'ಇಂದೇನೊ ಪ್ರಕರಣ ವಾಪಸು ತೆಗೆದುಕೊಳ್ಳುವಿರಿ, ನಾಳೆ ಪದ್ಮಭೂಷಣ ಕೊಡುವಿರಾ...' ಹೀಗೆಂದು ಅಲಹಬಾದ್ ನ್ಯಾಯಾಲಯವು ಉತ್ತರಪ್ರದೇಶ ಮುಖ್ಯಮಂತ್ರಿಗೆ ಕೇಳಿತ್ತು. ಅದಿನ್ನು ಹಸಿರಾಗಿಯೇ ಇದೆ. ಅಖಿಲೇಶ್ ಯಾದವ್ ಎಂಬ ಬುದ್ಧಿವಂತ ಜಾತ್ಯಾತೀತ(!)ವಾದಿಗೆ ನ್ಯಾಯಾಲಯ ಹಾಕಿದ್ದ ಛೀಮಾರಿ ಇದು. 2006ರ ವಾರಾಣಸಿ ಸರಣಿ ಬಾಂಬ್ ಸ್ಫೋಟದಲ್ಲಿ ಬಂಧಿತರಾಗಿದ್ದ ವಲಿಉಲ್ಲಾಹ್ ಮತ್ತು ಶಮೀಮ್ ವಿರುದ್ಧದ ಪ್ರಕರಣಗಳನ್ನು ವಾಪಸ್ಸು ತೆಗೆದುಕೊಳ್ಳುವುದಾಗಿ ಹೇಳಿ, ದೇಶದ್ರೋಹಿಗಳ ಪರ ವಕಾಲತ್ತು ವಹಿಸುವವರಂತೆ ವರ್ತಿಸಿದ್ದರ ಪರಿಣಾಮವಿದು.
ತುಷ್ಟೀಕರಣದ ಗುಂಗಿನಲ್ಲಿ ಅಖಿಲೇಶ್ ಯಾದವ್ ಈ ಹೆಜ್ಜೆ ಇಡಲು ಕಾರಣ ಬಾಂಬಿಟ್ಟವರು ಅಲ್ಪಸಂಖ್ಯಾತರು ಎಂಬುದಷ್ಟೇ. ಬಾಂಬಿಟ್ಟವರೂ ಭಯೋತ್ಪಾದಕರಲ್ಲ, ನೂರಾರು ಅಮಾಯಕರ ಜೀವ ತೆಗೆದವರೂ ಭಯೋತ್ಪಾದಕರಲ್ಲ ಅವರಿಂದೇನೂ ಅಪಾಯವಿಲ್ಲ ಎಂಬುದೆಲ್ಲಾ ನಿಮ್ಮ ಸಮರ್ಥನೆಯಾದರೆ, ನಿಮಗೇಕೆ ಜೀವದ ಭಯ? ಅದೂ 120 ಕೋಟಿ ರೂಪಾಯಿ ಖರ್ಚು ಮಾಡಿ ಸುಸಜ್ಜಿತ ಭದ್ರತಾ ಬೇಲಿ ನಿರ್ಮಿಸಿಕೊಳ್ಳುವ ದರ್ದು ನಿಮ್ಮ ಸರ್ಕಾರಕ್ಕೇಕೆ?
ಮತಬ್ಯಾಂಕ್ ರಾಜಕಾರಣಕ್ಕಾಗಿ ಭಯೋತ್ಪಾದಕರನ್ನೇ ಸಮರ್ಥಿಸಿಕೊಳ್ಳುವವರಂತೆ ವರ್ತಿಸುತ್ತಾರೆ. ಇದರ ಜೊತೆಗೆ ಭಾರೀ ಭದ್ರತೆಯಲ್ಲಿ ದಿನಕಳೆಯುತ್ತಾರೆ. ಇಷ್ಟೆಲ್ಲಾ ಜೀವಭಯವನ್ನು ಇವರುಗಳಿಗೆ ತಂದಿತ್ತಿರುವವರಾದರೂ ಯಾರು? ಭಾರತೀಯ ಹಿಂದುವೇ, ಭಾರತೀಯ ಮುಸ್ಲಿಂರೇ, ಭಾರತೀಯ ಕ್ರಿಶ್ಚಿಯನ್ನರೇ? ಇವರ್ಯಾರು ಅಲ್ಲ ತಾನೆ? ಹೀಗಿದ್ದ ಮೇಲೂ ದೇಶವಾಸಿಗಳಾದ ಹಿಂದು-ಮುಸ್ಲಿಂರನ್ನೇಕೆ ದೂರವಿಡಲು ಪ್ರಯತ್ನಿಸುತ್ತಿದ್ದಾರೆ?
ಇಂದಿರಾಗಾಂಧಿ ಹತರಾದದ್ದು ಖಲಿಸ್ಥಾನವೆಂಬ ಭೂತಕ್ಕೆ ಬಲಿಯಾಗಿ. ರಾಜೀವ್ ಗಾಂಧಿ ಜೀವ ತೆದ್ದದ್ದು ಮತ್ತದೆ ಎಲ್.ಟಿ.ಟಿ.ಇ. ಕಾರಣಕ್ಕಾಗಿ. ಈ ಎಲ್ಲಿಯೂ ಸಾಮಾನ್ಯ ಭಾರತೀಯನಿಂದ ಜೀವಕ್ಕೆ ಅಪಾಯವಾಗುವಂತಹ ಘಟನೆಗಳು ಜರುಗಿಲ್ಲ. ಆದರೆ ಅದೇ ಭಯೋತ್ಪಾದನೆಯೆಂಬ ಭೂತಕ್ಕೆ ಬಲಿಯಾದವರು ಸಾವಿರಾರು ಅಮಾಯಕರು. ಇದಕ್ಕೆಲ್ಲಾ ಕಾರಣ ಧರ್ಮದ ಅಫೀಮು ಹೊತ್ತು ಬಾಂಬಿಟ್ಟು ಹೋಗುವ ಮತಾಂಧರೇ ಹೊರತು, ಸಾಮಾನ್ಯ ಜನರಲ್ಲ. ಹೀಗಿದ್ದ ಮೇಲೂ ಅದೇ ಭಯೋತ್ಪಾದಕರನ್ನು ಓಲೈಸಿಕೊಳ್ಳುವ ರಾಜಕಾರಣ ನಡೆಯುತ್ತಲೇ ಇದೆ. ಆಪಾದಿತ ಉಗ್ರರ ಪ್ರಕರಣ ವಾಪಸು ತೆಗೆದುಕೊಳ್ಳುವ ಇಚ್ಛೆಯ ಅಖಿಲೇಶ್ ನಡೆ, ವಾಸ್ತವವನ್ನು ಜಗತ್ತಿಗೆ ತೋರಲು ಹೋದ ವಿಶ್ವರೂಪಂ ಚಿತ್ರವನ್ನು ನಿಷೇಧಿಸುವ ಜಯಲಲಿತಾರ ನಿಲುವುಗಳು ಭಯೋತ್ಪಾದಕರಿಗೆ ಎಂಥ ಸಂದೇಶ ರವಾನಿಸುತ್ತದೆ ಎನ್ನುವ ಕಿಂಚಿತ್ತು ಅರಿವು ಬೇಡವೇ?
ಮುಸಲ್ಮಾನರನ್ನು ರೊಚ್ಚಿಗೇಳಿಸುತ್ತದೆಂದು ವಿಶ್ವರೂಪ ಸಿನಿಮಾವನ್ನು ನಿಷೇಧಿಸುವವರಿಗೆ, ಓವೈಸಿ ಕೊಚ್ಚಿಕೊಲ್ಲುವ ಮಾತನಾಡಿದಾಗ ಮೌನ ವಹಿಸುವ ನಕಲಿ ಜಾತ್ಯಾತೀತವಾದಿಗಳಿಗೆ ಮತಾಂಧ ಭಯೋತ್ಪಾದಕರು ನಡೆಸಿದ ದಾಳಿಗೆ ತುತ್ತಾದ ಕುಟುಂಬದವರ ರೋದನವನ್ನು ಆಲಿಸುವ ನೈತಿಕತೆ ಇದೆಯೇ?
ಅಫ್ಜಲ್ ಗುರುವಿನ ಹೆಂಡತಿ ಮಕ್ಕಳ ಬಗ್ಗೆಯೇ ಹೆಚ್ಚು ಕಾಳಜಿ ತೋರುತ್ತಿರುವವರಿಗೆ ಅಂದು ಹತರಾದ ಪೊಲೀಸರ ಕುಟುಂಬಗಳು ಕಾಣದಿರುವುದೇ ವಿಪರ್ಯಾಸ. ನರಭಕ್ಷಕನೊಬ್ಬ ಸತ್ತು ಮಲಗಿದ ಮೇಲೂ ಅಸ್ತಿತ್ವ ಮತ್ತು ಜನಪ್ರಿಯತೆಗಾಗಿ ಬೆನ್ನುವ ಬೀಳುವವರ ನಡ ಮುರಿಯಬೇಕಾದ ಅವಶ್ಯಕತೆ ಇದೆ.
-ಗೋಪಾಲಕೃಷ್ಣ ಕೆ. ಸಿ.