಗಳೂ ಆಕೆಗೆ ತುಂಬ ಸಡಿಲವಾಗುತ್ತಿದ್ದವು. ಛೆ, ಈಕೆ ತುಂಬಾ ಇಳಿದು ಹೋಗಿದ್ದಾಳೆ. ಪ್ರತಿ ದಿನವೂ ಅವಳನ್ನು ಅನಾಮತ್ತಾಗಿ ಎತ್ತಿಕೊಂಡಾಗ ಸ್ವಲ್ಪವೂ ಆಯಾಸ ಆಗದೇ ಇದ್ದುದು ಇದೇ ಕಾರಣಕ್ಕೆ ಎಂದುಕೊಂಡ ವಿನಾಯಕ. ಒಂದಷ್ಟು ಕೊರತೆಗಳನ್ನು ಬಿಟ್ಟರೆ, ಆಕೆ ತನ್ನನ್ನು ತುಂಬ ಚೆನ್ನಾಗಿ ನೋಡಿಕೊಂಡಿದ್ದಾಳೆ. ಅದಕ್ಕೆ ಪ್ರತಿಯಾಗಿ ತಾನು ಅವಳಿಗೆ ಕೊಟ್ಟಿರುವುದೇನು? ಬರೀ ಅಣಕಿಸುವ ಮಾತು. ಗಳಿಗೆಗೊಂದು ಹೊಸ ಬೈಗುಳ ಅಷ್ಟೇ ಅಂದುಕೊಂಡ ವಿನಾಯಕ. ಆ ಕ್ಷಣಕ್ಕೆ, ಅವನ ಬಗ್ಗೆ ಅವನಿಗೇ ಅಸಹ್ಯವಾಯಿತು. ಈ ಮಧ್ಯೆಯೇ ಹೆಂಡತಿಯನ್ನು ಎತ್ತಿಕೊಂಡು ಬರುವ ಕೆಲಸ ಮುಗಿಸಿ ಗಡಿಬಿಡಿಯಲ್ಲೇ ಬ್ಯಾಂಕ್ಗೆ ಬಂದ.
ಅವತ್ತು ಇಡೀ ದಿನ ವಿನಾಯಕನ ಮನಸ್ಸು ಸಂಕಟದಲ್ಲಿ ಬೆಂದು ಹೋಯಿತು. ಅಗ್ನಿಸಾಕ್ಷಿಯಾಗಿ ಕೈ ಹಿಡಿದವಳನನ್ನು ತುಂಬ ಕೆಟ್ಟದಾಗಿ ನಡೆಸಿಕೊಂಡೆ ಅಂದುಕೊಂಡ. ವೃಂದಾಳ ಮೋಹದಲ್ಲಿ ಹೆಂಡತಿಯನ್ನು ಕಡೆಗಣಿಸಿದ್ದಕ್ಕೆ ಪರಿತಪಿಸಿದ. ಮಗನ ಮುದ್ದು ಮಾತುಗಳು ನೆನಪಾಗಿ ತತ್ತರಿಸಿದ. ಮದುವೆಯ ಆರಂಭದಲ್ಲಿ ಹೆಂಡತಿಗೆ ಕೊಟ್ಟ ಭಾಷೆ, ಮಾಡಿದ ಪ್ರಮಾಣ ಹಾಗೂ ಕಂಡ ಕನಸುಗಳನ್ನು ನೆನಪಿಸಿಕೊಂಡ. ಸಂಜೆಯಾಗುತ್ತಿದ್ದಂತೆಯೇ ಒಂದು ನಿರ್ಧಾರಕ್ಕೆ ಬಂದು ವೃಂದಾಳ ಮನೆಗೆ ಹೋಗಿ ಹೀಗೆಂದ: 'ಐಯ್ಯಾಂ ಸಾರಿ. ಹೆಂಡತಿ, ಮಗನನ್ನು ಅನಾಥರನ್ನಾಗಿಸಿ ಬರಲು ಮನಸ್ಸು ಒಪ್ಪುತ್ತಿಲ್ಲ. ಇಷ್ಟು ದಿನ ನಿನ್ನೊಂದಿಗೆ ಹುಡುಗಾಟವಾಡಿ ತಪ್ಪು ಮಾಡಿದೆ ಅನ್ನಿಸ್ತದೆ. ದಯವಿಟ್ಟು ಕ್ಷಮಿಸು...'
'ಇಂಥದೊಂದು ಉತ್ತರವನ್ನು ವೃಂದಾ ಖಂಡಿತ ನಿರೀಕ್ಷಿಸಿರಲಿಲ್ಲ. ಆಕೆ ವಿನಾಯಕನನ್ನೇ ದುರುದುರು ನೋಡುತ್ತಾ-' ಈಡಿಯಟ್, ಇಷ್ಟು ದಿನ ನಿನ್ನ ತಲೇಲಿ ಸಗಣಿ ತುಂಬಿತ್ತಾ ಎಂದು ಹಂಗಿಸಿ ಅದರ ಹಿಂದೆಯೇ ವಿನಾಯಕನ ಕೆನ್ನೆಗೆ ಛಟೀರ್ ಎಂದು ಹೊಡೆದು, ಗೆಟ್ಔಟ್ ಎಂದು ಚೀರಿ ಬಾಗಿಲು ಮುಚ್ಚಿದಳು.
ಇಂಥದೊಂದು ಬೆಳವಣಿಗೆಯನ್ನು ವಿನಾಯಕ ಮೊದಲೇ ನಿರೀಕ್ಷಿಸಿದ್ದ. ಹಾಗಾಗಿ ಅವನಿಗೆ ಆಘಾತವೇನೂ ಆಗಲಿಲ್ಲ. ಒಂದು ಸಂಕಟದಿಂದ ಕಳಚಿಕೊಂಡಿದ್ದಾಯಿತು. ಈಗ ಆದಷ್ಟೂ ಬೇಗ ಮನೆಗೆ ಹೋಗಬೇಕು. ನಾನು ಡೈವೊರ್ಸ್ ತಗೋಳಲ್ಲ ಕಣೆ. ಬದುಕಿದ್ರೆ ನಿನ್ನ ಜೊತೇನೇ ಇರ್ತೇನೆ ಕಣೆ. ಒಂದು ಹುಡುಗಿಯ ಮೇಲಿನ ಮೋಹದಿಂದ, ಅವಳೂ ದುಡೀತಾಳೆ ಎಂಬ ಮತ್ತೊಂದು ಕಾರಣದಿಂದ ನಿನ್ನ ಮನಸ್ಸಿಗೆ ನೋವಾಗುವಂತೆ ಮಾತಾಡಿದೆ. ಒಂದಿಷ್ಟು ದಿನ ನಾನು ಹಾದಿ ತಪ್ಪಿದ್ದು ನಿಜ. ಈಗ ಬದಲಾಗಿರೋದೂ ನಿಜ. ನನ್ನನ್ನು ಕ್ಷಮಿಸಿ ಬಿಡು ಪ್ಲೀಸ್... ಎಂದೆಲ್ಲ ಕೇಳಬೇಕು ಎಂದುಕೊಂಡ. ಆಗಲೇ, ಹೆಂಡತಿಗೆ ಒಂದು ಬೊಕೆ ಕೊಡಬೇಕು ಅನ್ನಿಸಿತು. ತಕ್ಷಣವೇ ಅಂಗಡಿಗೆ ಹೋಗಿ ಗುಲಾಬಿ ಹೂಗಳೇ ತುಂಬಿದ್ದ ಬೊಕೆಯೊಂದಕ್ಕೆ ಆರ್ಡರ್ ಮಾಡಿದ. ಇವನ ಉತ್ಸಾಹ ಗಮನಿಸಿದ ಸೇಲ್ಸ್ ಗರ್ಲ್- ಏನ್ಸಾರ್, ವ್ಯಾಲೆಂಟೈನ್ಸ್ ಡೇಗೆ ಸ್ಪೆಷಲ್ ಗಿಫ್ಟಾ? ಎಂದಳು. ಈತ ತುಟಿಯರಳಿಸಿ ಹೌದ್ ಹೌದು ಅಂದ. ನಂತರ, ಒಂದು ಕೂಪನ್ ತಗೊಂಡು ಅದರ ಮೇಲೆ- 'ಸಾವು ನಮ್ಮಿಬ್ಬರನ್ನು ಬೇರ್ಪಡಿಸುವ ತನಕ ನಿನ್ನನ್ನು ದಿನವೂ ಎತ್ತಿಕೊಂಡು ಹೋಗ್ತಾ ಇರ್ತೀನಿ...! ಹ್ಯಾಪಿ ವ್ಯಾಲೆಂಟೈನ್ಸ್ ಡೇ ಗ್ರೀಟಿಂಗ್ಸ್ ಎಂದು ಬರೆದು ತುಂಬ ಅವಸರದಲ್ಲಿ ಬೈಕ್ ಹತ್ತಿ ಶರವೇಗದಲ್ಲಿ ಮನೆ ತಲುಪಿದ.
ಮನೆಯ ಮುಂದೆ ಜನರಿದ್ದರು. ಇವನನ್ನು ಕಂಡವರೇ ಛಕ್ಕನೆ ದಾರಿ ಬಿಟ್ಟರು. ಏನೋ ಅಪಶಕುನ ಅನ್ನಿಸಿ ವಿನಾಯಕ ನಡುಗುತ್ತಾ ಹಾಲ್ಗೆ ಬಂದ. ಅಲ್ಲಿದ್ದ ದಿವಾನ್ನ ಮೇಲೆ ಅವನ ಹೆಂಡತಿ ಮಲಗಿದ್ದಳು. ಅವಳ ಅಂಗೈಲಿ ಒಂದು ಕಾಗದವಿತ್ತು. ವಿನಾಯಕ ನಡುಗುತ್ತಲೇ ಅದನ್ನು ಬಿಡಿಸಿದ. ಆಕೆ ಹೀಗೆ ಬರೆದಿದ್ದಳು: 'ರೀ, ಒಂದು ವಿಷಯ ಗೊತ್ತಾ? ನನಗೆ ಎದೆನೋವು ಶುರುವಾದದ್ದು ಒಂದು ವರ್ಷದ ಹಿಂದೆ. ಮೊದಲು ನಾನು ಅದನ್ನು ನಿರ್ಲಕ್ಷಿಸಿದೆ. ಆರು ತಿಂಗಳ ನಂತರ ನೋವು ವಿಪರೀತ ಆಯ್ತು. ನಿಮ್ಮೊಂದಿಗೆ ಹೇಳೋಣ ಅಂದ್ರೆ ಮಾತಿಗೆ ಮೊದಲೇ ನೀವು ಸಿಡುಕ್ತಾ ಇದ್ರಿ. ಮುಟ್ಟಲು ಬಂದ್ರೆ  ದೂರ ಓಡ್ತೀಯಲ್ಲ, ನಿನ್ನಿಂದ ಏನು ಸುಖ ಅಂತ ಬೈತಿದ್ರಿ. ಹಾಗಾಗಿ ನಾನು ಏನೂ ಹೇಳದೇ ಉಳಿದೆ. ಆರೇಳು ತಿಂಗಳ ನಂತರ ಡಾಕ್ಟರ್ ಹತ್ತಿರ ಹೋದರೆ-'ಇದು ಸ್ತನ ಕ್ಯಾನ್ಸರ್ ಕಣಮ್ಮಾ. ತುಂಬ ತಡವಾಗಿ ಆಸ್ಪತ್ರೆಗೆ ಬಂದಿದೀರ. ಇರಲಿ. ನಮ್ಮ ಪ್ರಯತ್ನ ಮಾಡ್ತೇವೆ ಅಂದ್ರು. ನನ್ನ ಸಂಕಟ ಕೇಳುವವರೇ ಇರಲಿಲ್ಲ. ಈ ಸಂದರ್ಭದಲ್ಲಿ ಮಗನಿಗೆ ವಿಷಯ ಗೊತ್ತಾದ್ರೆ ಅವನ ದೃಷ್ಟೀಲಿ ನೀವು ವಿಲನ್ ಆಗಿ ಬಿಡುವ ಸಾಧ್ಯತೆ ಇತ್ತು. ಹೀಗೆ ಆಗದಿರಲಿ ಅಂತಾನೇ ಒಂದಿಡೀ ತಿಂಗಳು ನಾಟಕ ಆಡೋಣ ಅಂದದ್ದು. ಆಗಲೂ ಅಷ್ಟೆ: ನಂಗೆ ಗಂಟೆಗೊಮ್ಮೆ ಕುಸಿದು ಬೀಳುವ ಹಾಗೆ ಆಗ್ತಿತ್ತು. ನಾನು ಯಾವಾಗ ಬೇಕಾದ್ರೂ ಸಾಯಬಹುದು ಅನ್ನಿಸ್ತಿತ್ತು. ಹಾಗಾಗಿ ಈ ಪತ್ರವನ್ನು ಜತೆಗಿಟ್ಟುಕೊಂಡೇ ಬದುಕ್ತಾ ಇದೀನಿ. ಮಗೂನ ಹುಶಾರಾಗಿ ನೋಡಿಕೊಳ್ಳಿ. ನಿಮಗೆ ಒಳ್ಳೆಯದಾಗಲಿ. ಪ್ಲೀಸ್, ನನ್ನನ್ನು ಕ್ಷಮಿಸಿಬಿಡಿ...
ಪತ್ರ ಓದಿ ಮುಗಿಸುತ್ತಿದ್ದಂತೆಯೇ ವಿನಾಯಕನಿಗೆ ದುಃಖ ಒತ್ತರಿಸಿಕೊಂಡು ಬಂತು. ಆತ, ಮಗನನ್ನು ಬಾಚಿ ತಬ್ಬಿಕೊಂಡು ಕುಸಿದು ಕುಳಿತ...
ಅಂದಹಾಗೆ, ಇದು- ಇಂಟರ್ನೆಟ್ನ ಬರಹವೊಂದರ ಭಾವಾನುವಾದ.



- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com