ಆ ಚಿಕ್ಕ ತಪ್ಪು ನಡೆದಿರದಿದ್ದರೆ?

Updated on: 

ಸರಿಯಾಗಿ ಒಂದು ವರ್ಷ, ಒಂದು ತಿಂಗಳ ಹಿಂದೆ ಮಹಾರಾಷ್ಟ್ರ ಎಟಿಎಸ್ ಚಿಕ್ಕ ತಪ್ಪೆಸಗಿಬಿಟ್ಟಿತು. ಈ ತಪ್ಪು ಭಾರತೀಯ ರಕ್ಷಣಾ ವ್ಯವಸ್ಥೆಯನ್ನು ಇಂದಿನವರೆಗೂ ಬಹುವಾಗಿ ಕಾಡುತ್ತಿದೆ. ಯಾಸಿನ್ ಭಟ್ಕಳ್, ತಬ್ರೇಜ್ ಮತ್ತು ವಕಾಸ್ ಹೈದ್ರಾಬಾದ್ ಸ್ಫೋಟದ ಪ್ರಮುಖ ಶಂಕಿತರು. ಇವರೆಲ್ಲರೂ ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿದ್ದರು. ಇನ್ನೇನು ಪೊಲೀಸರ ಕೈಗೆ ಅವರು ಸಿಕ್ಕಿಬೀಳಬೇಕು, ಅಷ್ಟರಲ್ಲೇ ಅವರು ಎಚ್ಚೆತ್ತುಕೊಂಡು ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿಬಿಟ್ಟರು.
13/7 ಸ್ಫೋಟದ ನಂತರ ಯಾಸಿನ್, ತಬ್ರೇಜ್ ಮತ್ತು ವಕಾಸ್‌ರಿಗಾಗಿ ತೀವ್ರ ಶೋಧ ನಡೆಸಲಾಯಿತು. ಮಹಾರಾಷ್ಟ್ರ ಎಟಿಎಸ್‌ಗೆ ಇವರೆಲ್ಲರ ತಂಗುದಾಣದ ಸುಳಿವು ನೀಡಿದ್ದು ದೆಹಲಿ ಪೊಲೀಸರು.
ದಕ್ಷಿಣ ಮುಂಬೈನ ಬೈಕುಲಾದಲ್ಲಿನ ಅಪಾರ್ಟ್‌ಮೆಂಟೊಂದರಲ್ಲಿ ಈ ಮೂವರು ಬಾಡಿಗೆಗಿದ್ದರು. ಒಂದು ದಿನ ಬೈಕುಲಾದ ಜಿಮ್ ಒಂದರ ಸಮೀಪ ಕುಳಿತು ಕಾರ್ಯಾಚರಣೆಯ ಯೋಜನೆಯನ್ನು ರೂಪಿಸಿದರು. ಕಬೂತರ್ ಖಾನಾ ಮತ್ತು ಜವೇರಿ ಬಾಜಾರ್‌ನಲ್ಲಿ ದಾಳಿ ನಡೆಸಬೇಕೆಂದು ತೀರ್ಮಾನಿಸಿ, ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲೂ ಯಶಸ್ವಿಯಾದರು.
ದಾಳಿ ನಡೆಸಿದ 15 ದಿನದ ನಂತರ, ಅಪಾರ್ಟ್‌ಮೆಂಟ್‌ಗೆ ಕೊಟ್ಟ ಭದ್ರತಾ ಠೇವಣಿಯನ್ನು ಹಿಂಪಡೆಯಲು ಅವರು ಬೈಕುಲಾಗೆ ಬರಲಿದ್ದಾರೆ ಎಂಬ ಮಾಹಿತಿಯನ್ನು ಮಹಾರಾಷ್ಟ್ರ ಎಟಿಎಸ್‌ಗೆ ಕೊಡಲಾಗಿತ್ತು. ನಕ್ವಿ ಎಂಬ ಮಾಹಿತಿದಾರ ಗುಪ್ತಚರ ದಳ ಮತ್ತು ದೆಹಲಿ ಪೊಲೀಸರಿಗೆ ಈ ಮಾಹಿತಿ ಒದಗಿಸಿದ್ದ.
ಈ ನಡುವೆ ಮಹಾರಾಷ್ಟ್ರ ಎಟಿಎಸ್ ನಕ್ವಿಯನ್ನೇ ಬಂಧಿಸಿಬಿಟ್ಟಿತು. ಅವನನ್ನು ಯಾಸಿನ್ ಭಟ್ಕಳ್ ಅಂದುಕೊಂಡಿತ್ತಂತೆ! ನಕ್ವಿ ಅರೆಸ್ಟ್ ಆದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿಬಿಟ್ಟಿತು. ಸುದ್ದಿ ತಿಳಿದ ಯಾಸೀನ್ ಮತ್ತು ಇನ್ನಿಬ್ಬರು, ಭದ್ರತಾ ಠೇವಣಿ ಪಡೆಯಲು ಬೈಕುಲಾಗೆ ಹೋಗಲೇ ಇಲ್ಲ.
ಈ ಘಟನೆ ನಡೆದು ಒಂದು ವರ್ಷ ಕಳೆದಿದೆ. ಪೊಲೀಸರು ಈ ಮೂವರಿಗಾಗಿ ಇನ್ನೂ ಹುಡುಕಾಟ ನಡೆಸಿದ್ದಾರೆ. ಈ ಪಲಾಯನದ ಪರಿಣಾಮ ದೇಶವನ್ನು ತೀವ್ರವಾಗಿ ಹೈರಾಣಾಗಿಸುತ್ತಿದೆ. ಈ ಮೂವರು ಪ್ರಬಲ ಮಾದರಿಗಳನ್ನು ರೂಪಿಸುತ್ತಿರುವುದಷ್ಟೇ ಅಲ್ಲ, ತಪ್ಪಿಸಿಕೊಂಡ ನಂತರ ಪುಣೆ ಮತ್ತು ಹೈದ್ರಾಬಾದ್‌ನಲ್ಲಿ ಸ್ಫೋಟ ನಡೆಸಲೂ ಸಫಲರಾಗಿದ್ದಾರೆ. ಇವರು ಭಾರತದಲ್ಲೇ ಇದ್ದಾರೆ ಮತ್ತು ಮನಸ್ಸಿಗೆ ಬಂದಾಗ ದಾಳಿ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಹೈದ್ರಾಬಾದ್ ಘಟನೆಯೇ ಸಾಕ್ಷಿ. ಇಂಡಿಯನ್ ಮುಜಾಹಿದ್ದೀನ್‌ಗೆ ಬೆನ್ನೆಲುಬಾಗಿ ನಿಂತಿರುವ ಈ ವ್ಯಕ್ತಿಗಳು ಎಲ್ಲಿಯವರೆಗೂ ಹೊರಗೆ ಅಡ್ಡಾಡಿಕೊಂಡಿರುತ್ತಾರೋ, ಅಲ್ಲಿಯವರೆಗೂ ಆ ಸಂಘಟನೆ ಬಲಿಷ್ಟವಾಗೇ ಉಳಿಯುತ್ತದೆ ಎನ್ನುತ್ತದೆ ಗುಪ್ತಚರ ದಳ.

- ವಿಕ್ಕಿ ನಂಜಪ್ಪ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com