ಕಾಟ್ಜು ಸ್ವಾತಂತ್ರ್ಯ: ಕೆಲ ಪ್ರಶ್ನೆಗಳು

Updated on: 

ಪತ್ರಿಕಾ ಮಂಡಳಿಯ (ಪ್ರೆಸ್ ಕೌನ್ಸಿಲ್‌ನ)  ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಸುದ್ದಿಯಲ್ಲಿದ್ದಾರೆ. ಮಾಧ್ಯಮಕ್ಕೆ ಬುದ್ಧಿಹೇಳಬೇಕಾದ ಉನ್ನತ ಸ್ಥಾನದಲ್ಲಿರುವ ಅವರೀಗ, ಮಾಧ್ಯಮ ದ್ವಾರಾ ಅವರಿವರಿಂದ ಬುದ್ಧಿ ಹೇಳಿಸಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾಗಿದ್ದು, ಪ್ರೆಸ್ ಕೌನ್ಸಿಲ್ ಅಧ್ಯಕ್ಷಗಿರಿಯಂತಹ 'ಅರೆ ನ್ಯಾಯಾಂಗ' ಅಧಿಕಾರ (ಕ್ವಾಸಿ ಜ್ಯುಡಿಷಿಯಲ್ ಪವರ್) ಹೊಂದಿರುವ ಅವರಿಂದ ತಮ್ಮ ನಡೆಯ ಕುರಿತಾಗಿಯೇ, 'ಇದು ಅನ್ಯಾಯವಲ್ಲ; ನ್ಯಾಯವೇ' ಎಂದು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯಕ್ಕೆ ಈಡಾಗಿದ್ದಾರೆ. ಹೀಗಾಗಬಾರದಿತ್ತು.
ಮೂರು ಕಾಂಗ್ರೆಸ್ಸೇತರ ಸರ್ಕಾರಗಳ ವಿರುದ್ಧ ಕಾಟ್ಜು ಅವರು ಮಾಡಿರುವ ಟೀಕೆಗಳು, ಗೋಧ್ರಾ, ಅಪರಾಧಿಗಳ ಪರ ಮತ್ತು ನರೇಂದ್ರ ಮೋದಿ ವಿರುದ್ಧ ಎಂದು ಯಾರೇ ಆಗಲೀ ಭಾವಿಸಬಲ್ಲಂತೆ ಅವರು ಬರೆದು ಪ್ರಕಟಿಸಿರುವ ಲೇಖನ ಭಾಗಗಳು, ಇವು ಅವರನ್ನು 'ಪದದಾತ ಕೇಂದ್ರಸರ್ಕಾರ (ಯುಪಿಎ)ದ ಪರ' ಇರುವ ವ್ಯಕ್ತಿಯೆಂದು ಯಾರೇ ಆಗಲೀ ಅನುಮಾನಿಸಲನುವಾಗುವಂತೆ ಮಾಡಿವೆ. ಸಹಜವಾಗಿಯೇ ಅರುಣ್ ಜೇಟ್ಲಿ ಅವರು ಕಾಟ್ಜು ವಿರುದ್ಧ ಹರಿಹಾಯ್ದಿದ್ದಾರೆ. ಕಾಟ್-ಜೂ ಜೇಟ್ಲಿ ಜತೆಗಿನ ಜಟಾಪಟಿಯು ದೇಶದ ಮಾಧ್ಯಮಗಳಿಗೆ ಪೊಗದಸ್ತಾದ ವಸ್ತುವಾಗಿದೆ. ಇದಿಷ್ಟೂ ಒಳ್ಳೆಯ ಬೆಳವಣಿಗೆಯೇನಲ್ಲ.
ನನ್ನ ಪ್ರಕಾರ, ನಾನಿಲ್ಲಿ ಗಂಭೀರವಾಗಿ ಚರ್ಚಿಸಬೇಕಾಗಿರುವುದು ಕಾಟ್ಜು ಹೇಳಿಕೆಗಳು ಸತ್ಯದ ಪ್ರತಿಪಾದನೆಯೋ ಅಥವಾ ಸುಳ್ಳಿನ ಪರ ವಕಾಲತ್ತೋ ಎಂಬುದನ್ನಲ್ಲ. ಕಾಟ್ಜು ಮತ್ತು ಜೈಟ್ಲಿ ಇವರಿಬ್ಬರ ಪೈಕಿ ಯಾರೂ ಸತ್ಯಸಂಧರು- ಪ್ರಾಮಾಣಿಕರು, ಯಾರು ಅಲ್ಲ, ಎಂಬುದಿಲ್ಲಿ ಮುಖ್ಯವಾಗಕೂಡದು. ದೇಶದ ಮಾಧ್ಯಮ ರಂಗದ ಮೇಲೆ ಲಕ್ಷ್ಯವಹಿಸುತ್ತಲಿದ್ದುಕೊಂಡು, ಆ ರಂಗಕ್ಕೆ ಸಂಬಂಧಿಸಿದ ದೂರುಗಳನ್ನಾಲಿಸಿ ಸೂಕ್ತ ನಿರ್ದೇಶನ ನೀಡುತ್ತ, ತನ್ಮೂಲಕ ಮಾಧ್ಯಮ ರಂಗದ ಪಕ್ಷಪಾತರಹಿತ ಹಾಗೂ ವೃತ್ತಿಪರ ವರದಿಗಾರಿಕೆಯಲ್ಲಿ ಚ್ಯುತಿಯುಂಟಾಗದಂತೆ ನೋಡಿಕೊಳ್ಳಬೇಕಾದ ಅರೆ ನ್ಯಾಯಾಂಗ ಸಂಸ್ಥೆಯ ಚುಕ್ಕಾಣಿ ಹಿಡಿದ ವ್ಯಕ್ತಿಯು, ಯಾವುದೇ ಪಕ್ಷಾಡಳಿತದ ಬಗ್ಗೆಯಾಗಲೀ, ಯಾವುದೇ ರಾಜಕೀಯ ಪಕ್ಷದ ಬಗ್ಗೆಯಾಗಲೀ, ರಾಜಕಾರಣಿಯ ಕುರಿತಾಗಲೀ, ವಿವಾದಾಸ್ಪದವಾದ ಯಾವುದೇ ಸಾಮಾಜಿಕ ಅಥವಾ ಸಾಮುದಾಯಿಕ ಘಟನೆಯ ಬಗ್ಗೆಯಾಗಲೀ, ಪರ ಅಥವಾ ವಿರೋಧ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಗೊಳಿಸಬಹುದೇ ಎಂಬ ಪ್ರಶ್ನೆಯಿಲ್ಲಿ ಮುಖ್ಯವಾಗಬೇಕು.
ಸಾರ್ವಜನಿಕವಾಗಿ ವ್ಯಕ್ತಿಗೊಳಿಸಕೂಡದು ಎಂಬುದು ನನ್ನ ನಿಲುವು. ಅದಕ್ಕೆ ಕಾರಣ ಇಂತಿದೆ. ಪ್ರೆಸ್ ಕೌನ್ಸಿಲ್ ಅಧ್ಯಕ್ಷರು ಈ ರೀತಿ ಪರ- ವಿರೋಧ ಅಭಿಪ್ರಾಯಗಳನ್ನು ಪ್ರಕಟಿಸಿದಾಗ ಸಹಜವಾಗಿಯೇ ಅದು ಮಾಧ್ಯಮ ರಂಗದ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಪ್ರೆಸ್ ಕೌನ್ಸಿಲ್ ಅಧ್ಯಕ್ಷರ ಒಲವು- ನಿಲುವುಗಳು ಬಹಿರಂಗವಾದಂತಾಗಿ, ಅದರ ಒಲವಿಗನುಗುಣವಾಗಿ ನಡೆದುಕೊಂಡರೆ ತಾವು ಸುರಕ್ಷಿತ ಮತ್ತು ತಮಗೆ ಲಾಭ ಎಂದು ಕೆಲವು ಪತ್ರಿಕೆಗಳು ಅದೇ ವೇಳೆ, ಅವರ ಒಲವಿಗೆ ವಿರುದ್ಧವಾಗಿ ಸಾಗಿ ತಮ್ಮ ಛಾಪು ಮೂಡಿಸಲು ಇನ್ನು ಕೆಲವು ಪತ್ರಿಕೆಗಳು ಯತ್ನಿಸುತ್ತಿವೆಯೆಂಬ ಸಂಶಯ ಕೆಲವು ಪತ್ರಿಕೆಗಳ ಬಗ್ಗೆ ಓದುಗರಲ್ಲಿ ಕ್ರಮೇಣ ಮೂಡಿದರೆ ಅಚ್ಚರಿಯಿಲ್ಲ. ಇಂಥ ಸಂಶಯವನ್ನು ತಳ್ಳಿಹಾಕಲೂ ಆಗದು. ಜೊತೆಗೆ, ಪತ್ರಿಕಾ ಮಂಡಳಿಯ ಬಗ್ಗೆಯೂ ಜನರ ವಿಶ್ವಾಸ ಕುಂದುತ್ತದೆ. ಮಾಧ್ಯಮಕ್ಕಾಗಲಿ, ಸಮಾಜಕ್ಕಾಗಲೀ ಇದು ಸರ್ವಥಾ ಹಾನಿಕಾರಕ.
ಆದ್ದರಿಂದ, ಪತ್ರಿಕಾ ಮಂಡಳಿಯ ಅಧ್ಯಕ್ಷರಾದವರು, ತಮ್ಮ ಒಲವು- ನಿಲವುಗಳನ್ನು ಎಲ್ಲೂ ಪ್ರಕಟಿಸದೆ, ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಕಾರ್ಯನಿರ್ವಹಿಸುವಂತೆ, ಮಾಧ್ಯಮವನ್ನು ನ್ಯಾಯವೂ ಪಕ್ಷಪಾತರಹಿತವೂ ಆದ ಹಾದಿಯಲ್ಲಿ ಕೊಂಡೊಯ್ಯುವ ತಮ್ಮ ಕರ್ತವ್ಯಕ್ಕಷ್ಟೇ ಸೀಮಿತರಾಗಿರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ನ್ಯಾಯಾಧೀಶರುಗಳಿರುವ ಕಟ್ಟುಪಾಡುಗಳು ಪತ್ರಿಕಾ ಮಂಡಳಿಯ ಅಧ್ಯಕ್ಷರಿಗೂ ಇರಬೇಕಾದ್ದು ಇಂದಿನ ಅವಶ್ಯಕತೆಯೆನ್ನಿಸುತ್ತದೆ.

-ಎಚ್. ಆನಂದರಾಮ ಶಾಸ್ತ್ರೀ
ಬರಹಗಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com