ಕಾಮಾಲೆ ಕಾಟ್ಜು ಕೆಳಗಿಳಿಯಲಿ!

Updated on: 

ಕಳೆದ ವಾರ, ಸುಪ್ರೀಂ ಕೋರ್ಟಿನ ಮಾಜಿ ನ್ಯಾಯ ಮೂರ್ತಿ ಮತ್ತು ಪ್ರೆಸ್ ಕೌನ್ಸಿಲ್ನ ಹಾಲಿ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಅವರ ಕ್ರೋಧಕ್ಕೆ ಎರಡು ಕಾಂಗ್ರೆಸ್ಸೇತರ ಸರ್ಕಾರಗಳು ಗುರಿಯಾದವು. ಬಿಹಾರದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಹರಣವಾಗುತ್ತಿದೆ ಎಂದು ಪ್ರೆಸ್ ಕೌನ್ಸಿಲ್ನ ಪರವಾಗಿ ಬಿಡುಗಡೆ ಮಾಡಿದ ಕರಡು ವರದಿಯಲ್ಲಿ ಅವರು ದೂಷಿಸಿದ್ದಾರೆ. ಇದಾದ ನಂತರ 'ದಿ ಹಿಂದೂ' ಪತ್ರಿಕೆಗೆ ಬರೆದ ಲೇಖನದಲ್ಲಿ ಗುಜರಾತ್ ಸರ್ಕಾರವನ್ನು, ಆ ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮೇಲೆ ಕೆಂಗಣ್ಣು ಬೀರಿದ್ದಾರೆ.
ತಮ್ಮ ಪಾಂಡಿತ್ಯದಿಂದಾಗಿ ಕಾಟ್ಜು ಹೆಸರು ಮಾಡಿದ್ದಾರಾದರೂ ಅವರೆಂದೂ ಒಬ್ಬ ನ್ಯಾಯಾಧೀಶನ ಸಂಪ್ರದಾಯವನ್ನು ಪಾಲಿಸಿದವರಲ್ಲ. ನ್ಯಾಯಾಧೀಶರಾಗಿದ್ದ ಕಾಲದಲ್ಲಿ ಮತ್ತು ಆನಂತರದಲ್ಲೂ ಕೂಡ ಅವರ ಉಸುರಾಟಗಳೆಲ್ಲ ಬಾಲಿಶತನದಿಂದಲೇ ಕೂಡಿವೆ. ಹುದ್ದೆಗೆ ತಕ್ಕಂತಹ ಹೇಳಿಕೆ ಅವರ ಬಾಯಿಂದ ಎಂದೂ ಹೊರಬಿದ್ದ ಉದಾಹರಣೆಗಳಿಲ್ಲ. ಪಶ್ಚಿಮ ಬಂಗಾಳ, ಬಿಹಾರ ಅಥವಾ ಗುಜರಾತ್ನಂತಹ ಕಾಂಗ್ರೆಸ್ಸೇತರ ಸರ್ಕಾರಗಳ ಮೇಲೆ ಅವರ ಪ್ರಹಾರದ ವೈಖರಿ, ನಿವೃತ್ತಿಯ ನಂತರ ತಮಗೆ ಕೆಲಸ ಕೊಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಪೂಸಿ ಹೊಡೆಯುವ ಶೈಲಿಯಲ್ಲೇ ಇರುತ್ತದೆ.
ನಿವೃತ್ತಿಯ ನಂತರ ಸರ್ಕಾರಿ ಹುದ್ದೆಗಳಿಗೆ ಬಂದು ಕೂಡುವ ಅವಕಾಶ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನ ನ್ಯಾಯಾಧೀಶರುಗಳಿಗೆ ಇರಬಾರದು ಎಂಬುದು ಮೊದಲಿನಿಂದಲೂ ನನ್ನ ಸ್ಪಷ್ಟ ನಿಲುವು. ಕೆಲವು ನ್ಯಾಯಾಧೀಶರುಗಳಂತೂ ನಿವೃತ್ತಿಯ ನಂತರದ ಹುದ್ದೆಯನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ವರ್ತನೆಯನ್ನು ರೂಪಿಸಿಕೊಂಡಿರುತ್ತಾರೆ. ಆದಾಗ್ಯೂ ನಮ್ಮ ದೇಶದಲ್ಲಿನ ಹಲವಾರು ನ್ಯಾಯ ಮಂಡಲಿಗಳು ಮತ್ತು ಅರೆ ನ್ಯಾಯಾಂಗ ನಿಯೋಜನೆಗಳಲ್ಲೆಲ್ಲ ನಿವೃತ್ತ ನ್ಯಾಯಾಧೀಶರುಗಳೇ ತುಂಬಿಕೊಂಡಿದ್ದಾರೆ. ಇನ್ನು ಪ್ರೆಸ್ ಕೌನ್ಸಿಲ್ನ ಮುಖ್ಯಸ್ಥ ಸ್ಥಾನವಂತೂ ಮೊದಲಿನಿಂದಲೂ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರುಗಳಿಗೇ ಮೀಸಲಾಗಿಬಿಟ್ಟಿದೆ.
ಆ ಸ್ಥಾನದಲ್ಲಿರುವವರು ಮಾಧ್ಯಮ ಸ್ವಾತಂತ್ರ್ಯ, ಆ ಸ್ವಾತಂತ್ರ್ಯದ ಸಂಭಾವ್ಯ ಅತಿಕ್ರಮಣದ ಮೇಲೆ ನಿಗಾವಹಿಸಬೇಕು ಮತ್ತು ವರದಿಗಳಲ್ಲಿನ ವೃತ್ತಿಪರತೆಯ ಕೊರತೆಗೆ ಸಂಬಂಧಿಸಿದ ದೂರುಗಳನ್ನು ಆಲಿಸಬೇಕು. ಅಂದರೆ ಅದೊಂದು ಶಾಸನಬದ್ಧ ವೃತ್ತಿ. ಆ ಸ್ಥಾನದಲ್ಲಿರುವವರು ನ್ಯಾಯಯುತವಾದ, ನಿಷ್ಪಕ್ಷಪಾತವಾದ ಮತ್ತು ರಾಜಕೀಯವಾಗಿ ಯಾವೊಂದು ಪಕ್ಷದ ಕಡೆಗೂ ವಾಲದ ಗುಣಗಳನ್ನು ಹೊಂದಿರಬೇಕು. ಅಲ್ಲದೆ ಅಧಿಕಾರದಲ್ಲಿರುವ/ಇಲ್ಲದಿರುವ ನ್ಯಾಯಾಧೀಶನೂ ಕೂಡ ಸಮಚಿತ್ತತೆ ಮತ್ತು ಘನತೆಯನ್ನು ಪ್ರದರ್ಶಿಸಬೇಕು ಎಂಬುದು ಎಲ್ಲರಿಗೂ ತಿಳಿದಿರುವಂಥದ್ದೆ. ವಿಚಿತ್ರವಾಗಿ ವರ್ತಿಸುವವರು, ಒರಟರು, ಅಹಂಕಾರಿಗಳು ಆ ಹುದ್ದೆಗೆ ಅರ್ಹರಲ್ಲ. ನ್ಯಾಯಾಧೀಶನೊಬ್ಬ ತೀರ್ಪು ನೀಡಿದಾಗ ದೂಷಿಸುವಂತಿಲ್ಲ. ದೂಷಿಸಿದರೂ ಆ ಮಾತುಗಳಲ್ಲಿ ಸಭ್ಯತೆ ಇರಬೇಕು. ಅದು ಎಂದಿಗೂ ವ್ಯಕ್ತಿಗತವಾಗಬಾರದು. ನ್ಯಾಯಾಂಗ ಅಥವಾ ಅರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ನ್ಯಾಯಾಧೀಶ ಯಾವುದೇ ರಾಜಕೀಯ ಪ್ರಹಸನಗಳಿಗೆ ಪಕ್ಕಾಗದಂತೆ ವರ್ತಿಸಬೇಕು. ಒಂದು ವೇಳೆ ಆತ ರಾಜಕೀಯ ಚಟುವಟಿಕೆಗಳಲ್ಲಿ ಅಥವಾ ಚರ್ಚೆಗಳಲ್ಲಿ ಭಾಗವಹಿಸಿದ್ದೇ ಆದರೆ, ತನ್ನ ಸ್ಥಾನದ ಘನತೆಯನ್ನು ತಲೆಯಲ್ಲಿಟ್ಟುಕೊಂಡೇ ಮುಂದುವರಿಯಬೇಕು. ಇನ್ನು ರಾಜಕಾರಣಿಗಳಂತೆಯೇ ನ್ಯಾಯಾಧೀಶನೊಬ್ಬನ ವರ್ತನೆಯನ್ನೂ ಪರಿಶೀಲನೆಗೆ ಮತ್ತು ಟೀಕೆಗೊಳಪಡಿಸುವಂತಾಗಬೇಕು.
ಆದರೆ ಜಸ್ಟೀಸ್ ಮಾರ್ಕಂಡೇಯ ಕಾಟ್ಜು ಅವರಲ್ಲಂತೂ ಒಬ್ಬ ನ್ಯಾಯಾಧೀಶ(ನಿವೃತ್ತ ಅಥವಾ ಸ್ಥಾನದಲ್ಲಿರುವ)ನಿಗೆ ಇರಬೇಕಾದ ಯಾವ ಗುಣಗಳೂ ಇಲ್ಲ. ಯಾರನ್ನು ಟಾರ್ಗೆಟ್ ಮಾಡಬೇಕು ಎಂಬುದನ್ನು ಅವರು ರಾಜಕೀಯ ಲೆಕ್ಕಾಚಾರದ ಮೇಲೆಯೇ ನಿಶ್ಚಯಿಸುತ್ತಾರೆ. ನಿವೃತ್ತಿಯ ನಂತರ ತಮ್ಮ ಕೈ ಹಿಡಿದವರ ವಿಷಯ ಬಂದಾಗ ಮಾತ್ರ ಕಾಟ್ಜು ಅವರದ್ದು ಅತ್ಯಂತ ಮೃಧು ಧೋರಣೆ. ನಾಯಕರ ರೂಪಣೆಯಲ್ಲಿ ಕುಟುಂಬಕ್ಕಿಂತ ಅರ್ಹತೆಯೇ ಪ್ರಮುಖ ಮಾನದಂಡವಾಗಬೇಕು ಎಂದು ಅವರು ವಾದಿಸಿದ್ದನ್ನು ನಾನು ಇದುವರೆಗೂ ಕೇಳಿಲ್ಲ. ಭಾರತವನ್ನು ರಾಜವಂಶದ ಆಡಳಿತಕ್ಕೆ ಒಳಗಾಗಿಸಬೇಕು ಎಂದು ಪ್ರಯತ್ನ ಪಡುತ್ತಿರುವವರಿಗೆ ನಿಸ್ಸಂಶಯವಾಗಿಯೂ ಅಂತಹ ಹೇಳಿಕೆ ಮುಜುಗರಕ್ಕೀಡುಮಾಡುತ್ತವೆ ಎನ್ನುವುದು ಅವರಿಗೂ ಗೊತ್ತು. ಕಾಂಗ್ರೆಸ್ಸೇತರ ಸರ್ಕಾರಗಳ ವಿಷಯ ಬಂದಾಗ ಜಸ್ಟೀಸ್ ಕಾಟ್ಜುರೊಳಗಿರುವ ಚಳವಳಿಕಾರ ಎದ್ದು ನಿಂತು ಗರ್ಜಿಸುತ್ತಾನೆ, ಆದರೆ 2ಜಿ ಸ್ಪೆಕ್ಟ್ರಮ್ ಹಗರಣದಿಂದ ಹಿಡಿದು ಇತ್ತೀಚಿನ ಕಲ್ಲಿದ್ದಲು ಹಗರಣದ ವಿಷಯ ಬಂದಾಗ ಮಾತ್ರ ಆ ಯೋಧ ಎದ್ದು ಓಡಿ ಹೋಗುತ್ತಾನೆ.
ಬಿಹಾರದ ಅಭಿವೃದ್ಧಿ ಮೆಚ್ಚಿ ಎಲ್ಲರೂ ನಿತೀಶ್ರ ಬೆನ್ನು ತಟ್ಟುತ್ತಿದ್ದರೆ, ಕಾಟ್ಜುಗೆ ಮಾತ್ರ ನಿತೀಶ್ ಮೇಲೆ ಭಾರೀ ಅಸಮಾಧಾನ. ಬಿಹಾರ ಸರ್ಕಾರ ಮಾಧ್ಯಮ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದೆ ಎಂದು ದೂರುತ್ತಾರೆ.
ಇನ್ನು 'ದಿ ಹಿಂದೂ' ಪತ್ರಿಕೆಯಲ್ಲಿ ಅವರು ಮೋದಿಯವರ ಕುರಿತಾಗಿ ಬರೆದಿರುವ ಲೇಖನದಲ್ಲಂತೂ ವಾಸ್ತವಾಂಶಗಳಿಗಿಂತ ವ್ಯಕ್ತಿಗತ ದ್ವೇಷವೇ ಹೆಚ್ಚು ಹೊಗೆಯಾಡಿದೆ. ಸಾಬರಮತಿ ಎಕ್ಸ್ಪ್ರೆಸ್ ದಹನ ಪ್ರಕರಣದ ಕುರಿತು ಬರೆಯುತ್ತಾ ಸ್ಪಷ್ಟವಾಗಿ ಅವರು ತಮ್ಮ ಪಕ್ಷಪಾತೀ ಗುಣವನ್ನು ಬಹಿರಂಗ ಮಾಡಿಕೊಂಡಿದ್ದಾರೆ: 'ಗೋಧ್ರಾ ಪ್ರಕರಣದಲ್ಲಿ ಇನ್ನೂ ಏನೋ ನಿಗೂಢತೆಯಿದೆ' ಎಂದು ಹೇಳಿ ನೂರಾರು ಜನರ ಸಾವಿಗೆ ಕಾರಣವಾಗಿ ಜೈಲಿನಲ್ಲಿರುವವರ ಪರ ವಹಿಸುತ್ತಾರವರು. ಈಗ ಜೈಲಿನಲ್ಲಿರುವವರನ್ನು ದೋಷಿಯೆಂದು ವಿಚಾರಣಾ ನ್ಯಾಯಾಲಯವೇ ಹೇಳಿದೆ. ಅಂಥದ್ದರಲ್ಲಿ ನಿವೃತ್ತ ನ್ಯಾಯಾಧೀಶರಾದ ಮತ್ತು ಈಗ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಕಾಟ್ಜು, ವಿಚಾರಣಾ ನ್ಯಾಯಾಲಯದ ತೀರ್ಪನ್ನೇ ಕಡೆಗಣಿಸುತ್ತಾರೆ ಎಂದರೆ ಏನರ್ಥ?
ಗೋಧ್ರಾ ಹತ್ಯಾಕಾಂಡದಲ್ಲಿ ಮೋದಿಯವರನ್ನು ಹೊಣೆಗಾರನೆಂದು ಇದುವರೆಗೂ ಯಾವ ನ್ಯಾಯಿಕ ಪ್ರಾಧಿಕಾರವೂ ಹೇಳಿಲ್ಲ. ಆದರೆ ಕಾಟ್ಜು ಅವರು ಈ ವಿಷಯದಲ್ಲಿ ಮಾತನಾಡಲು ಯಾವುದೋ ಬಾಜಾರಿನ ಪುಕಾರನ್ನು ಬಳಸಿಕೊಳ್ಳುತ್ತಾರೆ! 'ನ್ಯಾಯಾಂಗದ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲವಾದರೂ, 2002ರ ಪ್ರಕರಣದಲ್ಲಿ ಮೋದಿಯವರ ಕೈವಾಡವಿಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ' ಎಂದು ಹೇಳುತ್ತಾರೆ.
ಇಷ್ಟಕ್ಕೇ ನಿಲ್ಲದೆ, ಬೃಹತ್ ಉದ್ದಿಮೆಗಳಿಗೆ ಕಡಿಮೆ ದರದಲ್ಲಿ ವಿದ್ಯುತ್ ಮತ್ತು ಜಾಗ ಕೊಡುವುದನ್ನು ನಾನು ಅಭಿವೃದ್ಧಿಯೆಂದು ಕರೆಯಲಾರೆ' ಎಂದು ಗುಜರಾತ್ನ ಅಭಿವೃದ್ಧಿಯನ್ನೂ ಕಡೆಗಣಿಸುತ್ತಾರೆ. ತಮ್ಮ ಮಾತಿಗೆ ಪೂರಕವಾದ, ಚಾಣಾಕ್ಷತನದಿಂದ ಆಯ್ದ ಕೆಲ ಅಂಕಿ ಅಂಶಗಳನ್ನು ಅವರು ನಮ್ಮ ಮುಂದಿಡುತ್ತಾರೆ.
ಪ್ರೊಫೆಸರ್ ಜಗದೀಶ್ ಭಗವತಿ ಮತ್ತು ಡಾ. ಅರವಿಂದ್ ಪಂಗರಿಯಾ ಅವರು ಇತ್ತೀಚೆಗೆ ಪ್ರಕಟ ಮಾಡಿದ ವರದಿಯಲ್ಲಿ ಗುಜರಾತ್ನ ಏಳಿಗೆಯನ್ನು ಕೊಂಡಾಡಿದ್ದಾರೆ. 1951ರಲ್ಲಿ 22 ಪ್ರತಿಶತದಷ್ಟಿದ್ದ ಸಾಕ್ಷರತಾ ಪ್ರಮಾಣ 2001ರ ವೇಳೆಗೆ 69 ಪ್ರತಿಶತಕ್ಕೆ ಏರಿ, 2011ರ ವೇಳೆಗೆ 79 ಪ್ರತಿಶತಕ್ಕೆ ಬಂದು ನಿಂತಿದೆ.  ಇನ್ನು 1971ರಲ್ಲಿ ಶಿಶು ಮರಣ ಪ್ರಮಾಣ ಸಾವಿರಕ್ಕೆ 144ರಷ್ಟಿದ್ದರೆ, 2001ಕ್ಕೆ ಆ ಸಂಖ್ಯೆ 60ಕ್ಕೆ ತಲುಪಿ, 2011ರ ವೇಳೆಗೆ 41ಕ್ಕೆ ಬಂದು ನಿಂತಿದೆ ಎನ್ನುತ್ತದೆ ಆ ವರದಿ. ಆದರೆ ಕಾಟ್ಜುರ ಕಾಮಾಲೆ ಕಣ್ಣಿಗೆ ಈ ಅಂಕಿ ಅಂಶಗಳು ಬೀಳುತ್ತಲೇ ಇಲ್ಲ.
ಕಾಟ್ಜು ಕೊನೆಗೆ ರಾಜಕೀಯ ಬೇಡಿಕೆಯೊಂದನ್ನಿಡುತ್ತಾ ತಮ್ಮ ಲೇಖನಕ್ಕೆ ಇತಿಶ್ರೀ ಹಾಡುತ್ತಾರೆ. 'ಭಾರತೀಯರೆಲ್ಲರಿಗೂ ನಾನು ಕೇಳಿಕೊಳ್ಳುವುದಿಷ್ಟೆ. ದೇಶದ ಭವಿಷ್ಯದ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ನಾನು ಇದುವರೆಗೂ ಹೇಳಿದ್ದನ್ನೆಲ್ಲ ಗಮನದಲ್ಲಿಟ್ಟುಕೊಂಡು ಎಲ್ಲರೂ ಮುನ್ನಡೆಯಬೇಕು. ಇಲ್ಲದಿದ್ದರೆ 1933 ಜರ್ಮನ್ ಜನತೆ ಮಾಡಿದಂತಹ ತಪ್ಪನ್ನೇ ನಾವೂ ಮಾಡಿದಂತಾಗುತ್ತದೆ!'
ಕಾಟ್ಜುರಿಗೆ ಅವರದ್ದೇ ಆದ ರಾಜಕೀಯ ದೃಷ್ಟಿಕೋನವಿರುವುದಕ್ಕೆ ನನ್ನ ತಕರಾರಿಲ್ಲ, ಅದು ಅವರ ಹಕ್ಕೂ ಹೌದು. ಆದರೆ ಪ್ರೆಸ್ ಕೌನ್ಸಿಲ್ನ ಮುಖ್ಯಸ್ಥ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿ ಒಂದು ರಾಜಕೀಯ ಪಕ್ಷದ ವಕ್ತಾರನಂತೆ ಮಾತನಾಡುವುದು ತರವೇ? ಖುದ್ದು ಕಾಂಗ್ರೆಸ್ ಪಕ್ಷಕ್ಕಿಂತಲೂ ಹೆಚ್ಚು 'ಕಾಂಗ್ರೆಸ್ ಗುಣ' ಅವರಲ್ಲಿ ಕಾಣುತ್ತಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ನ ನ್ಯಾಯಾಧೀಶ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿಯೇನಾದರೂ ಇಂತಹ ಹೇಳಿಕೆ ನೀಡಿದ್ದರೆ, ಆತ ಮಹಾಭಿಯೋಗಕ್ಕೆ ಒಳಗಾಗುತ್ತಾನೆ. ಸರ್ಕಾರಿ ಅಧಿಕಾರಿಯೊಬ್ಬ ಈ ರೀತಿ ವರ್ತಿಸಿದ್ದರೆ ಕೂಡಲೇ ಆತನನ್ನು ಕೆಲಸದಿಂದ ಕಿತ್ತೆಸೆಯಲಾಗುತ್ತದೆ. ಹಾಗಿದ್ದರೆ ಅರೆ ನ್ಯಾಯಾಂಗ ಸಂಸ್ಥೆಯೊಂದರ ಚುಕ್ಕಾಣಿ ಹಿಡಿದಿರುವ ನಿವೃತ್ತ ನ್ಯಾಯಾಧೀಶನನ್ನು ಏನು ಮಾಡಬೇಕು? ರಾಜಕೀಯ ನಡೆಸಲೇಬೇಕು ಎಂಬುದೇ ಕಾಟ್ಜುರ ಇರಾದೆಯಾಗಿದ್ದರೆ ಕೂಡಲೇ ಪ್ರೆಸ್ ಕೌನ್ಸಿಲ್ನ ಮುಖ್ಯಸ್ಥ ಸ್ಥಾನದಿಂದ ಕೆಳಕ್ಕಿಳಿಯಬೇಕು ಅಥವಾ ಅವರನ್ನು ಕಿತ್ತೆಸೆಯಬೇಕು.

- ಅರುಣ್ ಜೇಟ್ಲಿ
ಬಿಜೆಪಿ ಮುಖಂಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com